ಶಿಕ್ಷಣ ಮತ್ತು ಕೋಚಿಂಗ್ ಎಂಬ ವಿರುದ್ಧ ಪದಗಳು

✍️ ರಾಜಾರಾಂ ತಲ್ಲೂರು
ಆಡಳಿತ ನಡೆಸುವವರಿಗೆ ಮಗುವನ್ನು ಚಿವುಟುವುದು ಮತ್ತು ತೊಟ್ಟಿಲು ತೂಗುವುದು-ಎರಡೂ ಲಾಭದಾಯಕ ದಂಧೆ. ಉನ್ನತ ಶಿಕ್ಷಣವನ್ನು ಸಾರಾಸಗಟು ಖಾಸಗಿ ಕೈಗೆ ಕೊಟ್ಟು ವ್ಯಾಪಾರಕ್ಕೆ ಕುಳ್ಳಿರಿಸಿದ ಬಳಿಕ ಈಗ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರ ಏಕೆ ಆರಂಭಗೊಂಡಿದೆ ಎಂಬುದನ್ನು ಪರಿಶೀಲಿಸುವುದಕ್ಕೆ ಒಂದು ಸಮಿತಿ ರೂಪಿಸಲಾಗಿದೆ! ಇಂತಹ ಚಿವುಟುವ-ತೂಗುವ ಪ್ರಕ್ರಿಯೆ ಇನ್ನು ನಿರಂತರ. ಈ ನಡುವೆ ಶಿಕ್ಷಣ ಕೇವಲ ಉಳ್ಳವರ ಮನೆಯ ಕೂಸಾಗಿದ್ದರೆ ಅಚ್ಚರಿ ಬೇಡ. ಅದು ಹೊರಟಿರುವುದೇ ಆ ಹಾದಿಯಲ್ಲಿ.
ಭಾರತ ಸರಕಾರದ ಉನ್ನತ ಶಿಕ್ಷಣ ಇಲಾಖೆಯು ಜೂನ್ 17ರಂದು ಒಂದು ಆದೇಶ ಹೊರಡಿಸಿದೆ (No. 5-35/2023-PN.II). ಅದರ ಅನ್ವಯ ವಿದ್ಯಾರ್ಥಿಗಳ ಕೋಚಿಂಗ್ ಸೆಂಟರ್ ಅವಲಂಬನೆಯನ್ನು ತಗ್ಗಿಸುವುದಕ್ಕೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ| ವಿನೀತ್ ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರೂಪಿಸಲಾಗಿದೆ. ಸಿಬಿಎಸ್‌ಇ ಅಧ್ಯಕ್ಷರು, ಐಐಟಿ ಮದರಾಸು, ಐಐಟಿ ಕಾನ್ಪುರ, ಎನ್‌ಐಟಿ ತಿರುಚಿರಾಪಳ್ಳಿ ಮತ್ತು ಎನ್‌ಸಿಇಆರ್‌ಟಿಗಳ ಪ್ರತಿನಿಧಿಗಳು, ಇಲಾಖೆ ನೇಮಿಸುವ ಕೇಂದ್ರೀಯ ವಿದ್ಯಾನಿಲಯ, ನವೋದಯ ವಿದ್ಯಾನಿಲಯ ಮತ್ತು ಖಾಸಗಿ ಶಾಲೆಗಳ ತಲಾ ಒಬ್ಬರು ಪ್ರಿನ್ಸಿಪಾಲರು, ಉನ್ನತ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಈ ಸಮಿತಿಯಲ್ಲಿ ಇರಲಿದ್ದಾರೆ. ಈ ಸಮಿತಿಗೆ ನೀಡಲಾಗಿರುವ ಕಾರ್ಯವ್ಯಾಪ್ತಿ ಕುತೂಹಲಕರವಾಗಿದೆ. ಉನ್ನತ ಶಿಕ್ಷಣಕ್ಕೆ ಸೇರ್ಪಡೆಗೊಳ್ಳಲು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ಗಳನ್ನು ಅವಲಂಬಿಸುತ್ತಿರುವುದನ್ನು ತಗ್ಗಿಸುವುದಕ್ಕೆ ಹಾದಿ ಹುಡುಕುವುದರ ಜೊತೆಗೆ, ಈ ಕೆಳಗಿನ ಅಂಶಗಳನ್ನೂ ಪರಿಶೀಲಿಸುವಂತೆ ಸಮಿತಿಯನ್ನು ಕೋರಲಾಗಿದೆ:
* ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ಗಳನ್ನು ಅವಲಂಬಿಸುತ್ತಿರುವುದಕ್ಕೆ ಹಾಲಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಗುರುತಿಸುವುದು.
* ಪೂರ್ಣಕಾಲಿಕ ಕೋಚಿಂಗ್ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ‘ಡಮ್ಮಿ ಶಾಲೆ’ಗಳನ್ನು ನಿವಾರಿಸಲು ಕ್ರಮಗಳನ್ನು ಸೂಚಿಸುವುದು.
* ಶಿಕ್ಷಣದಲ್ಲಿ ಫಾರ್ಮೇಟಿವ್ ಅಸೆಸ್‌ಮೆಂಟ್ ಪಾತ್ರ ಮತ್ತು ಅವುಗಳ ಇಲ್ಲದಿರುವಿಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಪರಿಶೀಲಿಸುವುದು.
* ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಏರುತ್ತಿರುವ ಬೇಡಿಕೆ ಮತ್ತು ಗುಣಮಟ್ಟದ ಸಂಸ್ಥೆಗಳಲ್ಲಿರುವ ಸೀಟುಗಳ ಸೀಮಿತ ಲಭ್ಯತೆಯ ಕಾರಣಗಳಿಗೆ ಉಂಟಾಗಿರುವ ಅಸಮತೋಲನ ಹೇಗೆ ವಿದ್ಯಾರ್ಥಿಗಳನ್ನು ಕೋಚಿಂಗ್ ಸೆಂಟರ್‌ಗಳತ್ತ ನೂಕುತ್ತಿದೆ ಎಂಬ ಅಂಶದ ಪರಿಶೀಲನೆ.
* ಉನ್ನತ ಶಿಕ್ಷಣದಲ್ಲಿರುವ ಪರ್ಯಾಯ ಅವಕಾಶಗಳ ಕುರಿತು ಹೆತ್ತವರಲ್ಲಿ ಮತ್ತು ಮಕ್ಕಳಲ್ಲಿ ಇರುವ ಅರಿವಿನ ಕೊರತೆ ಮತ್ತು ಅದರಿಂದಾಗಿ ಕೆಲವೇ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಮೇಲೆ ಅತಿ ಅವಲಂಬನೆ ಹೆಚ್ಚಿರುವುದರ ಪರಿಶೀಲನೆ.
* ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಪರಿಣಾಮಕಾರಿತನ ಮತ್ತು ಅವು ಹೇಗೆ ಕೋಚಿಂಗ್ ಉದ್ಯಮದ ಬೆಳವಣಿಗೆಗೆ ಕಾರಣ ಆಗುತ್ತವೆ ಎಂಬ ಅಂಶದ ಪರಿಶೀಲನೆ.
* ಕೋಚಿಂಗ್ ಸೆಂಟರ್‌ಗಳ ತಪ್ಪು ಹಾದಿಗೆಳೆಯುವ ಜಾಹೀರಾತುಗಳ ಪರಿಶೀಲನೆ, ಶಾಲೆಗಳಲ್ಲಿ ವೃತ್ತಿ ಮಾರ್ಗದರ್ಶನ ವ್ಯವಸ್ಥೆಗಳ ಸುಧಾರಣೆ, ಇತ್ಯಾದಿಗಳು.
ಇವನ್ನೆಲ್ಲ ಸಮಿತಿಯ ಅಧ್ಯಯನ ವ್ಯಾಪ್ತಿಯಲ್ಲಿ (ToR) ಸೇರಿಸಲಾಗಿದ್ದು, ತಮಗೆ ವಹಿಸಲಾಗಿರುವ ಜವಾಬ್ದಾರಿಯಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಸಮಿತಿಯು ಉನ್ನತ ಶಿಕ್ಷಣ ಸಚಿವರಿಗೆ ಪ್ರತೀ ತಿಂಗಳು ಮಾಹಿತಿ ನೀಡಬೇಕೆಂದು ಈ ಆದೇಶ ಸೂಚಿಸಿದೆ.
