ಫಲಿತಾಂಶ ಕುಸಿಯಲು ಶಿಕ್ಷಣ ಇಲಾಖೆ, ಪೋಷಕರ ಪಾಲೆಷ್ಟು?
ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಗೆ ಕೊನೆಯ ಸ್ಥಾನ

ಕಲಬುರಗಿ, ಮೇ 6: ಮಕ್ಕಳ ಶಾಲಾ ಶಿಕ್ಷಣದ ಬಹುಮುಖ್ಯ ಘಟ್ಟ ಎಂದೆ ಕರೆಸಿಕೊಳ್ಳುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಆ ಮೂಲಕ ಜಿಲ್ಲೆಯಲ್ಲಿನ ಕಲಿಕಾ ಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಶೇ.56.44ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ 34ನೇ ಸ್ಥಾನದಲ್ಲಿದ್ದ ಕಲಬುರಗಿ ಜಿಲ್ಲೆ, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಈ ಬಾರಿ ಶೇ.42.43ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.14.01ರಷ್ಟು ಫಲಿತಾಂಶ ಕುಸಿದು 35ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ರಾಜ್ಯದಲ್ಲಿ 7,90,890 ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 5,23,075 ಮಕ್ಕಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ, ಉಡುಪಿ 2ನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆ 3ನೇ ಸ್ಥಾನ, ಶಿವಮೊಗ್ಗ 4ನೇ ಸ್ಥಾನ, ಕೊಡಗು ಜಿಲ್ಲೆ 5ನೇ ಸ್ಥಾನ ಪಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 39,257 ಮಕ್ಕಳಲ್ಲಿ, 16,658 ಜನ ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ ಶಿಕ್ಷಕರು ಮಕ್ಕಳನ್ನು ದತ್ತು ಪಡೆದು ವಿಶೇಷ ತರಬೇತಿ ನೀಡುವುದು ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದರು ಸಹ ಫಲಿತಾಂಶದಲ್ಲಿ ನಿರಾಶಾದಾಯಕವಾಗಿದೆ.
ಪ್ರಮುಖ ಕಾರಣ: ಪರೀಕ್ಷಾ ಅಕ್ರಮಗಳನ್ನು ತಡೆಯಲು ಈ ಬಾರಿ ಕಲಬುರಗಿಯ ಎಲ್ಲ ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ಐಎಎಸ್, ಕೆಎಎಸ್ ಪರೀಕ್ಷೆ ಮಾದರಿಯಲ್ಲಿ ಕಠಿಣ ಕ್ರಮಗಳು ಕೈಗೊಂಡಿರುವುದು, 7ನೇ ತರಗತಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದು, ಶಿಕ್ಷಕರ ಕೊರತೆ, ಗ್ರಾಮೀಣ ಭಾಗದಲ್ಲಿ ಮಕ್ಕಳ ದಾಖಲಾತಿಯ ಅಂಕಿಯಂತೆ ತರಗತಿಗೆ ಹಾಜರಾತಿ ಅಗದಿರುವುದು. ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಿಇಒ, ಸಿ.ಆರ್.ಪಿ ಮತ್ತು ಬಿ.ಆರ್.ಸಿ ಕುಂತಲ್ಲೇ ಶಿಕ್ಷಣ ಸುಧಾರಣೆ ಟಾರ್ಗೆಟ್ ಪೂರ್ಣಗೊಳಿಸಿದ್ದು, ಪ್ರಾಯೋಗಿಕವಾಗಿ ಮಕ್ಕಳ ಕಲಿಕಾ ಮಟ್ಟ ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ಮೌಲ್ಯ ಮಾಪನ ಮಾಡಿ ಅವಲೋಕನ ನಡೆಸದಿರುವುದು, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮೇಲೆ ಅತಿಹೆಚ್ಚು ಒತ್ತಡ, ಅತಿಯಾದ ಮೊಬೈಲ್ ಬಳಕೆ, ಶಿಕ್ಷಕರು ಮತ್ತು ಪೋಷಕರ ನಡುವಿನ ಸಂವಹನ ಕೊರತೆಯು ಈ ಬಾರಿ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಕುಸಿಯಲು ಪ್ರಮುಖ ಕಾರಣಗಳು ಎಂದು ವಿದ್ಯಾರ್ಥಿಗಳ ಸಂಘಟನೆಗಳ ವಿಶ್ಲೇಷಣೆಯಾಗಿದೆ.
ಫಲಿತಾಂಶ ಸುಧಾರಣೆ ಸಾಧ್ಯ: ಖಾಲಿ ಶಿಕ್ಷಕರ ಹುದ್ದೆ ಭರ್ತಿ, 1ನೇ ತರಗತಿಯಿಂದ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳ ರಚಿಸಿ ಕಡ್ಡಾಯವಾಗಿ ತಿಂಗಳಿಗೊಮ್ಮೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟದ ಬಗ್ಗೆ ಮೌಲ್ಯ ಮಾಪನ ನಡೆಸಿ ಯೋಜನೆಗಳು ರೂಪಿಸುವುದು. ಖಾಸಗಿ ಶಾಲೆಗಳಂತೆ ಪೋಷಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಮುತುವರ್ಜಿ ವಹಿಸಿದ್ದಾಗ ಫಲಿತಾಂಶ ಸುಧಾರಣೆ ಸಾಧ್ಯ ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.
ಸಮವಸ್ತ್ರದ ಜೊತೆಗೆ ಉಚಿತ ಶಿಕ್ಷಣ
ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಉಚಿತ ಸಮವಸ್ತ್ರ, ಪುಸ್ತಕ, ಹಾಸ್ಟೆಲ್ ವ್ಯವಸ್ಥೆ, ರಾಜ್ಯ ಸರಕಾರ ಮಕ್ಕಳಿಗೆ ವಿದ್ಯಾರ್ಥಿವೇತನ, ಮಧ್ಯಾಹ್ನದ ಊಟ, ವಾರದಲ್ಲಿ 5 ದಿನ ಮೊಟ್ಟೆ, ಹಾಲು ನೀಡುತ್ತಿದೆ.
ನಿರೀಕ್ಷಿತ ಫಲಿತಾಂಶ ನೀಡದ ಅಕ್ಷರ ಆವಿಷ್ಕಾರ
ಶಿಕ್ಷಕರ ಕೊರತೆಯನ್ನು ನೀಗಿಸಿ ಕಲ್ಯಾಣ ಕರ್ನಾಟಕ ಭಾಗದ ಫಲಿತಾಂಶ ಸುಧಾರಣೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್ ಅವರು ಕೆಕೆಆರ್ಡಿಬಿಯಿಂದ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ಅತಿಥಿ ಶಿಕ್ಷಕರು ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಕೋಟ್ಯಂತರ ರೂ.ಖರ್ಚು ಮಾಡಿದರೂ ನಿರೀಕ್ಷಿತ ಫಲಿತಾಂಶವನ್ನು ತಲುಪಲು ಸಾಧ್ಯವಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.
1ನೇ ತರಗತಿಯಿಂದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಕೌಶಲ್ಯಗಳನ್ನು ಕಲಿಸಬೇಕು. ಮಕ್ಕಳಲ್ಲಿ ಶೈಕ್ಷಣಿಕ ಸುಧಾರಣೆ ಹಿನ್ನೆಲೆಯಲ್ಲಿ ಖಾಯಂ ಮತ್ತು ಅತಿಥಿ ಶಿಕ್ಷಕರಿಗೆ ವಿಶೇಷ ತರಬೇತಿಗಳು ಕೊಡಬೇಕು, ಶಿಕ್ಷಕರಿಗೆ ಟಾರ್ಗೆಟ್ ಅಥವಾ ಒತ್ತಡ ನೀಡದೇ ಜವಾಬ್ದಾರಿ ಹಂಚಿಕೆ ಮಾಡಬೇಕು.
-ಸುಜಾತಾ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಕಲಬುರಗಿ
ವಿದ್ಯಾರ್ಥಿಗಳ ಅನಿಯಮಿತ ಹಾಜರಾತಿ, ಶಿಕ್ಷಕರ ಕೊರತೆ, ಅತಿಥಿ ಶಿಕ್ಷಕರ ಬೋಧನೆ ಪರಿಣಾಮ ಬೀರದಿರುವುದು ಮತ್ತು ಉರ್ದು ಶಾಲೆಯ ಮಕ್ಕಳು ಕನ್ನಡ ವಿಷಯದಲ್ಲಿ ಹೆಚ್ಚು ಅನುತ್ತೀರ್ಣವಾಗಿರುವುದು ಫಲಿತಾಂಶ ಕುಸಿದಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಿ, ಮಕ್ಕಳ ಅನಿಯಮಿತ ಹಾಜರಾತಿ ತಗ್ಗಿಸಲು ಪೋಷಕರ ಮನವೊಲಿಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಒತ್ತು ನೀಡುತ್ತೇವೆ.
-ಸೂರ್ಯಕಾಂತ್ ಮದಾನೆ, ಡಿಡಿಪಿಐ, ಕಲಬುರಗಿ