EADA: ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ‘ಗುಜರಾತ್ ಮಾದರಿ’ ಪರಿಹಾರವಾದೀತೇ?

ದೇಶದಲ್ಲಿ ಪರಿಸರ ಸನ್ನಿವೇಶ ಮೌಲ್ಯಮಾಪನ ಮಾಡುವುದಕ್ಕೆ ಖಾಸಗಿ ‘ಥರ್ಡ್ ಪಾರ್ಟಿ’ ವ್ಯವಸ್ಥೆಯೊಂದನ್ನು ಸಜ್ಜುಗೊಳಿಸುವುದಕ್ಕಾಗಿ ‘ಪರಿಸರ ಆಡಿಟ್ ನಿಯಮಗಳು 2025’ನ್ನು ಭಾರತ ಸರಕಾರವು ಇದೇ ಆಗಸ್ಟ್ 29ರಂದು ಪ್ರಕಟಿಸಿದೆ [S.O. 414(E)]. ಈ ಬಗ್ಗೆ ಕಳೆದ ಮಂಗಳವಾರ ಹೇಳಿಕೆ ನೀಡಿರುವ ಕೇಂದ್ರ ಪರಿಸರ ಖಾತೆಯ ಸಚಿವ ಭೂಪೇಂದರ್ ಯಾದವ್ ಅವರು, ಈ ವ್ಯವಸ್ಥೆಯು ಹಾಲಿ ಇರುವ ಸರಕಾರಿ ಮೌಲ್ಯಮಾಪನ ವ್ಯವಸ್ಥೆಗೆ ಪೂರಕವಾಗಿ ವರ್ತಿಸಲಿದೆಯೇ ಹೊರತು ಅದಕ್ಕೆ ಪರ್ಯಾಯ ವ್ಯವಸ್ಥೆ ಅಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.
ಈ ಬದಲಾವಣೆಯೊಂದಿಗೆ, ದೇಶದಲ್ಲೀಗ ಎರಡು ಹಂತಗಳ ಪರಿಸರ ಮೌಲ್ಯಮಾಪನ ವ್ಯವಸ್ಥೆ ರೂಪುಗೊಂಡಂತಾಗಿದೆ. ಮೊದಲ ಹಂತ ಎಂದರೆ, ಕೇಂದ್ರ-ರಾಜ್ಯ ಸರಕಾರಗಳ ಪರಿಸರ ಇಲಾಖೆಗಳು ಮತ್ತು ಅವುಗಳ ಅಡಿಯಲ್ಲಿ ಬರುವ ಪರಿಸರ ನಿಯಂತ್ರಣ ಮಂಡಳಿಗಳು (CPCB, SPCB). ಎರಡನೇ ಹಂತ ಎಂದರೆ, ಈಗ ಹೊಸ ನಿಯಮಗಳ ಅಡಿಯಲ್ಲಿ ರೂಪುಗೊಳ್ಳಲಿರುವ ನಿಯೋಜಿತ ಪರಿಸರ ಮೌಲ್ಯಮಾಪನ ಏಜೆನ್ಸಿ (Environment Audit Designate Agency- EADA) ಹಾಗೂ ಅದು ತನ್ನ ನಿಯಮಗಳ ಅಡಿಯಲ್ಲಿ ಗೊತ್ತುಪಡಿಸಲಿರುವ ಖಾಸಗಿ ವಲಯದ ಪ್ರಮಾಣೀಕೃತ ಪರಿಸರ ಮೌಲ್ಯಮಾಪಕರು (Environment Auditors- EAs).
