Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಸಿದ್ದು ಕಳಂಕ ತೊಳೆದುಕೊಳ್ಳುವರೆ?

ಸಿದ್ದು ಕಳಂಕ ತೊಳೆದುಕೊಳ್ಳುವರೆ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ8 Sept 2025 10:58 AM IST
share
ಸಿದ್ದು ಕಳಂಕ ತೊಳೆದುಕೊಳ್ಳುವರೆ?

ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಸಮೀಕ್ಷೆ) ಮಾಡಲು ತಯಾರಿಯನ್ನು ಪ್ರಾರಂಭಿಸಿದೆ. ಕೇಂದ್ರ ಸರಕಾರ ಜನಗಣತಿ ಮಾಡುತ್ತಿರುವಾಗ ರಾಜ್ಯ ಸರಕಾರ ಪ್ರತ್ಯೇಕವಾಗಿ ಜಾತಿ ಸಮೀಕ್ಷೆ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆಯೂ ಸೇರಿದಂತೆ ಸಮೀಕ್ಷೆ ಕುರಿತು ಉಂಟಾಗಿರುವ ಯಾವ ಗೊಂದಲವನ್ನೂ ಬಗೆಹರಿಸದೆ ಮುಂದೆ ಸಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ‘ಇದು ತಲೆ ಎಣಿಕೆ ಅಲ್ಲ, ಯಾವ ಜಾತಿ ಜನ ಎಷ್ಟಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯೂ ಅಲ್ಲ, ರಾಜ್ಯದ ಏಳು ಕೋಟಿಗೂ ಹೆಚ್ಚು ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅರಿಯುವ ಸಮಗ್ರವಾದ ಕೆಲಸ. ಕೇಂದ್ರ ಸರಕಾರ ಮಾಡುತ್ತಿರುವುದು ಜನ(ಜಾತಿ) ಗಣತಿ, ರಾಜ್ಯ ಸರಕಾರ ಮಾಡುತ್ತಿರುವುದು ಸಮೀಕ್ಷೆ (ಯಾವ ಜಾತಿಯ ಜನ, ಎಷ್ಟು ಮತ್ತು ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬ ಸಮೀಕ್ಷೆ)’ ಎನ್ನುವುದನ್ನು ಜನರಿಗೆ ತಿಳಿಸುವ ತನ್ನ ಪ್ರಮುಖ ಜವಾಬ್ದಾರಿಯೇ ಆಯೋಗಕ್ಕೆ ನೆನಪಾಗುತ್ತಿಲ್ಲ.

ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮುಂದುವರಿದವರು, ಮೇಲ್ವರ್ಗದವರು, ಪ್ರಬಲರೂ ಸೇರಿದಂತೆ ಹಿಂದುಳಿದ, ತೀರಾ ಹಿಂದುಳಿದ, ಸಣ್ಣ, ಅತಿಸಣ್ಣ ಸಮುದಾಯಗಳಿಗೂ ಸಮೀಕ್ಷೆಯ ಮಹತ್ವವನ್ನು ತಿಳಿಸಿಕೊಡುವ ಅಗತ್ಯವಿದೆ. ಆಯೋಗವೇ ಮುತುವರ್ಜಿ ವಹಿಸಿ ಮಾಡಬೇಕಾದ ಕೆಲಸ ಇದಾಗಿದೆ. ಆದರೆ ಈವರೆಗೆ ಆಯೋಗ ಇಂಥ ಯಾವುದೇ ಪ್ರಯತ್ನ ನಡೆಸಿದ ನಿದರ್ಶನಗಳು ಕಾಣಸಿಗುತ್ತಿಲ್ಲ. ಸಮುದಾಯಗಳ ಜೊತೆಗೆ ಸಮಾಲೋಚನೆ ನಡೆಸಬೇಕು ಎಂದು ಆಯೋಗಕ್ಕೆ ಅನಿಸಿಯೇ ಇಲ್ಲ. ಇಂಥ ಕೆಲಸವನ್ನು ಮಾಡದಿದ್ದರೆ ಕೆಲ ಸಮುದಾಯಗಳು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆಗೆ ತೊಡಗಿಸಿಕೊಳ್ಳುವುದು ಮತ್ತು ಮಾಹಿತಿ ನೀಡುವುದೇ ಸಾಧ್ಯವಾಗುವುದಿಲ್ಲ. ಆಗ ಸರಕಾರ ಎಷ್ಟೇ ಹಣ ಖರ್ಚು ಮಾಡಿದರೂ, ಎಷ್ಟೇ ದಿನ ವ್ಯಯ ಮಾಡಿದರೂ ಸಮೀಕ್ಷೆ ಯಶಸ್ವಿಯಾಗಲು ಸಾಧ್ಯವಿಲ್ಲ ಎನ್ನುವುದು ಆಯೋಗಕ್ಕೆ ತಿಳಿದಂತೆ ಕಾಣುತ್ತಿಲ್ಲ.

ಆಯೋಗ ಮೊದಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (2015)ಗೆ ತಯಾರಿ ನಡೆಸಿ, ಸಮೀಕ್ಷೆ ನಡೆಸಿ, ವರದಿ ನೀಡಲು ಸರಿ ಸುಮಾರು 10 ವರ್ಷ ಸಮಯ ತೆಗೆದುಕೊಂಡಿತು. ಅಷ್ಟೊಂದು ಸಮಯ ವ್ಯರ್ಥವಾಗಲು ಸರಕಾರಗಳ ಇಚ್ಛಾಶಕ್ತಿಯ ಕೊರತೆ ಕಾರಣವಾಗಿತ್ತೇ ವಿನಃ ಆಯೋಗವಲ್ಲ ಎನ್ನುವುದು ಗೊತ್ತಿರುವ ವಿಷಯವೇ. ಆ ಸುದೀರ್ಘ ಅವಧಿಯಲ್ಲಿ ಆಯೋಗ ಪ್ರತಿಹಂತದಲ್ಲೂ ಅಳೆದಳೆದು ಒಂದೊಂದೇ ಹೆಜ್ಜೆ ಮುಂದಡಿ ಇಟ್ಟಿತ್ತಾದರೂ ಪಾರದರ್ಶಕತೆ ಕಾಪಾಡಿಕೊಂಡಿರಲಿಲ್ಲ ಎಂಬ ಗುರುತರ ಆರೋಪವನ್ನು ಎದುರಿಸಿತು. ಈ ಪ್ರಮಾದವನ್ನು ಮತ್ತೆ ಎಸಗುವುದಿಲ್ಲ ಎಂಬ ಸುಳಿವನ್ನು ಆಯೋಗ ಈಗ ನೀಡುತ್ತಿಲ್ಲ.

ಮೊದಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ಜಾರಿಯಾಗಬೇಕು ಎಂದು ವಕಾಲತ್ತು ವಹಿಸುತ್ತಿದ್ದವರು ಕೂಡ ಸರಕಾರ ಜಾರಿ ಮಾಡದಿದ್ದುದೇ ಸರಿಯಾದ ಕ್ರಮ ಎಂದು ನಿಲುವು ಬದಲಿಸಿ ಮಾತನಾಡಿದ್ದುಂಟು. ಏಕೆಂದರೆ ಸಮೀಕ್ಷೆಗೆ ಪೂರಕ ಬಲ ತಂದುಕೊಡಬಲ್ಲದಾಗಿದ್ದ ದ್ವಿತೀಯ ಮೂಲದ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ ಎನ್ನುವ ಕಾರಣಕ್ಕೆ. ಒಂದೊಮ್ಮೆ ಸರಕಾರ ಆಯೋಗದ ವರದಿಯನ್ನು ಒಪ್ಪಿ ಜಾರಿಗೆ ಮುಂದಾಗಿದ್ದರೂ ದ್ವಿತೀಯ ಮೂಲದ ಮಾಹಿತಿ ಸಂಗ್ರಹಿಸಿಲ್ಲ ಎಂದು ನ್ಯಾಯಾಲಯ ತಿರಸ್ಕರಿಸುವ ಸಾಧ್ಯತೆ ಇತ್ತು ಎನ್ನುವ ಕಾರಣಕ್ಕೆ. ಎರಡನೇ ಸಮೀಕ್ಷೆ ವೇಳೆ ಕೂಡ ಆಯೋಗ ದ್ವಿತೀಯ ಮೂಲದ ಮಾಹಿತಿ ಸಂಗ್ರಹಿಸಲು ಸೂಕ್ತ ಕ್ರಮ ಕೈಗೊಂಡಿರುವ ಯಾವ ಲಕ್ಷಣವೂ ಕಾಣಸಿಗುತ್ತಿಲ್ಲ. ಅಂಥ ಕ್ರಮ ಕೈಗೊಂಡಿದ್ದರೆ ಅಥವಾ ಕೈಗೊಳ್ಳುವುದಿದ್ದರೆ ಅದನ್ನು ಆಯೋಗ ಸಾರ್ವಜನಿಕರಿಗೆ ತಿಳಿಸಬೇಕಾಗಿತ್ತು, ಈವರೆಗೆ ತಿಳಿಸಿಲ್ಲ.

ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎನ್ನುವುದು ಕೆಲವೇ ಕೆಲವು ಸಮುದಾಯಗಳ ಹಿತಕಾಯುವ ಹುನ್ನಾರ ಎಂದು ಬಿಂಬಿಸುತ್ತಿವೆ. ಯಾವುದೊ ಜಾತಿಯ ಜನ ಹೆಚ್ಚಿದ್ದಾರೆ, ಇನ್ಯಾರೋ ಕಮ್ಮಿ ಇದ್ದಾರೆ ಎಂದು ಹೇಳಲೆಂದೇ ಸಮೀಕ್ಷೆ ನಡೆಸಲಾಗುತ್ತಿದೆ ಎನ್ನುವ ಅಪಪ್ರಚಾರ ಕೂಡ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಆಯೋಗ ತನ್ನ ತಯಾರಿ ಬಗ್ಗೆ, ಸಮೀಕ್ಷೆಯ ಇಡೀ ಪ್ರಕ್ರಿಯೆ ಬಗ್ಗೆ, ಜಾತಿ ಮತ್ತು ಜನರ ಪಾಲ್ಗೊಳ್ಳುವಿಕೆ ಬಗ್ಗೆ ವ್ಯಾಪಕವಾದ ಪ್ರಚಾರ ಮಾಡಬೇಕು. ಸಮೀಕ್ಷೆ ನಡೆಯುವ ಸಮಯ, ಮಾದರಿಯಿಂದ ಹಿಡಿದು ಒಂದೊಂದೂ ಮಹತ್ವದ ವಿಷಯವೇ. ಎಲ್ಲವನ್ನೂ ಎಲ್ಲರಿಗೂ ತಿಳಿಸಿದಾಗ ಮಾತ್ರ ಯಶಸ್ಸು ಸಾಧ್ಯ. ಈ ವಾಸ್ತವದ ಅರಿವು ಆಯೋಗಕ್ಕಿದೆ ಎನಿಸುವುದಿಲ್ಲ.

ಮೇಲಿನ ಐದು ಸಂಗತಿಗಳನ್ನೂ ಮೀರಿ ಸರಳವಾಗಿ ಹೇಳಬೇಕೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉದ್ದೇಶ ಸರ್ವರಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡುವುದು. ಅದಕ್ಕಾಗಿ ಯಾವ ಜಾತಿಯ ಸ್ಥಿತಿ ಹೇಗಿದೆ ಎಂದು ಅರಿಯುವುದು. ಆಯೋಗ ಈ ಮುಖ್ಯ ಉದ್ದೇಶದ ಬಗ್ಗೆ ಜನರಿಗೆ ಜಾಗೃತಿ ಮೂಡಿಸದೆ ಮನೆ ಮನೆ ಬಾಗಿಲಿಗೆ ಹೋಗಿ ಸಮರ್ಪಕವಾದ ಸಮೀಕ್ಷೆ ನಡೆಸಲು ಸಾಧ್ಯವೆ?

ಸಾಧ್ಯವಾಗಿಸುವ ಅವಕಾಶವನ್ನು ಕೈಚೆಲ್ಲಿ ಆಯೋಗ ತಪ್ಪು ಮಾಡುತ್ತಿದೆ. ‘ಬಗ್ಗಿ ನಡೆ ಎಂದರೆ ತೆವಳುವ’ ಸದ್ಯದ ಸ್ವಾಯತ್ತ ಸಂಸ್ಥೆಗಳ ವಿಷಯದಲ್ಲಿ ಇಂಥ ತಪ್ಪುಗಳಾಗುವುದು ಸಹಜವೇ ಇರಬಹುದು. ಅದಕ್ಕಿಂತ ಹೆಚ್ಚಾಗಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಕೊಡುವುದು ತನ್ನ ಕೆಲಸ, ವರದಿಯನ್ನು ಒಪ್ಪುವುದು ಅಥವಾ ಒಪ್ಪದಿರುವುದು ಸರಕಾರಕ್ಕೆ ಬಿಟ್ಟದ್ದು ಎಂದು ಕೈತೊಳೆದುಕೊಳ್ಳಬಹುದು. ಅಂಥ ಧೋರಣೆಯಿಂದಲೇ ಕಳಶಪ್ರಾಯವಾಗಬೇಕಿದ್ದ ಆಯೋಗಕ್ಕೆ ಕಳಂಕ ಅಂಟಿರುವುದು. ಈಗ ಮತ್ತೊಮ್ಮೆ ಕಳಂಕ ತೊಳೆದುಕೊಳ್ಳುವ ಅವಕಾಶ ಒದಗಿಬಂದಿದೆ. ಆಯೋಗ ಏನು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಕಳಂಕ ಆಯೋಗವನ್ನು ಮಾತ್ರ ಆವರಿಸಿಲ್ಲ. ಸಿದ್ದರಾಮಯ್ಯ ಅವರನ್ನೂ ಸುತ್ತುವರಿದಿದೆ. ರಾಹುಲ್ ಗಾಂಧಿ ಅವರಿಗೆ ಜಾತಿ ಸಮೀಕ್ಷೆ ಜಾರಿ ಮಾಡದಿದ್ದರೆ ಹಿಂದುಳಿದ, ತೀರಾ ಹಿಂದುಳಿದ, ಸಣ್ಣ, ಅತಿಸಣ್ಣ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮನವೊಲಿಸುವುದರಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಬಹುಶಃ 1ಃ ಎಂಬ ಹೊಸ ಪ್ರವರ್ಗ ಸೃಷ್ಟಿಸಿ ಅದರಲ್ಲಿ ಅತ್ಯಂತ ಹಿಂದುಳಿದ ಮತ್ತು ಅಬಲ ಸಮುದಾಯಗಳ ಜೊತೆಗೆ ಕುರುಬರನ್ನು ಸೇರಿಸಿದ್ದರ ಪರಿಣಾಮ ಜಾತಿ ಸಮೀಕ್ಷಾ ವರದಿಯನ್ನು, ಮತ್ತದರ ವರ್ಗೀಕರಣ ವನ್ನು ಸಮರ್ಥಿಸಿಕೊಳ್ಳಲು ಅವರಿಂದ ಸಾಧ್ಯವಾಗದಿರಬಹುದು. ಶಾಸಕರ ಬೆಂಬಲ ಕಳೆದುಕೊಳ್ಳುವ ಭಯ ಅವರನ್ನು ಕಾಡಿರಬಹುದು. ಅಧಿಕಾರ ಉಳಿಸಿಕೊಳ್ಳಲು ಅವರು ರಾಜಿ ಮಾಡಿಕೊಂಡಿರಬಹುದು. ಕಾರಣಗಳು ಏನೇ ಇದ್ದರೂ ಅವರು ಜಾತಿ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿಲ್ಲ, ಅದು ಜಾರಿಯಾಗಿಲ್ಲ ಎಂಬುದು ವಾಸ್ತವ. ಆ ಕಳಂಕ ಅವರಿಗೆ ಅಂಟಿಕೊಂಡಿರುವುದು ದಿಟ.

ಸಿದ್ದರಾಮಯ್ಯ ಮಾತ್ರವಲ್ಲ, ಕಳಂಕ ಕುರುಬರ ಶಿರವನ್ನೂ ಏರಿ ಕುಳಿತಿದೆ. ಮೊದಲ ಸಮೀಕ್ಷೆಯಲ್ಲಿ ಕುರುಬರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದೇ ಪ್ರಬಲ ಸಮುದಾಯಗಳು ವಿರೋಧಿಸಿದ್ದು. ಇತರ ಹಿಂದುಳಿದವರು ಕೂಡ ಆಕ್ಷೇಪ ಎತ್ತಿದ್ದು. ಕುರುಬರು ಒಂದು ವಿಷಯವನ್ನು ಅತ್ಯಂತ ಎಚ್ಚರಿಕೆಯಿಂದ ಅರಿಯಬೇಕಿದೆ. ಹಿಂದುಳಿದ, ತೀರಾ ಹಿಂದುಳಿದ, ಸಣ್ಣ, ಅತಿಸಣ್ಣ ಸಮುದಾಯಗಳೆಲ್ಲಾ ಇದ್ದರೆ ಮಾತ್ರ ಅದು ‘ಹಿಂದುಳಿದ ವರ್ಗ’ ಎಂಬ ದೊಡ್ಡ ಗುಂಪು. ಆಗ ಮಾತ್ರ ಅದು ದೊಡ್ಡ ಶಕ್ತಿ. ಸಿದ್ದರಾಮಯ್ಯ ದೊಡ್ಡ ನಾಯಕ ಎನಿಸಿಕೊಂಡಿರುವುದು, ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಕುರುಬ ಎನ್ನುವ ಕಾರಣಕ್ಕಲ್ಲ. ಹಿಂದುಳಿದ ವರ್ಗದ ನಾಯಕ ಎನ್ನುವ ಕಾರಣಕ್ಕಾಗಿ. ಹಿರಿಯಣ್ಣನಾಗಿ ಹೊಟ್ಟೆ ತುಂಬಾ ಉಂಡಿದ್ದೇನೆ, ಮುಂದಾದರೂ ತಮ್ಮಂದಿರ ಜೊತೆ ಹಂಚುಣ್ಣುತ್ತೇನೆ ಎಂಬ ನಿಲುವಿಗೆ ಬಾರದಿದ್ದರೆ ಇತರರಿಗೆಷ್ಟು ನಷ್ಟವೋ ಅದಕ್ಕಿಂತ ಜಾಸ್ತಿ ನಷ್ಟ ಆಗುವುದು ಕುರುಬ ಸಮುದಾಯಕ್ಕೇನೇ. ಹಿಂದುಳಿದವರ ಪೈಕಿ ಅತಿ ದೊಡ್ಡ ಸಮುದಾಯವೇ ಆಗಿದ್ದರೂ ಕುರುಬ ನಾಯಕ ಮುಖ್ಯಮಂತ್ರಿ ಆಗಿರುವುದು ಸಿದ್ದರಾಮಯ್ಯ ಮಾತ್ರ. ಉಳಿದ ನಾಲ್ಕು ಮಂದಿಯ ಸಮುದಾಯಗಳು ಚಿಕ್ಕವೇ. ಆದರೂ ಆ ಕುರ್ಚಿಯಲ್ಲಿ ಕುಳಿತಿದ್ದಾರೆ ಮತ್ತು ಕುರುಬರ ಬೆಂಬಲವಿಲ್ಲದೆಯೂ ಕುಳಿತಿದ್ದಾರೆ. ಇದರಿಂದ ಅರ್ಥ ಆಗಬೇಕಿರುವುದೇನೆಂದರೆ ಹಿಂದುಳಿದವರಿಗೆ ಕುರುಬರು ಎಷ್ಟು ಅಗತ್ಯವೋ ಅದಕ್ಕಿಂತ ಹೆಚ್ಚು ಕುರುಬರಿಗೆ ಹಿಂದುಳಿದವರ ಅಗತ್ಯವಿದೆ ಎನ್ನುವುದು. ಎರಡನೇ ಜಾತಿ ಸಮೀಕ್ಷೆ ವೇಳೆ ಈ ಚಾರಿತ್ರಿಕ ಹಿನ್ನೆಲೆ ಅರಿತು ಅವರು ಕಳಂಕ ತೊಳೆದುಕೊಳ್ಳಬಹುದಾಗಿದೆ. ಉಳಿದದ್ದು ಅವರಿಗೆ ಬಿಟ್ಟದ್ದು.

ರಾಹುಲ್ ಗಾಂಧಿ ಕೂಡ ಕಳಂಕಿತ ನಾಯಕನೇ. ಏಕೆಂದರೆ ಸಿದ್ದರಾಮಯ್ಯ 90ರ ದಶಕದಲ್ಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕು ಎಂದು ಪ್ರತಿಪಾದಿಸಿದವರು. ಆದರೆ ನಿನ್ನೆ ಮೊನ್ನೆಯಿಂದ ಜಾತಿ ಸಮೀಕ್ಷೆ ಬಗ್ಗೆ ಮಾತನಾಡಲು ಆರಂಭಿಸಿರುವ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಜಾತಿ ಸಮೀಕ್ಷೆಯನ್ನು ಒಂದೇ ಏಟಿಗೆ ನೆಲಸಮ ಮಾಡಿಬಿಟ್ಟರು. ರಾಹುಲ್ ಗಾಂಧಿ ಪ್ರತಿ ಬಾರಿ ಜಾತಿ ಸಮೀಕ್ಷೆ ಬಗ್ಗೆ ಮಾತನಾಡುವಾಗ ತೆಲಂಗಾಣದ ಉದಾಹರಣೆ ನೀಡುತ್ತಾರೆಯೇ ವಿನಃ ಕರ್ನಾಟಕದ ಅಥವಾ ಸಿದ್ದರಾಮಯ್ಯ ಅವರ ಜಾತಿ ಸಮೀಕ್ಷೆ ಬಗ್ಗೆ ಅಲ್ಲ. ತೆಲಂಗಾಣದ ಸಚಿವ ಸಂಪುಟ ಹೇಗಿದೆ ಎಂಬ ಒಂದೇ ಒಂದು ಅಂಶವನ್ನು ನೋಡಿದರೆ ಸಾಕು ರೇವಂತ್ ರೆಡ್ಡಿಯ ಸಾಮಾಜಿಕ ನ್ಯಾಯ ಪರಿಕಲ್ಪನೆ ಹೇಗಿದೆ ಎಂದು ತಿಳಿಯಲು. ರಾಹುಲ್ ಗಾಂಧಿ ತಮ್ಮದೇ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದ ಸಂಗತಿಯನ್ನು ಮರೆತು, ಸಿದ್ದರಾಮಯ್ಯ ಅವರಂಥ ನಾಯಕನ ಮಾತನ್ನು ಕಡೆಗಣಿಸಿ ಜಾತಿ ಸಮೀಕ್ಷೆಗೆ ಅಡ್ಡಗಾಲು ಹಾಕಿ ಕಳಂಕವನ್ನು ಸ್ವತಃ ಆಮಂತ್ರಿಸಿಕೊಂಡಿದ್ದಾರೆ. ಇದೀಗ ಅವರ ಸರಕಾರದಿಂದ ಸಮಗ್ರವಾದ, ಸರಿಯಾದ ಸಮೀಕ್ಷೆ ಮಾಡಿಸಿ ಅದು ಜಾರಿಯಾಗುವಂತೆ ಮಾಡುವ ಮೂಲಕ ಆ ಕಳಂಕದಿಂದ ಮುಕ್ತವಾಗಬಹುದಾಗಿದೆ.

ಸಿದ್ದರಾಮಯ್ಯ, ರಾಹುಲ್ ಗಾಂಧಿ ಮಾತ್ರವಲ್ಲ, ರಾಜ್ಯದ ಎಲ್ಲಾ ಹಿಂದುಳಿದ ಜಾತಿಗಳ ನಾಯಕರು ಕೂಡ ಕಳಂಕಿತರೇ. ಹಿಂದುಳಿದವರ ಹಿತಾಸಕ್ತಿಗಳ ಬಗ್ಗೆ ಸಿದ್ದರಾಮಯ್ಯ ಮಾತ್ರ ಮಾತನಾಡಬೇಕೆ? ಮೊದಲ ಜಾತಿ ಸಮೀಕ್ಷೆ ಜಾರಿಯಾಗದೇ ಇರುವುದಕ್ಕೆ ಹಿಂದುಳಿದ ಜಾತಿಗಳ ಇತರ ನಾಯಕರು ಕೂಡ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಕಾರಣ. ಇವರು ಎರಡನೇ ಜಾತಿ ಸಮೀಕ್ಷೆ ವೇಳೆಯಲ್ಲಾದರೂ ಅವರವರ ಸಮುದಾಯವನ್ನು ಜಾಗೃತಗೊಳಿಸಿ, ಸರಿಯಾದ ಮಾಹಿತಿ ನೀಡಿ, ಆಯೋಗಕ್ಕೆ ಸ್ಪಂದಿಸಿ ಕಳಂಕ ಮುಕ್ತರಾಗಬಹುದಾಗಿದೆ.

ಅಂತಿಮವಾಗಿ ಜಾತಿ ಸಮೀಕ್ಷೆಗೆ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತರು ವಿರೋಧಿಸುತ್ತಾರೆ ಎನ್ನುವ ಅಭಿಪ್ರಾಯವಿದೆ. ಇದು ಪೂರ್ತಿ ಸತ್ಯವಾದ ಸಂಗತಿಯಲ್ಲ. ಏಕೆಂದರೆ ಈ ಸಮುದಾಯಗಳು ಸಾರಾಸಗಟಾಗಿ ಜಾತಿ ಸಮೀಕ್ಷೆ ಜಾರಿಗೆ ವಿರೋಧ ಮಾಡಿಲ್ಲ. ಎಲ್ಲಾ ಸಮುಯದಲ್ಲಿ ಇರುವಂತೆ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳಲ್ಲೂ ಉದಾರಿಗಳಿದ್ದಾರೆ. ಉಳಿದಂತೆ ಸಾಮಾಜಿಕ ನ್ಯಾಯದ ವಿರೋಧಿಗಳೂ ಇದ್ದಾರೆ. ಅಂಥವರಿಗೂ ಜಾತಿ ಸಮೀಕ್ಷೆಯನ್ನು ತಡೆದ ಮತ್ತು ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಅಡ್ಡಗಾಲು ಹಾಕಿದ ಕಳಂಕ ಖಂಡಿತಾ ಸುತ್ತಿಕೊಂಡಿದೆ. ಸಮಾಜವೊಂದು ಅಭಿವೃದ್ಧಿಯಾದರೆ ಮೇಲಿರುವವರು ಮತ್ತೆ ಮೇಲೇರುತ್ತಾರೆ. ಕೆಳಗಿರುವವರು ಸ್ವಲ್ಪ ಮೇಲೇರುತ್ತಾರೆ. ಬಹುಶಃ ಜಾತಿ ಸಮೀಕ್ಷೆಯಿಂದ ಇದಕ್ಕಿಂತ ಹೆಚ್ಚಿನ ಅಥವಾ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಹಿಂದೆ ವಿರೋಧ ಮಾಡಿದ್ದ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತರು ಕೂಡ ಕಳಂಕದಿಂದ ಮುಕ್ತವಾಗಬಹುದು.

ಹೀಗೆ ಜಾತಿ ಸಮೀಕ್ಷಾ ವರದಿ ಜಾರಿಯಾಗುವುದನ್ನು ತಡೆದ, ಅಪಪ್ರಚಾರ ನಡೆಸಿದ, ಆ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರಗೊಳ್ಳಲು ಅಡ್ಡಿಪಡಿಸಿದ ಮತ್ತು ಸೂಕ್ತ ಸಂದರ್ಭದಲ್ಲಿ ಸೂಕ್ತ ಕೆಲಸ ಮಾಡದ ಎಲ್ಲರೂ ಕಳಂಕವನ್ನು ಅಂಟಿಸಿಕೊಂಡಿದ್ದಾರೆ. ಎರಡನೇ ಜಾತಿ ಸಮೀಕ್ಷೆಗೆ ಸಹಕರಿಸುವ ಮೂಲಕ ಎಲ್ಲರೂ ಕಳಂಕ ಮುಕ್ತರಾಗಬಹುದು. ಎಲ್ಲರಿಗಿಂತ ಹೆಚ್ಚು ಪಾತ್ರ ಸಿದ್ದರಾಮಯ್ಯ ಅವರದು. ಜಾರಿಯಾದರೆ ಅದರ ಹೆಚ್ಚುಗಾರಿಕೆಯಲ್ಲೂ ಅವರಿಗೆ ಹೆಚ್ಚಿನ ಪಾಲು ಸಂದಾಯವಾಗುತ್ತದೆ. ಜಾರಿಯಾಗದಿದ್ದರೆ ಕಳಂಕ ಕಟ್ಟಿಕೊಂಡೇ ರಾಜಕೀಯದಿಂದ ವಿರಮಿಸಬೇಕಾಗುತ್ತದೆ. ನಿರ್ಧಾರ ಅವರಿಗೆ ಬಿಟ್ಟದ್ದು.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X