ಡಿಕೆಶಿ ಆಟ ಕೆಡಿಸಿದ್ದೇ ಸುರ್ಜೆವಾಲಾ!

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶೇಕಡಾ 7ರಷ್ಟು ಕುರುಬರು ಮತ್ತು ಶೇಕಡಾ 13ರಷ್ಟು ಮುಸ್ಲಿಮರ ಮೇಲೆ ದಟ್ಟ ಪ್ರಭಾವ ಹೊಂದಿರುವ ಹಾಗೂ ಹಿಂದುಳಿದ ಜಾತಿಗಳಲ್ಲೂ ಅಲ್ಪಸ್ವಲ್ಪ ಹಿಡಿತ ಸಾಧಿಸಿರುವ ಸಿದ್ದರಾಮಯ್ಯ ಕಾರಣ. ಅದೇ ರೀತಿ ಕರ್ನಾಟಕದ ರಾಜಕಾರಣದ ಮೇಲೆ ಮೊದಲಿನಿಂದಲೂ ಪ್ರಭುತ್ವ ಸಾಧಿಸಿರುವ ಒಕ್ಕಲಿಗರಲ್ಲಿ (ಒಟ್ಟಾರೆ ಜನಸಂಖ್ಯೆಯಲ್ಲಿ ಅಲ್ಲ) ಶೇಕಡಾ 5 ರಷ್ಟು ಮತಗಳು ಕಾಂಗ್ರೆಸ್ ಕಡೆ ವಾಲುವಂತೆ ಮಾಡಿದ, ಹಿಂದಿನ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಆಕ್ರಮಣಕಾರಿ ಹೋರಾಟ ರೂಪಿಸಿದ ಮತ್ತು ಕಾರ್ಯಕರ್ತರಲ್ಲಿ ಹುರುಪು ತುಂಬಿದ ಡಿ.ಕೆ. ಶಿವಕುಮಾರ್ ಕೂಡ ನಿರ್ಣಾಯಕ. ಆದ್ದರಿಂದಲೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಮತ್ತು ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಮನ್ನಣೆ ನೀಡಿತ್ತು.
ಮುಡಾ ಪ್ರಕರಣದಿಂದ ಜರ್ಜರಿತರಾಗಿದ್ದ ಮತ್ತು ಮುಖ್ಯಮಂತ್ರಿ ಸ್ಥಾನವನ್ನು ಕಳದುಕೊಂಡೇಬಿಡುತ್ತಾರೆ ಎಂಬ ಚರ್ಚೆಗಳಿಂದ ಘಾಸಿಯಾಗಿದ್ದ ಸಿದ್ದರಾಮಯ್ಯ ನಿಟ್ಟುಸಿರು ಬಿಡುವಂತೆ ಮಾಡಿದ್ದು ಉಪ ಚುನಾವಣೆಗಳ ಗೆಲುವು. ಆಗ ಅಹಿಂದ ಸಂಘಟನೆಗಳು ಸಿದ್ದರಾಮಯ್ಯ ಕೈ ಬಲಪಡಿಸಬೇಕು, ಶಕ್ತಿ ಪ್ರದರ್ಶನ ಮಾಡಬೇಕು, ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಮಂಗಳ ಹಾಡಬೇಕು ಎಂದು ಹಾಸನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಮುಂದಾಗಿದ್ದವು. ಸಂಘಟನೆಗಳ ಹಿಂದೆ ಇದ್ದದ್ದು ಸಿದ್ದರಾಮಯ್ಯರ ಆಪ್ತ ಸಚಿವರು ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಉಪಚುನಾವಣೆಗಳ ಗೆಲುವಿನ ಕಿರೀಟ ಕಾಂಗ್ರೆಸ್ ಪಕ್ಷದ ಬದಲು ಸಿದ್ದರಾಮಯ್ಯ ಶಿರವೇರುತ್ತಿದೆ ಎನಿಸತೊಡಗಿದಾಗ ಡಿ.ಕೆ. ಶಿವಕುಮಾರ್ ಸಕ್ರಿಯರಾದರು. ಅವರ ಮಾತಿಗೆ ಮಣೆ ಹಾಕಿದ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ವತಿಯಿಂದ ಸಮಾವೇಶ ನಡೆಸುವಂತೆ ಸೂಚಿಸಿತು.