ಖಾಸಗೀಕರಣದ ಹಾದಿ ತೆರೆದದ್ದು
ಭಾರತದಲ್ಲಿ ಖಾಸಗೀಕರಣದ ಹಾದಿಯನ್ನು ಮೊದಲು ತುಳಿದದ್ದೇ ಶಿಕ್ಷಣ ರಂಗ. 70-80ರ ದಶಕಕ್ಕೆ ಮೊದಲು ಖಾಸಗಿ ಶಿಕ್ಷಣ ವ್ಯವಸ್ಥೆಯು ಸರಕಾರಿ ವ್ಯವಸ್ಥೆಯ ಜೊತೆಜೊತೆಗೇ ಅಲ್ಪ ಪ್ರಮಾಣದಲ್ಲಿ ಇತ್ತು. ಆದರೆ ಆ ಬಳಿಕ ಸರಕಾರವು ಖಾಸಗೀಕರಣದತ್ತ ಆಸಕ್ತಿ ತೋರಿಸತೊಡಗಿತು. 1986ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಬದಲಾವಣೆಯ ಕುರುಹುಗಳು ದಟ್ಟವಾಗಿ ಕಾಣಿಸುತ್ತವೆ. ಇಂದು ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಆ ಸಂದರ್ಭದಲ್ಲಿ ಈ ನೀತಿಯನ್ನು ಬೀದಿಗಿಳಿದು ವಿರೋಧಿಸಿತ್ತು. ಮುಂದೆ 1992ರಲ್ಲಿ ಬಂದ ಕ್ರಿಯಾಯೋಜನೆ ಶಿಕ್ಷಣಕ್ಕೆ ಖಾಸಗಿ ರಂಗದಿಂದ ಹಣ ತೊಡಗಿಸುವ ಬಗ್ಗೆ ಸ್ಪಷ್ಟ ಹಾದಿಗಳನ್ನು ತೆರೆಯಿತು. ದೇಶವು ಎಲ್ಲ ರಂಗಗಳಲ್ಲೂ ಉದಾರೀಕರಣಕ್ಕೆ ಬಾಗಿಲು ತೆರೆದದ್ದು ಅದೇ ಸಮಯದಲ್ಲಿ. ಈ ಎಲ್ಲ ಪ್ರಕ್ರಿಯೆಗಳು ತುದಿ ಮುಟ್ಟಿದ್ದು, ಅಂದು ಶಿಕ್ಷಣದ ಖಾಸಗೀಕರಣವನ್ನು ಶತಾಯಗತಾಯ ವಿರೋಧಿಸಿದ್ದ ಹಾಲಿ ಆಡಳಿತ ಪಕ್ಷದ ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy- NEP), 2020 ಮೂಲಕ.
ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಇಂದು ಹೇಗಿದೆ ಎಂದರೆ, ದೇಶದಲದಲೀಗ 1,362 ಯೂನಿವರ್ಸಿಟಿಗಳಿವೆ, 52,538 ಕಾಲೇಜುಗಳಿವೆ ಮತ್ತು 11,779 ಸ್ವತಂತ್ರ ಸಂಸ್ಥೆಗಳಿವೆ. ಇಲ್ಲಿನ ಯೂನಿವರ್ಸಿಟಿಗಳಲ್ಲಿ 522 ಸಾಮಾನ್ಯ ಯೂನಿವರ್ಸಿಟಿಗಳು, 177 ತಾಂತ್ರಿಕ ಯೂನಿವರ್ಸಿಟಿಗಳು, 63 ಕೃಷಿ ವಲಯದ ಯೂನಿವರ್ಸಿಟಿಗಳು, 66 ವೈದ್ಯಕೀಯ ಯೂನಿವರ್ಸಿಟಿಗಳು, 23 ಕಾನೂನು ಯೂನಿವರ್ಸಿಟಿಗಳು, 23 ಭಾಷಾ ಯೂನಿವರ್ಸಿಟಿಗಳು. ಈ ಯೂನಿವರ್ಸಿಟಿಗಳ ಪೈಕಿ ಇಂದು ಶೇ. 78.6 ಯೂನಿವರ್ಸಿಟಿಗಳು ಖಾಸಗಿ ಸುಪರ್ದಿಯಲ್ಲಿವೆ; ಅವುಗಳಲ್ಲಿ ಶೇ. 65.2 ವಿವಿಗಳಿಗೆ ಸರಕಾರದ ಕಡೆಯಿಂದ ಯಾವುದೇ ಆರ್ಥಿಕ ಸಹಕಾರ ಇಲ್ಲ. ಎನ್‌ಇಪಿ-2020ರ ಬಲದೊಂದಿಗೆ ಇವು ‘ಲಾಭಗಳಿಸುವ’ ಶಿಕ್ಷಣದ ಅಂಗಡಿಗಳಾಗಿ ವ್ಯಾಪಾರಕ್ಕೆ ಕುಳಿತಿವೆ. ಸರಕಾರ ಈಗ ಉನ್ನತ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ತೆರೆದಿರುವುದಲ್ಲದೆ, ಶಿಕ್ಷಣೋದ್ಯಮಿಗಳಿಗೆ ಸಾಲ ಒದಗಿಸಲು ಉನ್ನತ ಶಿಕ್ಷಣ ಹಣಕಾಸು ಏಜನ್ಸಿಯನ್ನೂ ತೆರೆದಿದೆ.
