Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂವಿಧಾನದಿಂದಾಚೆಗಿನ ಸಮಾಜದತ್ತ...

ಸಂವಿಧಾನದಿಂದಾಚೆಗಿನ ಸಮಾಜದತ್ತ ನೋಡಬೇಕಿದೆ

ನಾ. ದಿವಾಕರನಾ. ದಿವಾಕರ24 May 2025 3:21 PM IST
share
ಸಂವಿಧಾನದಿಂದಾಚೆಗಿನ ಸಮಾಜದತ್ತ ನೋಡಬೇಕಿದೆ
ಒಂದು ಸಮಾಜ ತನ್ನ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಔನ್ನತ್ಯವನ್ನು ಕಂಡುಕೊಳ್ಳುವುದು, ಚರಿತ್ರೆಯನ್ನು ಒಡೆದುಕಟ್ಟುವ ಸೃಜನಶೀಲ ಪ್ರಕ್ರಿಯೆಯ ಮೂಲಕ. ಆದರೆ ದುರದೃಷ್ಟವಶಾತ್ ಭಾರತದ ಶ್ರೇಣೀಕೃತ ಜಾತಿ ಸಮಾಜ ಇದಕ್ಕೆ ಸಾಂಸ್ಕೃತಿಕ ಜಾಗವನ್ನೇ ನೀಡುತ್ತಿಲ್ಲ. ಬದಲಾಗಿ ಚರಿತ್ರೆಯನ್ನು ಛಿದ್ರಗೊಳಿಸುವ, ಮಿಥ್ಯೆಗಳನ್ನು ವೈಭವೀಕರಿಸುವ ಒಂದು ಹೊಸ ಪರಂಪರೆಯತ್ತ ಸಾಗುತ್ತಿದೆ. ಈ ಪ್ರಕ್ರಿಯೆಗೆ ಭಾರತದ ಶೈಕ್ಷಣಿಕ ವಲಯ ಒಂದೆಡೆ ಮೌನ ವಹಿಸಿದ್ದರೆ ಮತ್ತೊಂದೆಡೆ ಈ ವಿಕೃತಿಯನ್ನೇ ಖomಚಿಟಿಣiಛಿise ಮಾಡುವ ಕ್ರಿಯೆಯಲ್ಲಿ ತೊಡಗಿರುವುದು ಈ ಕಾಲದ ಮತ್ತೊಂದು ದುರಂತ.

ವರ್ತಮಾನದ ಭಾರತ ಒಂದು ಸಂದಿಗ್ಧ ಕವಲು ಹಾದಿಯಲ್ಲಿದೆ. ಬೆಳವಣಿಗೆಯ ಹಂತದಲ್ಲಿ ಮತ್ತು ಒಂದು ಸಮಾಜ ಪ್ರೌಢಾವಸ್ಥೆಗೆ ತಲುಪಿದಾಗ ಆಗಬಹುದಾದ ಎಲ್ಲ ಪಲ್ಲಟಗಳೂ, ವ್ಯತ್ಯಯಗಳೂ ಇಲ್ಲಿ ಸಂಭವಿಸುತ್ತಿರುವುದು ಸ್ವಾಭಾವಿಕ ಬೆಳವಣಿಗೆ. ಈ ಪಲ್ಲಟಗಳ ಚೌಕಟ್ಟಿನಲ್ಲಿ ಉಗಮಿಸುವ ಹೊಸ ಸಾಮಾಜಿಕ ಚಿಂತನೆಗಳು, ಬೌದ್ಧಿಕ ಆಲೋಚನೆಗಳು ಹಾಗೂ ಚಿಂತನಾ ಕ್ರಮಗಳು ಭವಿಷ್ಯದ ದಿಕ್ಸೂಚಿಗಳಾಗಿ ಪರಿಣಮಿಸುತ್ತವೆ. ಇದು ಮಾನವ ಚರಿತ್ರೆ ದಾಖಲಿಸಿರುವ ವಾಸ್ತವ. ಆದರೆ ಈ ದಿಕ್ಸೂಚಿಯನ್ನು ಸಮಕಾಲೀನ ಸಮಾಜಕ್ಕೆ ದಕ್ಕುವಂತೆ ನಿರ್ವಚಿಸುವ ಹಾಗೂ ಮುನ್ನಡೆಯುವ ಹಾದಿಯಲ್ಲಿ ನಿಯಂತ್ರಿಸುವ ಬೌದ್ಧಿಕ-ಶೈಕ್ಷಣಿಕ-ಸಂವಹನ ಹಾಗೂ ಅಧಿಕಾರದ ನೆಲೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಶಿಥಿಲವಾಗುತ್ತಿದ್ದರೆ, ಭವಿಷ್ಯ ಭಾರತ ಏನಾಗಬಹುದು? ಈ ಮೂರ್ತ ಪ್ರಶ್ನೆ ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಉನ್ನತ ಸ್ತರದವರೆಗೂ ಧ್ವನಿಸುತ್ತಿದೆ.

ಭಾರತೀಯ ಸಮಾಜ ಆಧುನಿಕತೆಯ ಕಡೆ ಹೊರಳಿ ಬಹುಶಃ ಶತಮಾನಕ್ಕೂ ಹೆಚ್ಚು ಸಮಯ ಆಗಿದೆ. ಆಧುನಿಕತೆ ಎಂಬ ಕಲ್ಪನೆಯನ್ನು ಶಿಕ್ಷಣ, ಜೀವನಶೈಲಿ, ಸಾಮಾಜಿಕ ನಡವಳಿಕೆ ಮತ್ತು ಬೌದ್ಧಿಕ ಚಿಂತನೆ ಈ ವಿದ್ಯಮಾನಗಳ ಚೌಕಟ್ಟಿನೊಳಗಿಟ್ಟು ನಿರ್ವಚಿಸಿದಾಗ, 19ನೇ ಶತಮಾನದ ಉತ್ತರಾರ್ಧದಲ್ಲೇ ಭಾರತೀಯ ಸಮಾಜ ಆಂಗ್ಲ ಶಿಕ್ಷಣ ಮತ್ತು ಔದ್ಯೋಗಿಕ ಕ್ರಾಂತಿಯ ಆವಿಷ್ಕಾರಗಳೊಂದಿಗೆ, ಆಧುನಿಕ ಸಮಾಜವನ್ನು ಕಟ್ಟುವ ಪ್ರಕ್ರಿಯೆಗೆ ತೆರೆದುಕೊಂಡಿರುವುದನ್ನು ಗುರುತಿಸಬಹುದು. ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ಎಂಬ ಭಿನ್ನ ನೆಲೆಗಳಿಂದಾಚೆ ಆಧುನಿಕತೆಯನ್ನು ನಿರ್ವಚಿಸುವಾಗ, ಸಮಾಜವೊಂದು ತನ್ನ ಅಭ್ಯುದಯದ ಹಾದಿಯಲ್ಲಿ ಹೊಸತನ್ನು ಆಯ್ಕೆ ಮಾಡಿಕೊಳ್ಳುತ್ತಾ, ಹಳೆಯ ಸಾಂಪ್ರದಾಯಿಕತೆಗಳನ್ನು ಕಳಚಿಕೊಳ್ಳುತ್ತಾ, ಬೌದ್ಧಿಕ ಚಿಂತನೆಗಳ ನೆಲೆಯಲ್ಲಿ ಹೊಸ ಪ್ರಪಂಚವನ್ನು ಕಟ್ಟುವ ಆಲೋಚನೆಗೆ ತೆರೆದುಕೊಳ್ಳುವುದನ್ನು ಒಂದು ಮಾಪಕವಾಗಿ ಪರಿಗಣಿಸಬಹುದು.

ಬೌದ್ಧಿಕ ವಿಸ್ತಾರ ಮತ್ತು ಅರಿವು

ಬೌದ್ಧಿಕ ನೆಲೆಯಲ್ಲಿ ಆಧುನೀಕರಣದ ಕಲ್ಪನೆಯು ವೈಜ್ಞಾನಿಕ ಮುನ್ನಡೆ, ತಂತ್ರಜ್ಞಾನದ ಆವಿಷ್ಕಾರ-ನಾವೀನ್ಯತೆ ಮತ್ತು ಇವುಗಳ ಬಳಕೆಯ ಪ್ರಮಾಣ ಹಾಗೂ ಸಾಮಾಜಿಕ ವಾತಾವರಣದಲ್ಲಿ ವೈಚಾರಿಕತೆಯ ಬೆಳವಣಿಗೆಗಳ ಮೂಲಕ ನಿರ್ವಚಿಸಲ್ಪಡುತ್ತದೆ. ಪ್ರಾಚೀನ ಸಮಾಜದ ಸಾಮಾಜಿಕ ನಡವಳಿಕೆಗಳು, ಸಾಂಸ್ಕೃತಿಕ- ಧಾರ್ಮಿಕ ಆಚರಣೆಗಳು ಮತ್ತು ಜನಸಾಮಾನ್ಯರ ನಂಬಿಕೆಗಳು ತಮ್ಮ ಸಾಂಪ್ರದಾಯಿಕ ರೂಪವನ್ನು ಕಳಚಿಕೊಂಡು, ಜಗತ್ತನ್ನು ಒಳಗಣ್ಣಿನಿಂದ ನೋಡುವ ಹೊಸ ವೈಚಾರಿಕತೆಯನ್ನು ರೂಢಿಸಿಕೊಳ್ಳುವುದು ಆಧುನೀಕರಣದ ಒಂದು ಮುಖ್ಯ ಭಾಗವಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗಲೇ ವರ್ತಮಾನದ ಭಾರತ ಒಂದು ಪರ್ವಕಾಲದಲ್ಲಿದೆ ಅಥವಾ ಕವಲು ಹಾದಿಯಲ್ಲಿದೆ ಎಂಬ ಅನುಮಾನ ಮೂಡುತ್ತದೆ. ಮೇಲ್ನೋಟಕ್ಕೆ ಕಾಣುವ ಆಧುನಿಕ ರೂಪಗಳು ಆಂತರಿಕವಾಗಿ ಸಾಂಪ್ರದಾಯಿಕ ಕವಚಗಳಿಂದ ಆವೃತವಾಗಿರುವುದನ್ನು ಪ್ರತಿಯೊಂದು ಸಮಾಜದಲ್ಲೂ, ಪ್ರತೀ ಸ್ತರದಲ್ಲೂ ಇರುವುದು ಗಮನಿಸಬೇಕಾದ ಅಂಶ.

ಆದರೆ ವಿಶಾಲ ಸಾಮಾಜಿಕ ನೆಲೆಯಲ್ಲಿ ಭಾರತವನ್ನು ಆಧುನೀಕರಣಗೊಂಡ ಸಮಾಜ ಎಂದೇ ಗುರುತಿಸಲಾಗುತ್ತದೆ. ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಭಾರತದ ವಿಶಾಲ ಸಮಾಜವನ್ನು ನಿರ್ದೇಶಿಸುವ ಸಾಂಘಿಕ ಹಾಗೂ ಸಾಂಸ್ಥಿಕ ಶಕ್ತಿಗಳು ಬಹುಮುಖ್ಯವಾಗಿ ಎದುರಿಸುವ ಬಹುಸಾಂಸ್ಕೃತಿಕ-ಬಹುಭಾಷಿಕ ಹಾಗೂ ಪ್ರಾದೇಶಿಕ ಅಸ್ಮಿತೆಗಳು, ಆಧುನೀಕರಣ ಪ್ರಕ್ರಿಯೆಯಲ್ಲಿ ಸಂಕೀರ್ಣ ಸವಾಲುಗಳನ್ನೂ ಸೃಷ್ಟಿಸುತ್ತವೆ. ಈ ಅಸ್ಮಿತೆಯ ಗೋಡೆಗಳನ್ನು ದಾಟಿ ನೋಡುವ ದೂರಗಾಮಿ ದೃಷ್ಟಿಕೋನ ಮತ್ತು ನೆಲದ ವಾಸ್ತವಗಳ ಆಳವಾದ ಅರಿವು ಇಲ್ಲಿ ಬೌದ್ಧಿಕ ಪರಿಕರಗಳಾಗಿಯೂ, ಭೌತಿಕ ಉಪಕರಣಗಳಾಗಿಯೂ ಪರಿಣಮಿಸುತ್ತವೆ. ಈ ಎರಡೂ ಪೂರಕ ವಸ್ತುಗಳನ್ನು ಸಮಾಜಕ್ಕೆ ಒದಗಿಸಬೇಕಾದ ಜವಾಬ್ದಾರಿ ಶೈಕ್ಷಣಿಕ ವಲಯದ ಮೇಲಿರುವಷ್ಟೇ ಸಾಂಸ್ಕೃತಿಕ ಕ್ಷೇತ್ರದ ಮೇಲೂ ಇರುತ್ತದೆ.

ಸಂವಹನ ತಂತ್ರಜ್ಞಾನದಲ್ಲಿ ವಿಶ್ವದ ಅಗ್ರಮಾನ್ಯ ದೇಶವಾಗಿ ಹೊರಹೊಮ್ಮುತ್ತಿರುವ ನವಭಾರತ, ಹೊಸ ಸಮಾಜದ ನಿರ್ಮಾಣಕ್ಕೆ ನೆರವಾಗುವ ಈ ಎರಡು ಕ್ಷೇತ್ರಗಳನ್ನು ಪೋಷಿಸುವ ಮಾದರಿ, ಪ್ರೋತ್ಸಾಹಿಸುವ ವಿಧಾನಗಳು ಹಾಗೂ ಪ್ರಚೋದಿಸುವ ಮಾರ್ಗಗಳು ವರ್ತಮಾನದಿಂದ ಭವಿಷ್ಯಕ್ಕೆ ಸಾಗಲು ಬೇಕಾದ ಸೇತುವೆಗಳನ್ನು ಆರೋಗ್ಯಕರವಾಗಿರಿಸುವ ಸಾಧನಗಳಾಗುತ್ತವೆ. ಇಲ್ಲಿ ನಮಗೆ ಸಾಂಸ್ಕೃತಿಕ ಜಗತ್ತನ್ನು ವಿಸ್ತರಿಸಿ, ತಳಸಮಾಜಕ್ಕೆ ತಲುಪಿಸುವ ಜವಾಬ್ದಾರಿ ಇರುವ ಮಾಧ್ಯಮ, ಸಾಹಿತ್ಯ, ರಂಗಭೂಮಿ, ಕಲೆ ಮತ್ತಿತರ ಅಭಿವ್ಯಕ್ತಿ ಮಾರ್ಗಗಳು ಪ್ರಥಮ ಸೋಪಾನವಾಗಿ ಕಾಣುವುದಾದರೆ, ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮಗಳು (ವಿದ್ಯುನ್ಮಾನ ಮತ್ತು ಮುದ್ರಣ) ಅನುಷಂಗಿಕ ಮಾರ್ಗಗಳಾಗಿ ಕಾಣುತ್ತವೆ. ಈ ಎರಡೂ ನೆಲೆಗಳಲ್ಲಿ ಸೃಷ್ಟಿಯಾಗುವ ಅಭಿಪ್ರಾಯಗಳು, ವ್ಯಕ್ತವಾಗುವ ವಿಮರ್ಶೆಗಳು ಹಾಗೂ ಪ್ರಕಟವಾಗುವ ನಿರೂಪಣೆಗಳು, ಇಡೀ ಸಮಾಜವನ್ನು ನಿರ್ದೇಶಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಇಂದಿನ ಸಮಾಜ- ಮುಂದಿನ ಭಾರತ

ಈ ವಿಶಾಲ ನೆಲೆಯಲ್ಲಿ ನಿಂತು ವರ್ತಮಾನದ ಭಾರತವನ್ನು ಆಧುನೀಕರಣದ ಮಸೂರದ ಮೂಲಕ ನೋಡಿದಾಗ ಅಲ್ಲಿ ನಮಗೆ ಕಾಣುವಂತಹ ವ್ಯತ್ಯಯಗಳು ಗಾಬರಿ ಹುಟ್ಟಿಸುವುದು ಸಹಜ. ಏಕೆಂದರೆ ಪ್ರಜಾಪ್ರಭುತ್ವ ಎಂಬ ಅತ್ಯಾಧುನಿಕ ಆಳ್ವಿಕೆಯ ಮಾದರಿಯನ್ನು ಮೇಲುಹೊದಿಕೆಯ ಹಾಗೆ ಹೊದ್ದಿರುವ ಭಾರತೀಯ ಸಮಾಜವು ಆಂತರಿಕವಾಗಿ ಇಂದಿಗೂ ತನ್ನ ಪ್ರಾಚೀನ ಸಾಂಪ್ರದಾಯಿಕ ಲಕ್ಷಣಗಳನ್ನು ಉಳಿಸಿಕೊಂಡಿರುವುದಷ್ಟೇ ಅಲ್ಲದೆ, ವ್ಯವಸ್ಥಿತವಾಗಿ ಪೋಷಿಸಿಕೊಂಡೂ ಬಂದಿರುವುದು ಅಲ್ಲಿ ಕಾಣುತ್ತದೆ. ವರ್ತಮಾನದ ಅಧಿಕಾರ ರಾಜಕಾರಣವನ್ನು ಕಾಡುತ್ತಿರುವ ಭ್ರಷ್ಟಾಚಾರ-ಸ್ವಜನ ಪಕ್ಷಪಾತ-ಕುಟುಂಬ ರಾಜಕೀಯ ಮತ್ತು ಪಾಳೆಗಾರಿಕೆಯ ಲಕ್ಷಣಗಳು ಸಾಂವಿಧಾನಿಕ ಮೌಲ್ಯಗಳನ್ನೂ ಶಿಥಿಲಗೊಳಿಸುತ್ತಿರುವುದು ಕಳವಳಕಾರಿ ಸಂಗತಿ. ಜನಪ್ರಾತಿನಿಧ್ಯ ಪ್ರಜಾತಂತ್ರದಲ್ಲಿ ‘ಆಡಳಿತಾರೂಢ ಪಕ್ಷ/ಮೈತ್ರಿಕೂಟದ ಭಾಗವಾಗಿದ್ದರೆ ನಿರಂತರ ನಿರಪರಾಧಿತ್ವ ವಿರೋಧಿ ನೆಲೆಯಲ್ಲಿದ್ದರೆ ಶಾಶ್ವತ ಶಂಕಿತರಾಗುವ’ ಒಂದು ಹೊಸ ಪರಂಪರೆ ಯನ್ನು ಹುಟ್ಟುಹಾಕಲಾಗಿದ್ದು, ಭ್ರಷ್ಟಾಚಾರದಂತಹ ಅಪಾಯಕಾರಿ ವಿದ್ಯಮಾನವೂ ಸಹ ಸಾಪೇಕ್ಷತೆಯನ್ನು ಪಡೆದುಕೊಂಡಿದೆ.

ದೇಶದ ಅತ್ಯುನ್ನತ ಬೌದ್ಧಿಕ-ಶೈಕ್ಷಣಿಕ ನೆಲೆಗಳಲ್ಲಿ ಗಟ್ಟಿಯಾಗಿ ತಳವೂರಿರುವ ಅವೈಜ್ಞಾನಿಕ ನಂಬಿಕೆಗಳು, ಅವೈಚಾರಿಕ ನಡವಳಿಕೆಗಳು ಹಾಗೂ ಅತಾರ್ಕಿಕ ಆಲೋಚನೆಗಳು, ಆಧುನಿಕ ತಂತ್ರಜ್ಞಾನದ ಸಂವಹನ ಸಾಧನಗಳನ್ನೇ ಬಳಸಿಕೊಂಡು, ಸಮಾಜವನ್ನು ಸಾಂಪ್ರದಾಯಿಕತೆಗೆ ದೂಡುತ್ತಿರುವ ಒಂದು ಪ್ರಕ್ರಿಯೆ ಅಲ್ಲಿ ಕಾಣುತ್ತದೆ. ಈ ಪ್ರಕ್ರಿಯೆಯನ್ನು ಸಾಮಾಜೀಕರಣಗೊಳಿಸುವ ಮತ್ತು ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದಲೇ ಭಾರತದ ಸಂವಹನ ಮಾಧ್ಯಮಗಳು ತಮ್ಮದೇ ಆದ ನಿರೂಪಣೆಗಳನ್ನು ಹುಟ್ಟುಹಾಕುತ್ತವೆ. ರಾಜಕೀಯವಾಗಿ ಭಾರತ ಸಾಗುತ್ತಿರುವ ಸಾಂಸ್ಕೃತಿಕ ಬಹುಸಂಖ್ಯಾವಾದ ಮತ್ತು ಆರ್ಥಿಕ ನವ ಉದಾರವಾದದ ಹಾದಿಯಲ್ಲಿ ಲಭ್ಯವಾಗಬಹುದಾದ ಎಲ್ಲ ಸಾಂಸ್ಕೃತಿಕ ಜಾಗ ಮತ್ತು ಅವಕಾಶಗಳನ್ನೂ ಸಮಾಜದ ಪ್ರಬಲ ವರ್ಗಗಳು ಜಾತಿ, ಮತ ಮತ್ತು ಆರ್ಥಿಕ ಸ್ಥಾನಮಾನಗಳ ಮೂಲಕ ಆಕ್ರಮಿಸಿಕೊಳ್ಳುತ್ತವೆ.

ಹಾಗಾಗಿ ಶ್ರೇಣೀಕೃತ ಸ್ತರೀಯ ಶ್ರೇಷ್ಠತೆಯ ಪರಿಕಲ್ಪನೆ, ಪ್ರಾಚೀನ ಧಾರ್ಮಿಕ ನಂಬಿಕೆಗಳು ಹಾಗೂ ಊಳಿಗಮಾನ್ಯ ಯಜಮಾನಿಕೆಯ ವರ್ತನೆಗಳಿಗೆ ವಿಶಾಲ ಸಮಾಜದಲ್ಲಿ ಮಾನ್ಯತೆ ದೊರೆಯುವುದು ಸುಲಭವಾಗುತ್ತದೆ. ಈ ಸಮಾಜವನ್ನು ಸರಿದಾರಿಗೆ ತರಲು ಅಲ್ಪ ಕೊಡುಗೆಯನ್ನಾದರೂ ನೀಡಬೇಕಾದ ವಿದ್ಯುನ್ಮಾನ ದೃಶ್ಯಮಾಧ್ಯಮಗಳು (ಕೆಲವೇ ಅಪವಾದಗಳನ್ನು ಹೊರತುಪಡಿಸಿ) ತಮ್ಮ ಪತ್ರಿಕೋದ್ಯಮ ಧರ್ಮವನ್ನೂ ಮರೆತು, ಮಾರುಕಟ್ಟೆಯಲ್ಲಿ ಟಿಆರ್‌ಪಿ ಹೆಚ್ಚಿಸುವ ರೋಚಕತೆಯೆಡೆಗೆ ನಡೆಯುತ್ತಿರುವುದು ಮಿಲೇನಿಯಂ ಸಮಾಜವನ್ನು ದಿಕ್ಕುತಪ್ಪಿಸುತ್ತಿರುವುದು ದುರಂತ. ಭಾರತೀಯ ಸಮಾಜವನ್ನು ಅತಿಹೆಚ್ಚು ಪ್ರಭಾವಿಸುವ ಸಿನೆಮಾ ಎಂಬ ಮಾಧ್ಯಮವೂ ಸಹ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು, ದಾಖಲಿತ ಚರಿತ್ರೆಯನ್ನು ವಿಕೃತಗೊಳಿಸುವ, ಕಲ್ಪಿತ ಐತಿಹ್ಯಗಳನ್ನು ವಾಸ್ತವವೆಂದು ಬಿಂಬಿಸುವ ಪ್ರಯತ್ನದಲ್ಲಿದೆ. ಇಲ್ಲಿ ಕಳೆದುಹೋಗುತ್ತಿರುವ ಸೃಜನಶೀಲತೆ, ಸಾಮಾಜಿಕ ಅವನತಿಯ ಮೊದಲ ಸೋಪಾನವಾಗಿರುತ್ತದೆ.

ಸಂವಹನ ಸೇತುವೆಯ ವಿಕೃತಿಗಳು

ಉದಾಹರಣೆಗೆ ಮಹಾತ್ಮಾ ಫುಲೆ ಕುರಿತ ದಾಖಲಿತ ಚರಿತ್ರೆಯ ಒಂದು ಚಲನಚಿತ್ರ 19 ಸೆನ್ಸಾರ್ ಪ್ರಯೋಗಗಳಿಗೆ ತುತ್ತಾಗುತ್ತದೆ ಆದರೆ ಮಾಧ್ಯಮ ವರದಿಗಳು, ಸರಕಾರಗಳ ನಿರೂಪಣೆಗಳನ್ನಾಧರಿಸಿದ ಸಮಕಾಲೀನ ಘಟನೆಗಳ ಸುತ್ತ ಹೆಣೆಯುವ ಕಥನಗಳು ಸಿನೆಮಾ ರಂಗದಲ್ಲಿ ಮಾನ್ಯತೆ ಪಡೆಯುತ್ತವೆ. ಕಳೆದ ಹತ್ತು ವರ್ಷಗಳ ‘ಸಿನೆಮಾ ಫೈಲ್’ಗಳು ಇದಕ್ಕೆ ಸಾಕ್ಷಿ. ಇತಿಹಾಸದಲ್ಲಿ ದಾಖಲಾಗದ ಪುರಾಣ-ಮಿಥ್ಯೆಗಳು ಮತ್ತು ಅಲ್ಲಿನ ವ್ಯಕ್ತಿಗಳಿಗೆ ಚಾರಿತ್ರಿಕ ರೂಪ ನೀಡಿ ವೈಭವೀಕರಿಸುವ ಮೂಲಕ, ವಿಘಟಿತ ಸಮಾಜವನ್ನು ಛಿದ್ರಗೊಳಿಸುವ ಪ್ರಯತ್ನಗಳನ್ನು ಇಲ್ಲಿ ಗುರುತಿಸಲೇಬೇಕಿದೆ. ಸೃಜನಶೀಲತೆ ಎನ್ನುವ ಉದಾತ್ತ ಕಲ್ಪನೆಗೆ ಅವಕಾಶವೇ ಇಲ್ಲದಂತೆ, ಸಂವಹನ ಕ್ಷೇತ್ರಗಳನ್ನು ಮಾರುಕಟ್ಟೆ-ಬಂಡವಾಳ ಮತ್ತು ಕಾರ್ಪೊರೇಟ್ ಉದ್ಯಮಗಳು ಆಕ್ರಮಿಸಿದ್ದು, ಭವಿಷ್ಯದ ಭಾರತಕ್ಕಾಗಿ ಬಿಟ್ಟುಹೋಗುತ್ತಿರುವುದು, ಒಡೆದು ಕಟ್ಟಿದ ಭಾರತದ ಚರಿತ್ರೆಯನ್ನಲ್ಲ, ಬದಲಾಗಿ ತಿರುಚಿ ವಿಕೃತಗೊಳಿಸಲಾದ ಇತಿಹಾಸ ಮತ್ತು ಚಾರಿತ್ರಿಕ ವ್ಯಕ್ತಿಗಳನ್ನು.

ಈ ದೃಷ್ಟಿಯಿಂದ ನೋಡಿದಾಗ ವರ್ತಮಾನ ಭಾರತದಲ್ಲಿ ಅಪಾಯದಲ್ಲಿರುವುದು ಏನು? ಸಂವಿಧಾನವೋ ಅಥವಾ ಸಮಾಜವೋ? ಈ ಪ್ರಶ್ನೆ ನಮ್ಮನ್ನು ಗಹನವಾಗಿ ಕಾಡಬೇಕಿದೆ. ಕಳೆದ ಮೂರ್ನಾಲ್ಕು ದಶಕಗಳ ಭಾರತವನ್ನು ಅವಲೋಕಿಸುವಾಗ, ಭಯೋತ್ಪಾದನೆ, ಕೋಮುವಾದ, ಮತಾಂಧತೆ ಮತ್ತು ಅವೈಚಾರಿಕತೆಯ ಚೌಕಟ್ಟುಗಳಿಂದಾಚೆ ನೋಡಬೇಕಿದೆ. ಏಕೆಂದರೆ ಇಲ್ಲಿ ನಮಗೆ ಶಿಥಿಲವಾಗುತ್ತಿರುವ ಅಥವಾ ನಿಶ್ಶೇಷವಾಗುತ್ತಿರುವ ಬಹುಸಾಂಸ್ಕೃತಿಕ ಮೌಲ್ಯಗಳು ಮತ್ತು ಜೀವನಾದರ್ಶಗಳ ದರ್ಶನವಾಗುತ್ತದೆ. ಹಾಗಾಗಿಯೇ ಇಂದು ಸಾಹಿತ್ಯ ರಚನೆ ಎನ್ನುವುದು ಗಾಬರಿ ಆತಂಕ ಮತ್ತು ಎಫ್‌ಐಆರ್ ಭೀತಿಗಳಿಂದ ಕೂಡಿದ ಒಂದು ಬೌದ್ಧಿಕ ಕ್ರಿಯೆಯಾಗಿ ಮನ್ವಂತರ ಪಡೆದಿದೆ. ಪೌರಾಣಿಕ ಮಿಥ್ಯೆಗಳಲ್ಲಿ ಕಾಣುವ ಅನುಕರಣೀಯ ವ್ಯಕ್ತಿಗಳೆಲ್ಲರನ್ನೂ ಜಾತಿ ಪೀಡಿತ ಸಮಾಜ ನಿರ್ದಿಷ್ಟ ಜಾತಿ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸುತ್ತಿರುವುದರಿಂದ, ಇತಿಹಾಸ-ಐತಿಹ್ಯ-ಪುರಾಣ-ಮಿಥ್ಯೆ ಮತ್ತು ವಾಸ್ತವಗಳ ನಡುವಿನ ತೆಳು ಗೆರೆಗಳೆಲ್ಲವೂ ಅಳಿಸಿಹೋಗುತ್ತಿದೆ.

ಒಂದು ಸಮಾಜ ತನ್ನ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಔನ್ನತ್ಯವನ್ನು ಕಂಡುಕೊಳ್ಳುವುದು, ಚರಿತ್ರೆಯನ್ನು ಒಡೆದುಕಟ್ಟುವ ಸೃಜನಶೀಲ ಪ್ರಕ್ರಿಯೆಯ ಮೂಲಕ. ಆದರೆ ದುರದೃಷ್ಟವಶಾತ್ ಭಾರತದ ಶ್ರೇಣೀಕೃತ ಜಾತಿ ಸಮಾಜ ಇದಕ್ಕೆ ಸಾಂಸ್ಕೃತಿಕ ಜಾಗವನ್ನೇ ನೀಡುತ್ತಿಲ್ಲ. ಬದಲಾಗಿ ಚರಿತ್ರೆಯನ್ನು ಛಿದ್ರಗೊಳಿಸುವ, ಮಿಥ್ಯೆಗಳನ್ನು ವೈಭವೀಕರಿಸುವ ಒಂದು ಹೊಸ ಪರಂಪರೆಯತ್ತ ಸಾಗುತ್ತಿದೆ. ಈ ಪ್ರಕ್ರಿಯೆಗೆ ಭಾರತದ ಶೈಕ್ಷಣಿಕ ವಲಯ ಒಂದೆಡೆ ಮೌನ ವಹಿಸಿದ್ದರೆ ಮತ್ತೊಂದೆಡೆ ಈ ವಿಕೃತಿಯನ್ನೇ ಖomಚಿಟಿಣiಛಿise ಮಾಡುವ ಕ್ರಿಯೆಯಲ್ಲಿ ತೊಡಗಿರುವುದು ಈ ಕಾಲದ ಮತ್ತೊಂದು ದುರಂತ. ಇದರ ಪರಿಣಾಮವನ್ನು ಕನ್ನಡ ರಂಗಭೂಮಿಯೂ ಎದುರಿಸುತ್ತಿದೆ. ಕಳೆದ 30 ವರ್ಷಗಳ ಸಮಕಾಲೀನ ಚರಿತ್ರೆಯಲ್ಲಿ ಸಂಭವಿಸಿದ ಮಾನವ ನಿರ್ಮಿತ-ಸಮಾಜ ಪ್ರೇರಿತ-ನಿಸರ್ಗದತ್ತ ವಿಕೋಪ, ದುರಂತ, ದುರ್ಘಟನೆ ಮತ್ತು ಮಾನವ ವಿರೋಧಿ ಬೆಳವಣಿಗೆಗಳ ಸುತ್ತ (ಕೋವಿ ಡ್ ಒಳಗೊಂಡಂತೆ) ಹೊಸ ನಾಟಕಗಳೇ ಬರುತ್ತಿಲ್ಲ ಎನ್ನುವುದು ನಮ್ಮನ್ನು ಆಳವಾಗಿ ಕಾಡಬೇಕಾದ ವಿಚಾರ.

ಸೃಜನಶೀಲತೆ ಮತ್ತು ಸಂವೇದನೆ

ಇದಕ್ಕೆ ಕಾರಣ ಬೌದ್ಧಿಕ ಕೊರತೆ ಅಥವಾ ಸೃಜನಶೀಲ ಮನಸ್ಸುಗಳ ಅಲಭ್ಯತೆ ಅಲ್ಲ ಬದಲಾಗಿ, ಅಧಿಕಾರ ರಾಜಕಾರಣ ಮತ್ತು ಅದರೊಳಗಿನ ಸಾಂಸ್ಕೃತಿಕ ಆಧಿಪತ್ಯ ಸೃಷ್ಟಿಸಿರುವಂತಹ ವಾತಾವರಣ. ಒಂದು ಕವಿತೆ, ಸಣ್ಣ ಕತೆ, ದೀರ್ಘ ಕಾದಂಬರಿ ಅಥವಾ ದೃಶ್ಯ ನಾಟಕ ಇಂದು ಮುಕ್ತ ವಾತಾವರಣದಲ್ಲಿ ಸೃಷ್ಟಿಯಾಗುವುದೇ ದುಸ್ತರವಾಗಿದೆ. ಏಕೆಂದರೆ ಚರಿತ್ರೆ ಮತ್ತು ಪುರಾಣ ಎರಡೂ ನೆಲೆಗಳಲ್ಲಿ ಸತ್ಯ-ಮಿಥ್ಯಗಳ ಮೇಲೆ ತಮ್ಮ ಯಜಮಾನಿಕೆ ಸ್ಥಾಪಿಸುವ ಒಂದು ಸಾಂಸ್ಕೃತಿಕ-ರಾಜಕೀಯ ಜಗತ್ತಿಗೆ ನಾವು ಅವಕಾಶ ಕೊಟ್ಟಿದ್ದೇವೆ. ಇಲ್ಲಿ ವಿಜೃಂಭಿಸುವ ಸುಳ್ಳು ಕಥನಗಳು ಮತ್ತು ನಿರೂಪಣೆಗಳು ವಿದ್ಯುನ್ಮಾನ ತಂತ್ರಜ್ಞಾನದ ಸಂವಹನ ಸೇತುವೆಗಳ ಮೂಲಕ ಸಾಮಾಜಿಕ ಮಾನ್ಯತೆ ಮತ್ತು ರಾಜಕೀಯ ಅಧಿಕೃತತೆಯನ್ನು ಪಡೆದುಕೊಳ್ಳುತ್ತವೆ. ನಿತ್ಯ ವರದಿಯಾಗುತ್ತಿರುವ ಅತ್ಯಾಚಾರಗಳು, ಮಹಿಳಾ ದೌರ್ಜನ್ಯಗಳು, ಲೈಂಗಿಕ ದೌರ್ಜನ್ಯಗಳು, ಅಸ್ಪಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಗಳು, ದ್ವೇಷಾಸೂಯೆಯ ಹತ್ಯೆಗಳು, ಸಮಾಜವನ್ನು ವಿಘಟಿತಗೊಳಿಸುವ ಸೇಡು-ಪ್ರತೀಕಾರದ ಆಲೋಚನಾ ವಿಧಾನಗಳು, ಈ ಸಂವಹನದ ಹಾದಿಗಳಲ್ಲಿ ನಗಣ್ಯವಾಗುತ್ತಾ, ಸಾಪೇಕ್ಷ ನೆಲೆಗಳಲ್ಲಿ ನೇಪಥ್ಯಕ್ಕೆ ತಳ್ಳಲ್ಪಡುತ್ತವೆ.

ಇದಕ್ಕೆ ಪರಿಹಾರವೇನು? ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಎರಡು ಜನಸಮಾವೇಶಗಳಲ್ಲಿ ಸಂವಿಧಾನವನ್ನು ಸಂರಕ್ಷಿಸುವ ದನಿ ಗಟ್ಟಿಯಾಗಿ ಕೇಳಿಬಂದಿದೆ. ಹೌದು ಭಾರತದ ಪ್ರಜಾಸತ್ತಾತ್ಮಕ ಸಂವಿಧಾನವನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಬೇಕು. ಆದರೆ ಈ ಪರದೆಯ ಹಿಂದೆ ಅವನತಿಯತ್ತ ಸಾಗುತ್ತಿರುವ ಸಮಾಜ ಮತ್ತು ಅದಕ್ಕೆ ಕಾರಣವಾಗುತ್ತಿರುವ ಲಿಂಗದ್ವೇಷ, ಪಿತೃಪ್ರಧಾನತೆ, ಯಜಮಾನಿಕೆ, ಜಾತಿ ಶೋಷಣೆ ಮತ್ತು ಮತಾಂಧತೆಯ ಆಗುಹೋಗುಗಳು ಹೆಚ್ಚು ವ್ಯಾಪಕ ಚರ್ಚೆಗೊಳಗಾಗಬೇಕಿದೆ. ಏಕೆಂದರೆ ಸಂವಿಧಾನ ಸುರಕ್ಷಿತವಾಗಿದ್ದರೂ, ನೈತಿಕವಾಗಿ ಅಧಃಪತನದ ಪಾತಾಳಕ್ಕೆ ಕುಸಿಯುತ್ತಿರುವ ಸಮಾಜವು ವರ್ತಮಾನದಲ್ಲೇ ಅವಸಾನ ಹೊಂದುತ್ತದೆ. ಮಿಲೆನಿಯಂ ಮಕ್ಕಳಿಗೆ, ಯುವ ಸಮೂಹಕ್ಕೆ ನಾವು ