ಆಳ ಸಮುದ್ರದಲ್ಲಿ ಭಾರತ ಸರಕಾರ U-ಟರ್ನ್ ಹೊಡೆದದ್ದು ಏಕೆ?

ಚೀನಾದ ಬೆನ್ನಟ್ಟಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆಗೆ ಸನ್ನದ್ಧಗೊಳ್ಳುವ ಭಾರತ ಸರಕಾರದ ಈ ‘ಔದ್ಯಮಿಕ ತೀರ್ಮಾನ’ದ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕವಾಗಿ, ಅದರಲ್ಲೂ ಮೀನುಗಾರ ಸಮುದಾಯದ ನಡುವೆ ವ್ಯಾಪಕವಾಗಿ ಚರ್ಚೆ ಆಗಬೇಕಾದ ಅಗತ್ಯವಿದೆ.
ಆಳ ಸಮುದ್ರ ಮೀನುಗಾರಿಕೆಗೆ ಸಂಬಂಧಿಸಿ, ಚೀನಾಕ್ಕೆ ಊರೆಲ್ಲ ಕಣ್ಣು. ಜಗತ್ತಿನ ದೇಶಗಳಿಗೆಲ್ಲ ಸಾಗರಗಳಲ್ಲಿ 200 ನಾಟಿಕಲ್ ಮೈಲುಗಳ (230 ಮೈಲು) ಪ್ರತ್ಯೇಕ ಆರ್ಥಿಕ ವಲಯ (EEZ) ಇದೆ. ಸಾಮಾನ್ಯವಾಗಿ ಹೆಚ್ಚಿನ ದೇಶಗಳು 40-60 ನಾಟಿಕಲ್ ಮೈಲುಗಳಾಚೆ ಮೀನುಗಾರಿಕೆ ಮಾಡುವುದೇ ಇಲ್ಲ. ಆದರೆ ಚೀನಾ ಮಾತ್ರ ಆ ವಲಯಗಳಲ್ಲೆಲ್ಲ ಅಕ್ರಮ, ವರದಿ ರಹಿತ, ಅನಿಯಂತ್ರಿತ (IUU) ಮೀನುಗಾರಿಕೆಯಲ್ಲಿ ನಿರತವಾಗಿರುವ ಬಗ್ಗೆ ಎಲ್ಲ ದೇಶಗಳಿಗೂ ಅಸಮಾಧಾನ ಇದೆ. ಆಳ ಸಮುದ್ರ ಮೀನುಗಾರಿಕೆಗೆ ಇರುವ ಅಂತರ್‌ರಾಷ್ಟ್ರೀಯ ನೀತಿಗಳಲ್ಲೂ [United Nations Convention on the Law of the Sea, the International Maritime Organization (IMO) and the Port State Measures Agreement (PSMA)] ಚೀನಾದ್ದೇ ಮೇಲುಗೈ ಆದುದರಿಂದ, ಆ ನೀತಿಗಳಲ್ಲಿನ ನುಸುಳುಹಾದಿಗಳಲ್ಲೇ ವ್ಯವಹರಿಸುತ್ತಾ, ಅದು ಜಗತ್ತಿನ ಅತಿದೊಡ್ಡ ಆಳಸಮುದ್ರ ಮೀನುಗಾರಿಕೆ ದೇಶವಾಗಿ ಮಲೆತು ನಿಂತಿದೆ.
