ಡೇಟಾ ಬೇಕು ಅಂತಾದ್ರೆ ಅದಕ್ಕೊಂದು ಕಾನೂನು ಚೌಕಟ್ಟು ಬೇಡವೆ?

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಸ್ವಾತಂತ್ರ್ಯ ಸಿಕ್ಕಿದ ಆರಂಭದ ಹಂತದಲ್ಲಿ, ದೇಶದೊಳಗೆ ಡೇಟಾ ದಾಖಲಾತಿ ಸನ್ನಿವೇಶದ ಬಗ್ಗೆ ಹೇಳುತ್ತಾ, ‘‘ನಮ್ಮಲ್ಲಿ ಡೇಟಾ ಇಲ್ಲ. ನಾವು ಬಹುತೇಕ ಕತ್ತಲೆಯಲ್ಲೇ ಕಾರ್ಯಾಚರಿಸುತ್ತಿದ್ದೇವೆ’’ (We have no data. We function largely in the dark) ಎಂದು ಉಲ್ಲೇಖಿಸಿದ್ದರು ಎಂಬ ಬಗ್ಗೆ ಚರಿತ್ರಕಾರ ನಿಖಿಲ್ ಮೆನನ್ ದಾಖಲಿಸಿದ್ದಾರೆ. ಮುಂದೆ ನೆಹರೂ ಕಾಲದಲ್ಲೇ ದೇಶ ಸಂಖ್ಯಾಶಾಸ್ತ್ರೀಯವಾಗಿ ಜಗತ್ತಿನ ಮುಂಚೂಣಿಯ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ದುರದೃಷ್ಟವಶಾತ್ ಕಳೆದ 75 ವರ್ಷಗಳಲ್ಲಿ ನಾವು ಮತ್ತೆ ಮತ್ತೆ ಅದೇ ಕತ್ತಲೆಯ ಮೂಲೆಗೆ ತಲುಪಿದ್ದೇವೆ. ಅಂತಹದೊಂದು ಇತ್ತೀಚೆಗಿನ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು 1860ರಷ್ಟು ಹಿಂದೆಯೇ ತಮ್ಮ ವ್ಯಾಪಾರದ ಹಿತದೃಷ್ಟಿಯಿಂದ ಭಾರತದೊಳಗೆ ಅಂಕಿ-ಸಂಖ್ಯೆ, ಲೆಕ್ಕಾಚಾರಗಳ ದಾಖಲಾತಿಗೆ ಆದ್ಯತೆ ನೀಡಿದ್ದರು. ಸ್ವಾತಂತ್ರ್ಯ ಬಂದ ಬಳಿಕ, ಭಾರತದ ಸಂಖ್ಯಾಶಾಸ್ತ್ರ ಪಿತಾಮಹ ಎಂದೇ ಹೆಸರಾಗಿರುವ ಡಾ. ಪಿ.ಸಿ. ಮಹಾಲನೋಬಿಸ್ ಅವರು ಭಾರತ ಸರಕಾರದ ಮೊದಲ ಸಂಖ್ಯಾಶಾಸ್ತ್ರ ಸಲಹೆಗಾರರಾಗಿ ನೇಮಕಗೊಂಡು, ಸ್ವತಂತ್ರ ಭಾರತದ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದರು. ಅದೇ ಅವಧಿಯಲ್ಲಿ, ಪ್ರೊ. ಪಿ.ವಿ. ಸುಖಾತ್ಮೆ ಅವರು ಭಾರತೀಯ ಕೃಷಿ ರಂಗದ ಅಂಕಿಸಂಖ್ಯೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಜಗತ್ತಿನ ಬಹುತೇಕ ದೇಶಗಳು ಅಂಕಿ-ಸಂಖ್ಯೆಗಳ ‘ಡೇಟಾ’ಕ್ಕೆ ಎಚ್ಚೆತ್ತುಕೊಳ್ಳುವ ಮುನ್ನವೇ, ಆಗಿನ್ನೂ ತೃತೀಯ ಜಗತ್ತಿನ ದೇಶವಾಗಿದ್ದ ಭಾರತವು ಅಂಕಿಅಂಶಗಳ ಮಟ್ಟಿಗೆ ‘ಜಾಗತಿಕ ಗುಣಮಟ್ಟದ’ ವ್ಯವಸ್ಥೆ ಹೊಂದಿತ್ತು. ದುರದೃಷ್ಟವಶಾತ್, ದೇಶದ ವ್ಯವಸ್ಥಾಂತರಗಳ ಅವಧಿಯಲ್ಲಿ ಅದೇ ವೇಗವನ್ನು ಉಳಿಸಿಕೊಳ್ಳುವುದು ನಮಗೆ ಸಾಧ್ಯ ಆಗಲಿಲ್ಲ.
