ಹಿಂದುಳಿದವರೆಲ್ಲಾ ಒಂದಾಗಲು ಸಕಾಲ!

ರಾಷ್ಟ್ರ ಮಟ್ಟದಲ್ಲಿ ಹಿಂದುಳಿದ ಜಾತಿಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆ ಸೃಷ್ಟಿಯಾಗಲು 38 ವರ್ಷ ಬೇಕಾಯಿತು.
1985ರವರೆಗೂ ಹಿಂದುಳಿದ ಜಾತಿಗಳ ಸಕಲೆಂಟು ಸಂಕಷ್ಟಗಳನ್ನೂ ನಾನಾ ನಮೂನೆಯ ಕಾರ್ಯಭಾರ ಒತ್ತಡದಲ್ಲಿದ್ದ ಗೃಹ ಇಲಾಖೆಯೇ ನಿರ್ವಹಿಸಬೇಕಾಗಿತ್ತು. ಆಗ ಸೃಷ್ಟಿಯಾದ ಕಲ್ಯಾಣ ಸಚಿವಾಲಯಕ್ಕೆ ಸ್ಪಷ್ಟ ರೂಪುರೇಷೆ ಸಿಕ್ಕಿ ಅದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಂದು ಬದಲಾಗಲು ಮತ್ತೆ ಮೂರು ವರ್ಷ ಬೇಕಾಯಿತು. ಇದು ಸರಕಾರಗಳು 3,743 ಹಿಂದುಳಿದ ಜಾತಿಗಳನ್ನು (ಮಂಡಲ್ ಆಯೋಗದ ಪ್ರಕಾರ) ಯಾವ ಪ್ರಮಾಣದಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದವು ಎನ್ನುವುದಕ್ಕೆ ಸಿಗುವ ಹಲವು ಅತ್ಯುತ್ತಮ ನಿದರ್ಶನಗಳ ಪೈಕಿ ಪ್ರಮುಖವಾದುದು.
1980ರ ಮಂಡಲ್ ಆಯೋಗದ ವರದಿ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಹಿಂದುಳಿದ ಜಾತಿಗಳ ಪಾಲು ಶೇ. 52. 2006ರ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್) ವರದಿ ಪ್ರಕಾರ ಶೇ. 41. 2021-22ರ ದಿ ಯುನೈಟೆಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ ವರದಿ ಪ್ರಕಾರ ಶಾಲೆಗೆ ನೋಂದಣಿಯಾದ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ಪ್ರಮಾಣ ಶೇ. 45. ಆದರೂ ಹಿಂದುಳಿದವರು ಈ ದೇಶದಲ್ಲಿ ಪ್ರಧಾನಿಯಾಗಲು 67 ವರ್ಷ ಬೇಕಾಯಿತು. ಇದು ನಾಗರಿಕ ಸಮಾಜ ಹಿಂದುಳಿದ ಜಾತಿಯನ್ನು ಯಾವ ಪ್ರಮಾಣದಲ್ಲಿ ನಗಣ್ಯ ಮಾಡುತ್ತಿದೆ ಎನ್ನುವುದಕ್ಕೆ ಸಿಗುವ ಸ್ಪಷ್ಟ ಉದಾಹರಣೆ.
ಹಿಂದುಳಿದ ಜಾತಿಗಳ ಪಾಲಿಗೆ ಜೀವದ್ರವ ಕರುಣಿಸಿದ್ದು ಮಂಡಲ್ ಆಯೋಗ ಮತ್ತು ಅದನ್ನು ಜಾರಿ ಮಾಡಿದ ವಿ.ಪಿ. ಸಿಂಗ್. ಆ ಜೀವದ್ರವವೀಗ ಬತ್ತುತ್ತಿದೆ. ಬತ್ತುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ದೇಶದ ಒಟ್ಟು ವ್ಯವಸ್ಥೆಯಲ್ಲಿ ಹಿಂದುಳಿದ ಜಾತಿಗಳ ಮಂತ್ರಿಗಳು, ಸಂಸದರು, ಶಾಸಕರು, ಅಧಿಕಾರಿಗಳು, ನ್ಯಾಯಾಧೀಶರು, ವಕೀಲರು, ಪ್ರಾಧ್ಯಾಪಕರು, ಪತ್ರಕರ್ತರು, ಕಲಾವಿದರು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರಬಲ್ಲ ಇನ್ಯಾವುದೇ ವೃತ್ತಿಗಳ, ವ್ಯಕ್ತಿಗಳ ಪ್ರಮಾಣ ನೋಡಬೇಕಾಗುತ್ತದೆ.
