ವಿರಳ ಖನಿಜಗಳ ಸರಳ ಹರಿವಾಣ... ಯಾರ ಮಡಿಲಿಗೆ?

ವಿರಳ ಖನಿಜಗಳಿಗೆ (rare minerals) ಶುಕ್ರದೆಸೆ ಬಂದಂತಿದೆ. ಎಲ್ಲ ಗ್ರಹಗಳು ತಮ್ಮ ಜಾತಕದ ಅನುಕೂಲಕ್ಕೆ ಪೂರಕವಾಗಿ ಒದಗಿಬಂದಂತಿವೆ. ಈ ಗ್ರಹಗತಿ ಬದಲಾದ ಹಂತಗಳನ್ನೆಲ್ಲ ಮೊದಲಿಗೆ ಗುರುತಿಸಿ, ಮತ್ತೆ ಜಾತಕ ಓದಿದರೆ, ಇದನ್ನೆಲ್ಲ ಅರ್ಥೈಸಿಕೊಳ್ಳುವುದು ಸುಲಭ.
ವಿಷಯ ಏನೆಂದರೆ, ಜಗತ್ತು 2070ರ ಒಳಗೆ, ಕಾರ್ಬನ್ ಹೊರಹೊಮ್ಮಿಸುವ ಕೈಗಾರಿಕೆಗಳನ್ನು ಶೂನ್ಯಕ್ಕಿಳಿಸಿಕೊಳ್ಳುವ ಧಾವಂತದಲ್ಲಿದೆ. ಕಾರ್ಬನ್ ಹೊರಹೊಮ್ಮಿಸದ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬಯಸಿರುವ ನವೋದ್ಯಮಗಳಿಗೆ ವಿರಳ ಖನಿಜಗಳು ಅತ್ಯಗತ್ಯ. ಹಾಗಾಗಿ ಇಡಿಯ ಜಗತ್ತು ಈ ಭವಿಷ್ಯದ ‘ಪೆಟ್ರೋಲ್’ನತ್ತ ಕಣ್ಣು ನೆಟ್ಟಿದೆ.
ಭಾರತದಲ್ಲಿ ಉದಾರೀಕರಣಕ್ಕೆ ಮುನ್ನ ವಿರಳ ಖನಿಜಗಳ ವ್ಯವಹಾರವನ್ನು ನಿಯಂತ್ರಿಸುತ್ತಿದ್ದುದ್ದು - ಗಣಿಗಳು ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ- 1957. ಈ ಕಾಯ್ದೆ ಇತ್ತೀಚೆಗೆ ಎಷ್ಟು ವೇಗವಾಗಿ ಬದಲಾಗುತ್ತಾ ಬಂದಿದೆ ಎಂದರೆ, 2015, 2016, 2020, 2021ರ ಬಳಿಕ ಈಗ ಲೇಟೆಸ್ಟ್ ಆಗಿ 2023ರಲ್ಲಿ ಇದಕ್ಕೆ ವ್ಯಾಪಕ ತಿದ್ದುಪಡಿಗಳಾಗಿವೆ.
ಈ ಎಲ್ಲ ತಿದ್ದುಪಡಿಗಳ ಒಟ್ಟು ಸಾರ ಏನೆಂದರೆ,
* ವಿರಳ ಖನಿಜಗಳ ಗಣಿಗಾರಿಕೆಯನ್ನು ಖಾಸಗಿಯವರಿಗೆ ತೆರೆಯಲಾಗಿದ್ದು, ಅದಕ್ಕೆ ಶೇ. 100 ವಿದೇಶಿ ಹೂಡಿಕೆಗೂ ಅನುವು ಮಾಡಿಕೊಡಲಾಗಿದೆ. ಗಣಿಗಳ ಏಲಂ ಅನ್ನು ಪಾರದರ್ಶಕಗೊಳಿಸುವ ಹೆಸರಿನಲ್ಲಿ ಅದರ ಹಿಡಿತವನ್ನು ಭಾರತ ಸರಕಾರ ಪಡೆದುಕೊಂಡಿದ್ದು, ಖಾಸಗಿಯವರಿಗೆ ಲೈಸನ್ಸ್ ವರ್ಗಾವಣೆ, ತಡೆರಹಿತ ಗಣಿಗಾರಿಕೆಯಂತಹ ಅವಶ್ಯಕತೆಗಳಿಗೆಲ್ಲ ಹಾದಿ ಸುಗಮಗೊಳಿಸಲಾಗಿದೆ. ಇಲ್ಲಿ ರಾಜ್ಯಸರಕಾರಗಳಿಗೆ ಕೇವಲ ರಾಜಸ್ವ ಸಂಗ್ರಹಣೆಯ ಹೊಣೆ.
