‘ಸ್ಮಾರ್ಟ್’ ಆಗಿದ್ದರೆ ನಮ್ಮದು; ಉಳಿದದ್ದೆಲ್ಲ ನಮ್ಮದಲ್ಲಪ್ಪ!

‘‘ಸ್ಮಾರ್ಟ್ ಸಿಟಿ ಪರಿಕಲ್ಪನೆ ಜನರ ಆಶೋತ್ತರಗಳಿಗಿಂತಲೂ ಒಂದೆರಡು ಹೆಜ್ಜೆ ಮುಂದಿನ ಚಿಂತನೆಯಾಗಿದ್ದು, ಸಂಬಂಧಪಟ್ಟವರೆಲ್ಲರ ಜೊತೆ ಚರ್ಚಿಸಿ ಇದನ್ನು ಜಾರಿಗೊಳಿಸಲಾಗುತ್ತಿದೆ. ನಗರೀಕರಣವನ್ನು ಒಂದು ಅವಕಾಶವಾಗಿ ಪರಿಗಣಿಸಬೇಕು. 30 ವರ್ಷಗಳ ಹಿಂದೆಯೇ ಇದು ಆಗಿದ್ದಿದ್ದರೆ ಇಂದು ಪರಿಸ್ಥಿತಿ ಬೇರೆ ಇರುತ್ತಿತ್ತು. ಸ್ಪಷ್ಟ ಕಾಣ್ಕೆ ಮತ್ತು ಪರಿಣಾಮಕಾರಿ ಯೋಜನೆಗಳಿದ್ದರೆ ಎಲ್ಲ ಸವಾಲುಗಳನ್ನು ಎದುರಿಸಬಹುದು ಮತ್ತು ಇದಕ್ಕೆಲ್ಲ ಸಂಪನ್ಮೂಲ ಸಂಗ್ರಹವೂ ದೊಡ್ಡ ಸಂಗತಿಯಲ್ಲ’’
- ಪ್ರಧಾನಿ ನರೇಂದ್ರ ಮೋದಿ (25 ಜೂನ್ 2015ರಂದು ಸ್ಮಾರ್ಟ್ ಸಿಟಿ,AMRUT, ಅರ್ಬನ್ ಹೌಸಿಂಗ್ ಮಿಷನ್ ಉದ್ಘಾಟಿಸಿ ಹೇಳಿದ ಮಾತುಗಳು. PIB Release ID -122788)
***
‘‘ಭಾರತ ಸರಕಾರ ನಗರಾಭಿವೃದ್ಧಿಯನ್ನು ಸಂವಿಧಾನದ ಆಶಯದಂತೆ ನಡೆಸುತ್ತಿದೆ. ‘ಭೂಮಿ’ ಮತ್ತು ‘ನಗರ ನಿರ್ಮಾಣ’ ರಾಜ್ಯ ಪಟ್ಟಿಯ ವಿಷಯಗಳು. ಸಂವಿಧಾನದ ಷೆಡ್ಯೂಲ್ 12ರಲ್ಲಿ ಹೇಳಿರುವಂತೆ (ಆರ್ಟಿಕಲ್ 243W) ನಗರಾಭಿವೃದ್ಧಿ ಯೋಜನೆಗಳು ಸ್ಥಳೀಯಾಡಳಿತ ಸಂಸ್ಥೆಗಳ ಜವಾಬ್ದಾರಿ. ಭಾರತ ಸರಕಾರವು ನಗರಾಭಿವೃದ್ಧಿಯು ಆರ್ಥಿಕ ಬೆಳವಣಿಗೆಗೆ ಅವಕಾಶ ಒದಗಿಸುತ್ತದೆಂದು ಭಾವಿಸುವುದರಿಂದ ರಾಜ್ಯಗಳಿಗೆ ಅದಕ್ಕೆ ಪೂರಕವಾಗಿ ಯೋಜನೆ ರೂಪಿಸುವಲ್ಲಿ ಮಧ್ಯಪ್ರವೇಶ/ಸಲಹೆ ನೀಡುತ್ತದೆ’’
-(ರಾಜ್ಯಸಭೆಯಲ್ಲಿ 21-07-2025ರಂದು ಚುಕ್ಕೆರಹಿತ ಪ್ರಶ್ನೆಸಂಖ್ಯೆ 78ಕ್ಕೆ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹೂ ಅವರು ನೀಡಿದ ಉತ್ತರ)