ಬಳಿಕ ಸಿದ್ದರಾಮಯ್ಯ ಆಪ್ತರು ದಲಿತ ಸಿಎಂ ಅಸ್ತ್ರ ಬಳಸಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಗದ್ದುಗೆಯ ಹಾದಿಗೆ ಅಡ್ಡಬಂದಾಗಲೂ ಅವರ ನೆರವಿಗೆ ನಿಂತದ್ದು ಹೈಕಮಾಂಡ್. ಡಿ.ಕೆ. ಶಿವಕುಮಾರ್ ಮಾತು ಕೇಳಿ ದಲಿತ ನಾಯಕರ ಡಿನ್ನರ್ ಮೀಟಿಂಗ್ ಗೆ ತಡೆ ನೀಡಿದ್ದು ಮಾತ್ರವಲ್ಲದೆ ದಲಿತರ ಸಮಾವೇಶ ನಡೆಸುವುದಕ್ಕೂ ಅನುಮತಿ ಕೊಡಲಿಲ್ಲ. ಇನ್ನು, ತೀರಾ ಇತ್ತೀಚೆಗೆ ಹೈಕಮಾಂಡ್ ಜಾತಿ ಗಣತಿ ಜಾರಿಯಾಗುವುದನ್ನು ತಡೆದು ಸಿದ್ದರಾಮಯ್ಯ ಅವರಿಗೆ ಮುಖಭಂಗ ಉಂಟುಮಾಡಿದ್ದು ಕೂಡ ಡಿ.ಕೆ. ಶಿವಕುಮಾರ್ ಒತ್ತಾಸೆಯಿಂದ.
ಹೀಗೆ ಡಿ.ಕೆ. ಶಿವಕುಮಾರ್ ಜೊತೆ ಕಾಂಗ್ರೆಸ್ ಹೈಕಮಾಂಡ್ ಬಂಡೆಯಂತೆ ನಿಂತಿತ್ತು. ಎಲ್ಲವೂ ಅವರಂದುಕೊಂಡಂತೆ ಸಾಗುತ್ತಿತ್ತು. ಆ ಧೈರ್ಯದಿಂದಲೇ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ, ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ, ತಾನು ಇವತ್ತಲ್ಲ, ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತೇನೆ ಎಂಬ ತುಂಬು ವಿಶ್ವಾಸದಿಂದ ಇದ್ದದ್ದು. ಜೊತೆಗೆ ಅವರಿಗೆ ಸಿದ್ದರಾಮಯ್ಯ ಬಳಿ ಇರುವ ಗದ್ದುಗೆಯನ್ನು ಒದ್ದು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವ ಅರಿವಿತ್ತು. ಸಿದ್ದರಾಮಯ್ಯ ಜೊತೆ ಸೆಣಸಾಡಲು ಅವರು ಸಿದ್ದರಿರಲಿಲ್ಲ. ಆದರೆ ಕಾಲ ಪಕ್ವವಾಗಿಲ್ಲದಿದ್ದರೂ ಅವಸರದಲ್ಲಿ ಅಖಾಡಕ್ಕಿಳಿದು ಡಿ.ಕೆ. ಶಿವಕುಮಾರ್ ಆಟವನ್ನು ಕೆಡಿಸಿದ್ದು ರಣದೀಪ್ ಸಿಂಗ್ ಸುರ್ಜೆವಾಲಾ.