* ಬ್ರಿಟಿಷ್ ಕಾಲದಿಂದಲೂ ಸರಕಾರದ ಗೌಪ್ಯ ದಾಖಲೆ ಆಗಿದ್ದ 170 ವರ್ಷಗಳ ಕ್ರಿಟಿಕಲ್ ಮಿನರಲ್ ಡೇಟಾವನ್ನು ನ್ಯಾಷನಲ್ ಜಿಯೊಸಯನ್ಸ್ ಡೇಟಾ ರಿಪಾಸಿಟರಿ (ಎನ್‌ಜಿಡಿಆರ್) ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೆ (ಅರ್ಥಾತ್ ಉದ್ಯಮಿಗಳಿಗೆ) ಬಹಿರಂಗಗೊಳಿಸಲಾಗಿದೆ.
* ದೇಶದ ಭದ್ರತೆಯ ಭಾಗವಾಗಿರುವ ಪರಮಾಣುಶಕ್ತಿಗೆ ಬಳಕೆ ಆಗುವ 12 ವಿರಳ ಖನಿಜಗಳ ಪಟ್ಟಿಯಿಂದ 6ನ್ನು ಕೈಬಿಡಲಾಗಿದ್ದು, ಏಲಂ ಮೂಲಕ ಪಡೆದು ಅವುಗಳ ಗಣಿಗಾರಿಕೆ ಮಾಡಲು ಖಾಸಗಿಯವರಿಗೆ ಅವಕಾಶ ತೆರೆಯಲಾಗಿದೆ. ನೆಟ್ ಝೀರೊ ಸಾಧಿಸಲು ಅಗತ್ಯವಿರುವ ಬಾಹ್ಯಾಕಾಶ, ಇಲೆಕ್ಟ್ರಾನಿಕ್ಸ್, ತಂತ್ರಜ್ಞಾನ ಮತ್ತು ಸಂವಹನ, ಇಂಧನ, ವಿದ್ಯುತ್ ಬ್ಯಾಟರಿ-ವಿದ್ಯುತ್ ಚಾಲಿತ ವಾಹನಗಳಂತಹ ನವೋದ್ಯಮ ರಂಗಗಳನ್ನೆಲ್ಲ ಖಾಸಗಿಗೆ ತೆರೆದಿರುವುದರ ತಾರ್ಕಿಕ ಮುಂದುವರಿಕೆಯಾಗಿ ಸರಕಾರ ಈ ಹೆಜ್ಜೆಯನ್ನು ಪರಿಗಣಿಸಿದೆ.
* ಇವನ್ನೆಲ್ಲ ನಿಯಂತ್ರಿಸಲು ರಾಷ್ಟ್ರೀಯ ಖನಿಜಗಳ ಅನ್ವೇಷಣಾ ಟ್ರಸ್ಟ್ (ಎನ್‌ಎಮ್‌ಇಟಿ) ರಚನೆಯಾಗಿದ್ದು, ಈ ಗಣಿಗಾರಿಕೆಗಳಿಂದ ಪ್ರಭಾವಿತರಾಗಲಿರುವ ಜನಸಮುದಾಯಗಳಿಗೆ ಪುನರ್ವಸತಿ ಕಾರ್ಯಕ್ರಮಗಳಿಗೆಂದು ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಸ್ಥಾಪಿಸಲಾಗಿದೆ.
