ಭೂಮಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಹೊಣೆ ಯಾರದ್ದು?

ಈ ನೆಲದ ಮೇಲೆ ಜೀವನ ನಡೆಸುವ ಕೋಟ್ಯಂತರ ಜೀವಿಗಳು ವಿಕಾಸ ಜೊತೆಯಲ್ಲಿ ಅಳಿವು ಉಳಿವನ್ನು ಹೊಂದುತ್ತ ಮನುಷ್ಯನ ಜೊತೆಯಲ್ಲಿ ಪ್ರಕೃತಿಯಲ್ಲಿ ಬದುಕಿವೆ. ಮನುಷ್ಯನಾದಿಯಾಗಿ ಎಲ್ಲ ಜೀವಿಗಳು ತಾವು ಉಣ್ಣುವಾಗ, ಉಡುವಾಗ, ಮಲಗುವಾಗ ಒಂದಲ್ಲ ಒಂದು ನೆಲೆಯಲ್ಲಿ ತ್ಯಾಜ್ಯವನ್ನು ಉತ್ಪಾದಿಸುತ್ತವೆ. ಇದನ್ನು ನಾವು ಸಾಮಾನ್ಯವಾಗಿ ಕಸ ಅಂತ ಹೇಳಬಹುದು. ಮನುಷ್ಯನನ್ನು ಬಿಟ್ಟು ಉಳಿದ ಜೀವಿಗಳು ಪ್ರಕೃತಿದತ್ತವಾದ ವಸ್ತಗಳನ್ನೇ ಕಸವಾಗಿ ಹೊರ ಹಾಕುತ್ತವೆ. ಅದು ಅದರಲ್ಲಿಯೇ ಕರಗಿ ಮಣ್ಣಿಲ್ಲಿ ಸತ್ವವನ್ನು ತುಂಬುತ್ತದೆ. ಆನೆಯೊಂದು ಕಬ್ಬು ತಿಂದು ಅದರ ಸಿಪ್ಪೆಯನ್ನು ನೆಲಕ್ಕೆ ಚೆಲ್ಲಿದರೆ ಮುಂದೆ ಅದು ಪಂಚಭೂತಗಳಲ್ಲಿ ಒಂದಾಗಿ ಹೋಗುತ್ತದೆ. ನಾವು ಇಲ್ಲಿ ಯೋಚಿಸಬೇಕಾದದ್ದು ಮನುಷ್ಯನ ಕಸದ ಚರಿತ್ರೆಯನ್ನು. ಕಸ ಅಂದ ಕೂಡಲೇ ತ್ಯಾಜ್ಯ, ಬೇಡವಾದ ವಸ್ತು, ಬಳಸಿದ್ದು, ಒಡೆದು ಹೋದದ್ದು, ಉಪಯೋಗಕ್ಕೆ ಬಾರದ್ದು ಎಂದೆಲ್ಲ ಕರೆಯುವುದಿದೆ. ಜೀವನ ಮಾಡುವುದಕ್ಕೆ ಮನುಷ್ಯ ಕಲಿತ ತರುವಾಯ ಕಸ ಅವನ ಜೊತೆಯಲ್ಲಿ ಹುಟ್ಟುಕೊಳ್ಳುವುದಕ್ಕೆ ಶುರುವಾಯಿತು. ಅನ್ನವನ್ನು ಎಲೆಯಲ್ಲಿ ಉಂಡ ನಂತರ ಎಲೆಯನ್ನು ನೆಲಕ್ಕೆ ಎಸೆಯಬೇಕಾಯಿತು. ಭತ್ತವನ್ನೋ ಇನ್ಯಾವುದೋ ಪದಾರ್ಥವನ್ನು ಸಂಗ್ರಹಿಸಲು ಮಾಡಿಕೊಂಡ ಹುಲ್ಲಿನ, ಮಣ್ಣಿನ, ಮರದ ಸಾಧನಗಳೆಲ್ಲ ಕೆಲವು ಕಾಲದ ನಂತರದಲ್ಲಿ ಸತ್ವವನ್ನು ಕಳೆದುಕೊಂಡು ಬಳಕೆಗೆ ಬಾರದೆ ಇದ್ದಾಗ ಅದನ್ನು ಎತ್ತಿ ಒಲೆಗೋ, ಮರದ ಬುಡಕ್ಕೋ, ಬಯಲಿಗೋ ಎಸೆಯುತ್ತಿದ್ದರೂ ಅದು ಮಣ್ಣಿನಲ್ಲಿ ಕೂಡಿಕೊಂಡು ತನ್ನತನವನ್ನು ಕಳೆದುಕೊಳ್ಳುತ್ತಿತ್ತು ಕಾರಣ ಅದು ಪ್ರಕೃತಿಯ ಅಂಶವೇ ಆಗಿತ್ತು.