ಸದ್ಯಕ್ಕೆ ಸರಕಾರ ಪ್ರಕಟಿಸಿರುವ ನಿಯಮಗಳ ಅಡಿಯಲ್ಲಿ, ಇಂಆಂಯಿಂದ ಪ್ರಮಾಣಿತಗೊಂಡಿರುವ ಪರಿಸರ ಆಡಿಟರುಗಳು ಸರಕಾರದಿಂದ ಯಾದೃಚ್ಛಿಕವಾಗಿ ತಮಗೆ ಮೌಲ್ಯಮಾಪನಕ್ಕೆಂದು ವಹಿಸಲಾಗುವ ಯೋಜನೆಗಳ ಆಡಿಟ್ ಮಾಡಬೇಕಾಗುತ್ತದೆ. ಪರಿಸರ (ಸಂರಕ್ಷಣೆ) ಕಾಯ್ದೆ 1986, ವಾಯು (ಮಾಲಿನ್ಯ ಪ್ರತಿಬಂಧ ಮತ್ತು ನಿಯಂತ್ರಣ) ಕಾಯ್ದೆ 1981, ಜಲ (ಮಾಲಿನ್ಯ ಪ್ರತಿಬಂಧ ಮತ್ತು ನಿಯಂತ್ರಣ) ಕಾಯ್ದೆ 1974, ವನ (ಸಂರಕ್ಷಣ ಮತ್ತು ಸಂವರ್ಧನ) ಕಾಯ್ದೆ 1980, ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972ಗಳ ಅಡಿಯಲ್ಲಿ ಈ ರೀತಿಯ ಮೌಲ್ಯಮಾಪನಕ್ಕೆ ಅವಕಾಶವಿದ್ದು, ಸರಕಾರಿ ಪರಿಸರ ನಿಯಂತ್ರಣ ಮಂಡಳಿಗಳಲ್ಲಿ ಇರುವ ಸಂಪನ್ಮೂಲ ಕೊರತೆಯ ಕಾರಣಕ್ಕೆ ಈ ಆಡಿಟರುಗಳನ್ನು ಗೊತ್ತುಪಡಿಸಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.
ಹವಾಮಾನ ವೈಪರೀತ್ಯಗಳ ಕಾರಣಕ್ಕೆ ಅತಿಹೆಚ್ಚು ಅಪಾಯಕ್ಕೆ ತುತ್ತಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಏಳನೇ ಸ್ಥಾನದಲ್ಲಿರುವ ಭಾರತ ಸರಕಾರ ಈ ಕುರಿತು ಅಧಿಕೃತವಾಗಿ ಎಚ್ಚರಗೊಂಡದ್ದು 2008ರಲ್ಲಿ. ಆಗ ಪರಿಸರ ವೈಪರೀತ್ಯ ತಡೆಗೆ ರಾಷ್ಟ್ರೀಯ ಕ್ರಿಯಾಯೋಜನೆ (NAPCC) ರೂಪುಗೊಂಡಿತ್ತು. ಆ ಬಳಿಕ, 2022ರ ಸೆಪ್ಟಂಬರ್‌ನಲ್ಲಿ COP26 ಶೃಂಗಸಭೆಯಲ್ಲಿ ಪಾಲ್ಗೊಂಡ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಪಂಚಾಮೃತ’ ಯೋಜನೆಯನ್ನು ಪ್ರಕಟಿಸಿದ್ದರು (ವಿವರಗಳಿಗೆ ಸೆ. 23, 2023ರ ‘ಪಿಟ್ಕಾಯಣ’ ನೋಡಿ). ಈ ಅಂತರ್‌ರಾಷ್ಟ್ರೀಯ ಬದ್ಧತೆಯನ್ನು ಪೂರೈಸುವುದಕ್ಕಾಗಿ ಸರಕಾರ ಈಗ ಎದ್ದೂಬಿದ್ದೂ ಹೊರಟಂತಿದೆ. ಸರಕಾರ ರೂಪಿಸಲಿರುವ ಪರಿಸರ ಆಡಿಟರ್ ವ್ಯವಸ್ಥೆಯು ಗ್ರೀನ್ ಕ್ರೆಡಿಟ್ ನಿಯಮಗಳು 2023, ಎಕೊಮಾರ್ಕ್ ನಿಯಮಗಳು 2024, ಇ ವೇಸ್ಟ್ (ನಿರ್ವಹಣೆ) ನಿಯಮಗಳು 2022, ಪ್ಲಾಸ್ಟಿಕ್ ವೇಸ್ಟ್ ನಿರ್ವಹಣೆ ನಿಯಮಗಳು 2016, ಬ್ಯಾಟರಿ ವೇಸ್ಟ್ ನಿರ್ವಹಣೆ ನಿಯಮಗಳು 2022 ಸೇರಿದಂತೆ ‘ನವಪರಿಸರ ನಿಯಮಗಳನ್ನು’ ಆಧುನಿಕ ಉದ್ಯಮಗಳು ಪಾಲನೆ ಮಾಡುತ್ತಿವೆ ಎಂಬುದನ್ನು ಮೌಲ್ಯಮಾಪನಮಾಡಿ, ಪ್ರಮಾಣಪತ್ರಗಳನ್ನು ನೀಡಲಿದೆ.