ಹಸಿವೇ ಹುಡುಕಾಟಕ್ಕೆ ಪ್ರೇರಣೆ. ಕತ್ತಲು ಆವರಿಸಿದಾಗಲೇ ಬೆಳಕಿನ ಬೆನ್ನತ್ತುವುದು. ಇದೇ ಪ್ರಕೃತಿಯ ನಿಯಮ. ಈಗ ಹಿಂದುಳಿದವರ ಅವಕಾಶಗಳು ಬರಿದಾಗುತ್ತಿವೆ. ಅಧಿಕಾರ ರಾಜಕಾರಣದಲ್ಲಿ ಮಾತ್ರವಲ್ಲ, ಉದ್ಯೋಗ, ಉದ್ಯಮ, ನವೋದ್ಯಮಗಳೆಲ್ಲದರಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ. ವರ್ಷದಿಂದ ವರ್ಷಕ್ಕೆ ಹಸಿವು ಅಸಹನೀಯವಾಗತೊಡಗಿದೆ. ಜೊತೆಗೆ ಅಜ್ಞಾನ ಮತ್ತು ವಿಘಟನೆಗಳೆಂಬ ಕಗ್ಗತ್ತಲು ಆವರಿಸಿಕೊಂಡಿದೆ. ಈ ಕತ್ತಲು ಸರಿದು ‘ಮೇಲ್ಜಾತಿಯಿಂದ ತುಳಿತಕ್ಕೆ ಒಳಪಟ್ಟು ನೋವುಣ್ಣುತ್ತಿರುವ ನಾನು, ನನ್ನ ಕೆಳಗಿರುವವರನ್ನು ತುಳಿಯಬಾರದೆಂಬ’ ಬೆಳಕು ಬಂದ ದಿನ ಹಿಂದುಳಿದವರ ಭವಿಷ್ಯ ಬದಲಾಗುತ್ತದೆ.
ಜಾತಿ ಜಾತಿಗಳಾಗಿ ವಿಘಟನೆಗೊಂಡಿರುವುದೇ ಹಿಂದುಳಿಯಲು, ನಗಣ್ಯವಾಗಲು, ನಿರ್ಲಕ್ಷ್ಯಕ್ಕೊಳಗಾಗಲು ಮತ್ತು ಇರುವ ಕನಿಷ್ಠ ಅವಕಾಶಗಳನ್ನೂ ಕಳೆದುಕೊಳ್ಳಲು ಕಾರಣ. ಹಿಂದುಳಿದವರು ಒಂದಾಗದಂತೆ ತಡೆಯುವ, ಜಾತಿಗಳ ಹೆಸರಿನಲ್ಲಿ, ಶ್ರೇಷ್ಠ, ಕನಿಷ್ಠ ಎಂಬ ಹೆಸರಿನಲ್ಲಿ ಬೆಂಕಿ ಹಚ್ಚಿ ಕಾವು ಕಾಯಿಸಿಕೊಳ್ಳುವ ಕ್ರೂರ ಇತಿಹಾಸ ಬಹಳ ಸ್ಪಷ್ಟವಾಗಿ ದಾಖಲಾಗಿದೆ. ಹಿಂದುಳಿದವರಿಗೆ ಒಂದಿಷ್ಟಾದರೂ ಒಳಿತಾಗುತ್ತದೆ ಎನ್ನುವ ಎಲ್ಲಾ ಸಂದರ್ಭಗಳಲ್ಲಿ ವಿರೋಧ ವ್ಯಕ್ತವಾಗುವುದು ವಾಡಿಕೆ. ಹಿಂದುಳಿದವರು ನಿದ್ದೆಯಿಂದ ಎದ್ದು ಕಾರ್ಯಪ್ರವೃತ್ತರಾಗುವಷ್ಟರಲ್ಲಿ ಪ್ರಬಲರು ತಮ್ಮ ಕೆಲಸಗಳನ್ನು ಮಾಡಿ ಮುಗಿಸಿಬಿಟ್ಟಿರುತ್ತಾರೆ. ಇದಕ್ಕೆ ಕರ್ನಾಟಕ ಸರಕಾರ ನಡೆಸಿದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿಯನ್ನು ಕತ್ತು ಹಿಸುಕಿ ಕೊಂದದ್ದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ.
ಇಷ್ಟೆಲ್ಲದರ ನಡುವೆ ಸದ್ಯ ದೇಶವ್ಯಾಪಿ ಹಿಂದುಳಿದವರ ಬಗ್ಗೆ ಚರ್ಚೆಯಾಗುತ್ತಿದೆ. ಮಂಡಲ್ ವರದಿ ಜಾರಿಯ ಬಳಿಕ ಇಷ್ಟು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವುದು ಈಗಲೇ. ಹಿಂದುಳಿದ ಜಾತಿಯ ವ್ಯಕ್ತಿಯೇ ಪ್ರಧಾನಿ ಹುದ್ದೆ ಏರಿದಾಗಲೂ ಹುಟ್ಟಿಕೊಳ್ಳದಿದ್ದ ನಿರೀಕ್ಷೆಗಳು ಈಗ ಮೊಳೆಕೆಯೊಡೆದಿವೆ. ಜಾತಿ ಗಣತಿ ಆಗಲೇ ಬೇಕು ಎಂದು ರಾಹುಲ್ ಗಾಂಧಿ ಹಚ್ಚಿದ ದೀಪ ಈಗ ಬೆಳಗುತ್ತಿದೆ. ಕೇಂದ್ರ ಸರಕಾರ ಜಾತಿ ಗಣತಿ ನಡೆಸಲು ನಿರ್ಧರಿಸಿ ಮುಂದಡಿ ಇಟ್ಟಿದೆ. ರಾಜ್ಯ ಸರಕಾರವೂ ಮತ್ತೊಮ್ಮೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಜೊತೆಜೊತೆಗೆ ಹಿಂದುಳಿದವರ ಹಿತಾಸಕ್ತಿಗಳನ್ನು ಹತ್ತಿಕ್ಕುವ ಪ್ರಯತ್ನವೂ ಹೊಸಹುಟ್ಟು ಪಡೆದುಕೊಂಡಿದೆ. ಕೇಂದ್ರ ಸರಕಾರ ಜಾತಿ ಗಣತಿ ನಡೆಸುತ್ತಿರುವಾಗ ರಾಜ್ಯ ಸರಕಾರ ಪ್ರತ್ಯೇಕವಾಗಿ ಸಮೀಕ್ಷೆ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದು ಬಾಲಿಶತನದಿಂದ ಕೂಡಿದ ಪ್ರಶ್ನೆ ಮಾತ್ರವಲ್ಲ, ‘ಜಾತಿ ಗಣತಿ ಬೇಡ ಎಂದು ಪರೋಕ್ಷವಾಗಿ ಹೇಳುವ’ ದುರುದ್ದೇಶವನ್ನೂ ಹೊಂದಿದೆ.
ಕೇಂದ್ರ ಸರಕಾರ ನಡೆಸುತ್ತಿರುವ ಜಾತಿ ಗಣತಿಗೂ ರಾಜ್ಯ ಸರಕಾರ ಮಾಡಲು ಹೊರಟಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೂ ತುಂಬಾ ವ್ಯತ್ಯಾಸವಿದೆ. ಕೇಂದ್ರದ ಜನಗಣತಿಯ ಪ್ರಮುಖ ಗುರಿ ಯಾವ ಜಾತಿಯ ಜನ ಎಷ್ಟಿದ್ದಾರೆ ಎನ್ನುವುದನ್ನು ಕಂಡುಕೊಳ್ಳುವುದು. ಅಲ್ಲಿ ಸಂಖ್ಯೆಗೆ ಮೊದಲ ಮಾನ್ಯತೆ. ಸ್ಥಿತಿಗತಿಗಳಿಗೆ ಕಡೆಯ ಕನಿಷ್ಠ ಆದ್ಯತೆ. ಆದರೆ ರಾಜ್ಯದ ಸಮೀಕ್ಷೆಗೆ ಯಾವ ಜಾತಿಯ ಜನ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಯಾವ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ಪತ್ತೆಹಚ್ಚುವುದೇ ಪ್ರಾಧಾನ್ಯತೆ.
ರಾಜ್ಯ ಸರಕಾರಕ್ಕೆ ಸಮೀಕ್ಷೆ ನಡೆಸುವ ಅಧಿಕಾರವೇ ಇಲ್ಲ ಎನ್ನುವ ಇನ್ನೊಂದು ಸುಳ್ಳನ್ನು ಬಿತ್ತಲಾಗುತ್ತಿದೆ (ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ,1995 ಕಲಂ 9(2) ಅಡಿಯಲ್ಲಿ ಸಮೀಕ್ಷೆ ನಡೆಸಬಹುದಾಗಿದೆ). ಇದು ಕೂಡ ಜಾತಿ ಗಣತಿ ಬೇಡ ಎಂದು ಪರೋಕ್ಷವಾಗಿ ಹೇಳುವ ಇನ್ನೊಂದು ಸಂಚು. ಹಿಂದುಳಿದ ಸಮುದಾಯಗಳಿಗೆ ಹಿಂದಿನ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಜಾರಿಯಾಗದಿದ್ದರೂ ಕಡೆಯ ಪಕ್ಷ ಬಯಲಾಗುತ್ತದೆ ಎಂಬ ಭರವಸೆಯಿತ್ತು. ಆ ಎಲ್ಲಾ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಲಾಯಿತು. ರಾಜ್ಯ ಸರಕಾರ ಎರಡನೇ ಬಾರಿಗೆ ಸಮೀಕ್ಷೆ ನಡೆಸಲು ಮುಂದಾಗುತ್ತಿರುವಂತೆ ಮತ್ತೆ ಅದೇ ರೀತಿಯ ಪರೋಕ್ಷ ದಾಳಿಗಳು ಶುರುವಾಗಿವೆ. ಮುಂದೆ ಇವು ಇನ್ನಷ್ಟು ಪ್ರಖರವಾಗುವ ಸಾಧ್ಯತೆಯೂ ಇದೆ. ಹಿಂದೆ 2015ರಲ್ಲೂ ಸಮೀಕ್ಷೆ ಶುರುವಾಗುವ ಮುನ್ನವೇ ಇಂಥ ದಾಳಿಗಳು ನಡೆದಿದ್ದವು. ನೆಲಕ್ಕೆ ಕೆಡವಿಕೊಂಡು ಹೊಸಕುಹಾಕುತ್ತಿದ್ದರೆ ಸಾವರಿಸಿಕೊಂಡು ಅಥವಾ ಸೆಟೆದು ಮೇಲೇಳದೆ ಬೇರೆ ದಾರಿ ಇರುವುದಿಲ್ಲ. ಹಿಂದುಳಿದವರ ಪರಿಸ್ಥಿತಿಯೂ ಅದೇ ರೀತಿ ಆಗಿದೆ. ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಎನ್ನುವಂತೆ ಹಿಂದುಳಿದ ಜಾತಿಗಳು ಒಂದಾಗತೊಡಗಿವೆ. ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಹಿತರಕ್ಷಣಾ ಸಮಿತಿ, ಕರ್ನಾಟಕ ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆ, ಶೋಷಿತ ಸಮುದಾಯಗಳ ವೇದಿಕೆ ಮತ್ತಿತರ ಹೆಸರುಗಳಲ್ಲಿ ಸಕ್ರಿಯವಾಗಿವೆ. ಹಾಗೆಯೇ ಹಿಂದುಳಿದವರ ಜನ್ಮಸಿದ್ಧ ಹಕ್ಕು ಎನ್ನುವಂತೆ ಒಡಕನ್ನೂ ಒಡಲೊಳಗಿಟ್ಟುಕೊಂಡಿವೆ. ಕೆಲವು ಜಾತಿಗಳು ತಮ್ಮಷ್ಟಕ್ಕೆ ತಾವು ಒಂದಾದರೆ ಸಾಕೆಂಬ ಸೀಮಿತ ಚೌಕಟ್ಟನ್ನು ಹಾಕಿಕೊಂಡಿವೆ.