ಕಾಲ ಕಳೆದಂತೆ ಮನುಷ್ಯನ ಚಟುವಟಿಕೆಯು ಬಹುಸ್ತರಕ್ಕೆ ಪಲ್ಲಟವಾಗಿ ಅವನು ಪ್ರಕೃತಿಯನ್ನು ಮೀರಿ ನಡೆಯುವುದಕ್ಕೆ ಯೋಚಿಸಿದ. ಅದನ್ನೇ ಶೋಧನೆ ಅಂತ ನಾವು ಹೆಮ್ಮೆಯಿಂದ ಕರೆದುಕೊಂಡೆವು, ಬೀಗಿದೆವು. ಇದರ ಫಲವಾಗಿ ಕಬ್ಬಿಣ, ಚಿನ್ನ, ಬೆಳ್ಳಿ, ಕಂಚು ಇತ್ಯಾದಿ ಲೋಹಗಳ ವಸ್ತಗಳು ನಮ್ಮ ದೈನಂದಿನ ಬದುಕಿಗೆ ಸೇರಿಕೊಂಡು ಸಂಸ್ಕೃತಿಯನ್ನು ಹುಟ್ಟು ಹಾಕಿದವು. ಈ ಸಂಸ್ಕೃತಿಯು ಬಹುಕಾಲ ಜನರ ಜೀವನ ಮೀಮಾಂಸೆಯನ್ನು ಅಪ್ಪಿಕೊಂಡು ನಡೆದರೂ ಆಧುನಿಕತೆಯ ಪರಂಪರೆಯೊಂದಿಗೆ ಸ್ಪರ್ಧಿಸಿ ನಿಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಪ್ರಕೃತಿಯ ವಸ್ತುಗಳೊಂದಿಗೆ ಜೀವನವನ್ನು ಜತನವಾಗಿಸಿಕೊಂಡಿದ್ದ ನಾವು ಮೆಲ್ಲಗೆ ಕೈಗಾರಿಕೆಯ ಉತ್ಪಾದಿತ ವಸ್ತುಗಳ ಕಡೆಗೆ ಹೆಜ್ಜೆ ಹಾಕಿದೆವು. ನಮ್ಮ ನಿತ್ಯ ಬಳಕೆಯ ವಸ್ತುವಿನಿಂದ ಹಿಡಿದು ದ್ರವ, ಘನ, ಅನಿಲದಂತಹ ಎಲ್ಲ ಪದಾರ್ಥಗಳನ್ನು ಅಂಗಡಿಯಿಂದ, ಮಾಲ್‌ನಿಂದ ಮನೆಗೆ ಕೊಂಡು ಹೋಗುವುದಕ್ಕೆ, ಸಂಗ್ರಹಿಸುವುದಕ್ಕೆ ಪ್ಲಾಸ್ಟಿಕ್, ಪಾಲಿಥಿಲೀನ್, ಪಿವಿಸಿ, ಎಲ್‌ಡಿಪಿಇ, ಪಿಪಿ, ಪಿಎಸ್ ಇತ್ಯಾದಿ ರಾಸಾಯನಿಕದಿಂದ ರೂಪಿಸಿದ ವಸ್ತುಗಳನ್ನು ಬಳಸುವುದಕ್ಕೆ ಆರಂಭಿಸಲಾ ಯಿತು. ಜಗತ್ತಿನ ಬಹುತೇಕ ಕೈಗಾರಿಕೆಗಳು ಇಂತಹ ವಸ್ತುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತಲುಪಿಸಿ ಲಾಭವನ್ನು ಗಳಿಸುವುದಕ್ಕೆ ನಿಂತವು; ಇತ್ತ ಜಗತ್ತಿನ ಬಹುಪಾಲು ಜನರು ಪ್ರಕೃತಿದತ್ತವಾದ ಮನೆ-ಮಠ, ಲೋಟ-ತಟ್ಟೆ, ಮಡಿಕೆ-ಕುಡಿಕೆ, ಬುಟ್ಟಿ-ತಟ್ಟಿ ಇತ್ಯಾದಿ ವಸ್ತುಗಳ ಬಳಕೆಯನ್ನು ಕೈಬಿಟ್ಟು ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳನ್ನೇ ಕೊಳ್ಳುವ ಮತ್ತು ಬಳಸುವ ಕಡೆಗೆ ನಡೆದರು. ಈ ನಡೆಯೇ ಅವರಿಗೆ ಆಪ್ತ ಅನ್ನಿಸಿತು. ಈ ನಡುವೆ ಜನ ಸಂಖ್ಯೆಯು ಹೆಚ್ಚಾಯಿತು, ಮನೆಗಳು ಅಧಿಕವಾದವು. ದಿನ ಬಳಕೆಯ ವಸ್ತುಗಳು, ಕೊಳ್ಳುವ, ಕೊಂಡು ಹೋಗುವ, ಸಂಗ್ರಹಿಸುವ ಸಾಧನಗಳ ಅಗತ್ಯತೆ ಉಂಟಾಯಿತು. ಈ ಅಗತ್ಯತೆಯನ್ನು ಪ್ಲಾಸ್ಟಿಕ್ ವಸ್ತುಗಳು ಪೂರೈಕೆ ಮಾಡಿದವು. ನಮ್ಮ ದೈನಂದಿನ ಬದುಕಿನಲ್ಲಿ ಎಂಭತ್ತು ಶೇಕಡಾದಷ್ಟು ಬಗೆ ಬಗೆಯ ಪ್ಲಾಸ್ಟಿಕ್ ಪದಾರ್ಥವನ್ನು ಬಳಸುತ್ತಿದ್ದೇವೆ ಅನ್ನುವ ಅರಿವು ನಮಗಿಲ್ಲ. ತಿಂಡಿಯಿಂದ ಹಿಡಿದು ಉಡುವ ಸೀರೆ-ಬಟ್ಟೆಯಾಗಲಿ; ಮಕ್ಕಳು ಆಡುವ ಗೊಂಬೆ ಇರಲಿ; ಮಾರುಕಟ್ಟೆಯ ತರಕಾರಿ, ಮೀನು, ಮಾಂಸವಾಗಲಿ; ಹುಟ್ಟಿದ ಮಗುವಿಗೆ ತರುವ ತೊಟ್ಟಿಲು, ಹೆಣಕ್ಕೆ ಹಾಕುವ ಹಾರವೂ ಒಂದಲ್ಲ ಒಂದು ಬಗೆಯ ಪ್ಲಾಸ್ಟಿಕ್ ಕವರ್‌ಗಳಿಂದ ಪ್ಯಾಕ್ ಮಾಡಿದ್ದೇ ಆಗಿರುತ್ತದೆ. ಅಂಗಡಿಯವನು ಒಂದು ವೇಳೆ ನಾವು ಕೊಳ್ಳುವ ಸಾಮಗ್ರಿ ಯನ್ನು ಹಾಗೆಯೇ ಕೊಟ್ಟರೆ ಅಥವಾ ಚೀಲ ತಂದಿಲ್ಲವೇ ಎಂದು ಕೇಳಿದರೆ ನಮಗೆ ಕೋಪ ಬಿಗುವಾಗಿ ‘‘ಪ್ಲಾಸ್ಟಿಕ್ ಇಲ್ಲದಿದ್ದರೆ ಅಂಗಡಿ ಏಕೆ ಇಟ್ಟಿದ್ದೀರಿ? ಬಾಗಿಲು ಮುಚ್ಚಿ’’ ಅನ್ನುವ ನಾವು ಈ ಪ್ಲಾಸ್ಟಿಕ್ ಸಾಧನಗಳಿಗೆ ಎಷ್ಟು ಅಂಟಿಕೊಂಡಿದ್ದೇವೆ ಅನ್ನುವುದು ತಿಳಿಯುತ್ತದೆ.