ಇದೆಲ್ಲ ಎಲ್ಲಿಗೆ ತಲುಪಲಿದೆ?
ಭಾರತದಲ್ಲಿ ಪರಿಸರ ಸಂಬಂಧಿ ಜಾಗೃತಿಯ ಎರಡನೇ ಹಂತ ಹೊರಹೊಮ್ಮಿದ್ದು, 90ರ ದಶಕದ ಆರಂಭದಲ್ಲಿ ಉದಾರೀಕರಣಕ್ಕೆ ತೆರೆದುಕೊಂಡು, ಖಾಸಗಿಯವರು ದೊಡ್ಡ ಪ್ರಮಾಣದಲ್ಲಿ ಕೈಗಾರಿಕೋದ್ಯಮಗಳಲ್ಲಿ ತೊಡಗಿಕೊಂಡಾಗ. ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿದ್ದ ಗುಜರಾತ್‌ನಲ್ಲಿ, ಅಲ್ಲಿನ ಪರಿಸರ ನಿಯಂತ್ರಣ ಮಂಡಳಿ (GPCB) ತನ್ನ ಕರ್ತವ್ಯದಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ನೀಡದಿದ್ದಾಗ, 2009ರಲ್ಲಿ ಅಲ್ಲಿನ ಹೈಕೋರ್ಟ್ ಮಧ್ಯ ಪ್ರವೇಶಿಸಿ, ವರ್ಷದಲ್ಲಿ ಮೂರು ಬಾರಿ ಜಲ-ವಾಯು ಮಾಲಿನ್ಯದ ಪ್ರಮಾಣಕ್ಕೆ ಥರ್ಡ್ ಪಾರ್ಟಿ ಆಡಿಟ್ ನಡೆಯಬೇಕೆಂದು ಆದೇಶ ನೀಡಿತು. ಈ ಆಡಿಟ್ ವೆಚ್ಚವನ್ನು ಸ್ವತಃ ಆಡಿಟೀ ಕಂಪೆನಿ ಭರಿಸಬೇಕಿತ್ತು.
ಜಗತ್ತಿನಾದ್ಯಂತ ಹೀಗೆ ಖಾಸಗಿ ಥರ್ಡ್ ಪಾರ್ಟಿ ಕಡೆಯಿಂದ ಆಡಿಟ್ ಮಾಡಿಸುವ ಪರಿಪಾಠ ಇದೆಯಾದರೂ, ಆ ಖಾಸಗಿ ಆಡಿಟರ್‌ಗಳ ವ್ಯಾವಹಾರಿಕ ಉಳಿವು ಇಂತಹ ಕೈಗಾರಿಕೆಗಳಿಗೆ ಪೂರಕ ವರದಿ ನೀಡುವುದರಲ್ಲೇ ಅಡಗಿರುವುದರಿಂದ, ಈ ಆಡಿಟಿಂಗ್ ವ್ಯವಸ್ಥೆಗೆ ತನ್ನ ವಿನ್ಯಾಸದಲ್ಲೇ ಕೊರತೆಗಳಿವೆ. 1996ರ ಆಸುಪಾಸಿನಲ್ಲೇ, ಈಗ ನೊಬೆಲ್ ವಿಜೇತರಾಗಿರುವ ಎಸ್ತರ್ ಡಫ್ಲೊ ಮತ್ತು ಅವರ ತಂಡವು (ಹಾರ್ವರ್ಡ್, ಚಿಕಾಗೊ, ಯೇಲ್, MIT ವಿವಿಗಳ ನೆರವಿನೊಂದಿಗೆ) ಗುಜರಾತಿನಲ್ಲಿ ಈ ಥರ್ಡ್ ಪಾರ್ಟಿ ಆಡಿಟ್‌ನ ಮಿತಿಗಳನ್ನು ಗುರುತಿಸುವ ಸಂಶೋಧನಾ ಕಾರ್ಯವನ್ನೂ ನಡೆಸಿತ್ತು. ಗುಜರಾತ್ ಸರಕಾರದ ಸೂಚನೆಯ ಮೇರೆಗೆ ನಡೆದ ಈ ಸಂಶೋಧನೆಯ ಫಲಿತಾಂಶಗಳನ್ನು ಆ ರಾಜ್ಯಸರಕಾರ ಒಪ್ಪಿ, ತನ್ನ ತೆಕ್ಕೆಗೆ ತೆಗೆದುಕೊಂಡದ್ದು 2013ರಲ್ಲಿ. ಈ ಸುಧಾರಣೆಗಳ ಪರಿಣಾಮವಾಗಿ ಸ್ವತಂತ್ರ ಪರಿಸರ ಆಡಿಟರ್‌ಗಳ ಸ್ವಾಯತ್ತೆ ಹೆಚ್ಚಿತ್ತು. ಅಂದು GPCB ಸದಸ್ಯ ಕಾರ್ಯದರ್ಶಿ ಆಗಿದ್ದ ಹಾರ್ದಿಕ್ ಶಾ ಇಂದು ಪ್ರಧಾನಮಂತ್ರಿಯವರ ಖಾಸಗಿ ಕಾರ್ಯದರ್ಶಿ.
ಈಗ ಭಾರತ ಸರಕಾರ ಬಿಡುಗಡೆ ಮಾಡಿರುವ ‘ಪರಿಸರ ಆಡಿಟ್ ನಿಯಮಗಳು 2025’ ಬಹುತೇಕ, ಗುಜರಾತ್ ಮಾದರಿಯದೇ ಸುಧಾರಿತ ರೂಪ ಎಂದು ಮೇಲುನೋಟಕ್ಕೆ ಅನ್ನಿಸುತ್ತಿದೆ. ಈ ಹೊಸ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆಗೆ ‘‘ಗುಜರಾತ್ ಈಗ ಎಷ್ಟರ ಮಟ್ಟಿಗೆ ಪರಿಸರ ಮಾಲಿನ್ಯ ಮುಕ್ತವಾಗಿದೆ?’’ ಎಂಬ ಪ್ರಶ್ನೆಯಲ್ಲಿ ಉತ್ತರ ಅಡಗಿದೆ. ದಿಲ್ಲಿ, ಹರ್ಯಾಣ, ಪಂಜಾಬ್‌ಗಳ ಜೊತೆಗೆ ಗುಜರಾತ್‌ನ ಕೈಗಾರಿಕಾ ನಗರಗಳಾದ ಅಹ್ಮದಾಬಾದ್ ಮತ್ತು ಬರೋಡಾಗಳು ಕೂಡ ದೇಶದ ಅತಿ ಹೆಚ್ಚಿನ ಮಲಿನ ನಗರಗಳೆಂಬ ಹಣೆಪಟ್ಟಿ ಹೊತ್ತಿವೆ (ಆಧಾರ: IQAir World Air Quality Report 2024). ಭಾರತಕ್ಕೆ ಜಗತ್ತಿನ ಅತ್ಯಂತ ಮಲಿನ ರಾಷ್ಟ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನ.
