ರಾಜಣ್ಣ ವಿರುದ್ಧ ರಾಹುಲ್ ಗಾಂಧಿ ಸಿಟ್ಟಾಗಿದ್ದೇಕೆ?

ಸಾಮಾನ್ಯವಾಗಿ ತಥಾಕಥಿತ ರಾಜಕಾರಣಿಗಳು ಶಾಸಕಾಂಗದ ಸಾಮಾಜಿಕ ಅನ್ಯಾಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ರಾಹುಲ್ ಗಾಂಧಿ ಭಿನ್ನ. ಶಾಸಕಾಂಗ ಮಾತ್ರವಲ್ಲ, ನ್ಯಾಯಾಂಗ, ಕಾರ್ಯಾಂಗ, ಶಿಕ್ಷಣ, ಉದ್ಯಮ, ಪತ್ರಿಕೋದ್ಯಮ ಮತ್ತಿತರ ಕ್ಷೇತ್ರಗಳಲ್ಲೂ ಸಾಮಾಜಿಕ ನ್ಯಾಯ ಸ್ಥಾಪಿತವಾಗಬೇಕು ಎಂದು ಸ್ಪಷ್ಟ ದನಿಯಲ್ಲಿ ಪ್ರತಿಪಾದಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಇದು ಬಹಳ ಮುಖ್ಯ ಆಯಾಮ. ಬೇರೆಲ್ಲಾ ಪ್ರಮುಖ ಮತ್ತು ನಿರ್ಣಾಯಕ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಸಾಧಿಸದಿದ್ದರೆ ರಾಜಕೀಯ ಕ್ಷೇತ್ರದಲ್ಲಿ ಗಳಿಸುವ ಸಾಮಾಜಿಕ ನ್ಯಾಯವೂ ಬಹುಕಾಲ ಉಳಿಯದು.
ಇದು ಒಂದು ಉದಾಹರಣೆಯಷ್ಟೇ. ರಾಹುಲ್ ಗಾಂಧಿ ಎತ್ತುತ್ತಿರುವ ಎಲ್ಲಾ ವಿಷಯಗಳಲ್ಲೂ ಈ ಸ್ಪಷ್ಟತೆಯನ್ನು ಕಾಣಬಹುದು. ಪ್ರಖರತೆಯನ್ನು ಗುರುತಿಸಬಹುದು. ನರೇಂದ್ರ ಮೋದಿ ಸರಕಾರವನ್ನು ‘ಸೂಟ್ ಬೂಟ್ ಕಿ ಸರಕಾರ’ ಎಂದು ಕರೆದರು. ಕಾರ್ಪೊರೇಟ್ ಕುಳಗಳಿಗೆ ಮಾರಿಕೊಂಡ ಸರಕಾರ ಎಂದು ಜರಿದರು. ಮೋದಿ ಚೌಕಿದಾರ್ ಅಲ್ಲ, ಚೋರ್ ಎಂದು ಹೇಳಿದರು. ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಾದಿಸಿದರು. ಭಾರತದ ಭೂಭಾಗವನ್ನು ಚೀನಾ ಅತಿಕ್ರಮ ಮಾಡಿಕೊಂಡಿದೆ ಎಂದು ಸಾರಿ ಹೇಳಿದರು. ಅಲ್ಲಿಂದ ಶುರುವಾಯಿತು. ಈಗ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ಪಡೆದದ್ದೇ ಮತಗಳ್ಳತನ ಮಾಡಿ ಎಂದು ಅಷ್ಟೇ ಖಚಿತವಾಗಿ ಹೇಳುತ್ತಿದ್ದಾರೆ.