ಬಿ.ಆರ್. ಪಾಟೀಲ್, ರಾಜು ಕಾಗೆ ಮತ್ತಿತರರು ಅಸಮಾಧಾನ ತೋಡಿಕೊಂಡಾಗ, ಅದರಲ್ಲೂ ಬಿ.ಆರ್.ಪಾಟೀಲ್ ಅವರು ಸಿದ್ದರಾಮಯ್ಯ ಆಪ್ತ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ಧ ತಿರುಗಿಬಿದ್ದಾಗ ಇದೇ ಸರಿಯಾದ ಸಮಯ ಎಂದು ಸುರ್ಜೆವಾಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಬೆಂಗಳೂರಿಗೆ ಬಂದರು. ಕಾಂಗ್ರೆಸ್‌ನ 139 ಶಾಸಕರ ಪೈಕಿ 103 ಶಾಸಕರ ಅಭಿಪ್ರಾಯ ಪಡೆದುಕೊಂಡರು. ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದ ಕೆಲವರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಹುದೆಂಬ ಅಂದಾಜಿನಲ್ಲಿ ‘ಮುಖ್ಯಮಂತ್ರಿಗಳ ಕಾರ್ಯವೈಖರಿ ಹೇಗಿದೆ? ಅವರನ್ನು ಬದಲು ಮಾಡಬೇಕಾ? ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದರೆ ನಿಮ್ಮ ನಿಲುವೇನು?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಆದರೆ ಬಹುತೇಕ ಶಾಸಕರ ಅಸಮಾಧಾನ, ಅತೃಪ್ತಿ ಸಚಿವರ ವಿರುದ್ಧವಾಗಿತ್ತೇ ಹೊರತು ಸಿದ್ದರಾಮಯ್ಯ ವಿರುದ್ಧವಾಗಿರಲಿಲ್ಲ. ಶಾಸಕರು ತಮ್ಮ ಪರವಾಗಿಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸುಮ್ಮನಾಗಿದ್ದರು. ಆದರೆ ಸಿದ್ದರಾಮಯ್ಯ ಸುಮ್ಮನಾಗಲಿಲ್ಲ.
ಶಾಸಕರು ಡಿ.ಕೆ. ಶಿವಕುಮಾರ್ ಪರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಿಪಡಿಸಿದ ಮೇಲೂ ಸುರ್ಜೆವಾಲಾ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡಿಗೆ ಎಂದು ಹೇಳಿದ್ದು ಸಿದ್ದರಾಮಯ್ಯ ಅವರನ್ನು ಕೆರಳಿಸಿದೆ. ಅದರಿಂದ ಮೊದಲು ನಂದಿ ಬೆಟ್ಟದಲ್ಲಿ ‘5 ವರ್ಷಕ್ಕೂ ನಾನೇ ಸಿಎಂ’ ಎಂದಷ್ಟೇ ಹೇಳಿದ್ದ ಸಿದ್ದರಾಮಯ್ಯ, ಸುರ್ಜೆವಾಲಾ ಹೇಳಿಕೆಯ ನಂತರ ‘ನಾನು ಶಾಸಕರ ಬೆಂಬಲದಿಂದ ಚುನಾವಣೆ ಗೆದ್ದು ಮುಖ್ಯಮಂತ್ರಿಯಾಗಿದ್ದೇನೆ. ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ. ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆಂಬ ಷರತ್ತು ವಿಧಿಸಿಲ್ಲ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದಷ್ಟೇ ಹೇಳಿದೆ’ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ ಎನ್ನುವ ಸಂದೇಶವನ್ನು ಇನ್ನಷ್ಟು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟರು.
ಸಿದ್ದುಗೆ ಹೈಕಮಾಂಡ್ ಸುಳಿವು!
ಇಷ್ಟೆಲ್ಲದರ ನಡುವೆ ಸಿದ್ದರಾಮಯ್ಯ ಅವರಿಗೆ ನೀವೇ 5 ವರ್ಷಕ್ಕೂ ಸಿಎಂ ಎಂಬ ಸುಳಿವು ರಾಹುಲ್ ಗಾಂಧಿ ಕ್ಯಾಂಪ್ ಕಡೆಯಿಂದ ಸಿಕ್ಕಿದೆ ಎನ್ನುತ್ತವೆ ದಿಲ್ಲಿ ಮೂಲಗಳು. ಜೊತೆಗೆ ಇಷ್ಟು ದಿನ ಎಲ್ಲಾ ರೀತಿಯ ಕಿರಿಕಿರಿ ಸಹಿಸಿಕೊಂಡು ಸುಮ್ಮನಿದ್ದವರು ಈಗ ಹೈಕಮಾಂಡ್ ಸುಳಿವಿರದೆ ಹೀಗೆ ಮಾತನಾಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸಿದ್ದರಾಮಯ್ಯ ಆಪ್ತರು. ದಿಲ್ಲಿ ಮೂಲಗಳನ್ನು ನಂಬಲು ಕೆಲ ಕಾರಣಗಳಿವೆ. ಕರ್ನಾಟಕದಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿದ್ದ ಜಾತಿಗಣತಿ ವರದಿಯನ್ನು ಜಾರಿಗೊಳಿಸಲಿಲ್ಲವೇಕೆ ಎಂಬ ಪ್ರಶ್ನೆಯನ್ನು ಆಗಾಗ ಬಿಜೆಪಿ ರಾಹುಲ್ ಗಾಂಧಿ ಕಡೆಗೆ ತೂರಿ ಬಿಡುತ್ತಿದೆ. ಕೇಂದ್ರದ ಬಿಜೆಪಿ ಸರಕಾರವೇ ಜಾತಿ ಗಣತಿ ಮಾಡುವುದಾಗಿ ಘೋಷಿಸಿ ಕಾಂಗ್ರೆಸ್ ಅಸ್ತ್ರವನ್ನು ಕಸಿದುಕೊಂಡಿದೆ. ಮೇಲಾಗಿ ಇಡೀ ಬಿಹಾರ ಚುನಾವಣೆ ನಡೆಯುತ್ತಿರುವುದೇ ಒಬಿಸಿ ರಾಜಕಾರಣದ ಮೇಲೆ. ಹರ್ಯಾಣ, ಮಹಾರಾಷ್ಟ್ರ, ದಿಲ್ಲಿ ಸೋಲಿನ ಬಳಿಕ ಬಿಹಾರ ಚುನಾವಣೆ ಕಾಂಗ್ರೆಸ್ ಪಾಲಿಗೆ ಅತ್ಯಂತ ನಿರ್ಣಾಯಕ. ಈ ಹಂತದಲ್ಲಿ ಪದೇ ಪದೇ ಕರ್ನಾಟಕದಲ್ಲಿ ಹಿಂದುಳಿದ ಜಾತಿಯ ಮುಖ್ಯಮಂತ್ರಿಯನ್ನು ಪದಚ್ಯುತಿಗೊಳಿಸಲಾಗುತ್ತದೆ ಎನ್ನುವ ವಿಷಯ ಚರ್ಚೆಯಾಗುವುದು ರಾಹುಲ್ ಗಾಂಧಿ ಅವರಿಗೆ ಮುಜುಗರ ಉಂಟುಮಾಡಿದೆ. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಹಸಿರು ನಿಶಾನೆ ತೋರಿತ್ತು ಎನ್ನುವುದಕ್ಕೆ ಇನ್ನೂ ಒಂದು ನಿದರ್ಶನವಿದೆ. ಸಿದ್ದರಾಮಯ್ಯ ರಾಜಕೀಯ ಕಾರಣಗಳಿಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಗುಟ್ಟನ್ನು ಸಾಮಾನ್ಯವಾಗಿ ಮಾಧ್ಯಮಗಳಿಗೆ ಬಿಟ್ಟುಕೊಡುವುದಿಲ್ಲ. ಆದರೆ ಈ ಬಾರಿ ರಾಹುಲ್ ಗಾಂಧಿ ಸಮಯ ಕೇಳಿದ್ದೇನೆ ಎಂದು ಹೇಳಿಯೇ ದಿಲ್ಲಿ ವಿಮಾನ ಹತ್ತಿದ್ದರು.
ಬಹುಶಃ ಅವರಿಗೆ ರಾಹುಲ್ ಗಾಂಧಿ ಸಿಗುವುದಿಲ್ಲ ಎನ್ನುವ ಖಾತರಿ ಇತ್ತು. ಆದರೂ ಹೇಳಿದ್ದರು. ಏಕೆಂದರೆ ರಾಹುಲ್ ಗಾಂಧಿ ಭೇಟಿಯಾಗಿದ್ದರೆ ಹೊರಗೆ ಬಂದು ‘ನಾನೇ 5 ವರ್ಷಕ್ಕೂ ಸಿಎಂ’ ಎಂದು ಹೇಳಲು ಸಾಧ್ಯವಿರಲಿಲ್ಲ. ಒಳಗೆ ಕೂಡ ಅವರಿಗೆ ತಾನಾಗಿಯೇ ‘ನಾನೇ ಮುಂದುವರಿಯುವೆ’ ಎಂದು ಹೇಳುವುದು, ಅದಕ್ಕೆ ರಾಹುಲ್ ಗಾಂಧಿ ಮೊಹರು ಒತ್ತುವುದು ಅಥವಾ ನಿರಾಕರಿಸುವುದು ಕಷ್ಟವಾಗುತ್ತಿತ್ತು. ಇದಲ್ಲದೆ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಜೊತೆಗೂ ಚರ್ಚೆ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತಿತ್ತು. ಈಗ ಇದ್ಯಾವುದೂ ಇಲ್ಲದೆ ಸಮಸ್ಯೆ ಬಗೆಹರಿದಿದೆ. ಕಡೆಪಕ್ಷ ಬಿಹಾರ ಚುನಾವಣೆವರೆಗೆ ಬಾಧೆ ಇಲ್ಲದಂತಾಗಿದೆ.
ಖರ್ಗೆಗೂ ಸುಳಿವಿತ್ತಾ?
ಸುರ್ಜೆವಾಲಾ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಮೊದಲೇ ‘ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ’ ಎಂದು ಹೇಳಿದ್ದು ಮಲ್ಲಿಕಾರ್ಜುನ ಖರ್ಗೆ. ಆ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗೆ ಮರುಜೀವ ಕೊಟ್ಟರು. ಇಷ್ಟು ದಿನ ಸುಮ್ಮನಿದ್ದ ಖರ್ಗೆ ಮಾತನಾಡುವುದು ಮತ್ತು ಸುರ್ಜೆವಾಲಾ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗುವುದು ಅಪಾಯದ ಮುನ್ಸೂಚನೆ ಎಂದರಿತ ಸಿದ್ದರಾಮಯ್ಯ ರಂಗಪ್ರವೇಶ ಮಾಡಿದರು. ಕೆ.ಸಿ. ವೇಣುಗೋಪಾಲ್ ಜೊತೆ ಮಾತನಾಡಿ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಕೆ.ಸಿ. ವೇಣುಗೋಪಾಲ್ ರಾಹುಲ್ ಗಾಂಧಿ ವಿದೇಶದಿಂದ ಬರುತ್ತಿದ್ದಂತೆ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು. ರಾಹುಲ್ ಗಾಂಧಿ-ಕೆ.ಸಿ. ವೇಣುಗೋಪಾಲ್ ಚರ್ಚೆಯ ವೇಳೆಯೇ ಒಬಿಸಿ ಸಿಎಂ ಬದಲಾವಣೆ ಬೇಡ ಎಂಬ ನಿರ್ಧಾರವಾಗಿದೆ. ನಿರ್ಧಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೂ ತಿಳಿಸಲಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸಿದ್ದರಾಮಯ್ಯ ದಿಲ್ಲಿಯಲ್ಲಿ ಮಾಧ್ಯಮಗಳಿಗೆ ಮಾತನಾಡುವ ಮುನ್ನವೇ ಖರ್ಗೆ ಬೆಂಗಳೂರಿಗೆ ತೆರಳಿದರು ಎನ್ನುತ್ತವೆ ದಿಲ್ಲಿ ಮೂಲಗಳು.
ಸಚಿವರು ಖರ್ಗೆ ಭೇಟಿ ಮಾಡಿದ್ದೇಕೆ?
ದಿಲ್ಲಿಯಲ್ಲಿ ಸಿದ್ದರಾಮಯ್ಯ ಸಂಚಲನ ಉಂಟುಮಾಡುತ್ತಿದ್ದಂತೆ ಅವರ ಆಪ್ತ ಸಚಿವರು ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ಮನೆಗೆ ಧಾವಿಸಿ ಕುತೂಹಲ ಸೃಷ್ಟಿಸಿದರು. ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ಆಗ್ರಹಿಸಿದ್ದಾರೆ. ಇದಲ್ಲದೆ ಇಷ್ಟೆಲ್ಲಾ ರಾದ್ಧಾಂತವಾಗಲು ಸುರ್ಜೆವಾಲಾ ಕಾರಣ, ಸಮಸ್ಯೆ ಬಗೆಹರಿಸಬೇಕಾದ ಹೈಕಮಾಂಡ್ ಪ್ರತಿನಿಧಿಯೇ ಸಮಸ್ಯೆಯನ್ನು ಹುಟ್ಟು ಹಾಕುತ್ತಿದ್ದಾರೆ. ಸುರ್ಜೆವಾಲಾ ಸಚಿವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಮೊದಲು ಅವರನ್ನು ಬದಲಾವಣೆ ಮಾಡಿ ಎಂಬ ಒತ್ತಾಯ ಕೂಡ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ ‘ಇದು ನಾನೊಬ್ಬನೇ ನಿರ್ಧಾರ ಮಾಡುವಂಥ ವಿಚಾರವಲ್ಲ, ನೋಡೋಣ’ ಎಂದಿದ್ದಾರಂತೆ.
ಡಿಕೆಶಿಗೆ ಮುಳುವಾದ ಬಿಜೆಪಿ-ಜೆಡಿಎಸ್ ಮೈತ್ರಿ
ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ಮುಂದುವರಿಸಲು ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಸುಮ್ಮನೆ ಕೂರಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಕೂಡ ಕಾರಣವಂತೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿರುವುದರಿಂದ ಹಳೆ ಮೈಸೂರು ಭಾಗದಲ್ಲಿ ಮುಂದೆ ಕಾಂಗ್ರೆಸ್‌ಗೆ ಹೆಚ್ಚಿನ ಅನುಕೂಲ ಆಗುವುದಿಲ್ಲ. ಡಿ.ಕೆ. ಶಿವಕುಮಾರ್ ಏನೇ ಪ್ರಯತ್ನ ಮಾಡಿದರೂ ಒಕ್ಕಲಿಗ ಮತಗಳನ್ನು ದಂಡಿಯಾಗಿ ಸೆಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಾಲಿಗೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಮಧ್ಯ ಕರ್ನಾಟಕವೇ ಗಟ್ಟಿ. ಅಲ್ಲಿ ಸಿದ್ದರಾಮಯ್ಯ ಜಗಜಟ್ಟಿ ಎನ್ನುವುದು ದಿಲ್ಲಿ ನಾಯಕರ, ವಿಶೇಷವಾಗಿ ರಾಹುಲ್ ಗಾಂಧಿ ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.
ಮೊದಲ ದಿನ ದರ್ಬಾರ್, 2ನೇ ದಿನ ಮೌನ!
ದಿಲ್ಲಿ ತಲುಪಿದ ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಗಳ ವಾಸಕ್ಕೆಂದೇ ನಿರ್ಮಿಸಿರುವ ಕರ್ನಾಟಕ ಭವನದ ಸ್ವೀಟ್ ಸೂಟಿನಲ್ಲಿ ಮೊದಲ ದಿನ ದರ್ಬಾರ್ ಮಾಡಿದರು. ಐಷಾರಾಮಿ ಆಸನದಲ್ಲಿ ಕೂತು ನಗುನಗುತ್ತಾ ಕೆಲ ಶಾಸಕರೊಂದಿಗೆ ಕಾಲ ಕಳೆದರು. ಮರುದಿನ ಚಿತ್ರಣವೇ ಬದಲಾಗಿತ್ತು. ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯ ಬಳಿಕ ಡಿ.ಕೆ.ಶಿವಕುಮಾರ್ ಕರ್ನಾಟಕ ಭವನದ ಕಡೆಗೆ ಸುಳಿಯಲೇ ಇಲ್ಲ. ಮಾಧ್ಯಮದವರು ಹೊರಗೆ ಭೇಟಿಯಾದಾಗಲೂ ಅವರ ಮುಖದಲ್ಲಿ ಹಿಂದಿನ ದಿನ ಇದ್ದ ನಗುವಿರಲಿಲ್ಲ. ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಚರ್ಚೆ ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ರಾಜಕೀಯ ಎನ್ನುವುದು ಎಷ್ಟೊಂದು ಅನಿಶ್ಚಿತ ಅಲ್ಲವೇ?