ಈ ಆಳ ಸಮುದ್ರ ಮೀನುಗಾರಿಕೆಯ ಬಗ್ಗೆ ಭಾರತದ ಆಸಕ್ತಿ ಹೊಸದೇನಲ್ಲ. 2013ರಲ್ಲೇ ಅಂದಿನ ಡಾ. ಮನಮೋಹನ್ ಸಿಂಗ್ ಸರಕಾರ ತನ್ನ ದೇಶದ EEZ ವಲಯದಲ್ಲಿ ಆಳ ಸಮುದ್ರ ಮೀನುಗಾರಿಕೆಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಡಾ. ಮೀನಾ ಕುಮಾರಿ ಅವರ ಅಧ್ಯಕ್ಷತೆಯ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ತನ್ನ ವರದಿಯಲ್ಲಿ, ವಿದೇಶಿ ಕಂಪೆನಿಗಳ ಜಂಟಿ ಸಹಯೋಗದೊಂದಿಗೆ (JV) ಈ ಆಳ ಸಮುದ್ರ ಮೀನುಗಾರಿಕೆ ಸಾಕಾರಗೊಳ್ಳಬಹುದು ಎಂದು ಸಲಹೆ ನೀಡಿತ್ತು. ಅದಾಗಿ ಸ್ವಲ್ಪ ದಿನಗಳಲ್ಲೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರಕಾರವು ಈ ವರದಿಯನ್ನು ಸಾರಾಸಗಟು ತಿರಸ್ಕರಿಸಿತ್ತು ಹಾಗೂ ಎಲ್ಲ ರಾಜ್ಯಗಳ ಜೊತೆ ಸಮಾಲೋಚನೆಯ ಬಳಿಕ ಈ ನಿರ್ಧಾರ ತಳೆದಿರುವುದಾಗಿಯೂ, ವಿದೇಶಿ ಮೀನುಗಾರಿಕಾ ಬೋಟುಗಳಿಗೆ ದೇಶದ ಇಇZನಲ್ಲಿ ಪ್ರವೇಶಾವಕಾಶ ಇಲ್ಲವೆಂದೂ ಖಚಿತ ಮಾತುಗಳಲ್ಲಿ ಸ್ಪಷ್ಟನೆ ನೀಡಿತ್ತು(PIB Release ID: 122067).
ಅಚ್ಚರಿ ಎನ್ನುವಂತೆ, 2025-26ರ ಬಜೆಟ್‌ನಲ್ಲಿ, ಹಣಕಾಸು ಸಚಿವರು ಸರಕಾರದ ಆಳಸಮುದ್ರ ಮೀನುಗಾರಿಕೆ ನೀತಿಯಲ್ಲಿ U-ಟರ್ನ್ ಹೊಡೆದು, ‘‘ಮೀನು ಉತ್ಪಾದನೆಯಲ್ಲಿ ಮತ್ತು ಮೀನು ಕೃಷಿಯಲ್ಲಿ ದೇಶ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ನಮ್ಮ ಸಾಗರೋತ್ಪನ್ನ ರಫ್ತು ವಾರ್ಷಿಕ ರೂ. 60,000 ಕೋಟಿಗೆ ತಲುಪಿದೆ. ಸಾಗರದ ಉತ್ಪಾದನಾ ಸಾಧ್ಯತೆಗಳನ್ನು ಇನ್ನಷ್ಟು ಹೆಚ್ಚಿಸಲು ಭಾರತ ಸರಕಾರವು ತನ್ನ ಇಇZ ಹಾಗೂ ಆಳಸಮುದ್ರದಲ್ಲಿ ಮೀನುಗಾರಿಕೆಯ ಸುಸ್ಥಿರ ನಿಯಂತ್ರಣಕ್ಕಾಗಿ ನೀತ್ಯಾತ್ಮಕ ಚೌಕಟ್ಟೊಂದನ್ನು ರೂಪಿಸಲಿದೆ’’ ಎಂದು ಹೇಳಿದ್ದರು. ಅದರಂತೆ, ಭಾರತ ಸರಕಾರದ ಮೀನುಗಾರಿಕೆ ಇಲಾಖೆಯು ಈಗ ಪ್ರಸ್ತಾವಿತ ನಿಯಮಗಳ ಕರಡನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ ಬಿಡುಗಡೆ ಮಾಡಿದೆ, ಆಗಸ್ಟ್ ಕೊನೆಯ ಒಳಗೆ ಸಾರ್ವಜನಿಕರು ಅದಕ್ಕೆ ಸಲಹೆಗಳನ್ನು ನೀಡಬಹುದಾಗಿದೆ. (ವಿವರಗಳು ಇಲ್ಲಿವೆ: https://dof.gov.in/sites/default/files/202507//V_21_Draft_Guidelines_for_High_Seas_dated_FINAL.pdf).
ಕೇವಲ 10 ವರ್ಷಗಳಲ್ಲಿ, ಅದೂ ಆಳಸಮುದ್ರ ಮೀನುಗಾರಿಕೆಯ ವಿರುದ್ಧ ಸಾಂಪ್ರದಾಯಿಕ ಮೀನುಗಾರರಿಂದ ಗಟ್ಟಿಧ್ವನಿ ಹೊರಡಲಾರಂಭಿಸಿರುವುದರ ಬೆನ್ನಲ್ಲೇ ಸರಕಾರದಿಂದ ಇಂತಹದೊಂದು ತೀರ್ಮಾನ ಹೊರಬಂದಿರುವುದು ಅಚ್ಚರಿಗೆ ಕಾರಣ ಆಗಿದೆ. ಆಳ ಸಮುದ್ರ ಮೀನುಗಾರಿಕೆಯ ತಂತ್ರಜ್ಞಾನ ಮತ್ತು ವ್ಯಾಪ್ತಿಗಳನ್ನು ಗಮನಿಸಿದರೆ, ಕೇವಲ ಚೀನಾ, ತೈವಾನ್, ದ.ಕೊರಿಯಾ, ಜಪಾನ್ ಮತ್ತು ಸ್ಪೇನ್- ಈ ಐದು ದೇಶಗಳ ಒಟ್ಟು ಉತ್ಪಾದನೆಯು ಉಳಿದ 130 ದೇಶಗಳ ಒಟ್ಟು ಆಳಸಮುದ್ರ ಮೀನುಗಾರಿಕೆ ಉತ್ಪಾದನೆಗಿಂತ ಹೆಚ್ಚಿದೆಯಂತೆ. ಜಗತ್ತಿನಾದ್ಯಂತ ಅತಿಯಾದ ಮೀನುಗಾರಿಕೆಯ ಕಾರಣಕ್ಕೆ, 1,616 ಮೀನು ಜಾತಿಗಳು ಅಳಿವಿನ ಅಂಚಿನಲ್ಲಿವೆ ಎಂದು ಪರಿಸರ ಸಂರಕ್ಷಣೆಯ ಅಂತರ್‌ರಾಷ್ಟ್ರೀಯ ಒಕ್ಕೂಟ (IUCN) ಎಚ್ಚರಿಸಿದೆ.
ಸರಕಾರ ಪ್ರಕಟಿಸಿರುವ ಹೊಸ ಕರಡು ನಿಯಮಗಳ ಪ್ರಕಾರ, ಆಳಸಮುದ್ರ ಮೀನುಗಾರಿಕೆಯಲ್ಲಿ ಚಾರ್ಟರ್, ಲೀಸ್, ಜಾಯಿಂಟ್ ವೆಂಚರ್ ವ್ಯವಸ್ಥೆಗಳಿಗೆ ಅವಕಾಶ ಇದೆ. ಅನುಮತಿ (LOA) ಹೊಂದಿರುವ ಭಾರತೀಯ ಧ್ವಜಧಾರಿ ಬೋಟುಗಳು ಹಿಡಿದ ಮೀನನ್ನು ಭಾರತದ ಬಂದರುಗಳಿಗೆ ತಂದರೆ, ಅದಕ್ಕೆ ಆಮದು ಸುಂಕ ಇರುವುದಿಲ್ಲ. ಆದರೆ ನೇರವಾಗಿ ವಿದೇಶಿ ಬಂದರು ಕಟ್ಟೆಯಲ್ಲಿ ಇಳಿಸಿದರೆ, ಅದನ್ನು ರಫ್ತು ಎಂದು ಪರಿಗಣಿಸಲಾಗುತ್ತದೆ. ಬೋಟುಗಳಲ್ಲಿ ವಿದೇಶಿ ಸಿಬ್ಬಂದಿಯ ನೇಮಕಕ್ಕೆ ಅವಕಾಶ ಇದೆ ಎಂದೆಲ್ಲ ವಿವರಿಸಲಾಗಿದೆ.
ಸರಕಾರ ಹೊರಡಿಸಿರುವ ಕರಡು ನಿಯಮಗಳೇನೋ ಹೊರನೋಟಕ್ಕೆ ಅಕ್ರಮ ಮೀನುಗಾರಿಕೆ ನಿಯಂತ್ರಣಕ್ಕೆ ಪೂರಕವಾಗಿವೆ ಅನ್ನಿಸುತ್ತಿದೆಯಾದರೂ, ಇಲ್ಲಿ ಸಮಸ್ಯೆ ಇರುವುದು ಬೇರೆ ಕಡೆ. ಆಳ ಸಮುದ್ರಕ್ಕೆ ತೆರಳುವ ಸಾಮರ್ಥ್ಯ, ತಂತ್ರಜ್ಞಾನ, ಆರ್ಥಿಕ ಬಲ ಇರುವ ಬೃಹತ್ ಕಾರ್ಪೊರೇಟ್ ಮಾಲಕತ್ವದ ಬೋಟುಗಳು ಸಮುದ್ರಕ್ಕಿಳಿದರೆ, ಅದು ಸಾಗರಸಂಪನ್ಮೂಲಗಳಿಗೆ ಮತ್ತು ಬಡ ಸಾಂಪ್ರದಾಯಿಕ ಮೀನುಗಾರರ ಬದುಕಿಗೆ ಕಂಟಕವಾಗಲಿದೆ ಎಂಬ ಧ್ವನಿಗಳು ಬಲಗೊಳ್ಳುತ್ತಿವೆ. ಮೀನುಗಾರಿಕೆಯು ಕೈಗಾರಿಕೆ ಆದಾಗ, ಸಣ್ಣ-ಸಾಂಪ್ರದಾಯಿಕ ಮೀನುಗಾರರಿಗೆ ಅಲ್ಲಿ ಅವಕಾಶಗಳು ಉಳಿಯುವುದಿಲ್ಲ. ಅವರು (ಹಿಂದೆ ಕೃಷಿ ಕಾನೂನುಗಳ ಸಂದರ್ಭದಲ್ಲಿ ಆದಂತೆ) ಸೂಟು-ಬೂಟಿನ ‘ಮೀನುಗಾರರ’ ಕೂಲಿಗಳಾಗುವುದು ಅನಿವಾರ್ಯ ಆಗಲಿದೆ.
ಭಾರತದ ಒಟ್ಟು ಮತ್ಸ್ಯ ಸಂಪನ್ಮೂಲದಲ್ಲಿ ಆಳಸಮುದ್ರದ ಪಾಲು ಕೇವಲ ಶೇ. 04 ಮಾತ್ರ. ಹಾಗಾಗಿ, ಅತಿಯಾದ ಕಾರ್ಯಾಚರಣೆ ವೆಚ್ಚ ಹೊಂದಿರುವ ಈ ವಲಯದ ಉದ್ಯಮಿಗಳು ತಮಗೆ ಲಾಭ ಗಳಿಸಲು ಉತ್ಪಾದನೆ ಸಾಕಾಗದಾಗ ಸಣ್ಣ ಮೀನುಗಾರರ ಬಟ್ಟಲಿಗೂ ಕೈ ಹಾಕುವ ಅಪಾಯ ಇದೆ. ಇದರಿಂದ ಸಮುದ್ರ ತಟದ ಮೀನು ಉತ್ಪನ್ನಗಳಿಗೆ ತೀವ್ರ ಬರ ಉಂಟಾಗುವ ಸಾಧ್ಯತೆಗಳಿವೆ ಎಂದು ಮೀನುಗಾರಿಕೆ ಪರಿಣತರು ಅಭಿಪ್ರಾಯಪಡುತ್ತಿದ್ದಾರೆ. ಭಾರತದಲ್ಲಿ ಸುಸ್ಥಿರ ಮೀನುಗಾರಿಕೆಗೆ 93,287 ಮೀನುಗಾರಿಕಾ ಬೋಟುಗಳಿದ್ದರೆ ಸಾಕಂತೆ. ಆದರೆ ಈಗಾಗಲೇ ಇಲ್ಲಿ 3,14,677 ಮೀನುಗಾರಿಕಾ ಬೋಟುಗಳಿವೆ. ಇದಕ್ಕಿನ್ನಷ್ಟು ‘ಕಾರ್ಪೊರೇಟ್ ಬೋಟುಗಳು’ ಸೇರಿಕೊಂಡರೆ ಸಾಗರ ಪರಿಸರ ವ್ಯವಸ್ಥೆ ಸಂಪೂರ್ಣ ನಾಶ ಆಗಲಿದೆ ಎಂದು ಕೇರಳದ ಮೀನುಗಾರಿಕಾ ಸಂಘಟನೆಗಳು ಆತಂಕ ವ್ಯಕ್ತ ಪಡಿಸುತ್ತಿರುವ ಬಗ್ಗೆ, ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಭಾರತದ ಮೀನುಗಾರರಲ್ಲಿ, ಶೇ. 