Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಸಿದ್ದು ‘ನಾನೇ 5 ವರ್ಷ ಸಿಎಂ’...

ಸಿದ್ದು ‘ನಾನೇ 5 ವರ್ಷ ಸಿಎಂ’ ಎಂದಿದ್ದೇಕೆ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ7 July 2025 9:58 AM IST
share
ಸಿದ್ದು ‘ನಾನೇ 5 ವರ್ಷ ಸಿಎಂ’ ಎಂದಿದ್ದೇಕೆ?

ಅದು ಸಿದ್ದರಾಮಯ್ಯ ಸರಕಾರದ ಮೊದಲ ಅವಧಿ. ಅಸೂಯೆ ಪಡುವುದನ್ನು ತಮ್ಮ ಜನ್ಮ ಸಿದ್ಧ ಹಕ್ಕು ಎಂದೇ ಭಾವಿಸಿದ್ದ ಕೆಲ ಮೂಲ ಕಾಂಗ್ರೆಸಿಗರು ಬಂಡಾಯದ ಬಾವುಟ ಹಾರಿಸಲು ಸಿದ್ಧಗೊಂಡಿದ್ದರು. ಅವರ ಬಂಡಾಯಕ್ಕೆ ಸಕಾರಣಗಳೂ ಇರಲಿಲ್ಲ. ಸ್ಪಷ್ಟತೆಯೂ ಇರಲಿಲ್ಲ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕೆಂಬ ಏಕಮಾತ್ರ ಗುರಿ ಇತ್ತು. ಪರಿಸ್ಥಿತಿ ಕೈ ಮೀರುತ್ತಿದೆ ಎನ್ನುವುದನ್ನು ಗ್ರಹಿಸಿದ್ದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಭೇಟಿಗಾಗಿ ದಿಲ್ಲಿಗೆ ಬಂದಿದ್ದರು. ಕರ್ನಾಟಕ ಭವನದಲ್ಲಿ ಪತ್ರಕರ್ತರ ಜೊತೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದರು. ಅವರ ಕೆಲ ಆಪ್ತ ಸಚಿವರು-ಶಾಸಕರೂ ಇದ್ದರು. ಗಂಟೆ ಗಟ್ಟಲೆ ಹರಟೆ. ಆಪ್ತರು ‘ಸಾರ್ ನೀವು ಖಡಕ್ ಆಗಬೇಕು, ಅವರಿಗೆಲ್ಲಾ ಸರಿಯಾದ ಪಾಠ ಕಲಿಸಬೇಕು’ ಎಂದು ಆಗ್ರಹಿಸುತ್ತಿದ್ದರು. ಪತ್ರಕರ್ತರು ತಮ್ಮದೇ ಶೈಲಿಯಲ್ಲಿ ಸಿದ್ದರಾಮಯ್ಯ ಅವರ ಬಾಯಿ ಬಿಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಸಿದ್ದರಾಮಯ್ಯ ಇಲ್ಲಿ ನಡೆಯುತ್ತಿರುವ ಮಾತುಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಪಕೋಡ, ಖಾರ ಮಂಡಕ್ಕಿ, ಕಾಫಿ ಸವಿಯುತ್ತಿದ್ದರು. ಅವರು ನೀಡಿದ ಉತ್ತರವೂ ಹಾಗೆ ಇತ್ತು. ಎಲ್ಲರೂ ಬಂಡಾಯ, ಭಿನ್ನಮತ, ಅಸಮಾಧಾನ, ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯತೆಯ ಕೊರತೆ ಎಂಬಿತ್ಯಾದಿ ಘನ ವಿಷಯಗಳ ಬಗ್ಗೆ ಹೇಳಿದರೆ ಸಿದ್ದರಾಮಯ್ಯ ‘ನನಗೆ ವೀರ ಮಕ್ಕಳ ಕುಣಿತ ಬರುತ್ತೆ, ಆದರೆ ಜಾತ್ರೆಯಲ್ಲಿ ಮಾತ್ರ ಕುಣಿಯುವುದು’ ಎಂದು ಮಾತುಕತೆಗೆ ಮಂಗಳ ಹಾಡಿ ಎದ್ದು ಹೋದರು.

ಸ್ವಲ್ಪ ದಿನಗಳಲ್ಲಿ ಸಂಪುಟ ಪುನರ್ ರಚನೆಯಾಯಿತು. ಕೆಲವರು ಮನೆಗೆ ಹೋದರು, ಕೆಲವರು ಬಾಯಿ ಮುಚ್ಚಿಕೊಂಡರು. ಸಿದ್ದರಾಮಯ್ಯ ಸಿಎಂ ಆಗಿರುವುದು ಇನ್ನೂ ಮೂರೇ ತಿಂಗಳು ಎಂದು ಹೇಳುತ್ತಿದ್ದ ನಾಯಕರೇ ‘ಸಿದ್ದರಾಮಯ್ಯ ಅವರೇ ಸರಿ’ ಎಂದು ಷರಾ ಬರೆದರು. ಸಿದ್ದರಾಮಯ್ಯ ಐದು ವರ್ಷ ಪೂರೈಸಿದರು. ಈಗ ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ವೀರ ಮಕ್ಕಳ ಕುಣಿತ ಆರಂಭಿಸಿದಂತೆ ಕಾಣುತ್ತಿದೆ. ಅವರ ಪ್ರಕಾರ ಈಗ ಜಾತ್ರೆಯ ಸಮಯ ಇರಬಹುದು. ಪರಿಣಾಮವಾಗಿ 5 ವರ್ಷಕ್ಕೂ ನಾನೇ ಮುಖ್ಯಮಂತ್ರಿ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ‘ಮುಖ್ಯಮಂತ್ರಿ ಬದಲಾವಣೆ ವಿಷಯ ಹೈಕಮಾಂಡಿಗೆ ಬಿಟ್ಟಿದ್ದು’ ಎಂದು ಹೇಳಿದ ಮರುದಿನವೇ ಹೊಸ ವರಸೆ ತೋರಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಒಪ್ಪಂದದ ವಿಷಯ ಚರ್ಚೆಯಾಗಿದ್ದು ಇದೇ ಮೊದಲೇನಲ್ಲ. ದಿಲ್ಲಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಆದಾಗಲೇ ಮೊಳಕೆ ಯೊಡೆದಿತ್ತು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಅಖೈರಾಗಿ ಕೆ.ಸಿ. ವೇಣುಗೋಪಾಲ್ ಹೈಕಮಾಂಡ್ ನಿರ್ಧಾರವನ್ನು ಪ್ರಕಟಿಸಿದ ಮರುದಿನವೇ ಇನ್ನೊಬ್ಬ ಹೈಕಮಾಂಡ್ ಪ್ರತಿನಿಧಿ ರಣದೀಪ್ ಸಿಂಗ್ ಸುರ್ಜೆವಾಲಾ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂಬ ಸುದ್ದಿಯನ್ನು ‘ಪ್ಲಾಂಟ್’ ಮಾಡಿಸಿದರು. ಸಿದ್ದರಾಮಯ್ಯ ಪರ ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್ ಪರ ರಣದೀಪ್ ಸಿಂಗ್ ಸುರ್ಜೆವಾಲಾ ಎನ್ನುವುದು ಎಲ್ಲರಿಗೂ ಗೊತ್ತು. ಸುರ್ಜೆವಾಲಾ ಮೇಲೆ ಯಾವ ರೀತಿಯ ‘ಒತ್ತಡ’ ಇತ್ತು ಎನ್ನುವುದು ಕೆಲವರಿಗೆ ಮಾತ್ರ ಗೊತ್ತು.

ಅದಾದ ಮೇಲೆ ಅಧಿಕಾರ ಹಂಚಿಕೆಯ ಒಪ್ಪಂದದ ವಿಷಯ ಆಗಾಗ ಹುಟ್ಟಿ ಹುಟ್ಟಿ ಸಾಯುತ್ತಿತ್ತು. ಗಂಭೀರ ಸ್ವರೂಪ ಪಡೆದುಕೊಳ್ಳಲು ಶುರುವಾಗಿದ್ದು ತೀರಾ ಇತ್ತೀಚೆಗೆ. ಇನ್ನು ಸುಮ್ಮನೆ ಕೂತರೆ ಅಧಿಕಾರ ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ವಿರೋಧಿ ಬಣ ಸಕ್ರಿಯ ಕಾರ್ಯಾಚರಣೆಗಿಳಿದಾಗ ಮತ್ತು ಇನ್ನು ಸುಮ್ಮನೆ ಕೂತರೆ ಅಧಿಕಾರವನ್ನು ಉಳಿಸಿಕೊಳ್ಳಲಾಗದು ಮತ್ತು ಇರುವ ಅಧಿಕಾರವನ್ನೂ ಸರಿಯಾಗಿ ಚಲಾಯಿಸಲೂ ಆಗದು ಎಂದು ಸಿದ್ದರಾಮಯ್ಯ ಪಡೆ ಕೂಡ ಅಖಾಡ ಪ್ರವೇಶಿಸಿದಾಗ.

ತಾಳ್ಮೆ ಪರೀಕ್ಷೆಗಿಳಿದು ಕೆಟ್ಟ ಹೈಕಮಾಂಡ್!

ಎಡಬಿಡಂಗಿತನಕ್ಕೆ, ಸೋಮಾರಿತನಕ್ಕೆ, ಬೇಜವಾಬ್ದಾರಿತನಕ್ಕೆ ಅತ್ಯುತ್ತಮ ಉದಾಹರಣೆ ಕಾಂಗ್ರೆಸ್ ಹೈಕಮಾಂಡ್. ಒಂದೆಡೆ ಮುಖ್ಯಮಂತ್ರಿ ಯಾರು ಎಂದು ಹೇಳಿತು. ಆದರೆ ಎಲ್ಲಿಯವರೆಗೆ ಎಂದು ಹೇಳಲಿಲ್ಲ. ಇನ್ನೊಂದೆಡೆ ಡಿ.ಕೆ. ಶಿವಕುಮಾರ್ ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯುತ್ತಾರೆ ಎಂದು ಹೇಳಿತು. ಅದರಂತೆ ಚುನಾವಣೆ ಬಳಿಕ ತನ್ನದೇ ನಿರ್ಧಾರದ ಪ್ರಕಾರ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಲಿಲ್ಲ. ಸಂಘಟನೆಗೂ ಒತ್ತುಕೊಡಲಿಲ್ಲ.

ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಿ ಎಂಬ ದೊಡ್ಡ ಕೂಗಿದೆ. ಈ ಪೈಕಿ ಸಿದ್ದರಾಮಯ್ಯ ಬೆಂಬಲಿಗರ ದನಿಯೇ ದೊಡ್ಡದಾಗಿದೆ. ಇದನ್ನು ಹೈಕಮಾಂಡ್ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಕೂಡ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡುತ್ತಿಲ್ಲ. ಸರಕಾರದಲ್ಲಿ ಹೊಸತನ ತರಬೇಕು ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ಹೈಕಮಾಂಡ್ ಎದುರು ಸಂಪುಟ ಪುನರ್ ರಚನೆಯ ಪ್ರಸ್ತಾಪವನ್ನಿಟ್ಟಿರಬಹುದು. ಅದಕ್ಕೂ ಸೊಪ್ಪು ಹಾಕಿಲ್ಲ. ಅಂತಿಮಗೊಂಡಿರುವ ವಿಧಾನ ಪರಿಷತ್ ಸದಸ್ಯರ ಹೆಸರನ್ನು ರಾಜಭವನಕ್ಕೆ ಕಳುಹಿಸಲು ಬಿಟ್ಟಿಲ್ಲ. ಜಾತಿ ಗಣತಿ ವರದಿ ಜಾರಿ ಮಾಡಲು ಅನುಮತಿ ನೀಡಿಲ್ಲ. ಏಕೆ ಜಾರಿ ಮಾಡಬಾರದೆಂದು ಸಕಾರಣವನ್ನೂ ನೀಡಿಲ್ಲ. ಹೀಗೆ ಹಂತ ಹಂತವಾಗಿ ಸಿದ್ದರಾಮಯ್ಯ ಅವರನ್ನು ಹಿಂದಕ್ಕೆ ತಳ್ಳಿದ ಹೈಕಮಾಂಡ್ ಇತ್ತೀಚೆಗೆ ಬಿ.ಆರ್. ಪಾಟೀಲ್ ಮತ್ತಿತರರು ಸರಕಾರದ ವಿರುದ್ಧ ಮಾತನಾಡಲು ಶುರುಮಾಡಿದಾಗ ‘ಶಾಸಕಾಂಗ ಪಕ್ಷದ ಸಭೆ ಕರೆದು ಮಾತನಾಡಿ’ ಎಂದು ಮುಖ್ಯಮಂತ್ರಿಗೆ ಹೇಳುವ ಬದಲು ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಬೆಂಗಳೂರಿಗೆ ಕಳುಹಿಸಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಯಿತು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕರು ನಿರ್ಧರಿಸಲಿ ಎಂದು ಪ್ರತಿಪಾದಿಸುವ ಸಿದ್ದರಾಮಯ್ಯ ಅವರಿಗೆ ‘ನಿಮ್ಮ ವಿರುದ್ಧ ಶಾಸಕರು ಅಸಮಾಧಾನಗೊಂಡಿದ್ದಾರೆ’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಲು ಮುಂದಾಯಿತು.

ಇಷ್ಟೇ ಆಗಿದ್ದಿದ್ದರೆ ಬಹುಶಃ ಸಿದ್ದರಾಮಯ್ಯ ‘ನಾನೇ 5 ವರ್ಷ ಸಿಎಂ’ ಎಂದು ಗುಟುರು ಹಾಕುತ್ತಿರಲಿಲ್ಲವೇನೋ. ಯಾವಾಗ ಮಲ್ಲಿಕಾರ್ಜುನ ಖರ್ಗೆ ಅವರು ‘ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡಿಗೆ ಬಿಟ್ಟಿದ್ದು’ ಎಂದು ಹೇಳಿದರೋ ಆಗ ಸಿದ್ದರಾಮಯ್ಯ ಅವರನ್ನು ಗೋಡೆ ಅಂಚಿಗೆ ತಳ್ಳಿದಂತಾಗಿತ್ತು.

ಏಕೆಂದರೆ ಈಗ ಯಾವ ಆಯಾಮದಿಂದಲೂ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವ ಅಗತ್ಯ ಇರಲಿಲ್ಲ. ಹಾಗೆ ಹೇಳುವ ಮೂಲಕ ‘ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ-ಪರಿಗಣಿಸಲಾಗುತ್ತಿದೆ’ ಎಂಬ ಸಂದೇಶವನ್ನು ಖರ್ಗೆ ರವಾನಿಸಿದ್ದರು.

ಗೋಡೆ ಅಂಚಿಗೆ ತಳ್ಳಿದಾಗ ತಿರುಗಿಬೀಳುವುದನ್ನು ಬಿಟ್ಟು ಬೇರೆ ಆಯ್ಕೆ ಉಳಿದಿರುವುದಿಲ್ಲ. ಇಲ್ಲದಿದ್ದರೆ ಇಷ್ಟು ದಿವಸ ತುಟಿ ಕಚ್ಚಿ ಹಿಡಿದಿದ್ದ ಸಿದ್ದರಾಮಯ್ಯ ಈಗ ಪೂರ್ಣಾವಧಿಗೆ ನಾನೇ ವಾರಸುದಾರ ಎಂಬ ವರಸೆ ಹಾಕುತ್ತಿರಲಿಲ್ಲ. ತಾನು ಅಖಾಡಕ್ಕಿಳಿಯುವ ಮುನ್ನ ಆಪ್ತ ಸಚಿವ ಕೆ.ಎನ್. ರಾಜಣ್ಣ ಅವರಿಂದ ‘ಪವರ್ ಸೆಂಟರ್‌ಗಳು ಹೆಚ್ಚಾಗಿವೆ’ ಎಂದು ಹೇಳಿಸುತ್ತಿರಲಿಲ್ಲ. ಸಿದ್ದರಾಮಯ್ಯ ಅವರಿಗೆ ಶಾಸಕಾಂಗ ಪಕ್ಷದ ಸಭೆ ಕರೆಯುವುದು ಅಥವಾ ಸಚಿವರ ಪ್ರಗತಿ ಪರಿಶೀಲನೆ ಮಾಡುವುದು ದೊಡ್ಡ ಕೆಲಸಗಳಾಗಿರಲಿಲ್ಲ. ಆದರೆ ಅವರು ‘ಹೈಕಮಾಂಡ್ ಹೇಳದೆ’ ಮಾಡುವುದಿಲ್ಲ ಎಂಬ ಸಂದೇಶ ಕಳುಹಿಸಿದ್ದಾರೆ. ನಿಷ್ಠೆ ಎನ್ನುವುದು ‘ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’ ಎಂಬ ಮಾತಿನಲ್ಲಿ ಮಾತ್ರ ಇರುವುದಿಲ್ಲ.

ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂದು ಬಿಂಬಿಸಲು ಹೊರಟ ವಿರೋಧಿ ಪಾಳೆಯದ ಚಾಣಾಕ್ಷತೆಗೆ ‘ಅಂಥ ಯಾವ ಒಪ್ಪಂದವೂ ಆಗಿಲ್ಲ’ ಎಂಬ ಅಷ್ಟೇ ನಾಜೂಕಿನ ಉತ್ತರ ನೀಡಿದ್ದಾರೆ. ಇಷ್ಟು ದಿನ ಸಿದ್ದರಾಮಯ್ಯ ಬೆಂಬಲಿಗರು ಆಟ ಆಡುತ್ತಿದ್ದರು. ಅವರನ್ನು ಹೇಗೋ ನಿಯಂತ್ರಿಸಬಹುದಿತ್ತು. ಈಗ ಸಿದ್ದರಾಮಯ್ಯ ಸ್ವತಃ ಕಣಕ್ಕಿಳಿದಿರುವುದರಿಂದ ವಿರೋಧಿ ಪಾಳೆಯಕ್ಕೆ ಕಷ್ಟವಾಗಿದೆ. ಏಕೆಂದರೆ ಕೊಡದಿದ್ದರೆ ಕಿತ್ತುಕೊಳ್ಳುವುದು ಸಿದ್ದರಾಮಯ್ಯ ಜಾಯಮಾನ. ಉದಾಹರಣೆಗೆ 2008 ಮತ್ತು 2020ರಲ್ಲಿ ವಿಪಕ್ಷ ನಾಯಕ, 2013 ಮತ್ತು 2023ರಲ್ಲಿ ಮುಖ್ಯಮಂತ್ರಿ ಸ್ಥಾನಗಳನ್ನು ಕಾಂಗ್ರೆಸ್ ಕೊಟ್ಟದ್ದಲ್ಲ. ಸಿದ್ದರಾಮಯ್ಯ ಅಧಿಕಾರಯುತವಾಗಿ ಪಡೆದುಕೊಂಡದ್ದು. ಈಗಲೂ ಹೈಕಮಾಂಡ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ಅಥವಾ ಸಮಸ್ಯೆಯನ್ನು ಸೃಷ್ಟಿಸಿದರೆ ತಾನೇ ಖುದ್ದಾಗಿ ಪರಿಹರಿಸಿಕೊಳ್ಳುವೆ ಎಂದು ಹೇಳಿದ್ದಾರೆ. ಈಗ ಹೈಕಮಾಂಡ್ ನಾಯಕರಿಗೆ ‘ನಾನೇ 5 ವರ್ಷ ಸಿಎಂ’ ಎಂದ ಸಿದ್ದರಾಮಯ್ಯ ಹೇಳಿಕೆಯನ್ನು ನಿರಾಕರಿಸಲು ಸಾಧ್ಯವೇ?

ಅದೃಷ್ಟರಾಮಯ್ಯ!

ಎಐಸಿಸಿ ಅಧ್ಯಕ್ಷರೂ ಆದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಬಹುದು. ಆದರೆ ಇವರ ಪ್ರಸ್ತಾವಕ್ಕೆ ಹಿಂದುಳಿದವರು ರಾಜಕೀಯದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ಆಯಕಟ್ಟಿನ ಜಾಗದಲ್ಲಿ ನಿರ್ಣಾಯಕ ಪಾತ್ರವಹಿಸುವಂತಾಗಬೇಕು ಎಂದು ದೇಶದ ತುಂಬಾ ಭಾಷಣ ಮಾಡುತ್ತಿರುವ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸುವ ಸಾಧ್ಯತೆಗಳು ಬಹಳ ಕಮ್ಮಿ.

ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಹಿಂದುಳಿದ ಜಾತಿಗಳ ಕೊಡುಗೆ ಅಪಾರ ಪ್ರಮಾಣದಲ್ಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿಯಲ್ಲಿ ಒಬಿಸಿ ಸಲಹಾ ಮಂಡಳಿ ರಚಿಸಲಾಗಿದೆ. ಕಾಕತಾಳಿಯವೋ ಏನೋ ಸಿದ್ದರಾಮಯ್ಯ ಅವರೇ ಮಂಡಳಿಯ ಮೊದಲ ಸಭೆಯ ಆತಿಥ್ಯವನ್ನು ವಹಿಸುತ್ತಿದ್ದಾರೆ. ಸಭೆಯು ದೇಶಾದ್ಯಂತ ಹಿಂದುಳಿದ ಜಾತಿಗಳ ರಾಜಕೀಯ ಒಲವು ನಿಲುವುಗಳು ಹೇಗಿವೆ? ಹಿಂದುಳಿದ ಜಾತಿಯ ಮತಗಳನ್ನು ಕಾಂಗ್ರೆಸ್ ಕಡೆಗೆ ಸೆಳೆಯುವುದು ಹೇಗೆ ಎಂಬ ಬಗ್ಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ನೀಡಲಿದೆ.

ಎಐಸಿಸಿ ಅಥವಾ ರಾಹುಲ್ ಗಾಂಧಿ ಏನೇ ಉದ್ದೇಶ ಇಟ್ಟುಕೊಂಡು ಇಂಥದೊಂದು ಮಂಡಳಿ ರಚಿಸಿರಬಹುದು, ಮುಂದಿನ ದಿನಗಳಲ್ಲಿ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭವಾಗುತ್ತೋ ಏನೋ ಆದರೆ ಸಿದ್ದರಾಮಯ್ಯ ಅವರಿಗಂತೂ ವರದಾನವಾಗಿದೆ. 2013ರಿಂದ ಇತ್ತೀಚೆಗೆ 2018ರ ಚುನಾವಣಾ ಸೋಲೊಂದರಿಂದ ಆದ ಹಿನ್ನಡೆಯನ್ನು ಬಿಟ್ಟರೆ ಪ್ರತಿ ಬಾರಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಏನೇ ಸಮಸ್ಯೆಯಾದರೂ ಸಿದ್ದರಾಮಯ್ಯಗೆ ಅದರಿಂದ ಲಾಭವೇ ಆಗಿದೆ. ಈಗಲೂ ಕಾಂಗ್ರೆಸ್ ಹೈಕಮಾಂಡ್ ಇವತ್ತು ಕರ್ನಾಟಕದಲ್ಲಿ ಒಬಿಸಿ ಸಲಹಾ ಮಂಡಳಿ ಸಭೆ ಮಾಡಿ ನಾಳೆ ಸಿದ್ದರಾಮಯ್ಯ ಅವರನ್ನು ಕಿತ್ತುಹಾಕಿ ಅರಗಿಸಿ

ಕೊಳ್ಳಲು ಸಾಧ್ಯವೇ? ಅಂದ ಹಾಗೆ ಒಬಿಸಿ ಸಲಹಾ ಮಂಡಳಿ ಸಭೆ ಕರ್ನಾಟಕದಲ್ಲೇ ನಡೆಯಲು ಮತ್ತು ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯಲು ಇಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಎನ್ನುವುದು ಮಾತ್ರ ಕಾರಣವಲ್ಲ, ಅದನ್ನು ಮತ್ತೊಮ್ಮೆ ಹೇಳುವೆ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X