***
ಸ್ಮಾರ್ಟ್‌ಸಿಟಿ ಪರಿಕಲ್ಪನೆಗೆ ಈಗ ಹತ್ತು ವರ್ಷಗಳು ಪೂರ್ಣಗೊಂಡಿವೆ. ಆ ಹತ್ತು ವರ್ಷಗಳ ಅಂತರದಲ್ಲಿ ಭಾರತ ಸರಕಾರದ ನಿಲುವು ಬದಲಾದ ಬಗೆಯನ್ನು ಮೇಲಿನ ಎರಡು ಹೇಳಿಕೆಗಳಿಂದ ನೀವು ಗ್ರಹಿಸಬಲ್ಲಿರಾದರೆ, ಭಾರತದ ಮಹತ್ವಾಕಾಂಕ್ಷಿ ‘ಸ್ಮಾರ್ಟ್ ಸಿಟಿ’ ಯೋಜನೆಯ ಪರಿಸ್ಥಿತಿ ಈಗ ಏನಾಗಿದೆ ಎಂಬ ಸ್ಪಷ್ಟ ಚಿತ್ರಣ ನಿಮಗೆ ಸಿಕ್ಕಂತೆ.
ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದೆ. ಕಳೆದವಾರ, ರಾಜ್ಯಸಭೆಯಲ್ಲಿ ಈ ವಿಚಾರದ ಕುರಿತ ಹಲವು ಪ್ರಶ್ನೆಗಳಿಗೆ (ಪ್ರಶ್ನೆ ಸಂಖ್ಯೆ 1,969, 1,909, 868, 862, 78) ಭಾರತ ಸರಕಾರವು ನೀಡಿರುವ ಉತ್ತರಗಳನ್ನು ಒಟ್ಟಾಗಿ ಗಮನಿಸಿದರೆ, ಹತ್ತು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂ.ಗಳ ಅಗಾಧ ಮೊತ್ತ ಹೇಗೆ ಉದ್ದೇಶಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ.
ದೇಶದಲ್ಲಿ ಎರಡು ಹಂತಗಳ ಹಾಗೂ ನಾಲ್ಕು ಸುತ್ತಿನ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದ್ದ 100 ನಗರಗಳಿಗೆ, ಸ್ಮಾರ್ಟ್ ಸಿಟಿ ಮಿಷನ್ (SCM) ಯೋಜನೆಯಡಿ 2025ರ ಜುಲೈ ಹೊತ್ತಿಗೆ, 1,64,695 ಕೋಟಿ ರೂ.ಗಳ ವೆಚ್ಚದಲ್ಲಿ 8,036 ಯೋಜನೆಗಳನ್ನು ಮಂಜೂರು ಮಾಡಲಾಗಿತ್ತು, ಅವುಗಳಲ್ಲಿ 1,53,977 ಕೋಟಿ ರೂ. ಮೊತ್ತದ 7,636 ಯೋಜನೆಗಳು ಪೂರ್ಣಗೊಂಡಿವೆ. ಬಾಕಿ ಉಳಿದ 427 ಕಾಮಗಾರಿಗಳು 10,718 ಕೋಟಿ ರೂ. ವೆಚ್ಚದಲ್ಲಿ ಜಾರಿಯಲ್ಲಿವೆ.
