ಜರ್ಮನಿಯ ಕೆಲಸ ತೊರೆದು ಹುಟ್ಟೂರಲ್ಲಿ ಕೃಷಿಯನ್ನು ನೆಚ್ಚಿಕೊಂಡ ಯೋಗೇಶ್

ಚಾಮರಾಜನಗರ: ಗ್ರಾಮಾಂತರ ಪ್ರದೇಶದ ರೈತ ತನ್ನ ಮಗನನ್ನು ವಿದೇಶಕ್ಕೆ ಕಳುಹಿಸಿ ಕೈ ತುಂಬಾ ಸಂಬಳ ಪಡೆಯುವ ಕನಸು ಹೊತ್ತಿದ್ದ ಅನ್ನದಾತ. ಆದರೆ, ವಿದೇಶಕ್ಕೆ ಹೋಗಿದ್ದ ರೈತನ ಮಗನಿಗೆ ಹುಟ್ಟೂರಿನ ಮಣ್ಣಿನ ಸೆಳೆತ ಹೆಚ್ಚಾಗಿ ಕೈ ತುಂಬಾ ಸಂಬಳ ಕೊಡುವ ಕೆಲಸಕ್ಕೆ ಗುಡ್ ಬೈ ಹೇಳಿ, ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ.
ಇದು ಜರ್ಮನಿಯಲ್ಲಿ ಕೆಲಸ ಬಿಟ್ಟು ಜನಿಸಿದ ಹಳ್ಳಿಯ ಮಡಿಲಿಗೆ ಮರಳಿದ ಯುವ ರೈತನಾಗಿರುವ ಯೋಗೇಶ್ ಪ್ರಭುಸ್ವಾಮಿ ಕೃಷಿಗಾಥೆ.
ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರಿನ ಪ್ರಭುಸ್ವಾಮಿ ಶಿವಬಸಪ್ಪ ಮತ್ತು ತ್ರಿವೇಣಿ ದಂಪತಿ ಪುತ್ರ ಯೋಗೇಶ್ ಜರ್ಮನಿಯಲ್ಲಿ ಮೆಕ್ಯಾನಿಕ್ ಇಂಜಿನಿಯರ್ ವೃತ್ತಿ ಮಾಡುತ್ತಿದ್ದರು. ತಂದೆಯ ನಿಧನದ ಬಳಿಕ ಅನಾಥಗೊಂಡ ಕೃಷಿ ಭೂಮಿ ಸೆಳೆತ ಆರಂಭಿಸಿತು. ಎರಡು ವರ್ಷಗಳ ಹಿಂದೆ ವಿದೇಶದಲ್ಲಿ ಕಾಯಕ ಬಿಟ್ಟು ಕೃಷಿ ಮಾಡುವತ್ತ ಮುಂದಾದರು.
ಹೆಚ್ಚಾಗಿ ವಿದ್ಯಾವಂತರು ಕೃಷಿಗಿಳಿದರೆ ವೈಜ್ಞಾನಿಕವಾಗಿ ಕೃಷಿ ಮಾಡಲು ಮುಂದಾಗುತ್ತಾರೆ. ಯೋಗೇಶ್ ವಿಚಾರದಲ್ಲೂ ಇದೇ ಆಗಿದೆ. 8.5 ಎಕರೆ ‘ಶಿವಪ್ರಭು ನೈಸರ್ಗಿಕ ತೋಟ’ ಇವರ ಪ್ರಯೋಗ ಶಾಲೆಯಾಯಿತು. ಬಂಡವಾಳ ಚೆಲ್ಲದೆ ಬುಡದಿಂದ ಬಿಗಿಯಾಗಿ ಮೇಲೇಳಬಲ್ಲ ಸಾವಯವ ನೈಸರ್ಗಿಕ ಕೃಷಿಯ ಫಲಿತಾಂಶ ಕಣ್ಣೆದುರೇ ಕಾಣುವಂತಾಗಿದೆ.
ರೈತ ಯೋಗೇಶ್ ಅವರ ತೋಟ ಹೊರನೋಟಕ್ಕೆ ಸಪ್ಪೆ. ಒಳಹೊಕ್ಕರೆ ಯುವ ರೈತರಿಗೆ ಅಧ್ಯಯನದ ರುಚಿ ಹತ್ತಿಸುತ್ತದೆ. ಕೊನೆಗೆ ಇಲ್ಲೇನಿಲ್ಲ ಎಂದು ಕೇಳುವಂತಾಗುತ್ತದೆ. ಬಾಳೆ-2,000, ತೆಂಗು-400, ಅಡಿಕೆ-1,000, ಡ್ರಾಗನ್ ಫ್ರೂಟ್-600, ನುಗ್ಗೆ-1,000, ತೊಗರಿ-1,000, ಅಗಸೆ-500, ಬಟರ್ಫ್ರೂಟ್-90, ಹಲಸು-100, ಪೈನಾಪಲ್-500, ಗೆಣಸು, ಲಕ್ಷ್ಮಣಫಲ, ರಾಮಫಲ, ಸೀತಾಫಲ, ಹನುಮ ಫಲ, ದಾಳಿಂಬೆ, ರಂಬೂಟ, ಬಿಲ್ವಪತ್ರೆ, ಬೇಲ, ಸೀಬೆ, ದ್ರಾಕ್ಷಿ, ಸಪೋಟ, ಗೋಡಂಬಿ, ನಿಂಬೆ, ಪರಂಗಿ, ಮೂಸಂಬಿ, ಲವಂಗ ಪಲಾವ್ ಎಲೆ ಗಿಡ, ದಾಲ್ಚಿನ್ನಿ, ನಲ್ಲಿ, ಅಂಜೂರ, ಕರ್ಜೂರ, ಮಾವು, ಏಲಕ್ಕಿ, ವಾಟರ್ ಆಪಲ್, ರೋಸ್ ಆಪಲ್, ಊಟಿ, ಕಾಶ್ಮೀರಿ ಸೇಬು, ಹಲಸು, ಕಿತ್ತಲೆ, ಲಿಚ್ಚಿ, ಪುನರ್ಪುಳಿ ಇನ್ನಿತರೆ ಗಿಡಗಳಿವೆ. ಆಸ್ಟ್ರೇಲಿಯನ್ ನಟ್ಸ್ ಎಂದೇ ಪ್ರಸಿದ್ಧಿಯಾಗಿರುವ ಮೆಕಡೇಮಿಯಾ, ಮಲೇಷ್ಯಾ ಮೂಲದ ಪೌಷ್ಟಿಕಯುಕ್ತ ರಂಬೂಟಾನ್, ಥಾಯ್ಲೆಂಡ್ ಮೂಲದ ಕೆಪೆಲ್ ಮತ್ತು ಇನ್ನೂ ಹಲವು ಹಣ್ಣಿನ ಗಿಡಗಳು ಬೇರೂರಿವೆ. ಇದ್ಯಾವುದಕ್ಕೂ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಎರೆಹುಳು ಗೊಬ್ಬರ, ಎರೆ ಜಲ, ಬಿಲ್ವಪತ್ರ ರಸಾಯನ, ಜೀವಾಮೃತ ನೀಡುತ್ತಿದ್ದಾರೆ. ಒಂದು ಕಡೆಯಂತೂ ಬಾಳೆಗೆ ನೀರನ್ನು ಬಿಟ್ಟ ಏನನ್ನೂ ಹಾಕುತ್ತಿಲ್ಲ. ಆದರೂ ಬಾಳೆ ಚೆನ್ನಾಗಿ ಬಂದಿವೆ.
ಬಾಳೆಯಲ್ಲ ಬಂಗಾರ: ಗುಂಪಿನಲ್ಲಿ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಬೆಳೆದು, ಪ್ರತೀ ಕಟ್ಟೆಗೂ ದಷ್ಟಪುಷ್ಟ ಗೊನೆ ಕೊಟ್ಟಿರುವ ಬಾಳೆ ಬರಿ ಬಾಳೆಯಲ್ಲ. ಯುವ ರೈತ ಯೋಗೇಶ್ ಬಾಳು ಬೆಳಗುತ್ತಿರುವ ಬಂಗಾರ. ಒಂದೆಡೆ ಕಾಯಿ ಕಚ್ಚಿರುವ ಡ್ರ್ಯಾಗನ್ಫ್ರೂಟ್ ಇನ್ನೊಂದೆಡೆ ಗೊನೆ ಕಟ್ಟಿರುವ ಬಾಳೆ ಆರೋಗ್ಯವಂತ ಕೃಷಿಗೆ ಸಣ್ಣ ಸಾಕ್ಷಿಯಂತಿದೆ. ನೇಂದ್ರ, ಮದರಂಗಿ, ಏಲಕ್ಕಿ, ನಂಜನಗೂಡು ರಸಬಾಳೆ, ಕೆಂಪು ಬಾಳೆ ನಳನಳಿಸುತ್ತಿವೆ. ಇದಕ್ಕೂ ಮೊದಲು ಯೋಗೇಶ್ ಕಪ್ಪುಅರಿಶಿಣ ಬೆಳೆದಿದ್ದರು ಎನ್ನುವುದು ಗಮನಾರ್ಹ ಸಂಗತಿ.
ಎರೆ ಜಲ ಘಟಕದ ಲ್ಯಾಬ್: ಯುವ ರೈತ ಯೋಗೇಶ್ ತೋಟ ಗಾಳಿ ರಹಿತ ಜೀವಾಮೃತ ಮತ್ತು ಎರೆ ಜಲ ತಯಾರಿಕೆಯಲ್ಲಿ ಲ್ಯಾಬ್ ಆಗಿದೆ. ಡ್ರಮ್ನಿಂದ ದೊಡ್ಡ ಗಾತ್ರದ ಬ್ಯಾಗ್ಗೆ ಸಂಪರ್ಕ ಕಲ್ಪಿಸಿ ಗಂಜಲ, ಸಗಣಿ, ಮಜ್ಜಿಗೆ, ಬೆಲ್ಲ ಇನ್ನಿತರ ಪದಾರ್ಥಗಳನ್ನು ಸೇರಿಸಿ 50 ದಿನಗಳ ನಂತರ ದಿನಕ್ಕೆ 25 ಲೀಟರ್ ಗಾಳಿ ರಹಿತ ಜೀವಾಮೃತ ತಯಾರಿಕೆ ಮಾಡುತ್ತಿದ್ದಾರೆ. ತೋಟದಲ್ಲಿ ಬೆಳೆದ ಕಳೆಯನ್ನು ಕೊಳೆಸಿ ಎರೆಹುಳು ಗೊಬ್ಬರಕ್ಕೆ ಬಳಕೆ ಮಾಡುತ್ತಿದ್ದಾರೆ. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಎರೆಜಲವನ್ನು ತಯಾರಿಕೆ ಮಾಡುತ್ತಿದ್ದು, ಇದು ಇತರ ರೈತರ ಅಧ್ಯಯನಕ್ಕೆ ಯೋಗ್ಯವಾಗಿದೆ. ತೋಟದ ಒಂದು ನಿಗದಿತ ಜಾಗದಲ್ಲಿ 200 ಲೀಟರ್ನ ಡ್ರಮ್ಗಳನ್ನು ಇಟ್ಟು ಅದರೊಳಗೆ ಪದರ ಪದರವಾಗಿ ಇಟ್ಟಿಗೆ ಚೂರು(9 ಇಂಚು), ದಪ್ಪಜಲ್ಲಿ(9 ಇಂಚು), ಸಣ್ಣ ಜಲ್ಲಿ(9 ಇಂಚು), ಮರಳು ಅಥವಾ ಎಂ ಸ್ಯಾಂಡ್(9 ಇಂಚು) ಹಾಕಿ ಜಾಲರಿ ಮೆಸ್ ಇಟ್ಟು ಸೆಮಿ ಕಾಂಪೋಸ್ಟ್, ಜೀವಾಮೃತ, 5 ಕೆ.ಜಿ ಎರೆಹುಳು ಬಿಟ್ಟಿದ್ದಾರೆ. ಡ್ರಮ್ ಮೇಲೆ ಹನಿ ತೊಟ್ಟಿಕ್ಕುವಂತೆ ಮಡಿಕೆ ತೂತು ಮಾಡಿ ಕಟ್ಟಿ ನೀರು ಹಾಕಬೇಕು. ನೀರು ಗೊಬ್ಬರವನ್ನು ಒದ್ದೆ ಮಾಡಿ ಎರೆಹುಳುವಿನಲ್ಲಿ ಉತ್ಪತ್ತಿಯಾಗುವ ದ್ರವ್ಯವನ್ನು ಭಟ್ಟಿಸಿ ಕೆಳಗಿನ ನಲ್ಲಿಯಲ್ಲಿ ತೊಟ್ಟಿಕ್ಕುತ್ತದೆ. ಈ ಎರೆಜಲ ಶಕ್ತಿ ಮದ್ದಿದ್ದಂತೆ. ಗಿಡಗಳ ಪಾಲಿಗೆ ಸೂಪರ್ ಟಾನಿಕ್. ಇದನ್ನು ಬೆಳೆಗಳಿಗೆ ಹಾಕುವ ಎರೆಹುಳ ಗೊಬ್ಬರ, ಎರೆಜಲವನ್ನು ಹೇಗೆ ತಯಾರಿಕೆ ಮಾಡಬೇಕೆಂದು ಹೇಳಿಕೊಡುತ್ತಾರೆ. ಅಗತ್ಯವಿರದ್ದವರಿಗೆ ಮಾರಾಟವನ್ನೂ ಮಾಡುತ್ತಿದ್ದಾರೆ.
ಯೋಗೇಶ್ ಎರಡು ಕರು, ಎರಡು ಹಸುಗಳನ್ನು ಸಾಕಿದ್ದಾರೆ. ನುಗ್ಗೆ ಸೊಪ್ಪಿನ ಪುಡಿಯ ಮೌಲ್ಯವರ್ಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನರ್ಸರಿಯಲ್ಲಿ ಗಿಡಗಳನ್ನು ಮಾರಾಟ ಮಾಡುತ್ತಿದ್ದಾರೆ. ಯೂಟ್ಯೂಬ್, ಇನ್ಸ್ಟಾಗ್ರಾಂ ಬಳಸಿ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದಾರೆ. ಗೊಬ್ಬರ, ಎರೆಜಲ, ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ದೇಶ-ವಿದೇಶಗಳಿಂದ ಆಸಕ್ತ ರೈತರು ಯೋಗೇಶ್ ಅವರನ್ನು ಸಂಪರ್ಕಿಸಿ ಮಾಹಿತಿಗಳನ್ನು ತಿಳಿದು ಕೊಳ್ಳುತ್ತಿದ್ದಾರೆ.
ರೈತರ ಭೇಟಿ: ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶವನ್ನು ಸ್ಮರಿಸುವ ಯುವ ರೈತ ಯೋಗೇಶ್ ಅವರ ತೋಟಕ್ಕೆ ಮೇಘಾಲಯ, ತಮಿಳುನಾಡಿನ ರೈತರ ತಂಡ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ. ಅಲ್ಲದೇ, ಕೃಷಿ ವಿದ್ಯಾರ್ಥಿಗಳು ಆಗಮಿಸಿ ಯೋಗೇಶ್ ಅವರಿಂದ ಎರೆಹುಳ ಗೊಬ್ಬರ, ಎರೆಜಲ ತಯಾರಿಕೆಯ ತರಬೇತಿಯನ್ನು ಪಡೆದುಕೊಂಡು ಹೋಗಿದ್ದಾರೆ. ಸ್ಥಳೀಯವಾಗಿ 100ಕ್ಕೂ ಹೆಚ್ಚು ರೈತರು ತೋಟಕ್ಕೆ ಭೇಟಿ ನೀಡಿದ್ದಾರೆ.
ಕೃಷಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದರಿಂದ ದಿನದಿಂದ ದಿನಕ್ಕೆ ಬಂಡವಾಳ ಸುರಿಯುವುದು ಹೆಚ್ಚಾಗುತ್ತದೆ. ಇಳುವರಿ ಬಂಡವಾಳಕ್ಕಷ್ಟೇ ಸಮನಾಗುತ್ತಾ ಹೋಗುತ್ತದೆ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿದರೆ ಖರ್ಚು ಕಡಿಮೆ. ಒಳ ಸುರಿವುಗಳು ಜಾಸ್ತಿ ಇರಲ್ಲ.
-ಯೋಗೇಶ್ ಪ್ರಭುಸ್ವಾಮಿ, ಯುವ ರೈತ