ಸಂವಿಧಾನ: ‘ಅಕ್ಷರ’ ವರ್ಸಸ್ ‘ಇಂಗಿತ’

ಸಂವಿಧಾನವೆಂದರೆ ಬರಿಯ ಅಕ್ಷರಗಳು ಮತ್ತು ಅದನ್ನು ಅಕ್ಷರಶಃ ಪಾಲಿಸಿದರೆ ಮುಗಿಯಿತು ಎಂಬ ನಿಲುವು ಅಪಾಯಕಾರಿ ಎಂಬುದು ಇತ್ತೀಚೆಗಿನ ದಿನಗಳಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅಕ್ಷರಗಳ ನಡುವಿನ ಖಾಲಿ ಜಾಗಗಳಲ್ಲಿ ಜನಪರವಲ್ಲದ ಹಿತಾಸಕ್ತಿಗಳನ್ನು ಎಗ್ಗಿಲ್ಲದೆ ತುಂಬಿಸಲಾಗುತ್ತಿದೆ. ದೇಶದ ಸಂವಿಧಾನಕ್ಕೆ ಒಂದು ‘ಇಂಗಿತ’ ಇದೆ. ಆ ಇಂಗಿತವನ್ನು ಸಂವಿಧಾನ ಜಾರಿಗೊಳಿಸುವ ಹೊಣೆ ಹೊತ್ತವರು ಬದಿಗೆ ಸರಿಸಿ ಮುನ್ನಡೆದಷ್ಟೂ, ಒಂದು ಪ್ರಜಾತಂತ್ರವಾಗಿ ನಮ್ಮ ಸೋಲು ಹೆಚ್ಚು ನಿಶ್ಚಿತಗೊಳ್ಳುತ್ತದೆ.
‘‘ನಾವು ಎಷ್ಟೇ ಒಳ್ಳೆಯ ಸಂವಿಧಾನ ಹೊಂದಿದ್ದರೂ, ಅದನ್ನು ಕಾರ್ಯರೂಪಕ್ಕೆ ತರುವವರು ಕೆಟ್ಟವರಾಗಿದ್ದರೆ ಆ ಸಂವಿಧಾನ ಕೆಟ್ಟದಾಗಿರುತ್ತದೆ. ಅದೇ ರೀತಿ, ಎಷ್ಟೇ ಕೆಟ್ಟ ಸಂವಿಧಾನ ಹೊಂದಿದ್ದರೂ, ಅದನ್ನು ಕಾರ್ಯರೂಪಕ್ಕೆ ತರುವವರು ಒಳ್ಳೆಯವರಾಗಿದ್ದರೆ ಆ ಸಂವಿಧಾನ ಒಳ್ಳೆಯದಾಗಿರುತ್ತದೆ.’’ (ಸಂವಿಧಾನ ರಚನಾ ಸಭೆಯ ಅಂತಿಮ ಭಾಷಣದಲ್ಲಿ (1949) ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ ಮಾತುಗಳಿವು.)
ಸಂವಿಧಾನದ ‘ಅಕ್ಷರಗಳು’ ಮತ್ತು ಆ ಅಕ್ಷರಗಳ ಹಿಂದಿನ ‘ಇಂಗಿತ’ಗಳ ನಡುವೆ ಬೇಕೆಂದೇ ಜಟಾಪಟಿ ಹಚ್ಚಿ, ಆಟ ನೋಡುವ ಚಟ ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ - ಪ್ರಜಾತಂತ್ರ ವ್ಯವಸ್ಥೆಯ ಮೂಲಧಾತುಗಳಾದ ನಾವು, ಅಂದರೆ ಪ್ರಜೆಗಳು. ನಾವು ನಮ್ಮ ಸಾಮಾಜಿಕ-ರಾಜಕೀಯ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮತ್ತೆ ಮತ್ತೆ ಎಡವುತ್ತಿದ್ದೇವೆ. ಗೊತ್ತಿದ್ದೂ ಮಾಡಿಕೊಳ್ಳುವ ಇಂತಹ ಅನಾಹುತಗಳಿಂದ ನಮ್ಮನ್ನು ಯಾರೂ ರಕ್ಷಿಸಲಾರರು.