ಮಹಾಲನೋಬಿಸ್ ಕಾಲದ ಬಳಿಕ, ಕಂಪ್ಯೂಟರೀಕರಣಕ್ಕೆ ಒಡ್ಡಿಕೊಂಡಿರದ ಕಾರಣಕ್ಕಾಗಿ ‘ಡೇಟಾ’ ನಿರ್ವಹಣೆಯಲ್ಲಿ ತೀರಾ ಹಿಂದುಳಿದಿದ್ದ ಭಾರತ, 90ರ ದಶಕದಲ್ಲಿ ಉದಾರೀಕರಣಕ್ಕೆ ತೆರೆದುಕೊಂಡಾಗ, ಇಲ್ಲಿನ ಅಂಕಿ-ಅಂಶಗಳ ವ್ಯವಸ್ಥೆ ತೀರಾ ಹದಗೆಟ್ಟಿತ್ತು. ಇದನ್ನೆಲ್ಲ ಸರಿಪಡಿಸುವ ನಿಟ್ಟಿನಲ್ಲಿ ಭಾರತ ಸರಕಾರವು 2000ನೇ ಇಸವಿಯ ಜನವರಿಯಲ್ಲಿ ಡಾ. ಸಿ. ರಂಗರಾಜನ್ ಅವರ ಅಧ್ಯಕ್ಷತೆಯ ಸಮಿತಿಯೊಂದನ್ನು ರಚಿಸಿತು. ಆ ಸಮಿತಿಯು 2001ರ ಆಗಸ್ಟ್ ತಿಂಗಳಿನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ, ದೇಶದೊಳಗೆ ಶಾಶ್ವತ ನೆಲೆಯಲ್ಲಿ ಸಂಖ್ಯಾಶಾಸ್ತ್ರ ಆಯೋಗವೊಂದು ರಚನೆಯಾಗಬೇಕು ಎಂದು ಶಿಫಾರಸು ಮಾಡಿತ್ತು. ಆ ಶಿಫಾರಸನ್ನು ಭಾರತ ಸರಕಾರ ಜಾರಿಗೆ ತಂದದ್ದು 2005ರ ಜೂನ್ 1ರಂದು. ಅಂದು, ರಾಷ್ಟ್ರೀಯ ಸ್ಟಾಟಿಸ್ಟಿಕಲ್ ಕಮಿಷನ್ (NSC) ಸ್ಥಾಪನೆಗೊಂಡಿತು.
ಹಾಲೀ ಈ NSC ಅಧ್ಯಕ್ಷರಾಗಿರುವ ಪ್ರೊ. ರಾಜೀವ ಲಕ್ಷ್ಮಣ್ ಕಾರಂದಿಕಾರ್ ಅವರು ಕಳೆದವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘‘ಭಾರತ ಸರಕಾರವು ದೇಶದ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಡೇಟಾಗಳನ್ನು NSC ಜೊತೆ ಹಂಚಿಕೊಂಡಾಗ ಮಾತ್ರ ತಮ್ಮ ಸಂಸ್ಥೆ ಒದಗಿಸುವ ಪ್ರಮುಖ ಆರ್ಥಿಕ ಸೂಚ್ಯಂಕಗಳು ನಿಖರ ಹಾಗೂ ನಂಬಲರ್ಹವಾಗಲು ಸಾಧ್ಯ. ಆದರೆ, ಬ್ಯಾಂಕುಗಳು, ಪೇಮೆಂಟ್ ಕಂಪೆನಿಗಳು, ಸಾರಿಗೆ ಸೇವಾದಾತರು ಮಾತ್ರವಲ್ಲದೆ ತೆರಿಗೆ ಇಲಾಖೆ ಮತ್ತು ರೈಲ್ವೆ ಇಲಾಖೆಯಂತಹ ಸರಕಾರದ ಇಲಾಖೆಗಳು ಕೂಡ ತಮಗಿರುವ ಖಾಸಗಿತನ ಹಾಗೂ ಕಾನೂನಿನ ಆತಂಕಗಳ ಕಾರಣಕ್ಕಾಗಿ ತಮ್ಮ ಡೇಟಾಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ.’’ ಎಂದು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.
