ಯಾದಗಿರಿ| ಮಕ್ಕಳ ಕೈಯಿಂದ ಶಾಲಾ ಸ್ವಚ್ಛತೆ ಕಾರ್ಯ: ಕ್ರಮ ಕೈಗೊಳ್ಳುವಲ್ಲಿ ಶಿಕ್ಷಣ ಇಲಾಖೆ ಮೀನಾಮೇಷ
ಪೋಷಕರ ಆರೋಪ
ಯಾದಗಿರಿ:ಜಿಲ್ಲೆಯ ಕೇಂದ್ರ ಕಚೇರಿಯ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಂದ ಕೋಣೆಗಳ ಸ್ವಚ್ಛತೆ ಮಾಡಿಸಿದ ಶಾಲೆಯ ಮುಖ್ಯ ಗುರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿಆರ್‌ಸಿ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಮಕ್ಕಳ ಪೋಷಕರ ಹಾಗೂ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಜೂ.9ರಂದು ಮುಖ್ಯ ಗುರುಗಳ ಸಮ್ಮುಖದಲ್ಲಿ ಮಕ್ಕಳಿಂದ ಶಾಲಾ ಸ್ವಚ್ಛತಾ ಕಾರ್ಯ, ಪೋಷಕರ ಆಕ್ರೋಶ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಜೂ.9ರಂದು ವರದಿ ಪ್ರಕಟಗೊಂಡಿದ್ದು, ಘಟನೆ ನಡೆದು 11 ದಿನಗಳು ಕಳೆದರೂ ಡಿಡಿಪಿಐ ಅವರು ಯಾವುದೇ ಕ್ರಮ ಕೈಗೊಂಡಿಲ್ಲ, ಇತ್ತ ಬಿಇಒ ಅವರು ನಾಮಕಾವಸ್ಥೆಯಂತೆ 10 ದಿನಗಳ ನಂತರ ಶಾಲೆಗೆ ಭೇಟಿ ನೀಡಿದ್ದಾರೆ. ಆದರೆ ಭೇಟಿ ನೀಡಿದ ವರದಿ ಇದುವರೆಗೂ ಡಿಡಿಪಿಐ ಅವರಿಗೆ ಸಲ್ಲಿಸಿಲ್ಲ ಎನ್ನಲಾಗಿದೆ.
ಮಕ್ಕಳಿಂದ ಶಾಲೆ ಕೋಣೆಯ ಸ್ವಚ್ಛತೆ, ಚರಂಡಿ ಸ್ವಚ್ಛತೆ ಸೇರಿದಂತೆ ಹಲವು ಕಾನೂನು ಬಾಹಿರ ಕೆಲಸಗಳನ್ನು ಶಿಕ್ಷಕರು ಮಾಡಿಸಿರುವ ಘಟನೆಗಳು ಜಿಲ್ಲೆಯಲ್ಲಿ ಹಲವು ವರದಿಯಾಗಿ ಪ್ರಕರಣಗಳು ದಾಖಲಾಗಿ ಕ್ರಮಗಳು ಆಗಿವೆ. ಆದರೆ ಈ ಪ್ರಕರಣದ ಮಾಹಿತಿ ಪಡೆಯಬೇಕೆಂದರೆ ಡಿಡಿಪಿಐ ಹಾಗೂ ಬಿಇಒ ಅವರು ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ, ಕಚೇರಿಯಲ್ಲಿಯೂ ಸಿಗುತ್ತಿಲ್ಲ ಜೊತೆಗೆ ಮಾಹಿತಿಯೂ ನೀಡದೇ, ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಮಕ್ಕಳ ಕೈಯಿಂದ ಇಂತಹ ಕೆಲಸ ಮಾಡಿಸುತ್ತಿರುವುದು ಅಪರಾಧ ಕೂಡಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರು ಡಿಡಿಪಿಐ, ಬಿಇಒ ಮತ್ತು ಶಾಲೆಯ ಮುಖ್ಯ ಗುರುಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಹೆಸರು ಹೇಳಲು ಇಚ್ಚಿಸದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವರಿಂದ ಈ ಪ್ರಕರಣ ಮುಚ್ಚಿಹಾಕಲು ಯತ್ನ
ಮಕ್ಕಳಿಂದ ಶಾಲಾ ಕೋಣೆಗಳನ್ನು ಸ್ವಚ್ಛಗೊಳಿಸಿದ ಪ್ರಕರಣವನ್ನು ಮುಚ್ಚಿಹಾಕಲು ಕೆಲವು ಸಂಘಟನೆ ಮುಖಂಡರು, ರಾಜಕೀಯ ನಾಯಕರು ಹಾಗೂ ಸರಕಾರಿ ನೌಕರರ ಸಂಘದ ವತಿಯಿಂದ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆಯಬಾರದು. ಹಾಗೂ ವರದಿ ಪ್ರಕಟಿಸಿದ ವರದಿಗಾರರಿಗೂ ಹಲವರು ಫೋನ್ ಕರೆ ಮಾಡುತ್ತಿದ್ದಾರೆ. ಜೊತೆಗೆ ಶಾಲೆಗೆ ಭೇಟಿ ನೀಡಿದ ಬಿಇಒ ಅವರು ಮಕ್ಕಳಿಂದ ಸ್ವಚ್ಛತೆ ಮಾಡಿಸಿಲ್ಲ ಎಂದು ಹೇಳಿಕೆಗಳನ್ನು ವೀಡಿಯೊ ರೂಪದಲ್ಲಿ ಪಡೆದು ವರದಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಕ್ಕಳಿಂದ ಶಾಲಾ ಕೋಣೆಗಳನ್ನು ಸ್ವಚ್ಛಗೊಳಿಸಿದ ಪ್ರಕರಣ ಕುರಿತು ಮಾಹಿತಿ ಪಡೆದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ.
- ಡಾ.ಸುಶೀಲಾ.ಬಿ, ಜಿಲ್ಲಾಧಿಕಾರಿ, ಯಾದಗಿರಿ
ಮಕ್ಕಳಿಂದ ಶಾಲೆಯಲ್ಲಿ ಯಾವುದೇ ಸ್ವಚ್ಛತೆಗೊಳಿಸುವ ಕಾರ್ಯ ಮಾಡಿಸುವುದು ಅಪರಾಧ. ನಮಗೆ ಮಾಹಿತಿ ತಿಳಿದಿರಲಿಲ್ಲ. ಸಂಬಂಧಿಸಿದವರಿಂದ ಈ ಕುರಿತು ಮಾಹಿತಿ ಪಡೆದು ಇಂತಹ ಕೆಲಸ ಮಾಡಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಡಿಡಿಪಿಐ ಹಾಗೂ ಬಿಇಒ ಅವರಿಗೆ ಸೂಚಿಸುತ್ತೇನೆ.
- ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವರು ಯಾದಗಿರಿ