ಇಷ್ಟೆಲ್ಲಾ ‘ಗ್ಯಾನ್’ ಯಾಕೆ ಕೊಡಬೇಕಾಯಿತೆಂದರೆ, ಭಾರತದ ನ್ಯಾಯಾಂಗ ಇತ್ತೀಚೆಗೆ ನೀಡಿರುವ ತೀರ್ಪೊಂದು ಸಾಂವಿಧಾನಿಕ ಚೌಕಟ್ಟಿನ ಒಳಗಿದೆಯೇ ಎಂಬುದನ್ನು ಮರುಪರಿಶೀಲಿಸುವಂತೆ ಭಾರತದ ಸಂವಿಧಾನ ರಕ್ಷಣೆಯ ಹೊಣೆ ಹೊತ್ತಿರುವ ರಾಷ್ಟ್ರಪತಿಗಳು ನ್ಯಾಯಾಂಗವನ್ನು ಕೋರಿಕೊಂಡಿರುವುದು.
ರಾಷ್ಟ್ರಪತಿ, ರಾಜ್ಯಪಾಲರಂತಹ ಸಂವಿಧಾನ ರಕ್ಷಕ ಹುದ್ದೆಗಳಿಗೆ ಪಕ್ಷ ರಾಜಕೀಯ ಆಧರಿತ ನೇಮಕಗಳಾಗತೊಡಗಿದ ಬಳಿಕ, ರಾಜ್ಯಗಳ ವಿಧಾನಮಂಡಲಗಳು ಅಂಗೀಕರಿಸಿದ ಮಸೂದೆಗಳನ್ನು ಕಾನೂನೆಂದು ಅಂಕಿತ ಹಾಕುವುದಕ್ಕೆ ರಾಜ್ಯಪಾಲರ ಅಥವಾ ರಾಷ್ಟ್ರಪತಿಗಳ ಕಚೇರಿಯಲ್ಲಿ ಅಕಾರಣ ವಿಳಂಬ ಸಂಭವಿಸುತ್ತಿರುವುದು, ಹಲವು ರಾಜ್ಯಗಳಲ್ಲಿ ಅನಗತ್ಯ ರಾಜಕೀಯ ತಿಕ್ಕಾಟಗಳಿಗೆ ಕಾರಣ ಆಗುತ್ತಿದೆ. ಅಂಕಿಸಂಖ್ಯೆಗಳ ಪ್ರಕಾರ 2024ರಲ್ಲಿ ವಿವಿಧ ರಾಜ್ಯಗಳ ಸುಮಾರು ಶೇ. 18ರಷ್ಟು ಮಸೂದೆಗಳಿಗೆ, ರಾಜ್ಯಪಾಲರ ಅಂಕಿತ ಬೀಳಲು ಮೂರು ತಿಂಗಳಿಗಿಂತ ಹೆಚ್ಚು ಅವಧಿಯನ್ನು ರಾಜ್ಯಪಾಲರ ಕಚೇರಿಗಳು ತೆಗೆದುಕೊಂಡಿವೆ. ಹಿಮಾಚಲ ಪ್ರದೇಶ (ಶೇ. 72), ಸಿಕ್ಕಿಂ (ಶೇ. 56) ಮತ್ತು ಪ.ಬಂಗಾಳ (ಶೇ. 38) 2024ರಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಅತಿಹೆಚ್ಚು ಪೀಡಿತ ರಾಜ್ಯಗಳು. ಕರ್ನಾಟಕದಲ್ಲಿಯೂ ಕಳೆದ ವರ್ಷ ಅಂದಾಜು ಶೇ. 25 ಮಸೂದೆಗಳ ಅಂಗೀಕಾರಕ್ಕೆ ಮೂರು ತಿಂಗಳಿಗಿಂತ ಹೆಚ್ಚು ಅವಧಿ ತೆಗೆದುಕೊಳ್ಳಲಾಗಿದೆ. (ಮೂಲ: ಪಿಆರ್‌ಎಸ್ ವಿಶ್ಲೇಷಣಾ ಮಾಹಿತಿ)
ಸರಕಾರ-ರಾಜ್ಯಪಾಲರ ನಡುವೆ ಜಟಾಪಟಿ ತಾರಕಕ್ಕೇರಿರುವ ತಮಿಳುನಾಡಿನಲ್ಲಿ, 2020-2023ರ ನಡುವೆ 12 ಅಂಗೀಕೃತ ಮಸೂದೆಗಳನ್ನು ರಾಜ್ಯಪಾಲರು ಅಂಕಿತ ಹಾಕದೆ ನೆನೆಗುದಿಯಲ್ಲಿ ಇಟ್ಟದ್ದನ್ನು ಪ್ರಶ್ನಿಸಿ ಅಲ್ಲಿನ ಸರಕಾರ ಸುಪ್ರೀಂಕೋರ್ಟಿನ ಮೊರೆ ಹೋಗಿತ್ತು(Writ Petition 1239 ಔಈ 2023). ಈ ವರ್ಷ ಎಪ್ರಿಲ್ 8ರಂದು ಆ ಅರ್ಜಿಗೆ ತೀರ್ಪು ನೀಡಿದ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ರಾಜ್ಯಪಾಲರ ಕರ್ತವ್ಯ ಲೋಪವನ್ನು ಎತ್ತಿ ತೋರಿಸಿದ್ದಲ್ಲದೆ, ರಾಜ್ಯಪಾಲರಿಗೂ ಮತ್ತು ರಾಷ್ಟ್ರಪತಿಗಳಿಗೂ ತಮ್ಮ ಅಂಕಿತಕ್ಕಾಗಿ ಬರುವ ಅಂಗೀಕೃತ ಮಸೂದೆಗಳ ಕುರಿತು ತೀರ್ಮಾನ ಕೈಗೊಳ್ಳಲು ಸಮಯಾವಧಿ ನಿಗದಿ ಮಾಡಿತ್ತು. ಜೊತೆಗೆ, ಸಂವಿಧಾನದ ರಕ್ಷಕ ಹುದ್ದೆಗಳಲ್ಲಿರುವವರು ರಾಜಕೀಯ ಆಟಗಳಿಗೆ ಇಳಿಯುವ ಮೂಲಕ, ಜನಮತ ಪಡೆದು ಚುನಾಯಿತವಾಗಿರುವ ನೀತಿನಿರೂಪಕ ವ್ಯವಸ್ಥೆಗೆ ಅಕಾರಣ ಅಡ್ಡಿಗಳನ್ನುಂಟುಮಾಡಬಾರದು ಎಂದು ಪಾಠ ಹೇಳಿತ್ತು.
ಸುಪ್ರೀಂಕೋರ್ಟಿನ ಈ ತೀರ್ಮಾನವು ಸಾಂವಿಧಾನಿಕವಾದುದೇ ಎಂದು ಪರಿಶೀಲಿಸಲು ರಾಷ್ಟ್ರಪತಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟಿನ ಐದು ಸದಸ್ಯರ ಸಂವಿಧಾನ ಪೀಠವು ಈಗ ಈ ವಿಚಾರವನ್ನು ಪರಿಶೀಲಿಸಲು ಆರಂಭಿಸಿದ್ದು, ಆಗಸ್ಟ್ 19ರಿಂದ ವಿಚಾರಣೆ ಆರಂಭಿಸಿದೆ. 9 ದಿನಗಳ ವಿಚಾರಣೆ ನಡೆಸಲಿರುವ ನ್ಯಾಯಪೀಠವು ರಾಷ್ಟ್ರಪತಿಗಳು ಎತ್ತಿರುವ 14 ಸಾಂವಿಧಾನಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಿದೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ನಡುವಿನ ಜವಾಬ್ದಾರಿ ಹಂಚಿಕೆ ಸೂಕ್ಷ್ಮ ಸ್ವರೂಪದ್ದಾಗಿದ್ದು, ಅಲ್ಲಿ ಒಂದು ಅಂಗವು ಇನ್ನೊಂದು ಅಂಗದ ಕಾರ್ಯವ್ಯಾಪ್ತಿಯೊಳಗೆ ಹಸ್ತಕ್ಷೇಪ ಮಾಡುವುದು ಸಾಂವಿಧಾನಿಕ ಅವ್ಯವಸ್ಥೆಗೆ ಹಾದಿ ತೆರೆಯಲಿದೆ ಎಂದು ಹೇಳಿದ್ದಾರೆ. ಸಂವಿಧಾನದ ಪಠ್ಯದಲ್ಲಿ ಇರದ ಕಾರ್ಯವಿಧಾನಗಳನ್ನು ಹೇರುವ ಸುಪ್ರೀಂಕೋರ್ಟಿನ ತೀರ್ಪು ಸಂವಿಧಾನ ರಚಯಿತರ ಉದ್ದೇಶಗಳನ್ನು ಸೋಲಿಸಲಿದೆ ಮತ್ತು ಅದನ್ನು ಜಾರಿಗೊಳಿಸಲು ಸಂವಿಧಾನದಲ್ಲಿ ತಿದ್ದುಪಡಿ ಅಗತ್ಯ ಆಗಬಹುದು ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ದ್ವಿಸದಸ್ಯ ಪೀಠದ ತೀರ್ಮಾನ ಸಾಂವಿಧಾನಿಕ ಲಕ್ಷ್ಮಣ ರೇಖೆಗಳ ಉಲ್ಲಂಘನೆ ಎಂಬುದು ಈ ವಿಚಾರದಲ್ಲಿ ಸರಕಾರದ ನಿಲುವು. ಇಲ್ಲಿ ಕುತೂಹಲಕರ ಸಂಗತಿ ಎಂದರೆ, ಹಾಲಿ ಆಳುವವರ ಚಿಂತನ ಚಿಲುಮೆ ಮತ್ತು ಅದರ ಸಮರ್ಥಕರು ಆಗಾಗ ದೇಶದ ಸಂವಿಧಾನ ಬದಲಾಗಬೇಕು ಎಂದು ಹೇಳುತ್ತಿರುವುದು ಈಗ ಗುಟ್ಟೇನಲ್ಲ. ಆದರೆ, ಹಾಲಿ ಪ್ರಶ್ನೆಗೆ ಸಂಬಂಧಿಸಿದಂತೆ ಸರಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ಹೇಗೆ ಸಂವಿಧಾನ ರಚನಾಸಭೆಯ ಚರ್ಚೆಗಳು ದಾರ್ಶನಿಕವಾಗಿದ್ದವು ಮತ್ತು ಹೇಗೆ ಸಂವಿಧಾನ ಸಾರ್ವಕಾಲಿಕ ಮೌಲ್ಯದ್ದು ಎಂದು ನ್ಯಾಯಪೀಠಕ್ಕೆ ಅರ್ಥೈಸಲು ಶ್ರಮಿಸಿದ್ದು ಬಹಳ ಮೋಜಿನದ್ದಾಗಿತ್ತು.
ಸೆಪ್ಟಂಬರ್ ಅಂತ್ಯದ ವೇಳೆಗೆ ಸಂವಿಧಾನ ಪೀಠ ತನ್ನೆದುರು ಇರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಆದರೆ, ಈ ಇಡಿಯ ಗೊಂದಲದ ಮೂಲ ಎಲ್ಲಿದೆ ಎಂದು ಪ್ರಜೆಗಳಾಗಿ ನಾವು ಪರಿಶೀಲಿಸಿಕೊಂಡರೆ ನಮ್ಮ ರಾಜಕೀಯ ವ್ಯವಸ್ಥೆಯ ದೌರ್ಬಲ್ಯಗಳು ನಮ್ಮೆದುರು ಬಟಾಬಯಲಾಗಿ ನಿಲ್ಲುತ್ತವೆ. ಸಂವಿಧಾನವೆಂದರೆ ಬರಿಯ ಅಕ್ಷರಗಳು ಮತ್ತು ಅದನ್ನು ಅಕ್ಷರಶಃ ಪಾಲಿಸಿದರೆ ಮುಗಿಯಿತು ಎಂಬ ನಿಲುವು ಅಪಾಯಕಾರಿ ಎಂಬುದು ಇತ್ತೀಚೆಗಿನ ದಿನಗಳಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅಕ್ಷರಗಳ ನಡುವಿನ ಖಾಲಿ ಜಾಗಗಳಲ್ಲಿ ಜನಪರವಲ್ಲದ ಹಿತಾಸಕ್ತಿಗಳನ್ನು ಎಗ್ಗಿಲ್ಲದೆ ತುಂಬಿಸಲಾಗುತ್ತಿದೆ. ದೇಶದ ಸಂವಿಧಾನಕ್ಕೆ ಒಂದು ‘ಇಂಗಿತ’ ಇದೆ. ಆ ಇಂಗಿತವನ್ನು ಸಂವಿಧಾನ ಜಾರಿಗೊಳಿಸುವ ಹೊಣೆ ಹೊತ್ತವರು ಬದಿಗೆ ಸರಿಸಿ ಮುನ್ನಡೆದಷ್ಟೂ, ಒಂದು ಪ್ರಜಾತಂತ್ರವಾಗಿ ನಮ್ಮ ಸೋಲು ಹೆಚ್ಚು ನಿಶ್ಚಿತಗೊಳ್ಳುತ್ತದೆ. ಇಂತಹ ಲೋಪಗಳನ್ನೆಲ್ಲ ಸರಿಪಡಿಸಿಕೊಳ್ಳದಿದ್ದರೆ ಯಾವ ಸಂವಿಧಾನವೂ ನಮ್ಮನ್ನು ರಕ್ಷಿಸದು. ಆ ಹಿನ್ನೆಲೆಯಲ್ಲಿ ನಾಲ್ಕು ಅಂಶಗಳನ್ನು ಪರಿಶೀಲಿಸಬಹುದು.
1. ನಮ್ಮ ಶಾಸಕಾಂಗ ವ್ಯವಸ್ಥೆಯ ಮೂಲ ಉದ್ದೇಶ - ಚರ್ಚೆಯ ಮೂಲಕ ದೇಶದ ಕಾನೂನು, ನೀತಿಗಳ ನಿರೂಪಣೆ. ಅದೊಂದನ್ನು ಉಳಿದು ಬೇರೆಲ್ಲವನ್ನೂ ಇಂದು ಸಂಸತ್ತು, ವಿಧಾನಮಂಡಲಗಳು ಮಾಡುತ್ತಿವೆ. 2024ರಲ್ಲಿ ದೇಶದ ರಾಜ್ಯಗಳು ಅಂಗೀಕರಿಸಿದ ಮಸೂದೆಗಳಲ್ಲಿ ಶೇ. 51ಮಸೂದೆಗಳಿಗೆ ಒಂದು ದಿನದ ಚರ್ಚೆಯೂ ನಡೆದಿಲ್ಲ (ಮೂಲ: PRS Legislative Research) ಎಂಬ ವಾಸ್ತವ ನಮ್ಮೆದುರಿಗೇ ಇದೆ. ಶಾಸಕರು, ಸಂಸದರು ಎಂದರೆ ಸರಕಾರದ ವಿವಿಧ ಯೋಜನೆಗಳ ನಿಧಿಯಲ್ಲಿ ಪಾಲು ಪಡೆದು, ಅವನ್ನು ಖರ್ಚು ಮಾಡಲು (ಅಲ್ಲಿ ಲಾಭ ಗಳಿಸಲು) ತಮ್ಮ ಜವಾಬ್ದಾರಿಯನ್ನು ಸೀಮಿತಗೊಳಿಸಿಕೊಂಡಿರುವ ದಳ್ಳಾಲಿಗಳು ಎಂಬುದನ್ನು ವ್ಯವಸ್ಥೆಯೇ ಒಪ್ಪಿಕೊಂಡುಬಿಟ್ಟಂತಿದೆ.
2. ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಂತಹ ಸಾಂವಿಧಾನಿಕ ಮಹತ್ವದ ಹುದ್ದೆಗಳು ಇಂದು ಆಳುವವರ ರಾಜಕೀಯ ಉದ್ದೇಶಗಳಿಗೆ ಸಹಕರಿಸಿದ ಆಯಕಟ್ಟಿನ ಜಾಗದ ಅಧಿಕಾರಿಗಳಿಗೆ ನಿವೃತ್ತಿಯ ಬಳಿಕದ ಗಂಜಿಕೇಂದ್ರವಾಗಿಯೋ ಅಥವಾ ಆಡಳಿತ ಪಕ್ಷದ ಕಾರ್ಯಕರ್ತರಿಗೆ ಸಂಧ್ಯಾಕಾಲದ ವಿಶ್ರಾಂತಿಧಾಮವೋ ಆಗಿ ಬದಲಾಗಿ ಈಗ ದಶಕಗಳೇ ಸಂದಿವೆ.
3. ಆಕಾಶದಿಂದ ಕಾಸಿನ ಚೀಲಗಳ ಸಹಿತ ಉದುರುವ ನಾಯಕರುಗಳು ಸಾಮಾಜಿಕ ಸಾಮರಸ್ಯವನ್ನು ಕೆಡಿಸಿ, ಹಣ ಹೂಡಿ ಚುನಾವಣೆ ಗೆಲ್ಲುವ ಮತ್ತು ಗೆದ್ದ ಬಳಿಕ ಹೂಡಿದ ಹಣವನ್ನು ಮರಳಿ ಗಳಿಸುವ ವ್ಯವಹಾರ ಮಾಡಿಕೊಂಡಿರುವುದೇ ಅಧಿಕೃತವಾಗಿ ದೇಶದ ರಾಜಕೀಯ ವಿನ್ಯಾಸ ಆಗಿಬಿಟ್ಟಿದೆ.
4. ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕೂಡ ವ್ಯವಸ್ಥೆಯನ್ನು ಇನ್ನಷ್ಟು ಭ್ರಷ್ಟಗೊಳಿಸಿ, ಅದರಲ್ಲಿ ತಮ್ಮ ಲಾಭ ಖಚಿತಪಡಿಸಿಕೊಳ್ಳುವುದಕ್ಕೆ ಸೀಮಿತವಾಗಿಬಿಟ್ಟಿವೆ.
ಈ ನಾಲ್ಕು ಅಂಶಗಳನ್ನು ಸರಿಪಡಿಸಿಕೊಳ್ಳುವ ಜವಾಬ್ದಾರಿ ಪ್ರಜೆಗಳಾಗಿ ನಮ್ಮದೇ ಆಗಿದೆ. ನಮ್ಮ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ನಾಯಕತ್ವದ ಗುಣಮಟ್ಟ ತಗ್ಗಿದೆ ಎಂಬುದರಲ್ಲಿ ಯಾರಿಗೂ ತಕರಾರು ಇಲ್ಲ. ದೇಶದ ನಾಗರಿಕ ವ್ಯವಸ್ಥೆಯನ್ನು ಒಂದು ಆರೋಗ್ಯವಂತ ಪ್ರಜಾತಾಂತ್ರಿಕ ಚೌಕಟ್ಟಿನೊಳಗೆ ತಂದಿರುವ ಸಂವಿಧಾನವನ್ನು, ಲಭ್ಯ ನಾಯಕತ್ವದ ಗುಣಮಟ್ಟ ಕಳಪೆ ಎಂಬ ಕಾರಣಕ್ಕೆ ಬದಲಾಯಿಸಲು ಹೊರಡುವುದು ಅಪಾಯಕಾರಿ ಸ್ಥಿತಿ. ಸಂವಿಧಾನದ ಇಂಗಿತ ಮತ್ತು ವಸ್ತುಸ್ಥಿತಿಗಳ ನಡುವೆ ಅಂತರ ಕಾಣಿಸಿದಾಗಲೆಲ್ಲ ಆ ಗುಂಡಿಗಳನ್ನು ತುಂಬುವ ಜವಾಬ್ದಾರಿ ನ್ಯಾಯಾಂಗದ್ದು. ಪ್ರತಿಯೊಂದು ರಾಜಕೀಯ ಬಾನಗಡಿಗಳಿಗೂ ನ್ಯಾಯಾಂಗ ಮಧ್ಯಪ್ರವೇಶವನ್ನು ಅನಿವಾರ್ಯಗೊಳಿಸುವ ಬದಲು, ಒಂದು ಸಮಾಜವಾಗಿ ನಾವು ನಮ್ಮ ನಮ್ಮ ಸಂಸತ್ ಕ್ಷೇತ್ರ, ನಮ್ಮ ಶಾಸಕ ಕ್ಷೇತ್ರ ಅಥವಾ ಕನಿಷ್ಠ ಪಕ್ಷ ನಮ್ಮ ಪಂಚಾಯತ್-ವಾರ್ಡ್‌ಗಳಲ್ಲಾದರೂ ಯೋಗ್ಯ, ಬೇರುಮಟ್ಟದಿಂದ ಸಹಜವಾಗಿ ಹುಟ್ಟಿ ವಿಕಸಿತಗೊಂಡ, ವಿವೇಚನೆಯುತ ನಾಯಕತ್ವವನ್ನು ಪ್ರಜಾತಾಂತ್ರಿಕ ಹಾದಿಯಲ್ಲೇ ಚುನಾಯಿಸಿಕೊಳ್ಳುವುದು ಹೆಚ್ಚು ಆರೋಗ್ಯಕರ. ಸಂವಿಧಾನ ರಕ್ಷಿಸಿಕೊಳ್ಳಲು ಇದೊಂದೇ ಹಾದಿ.