ಪ್ರಕೃತಿಯ ಬೀಳು, ಬೆತ್ತ, ಬಿದಿರು, ಎಲೆ, ಮರಗಳಿಂದ ರೂಪಿಸಿಕೊಂಡ ವಸ್ತುಗಳನ್ನು ಹೇಗೆ ಉಪಯೋಗಿಸಬೇಕು, ಆನಂತರ ಮುರಿದು, ಸವೆದು ಹೋದ ಮೇಲೆ ಅದನ್ನು ಮತ್ತೆ ಪ್ರಕೃತಿಗೆ ಹಾಕಿದರೆ ಅದು ಮಣ್ಣಿನಲ್ಲಿ ಲೀನವಾಗುತ್ತದೆ ಅನ್ನುವ ತಿಳುವಳಿಕೆ ಮನುಷ್ಯನಲ್ಲಿ ಇತ್ತು. ಕಾರಣ ಅವನು ಈ ಪ್ರಕೃತಿಯ ಜೀವಿಯೇ ಆಗಿದ್ದ. ಆದರೆ ಕೈಗಾರಿಕೆಗಳು ಹುಟ್ಟು ಹಾಕಿದ ರಾಸಾಯನಿಕ ಸಂಯೋಜನೆಯ ವಿಭಿನ್ನ ಮಾದರಿಯ ದಿನ ಬಳಕೆಯ ವಸ್ತುಗಳನ್ನು ಬಳಸಿದ ನಂತರ ಏನು ಮಾಡಬೇಕು?. ಅದನ್ನು ಮತ್ತೆ ಪ್ರಕೃತಿಗೆ ಲೀನವಾಗಿಸುವುದು ಹೇಗೆ? ಕಸವಾದ ಪ್ಲಾಸ್ಟಿಕ್ ಅನ್ನು ಕೊಂಡು ಎಲ್ಲಿ ಹಾಕುವುದು? ಅದು ಎಲ್ಲಿ ಕರಗುತ್ತದೆ ಅನ್ನುವ ಯಾವ ತಿಳುವಳಿಕೆಯನ್ನೂ ಪ್ಲಾಸ್ಟಿಕ್ ಉತ್ಪಾದಿತ ಕಂಪೆನಿ ಹೇಳಿಲ್ಲ. ಹೇಳುವಂತೆ ನಾವಾಗಲಿ, ಸರಕಾರವಾಗಲಿ ಕೇಳಿಲ್ಲ. ಈ ನಡುವೆ ಭಾರತದಲ್ಲಿನ ನೂರ ಮೂವತ್ತು ಕೋಟಿ ಜನರು ದಿನದಲ್ಲಿ ಒಂದು ಪ್ಲಾಸ್ಟಿಕ್ ಬಳಸಿ ಅದನ್ನು ನೆಲಕ್ಕೆ ಎಸೆದರೆ ವರ್ಷಕ್ಕೆ ಈ ಭೂಮಂಡಲದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ವಸ್ತುಗಳ ಪ್ರಮಾಣ ಎಷ್ಟಾಗಬಹುದು ಯೋಚಿಸಿ.
ಈ ಪ್ಲಾಸ್ಟಿಕ್‌ನ ಕುಟುಂಬಗಳು ಮನುಷ್ಯನ ದೇಹದ ಸತ್ವವನ್ನು ಕಳೆದು ಅವನ ಬದುಕಿನ ಗುಣಮಟ್ಟವನ್ನೇ ಕಳೆದಿದೆ, ಭೂಮಿಯ ಮೈಯಲ್ಲಿ ಹರಡಿಕೊಂಡು ಸ್ವಚ್ಛ ನೀರು, ಗಾಳಿ, ಬೆಳಕು ಸಿಗದಂತೆ ಮಾಡಿ ಭೂಮಂಡಲವನ್ನು ಮಾಲಿನ್ಯವಾಗಿಸಿದೆ. ನಮ್ಮ ಜೊತೆಯಲ್ಲಿ ಬದುಕು ನಡೆಸುವ ನಾಯಿ, ಬೆಕ್ಕು, ಜಾನುವಾರುಗಳಾದಿಯಾಗಿ ಅನೇಕ ಪ್ರಾಣಿಗಳು ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಂಡು ರೋಗಕ್ಕೆ ಸಿಕ್ಕು ಬಲಿಯಾಗುತ್ತವೆ. ಭೂಮಿಯ ತಾಪಮಾನವು ಏರಿಕೆಯಾಗುತ್ತಿದೆ. ಇಂತಹ ಕ್ರೂರವಾದ ಸಮಸ್ಯೆಗಳು ನಮ್ಮ ಎದುರಿನಲ್ಲಿ ಇದ್ದರೂ ನಾವು ಪ್ಲಾಸ್ಟಿಕ್ ಬಳಸುತ್ತೇವೆ, ಕಂಪೆನಿಗಳು ಉತ್ಪಾದಿಸುತ್ತಿವೆ, ಸರಕಾರಗಳು ಪ್ಲಾಸ್ಟಿಕ್ ತಯಾರಿಕೆಯನ್ನು ನಿಲ್ಲಿಸುವ ಯೋಚನೆಯನ್ನು ಮಾಡುತ್ತಿಲ್ಲ ಎನ್ನುವುದೇ ಪ್ಲಾಸ್ಟಿಕ್ ನಮ್ಮ ನಡುವೆ ವ್ಯಾಪಿಸುವುದಕ್ಕೆ ಸಾಧ್ಯವಾಗಿದೆ.