‘‘ಈ ಬಗ್ಗೆ ಉನ್ನತ ಮಟ್ಟದಲ್ಲಿ ನೀತ್ಯಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಮಾತುಕತೆಗಳು ಈಗಾಗಲೇ ಆರಂಭಗೊಂಡಿವೆ. ಕನಿಷ್ಠಪಕ್ಷ, ಸ್ಥಳಗಳನ್ನು ಪ್ರಾದೇಶಿಕ ಕೋಡ್‌ಗಳ ಮೂಲಕ ಗುರುತಿಸುವ ಮುಸುಕಿನ ಡೇಟಾಗಳನ್ನು ಒದಗಿಸಿದರೆ, ಅದು ತಮ್ಮ NSC ಒದಗಿಸುವ ಅಂಕಿ-ಸಂಖ್ಯೆಗಳ ನಿಖರತೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು’’ ಎಂದು ಪ್ರೊ. ಕಾರಂದಿಕಾರ್ ಹೇಳಿಕೊಂಡಿದ್ದಾರೆ.
ಇಂದು ತಂತ್ರಜ್ಞಾನವಹಿ, ಡೇಟಾಗಳನ್ನು ರಿಯಲ್ ಟೈಮಿನಲ್ಲಿ ಪಡೆಯುವುದು ಸಾಧ್ಯವಿದೆ. ಡೇಟಾ ವಿಶ್ಲೇಷಣೆಯ ಕೌಶಲಗಳೂ ಭರಪೂರ ಹೆಚ್ಚಿವೆ. ಹಾಗಾಗಿಯೇ ಇಂದು ‘ಮಾಹಿತಿ ಯುಗದಲ್ಲಿ’ ಡೇಟಾವನ್ನು ‘ಎರಡನೆಯ ಚಿನ್ನ’ ಎಂದೇ ಗುರುತಿಸುತ್ತಾರೆ. ಭಾರತ ಉದಾರೀಕರಣಕ್ಕೆ ತೆರೆದುಕೊಂಡ ಬಳಿಕ ಈಗ, ಈ ಎರಡನೇ ಚಿನ್ನವನ್ನು ಪರಿಣಾಮಕಾರಿಯಾಗಿ ಒದಗಿಸಬಲ್ಲವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿಂದಿನಂತೆ ಡೇಟಾ ವಿಚಾರದಲ್ಲಿ ಕಲ್ಪಿತ ಕಥೆಗಳಿಗೆ, ಸ್ಥೂಲ ಚಿತ್ರಣಕ್ಕೆ ಅವಕಾಶ ಇಲ್ಲ. ಏಕೆಂದರೆ ಇಂದು ಡೇಟಾ ಕೇವಲ ಕಾಗದದ ಹಾಳೆಯ ಮೇಲಿನ ಅಂಕಿ-ಅಂಶ ಅಲ್ಲ. ಅದು ಮಾರುಕಟ್ಟೆಯಲ್ಲಿ ವ್ಯವಹಾರವಾಗಿ ಕಿಸೆ ತುಂಬಬಲ್ಲ ಸರಕು ಕೂಡ ಹೌದು.
ವಾಸ್ತವ ಹೀಗಿರುವಾಗ, ಭಾರತವು ಇಂತಹ ಡೇಟಾಗಳ ಸುರಕ್ಷತೆಗೆ, ನಿಯಂತ್ರಣಕ್ಕೆ ಏನೇನೆಲ್ಲ ಕ್ರಮಗಳನ್ನು ಕೈಗೊಂಡಿದೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಭಾರತದಲ್ಲಿ ಅತ್ತೂ ಕರೆದೂ, ಕಡೆಗೂ ಸುಪ್ರೀಂಕೋರ್ಟ್‌ನ ಒತ್ತಾಸೆಯ ಮೇರೆಗೆ, ಈಗ ಒಲ್ಲದ ಮನಸ್ಸಿನಿಂದ The Digital Personal Data Protection Act, 2023 (DPDP Act) ಜಾರಿಗೆ ಬಂದಿದೆ. ಅದಕ್ಕೆ 2023 ಆಗಸ್ಟ್ 11ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಅದಾಗಿ ಎರಡು ವರ್ಷಗಳು ಕಳೆದಿದ್ದರೂ, ಇಂದಿಗೂ ಆ ಕಾಯ್ದೆ ಅನುಷ್ಠಾನಕ್ಕೆ ತರಲು ನಿಯಮಗಳನ್ನು ತುರ್ತಾಗಿ ರೂಪಿಸುವುದಕ್ಕೆ ಭಾರತ ಸರಕಾರವು ಅಗತ್ಯ ಉತ್ಸಾಹ ತೋರಿಸುತ್ತಿಲ್ಲ. ಸರಕಾರ ರಚಿಸಿರುವ ಕರಡು ನಿಯಮಗಳು ಇನ್ನೂ ಆ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳ ಪರಿಶೀಲನೆಯ ಹಂತದಲ್ಲಿವೆ.
ಇಲ್ಲೊಂದು ಕುತೂಹಲಕರವಾದ ದ್ವಂದ್ವ ಇದೆ. ಅದೇನೆಂದರೆ, DPDP ಕಾನೂನಿನ ಅಡಿಯಲ್ಲಿ, ಭಾರತ ಸರಕಾರವು ತಾನು ಸ್ವತಃ ದೇಶದ ಅತಿದೊಡ್ಡ ಡೇಟಾ ಉಸ್ತುವಾರಿ (ಡೇಟಾ ಫಿಡ್ಯೂಷರಿ) ಆಗಿದ್ದೂ ಕೂಡ, ತನ್ನನ್ನು ಆ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಿದೆ. ಮಾತ್ರವಲ್ಲದೆ, ತಾನು ಕಾಲಕಾಲಕ್ಕೆ ಪ್ರಕಟಿಸಬಹುದಾದ ಸಂಸ್ಥೆಗಳನ್ನೂ ಆ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಲು ಉದ್ದೇಶಿಸಿದೆ. ಅದೇ ವೇಳೆಗೆ, ಸರಕಾರದ ಸುಪರ್ದಿಯಲ್ಲಿರುವ ವೈಯಕ್ತಿಕ ಡೇಟಾಗಳು ವಾಣಿಜ್ಯ ಉದ್ದೇಶಗಳಿಗಾಗಿ ಹೊರಗೆ ಬಳಕೆ ಆದಾಗ (ಉದಾಹರಣೆಗೆ, ಒಬ್ಬ ವ್ಯಕ್ತಿಯ ತೆರಿಗೆ ವಿವರಗಳು, ಸಂಪಾದನೆಯ ವಿವರಗಳು, ಪ್ರಯಾಣದ ವಿವರಗಳು, ಆರೋಗ್ಯದ ವಿವರಗಳು, ವಿಮೆಯ ವಿವರಗಳು ಇತ್ಯಾದಿ) ಅಂತಹ ಡೇಟಾ ಮೂಲ ವ್ಯಕ್ತಿಗಳು (ಡೇಟಾ ಪ್ರಿನ್ಸಿಪಲ್) ನ್ಯಾಯಾಂಗದ ಮೊರೆ ಹೊದರೂ ಅಚ್ಚರಿ ಇಲ್ಲ. ಹೆಚ್ಚಿನಂಶ ಈ ಕಾರಣಕ್ಕಾಗಿಯೇ ಬ್ಯಾಂಕುಗಳು, ಪೇಮೆಂಟ್ ಕಂಪೆನಿಗಳವರು, ಲಾಜಿಸ್ಟಿಕ್ಸ್ ನವರು ಇತ್ಯಾದಿಯವರೆಲ್ಲ ಸರಕಾರದ್ದೇ ಭಾಗವಾಗಿರುವ NSCಗೆ ಡೇಟಾ ಒದಗಿಸಲು ಹಿಂಜರಿಯುತ್ತಿದ್ದಾರೆ.
ಇಂತಹ ನೀತ್ಯಾತ್ಮಕ ಗೊಂದಲಗಳು, ಡೇಟಾ ಯಾವ ಉದ್ದೇಶಕ್ಕಾಗಿ ಬೇಕಿತ್ತೋ ಆ ಮೂಲ ಉದ್ದೇಶವನ್ನೇ ಸೋಲಿಸುವುದರಿಂದ, ಸರಕಾರ ಸಹಿತ ಎಲ್ಲ ಡೇಟಾ ಫಿಡ್ಯೂಷರಿಗಳೂ ಡೇಟಾ ಖಾಸಗಿತನ ಸಂರಕ್ಷಣೆ ಕಾಯ್ದೆಯ ವ್ಯಾಪ್ತಿಯೊಳಗೆ ಬಂದು, ಜವಾಬ್ದಾರಿಯುತವಾಗಿ ವ್ಯವಹರಿಸುವುದೊಂದೇ ಸರಿಯಾದ ದಾರಿ ಅನ್ನಿಸುತ್ತದೆ. ಡೇಟಾ ಬೇಕು, ಆದರೆ ಅದಕ್ಕೆಂದು ಹಾಕಲಾದ ಕಾನೂನಿನ ಚೌಕಟ್ಟಿನೊಳಗೆ ತಾನು ಇರುವುದಿಲ್ಲ ಎಂಬ ಭಾರತ ಸರಕಾರದ ನಿಲುವು ಸ್ವಲ್ಪ ಸಂಶಯಾಸ್ಪದ ಅನ್ನಿಸುತ್ತದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಎಂದಾದಮೇಲೆ, ಸರಕಾರದಲ್ಲಿರುವವರ ತೊಟ್ಟಿಲನ್ನೇನೂ ಮೇಲೆ ಕಟ್ಟಿರುವುದಿಲ್ಲ. ಜೊತೆಗೆ NSCಯಂತಹ ರಾಷ್ಟ್ರೀಯ ಹಿತಾಸಕ್ತಿಯ ಸಂಸ್ಥೆಗಳಿಗೆ ಡೇಟಾ ಪಡೆಯುವಲ್ಲಿ, ದಾಸ್ತಾನು ಮಾಡುವಲ್ಲಿ ಮತ್ತು ವಿಶ್ಲೇಷಿಸುವಲ್ಲಿ ಖಾಸಗಿ ವ್ಯಕ್ತಿಗಳ ಖಾಸಗಿತನಕ್ಕೆ ಯಾವುದೇ ಧಕ್ಕೆ ಬರದಂತೆ ವ್ಯವಹರಿಸುವುದಕ್ಕಾಗಿ, ಮೂಲ ಕಾಯ್ದೆಗೆ ಪೂರಕವಾಗಿರುವ ಸಮರ್ಪಕ ಕಾನೂನಿನ, ಮಾನದಂಡಗಳ ಚೌಕಟ್ಟೊಂದು ಅಗತ್ಯವಿದೆ.
ಭಾರತ ಸರಕಾರವಂತೂ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಎಂಬ ಹೆಸರಿನಲ್ಲಿ, ಯಾವುದೇ ಕಾನೂನಿನ ಚೌಕಟ್ಟಿನ ಮಿತಿ ಇಲ್ಲದೆ ಡೇಟಾ ಸ್ಟ್ಯಾಕ್‌ಗಳ ತೋರಣವನ್ನೇ ಕಟ್ಟುತ್ತಿದೆ. ಆಧಾರ್ ತಳಹದಿಯ ಮೇಲೆ, ಭೂಮಿ, ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಪ್ರಯಾಣ.. ಹೀಗೆ ಪ್ರತಿಯೊಂದಕ್ಕೂ ಪೋರ್ಟಲ್‌ಗಳು ಸಿದ್ಧಗೊಳ್ಳುತ್ತಿವೆ ಮತ್ತು ಅವಕ್ಕೆಲ್ಲ ಪರಸ್ಪರ ಅಂತರ್ ಸಂಬಂಧವನ್ನು ರೂಪಿಸಲಾಗುತ್ತಿದೆ. ಇಂತಹದೊಂದು ಆತಂಕಕಾರಿ ಸನ್ನಿವೇಶದಲ್ಲಿ, ಜನರಿಗೆ ತಮ್ಮ ಖಾಸಗಿ ಸಂಗತಿಗಳ ಡೇಟಾದ (ಇಂದು ಅದು ಎರಡನೇ ಚಿನ್ನ!) ಮಹತ್ವ ಏನೆಂಬುದು ಅರ್ಥ ಆಗದಿದ್ದರೆ, ಕೊನೆಯಲ್ಲಿ ಸರಕಾರ ತನ್ನ ಪ್ರಜೆಯ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಕಣ್ಗಾವಲು ಇರಿಸುವ ಮತ್ತು ಈ ಎಲ್ಲ ಮೂಗುದಾರಗಳನ್ನು ಕೊನೆಗೆ ಯಾರ್ಯಾರೋ ಕಾರ್ಪೊರೇಟ್‌ಗಳು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸನ್ನಿವೇಶ ಎದುರಾದರೆ ಅಚ್ಚರಿ ಇಲ್ಲ. ಈ ಬಗ್ಗೆ ಎಚ್ಚರ ಇಂದಿನ ತುರ್ತು.