ಕಾಕತಾಳೀಯಗಳು
ಭಾರತ ಸರಕಾರವು 2019ರಲ್ಲಿ ಸಮುದ್ರ ತೀರದಿಂದ ಮರಳಿನಲ್ಲಿರುವ ವಿರಳ ಖನಿಜಗಳ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ವಿಧಿಸಿತ್ತು. ಆದರೆ 2023ರ ವಿರಳ ಖನಿಜ ನಿಯಂತ್ರಣ ಕಾಯ್ದೆ ತಿದ್ದುಪಡಿಯ ಮೂಲಕ ಈ ನಿಷೇಧವನ್ನು ಸಡಿಲಿಸಲಾಯಿತು. ಅದಕ್ಕೆ ಕೆಲವೇ ತಿಂಗಳ ಮೊದಲು ಅದಾನಿ ಬಳಗ ಈ ಖನಿಜೋದ್ಯಮಕ್ಕಾಗಿ ಒಡಿಶಾದಲ್ಲಿ ಹೊಸ ಕಂಪೆನಿಗಳನ್ನು ಆರಂಭಿಸಿತ್ತಂತೆ. 2024ರ ಬಜೆಟ್‌ನಲ್ಲಿ ಭಾರತ ಸರಕಾರವು ಬಜೆಟ್ ಮೂಲಕ ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್ (ಎನ್‌ಸಿಎಂಎಂ) ಸ್ಥಾಪನೆಯ ಮತ್ತು ಅದಕ್ಕೆಂದು ಮುಂದಿನ ಏಳು ವರ್ಷಗಳಲ್ಲಿ 34,300ಕೋಟಿ ರೂ. ಮೀಸಲಿಡುವ ಪ್ರಕಟಣೆ ಹೊರಡಿಸುವ ಕೆಲವೇ ತಿಂಗಳುಗಳ ಹಿಂದೆ ಅದಾನಿ ಬಳಗವು ಮಧ್ಯಪ್ರದೇಶದಲ್ಲಿ ವಿರಳ ಖನಿಜಗಳ ಉತ್ಪಾದನೆ ಮತ್ತಿತರ ಹೊಸ ಯೋಜನೆಗಳಿಗೆ 60,000 ಕೋಟಿ ರೂ.ಗಳ ಹೂಡಿಕೆಯನ್ನು ಪ್ರಕಟಿಸಿತ್ತು. ಹೀಗೆ, ಸರಕಾರ ಮತ್ತದರ ಕ್ರೋನಿ ಉದ್ಯಮಿಗಳ ಯಾವತ್ತೂ ‘ಕಾಕತಾಳೀಯಗಳು’ ಈ ವಿಚಾರದಲ್ಲೂ ನಡೆಯುತ್ತಿವೆ.
ಈಗೇನಾಗಿದೆ ಎಂದರೆ,
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮಗೆ ಆಮದು ಸುಂಕ ವಿಧಿಸುತ್ತಿರುವ ದೇಶಗಳಿಗೆಲ್ಲ ಪ್ರತಿಸುಂಕದ ಶಿಕ್ಷೆ ನೀಡಿದ್ದಕ್ಕೆ ಪ್ರತಿಯಾಗಿ ಚೀನಾ, ತನ್ನ ವಿರಳ ಖನಿಜಗಳ ರಫ್ತಿನ ಮೇಲೆ ನಿರ್ಬಂಧ ಹೇರುವ ಬರೆ ಹಾಕಿದೆ. ಅಮೆರಿಕಕ್ಕೆ ಹಾಕಿದ ಈ ಬರೆಯ ಬಿಸಿ ಬೇರೆ ದೇಶಗಳಿಗೂ ತಗಲಿದೆ. ಇದರ ಜೊತೆ ರಶ್ಯ-ಉಕ್ರೇನ್; ಇರಾನ್-ಇಸ್ರೇಲ್ ಕದನಗಳ ಬಿಸಿಯೂ ಸೇರಿಕೊಂಡಿದ್ದು, ಎಲ್ಲ ದೇಶಗಳೂ ಪರ್ಯಾಯ ಹಾದಿಗಳ ಹುಡುಕಾಟದಲ್ಲಿ ವ್ಯಸ್ತವಾಗಿವೆ.
ನವೋದ್ಯಮಗಳಿಂದ ಈ ವಿರಳ ಖನಿಜಗಳ ಬೇಡಿಕೆ ಜಾಗತಿಕವಾಗಿ ಯಾವ ಪ್ರಮಾಣದಲ್ಲಿದೆ ಎಂದರೆ, 2050ರ ಹೊತ್ತಿಗೆ ಈ ಖನಿಜಗಳ ಬಳಕೆಯಲ್ಲಿ ಶೇ. 600 ಹೆಚ್ಚಳ ಆಗಲಿದ್ದು, ಅದು 35 ಲಕ್ಷ ಕೋಟಿ ರೂ.ಗಳ ವ್ಯವಹಾರವಾಗಿ ಎದ್ದು ನಿಲ್ಲಲಿದೆ ಎಂದು ಉದ್ಯಮ ಪರಿಣತರು ಅಭಿಪ್ರಾಯಪಡುತ್ತಿದ್ದಾರೆ. ಜಗತ್ತಿನ ಐದನೇ ಅತಿದೊಡ್ಡ ವಿರಳ ಖನಿಜ ನಿಕ್ಷೇಪಗಳನ್ನು ಹೊಂದಿರುವ ಭಾರತ ಇಲ್ಲಿಯ ತನಕ ಈ ಖನಿಜಗಳ ಗಣಿಗಾರಿಕೆಯನ್ನು ಉದಾರೀಕರಿಸಿರಲಿಲ್ಲ. ಸ್ವತಃ ತಾನು ಆಮದು ಆಧರಿಸಿಕೊಂಡಿತ್ತು. ಚೀನಾವು ಜಗತ್ತಿನ ವಿರಳ ಖನಿಜ ಗಣಿಗಾರಿಕೆಯ ಶೇ. 61 ಭಾಗದ ಮೇಲೆ ಹಿಡಿತ ಹೊಂದಿದ್ದು, ಜಾಗತಿಕವಾಗಿ ಉತ್ಪಾದನೆಯಾಗುವ ವಿರಳ ಖನಿಜಗಳಲ್ಲಿ ಶೇ. 92 ಪಾಲು ಹೊಂದಿದೆ. ಇದೇ ಎಪ್ರಿಲ್ 4ರಿಂದ ಚೀನಾ ತನ್ನ 7 ವಿರಳ ಖನಿಜಗಳ ರಫ್ತಿಗೆ ನಿರ್ಬಂಧ ಹೇರಿದೆ. ಗಾಡೊಲಿನಿಯಂ, ಟೆರ್ಬಿಯಂ, ಸಮಾರಿಯಂ, ಡಿಸ್‌ಪ್ರೋಸಿಯಂ, ಲ್ಯುಟೇಷಿಯಂ, ಸ್ಕಾಂಡಿಯಂ ಮತ್ತು ಇಟ್ರಿಯಂ. ಇವೆಲ್ಲವೂ ಜಗತ್ತಿನಾದ್ಯಂತ ರಕ್ಷಣಾ ಉತ್ಪಾದನೆ, ಇಂಧನ, ಆಟೊಮೊಬೈಲ್, ಸೆಮಿಕಂಡಕ್ಟರ್ ಉತ್ಪಾದನೆಗಳಲ್ಲಿ ಅತ್ಯಂತ ಅಗತ್ಯವಿರುವ ವಿರಳ ಖನಿಜಗಳು. ಹಾಗಾಗಿ ಭಾರತಕ್ಕೆ ಇಲ್ಲಿ ಅವಕಾಶ ಕಾಣಿಸಿದೆ; ತುರ್ತು ಉಂಟಾಗಿದೆ.
ಮ್ಯಾಗ್ನೆಟ್ ಕಥೆ
ಭಾರತ ಸರಕಾರಕ್ಕೆ ಉಂಟಾಗಿರುವ ಈ ತುರ್ತು ಯಾವ ಸ್ವರೂಪದ್ದು ಮತ್ತು ತೀರ್ಮಾನಗಳು ಎಷ್ಟು ಯೋಜನಾರಹಿತ ಎಂಬುದಕ್ಕೆ ಒಂದಿಷ್ಟು ಚುಕ್ಕಿಗಳನ್ನು ಜೋಡಿಸಿ ನೀಡುವೆ. ಎರಡು ವಾರಗಳ ಹಿಂದೆ ದಿಲ್ಲಿಯಲ್ಲಿ ಗಣಿಗಾರಿಕೆ ಇಲಾಖೆಯ ಕಾರ್ಯದರ್ಶಿ ವಿ. ಎಲ್. ಕಾಂತಾರಾವ್ ಅವರು ಪತ್ರಕರ್ತರೊಡನೆ ಮಾತನಾಡುತ್ತಾ, ಎನ್‌ಸಿಎಂಎಂ ಅಡಿಯಲ್ಲಿ ವಿರಳ ಖನಿಜ ನೀತಿಗಳಲ್ಲಿ ಇನ್ನಷ್ಟು ಪೂರಕ ಬದಲಾವಣೆಗಳಾಗಲಿವೆ ಎಂಬ ಸೂಚನೆ ನೀಡಿದ್ದರು. ಚೀನಾದ ನಿರ್ಬಂಧದಿಂದಾಗಿ ಇಂಧನ, ವಿದ್ಯುತ್ ಚಾಲಿತ ವಾಹನ ಕ್ಷೇತ್ರಗಳಲ್ಲಿ ಅಗತ್ಯವಾಗಿ ಬೇಕಾಗುವ ಮ್ಯಾಗ್ನೆಟ್‌ಗಳ (Neodymium Iron, Boron -NdFeB) ಬೇಡಿಕೆ ಯಾವ ಮಟ್ಟದಲ್ಲಿದೆ ಎಂದರೆ, ಹಳೆಯ ಮ್ಯಾಗ್ನೆಟ್‌ಗಳನ್ನು ರೀಸೈಕಲ್ ಮಾಡಿಕೊಡುವವರು ಮುಂದೆ ಬಂದರೂ ಸರಕಾರ ಅವರಿಗೆ ಇನ್ಸೆಂಟಿವ್‌ಗಳನ್ನು ನೀಡಲು ಸಿದ್ಧವಿದೆ. ಆದರೆ ಸಾಧ್ಯ ಆಗುತ್ತಿಲ್ಲ ಎಂದಿದ್ದರು.
ಇದಾಗಿ ಒಂದು ವಾರದ ಬಳಿಕ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಕಳೆದ 13 ವರ್ಷಗಳಿಂದ ಭಾರತ ಸರಕಾರದ ಅಧೀನದಲ್ಲಿರುವ IREL ಜಪಾನಿಗೆ ಇದೇ ಮ್ಯಾಗ್ನೆಟ್ ಅನ್ನು ರಫ್ತು ಮಾಡುತ್ತಿದೆ, ಅದನ್ನು ತಕ್ಷಣ ನಿಲ್ಲಿಸಿ, ಆ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದು ವರದಿಯಾಗಿದೆ. ಭಾರತದಲ್ಲಿ ಗಣಿಗಾರಿಕೆ ಆಗುವ ಈ ವಿರಳ ಖನಿಜವು ಸಂಸ್ಕರಣೆಗೆ ಮೂಲಸೌಕರ್ಯಗಳಿಲ್ಲದ ಕಾರಣ ಜಪಾನಿಗೆ ರಫ್ತಾಗುತ್ತಿತ್ತಂತೆ - ಅದೂ ವರ್ಷಕ್ಕೆ 1,000 ಮೆಟ್ರಿಕ್ ಟನ್‌ನಷ್ಟು. ಇನ್ನೊಂದೆಡೆ, ಇದೇ ಮ್ಯಾಗ್ನೆಟ್ ಅನ್ನು ಭಾರತ ವಿದೇಶಗಳಿಂದ ಕಳೆದ ವರ್ಷ 53,748 ಟನ್ ಆಮದು ಮಾಡಿಕೊಂಡಿದೆ ಎಂದು ಸರಕಾರಿ ಅಂಕಿ-ಅಂಶಗಳು ತೋರಿಸುತ್ತಿವೆ!
ಬಹುತೇಕ ಎಲ್ಲ ಸಾಂಪ್ರದಾಯಿಕ ಖನಿಜಗಳ ಗಣಿಗಾರಿಕೆಯ ವೇಳೆ, ಈ ವಿರಳ ಖನಿಜಗಳೂ ಸಿಕ್ಕಿರುತ್ತವೆ. ಆದರೆ, ಅವುಗಳ ಸಂಸ್ಕರಣೆ ನಡೆಯುತ್ತಿರಲಿಲ್ಲ. ಉದಾಹರಣೆಗೆ ಬಾಕ್ಸೈಟ್ ಗಣಿಗಾರಿಕೆಯ ವೇಳೆ ಗಾಲಿಯಂ ವಿರಳ ಖನಿಜ ಸಿಗುತ್ತದೆ. ನಾವು ಅದನ್ನು ಸಂಸ್ಕರಿಸಿ ಪಡೆಯಲು ಪ್ರಯತ್ನಿಸಿಲ್ಲ. ಈಗ ಚೀನಾವು ಮಾರುಕಟ್ಟೆಯ ಮೇಲೆ ಪ್ರಭುತ್ವ ಪಡೆದ ಬಳಿಕ ಇವೆಲ್ಲ ನಮಗೆ ನೆನಪಾಗತೊಡಗಿವೆ.
ನವೋದ್ಯಮ ಮತ್ತು ಉಳಿದ ಬಡಪಾಯಿಗಳು
ನವೋದ್ಯಮಗಳಿಗೆ ವಿರಳ ಖನಿಜಗಳ ಮೂಲಕ ವ್ಯಾಪಾರಕ್ಕೆ ಹೊಸದೊಂದು ಹೆಬ್ಬಾಗಿಲು ತೆರೆದುಕೊಂಡಿದೆ. ದೇಶದ ಕಾರ್ಬನ್ ಹೊರಹೊಮ್ಮಿಸುವಿಕೆ ಶೂನ್ಯಗೊಳಿಸಲು ಇದು ಅಗತ್ಯ ಎಂದು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಈ ಅಬ್ಬರದ ಗದ್ದಲದಲ್ಲಿ, ಈ ಖನಿಜಗಳ ಗಣಿಗಾರಿಕೆ ಮತ್ತು ಸಂಸ್ಕರಣೆಯ ಕಾರಣದಿಂದ ಉಂಟಾಗಲಿರುವ ಗ್ರೀನ್‌ಹೌಸ್ ಅನಿಲಗಳು ಮಾಡುವ ಹಾನಿ, ಜೀವವೈವಿಧ್ಯದಲ್ಲಾಗುವ ನಷ್ಟ, ಪರಿಸರ ಮಾಲಿನ್ಯ, ಈ ನಿಕ್ಷೇಪಗಳಿರುವ ಜಾಗಗಳಲ್ಲಿನ ನಿವಾಸಿಗಳಿಗೆ ಪುನರ್ವಸತಿ, ಖನಿಜ ಸಂಸ್ಕರಣೆಗೆ ಬಳಕೆಯಾಗಬೇಕಾದ ಅಪಾರ ಪ್ರಮಾಣದ ನೀರು-ವಿದ್ಯುತ್, ನೆರೆದೇಶಗಳ ಗಡಿಯ ಸಮೀಪದಲ್ಲಿರುವ ಕೆಲವು ಗಣಿಗಳಿಂದ ಉಂಟಾಗಬಹುದಾದ ಗಡಿ ವಿವಾದಗಳು, ಅರಣ್ಯ ನಾಶ... ಇವುಗಳ ಬಗ್ಗೆ ಚರ್ಚೆಗಳೇ ಯಾರಿಗೂ ಬೇಕಿಲ್ಲ.