ಕೋಚಿಂಗ್ ವ್ಯವಸ್ಥೆಗೆ ಮಹದವಕಾಶ
ಭಾರತದಲ್ಲಿಂದು ಅಂದಾಜು 25 ಕೋಟಿ ಗಾತ್ರದ ವಿದ್ಯಾರ್ಥಿ ಸಮುದಾಯ ಇದ್ದು, ಅವರಲ್ಲಿ 4.33 ಕೋಟಿ ಮಂದಿ ಉನ್ನತ ಶಿಕ್ಷಣಕ್ಕೆ ನೋಂದಾಯಿಸಿಕೊಂಡಿದ್ದಾರೆ (2021-22ರ ಲೆಕ್ಕಾಚಾರ). ಈ ಗಾತ್ರದ ಕಾರಣಕ್ಕಾಗಿ ಭಾರತದ ಕೋಚಿಂಗ್ ಮಾರುಕಟ್ಟೆ (ಕಾರ್ಪೊರೇಟ್ ವಲಯ ಇದನ್ನು ಈಗ EdTech ಉದ್ಯಮ ಕ್ಷೇತ್ರ ಎಂದು ಮರ್ಯಾದೆ ಕೊಟ್ಟು ಗುರುತಿಸುತ್ತಿದೆ!) ಈಗ 64,875 ಕೋಟಿ ರೂ.ಗಳ ಗಾತ್ರದ್ದಾಗಿದ್ದು, 2030ರ ಹೊತ್ತಿಗೆ ಇದು 2.50 ಲಕ್ಷಕೋಟಿ ರೂ. ಗಾತ್ರದ್ದಾಗಲಿದೆ ಎಂದು ಇಂಡಸ್ಟ್ರಿ ಪರಿಣತರು ಲೆಕ್ಕಾಚಾರ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಎಲ್ಲರ ಕಣ್ಣೂ ಇತ್ತ ಬೀಳತೊಡಗಿದೆ.
ವಿಶೇಷವಾಗಿ ನೀಟ್, ಯುಪಿಎಸ್‌ಸಿಯಂತಹ ಬಾಟಲ್‌ನೆಕ್ ಇರುವ, ಒಂದು ಸೀಟಿಗೆ ಹತ್ತಿಪ್ಪತ್ತು ಜನ ವಿದ್ಯಾರ್ಥಿಗಳು ಸ್ಪರ್ಧೆಗಿಳಿದು ಸೀಟು ಗೆದ್ದುಕೊಳ್ಳುವ ಆಯಕಟ್ಟಿನ ಜಾಗಗಳೇ ಕೋಚಿಂಗ್ ಸೆಂಟರ್‌ಗಳ ಹಣದ ಥೈಲಿಗಳು. ಇಲ್ಲಿ ಗಳಿಸಿದ ಹಣವೇ ಉಳಿದ ಶಿಕ್ಷಣ ರಂಗಗಳಲ್ಲೂ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಪರಿಚಯಿಸುವ ಮತ್ತು ಆ ಮೂಲಕ ಇಲ್ಲದ ಬಾಟಲ್‌ನೆಕ್‌ಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿವೆ. ಜನ ಮುಗಿಬಿದ್ದರೆ ಮಾತ್ರ ಟ್ಯೂಷನ್/ಕೋಚಿಂಗ್ ಸೆಂಟರ್‌ಗಳಿಗೆ ಕಾಸು.
ನೀಟ್ ಪರೀಕ್ಷೆಗಳಂತೂ ಏಳೆಂಟು ತಿಂಗಳ ತರಬೇತಿಗೆ ಒಂದೆರಡು ಲಕ್ಷ ರೂಪಾಯಿಗಳನ್ನೇ ಸುಲಿಯುತ್ತದೆ. ಮಾತ್ರವಲ್ಲದೆ, ರಾಜಸ್ಥಾನದ ಕೋಟಾದಲ್ಲಿರುವ ನೀಟ್ ಫ್ಯಾಕ್ಟರಿಯಲ್ಲಿ ಪ್ರತೀ ವರ್ಷ ಹಲವು ಮಕ್ಕಳ ಸಾವಿಗೆ ಕಾರಣ ಆಗುತ್ತಿದೆ. ಈ ಕೋಚಿಂಗ್ ಕೇಂದ್ರಗಳ ಕಾರಣದಿಂದಾಗಿ ಸಾಂಪ್ರದಾಯಿಕ ಶಾಲಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹೆತ್ತವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದಾಗ, ಆ ಖಾಸಗಿ ಶಾಲೆಯ ಫೀಸು ಮಾತ್ರವಲ್ಲದೆ ಅದೇ ಶಾಲೆಯ ಕೋಚಿಂಗ್ ಸೆಂಟರ್ ಫೀಸನ್ನೂ ಪ್ರತ್ಯೇಕವಾಗಿ ಕಟ್ಟಬೇಕಾದ ಸನ್ನಿವೇಶ ಇದೆ. ಇವರ ವರಾತಗಳಿಂದಾಗಿ ಇಂದು ಶಿಕ್ಷಣ ಮತ್ತು ಕೋಚಿಂಗ್ ಪರಸ್ಪರ ವಿರುದ್ಧ ಪದಗಳಾಗಿಬಿಟ್ಟಿವೆ. ಶಿಕ್ಷಣವನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೀಮಿತಗೊಳಿಸಿ, ಯಶಸ್ಸು ಎಂದರೆ ನೀಟ್/ಸಿಇಟಿ ಅಂಕಗಳು ಎಂದು ಪುಟಗಟ್ಟಲೆ ಜಾಹೀರಾತುಗಳನ್ನು ನೀಡುವ ಈ ವ್ಯವಸ್ಥೆಯು ತಾನು ಹಣ ಮಾಡುವುದು ಬಿಟ್ಟರೆ, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ನೀಡುತ್ತಿರುವ ಕೊಡುಗೆ ಶೂನ್ಯ. ಈ ದುಡ್ಡಿನ ಮೇಲಾಟದಲ್ಲಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಶಿಕ್ಷಣ ಪಡೆದು ಹೊರಬಂದ ಉತ್ಪನ್ನಗಳ ಗುಣಮಟ್ಟದ ಬಗ್ಗೆ, ಕೌಶಲ ಕೊರತೆಗಳ ಬಗ್ಗೆ ಈಗಾಗಲೇ ಆತಂಕಗಳು ವ್ಯಕ್ತವಾಗುತ್ತಿವೆ.
ಶಿಕ್ಷಣ ಕ್ಷೇತ್ರ ಖಾಸಗೀಕರಣ ಆಗಬೇಕೆಂಬುದು ಸರಕಾರವು ತಾನೇ ಆಯ್ಕೆ ಮಾಡಿಕೊಂಡ ಹಾದಿ. ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಹಂತಹಂತವಾಗಿ ಕೈಯಾರೆ ಕೊಂದು, ಆ ಜಾಗದಲ್ಲಿ ತಂದ ‘ಲಾಭ ಕೇಂದ್ರಿತ’ ಖಾಸಗಿ ವ್ಯವಸ್ಥೆಗೆ ಈಗ ದುಡ್ಡಿನ ರುಚಿ ಹಿಡಿದಿದೆ. ಅದೀಗ ಸರಕಾರಗಳ ನಿಯಂತ್ರಣ ಮೀರಿ ಬೆಳೆಯುತ್ತಿರುವುದು ಮಾತ್ರವಲ್ಲದೆ, ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು, ವೃತ್ತಿಪರರ ಕೌಶಲಗಳನ್ನು ನಾಶಪಡಿಸುತ್ತಿದೆ. ಇಷ್ಟಾದ ಬಳಿಕ ಎಚ್ಚೆತ್ತುಕೊಂಡಿರುವ ಸರಕಾರ, ಈಗ ಕೋಚಿಂಗ್ ಸೆಂಟರ್ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಸಮಿತಿ ರೂಪಿಸಿರುವುದು ಕ್ರೂರ ವ್ಯಂಗ್ಯ. ಇದಕ್ಕೆಲ್ಲ ಮೂಲ ಕಾರಣ ಸ್ವತಃ ಸರಕಾರದ ನೀತಿಗಳೇ ಅಲ್ಲವೇ?!