ಕಾಡು ಸಂರಕ್ಷಣೆ = ಕಾಡು ನಾಶ x 2

‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಒದಗಿಸುವ ಮತ್ತು ‘ಪುರಾತನ, ಅಪ್ರಸ್ತುತ ಕಾನೂನುಗಳನ್ನು ಕಿತ್ತೆಸೆಯುವ’ ಭಾರತ ಸರಕಾರದ ನಿಲುವುಗಳು ಇಂಚಿಂಚಾಗಿ ಭಾರತದ ಸಮೃದ್ಧ ನಿಸರ್ಗ ಸಂಪತ್ತನ್ನು ಕಾರ್ಪೊರೇಟ್ ಶಕ್ತಿಗಳಿಗೆ ಹರಿವಾಣದಲ್ಲಿಟ್ಟು ದಾನಮಾಡುತ್ತಿರುವುದಕ್ಕೆ ಹೊಸಹೊಸ ನಿದರ್ಶನಗಳು ಕಾಣಿಸುತ್ತಲೇ ಇವೆ. ಈ ರೀತಿಯ ತೀರ್ಮಾನಗಳ ಸರಣಿಯಲ್ಲಿ ಇತ್ತೀಚೆಗೆ ಬಹಿರಂಗಗೊಂಡಿರುವ ಹೊಸದೊಂದು ವಿದ್ಯಮಾನವನ್ನು ಪರಿಶೀಲಿಸೋಣ.
ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ನ್ಯಾ. ಬಿ. ಆರ್. ಗವಾಯಿ ಮತ್ತು ನ್ಯಾ. ವಿನೋದ್ ಚಂದ್ರನ್ ಕೆ. ಅವರ ಪೀಠವು, 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ 2023ರಲ್ಲಿ ಭಾರತ ಸರಕಾರ ತಂದಿರುವ ತಿದ್ದುಪಡಿಗಳ ವಿರುದ್ಧ ಸಲ್ಲಿಕೆ ಆಗಿರುವ 13 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಇದೇ ಫೆಬ್ರವರಿ 3ರಂದು ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯವು, ‘‘ಅರಣ್ಯ ಪ್ರದೇಶಗಳ ಪ್ರಮಾಣವನ್ನು ತಗ್ಗಿಸುವ ಯಾವ ಕ್ರಮಕ್ಕೂ ಅವಕಾಶ ನೀಡಲಾಗುವುದಿಲ್ಲ. ಮುಂದಿನ ಆದೇಶದ ತನಕ, ಭಾರತ ಸರಕಾರವಾಗಲೀ ಮತ್ತು ಯಾವುದೇ ರಾಜ್ಯ ಸರಕಾರಗಳಾಗಲೀ, ಕಳೆದುಕೊಳ್ಳುವ ಅರಣ್ಯ ಭೂಮಿಗೆ ಪರಿಹಾರ ರೂಪದಲ್ಲಿ ಅರಣ್ಯೀಕರಣಕ್ಕೆ ಪರ್ಯಾಯ ಭೂಮಿಯನ್ನು ಒದಗಿಸದೆ, ಅರಣ್ಯ ಭೂಮಿಯ ಗಾತ್ರವನ್ನು ತಗ್ಗಿಸುವ ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ.’’ ಎಂದು ಹೇಳಿತ್ತು. ಜುಲೈ 14ಕ್ಕೆ ಬೇಸಗೆ ರಜೆ ಮುಗಿದ ಬಳಿಕ, ಈ ಪ್ರಕರಣ ಮುಂದಿನ ವಿಚಾರಣೆಗಾಗಿ ಸುಪ್ರೀಂ ಕೋರ್ಟಿನ ಮುಂದೆ ಬರಲಿದೆ.
ಈ ನಡುವೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅದರಲ್ಲಿ, ಕೈಗಾರಿಕಾ ಚಟುವಟಿಕೆಗಳಿಗೆಂದು ಸ್ವಾಧೀನಪಡಿಸಿಕೊಂಡ ಅರಣ್ಯಭೂಮಿಗಳಿಗೆ ಪರಿಹಾರ ರೂಪದಲ್ಲಿ ಅರಣ್ಯೀಕರಣ ನಡೆಸಲು ಈಗಾಗಲೇ ಅರಣ್ಯ ಭೂಮಿ ಎಂದು ನೋಟಿಫೈ ಆಗಿರುವ ಕಳಪೆ ಗುಣಮಟ್ಟದ ಅರಣ್ಯ ಭೂಮಿ ಹಾಗೂ ಕಂದಾಯ ಅರಣ್ಯಗಳು (degraded forest land and revenue forests) ಮತ್ತು ಡೀಮ್ಡ್ ಅರಣ್ಯಗಳಂತಹ ವರ್ಗೀಕರಣಗೊಂಡಿರದ ಅರಣ್ಯಭೂಮಿಗಳನ್ನು (unclassed forest lands) ಒದಗಿಸಲು ಭಾರತ ಸರಕಾರ ತನ್ನ ಅರಣ್ಯ ಸಂರಕ್ಷಣೆ ನಿಯಮಗಳು 2022ರ ಮೂಲಕ ಅನುವು ಮಾಡಿಕೊಟ್ಟಿದೆ. ಇದು ದುಪ್ಪಟ್ಟು ಅರಣ್ಯ ನಾಶಕ್ಕೆ ಕಾರಣ ಆಗಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಮ್ಮ ಅಫಿಡವಿಟ್‌ನಲ್ಲಿ ಅರ್ಜಿದಾರರು ಹೇಳಿದ್ದಾರೆ.
ಕಳೆದುಕೊಂಡ ಅರಣ್ಯ ಭೂಮಿಗೆ ಪರಿಹಾರ ರೂಪದಲ್ಲಿ ಈ ರೀತಿ ಅರಣ್ಯ ಭೂಮಿಯನ್ನೇ ಅರಣ್ಯೀಕರಣಕ್ಕಾಗಿ ಬಳಸಿದಾಗ, ದೇಶದ ನೈಸರ್ಗಿಕ ಅರಣ್ಯಗಳಿಗೆ ದುಪ್ಪಟ್ಟು ಹಾನಿ ಆಗಲಿದೆ. ಅದು ಹೇಗೆಂದರೆ, ನೋಟಿಫೈಡ್ ಅರಣ್ಯ ಭೂಮಿಯನ್ನು ಅರಣ್ಯೇತರ ಕೈಗಾರಿಕೆ, ಗಣಿಗಾರಿಕೆ, ಮೂಲಸೌಕರ್ಯ ನಿರ್ಮಾಣ, ರಕ್ಷಣಾ ಸ್ಥಾವರಗಳಂತಹ ಉದ್ದೇಶಗಳಿಗೆ ಬಳಸಿದಾಗ, ಹೇಗೂ ಅಷ್ಟು ಅರಣ್ಯ ಪ್ರದೇಶ ನಾಶ ಆಗಿರುತ್ತದೆ. ಅದರ ಜೊತೆಗೆ, ಅರಣ್ಯೀಕರಣಕ್ಕೆಂದು ನೋಟಿಫೈ ಆಗಿರದ (ಡೀಮ್ಡ್) ಅಥವಾ ನೋಟಿಫೈ ಆಗಿರುವ ಕಳಪೆ ದರ್ಜೆಯ ಅರಣ್ಯ ಭೂಮಿಗಳಲ್ಲಿ ಕೃತಕವಾಗಿ ನೆಡುತೋಪುಗಳನ್ನು ರೂಪಿಸುವುದರಿಂದ ನೈಸರ್ಗಿಕ ಅರಣ್ಯಭೂಮಿಗಳ ಶ್ರೀಮಂತ ಜೈವಿಕ ವೈವಿಧ್ಯ ನಾಶವಾಗಲಿದೆ. ಕಾಗದದ ಮೇಲೆ ಅರಣ್ಯಪ್ರಮಾಣ ಇದರಿಂದ ಹೆಚ್ಚಾಗಲಿದೆಯಾದರೂ, ವಾಸ್ತವದಲ್ಲಿ ನೈಸರ್ಗಿಕ ಅರಣ್ಯಗಳು ನಾಶಗೊಳ್ಳಲಿವೆ. ಹೀಗೆ ಈ ಕಾನೂನು-ನಿಯಮಗಳು ಅರಣ್ಯಗಳ ಮಟ್ಟಿಗೆ ಎರಡಲುಗಿನ ಚೂರಿ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಫೆಬ್ರವರಿ ಮೂರರ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಬಳಿಕ ಭಾರತ ಸರಕಾರವು ತರಾತುರಿಯಲ್ಲಿ ಹಲವು ಅರಣ್ಯಭೂಮಿಗಳನ್ನು ಹೀಗೆ ಪರ್ಯಾಯ ಪರಿಹಾರ ಭೂಮಿಯನ್ನು ತೋರಿಸಿ ಪರಭಾರೆ ಮಾಡಿದೆ ಎಂದು ಅಫಿಡವಿಟ್‌ನಲ್ಲಿ ಆಪಾದಿಸಲಾಗಿದೆ. ಅರಣ್ಯ ಸಲಹಾ ಸಮಿತಿ (FAC) ಮಾರ್ಚ್ ಬಳಿಕ ನಡೆಸಿರುವ ಐದು ಸಭೆಗಳ ನಡಾವಳಿಗಳನ್ನು ಗಮನಿಸಿದರೆ ಈ ಆಪಾದನೆಯಲ್ಲಿ ಹುರುಳಿರುವುದು ಕಾಣಿಸುತ್ತಿದೆ. (ವಿವರಗಳು ಇಲ್ಲಿ ಲಭ್ಯ: https://forestsclearance.nic.in/fac_report.aspx). ಇದೇ ಪ್ರಕರಣದಲ್ಲಿ 2024ರ ಫೆಬ್ರವರಿ 19ರಂದು ಮಧ್ಯಂತರ ಆದೇಶ ನೀಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ನ್ಯಾ. ಡಿ.ವೈ. ಚಂದ್ರಚೂಡ್ ಅವರು, ಯಾವುದು ‘ಅರಣ್ಯ’ ಎಂಬ ವ್ಯಾಖ್ಯೆಗೆ ಸಂಬಂಧಿಸಿದಂತೆ, 1996ರ ಟಿ. ಎನ್. ಗೋಧವರ್ಮನ್ (TN Godavarman Thirumulpad v. Union of India) ಪ್ರಕರಣದ ತೀರ್ಪನ್ನೇ ಆಧಾರವಾಗಿಟ್ಟುಕೊಳ್ಳಬೇಕೆಂದು ಭಾರತ ಸರಕಾರಕ್ಕೆ ಸೂಚಿಸಿದ್ದರು.
ಭಾರತ ಸರಕಾರವು ತನ್ನ 2023ರ ತಿದ್ದುಪಡಿಯಲ್ಲಿ, ಕಾರ್ಪೊರೇಟ್ ಪರ ಕೈಚಳಕ ತೋರಿಸುವ ಮೂಲಕ 1.99ಲಕ್ಷ ಚದರ ಕಿಲೋಮೀಟರ್ ಅರಣ್ಯಭೂಮಿಯನ್ನು ‘ಅರಣ್ಯ’ ವ್ಯಾಖ್ಯೆಯಿಂದ ಹೊರಗಿರಿಸಿದೆ; ಆ ಮೂಲಕ ಆ ಅರಣ್ಯ ಭೂಮಿಯು ಬೇರೆ ಉದ್ದೇಶಗಳಿಗೆ ಲಭ್ಯ ಆಗುವಂತೆ ಮಾಡಿದೆ. ಸರಕಾರ ತನ್ನ ತಿದ್ದುಪಡಿಯಲ್ಲಿ, 1927ರ ಭಾರತೀಯ ಅರಣ್ಯ ಕಾಯ್ದೆಯ ಅಡಿ ನೋಟಿಫೈ ಆದ ಅರಣ್ಯಭೂಮಿ ಮತ್ತು ಹೀಗೆ ನೋಟಿಫೈ ಆಗಿರದ ಆದರೆ 1980ರ ಅಕ್ಟೋಬರ್ 25ರಿಂದೀಚೆಗೆ ಅರಣ್ಯ ಎಂದು ಸರಕಾರಿ ದಾಖಲೆಗಳಲ್ಲಿ ದಾಖಲಾಗಿರುವ ಭೂಮಿಗಳಿಗೆ ಮಾತ್ರ ‘ಅರಣ್ಯ’ ವ್ಯಾಖ್ಯೆಯನ್ನು ಸೀಮಿತಗೊಳಿಸಿತ್ತು. ಮಾತ್ರವಲ್ಲದೆ, ವನಧಾಮಗಳ ಸಫಾರಿ, ಪ್ರಾಣಿಸಂಗ್ರಹಾಲಯ, ಪರಿಸರ ಪ್ರವಾಸೋದ್ಯಮದಂತಹ ‘ಅರಣ್ಯೇತರ ಉದ್ದೇಶಗಳಿಗೆ’ ಮುಕ್ತ ಅವಕಾಶ ತೆರೆದಿತ್ತು.