ಯಾವುದೇ ಯೋಜನೆ ಯಶಸ್ವಿ ಆಗಿದ್ದಲ್ಲಿ, ಸಹಜ ಬೆಳವಣಿಗೆ ಎಂದರೆ ಆ ಯಶಸ್ಸನ್ನು ಬೇರೆ ಕಡೆಗಳಲ್ಲಿ ಅನುಷ್ಠಾನಕ್ಕೆಳಸಿ ಪುನರಾವರ್ತಿಸುವುದು. ಈ ವಿಚಾರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸೋತು ಶರಣಾಗತಿ ಸೂಚಿಸಿಯಾಗಿದೆ. 2025ರ ಮಾರ್ಚ್ 31ಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಅಂಗಡಿ ಮುಚ್ಚಿಕೊಂಡಿದ್ದು, ಅದಕ್ಕೆ ಯಾವುದೇ ಹೊಸ ಬಜೆಟ್ ಪ್ರಾವಧಾನ ಒದಗಿಸಲಾಗಿಲ್ಲ. ಹಾಗಾಗಿ ಹೊಸ ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಸಂಸತ್ತಿಗೆ ತಿಳಿಸಿದೆ. ಇದರೊಂದಿಗೆ, ನಗರಗಳು ಅಭಿವೃದ್ಧಿಗಾಗಿ ಪರಸ್ಪರ ಸ್ಪರ್ಧೆಗಿಳಿಯಬೇಕು ಎಂಬ ಮೋದಿಯವರ ಆರಂಭದ ಕನಸಿಗೆ ಮುಕ್ಕಾಗಿದೆ.
ನಗರಾಭಿವೃದ್ಧಿಯಲ್ಲಿ ನವೀನ ಅಂಶಗಳ ಸೇರ್ಪಡೆ (ರೆಟ್ರೊಫಿಟ್ಟಿಂಗ್), ಇರುವ ಅಂಶಗಳ ಸುಯೋಜಿತ ಮರು ಅಭಿವೃದ್ಧಿ (ರೀಡೆವಲಪ್‌ಮೆಂಟ್) ಮತ್ತು ಗ್ರೀನ್‌ಫೀಲ್ಡ್ ಯೋಜನೆಗಳ ಅನುಷ್ಠಾನ ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶವಾಗಿತ್ತು. ಸ್ಮಾರ್ಟ್ ಸಿಟಿ ಪ್ರಸ್ತಾವಗಳನ್ನು ಆಧರಿಸಿ ರಾಜ್ಯಗಳು ಸ್ಮಾರ್ಟ್ ಮೊಬಿಲಿಟಿ, ನೀರು, ಶುಚಿತ್ವ ಮತ್ತು ಆರೋಗ್ಯಕರ ವ್ಯವಸ್ಥೆಗಳು (WASH), ಸ್ಮಾರ್ಟ್ ಆಡಳಿತ, ಸ್ಮಾರ್ಟ್ ಇಂಧನ ಬಳಕೆ, ಪರಿಸರ ರಕ್ಷಣೆ ಯೋಜನೆಗಳಿಗೆ ಸ್ಮಾರ್ಟ್ ಸಿಟಿಯಲ್ಲಿ ಅವಕಾಶ ಇತ್ತು. ಮೇಲಾಗಿ, ಇದನ್ನೆಲ್ಲ ಎಲ್ಲ ಸ್ಟೇಕ್ ಹೋಲ್ಡರ್‌ಗಳ ಜೊತೆ ವ್ಯವಸ್ಥಿತವಾಗಿ ಚರ್ಚಿಸಿಯೇ ಜಾರಿಗೆ ತರಲಾಗುತ್ತಿವೆೆ ಎಂದು ಪ್ರಧಾನಮಂತ್ರಿ ಹೇಳಿಕೊಂಡಿದ್ದರು. ಹೀಗಿದ್ದೂ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ವಿಳಂಬ, ಅಡ್ಡಿ, ಸಮಸ್ಯೆಗಳು