ಹಾಗೆ ನೋಡಿದರೆ, ಭಾರತಕ್ಕೆ ಥರ್ಡ್ ಪಾರ್ಟಿ ಆಡಿಟ್ ಕೂಡ ಹೊಸದಲ್ಲ. Iಟಿಣeಡಿಟಿಚಿಣioಟಿಚಿಟ ಔಡಿgಚಿಟಿizಚಿಣioಟಿ ಜಿoಡಿ Sಣಚಿಟಿಜಚಿಡಿಜizಚಿಣioಟಿ International Organization for Standardization (ISO) ಅಭಿವೃದ್ಧಿಪಡಿಸಿರುವ Environmental Management System (EMS)ನ ‘ISO 14000’ ಸ್ಟಾಂಡರ್ಡ್‌ಗಳ ಸರಣಿ 1996ರ ಹೊತ್ತಿಗೆ ಜಾರಿಗೆ ಬಂದಿದ್ದು, ಭಾರತದಲ್ಲಿ 2004ರಿಂದೀಚೆಗೆ ವ್ಯಾಪಕವಾಗಿ ಚಾಲ್ತಿಯಲ್ಲಿವೆ. ಇದು ಸರಕಾರಿ ವ್ಯವಸ್ಥೆ ಅಲ್ಲವಾದರೂ, ಪರಿಸರದಲ್ಲಿ ಆಸಕ್ತಿ ಇರುವ ಸಂಸ್ಥೆಗಳಿಗೆ ತಮ್ಮ ಮಾಲಿನ್ಯವನ್ನು ಕಡಿಮೆಗೊಳಿಸಿಕೊಳ್ಳುವಲ್ಲಿ ಪೂರಕವಾಗಿ ವರ್ತಿಸುತ್ತದೆ. ಕೈಗಾರಿಕೆಗಳಿಗೆ ಪರಿಸರದ ಬಗ್ಗೆ ಕಾಳಜಿ ಇಲ್ಲದಿರುವಾಗ ಯಾವ ವ್ಯವಸ್ಥೆ ಬಂದರೂ, ಕೇವಲ ನಿಯಮಗಳಿಂದ ಮಾಲಿನ್ಯ ನಿವಾರಣೆ ಅಸಾಧ್ಯ. ಅದಕ್ಕೆ ಒಳ್ಳೆಯ ಉದಾಹರಣೆ ಕರ್ನಾಟಕದ ಕರಾವಳಿಯಲ್ಲೇ ಇದೆ. ತಮ್ಮ ಕಾರ್ಖಾನೆಯ ಮಾಲಿನ್ಯವು ಅನುಮತಿಸಲಾದ ಮಿತಿಯೊಳಗೇ ಇದೆ ಎಂದು ಕಾಲಕಾಲಕ್ಕೆ ಸರಕಾರಿ ವ್ಯವಸ್ಥೆಗೆ ವರದಿ ಸಲ್ಲಿಸುವ ಉಡುಪಿಯ ಅದಾನಿ ಯುಪಿಸಿಎಲ್ ಸ್ಥಾವರಕ್ಕೆ ಪರಿಸರ ಹಾನಿ ಮಾಡಿದ್ದಕ್ಕಾಗಿ 2022ರಲ್ಲಿ ಹಸಿರು ನ್ಯಾಯಪೀಠವು 52 ಕೋಟಿ ರೂ.ಗಳ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಹೀಗೆ, ಯಾವುದೇ ಮೌಲ್ಯಮಾಪನ ವ್ಯವಸ್ಥೆಯು ಕೇವಲ ಡಾಕ್ಯುಮೆಂಟೇಷನ್‌ಗಳತ್ತ ಗಮನ ಹರಿಸುತ್ತದೆಯೇ ಹೊರತು ನಿಜ ಅರ್ಥದಲ್ಲಿ ಮಾಲಿನ್ಯ ನಿವಾರಣೆಗೆ ಎಷ್ಟು ಕೊಡುಗೆ ನೀಡುತ್ತದೆ ಎಂಬುದು ಯಕ್ಷ ಪ್ರಶ್ನೆ.
