ಅಂದು ಅರಸು-ಹಾವನೂರು, ಇಂದು?

ಎಲ್.ಜಿ. ಹಾವನೂರು (ಲಕ್ಷ್ಮಣ ಗುಂಡಪ್ಪ ಹಾವನೂರು) ತೀರಿಕೊಂಡು ಇಂದಿಗೆ 19 ವರ್ಷ. ಹಿಂದುಳಿದವರು ನಿತ್ಯವೂ ನೆನೆಯಬೇಕಾಗಿದ್ದ ಅವರನ್ನು ನಮ್ಮ ನೇತಾರರು ಬಹುತೇಕ ಮರೆತುಬಿಟ್ಟಿದ್ದಾರೆ. ಅದರಲ್ಲೂ ಹಿಂದುಳಿದ ನಾಯಕರಿಗೆ ಅವರ ನೆನಪೇ ಆಗುತ್ತಿಲ್ಲ. ಕಡೆಯಪಕ್ಷ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ ) ನಡೆಯುತ್ತಿರುವ ಈ ಹೊತ್ತಿನಲ್ಲಾದರೂ ಹಾವನೂರ್ ಅವರನ್ನು ಸ್ಮರಿಸಿಕೊಳ್ಳಬೇಕಾಗಿದೆ.
ಇದು ಹಳೆಯ ವಿಷಯ. ಆದರೂ ಮತ್ತೆ ಮತ್ತೆ ಜ್ಞಾಪಿಸಬೇಕಾಗಿದೆ. ವಿಚಾರವನ್ನು ಹೊಸ ತಲೆಮಾರಿಗೆ ದಾಟಿಸಬೇಕಾಗಿದೆ. ಹಾವನೂರು ಅವರ ಕಾನೂನು ಪಾಂಡಿತ್ಯ ಉತ್ಕೃಷ್ಟವಾದುದಾಗಿತ್ತು. ಅವರನ್ನು ಕರ್ನಾಟಕದ ಅಂಬೇಡ್ಕರ್ ಎಂತಲೂ ಕರೆಯಲಾಗುತ್ತಿತ್ತು. ಅಷ್ಟೇ ಏಕೆ, 1991ರಲ್ಲಿ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸಂವಿಧಾನ ಸಲಹಾ ಸಮಿತಿಯ ಸದಸ್ಯರಾಗುವಂತೆ ಹಾವನೂರು ಅವರನ್ನು ಆಹ್ವಾನಿಸಿದ್ದರು. ಇಂಥ ವಿದ್ವತ್ತು ಇದ್ದುದರಿಂದ ಹೈಕೋರ್ಟ್ ನ್ಯಾಯಾಧೀಶ ಹುದ್ದೆಯ ಅವಕಾಶವೂ ಹಾವನೂರು ಅವರಿಗೆ ಬಂದಿತ್ತು. ಆದರೆ ಅವರು ನಯವಾಗಿಯೇ ತಿರಸ್ಕರಿಸಿದರು.
ನ್ಯಾಯಾಧೀಶ ಹುದ್ದೆಯನ್ನು ತಿರಸ್ಕರಿಸಿದ್ದಕ್ಕೆ ಹಾವನೂರು ಕೊಟ್ಟ ಕಾರಣ ಶತಶತಮಾನಕ್ಕೂ ಶೋಷಿತ ವರ್ಗದವರು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕಾದುದು. ‘ನಾನು ನ್ಯಾಯಾಧೀಶನಾಗಿ ನ್ಯಾಯಾಲಯದ ನಾಲ್ಕು ಗೋಡೆಯೊಳಗೆ ಕುಳಿತರೆ ನೋವಿನಲ್ಲಿರುವ ನನ್ನ ಜನರ ಸಮಸ್ಯೆಗಳಿಗೆ ಬಹಿರಂಗವಾಗಿ ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಉತ್ತರಿಸಿದ್ದರು.
ಹಾವನೂರು ಹಾಗೆ ಹೇಳುವುದಕ್ಕೂ ಹಿನ್ನೆಲೆ ಇದೆ. ಬಡತನವೇ ಅವರ ಬಾಲ್ಯದ ಸಂಗಾತಿ. ದೀಪವೂ ಇಲ್ಲದ ದಾರುಣ ಪರಿಸ್ಥಿತಿ. ಕೂಳು ಬೇಯಿಸಲು ಕಟ್ಟಿಗೆ ಹೊತ್ತಿಸಿದಾಗ ಪಾಠ ಪುಸ್ತಕ ತೆಗೆಯಬೇಕಾಗಿದ್ದ ದೈನೇಸಿ ಸ್ಥಿತಿ. ಹೀಗೆ ಓದಿದ ಹಾವನೂರು ವಾಲ್ಮೀಕಿ ಜನಾಂಗದ ಪ್ರಥಮ ಕಾನೂನು ಪದವೀಧರ. ವಕೀಲನಾದರೂ ಅವರಿಗೆ ಪಟ್ಟಭದ್ರರ ವರಾತ ತಪ್ಪಿರಲಿಲ್ಲ. ಅವರಿಗಿದ್ದ ಅಪಾರವಾದ ಕಾನೂನು ಜ್ಞಾನ ಕಂಡು ಕರುಬುವವರೇ ಹೆಚ್ಚಾಗಿದ್ದರು. ‘ನನ್ನಂಥ ವಿದ್ಯಾಭಾಸ ಮಾಡಿರುವ, ವಕೀಲನಾಗಿರುವವನ ಪರಿಸ್ಥಿತಿಯೇ ಹೀಗಾದರೆ ಅಕ್ಷರ-ಅನ್ನಕ್ಕೆ ಅನುದಿನವೂ ಹೋರಾಡಬೇಕಾದ ನನ್ನ ಜನರ ಪಾಡೇನು?’ ಎಂಬ ಅವರ ಕಳಕಳಿ ಮನೆಬಾಗಿಲಿಗೆ ಹುಡುಕಿಕೊಂಡು ಬಂದಿದ್ದ ನ್ಯಾಯಾಧೀಶರಾಗುವ ಮಹದವಕಾಶವನ್ನು ತಿರಸ್ಕರಿಸುವಂತೆ ಮಾಡಿತ್ತು.
ಶೋಷಿತ ಸಮುದಾಯಗಳ ಬಗ್ಗೆ ಇದ್ದ ನೈಜ ಕಳಕಳಿ, ಸ್ಪಷ್ಟತೆ ಮತ್ತು ಬದ್ಧತೆಗಳಿಂದಾಗಿ ಹಾವನೂರು ಬಲು ಬೇಗ ದೇವರಾಜ ಅರಸು ಅವರ ಕಣ್ಣಿಗೆ ಬಿದ್ದರು. ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ಅರಸು ಅವರಿಗಿದ್ದ ಬದ್ಧತೆಯನ್ನು ಖಂಡಿತ ಪ್ರಶ್ನಿಸುವಂತಿಲ್ಲ. ಹಾಗೆಯೇ ಅರಸು ಸಾಧನೆಯಲ್ಲಿ ಹಾವನೂರು ಪಾತ್ರವನ್ನು ಕಡೆಗಣಿಸುವಂತೆಯೂ ಇಲ್ಲ.
ಅರಸು 1972ರ ಆಗಸ್ಟ್ 8ರಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸಿ ಎಲ್.ಜಿ. ಹಾವನೂರು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಹಾವನೂರು ಸುಮಾರು 378 ಹಳ್ಳಿಗಳನ್ನು ಸುತ್ತಿ, ಜಾತಿ ಸಮೀಕ್ಷೆಯ ಬಗ್ಗೆ ಇದ್ದ ದಟ್ಟ ವಿರೋಧವನ್ನು ಮೆಟ್ಟಿ ನಿಂತು 1975 ನವೆಂಬರ್ 19 ರಂದು ಸರಕಾರಕ್ಕೆ ವರದಿ ಸಲ್ಲಿಸಿದರು. ಜನ ಹಾವನೂರು ಆಯೋಗದ ವರದಿಯನ್ನು ‘ಹಿಂದುಳಿದ ವರ್ಗಗಳ ಬೈಬಲ್’ ಎಂದು ಕರೆದರು. ದೇಶದ ಸರ್ವೋಚ್ಚ ನ್ಯಾಯಾಲಯ ‘ಹಿಂದುಳಿದ ವರ್ಗಗಳ ವೈಜ್ಞಾನಿಕ ಅಧ್ಯಯನ’ ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ಇದು ‘ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಿ ಶಿಫಾರಸು ನೀಡಲು 10 ವರ್ಷ ತೆಗೆದುಕೊಂಡ ಹಿಂದಿನ ಆಯೋಗ ಮತ್ತು ಕೇವಲ 15 ದಿನದಲ್ಲಿ ಸಮೀಕ್ಷೆ ಮಾಡಿ ಮುಗಿಸುವುದಾಗಿ (ವರದಿ ಮತ್ತು ಶಿಫಾರಸು ಮಾಡಲು ಅಲ್ಲ) ಹೇಳುತ್ತಿರುವ ಈಗಿನ ಆಯೋಗಕ್ಕೆ’ ಗೊತ್ತಿದೆ ಎಂದು ಹೇಳುವಂಥ ಯಾವ ಸುಳಿವುಗಳೂ ಗೋಚರಿಸುತ್ತಿಲ್ಲ.
ಹಾವನೂರು ವರದಿ ಸಲ್ಲಿಕೆಯಾದ ಬಳಿಕ ರಾಜಕೀಯ ಸಂಚಲನಉಂಟಾಗಿತ್ತು. ಅಂದಿನ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ (ಸಚಿವ ಈಶ್ವರ ಖಂಡ್ರೆ ಅವರ ಅಪ್ಪ) ಸದನದಲ್ಲಿ ವರದಿಯ ಪ್ರತಿಗಳಿಗೆ ಬೆಂಕಿ ಹಾಕಿದ್ದರು. ಇನ್ನೊಂದೆಡೆ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ. ದೇವೇಗೌಡರು ಕೆಂಡ ಕಾರಿದ್ದರು. ತೀವ್ರ ವಿರೋಧವಿದ್ದರೂ ವರದಿ ಕೊಡುವುದಕ್ಕೆ ಹಾವನೂರು ಮತ್ತು ಅದನ್ನು ಜಾರಿ ಮಾಡುವುದಕ್ಕೆ ಅರಸು ಹಿಂಜರಿಯಲಿಲ್ಲ. ದಿಗ್ಗಜರಿಬ್ಬರಿಗೆ ಯಾವ್ಯಾವ ರೀತಿಯ ದುರುದ್ದೇಶವೂ ಇರಲಿಲ್ಲ. ಇದ್ದ ಸದುದ್ದೇಶ ಒಂದೇ ಅದು ಸಾಮಾಜಿಕ ನ್ಯಾಯ.
ಹಾವನೂರು ವರದಿ ಸಲ್ಲಿಕೆಯಾದ ಬಳಿಕ ರಾಜಕೀಯ ಸಂಚಲನಉಂಟಾಗಿತ್ತು. ಅಂದಿನ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ (ಸಚಿವ ಈಶ್ವರ ಖಂಡ್ರೆ ಅವರ ಅಪ್ಪ) ಸದನದಲ್ಲಿ ವರದಿಯ ಪ್ರತಿಗಳಿಗೆ ಬೆಂಕಿ ಹಾಕಿದ್ದರು. ಇನ್ನೊಂದೆಡೆ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ. ದೇವೇಗೌಡರು ಕೆಂಡ ಕಾರಿದ್ದರು. ತೀವ್ರ ವಿರೋಧವಿದ್ದರೂ ವರದಿ ಕೊಡುವುದಕ್ಕೆ ಹಾವನೂರು ಮತ್ತು ಅದನ್ನು ಜಾರಿ ಮಾಡುವುದಕ್ಕೆ ಅರಸು ಹಿಂಜರಿಯಲಿಲ್ಲ. ದಿಗ್ಗಜರಿಬ್ಬರಿಗೆ ಯಾವ್ಯಾವ ರೀತಿಯ ದುರುದ್ದೇಶವೂ ಇರಲಿಲ್ಲ. ಇದ್ದ ಸದುದ್ದೇಶ ಒಂದೇ ಅದು ಸಾಮಾಜಿಕ ನ್ಯಾಯ.
ಸಾಮಾಜಿಕ ನ್ಯಾಯ ಪ್ರತಿಷ್ಠಾಪನೆ ಅಥವಾ ಜಾರಿ ಎನ್ನುವುದು Project ಅಲ್ಲ, ಅದು Process. ಒಬ್ಬರಿಂದ ಒಬ್ಬರಿಗೆ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ನಡೆಯಬೇಕಾದ Process. ಕರ್ನಾಟಕದಲ್ಲಿ ಈ ಬೆಳಕನ್ನು ಹೊತ್ತಿಸಿಕೊಂಡು ಓಡಲು ಆರಂಭಿಸಿದವರು ನಾಲ್ವಡಿ ಕೃಷ್ಟರಾಜ ಒಡೆಯರ್ ಮತ್ತು ಸರ್ ಲೆಸ್ಸಿ ಮಿಲ್ಲರ್ ಆಯೋಗ (ಹಿಂದುಳಿದವರಿಗೆ ಅನುಕೂಲವಾಗುವ ಈ ವಿಷಯಕ್ಕೆ ಆಗ ಸರ್ ಎಂ. ವಿಶ್ವೇಶ್ವರಯ್ಯ ತೀವ್ರ ವಿರೋಧ ಮಾಡಿ ದಿವಾನ ಹುದ್ದೆಗೆ ರಾಜೀನಾಮೆ ನೀಡಿದ್ದರು). ಕಾಲಾನಂತರ ಅದನ್ನು ಇನ್ನಷ್ಟು ದೂರ ತಂದವರು ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರು. ಈಗ ಬೆಳಕನ್ನು ಜ್ವಾಲೆ ಎಂದು ಕರೆಯುವ ಮಟ್ಟಕ್ಕೆ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಈ ಹೊತ್ತಿನಲ್ಲಿ ಸಾಮಾಜಿಕ ನ್ಯಾಯದ ಹಣತೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ.
ಅಂದು ಅರಸು-ಹಾವನೂರು ಅವರು ಹಚ್ಚಿದ ಹಣತೆ ಕರುನಾಡಿನಲ್ಲಿ ಮಾತ್ರವಲ್ಲ, ದೂರದ ದಿಲ್ಲಿಯಲ್ಲೂ ಉರಿದಿತ್ತು. 1978ರಲ್ಲಿ ಬಿ.ಪಿ. ಮಂಡಲ್ ವರದಿ ರೂಪುಗೊಂಡಿತು. ಹಾವನೂರು ಆಯೋಗದ ವರದಿ ರಾಜ್ಯದ ಸಾಮಾಜಿಕ-ರಾಜಕೀಯ ಚಹರೆಯನ್ನು ಬದಲಿಸಿದರೆ ಮಂಡಲ್ ಆಯೋಗದ ವರದಿ ದೇಶಾದ್ಯಂತ ಹೊಸ ಕನಸು ಹುಟ್ಟುಹಾಕಿತ್ತು. ಸದ್ಯಕ್ಕೆ ಜಾತಿ ಸಮೀಕ್ಷೆ ನಡೆಸುತ್ತಿರುವ ರಾಜ್ಯ ಕರ್ನಾಟಕ ಮಾತ್ರ(ತೆಲಂಗಾಣ ಮಾಡಿ ಮುಗಿಸಿದೆ. ಆದರೆ ಸಮೀಕ್ಷೆ ಮಾಡಿದ ಮತ್ತು ಅನುಷ್ಠಾನಗೊಳಿಸಿದ ರೀತಿಗಳ ಬಗ್ಗೆ ಪ್ರಶ್ನೆಗಳು ಮೂಡಿ ಬರುತ್ತಿವೆ). ಕೇಂದ್ರ ಸರಕಾರದಿಂದ ರಾಷ್ಟ್ರಮಟ್ಟದಲ್ಲಿ ‘ಜಾತಿ ಸಮೀಕ್ಷೆ ಮಾಡುವುದಾಗಿ ಹೇಳಲಾಗಿದೆಯಷ್ಟೇ’. ಯಾವಾಗ ಆಗುತ್ತದೆ? ಮತ್ತು ಕೇಂದ್ರ ಸರಕಾರ ನಡೆಸುವ ಜನಗಣತಿಯಲ್ಲಿ ಜಾತಿಯ ಸಮೀಕ್ಷೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಈಗ ರಾಜ್ಯದಲ್ಲಿ ಬದಲಾದ ತಂತ್ರಜ್ಞಾನಗಳನ್ನು ಬಳಸಿಕೊಂಡು15 ದಿನಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಬಹುದು. ಅದಾದ ಮೇಲೆ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರಕಾರಕ್ಕೆ ಮಾತು ಕೊಟ್ಟಿರುವಂತೆ 90 ದಿನಗಳ ಒಳಗೆ ವರದಿ ಸಿದ್ಧಪಡಿಸಿ ಶಿಫಾರಸನ್ನೂ ಮಾಡಬಹುದು. ಆದರೆ ಅದು ಬದ್ಧತೆಯನ್ನು ಬಯಸುತ್ತದೆ. ‘ಅರಸು-ಹಾವನೂರು ಮಾದರಿ’ಯ ಬದ್ಧತೆಯನ್ನು ಬಯಸುತ್ತದೆ. ಸಮರ್ಪಕವಾದ, ಪಾರದರ್ಶಕವಾದ ಮತ್ತು ಪರಿಪಕ್ವವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ)
ಮಾಡಿ ವರದಿಯನ್ನು ಜಾರಿಗೆ ತಂದರೆ ಇತಿಹಾಸ ಬರೆಯಬಹುದು. ಜೊತೆಗೆ ಮತ್ತೊಮ್ಮೆ ದೇಶಕ್ಕೆ ‘ಕರ್ನಾಟಕದ ಮಾದರಿ’ಯನ್ನು ಕಟ್ಟಿಕೊಡಲೂಬಹುದು.
ಅಂಥ ಇತಿಹಾಸ ಸೃಷ್ಟಿ ಮಾಡಿದ್ದರಿಂದಲೇ, ಬಡವರ ಪಾಲಿಗೆ ಹೊಸ ಬೆಳಕನ್ನು-ಬದುಕನ್ನು ನೀಡಿದ್ದರಿಂದಲೇ ನಾಲ್ವಡಿ ಕೃಷ್ಟರಾಜ ಒಡೆಯರ್, ಸರ್ ಲೆಸ್ಸಿ ಮಿಲ್ಲರ್, ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರು ಅವರನ್ನು ಜನ ಇವತ್ತಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರನ್ನು ನಮ್ಮನ್ನಾಳುವ ನೇತಾರರೂ ನೆನಪಿಸಿಕೊಂಡರೆ ಭವಿಷ್ಯದಲ್ಲಿ ಹೊಸ ತಲೆಮಾರು ಆ ನೇತಾರರನ್ನೂ ಸ್ಮರಿಸಿಕೊಳ್ಳುತ್ತದೆ. ಅಂತಿಮವಾಗಿ ನಾವು ಏನನ್ನು ಬಿತ್ತುತ್ತೇವೆಯೋ ಅದೇ ಬೆಳೆಯನ್ನು ಪಡೆಯುತ್ತೇವೆ.
ಎಲ್.ಜಿ. ಹಾವನೂರು ಕಡೆದಿನಗಳಲ್ಲಿ ಕೋಮುವಾದಿ ಪಕ್ಷ ಸೇರಿದರು. ದೇವರಾಜ ಅರಸು ಅವರ ನೆರಳಿನಿಂದಾಚೆ ಬರುವ ಪ್ರಯತ್ನ ನಡೆಸಲಿಲ್ಲ. ರಾಜಕಾರಣವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ.
ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಿಲ್ಲ ಎಂಬ ಕೆಲವು ಅಸಮಾಧಾನಗಳಿವೆ. ಇಂಥ ಅಸಮಾಧಾನಗಳು ಇನ್ನೂ ಇರಬಹುದು. ಆದರೂ ಎಲ್.ಜಿ. ಹಾವನೂರು ಅವರಂಥ ಮಹನೀಯರನ್ನು ನೋಡಬೇಕಾಗಿರುವುದು ಒಟ್ಟಂದದಲ್ಲಿಯೇ ಹೊರತು ಸೀಮಿತ ಚೌಕಟ್ಟಿನೊಳಗೆ ಸಿಲುಕಿಸಿ ಅಲ್ಲ.
ಆಫ್ ದಿ ರೆಕಾರ್ಡ್?
ಸಾಮಾಜಿಕ ನ್ಯಾಯ ಪ್ರತಿಷ್ಠಾಪನೆ ಆಳುವವರ ಜವಾಬ್ದಾರಿ ಎಂದು ಮೈಮರೆಯುವ ವಿಷಯವಲ್ಲ. ಅಂದು ದೇವರಾಜ ಅರಸು ಮತ್ತು ಹಾವನೂರು ಅವರನ್ನು ಪ್ರೇರೇಪಿಸಲು ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಂಥ ಅಪ್ರತಿಮ ರೈತ ಹೋರಾಟಗಾರರಿದ್ದರು. ಪಿ. ಲಂಕೇಶ್ ಅವರಂಥ ದಿಟ್ಟ ವ್ಯಕ್ತಿತ್ವದ ಬರಹಗಾರರಿದ್ದರು. ಎಸ್.ಜಿ. ಮೈಸೂರು ಮಠ ಅವರಂಥ ಪತ್ರಕರ್ತರಿದ್ದರು. ಇಂದು ಸಾಮಾಜಿಕ ಹೋರಾಟ, ಸಾಂಸ್ಕೃತಿಕ ಪ್ರಪಂಚ ಮತ್ತು ಮಾಧ್ಯಮ, ಎಲ್ಲೆಡೆ ನಿರ್ವಾತ ಸ್ಥಿತಿ ಕಂಡುಬರುತ್ತಿದೆ. ಒಂದು ಸಮಾಜದ ರಾಜಕೀಯ ಆರೋಗ್ಯಕರವಾಗಿ ಇರಬೇಕಾದರೆ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾಧ್ಯಮ ರಂಗಗಳು ಕೂಡ ಚಲನಶೀಲವಾಗಿರಬೇಕು.