ರಾಹುಲ್ ಗಾಂಧಿ ಎತ್ತಿದ ವಿಷಯಗಳನ್ನು ಮಾಧ್ಯಮಗಳು ಮಹತ್ವದವು ಎಂದು ಪರಿಗಣಿಸಲಿಲ್ಲ. ಅನ್ಯಾಯಗಳನ್ನು ಅನ್ಯಾಯವೆಂದು ನ್ಯಾಯಾಲಯವೂ ಅನುಮೋದಿಸಲಿಲ್ಲ. ಜನತಾ ನ್ಯಾಯಾಲಯ ಕೂಡ ಗಂಭೀರವಾಗಿ ಸ್ವೀಕರಿಸಲಿಲ್ಲ. ಚುನಾವಣೆಗಳಲ್ಲಿ ಸೋಲು ತಪ್ಪಲಿಲ್ಲ. ಆದರೂ ಹೀನಾಯ ಸೋಲುಗಳು ಅವರನ್ನು ಕಂಗೆಡಿಸಿದ ಕುರುಹುಗಳು ಸಿಗುತ್ತಿಲ್ಲ. ರಾಹುಲ್ ಗಾಂಧಿ ಹೊಸ ಹೊಸ ಗಹನ ವಿಷಯಗಳೊಂದಿಗೆ ಅದೇ ಹಳೆಯ ಸ್ಫೂರ್ತಿಯಿಂದ ಹಾಜರಾಗುತ್ತಿದ್ದಾರೆ. ಈಗ ಅವರಾಡುತ್ತಿರುವ ನ್ಯಾಯ, ಸಾಮಾಜಿಕ ನ್ಯಾಯ, ಸಂವಿಧಾನ ಉಳಿಸಿ ಎಂಬ ಮಾತುಗಳ ತೂಕ ಇನ್ನೂ ಜಾಸ್ತಿ.
ಇವೇ ವಿಷಯಗಳು 80ರ ದಶಕದಿಂದೀಚೆಗೆ ಬೇರಾವುದೇ ಮುಂಚೂಣಿ ನಾಯಕರಿಗೆ ಪ್ರಮುಖವಾಗಿರಲಿಲ್ಲ. ಬೇರೆಯವರನ್ನು ಬಿಡಿ, ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅವರಿಗೇ ಸಾಮಾಜಿಕ ನ್ಯಾಯ ಸ್ಥಾಪನೆಯ ಮೈಲಿಗಲ್ಲಾದ ಮಂಡಲ್ ಆಯೋಗದ ವರದಿ ಬಗ್ಗೆ ಸಹಮತ ಇರಲಿಲ್ಲ. ಲಾಲು ಪ್ರಸಾದ್ ಯಾದವ್ ಅವರಿಗೆ ಸ್ಪಷ್ಟತೆ ಇತ್ತು. ಆದರೆ ಅವರ ವ್ಯಾಪ್ತಿ ದೊಡ್ಡದಾಗಿರಲಿಲ್ಲ. ಮೃದು ಹಿಂದುತ್ವ ಪಾಲಿಸುತ್ತಾ ಮೂಲ ಆಶಯವಾದ ಜಾತ್ಯತೀತತೆಯನ್ನು ಕತ್ತುಹಿಸುಕಿ ಸಾಯಿಸಿರುವ ಕಾಂಗ್ರೆಸ್ ಪಕ್ಷದ ಒಂದುಕೂಟ ಬಹಳ ದಿನಗಳ ಕಾಲ ರಾಹುಲ್ ಗಾಂಧಿ ಅವರನ್ನೂ ಬಿಟ್ಟಿರಲಿಲ್ಲ. ಈ ಪೊರೆ ಕಳಚಿಕೊಂಡು ಹೊರಬಂದಿರುವ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮುಖಾಂತರ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಹೊರಟಿದ್ದರು. ಅದು ಯಶಸ್ವಿಯಾಗಲಿಲ್ಲ. ಆದರೂ ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಲ್ಲೆ ಎಂದು ಹೊರಟ ಅವರ ನಡೆಯನ್ನು ಅಲ್ಲಗಳೆದವರಿಲ್ಲ. ಇದೇ ರೀತಿ ಸಂವಿಧಾನ ಉಳಿಸಿ ಎಂಬ ರಾಹುಲ್ ಗಾಂಧಿ ಕರೆಗೆ ಜನ ಭಾರೀ ಮನ್ನಣೆ ನೀಡಿಲ್ಲ. ಹಾಗೆಯೇ ನಿರ್ಲಕ್ಷ್ಯ ಮಾಡುವುದಕ್ಕೂ ಸಾಧ್ಯವಾಗಲಿಲ್ಲ.
ರಾಹುಲ್ ಗಾಂಧಿ ಮತ್ತೆ ಮತ್ತೆ ಹೇಳುತ್ತಿರುವ ಸಂವಿಧಾನ ಉಳಿಸಿಕೊಳ್ಳಬೇಕು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂಬ ವಿಷಯಗಳು ಕಾಲದ ಅನಿವಾರ್ಯ. ಈ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟತೆಯಿಂದ ಮಾತನಾಡುತ್ತಿದ್ದಾರೆ. ಆದರೆ ಅವರ ಪಕ್ಷವು ಅದೇ ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ. ಮೊದಲು ಮನೆಯನ್ನು ಸರಿಮಾಡಿಕೊಂಡು ಆಮೇಲೆ ಊರು-ದೇಶ ನೋಡಬೇಕು ಎಂದು ಹೇಳುವಂತೆ ರಾಹುಲ್ ಗಾಂಧಿ ಮೊದಲಿಗೆ ಪಕ್ಷದ ಮುಂಚೂಣಿ ಘಟಕಗಳಿಗೆ ಪ್ರಜಾತಂತ್ರ ಮಾರ್ಗದ ಮೂಲಕ ಆಯ್ಕೆ ಮಾಡಲು ಪ್ರಾರಂಭಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆಯನ್ನು ಪರಿಚಯಿಸಿದರು. ಉದ್ದೇಶ ಈಡೇರಲಿಲ್ಲ. 2014ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತದ್ದರಿಂದ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು ಎಂದು ಎ.ಕೆ. ಆಂಟನಿ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಆತ್ಮಾವಲೋಕನ ಆಗಲಿಲ್ಲ. ಬಳಿಕ ಸಾಲು ಸಾಲು ಚುನಾವಣೆಗಳನ್ನು ಸೋತಾಗಲು ಯಾರನ್ನೂ ಉತ್ತರದಾಯಿ ಮಾಡಲಿಲ್ಲ.
ಕಾಂಗ್ರೆಸ್ ಬದಲಾಗಬೇಕಾದ ಅಗತ್ಯ ಬಹಳ ಇದೆ. ಬದಲಾಗಬೇಕಿರುವ ಬಗೆ ಹೇಗೆ ಎಂದು ಚರ್ಚಿಸಲೆಂದೇ ಉದಯಪುರದಲ್ಲಿ ಮೂರು ದಿನಗಳ ಕಮ್ಮಟ ಮಾಡಲಾಯಿತು. ಕೆಲ ನಿರ್ಣಯಗಳನ್ನೂ ಕೈಗೊಳ್ಳಲಾಯಿತು. ಆದರೆ ಒಂದೇ ಒಂದು ನಿರ್ಣಯವನ್ನು ಪಾಲಿಸಲಿಲ್ಲ. ಕಾಂಗ್ರೆಸ್ ಪಕ್ಷದ ಈ ಎಡಬಿಡಂಗಿತನಕ್ಕೆ ಕರ್ನಾಟಕದ ವಿಷಯದಲ್ಲೂ ಎರಡು-ಮೂರು ಉದಾಹರಣೆಗಳಿವೆ. ಸಿದ್ಧವಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ (ಜಾತಿಗಣತಿ) ವರದಿ ಜಾರಿಗೆ ವಿರೋಧಿಸಿದ್ದ ಪಟ್ಟಭದ್ರ ಹಿತಾಸಕ್ತಿಗಳು ಯಾವುವು ಎನ್ನುವುದು ಎಲ್ಲರಿಗೂ ಗೊತ್ತು. ಅವುಗಳ ಒತ್ತಡಕ್ಕೆ ಮಣಿದು ಸಾಮಾಜಿಕ ನ್ಯಾಯ ಮತ್ತೊಂದು ಮಜಲು ಮುಟ್ಟಲು ಸಾಧನವಾಗಬಲ್ಲ ಜಾತಿಗಣತಿ ವರದಿ ಜಾರಿಗೆ ಸ್ವತಃ ಹೈಕಮಾಂಡ್ ನಾಯಕರೇ ತಡೆ ಹಾಕಿದರು.
ತೀರಾ ಇತ್ತೀಚಿನ ಉದಾಹರಣೆ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದ ಪ್ರಹಸನ. ರಾಜಣ್ಣ ಅವರ ಮಾತು ಅಗತ್ಯಕ್ಕಿಂತ ಜಾಸ್ತಿಯಾಗಿತ್ತು ಎನ್ನುವುದರಲ್ಲಿ ಅನುಮಾನಗಳೇ ಇಲ್ಲ. ಆದರೂ ಅವರನ್ನು ವಜಾ ಮಾಡಿದ ರಾಹುಲ್ ಗಾಂಧಿ ಅವರ ಕ್ರಮ ಪ್ರಜಾತಂತ್ರದ ಮಾರ್ಗವಾಗಿರಲಿಲ್ಲ ಎನ್ನುವ ಆಕ್ಷೇಪಗಳು ಕೇಳಿಬರುತ್ತಿವೆ. ಸದ್ಯೋಭವಿಷತ್ತಿನಲ್ಲಿ ಶಾಸಕರು ಮಾತ್ರ ಪ್ರಜಾತಾಂತ್ರಿಕವಾಗಿ ಆಯ್ಕೆಯಾಗುತ್ತಾರೆ. ಯಾರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಳ್ಳಬೇಕೆನ್ನುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಸಂಪುಟ ರಚನೆಯಾಗುವುದು ಮಾತ್ರ ಹೈಕಮಾಂಡ್ ಸೂಚನೆಯಂತೆ. ರಾಜಣ್ಣ ಅಥವಾ ಮತ್ಯಾರನ್ನೇ ಆಗಲಿ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದೇ ಪ್ರಜಾತಾಂತ್ರಿಕ ಮಾರ್ಗದದಿಂದ ಅಲ್ಲವಾದುದರಿಂದ, ಅವರನ್ನು ರಾಜೀನಾಮೆ ಕೊಡಿ ಅಂತಾ ಕೇಳುವುದು ಅಥವಾ ವಜಾ ಮಾಡುವುದು ಪ್ರಜಾತಾಂತ್ರಿಕವಾಗಿರಬೇಕು ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ.
ಕಾಂಗ್ರೆಸ್‌ಗೆ ಶಾಪವಾಗಿರುವುದೇ ಆ ಪಕ್ಷದ ‘ಸೋಮಾರಿ ಸಿದ್ಧಾಂತ’. ಅದಕ್ಕೆ ಹೊರತಾಗಿ ತಪ್ಪು ಕಂಡ ತಕ್ಷಣವೇ ಕ್ರಮ ಕೈಗೊಂಡಿರುವುದು ಹಲವು ನಾಯಕರಿಗೆ ಎಚ್ಚರಿಕೆಯ ಸಂದೇಶ. ಕಾಂಗ್ರೆಸ್ ಬದಲಾಗುತ್ತಿರುವುದರ ಸಂಕೇತ. ಆದರೂ ರಾಜಣ್ಣ ಅವರನ್ನು ವಜಾ ಮಾಡಿದ್ದು Practical Politics ಅಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಮತದಾರರೇ ಆಗಿದ್ದ ಪರಿಶಿಷ್ಟ ಪಂಗಡದವರು ಕ್ರಮೇಣ ಆ ಪಕ್ಷದ ತಾರತಮ್ಯದ ವಿರುದ್ಧ ಸೆಟೆದು ಬಿಜೆಪಿ ಕಡೆ ಹೊರಳಿದ್ದರು. ಬಿಜೆಪಿ ಕೂಡ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಕನಸು ಬಿತ್ತಿತ್ತು. ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಕಣಕ್ಕಿಳಿಸಲು ಬಳಸಿಕೊಂಡಿತು. ನಂತರ ಉಪ ಮುಖ್ಯಮಂತ್ರಿ ಹುದ್ದೆ ನೀಡಲಿಲ್ಲ. ಮೇಲಾಗಿ ರಾಮುಲು ಬಳಿ ಇದ್ದ ಆರೋಗ್ಯ ಖಾತೆಯನ್ನೂ ಕಿತ್ತುಕೊಳ್ಳಲಾಯಿತು. ತೀರಾ ಇತ್ತೀಚೆಗೆ ಸಂಡೂರು ಉಪಚುನಾವಣೆಯಲ್ಲಿ ಟಿಕೆಟ್ ಅನ್ನೂ ನಿರಾಕರಿಸಲಾಯಿತು. ತಮ್ಮನ್ನು ಬಳಸಿ ಬಿಸಾಡಿದ ಬಿಜೆಪಿ ಬಗ್ಗೆ ಬೇಸರಗೊಂಡಿದ್ದ ಪರಿಶಿಷ್ಟ ಪಂಗಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆ ವಾಲಿತು. ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಪಂಗಡದ ಮೂವರನ್ನು ಮಂತ್ರಿ ಮಾಡಿತ್ತು.
ಇನ್ನೊಂದೆಡೆ ಶ್ರೀರಾಮುಲು ಸೋತು ಮೂಲೆ ಸೇರಿದ್ದರು. ಸತೀಶ್ ಜಾರಕಿಹೊಳಿ ಪರಿಶಿಷ್ಟ ಪಂಗಡದ ನಾಯಕನಾಗಿ ಹೊರಹೊಮ್ಮಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಇನ್ನು ಪರಿಶಿಷ್ಟ ಪಂಗಡದ ಮತಗಳು ಕಟ್ಟಿಟ್ಟ ಬುತ್ತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಹೆಸರು ತಳುಕಿಹಾಕಿಕೊಂಡು ಅವರು ರಾಜೀನಾಮೆ ನೀಡಬೇಕಾಯಿತು. ಈಗ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ. ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಪ್ರಕರಣದಲ್ಲೂ ಹೀಗೆ ಆಗಿತ್ತು. ಹಾಸಿಗೆ ಹಿಡಿದಿದ್ದ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಕ್ರಮ ಸರಿಯೇ ಆಗಿತ್ತು. ಆದರೆ ಪದಚ್ಯುತಗೊಳಿಸಿದ ಪರಿ ಸರಿಯಾಗಿರಲಿಲ್ಲ. ವೀರೇಂದ್ರ ಪಾಟೀಲ್ ಪ್ರಕರಣದಿಂದ ದೂರ ಸರಿದ ಲಿಂಗಾಯತ ಸಮುದಾಯದ ಮತಗಳು ಈಗಲೂ ಇಡಿಯಾಗಿ ವಾಪಸ್ ಕಾಂಗ್ರೆಸ್‌ಗೆ ಮರಳಿಲ್ಲ. ಈಗ ರಾಜಣ್ಣ ಅವರನ್ನು ವಜಾ ಮಾಡಿರುವುದರಿಂದ ಪರಿಶಿಷ್ಟ ಪಂಗಡವು ಕಾಂಗ್ರೆಸ್ ಬಗ್ಗೆ ಮುನಿಯಬಹುದು ಎಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕವಾಗಿ ವಜಾ ಆದ ಬಳಿಕ ರಾಜಣ್ಣ ನೀಡಿದ ಮೊದಲ ಪ್ರತಿಕ್ರಿಯೆಯೇ ‘ನನ್ನ ವಿರುದ್ದ ಷಡ್ಯಂತ್ರ’ ಮಾಡಲಾಗಿದೆ ಎಂದು. ಷಡ್ಯಂತ್ರವಲ್ಲದೆ ಪವಾಡವಾಗಿರಲು ಸಾಧ್ಯವೇ ಅಲ್ಲ. ದಿಲ್ಲಿ ಮೂಲಗಳ ಪ್ರಕಾರ ಕಳೆದ ಶನಿವಾರ ಸಂಜೆಯೇ ರಾಜಣ್ಣ ವಿರುದ್ಧ ಹೈಕಮಾಂಡಿಗೆ ದೂರು ಹೋಗಿತ್ತು. ಅಷ್ಟು ಮಾತ್ರವಲ್ಲ ರಾಜಣ್ಣ ಮಾತನಾಡಿದ್ದ ವೀಡಿಯೊಗಳನ್ನು ರಾಷ್ಟ್ರೀಯ ಮಾಧ್ಯಮಗಳಿಗೆ ಕಳುಹಿಸಿಕೊಡಲಾಯಿತು ಮತ್ತು ಹೈಪ್ ಆಗುವಂತೆ ಮುತುವರ್ಜಿ ವಹಿಸಲಾಗಿತ್ತು. ಆಗಲೇ ವಿಷಯ ಇಂಡಿಯಾ ಮೈತ್ರಿ ಕೂಟದ ನಾಯಕರ ಕಿವಿಗೆ ಬಿದ್ದದ್ದು.
ವಾಸ್ತವದಲ್ಲಿ ರಾಹುಲ್ ಗಾಂಧಿ ಸಿಟ್ಟಾಗಿರುವುದು ಇಂಡಿಯಾ ಮೈತ್ರಿ ಕೂಟದ ನಾಯಕರ ಮಾತಿನಿಂದಲ್ಲ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎನ್ನುವುದನ್ನು ಸಾಕ್ಷ್ಯಗಳ ಸಮೇತ ಪತ್ತೆ ಹಚ್ಚಲು, ಪ್ರತೀ ಮತದಾರರ ಪಟ್ಟಿಯನ್ನು ಹೋಲಿಸಿ ನೋಡಿ ಅಂತಿಮ ತೀರ್ಮಾನಕ್ಕೆ ಬರಲು ರಾಹುಲ್ ಗಾಂಧಿ ಮತ್ತವರ ತಂಡದವರು ಕನಿಷ್ಠ ಆರು ತಿಂಗಳು ಶ್ರಮಪಟ್ಟಿದ್ದಾರೆ. ಅವರ ಪರಿಶ್ರಮ ರಾಜಣ್ಣ ಅವರ ಒಂದೇ ಒಂದು ಮಾತಿನಿಂದ ಹೊಳೆಯಲ್ಲಿ ಹುಣಸೆಹಣ್ಣು ತೇದಂತಾಗಿದೆ. ಬಿಹಾರದಲ್ಲಿ ಕಾಂಗ್ರೆಸ್ ಕಿರಿಯ ಮೈತ್ರಿಪಕ್ಷ. ಆದರೂ ಈ ಸಲ ಅಲ್ಲಿ ಚುನಾವಣೆಯ ನಿರೂಪಣೆ ರೂಪಿಸುತ್ತಿರುವುದು ಕಾಂಗ್ರೆಸ್. ಕಾಂಗ್ರೆಸ್ ಎನ್ನುವುದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ. ಅಲ್ಲೂ ಕೂಡ ರಾಜಣ್ಣ ಹೇಳಿಕೆ ಬಿಜೆಪಿಗೆ ರಾಹುಲ್ ಗಾಂಧಿ ವಿರುದ್ಧ ಹೂಡಲು ಸಿಕ್ಕಿರುವ ಪ್ರಬಲ ಅಸ್ತ್ರವಾಗಿದೆ.
ಹೈಕಮಾಂಡ್ ಪ್ರಬಲವಾಗುತ್ತಿದ್ದಂತೆ ಸರ್ವಾಧಿಕಾರಿ ಧೋರಣೆಯನ್ನು ಮೈಗೂಡಿಸಿಕೊಳ್ಳುತ್ತಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಇತ್ತೀಚೆಗೆ ಎಐಸಿಸಿಯೇ ವಿಧಾನ ಪರಿಷತ್ ನಾಮ ನಿರ್ದೇಶನ ಸ್ಥಾನಕ್ಕೆ ನಾಲ್ವರ ಹೆಸರನ್ನು ಅಂತಿಮಗೊಳಿಸಿತ್ತು. ಇನ್ನೇನು ಆ ಹೆಸರುಗಳನ್ನು ಮುಖ್ಯಮಂತ್ರಿ ರಾಜಭವನಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ತಡೆಹಿಡಿಯಲಾಯಿತು. ಅಂದರೆ ಮುಖ್ಯಮಂತ್ರಿಯ ಕೈ ಕಟ್ಟಿಹಾಕಲಾಗಿತ್ತು. ಇದು ಕೂಡ ಮುಖ್ಯಮಂತ್ರಿ ಯಾದವರಿಗೆ ತಮ್ಮ ವಿವೇಚನೆಗೆ ತಕ್ಕಂತೆ ಸರಕಾರ ನಡೆಸಲು ಬಿಡದೆ ಅಂಕುಶ ಹಾಕುವ ಮಾದರಿಯೇ. ನಾಮ ನಿರ್ದೇಶನಕ್ಕೆ ಹೆಸರುಗಳನ್ನು ಆಯ್ಕೆ ಮಾಡುವಾಗ ಕಲೆ, ವಿಜ್ಞಾನ, ಶಿಕ್ಷಣ, ಪತ್ರಿಕೋದ್ಯಮ, ಸಮಾಜ ಸೇವೆ ಕ್ಷೇತ್ರಗಳನ್ನು ಪ್ರತಿನಿಧಿಸಬೇಕೆಂಬ ನಿಯಮವೇ ಇದೆ. ರಾಜ್ಯಾಂಗದ ಈ ಉದಾತ್ತ ಉದ್ದೇಶವನ್ನೇ ಗಾಳಿಗೆ ತೂರಿ, ಪಕ್ಷದ ಕಾರ್ಯಕರ್ತರಿಗೆ ಕೊಡಿ ಎನ್ನುವ ಕೂಗು ಎದ್ದಿತು. ಅಂತಹ ಕೂಗುಮಾರಿಗಳ ಬಾಯಿಗೆ ಬೀಗ ಹಾಕಬೇಕಾಗಿದ್ದ ಹೈಕಮಾಂಡ್ ಮೌನವಾಗೇ ಇತ್ತು. ಇದು ಸಂವಿಧಾನವನ್ನು-ರಾಜ್ಯಾಂಗವನ್ನು ಕಾಪಾಡುವ ರೀತಿಯೇ? ಸಂವಿಧಾನದ ಪ್ರತಿ ಹಿಡಿದು ದೇಶ ಸುತ್ತುವ ರಾಹುಲ್ ಗಾಂಧಿ ಇಂಥ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸದಿದ್ದರೆ ಕಾಂಗ್ರೆಸ್‌ನ ಒಂದುಕೂಟ ಅವರನ್ನು ಆಪೋಶನ ತೆಗೆದುಕೊಳ್ಳದೆ ಬಿಡದು.
‘ಯಡಿಯೂರಪ್ಪ ಅವರನ್ನು ಗೆಲ್ಲಿಸಿ’ ಎಂದು ಕರೆಕೊಟ್ಟಿದ್ದ ಮತ್ತು ಪಕ್ಷದ ಪ್ರಣಾಳಿಕೆಯಲ್ಲೇ ಹೇಳಿದ್ದರೂ ಜಾತಿಗಣತಿಯನ್ನು ವಿರೋಧ ಮಾಡಿದ ಶಾಮನೂರು ಶಿವಶಂಕರಪ್ಪ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳುವುದೇ? ತನ್ನದೇ ಪಕ್ಷದ ಸರಕಾರ ಎಸ್‌ಐಟಿ ನೇಮಿಸಿ ತನಿಖೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ‘ತಾನು ಆರೋಪಿ ಪರ’ ಎಂದು ಘಂಟಾಘೋಷವಾಗಿ ಶಾಸನ ಸಭೆಯಲ್ಲಿ ಎದೆ ಉಬ್ಬಿಸಿಕೊಂಡು ಹೇಳಿದ ಡಿ.ಕೆ. ಶಿವಕುಮಾರ್ ಮೇಲೆ ಕ್ರಮ ಕೈಗೊಳ್ಳುವುದೇ? ಪ್ರಬಲ ಸಮುದಾಯಕ್ಕೆ ಒಂದು, ಪರಿಶಿಷ್ಟ ಪಂಗಡಕ್ಕೆ ಇನ್ನೊಂದು ನ್ಯಾಯವೇ? ಇದುವೇನಾ ರಾಹುಲ್ ಗಾಂಧಿ ಅವರು ಪ್ರತಿಪಾದಿಸುವ ಸಾಮಾಜಿಕ ನ್ಯಾಯ? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ರಾಜಣ್ಣ ವಜಾ ಮಾಡುವ ಮೂಲಕ ಹೇಗೂ ಕಾಂಗ್ರೆಸ್ ಆ್ಯಕ್ಷನ್ ಮೋಡ್‌ಗೆ ಬಂದಿದೆ.
ರಾಜಣ್ಣಗೆ ಸಿದ್ದು ಹೇಳಿದ್ದೇನು?
ವಜಾ ಬಳಿಕ ರಾಜಣ್ಣ ಹೋಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ರಾಜಣ್ಣ ಅವರನ್ನು ಸಮಾಧಾನ ಪಡಿಸಲು ಸಿದ್ದರಾಮಯ್ಯ ಹೇಳಿದ ಒಂದೇ ಮಾತು ‘ಆ ಘಟನೆಯನ್ನು ಮರೆತುಬಿಡಪ್ಪ. ನಾನು ಏನನ್ನು ಮಾಡೋಕಾಗಲಿಲ್ಲ’ ಎಂದು. ಆ ನಂತರ ಇಬ್ಬರೂ ಕೆಲಕಾಲ ಮೌನಕ್ಕೆ ಜಾರಿದರು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಮಾತು ಮತ್ತು ಮೌನ
‘ಸ್ಥಳೀಯ ನಾಯಕರು ಮತದಾರರ ಪಟ್ಟಿ ಪರಿಷ್ಕರಣೆ ವೇಳೆಯೇ ಎಚ್ಚೆತ್ತುಕೊಳ್ಳಬೇಕಾಗಿತ್ತು. ಇದು ನಮ್ಮ ತಪ್ಪು ಆದರೆ ಇದಕ್ಕೋಸ್ಕರ ರಾಹುಲ್ ಗಾಂಧಿ ಇಲ್ಲಿಯವರೆಗೆ ಬರಬೇಕಾಗಿದೆ. ನಮ್ಮದೇ ಸರಕಾರ ಇದ್ದಾಗ ಗಮನ ಹರಿಸದ ಸ್ಥಳೀಯ ನಾಯಕರಿಗೆ ನಾಚಿಕೆಯಾಗಬೇಕು ಎಂದಿದ್ದರು. ಅರ್ಧ ತುಣುಕನ್ನು ಕಟ್ ಮಾಡಿ ದಿಲ್ಲಿಗೆ ರವಾನಿಸಲಾಗಿದೆ’ ಎಂದು ರಾಜಣ್ಣ ಆಪ್ತರು ಹೇಳುತ್ತಿದ್ದಾರೆ. ಕಡೆಯಪಕ್ಷ ವಜಾ ಆದ ಮೇಲಾದರೂ ರಾಜಣ್ಣ ಇದನ್ನು ವಿವರಿಸಿ ಹೇಳಬೇಕು. ರಾಜಣ್ಣ ಸುಮ್ಮನಿರಬೇಕಾಗಿದ್ದ ಸಂದರ್ಭದಲ್ಲಿ ಮಾತನಾಡಿ ಮಾತನಾಡಬೇಕಾದ ಸಮಯದಲ್ಲಿ ಮೌನವಾಗಿದ್ದಾರೆ. ಮಾತು-ಮೌನಗಳ ನಡುವಿನ ಅಂತರ ಅರಿಯದಿದ್ದರೆ ಹೀಗಾಗಿಬಿಡುತ್ತದೆ.
ಆಫ್ ದಿ ರೆಕಾರ್ಡ್
ರಾಜಣ್ಣ ಅವರಿಂದ ತೆರವಾಗಿರುವ ಸಹಕಾರ ಖಾತೆಗೆ ಈಗ ಬೇಡಿಕೆ ಹೆಚ್ಚಾಗಿದೆ. ಬಹಳ ಕುತೂಹಲಕಾರಿ ಸಂಗತಿ ಎಂದರೆ ಸತೀಶ್ ಜಾರಕಿಹೊಳಿ ಕೂಡ ಸಹಕಾರ ಖಾತೆ ಕೇಳುತ್ತಿದ್ದಾರಂತೆ.