ಈಗ ಜಗತ್ತು COP26 ಒಪ್ಪಂದಕ್ಕೆ ಬದ್ಧತೆ ಹೊಂದಿರುವುದರಿಂದ, ಬಹುತೇಕ ಎಲ್ಲ ಉದ್ಯಮಗಳಿಗೆ, ಕೈಗಾರಿಕೆಗಳಿಗೆ ತಮಗೆಂದು ಮೀಸಲಿಟ್ಟಿರುವ ರಿಯಾಯಿತಿ, ಸಬ್ಸಿಡಿ, ಕೊಡುಗೆ, ಇನ್ಸೆಂಟಿವ್‌ಗಳನ್ನೆಲ್ಲ ಪಡೆಯಲು ತಮ್ಮ ಕಾರ್ಬನ್ ಫುಟ್‌ಪ್ರಿಂಟ್ ತಗ್ಗಿಸಿಕೊಂಡಿರುವ ಬಗ್ಗೆ ದಾಖಲೆಗಳನ್ನು ಒದಗಿಸುವುದು ಅನಿವಾರ್ಯ. ಹಾಗಾಗಿ ಕಾರ್ಬನ್ ಕ್ರೆಡಿಟ್ ಸರ್ಟಿಫಿಕೇಟುಗಳನ್ನು (ಸಿಸಿಸಿ) ಪಡೆಯಲು, ಗ್ರೀನ್ ಕ್ರೆಡಿಟ್ ಪ್ರೋಗ್ರಾಂ (ಜಿಸಿಪಿ)ಗಳಲ್ಲಿ ಒಳಗೊಳ್ಳಲು ಮತ್ತು ಇಂತಹ ದಾಖಲೆ ಸೃಷ್ಟಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಕೈಗಾರಿಕೆಗಳಲ್ಲಿ ಮೇಲಾಟ ಆರಂಭ ಆಗಿದೆ. ಈಗ ಸರಕಾರ ಒದಗಿಸಿರುವ ಹೊಸ ನಿಯಮಗಳು, ಈ ಸರ್ಟಿಫಿಕೇಟುಗಳನ್ನು ಕಾರ್ಖಾನೆಗಳಿಗೆ ಒದಗಿಸಲು ರೂಪಿಸಲಾದ ವ್ಯವಸ್ಥೆಯಾಗಿ ಉಳಿಯುತ್ತವೆಯೇ ಹೊರತು ದೇಶದ ಪರಿಸರ ಮಾಲಿನ್ಯ ತಗ್ಗಿಸುವಲ್ಲಿ ಇವುಗಳ ಕೊಡುಗೆ ಇರಲಿದೆ ಎಂಬ ನಂಬಿಕೆ ಇಲ್ಲ.
ಸ್ವತಃ ಸರಕಾರಕ್ಕೂ ಸಹಜ ಪರಿಸರ ಕಾಳಜಿ ಇದ್ದಂತಿಲ್ಲ. ಇದ್ದದ್ದು ಹೌದಾಗಿದ್ದರೆ, ಅತಿ ಹೆಚ್ಚು ವಿದ್ಯುತ್ ಬೇಡುವ ಹಾಗೂ ಮಾಲಿನ್ಯಕ್ಕೂ ಕಾರಣ ಆಗುವ ‘ಡೇಟಾ ಸೆಂಟರ್’ಗಳನ್ನು ಸ್ಥಾಪಿಸಿ ಅವಕ್ಕೆ ಅವರ ಬೇಡಿಕೆಯಷ್ಟು ವಿದ್ಯುತ್ ಒದಗಿಸಲು ಅತ್ಯಂತ ದೊಡ್ಡ ಪ್ರಮಾಣದ ಮಾಲಿನ್ಯಕಾರಕಗಳಾಗಿರುವ ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದಕ್ಕೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಜಗತ್ತಿನಾದ್ಯಂತ ದೇಶಗಳು ವಿದ್ಯುತ್ ಉತ್ಪಾದನೆಗೆ ಉಷ್ಣವಿದ್ಯುತ್ ಸ್ಥಾವರಗಳ ಅವಲಂಬನೆಯನ್ನು ತಗ್ಗಿಸಿಕೊಳ್ಳುತ್ತಾ ಬರುತ್ತಿದ್ದರೆ, ಭಾರತವು ತನ್ನ ಹಾಲಿ ಇರುವ ಉಷ್ಣವಿದ್ಯುತ್ ಉತ್ಪಾದನೆಯ 217.5GW ಸಾಮರ್ಥ್ಯಕ್ಕೆ, 2031-32ರ ಒಳಗೆ ಮತ್ತೆ 80GW ಸಾಮರ್ಥ್ಯವನ್ನು ಹೊಸದಾಗಿ ಸೇರಿಸುವ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ!