ದಲಿತರು ಅಂಬೇಡ್ಕರ್ ಜೊತೆ ಇದ್ದಾರಾ?

ಒಳ ಮೀಸಲಾತಿ ಜಾರಿ ಕುರಿತು ಉದ್ಭವಿಸಿರುವ ವಿವಾದದಲ್ಲಿ ಪರಿಶಿಷ್ಟ ಜಾತಿಯವರಿಗೆ (ದಲಿತ) ಹಲವು ರೀತಿಯ ಪಾಠಗಳಿವೆ. ನಮ್ಮನ್ನು ‘ಶೋಷಣೆ ಮಾಡಲಾಯಿತು’ ಎಂದು ದೂಷಣೆ ಮಾಡುವ ದಲಿತರು ‘ಶೋಷಣೆಗೆ ಒಳಪಟ್ಟಿದ್ದೇಕೆ?’ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಅವರನ್ನು ಶತಶತಮಾನಗಳ ಕಾಲ ‘ಶೋಷಣೆ ಮಾಡಲಾಯಿತು’ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಹಾಗೆಯೇ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಅನುಸರಿಸಿದರೆ ‘ಶೋಷಣೆಗೆ ಒಳಪಡುವುದು ತಪ್ಪುತ್ತದೆ’ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.
ಬಾಬಾ ಸಾಹೇಬರು Educate, Agitate ಮತ್ತು Organise ಎಂದಷ್ಟೇ ಹೇಳಿಕೊಡಲಿಲ್ಲ. ವಿದ್ಯಾವಂತರಾಗಬೇಕು, ಚಳವಳಿ ಮಾಡಬೇಕು ಮತ್ತು ಸಂಘಟಿತರಾಗಬೇಕು ಎಂಬ ಮಾತನ್ನು ಮುಂದುವರಿಸಿ ‘ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಿರಾಶರಾಗಬೇಡಿ. ನೀವು ನನ್ನೊಟ್ಟಿಗೆ ಇರುವ ಹಾಗೆಯೇ, ನಾನೂ ಯಾವಾಗಲೂ ನಿಮ್ಮೊಟ್ಟಿಗೆ ಇರುತ್ತೇನೆ’ (ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಸಂಪುಟ 18, ಪುಟ ಸಂಖ್ಯೆ 492) ಎಂದೂ ಹೇಳಿದ್ದಾರೆ.
ಆದರೆ ವಿದ್ಯಾವಂತರಾಗಿಯೂ ಒಂದಾಗದಿರುವುದು, ನ್ಯಾಯಯುತವಾಗಿ ಸಿಗಬೇಕಾದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡದೆ ಮೈಮರೆತಿರುವುದು ಬಾಬಾ ಸಾಹೇಬರಿಗೆ ಮಾಡುತ್ತಿರುವ ಅಪಮಾನವಲ್ಲದೆ ಬೇರೆಯಲ್ಲ. ಜೊತೆಗೆ ವಿಶ್ವಾಸ ಕಳೆದುಕೊಂಡು ‘ನಮಗ್ಯಾರು ಕೊಡುತ್ತಾರೆ?’ ಎಂಬ ನಿಲುವಿಗೆ ಬಂದಿರುವುದು, ನಿರಾಶರಾಗಿ ದುರುಳರಿಗೆ ದಾಳವಾಗಿರುವುದು, ಮತ್ತು ತಾತ್ವಿಕವಾಗಿ-ತಾರ್ಕಿಕವಾಗಿ ಅಂಬೇಡ್ಕರ್ ಅವರಿಂದ ದೂರವಾಗಿರುವುದು ಕೂಡ ಚಾರಿತ್ರಿಕ ದ್ರೋಹವೇ. ಒಳ ಮೀಸಲಾತಿ ವಿಷಯದಲ್ಲಿ ಆಗುತ್ತಿರುವುದೂ ಇದೇ.
2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಶೇ. 18.27ರಷ್ಟು (ಪರಿಶಿಷ್ಟ ಪಂಗಡದ ಶೇ. 7.1ರಷ್ಟು ಸೇರಿದರೆ ಶೇ. 25.28ರಷ್ಟು- ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು). ಆದರೂ ಈವರೆಗೆ ಒಬ್ಬನೇ ಒಬ್ಬ ದಲಿತನಿಗೆ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ಏಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ‘ಬೇರೆಯವರು ಬಿಡಲಿಲ್ಲ’ ಎನ್ನುವುದು ಪ್ರಮುಖ ಕಾರಣ. ಅದಕ್ಕಿಂತಲೂ ಮುಖ್ಯವಾದ ಕಾರಣ ‘ದಲಿತರು ಒಗ್ಗಟ್ಟಾಗಿ ಹಕ್ಕೊತ್ತಾಯ ಮಾಡಲಿಲ್ಲ’ ಎನ್ನುವುದು.
ಹಿಂದೆ ಎನ್. ರಾಚಯ್ಯ, ಟಿ.ಎನ್. ನರಸಿಂಹಮೂರ್ತಿ, ಬಿ. ಶಿವಣ್ಣ, ಕೆಎಚ್ ರಂಗನಾಥ್ ಅವರಂಥ ಅನುಭವಿಗಳಿದ್ದರು. ಬಿ. ರಾಚಯ್ಯ ಅವರಂಥ ಧೈರ್ಯವಂತ ನಾಯಕರಿದ್ದರು. ಅವರು ಆ ಕಾಲದಲ್ಲೇ ಜಾತಿ ಹೆಸರಿನಲ್ಲಿ ಹೋಟೆಲ್ ನಡೆಸುವಂತಿಲ್ಲ ಎಂಬ ಕಾನೂನು ತಂದಿದ್ದರು. ಬಸವಲಿಂಗಪ್ಪ ಅವರಂಥ ದೂರದೃಷ್ಟಿ ನಾಯಕರಿದ್ದರು. ಫೋನ್ ಕದ್ದಾಲಿಕೆ ಕುರಿತು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಬಸವಲಿಂಗಪ್ಪ ‘ದೂರದಲ್ಲೆಲ್ಲೋ ಮಾತನಾಡುವುದನ್ನು ಇಲ್ಲಿ ಕೇಳಿಸಿಕೊಳ್ಳಬಹುದಾದ ಫೋನ್ ಇಷ್ಟೊಂದು ಬದಲಾವಣೆ ತಂದಿದೆ. ಒಂದೊಮ್ಮೆ ಒಬ್ಬರು ಮಾತಾಡುವುದನ್ನು ಇನ್ನೊಬ್ಬರು ನೋಡುವ ರೀತಿಯ ತಂತ್ರಜ್ಞಾನವೂ ಬಂದರೆ ಸಂಪರ್ಕ ಕ್ರಾಂತಿಯೇ ಆದೀತು’ ಎನ್ನುವ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಈಗ ಅದು ನಿಜವಾಗಿದೆ. ಆದರೂ ಅವರಾರಿಗೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ. ಅದಕ್ಕೆ ಸಣ್ಣದೊಂದು ಸಮರ್ಥನೆ ಇದೆ. ಏಕೆಂದರೆ ಅದು ದಲಿತ ರಾಜಕಾರಣ ಹರಳುಗಟ್ಟುತ್ತಿದ್ದ ಕಾಲ.
ಇದಾದ ಮೇಲೆ ದಲಿತ ರಾಜಕಾರಣ ಬದಲಾಗಬೇಕಾಗಿತ್ತು. ದಲಿತ ನಾಯಕರು ಬದಲಾಗಬೇಕಾಗಿತ್ತು. 1999, 2004, 2008, 2013ರಲ್ಲಿ ಬಂದಿದ್ದ ಮುಖ್ಯಮಂತ್ರಿ ಆಗುವ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿತ್ತು. 1999ರಲ್ಲಿ ತನಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು ಎಂದು ಇತ್ತೀಚೆಗಷ್ಟೇ ಮಲ್ಲಿಕಾರ್ಜುನ ಖರ್ಗೆ ಹೇಳಿಕೊಂಡಿದ್ದರು. ಅದು ನೂರಕ್ಕೆ ನೂರರಷ್ಟು ನಿಜ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲೇಬೇಕು ಎಂದು ಒಬ್ಬನೇ ಒಬ್ಬ ದಲಿತ ನಾಯಕ ಧ್ವನಿ ಎತ್ತಲಿಲ್ಲ ಎನ್ನುವುದು ಅಷ್ಟೇ ನಿಜ. 2004ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ದೇವೇಗೌಡರು ತಪ್ಪಿಸಿದರು ಎನ್ನುವುದು ಸತ್ಯ. ಹಾಗೆಯೇ ಖರ್ಗೆ ಕೂಡ ಕಾಂಗ್ರೆಸ್ ಹೈಕಮಾಂಡ್ ಎದುರು ‘ನನಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ. ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು’ ಎಂದು ಪ್ರತಿಪಾದಿಸಲಿಲ್ಲ ಎನ್ನುವುದೂ ಅಷ್ಟೇ ಸತ್ಯ. 2008ರಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಶಾಸಕರು ಸೇರಿ ಸರಕಾರ ರಚನೆ ಮಾಡಬಹುದಿತ್ತು. ಆಗ ಖರ್ಗೆ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದುದ್ದರಿಂದ ಸಿಎಂ ಸ್ಥಾನಕ್ಕೆ ನ್ಯಾಚುರಲ್ ಚಾಯ್ಸ್ ಆಗಬಹುದಿತ್ತು. ಆಗ ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಬಹುದಿತ್ತು ಎನ್ನುವುದು ಎಷ್ಟು ದಿಟವೋ, ಖರ್ಗೆ ಅಗತ್ಯ ತಯಾರಿ ಮಾಡಿಕೊಳ್ಳದೆ ಸೋತರು ಎನ್ನುವುದೂ ಅಷ್ಟೇ ದಿಟ. 2013ರಲ್ಲಿ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗಬಹುದಿತ್ತು. ಆದರವರು ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂಬ ಹಿತೈಷಿಗಳ ಮಾತನ್ನು ಧಿಕ್ಕರಿಸಿ ಕೊರಟಗೆರೆಯಲ್ಲೇ ಕಣ್ಣಕ್ಕಿಳಿದು ಸೋತ ಪರಿಣಾಮ ಸಾಧ್ಯವಾಗಲಿಲ್ಲ. ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಎಂಬ ಆರೋಪಗಳಿವೆ ಆದರೆ ಅವರೊಂದಿಗೆ ದಲಿತ ನಾಯಕರು ಕೈ ಜೋಡಿಸಿದ್ದರು ಎಂದೂ ಹೇಳಲಾಗುತ್ತದೆ.
ಬಿಜೆಪಿಯತ್ತ ನೋಡುವುದಾದರೆ ಗೋವಿಂದ ಕಾರಜೋಳ ಮತ್ತು ಅರವಿಂದ ಲಿಂಬಾವಳಿ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು. ಅಷ್ಟೇ, ಅವಕಾಶ ಸಿಗಲಿಲ್ಲ. ಕಾರಣವೇ ಇಲ್ಲದೇ ರಮೇಶ್ ಜಿಗಜಿಣಗಿ ಅವರಿಂದ ಕೇಂದ್ರ ಮಂತ್ರಿ ಸ್ಥಾನ ಕಿತ್ತುಕೊಳ್ಳಲಾಯಿತು. ಕೇಂದ್ರ ಮಂತ್ರಿಯಾಗಿದ್ದರೂ ಎ. ನಾರಾಯಣಸ್ವಾಮಿ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು. ಅರವಿಂದ ಲಿಂಬಾವಳಿ ಹೊರತುಪಡಿಸಿ ಉಳಿದವರೆಲ್ಲರೂ ಎಡಗೈ ಸಮುದಾಯದವರು ಮತ್ತು ಒಳ ಮೀಸಲಾತಿ ಜಾರಿಯಾಗಲಿ ಎಂದು ಆಗ್ರಹಿಸುತ್ತಿರುವವರು. ಇವರೆಲ್ಲರನ್ನು ನಗಣ್ಯ ಮಾಡಿರುವ ಬಿಜೆಪಿ ಈಗ ಒಳಮೀಸಲಾತಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ.
1999ರಿಂದ 2013ರವರೆಗೆ ಸತತವಾಗಿ ನಾಲ್ಕು ಬಾರಿ ಕೈಗೆ ಬಂದು ತುತ್ತು ಬಾಯಿಗೆ ಬಾರದಿದ್ದಾಗಲೂ ದಲಿತ ನಾಯಕರು ಎಚ್ಚರಗೊಳ್ಳಲಿಲ್ಲ. ಕೇವಲ ಕುರ್ಚಿ ಹಿಡಿಯುವ ರಾಜಕಾರಣ ಮಾಡುತ್ತಿದ್ದಾರೆಯೇ ವಿನಃ ಅಧಿಕಾರ ಪಡೆಯುವ ರಾಜಕಾರಣ ರಾಜ್ಯದ ದಲಿತ ರಾಜಕಾರಣಿಗಳಿಗೆ ಅರ್ಥವೇ ಆದಂತಿಲ್ಲ. ಅದಕ್ಕಾಗಿ ಅವರು ಅಂಬೇಡ್ಕರ್ ಮಾತ್ರವಲ್ಲದೆ ಮಾನ್ಯವರ್ ಕಾನ್ಶೀರಾಮ್ ಅವರನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಒಳಮೀಸಲಾತಿ ಹೋರಾಟ ಆರಂಭದ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿದ್ದ ಕಾನ್ಶೀರಾಮ್‌ಬೆಂಗಳೂರಿನ ಬಾಲಬ್ರೂಯಿ ಅತಿಥಿಗೃಹದಲ್ಲಿ ತಂಗಿದ್ದರು. ಅಲ್ಲಿಗೆ ಕರ್ನಾಟಕದ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಡಿ ಎಂದು ಕೇಳಲು ಮಾರಸಂದ್ರ ಮುನಿಯಪ್ಪ (ಆಗ ಬಿಎಸ್‌ಪಿ ರಾಜ್ಯ ಸಂಚಾಲಕ) ಎಲ್. ಹನುಮಂತಯ್ಯ (ಆಗ ಒಳಮೀಸಲಾತಿ ಹೋರಾಟಗಾರ) ಮತ್ತಿತರರು ಹೋಗಿದ್ದರು. ಹನುಮಂತಯ್ಯ ವಿಷಯ ಪ್ರಸ್ತಾವಿಸುತ್ತಿದ್ದಂತೆ ಕೆರಳಿ ಕೆಂಡವಾದರು ಕಾನ್ಶೀರಾಮ್.
ಆದರೆ ಅವರ ಆಕ್ರೋಶದ ಮಾತುಗಳಲ್ಲೂ ಅಂತಃಕರಣ ಇತ್ತು. ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಬಸವಣ್ಣನ ಕಾಲದಲ್ಲೇ ಅನುಭವ ಮಂಟಪದ ಮೂಲಕ ಎಲ್ಲರನ್ನೂ ಒಳಗೊಳ್ಳುವ ಕಲ್ಪನೆ ಮೊಳಕೆಯೊಡೆದಿತ್ತು. ಮೈಸೂರು ಮಹಾರಾಜರ ಕಾಲದಲ್ಲೇ ಮೀಸಲಾತಿ ನೀಡಲಾಗಿತ್ತು. ಬೂಸಾ ಹೋರಾಟ, ಬಂಡಾಯ ಚಳವಳಿಗಳು ನಡೆದ ನೆಲವಾಗಿತ್ತು. ಇಂಥ ರಾಜ್ಯದಲ್ಲಿ ಇಷ್ಟೊತ್ತಿಗಾಗಲೇ ದಲಿತರು ರಾಜಕೀಯ ಅಧಿಕಾರ ಹಿಡಿಯಬೇಕಿತ್ತು. ನಮ್ಮವರು ಮುಖ್ಯಮಂತ್ರಿಯಾಗಬೇಕಿತ್ತು. ನೀವು ಯಕಶ್ಚಿತ್ ಒಳ ಮೀಸಲಾತಿ ಕೇಳುತ್ತಿದ್ದೀರಿ ಎಂದು ಬಹಳ ಬೇಸರದಿಂದ ಭಿಕ್ಷುಕರು ಎಂಬ ಪದ ಬಳಸಿದ್ದರಂತೆ.
ಕಾನ್ಶೀರಾಮ್ ಏಕೆ ಮುಖ್ಯ ಎಂದರೆ ಅವರು ಉತ್ತರ ಪ್ರದೇಶದಲ್ಲಿ ಮಾಡಿದ ಪ್ರಯೋಗದ ಕಾರಣಕ್ಕೆ. ಅದು ಇಡೀ ದೇಶದ ದಲಿತ ರಾಜಕಾರಣದ ಪ್ರಮುಖ ಅಧ್ಯಾಯ. ಜಾತಿ, ಧರ್ಮ ಮತ್ತು ಫ್ಯೂಡಲ್ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತಿರುವ ಉತ್ತರ ಪ್ರದೇಶದ ರಾಜಕಾರಣದಲ್ಲಿ ಪರಸ್ಪರ ಬದ್ಧ ವೈರಿಗಳಾಗಿದ್ದ ದಲಿತ ಮತ್ತು ಬ್ರಾಹ್ಮಣರನ್ನು ಹತ್ತಿರ ತಂದು ರಾಜಕೀಯ ಅಧಿಕಾರ ಹಿಡಿದವರು ಕಾನ್ಶೀರಾಮ್. ಅದರಿಂದಾಗಿಯೇ ಉತ್ತರ ಪ್ರದೇಶದಲ್ಲಿ ದಲಿತರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಮಾಯಾವತಿ ಅವರಿಗೆ ಕಾನ್ಶೀರಾಮ್‌ಅವರಿಗಿದ್ದ ಕಾಲು ಭಾಗ ದೂರದೃಷ್ಟಿ ಮತ್ತು ಬದ್ಧತೆಗಳಿದ್ದರೆ ಸಾಕಾಗಿತ್ತು. ಅವರು ಪ್ರಧಾನಿಯಾಗಿರುತ್ತಿದ್ದರು.
ಇನ್ನೊಂದು ಉದಾಹರಣೆಯನ್ನು ಉಲ್ಲೇಖಿಸಲೇಬೇಕು. ದೇಶದಲ್ಲೇ ಶೇಕಡಾವಾರು ಅತಿ ಹೆಚ್ಚು ದಲಿತರಿರುವುದು ಪಂಜಾಬ್‌ನಲ್ಲಿ. ಅಲ್ಲಿ 2021ರಲ್ಲಿ ದಲಿತ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ರಾಹುಲ್ ಗಾಂಧಿ ಅಲ್ಲದೆ ಬೇರಾರಿಂದಲೂ ಅದು ಸಾಧ್ಯವಾಗುತ್ತಿರಲಿಲ್ಲ. ಆದರೆ ನಂತರದ ಚುನಾವಣೆಯಲ್ಲಿ ದಲಿತರೇ ಚರಣಜಿತ್ ಸಿಂಗ್ ಚನ್ನಿ ಬೆನ್ನಿಗೆ ನಿಲ್ಲಲಿಲ್ಲ. ದಲಿತರು ‘ಕಾಂಗ್ರೆಸ್ ಬೇಡವಾದರೂ ಚನ್ನಿ ಬೇಕು’ ಎಂಬ ಲೆಕ್ಕಾಚಾರದಲ್ಲಿ ಮತ ಚಲಾಯಿಸಿದ್ದರೆ ದಲಿತ ಮುಖ್ಯಮಂತ್ರಿ ಮುಂದುವರಿಯುತ್ತಿದ್ದರು.
ಮತ್ತೆ ಒಳ ಮೀಸಲಾತಿ ವಿಷಯಕ್ಕೆ ಮರಳುವುದಾದರೆ ಅದು ಹೊಸ ಪರಿಕಲ್ಪನೆಯಲ್ಲ. ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗಳ ಪೀಠ ‘ಪರಿಶಿಷ್ಟ ಜಾತಿ ಎನ್ನುವುದು Homogeneous group (ಒಂದೇ ರೀತಿಯ ಜಾತಿಗಳ ಗುಂಪು). ಅವುಗಳನ್ನು ನಿರ್ಧರಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ’ ಎಂದು ತೀರ್ಪು ನೀಡಿತು. ಇದರಿಂದಾಗಿ ರಾಜ್ಯಗಳು ಒಳ ಮೀಸಲಾತಿ ನೀಡುವ ಅಧಿಕಾರವನ್ನು ಕಳೆದುಕೊಂಡವು. ಒಳ ಮೀಸಲಾತಿ ಹೋರಾಟ ಹುಟ್ಟುಕೊಂಡಿತು. ಅದು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನ್ಯಾ. ಅರುಣ್ ಮಿಶ್ರಾ ನೇತೃತ್ವದ ಪೀಠವು ಪರಿಶಿಷ್ಟ ಜಾತಿ ಎನ್ನುವುದು Heterogeneous Group (ಬಹು ಜಾತಿಗಳ ಗುಂಪು) ಎಂದು ತೀರ್ಪು ನೀಡಿತಲ್ಲದೆ ಈ ವಿಷಯವನ್ನು ಏಳು ಜನರ ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ನಿರ್ಧರಿಸುವುದು ಸೂಕ್ತ ಎಂದು ಹೇಳಿತು. ಅಂತಿಮವಾಗಿ 2024ರಲ್ಲಿ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಾಜ್ಯ ಸರಕಾರಗಳು ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂಬ ತೀರ್ಪು ನೀಡಿತು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹರ್ಯಾಣ, ಆಂಧ್ರ ಮತ್ತು ತೆಲಾಂಗಣ ರಾಜ್ಯಗಳು ಜಾರಿ ಮಾಡಿವೆ. ಕರ್ನಾಟಕದಲ್ಲಿ ತಡವಾಗುತ್ತಿದೆ. ಈಗ ನ್ಯಾ. ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗ ಕೊಟ್ಟ ವರದಿಯನ್ನು ಸರಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದೆ. ಸಂಪುಟ ಸಭೆಯಲ್ಲಿ ಕೆಲವರು ವಿರೋಧ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಹಂತದಲ್ಲಿ ದಲಿತ ಸಮುದಾಯದ ಎದುರು ದೊಡ್ಡ ಸವಾಲು ಸೃಷ್ಟಿಯಾಗಿದೆ.
ತಮ್ಮನ್ನು ಬೇರೆಯವರು ತುಳಿದರು, ಶೋಷಣೆ ಮಾಡಿದರು ಎಂದು ಹೇಳುತ್ತಿದ್ದ ದಲಿತರು ಈಗ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಒಂದು ಸಮುದಾಯಕ್ಕೆ ಹೆಚ್ಚಾಗಬಹುದು, ಒಂದಕ್ಕೆ ಕಮ್ಮಿಯಾಗಬಹುದು, ಆದರೂ ನಾವು ಹಂಚುಣ್ಣುತ್ತೇವೆ ಎಂದು ನಿರ್ಧರಿಸಬೇಕಾಗಿದೆ. ಒಳ ಮೀಸಲಾತಿಯ ಅವಕಾಶವನ್ನು ಪಡೆಯುವ ಮೊದಲ ಹೆಜ್ಜೆ ಮಾತ್ರ. ಆ ಮೊದಲ ಹೆಜ್ಜೆಯೇ ರಾಜಕೀಯ ಅಧಿಕಾರ ಹಿಡಿಯುವ ಮಹತ್ವದ ಗುರಿಯತ್ತ ಕೊಂಡೊಯ್ಯುವ ನಡಿಗೆಯಾಗಬಹುದು. ಒಗ್ಗಟ್ಟಾಗಿದ್ದರೆ ಸಾಧ್ಯ ಎನ್ನುವುದು ಉತ್ತರ ಪ್ರದೇಶದಲ್ಲಿ ಸಾಬೀತಾಗಿದೆ. ಒಗ್ಗಟ್ಟಿಲ್ಲದಿದ್ದರೆ ಅಧಿಕಾರ ಬಂದರೂ ಉಳಿಯುವುದಿಲ್ಲ ಎನ್ನುವುದು ಪಂಜಾಬಿನಲ್ಲಿ ಗೊತ್ತಾಗಿದೆ. ಅಂಬೇಡ್ಕರ್ ಹೇಳಿದಂತೆ ಜಾಗೃತರಾಗಬೇಕಿದೆ. ಕಾನ್ಶೀರಾಮ್ ಹೇಳಿದಂತೆ ಒಗ್ಗಟ್ಟಾಗಿ Practical Politics ಮಾಡಬೇಕಾಗಿದೆ. ನೆರೆಯ ಮಂದಕೃಷ ಅವರಂತೆ ಹೋರಾಟ ಮಾಡಿ ಗೆಲ್ಲಬೇಕಿದೆ. ಅಂಬೇಡ್ಕರ್ ವಿದ್ಯಾವಂತರಾಗಿ, ಒಂದಾಗಿ ಮತ್ತು ಹೋರಾಟ ಮಾಡಿ ಎಂಬುದರ ಜೊತೆಗೆ ‘ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ನಿರಾಶರಾಗಬೇಡಿ’ ಎಂದು ಹೇಳಿದಂತೆ ದಲಿತ ಸಮುದಾಯಗಳು ಪರಸ್ಪರ ನಂಬಿಕೆ ವಿಶ್ವಾಸದಿಂದ ಸಾಗಿದರೆ ನಿರಾಶರಾಗುವ ಅಗತ್ಯ ಇರುವುದಿಲ್ಲ. ಹೃದಯ ವೈಶಾಲ್ಯದಿಂದ ಪರಸ್ಪರ ಅಪ್ಪಿಕೊಂಡರೆ ದಲಿತರೊಂದಿಗೆ ಸದಾ ಅಂಬೇಡ್ಕರ್ ಇದ್ದೇ ಇರುತ್ತಾರೆ. ಆದರೆ ಅಂಬೇಡ್ಕರ್ ಜೊತೆಗೆ ಇದ್ದೇವಾ ಇಲ್ಲವಾ ಎನ್ನುವುದನ್ನು ದಲಿತರು ನಿರೂಪಿಸಬೇಕಾಗಿದೆ.
ಆಫ್ ದಿ ರೆಕಾರ್ಡ್
ಯಾವುದೇ ಪಕ್ಷ ದಲಿತ ನಾಯಕನನ್ನು ಮುಖ್ಯಮಂತ್ರಿ ಎಂದು ಬಿಂಬಿಸಿದರೆ ಇಲ್ಲಿನ ಮುಂದುವರೆದ ಅಥವಾ ಬಲಾಢ್ಯ ಜಾತಿಗಳು ಮುಕ್ತ ಮನಸ್ಸಿನಿಂದ ಬೆಂಬಲಿಸಿಬಿಡುತ್ತವೆ ಎಂದು ಹೇಳಲಾಗದು. ಹಾಗಾಗುವುದಿದ್ದರೆ 2008ರಲ್ಲೇ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು. ಹಿಂದುಳಿದ ಜಾತಿಗಳ ಪೈಕಿ ಕೂಡ ಶ್ರೇಷ್ಠತೆಯ ವ್ಯಸನಕ್ಕೆ ಸಿಲುಕಿರುವವರು ದಲಿತ ಮುಖ್ಯಮಂತ್ರಿ ಅಭ್ಯರ್ಥಿಗೆ ಸಹಕಾರ ಕೊಡಲಾರರು. ಅಂತಿಮವಾಗಿ ದಲಿತರು ಮನೆ ಗೆದ್ದು ಮಾರು ಗೆಲ್ಲಬೇಕು.