ಎಲ್ಲಾ ಸಮಿತಿ, ಸಂಘಟನೆ, ವೇದಿಕೆಗಳು ಒಂದಾಗಿ ‘ಸಾಮಾಜಿಕ ನ್ಯಾಯಕ್ಕಾಗಿ ಸಮೀಕ್ಷೆ’ ಎಂಬ ದನಿ ಎತ್ತದಿದ್ದರೆ ಗುರಿ ಮುಟ್ಟಲಾರವು. ಸಣ್ಣ ನದಿಗಳೆಲ್ಲಾ ಒಂದಾಗಿ ಹರಿಯದಿದ್ದರೆ ಸಮುದ್ರ ಸೇರಲಾರವು. ಕಂಡಕಂಡಲ್ಲಿ ಕವಲೊಡೆದರೆ, ಮತ್ಯಾವುವೋ ಮಹಾನದಿಗಳ ಜೊತೆ ಸಮಾಗಮವಾದರೆ ಅಂತಿಮವಾಗಿ ಹೇಳಹೆಸರಿಲ್ಲದಂತಾಗುತ್ತವೆ. ಹಿಂದುಳಿದ ಜಾತಿಗಳಿಗೆ ಈ ಅರಿವು ಬೇಕಾಗಿದೆ. ಜಾತಿ ಜಾತಿ ಮೀರಿ ವರ್ಗವಾಗಿ ಒಂದಾದರೆ ಮಾತ್ರ ಒಳಿತಾಗುವುದೆಂಬ ಬೆಳಕು ಬೇಕಾಗಿದೆ. ಹಾಗೆಯೇ ದೊಡ್ಡವರು ದೊಡ್ಡತನ ತೋರಬೇಕಾಗಿದೆ.
ರಾಷ್ಟ್ರಮಟ್ಟದಲ್ಲಿ ವಿ.ಪಿ. ಸಿಂಗ್ ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ಕರ್ನಾಟಕದಲ್ಲಿ ದೇವರಾಜ ಅರಸು ಅವರಿಂದ ಹಿಡಿದು ಸಿದ್ದರಾಮಯ್ಯವರೆಗೆ ಹಿಂದುಳಿದವರ ದನಿ ಮತ್ತೆ ಕೇಳಿಸಲು ಮೂವತ್ತು ವರ್ಷಗಳು ಬೇಕಾದವು. ಈಗ ಹಿಂದುಳಿದವರು ಮೈಮರೆತರೆ ಮತ್ತೆ ಮಾತು ಹೊರಡಲು ಇನ್ನೂ ಮೂವತ್ತು ವರ್ಷ ಬೇಕಾಗಬಹುದು. ಉಳ್ಳವರ ಹತಾರಗಳು ಮೊದಲಿಗಿಂತಲೂ ಮೊನಚಾಗಿರುವುದರಿಂದ ಹಿಂದುಳಿದವರು ರಾಜಕೀಯ ನಾಯಕತ್ವವನ್ನು ನೆಚ್ಚಿಕೊಂಡು ಕೂರುವುದಕ್ಕೂ ಮಿಗಿಲಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮುನ್ನುಗ್ಗಬೇಕಾಗಿದೆ.
ರಾಜಕೀಯ ಉದ್ದೇಶ ಏನೇ ಇರಲಿ, ‘ನೀತಿ ನಿರೂಪಣೆ ರೂಪಿಸುವ ನಿರ್ಣಾಯಕ ಜಾಗದಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿ-ಪಂಗಡದವರು ಮತ್ತು ಅಲ್ಪಸಂಖ್ಯಾತರು ಎಷ್ಟು ಪ್ರಮಾಣದಲ್ಲಿದ್ದಾರೆ’ ಎಂಬ ರಾಹುಲ್ ಗಾಂಧಿ ಎತ್ತುತ್ತಿರುವ ಪ್ರಶ್ನೆಯನ್ನು ಈ ಎಲ್ಲಾ ಸಮುದಾಯಗಳು ಪದೇ ಪದೇ ಕೇಳಿಕೊಳ್ಳಬೇಕಾಗಿದೆ. ರಾಹುಲ್ ಗಾಂಧಿ ಭಾಗೀದಾರ್ ಸಮಾವೇಶದ ಮೂಲಕ ಕೊಟ್ಟ ‘ಹಿಂದುಳಿದವರು ಒಂದಾಗಬೇಕೆಂಬ’ ಸಂದೇಶವನ್ನೂ ಕೇಳಿಸಿಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಇದು ಹಿಂದುಳಿದ ಎಲ್ಲಾ ಜಾತಿಗಳು ಒಂದಾಗಲು ಸಕಾಲ. ಹಿಂದುಳಿದವರು ಮಾತ್ರವಲ್ಲ, ಬಹುಕಾಲ ಉಳಿಯಲು ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಒಂದಾಗುವುದಕ್ಕೂ ಸಕಾಲ.