ಭಾರತದಂತಹ ದೇಶದಲ್ಲಿ ದುಡಿಯುವ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಿರುವುದರಿಂದ ದಿನ ಬಳಕೆಗೆ ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನೇ ಕೊಳ್ಳುತ್ತಾರೆ ಮತ್ತು ಬಳಸುತ್ತಾರೆ, ಬಿಸಾಕುತ್ತಾರೆ. ಪ್ಲಾಸ್ಟಿಕ್ ವಿಭಿನ್ನ ವಿನ್ಯಾಸದಲ್ಲಿ ನೂರಾರು ಬಗೆಯ ವಸ್ತುಗಳನ್ನು ಹೊಂದಿದೆ, ಬೆಲೆಯೂ ಕಮ್ಮಿ. ಉಪಯೋಗ ಹೆಚ್ಚಾದ ಕಾರಣದಿಂದ ನಮಗೆ ಚರ್ಮದಷ್ಟೇ ಬಿಗುವಾಗಿ ಪ್ಲಾಸ್ಟಿಕ್ ಅಂಟಿರುವುದು ಸತ್ಯವಾಗಿದೆ. ನಮ್ಮ ಬದುಕಿನಿಂದ ಇದನ್ನು ದೂರವಾಗಿಸಬೇಕು, ಮನುಕುಲವನ್ನು ಮುಂದೆ ಜೀವಿಸುವಂತೆ ಮಾಡಬೇಕು ಮತ್ತು ಈ ಭೂಮಂಡಲವನ್ನು ಉಳಿಸಬೇಕಾದರೆ ಮುಖ್ಯವಾಗಿ ಸರಕಾರ ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯನ್ನು ದುಬಾರಿ ಮಾಡಬೇಕು, ಅದನ್ನು ಉತ್ಪಾದಿಸುವ ಕಂಪೆನಿಗಳನ್ನು ಮುಚ್ಚಬೇಕು ಮತ್ತು ಮಾರುವ, ಬಳಸುವ ನೆಲೆಯಲ್ಲಿ ಬಿಗುವಾದ ಕಾನೂನು ರೂಪಿಸಬೇಕು. ಪ್ಲಾಸ್ಟಿಕ್ ನಮ್ಮ ಬದುಕಿನಲ್ಲಿ ಬಹುಸ್ತರದಲ್ಲಿ ಬಳಕೆಯಾಗುವ ವಸ್ತುವಾಗಿರುವುದರಿಂದ ಇದರ ಬದಲಿಗೆ ಪ್ರಕೃತಿದತ್ತವಾದ ವಸ್ತುಗಳನ್ನು ಹುಟ್ಟು ಹಾಕಿ ಅದು ಜನರಿಗೆ ದಕ್ಕುವಂತೆ, ಕಡಿಮೆ ಬೆಲೆಗೆ ಸಿಗುವಂತೆ, ಎಲ್ಲ ರೀತಿಯ ಉಪಯೋಗಕ್ಕೂ ಬರುವ ವಿನ್ಯಾಸ ಮಾಡಬೇಕು. ನಾವು ಎಷ್ಟೋ ಬಾರಿ ಮಾಲ್‌ಗಳಿಗೆ ಸಾಮಗ್ರಿಯನ್ನು ಕೊಳ್ಳುವುದಕ್ಕೆ ಹೋದಾಗ ‘‘ಕಾಟನ್ ಬ್ಯಾಗ್ ಬೇಕೆ? ಅದರ ಬೆಲೆ ಐದು ರೂ.’’ ಅನ್ನುತ್ತಾರೆ. ನಮಗೆ ಐದು ರೂಪಾಯಿ ಕೊಟ್ಟು ಬ್ಯಾಗು ಕೊಂಡು ತರುವುದು ಸಾಧ್ಯವಿಲ್ಲ, ಅದನ್ನು ಮನಸ್ಸು ಕೊಳ್ಳಲು ಒಪ್ಪುವುದೂ ಇಲ್ಲ. ಅದೇ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಡುವಾಗ ಯಾವ ಅಂಗಡಿ-ಮಾಲ್‌ನಲ್ಲೂ ಹಣ ಹೇಳುವುದಿಲ್ಲ. ಬೇಕಾದರೆ ಎರಡರಲ್ಲಿ ಆದರೂ ತುಂಬಿಕೊಡುತ್ತಾರೆ. ಇಂತಹ ಮನಸ್ಥಿತಿ ಬದಲಾದರೆ ಮಾತ್ರ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛ ಪರಿಸರವಾಗಿ ಬದಲಾದೀತು
ನಾವು ಬದುಕಬೇಕು, ಭೂಮಿಯೂ ಉಳಿಯಬೇಕು. ಪ್ಲಾಸ್ಟಿಕ್ ಮುಕ್ತ ಬದುಕಾಗಬೇಕು.