ಯಾಕಾಗುತ್ತಿವೆ ಎಂಬ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸರಕಾರವು ಕಾರಣಗಳನ್ನು ಹೀಗೆ ಪಟ್ಟಿ ಮಾಡಿದೆ: ನ್ಯಾಯಾಂಗದ ಕಟ್ಲೆಗಳ ಅಡಚಣೆಗಳು, ವಿವಿಧ ಇಲಾಖೆಗಳಿಂದ ಕ್ಲಿಯರೆನ್ಸ್‌ನಲ್ಲಿ ವಿಳಂಬ, ಭೂಸ್ವಾಧೀನದ ಸಮಸ್ಯೆಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಜಟಿಲ ನಿರ್ಮಾಣ ಕಾರ್ಯಗಳು, ಸಣ್ಣ ನಗರಗಳಲ್ಲಿ ವೆಂಡರ್ ಸಂಪನ್ಮೂಲ ಕೊರತೆ, ಕೆಲವು ನಗರಗಳಲ್ಲಿ ಕೇಂದ್ರೀಕೃತ ನಿರ್ಧಾರಗಳು, ಇಂಟೆಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ (ICCC) ಸಾಮರ್ಥ್ಯವನ್ನು ಪೂರ್ಣಪ್ರಮಾಣದಲ್ಲಿ ಬಳಸಲು ಸಾಧ್ಯ ಆಗದಿರುವುದು, ಪದೇಪದೇ ಯೋಜನೆಗಳಲ್ಲಿ ಬದಲಾವಣೆಗಳು.
ಈ ಪಟ್ಟಿಯನ್ನು ಕಂಡರೆ, ಇದು ಸರಕಾರಗಳ ಎಂದಿನ ಚಾಳಿಯ ಮುಂದುವರಿಕೆ ಎಂಬುದು ಸ್ಪಷ್ಟವಾಗುತ್ತದೆ. ಮೊದಲು ನೀರಿಗೆ ಧುಮುಕಿ, ಆ ಬಳಿಕ ಈಜು ಕಲಿಸುವ ಪುಸ್ತಕ ತೆರೆಯುವ ಚಾಳಿ ಇದು. ಮೇಲೆ ವಿವರಿಸಲಾದ ಸರಕಾರದ ದೃಷ್ಟಿಕೋನದ ಹೊರತಾಗಿಯೂ ಸ್ಮಾರ್ಟ್ ಸಿಟಿ ಯೋಜನೆಗಳು, ಆಯ್ಕೆಯಾದ ನಗರಗಳನ್ನು ಸ್ಮಾರ್ಟ್ ಮಾಡದಿರಲು ಬೇರೆ ಹಲವು ಕಾರಣಗಳಿವೆ. ಸಾರ್ವಜನಿಕರ ದೃಷ್ಟಿಕೋನದಿಂದ ಅವು ಸ್ಪಷ್ಟವಾಗಿ ಕಾಣಿಸುತ್ತಿವೆ. ಸ್ಥಳೀಯ ಬೇಡಿಕೆಗಳನ್ನು ಪರಿಗಣಿಸದೇ ಎಲ್ಲೋ ಕುಳಿತು ಗುತ್ತಿಗೆದಾರ ಸ್ನೇಹಿ ಯೋಜನೆಗಳನ್ನು ರೂಪಿಸಿದ್ದು; ಬ್ರಹ್ಮಾಂಡ ಭ್ರಷ್ಟಾಚಾರ; ರಾಜಕೀಯ ಮೇಲಾಟಗಳು; ಮುಂಗಾಣ್ಕೆ ಮತ್ತು ಇಚ್ಛಾಶಕ್ತಿಯ ಕೊರತೆ; ಸ್ಮಾರ್ಟ್ ಮಾಡುವ ಹೆಸರಲ್ಲಿ ಸ್ವಚ್ಛಂದ ಡಿಜಿಟಲೀಕರಣದ ಕಾರಣದಿಂದಾಗಿ ಖಾಸಗಿತನಕ್ಕೆ ಧಕ್ಕೆ ಬರಬಹುದೆಂಬ ಸಾರ್ವಜನಿಕ ಆತಂಕಗಳು-ಇವು ಕೂಡ ಸ್ಮಾರ್ಟ್‌ಸಿಟಿ ಯೋಜನೆಗಳ ವೈಫಲ್ಯಕ್ಕೆ ಮಹತ್ವದ ಕೊಡುಗೆ ನೀಡಿವೆ.