67 ಮಂದಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಇಲ್ಲಿ 40 ಲಕ್ಷ ಮೀನುಗಾರರು ಸುಮಾರು 4 ಕೋಟಿ ಮೀನುಗಾರ ಕುಟುಂಬಗಳಿಗೆ ಆಸರೆ ಆಗಿದ್ದಾರೆ. ಈ ನಡುವೆ ಗಮನಿಸಬೇಕಾದ ಸಂಗತಿ ಎಂದರೆ, ಕೇರಳದ ವಿಳಿಂಗಂನಲ್ಲಿ ಅದಾನಿ ಬಳಗ 146 ಕೋಟಿ ರೂ.ಗಳ ವೆಚ್ಚದಲ್ಲಿ 500 ಮೀ. ಮೀನುಗಾರಿಕಾ ಬರ್ತ್ ರೂಪಿಸುತ್ತಿದ್ದು, ಅದು 2027ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಚೀನಾದ ಬೆನ್ನಟ್ಟಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆಗೆ ಸನ್ನದ್ಧಗೊಳ್ಳುವ ಭಾರತ ಸರಕಾರದ ಈ ‘ಔದ್ಯಮಿಕ ತೀರ್ಮಾನ’ದ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕವಾಗಿ, ಅದರಲ್ಲೂ ಮೀನುಗಾರ ಸಮುದಾಯದ ನಡುವೆ ವ್ಯಾಪಕವಾಗಿ ಚರ್ಚೆ ಆಗಬೇಕಾದ ಅಗತ್ಯವಿದೆ. ಆಳ ಸಮುದ್ರದಲ್ಲಿ ಬೆಳಕು ಬಳಸಿ ಮೀನುಗಾರಿಕೆ ನಡೆಸುವಂತಹ ಅಕ್ರಮ ಚಟುವಟಿಕೆಗಳ ಫಲವಾಗಿ, ಕಳೆದ ಕೆಲವು ಸೀಸನ್‌ಗಳಿಂದ ಭಾರತ ಈಗಾಗಲೇ ಮತ್ಸ್ಯ ಸಂಪತ್ತಿನ ಬರವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮಹತ್ವದ್ದು. ಈಗಾಗಲೇ ಭಾರತದ ಒಟ್ಟು 11,099 ಕಿಲೋಮೀಟರ್ ಸಮುದ್ರ ತೀರದಲ್ಲಿ ಬಹುಪಾಲು ಸಾಂಪ್ರದಾಯಿಕ ಮೀನುಗಾರರ ಕೈಯಿಂದ ಜಾರಿಹೋಗಿದೆ. ಅಲ್ಲಿ ಬಂದರು, ಪ್ರವಾಸೋದ್ಯಮ, ರಕ್ಷಣೆ, ಕೈಗಾರಿಕೆಗಳು ಜಾಗವನ್ನು ಆಕ್ರಮಿಸಿದ್ದು, ಸಾಂಪ್ರದಾಯಿಕ ಮೀನುಗಾರರನ್ನು ಇಂಚಿಂಚಾಗಿ ಸಮುದ್ರ ತೀರದಿಂದ ದೂರ ಮಾಡಲಾಗುತ್ತಿದೆ. ಸೂಟುಬೂಟಿನ ಮೀನುಗಾರರು ಆ ಜಾಗಗಳನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಿದ್ದಾರೆ. ಸರಕಾರದ ನೀತಿ-ನಿಯಮಗಳು ಅವರಿಗೆ ಪೂರಕವಾಗಿವೆ. ಮೀನುಗಳು ಮತ್ತು ಸಾಂಪ್ರದಾಯಿಕ ಮೀನುಗಾರರಿಬ್ಬರೂ ಅಪಾಯದ ಅಂಚಿಗೆ ಸರಿದಿದ್ದಾರೆ. ಇದು ಕಳವಳಕಾರಿ ಸನ್ನಿವೇಶ.