ಅರಣ್ಯ (ಸಂರಕ್ಷಣೆ) ಕಾಯ್ದೆ- 2023 ಉದಾರೀಕರಣದ ಬಳಿಕ ಕಾರ್ಪೊರೇಟ್ ಜಗತ್ತಿಗೆ ಉದ್ಯಮ ಸ್ಥಾಪನೆಯನ್ನು ಸುರುಳೀತಗೊಳಿಸುವ ಕಾಯ್ದೆ ಆಗಿದ್ದು, ಅಲ್ಲಿ ಪರಿಸರ ಕಾಳಜಿ ಕಿಂಚಿತ್ತೂ ಇಲ್ಲ. 2023, ಮಾರ್ಚ್ 29ರಂದು ಲೋಕಸಭೆಯಲ್ಲಿ ಮಂಡಿತವಾಗಿದ್ದ ಈ ತಿದ್ದುಪಡಿ ಮಸೂದೆಯನ್ನು ಪ್ರತಿಪಕ್ಷದ ಅಧ್ಯಕ್ಷತೆ (ಜೈರಾಂ ರಮೇಶ್) ಇರುವ ಪರಿಸರ-ಅರಣ್ಯ-ಹವಾಮಾನ ಬದಲಾವಣೆಗಳ ಕುರಿತ ಸಂಸತ್ ಸ್ಥಾಯೀ ಸಮಿತಿಯ ಪರಿಶೀಲನೆಗೆ ಒಪ್ಪಿಸುವ ಬದಲು, ಆಡಳಿತ ಪಕ್ಷದ್ದೇ ಅಧ್ಯಕ್ಷತೆಯ, 31 ಸದಸ್ಯರ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಕೈಗೆ ನೀಡಲಾಗಿತ್ತು. ಆರು ಮಂದಿ ವಿಪಕ್ಷಗಳ ಸಂಸದರ ಭಿನ್ನಾಭಿಪ್ರಾಯದ ಟಿಪ್ಪಣಿಯ ಹೊರತಾಗಿಯೂ, ಯಾವುದೇ ಆಕ್ಷೇಪ ಇಲ್ಲದೆ 2023ರ ಜುಲೈ 20ರಂದು ಜೆಪಿಸಿ ಈ ಮಸೂದೆಯನ್ನು ಯಥಾವತ್ ಅಂಗೀಕರಿಸಲು ಶಿಫಾರಸು ಮಾಡಿತು. ಅದಾಗಿ ಒಂದೇ ವಾರಕ್ಕೆ (ಜುಲೈ 27) ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿತು. ಹೀಗೆ, ಹೆಚ್ಚೇನೂ ಸಂಸದೀಯ ಚರ್ಚೆಗಳಿಗೆ ಆಸ್ಪದ ಕೊಡದೇ ತರಾತುರಿಯಲ್ಲಿ ಜಾರಿಗೊಂಡ ಕಾಯ್ದೆ ಇದು.
ಇದಲ್ಲದೆ, ಜನವಿಶ್ವಾಸ (ಪ್ರಾವಧಾನಗಳ ತಿದ್ದುಪಡಿ)ಕಾಯ್ದೆ-2023ರ ಹೆಸರಿನಲ್ಲಿ, ಅರಣ್ಯ ರಕ್ಷಣೆಯಲ್ಲಿ ಅಕ್ರಮ ಹಸ್ತಕ್ಷೇಪಕ್ಕೆ ಕಠಿಣ ಶಿಕ್ಷೆಗಳಿದ್ದ ಅರಣ್ಯ ಸಂರಕ್ಷಣಾ ಕಾಯ್ದೆ 1927ರ ಹಲವು ಸೆಕ್ಷನ್‌ಗಳನ್ನು ಸಡಿಲಗೊಳಿಸಲಾಗಿದೆ; ಜೈಲು ಶಿಕ್ಷೆಗಳ ಜಾಗದಲ್ಲಿ ಚಿಲ್ಲರೆ ದಂಡ ವಿಧಿಸಲಾಗಿದೆ. ಉದಾಹರಣೆಗೆ: ಅರಣ್ಯಕ್ಕೆ ಅಕ್ರಮ ಪ್ರವೇಶ, ಅಕ್ರಮ ಮರ ಕಡಿಯುವುದಕ್ಕೆ, ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಸಿದರೆ, ಹಿಂದೆ ಆರು ತಿಂಗಳ ಸಜೆ ಮತ್ತು 500ರೂ. ದಂಡ ಇದ್ದರೆ, ಅದನ್ನೀಗ ಕೇವಲ 5,000 ರೂ. ದಂಡಕ್ಕೆ ಸೀಮಿತಗೊಳಿಸಲಾಗಿದೆ.
2024 ಜನವರಿಯಿಂದ ನವೆಂಬರ್ ನಡುವೆ 90 ಅರಣ್ಯ ಭೂಮಿ ಬೇಡಿಕೆ ಪ್ರಸ್ತಾವಗಳಿಗೆ ತಾತ್ವಿಕ ಒಪ್ಪಿಗೆಯನ್ನೂ 46 ಪ್ರಸ್ತಾವಗಳಿಗೆ ಅಂತಿಮ ಒಪ್ಪಿಗೆಯನ್ನೂ ನೀಡಿದ್ದು, ಸುಮಾರು 17,700 ಹೆಕ್ಟೇರ್ ಅರಣ್ಯ ಭೂಮಿ ಪರಭಾರೆ ಆಗಿದೆ. ಇದಕ್ಕೆ ಪ್ರತಿಯಾಗಿ, 14,895 ಹೆಕ್ಟೇರ್ ಕಳಪೆ ಗುಣಮಟ್ಟದ ಅರಣ್ಯ ಭೂಮಿಯನ್ನೂ, 11,526 ಹೆಕ್ಟೇರ್ ಅರಣ್ಯೇತರ ಭೂಮಿಯನ್ನೂ ಪರಿಹಾರ ರೂಪದ ಅರಣ್ಯೀಕರಣಕ್ಕೆ ಒಳಪಡಿಸಲಾಗಿದೆ ಎಂದು ಸರಕಾರಿ ದಾಖಲೆಗಳು ಹೇಳುತ್ತಿವೆ. (ಆಧಾರ: ಇಲಾಖೆಯ ವಾರ್ಷಿಕ ವರದಿ 2024-25) ಸರಕಾರದ್ದೇ ದಾಖಲೆಗಳ ಪ್ರಕಾರ ದೇಶದಲ್ಲಿ 7,15,343 ಚದರ ಕಿ.ಮೀ. ಅರಣ್ಯ ಭೂಮಿ ಇದ್ದು ಅದು, ದೇಶದ ಒಟ್ಟು ಭೂವಿಸ್ತಾರದ ಶೇ.21.76ರಷ್ಟಾಗುತ್ತದೆ. 2021ಕ್ಕೆ ಹೋಲಿಸಿದರೆ, 2023ರ ಹೊತ್ತಿಗೆ ದೇಶದಲ್ಲಿ 1,445 ಚದರ ಕಿ.ಮೀ. ಅರಣ್ಯ ಹೆಚ್ಚುವರಿ ಸೇರ್ಪಡೆ ಆಗಿದೆ ಎಂಬುದು ಸರಕಾರಿ ದಾಖಲೆಯ ಹೇಳಿಕೆ (PIB Release ID: 2086742).
ದೇಶದ ನೈಸರ್ಗಿಕ ಅರಣ್ಯವನ್ನು ಎರಡಲುಗಿನ ಕತ್ತಿಯಿಂದ ನಾಶ ಮಾಡಿ, ಕಾರ್ಪೊರೇಟ್‌ಗಳಿಗೆ ಹರಿವಾಣದಲ್ಲಿರಿಸಿ ಒಪ್ಪಿಸುತ್ತಿರುವಾಗಲೇ, ಕಾಗದಪತ್ರಗಳಲ್ಲಿ ಅರಣ್ಯದ ಪ್ರಮಾಣ ಏರುತ್ತಿದೆ. ಈ ಡೇಟಾಗಳ ಸಾಚಾತನದ ಬಗ್ಗೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವವರು (ಅವರಲ್ಲಿ ಕೆಲವರು ನಿವೃತ್ತ ಅರಣ್ಯಾಧಿಕಾರಿಗಳು, ಪರಿಸರ ಹೋರಾಟಗಾರರು) ಆತಂಕ ವ್ಯಕ್ತಪಡಿಸುತ್ತಿದ್ದಾರೆ.