ಸ್ಮಾರ್ಟ್ ಸಿಟಿ ಬಿಡಿ, ಟೌನ್ ಪ್ಲಾನಿಂಗ್ ಎಂದರೆ ಏನೆಂಬುದೇ ಸ್ಪಷ್ಟ ಕಲ್ಪನೆ ಇಲ್ಲದೆ, ನಗರಗಳಲ್ಲಿ ಸಿಸಿಟಿವಿ ಕ್ಯಾಮರಾಗಳು; ರಸ್ತೆ-ಪಾದಚಾರಿ ಹಾದಿಗಳಂತಹ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಇಂಟಲಿಜೆಂಟ್ ನಿರ್ವಹಣೆ ವ್ಯವಸ್ಥೆ (ITMS); ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ; ಅಗತ್ಯ ಶಾಲಾ ಕೊಠಡಿಗಳು-ಕಲಿಸುವ ಶಿಕ್ಷಕರು ಇಲ್ಲದಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್‌ಗಳು ಮತ್ತು ಡಿಜಿಟಲ್ ಲೈಬ್ರರಿಗಳು... ಹೀಗೆ. ಮಾಹಿತಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದ್ದ ICCCಗಳು ಅದನ್ನು ಮರೆತವು. ಕಡೆಗೆ ಕೋವಿಡ್ ಕಾಲದಲ್ಲಿ ಈ ICCCಗಳು ಕೋವಿಡ್ ವಾರ್ ರೂಮ್‌ಗಳಾಗಿ ಕಾರ್ಯ ನಿರ್ವಹಿಸಿದ್ದವು!
ನಗರವೆಂದರೆ ಅಲ್ಲಿನ ರಸ್ತೆ, ಕಟ್ಟಡಗಳಲ್ಲ, ಆ ನಗರದ ನಿವಾಸಿ ಜನಗಳು. ಅವರ ಬೇಡಿಕೆಗಳು, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಭೂತ ಹೊಕ್ಕವರ ಆದ್ಯತೆ ಆಗಬೇಕಿತ್ತು. ಅದರ ಬದಲು, ಸಾರ್ವಜನಿಕ ದುಡ್ಡು ವ್ಯಯಿಸುವ ಮೂಲಕ ಸ್ವಂತ ಲಾಭದ ಹಾದಿಗಳನ್ನು ಮಾತ್ರ ಕಂಡುಕೊಂಡ ಈ ಯೋಜನೆಗಳು, ಅಂತಿಮವಾಗಿ ಇಂತಹ ಹೊಸತನದ ಯೋಜನೆಗಳ ಮೇಲಿನ ನಂಬಿಕೆಯನ್ನು ಸಾರ್ವಜನಿಕರಲ್ಲಿ ಸಂಪೂರ್ಣ ನಾಶ ಮಾಡಿದ್ದೊಂದೇ ಸ್ಮಾರ್ಟ್ ಸಿಟಿಯ ಸಾಧನೆ. ಈಗ ಕೊನೆಗೆ, ಸ್ಮಾರ್ಟ್‌ಸಿಟಿ ಯೋಜನೆಗೆ ಅದು ತನ್ನದೇ ಕನಸೆಂಬ ಅಬ್ಬರದ ಆರಂಭ ನೀಡಿದ್ದ ಭಾರತ ಸರಕಾರ ಅದೆಲ್ಲ ರಾಜ್ಯ ಸರಕಾರದ್ದು. ತನ್ನದೇನಿದ್ದರೂ ಸಲಹೆ-ಮೇಲ್ವಿಚಾರಣೆ ಮಾತ್ರ ಎಂದು ಕೈ ತೊಳೆದುಕೊಳ್ಳುತ್ತಿದೆ.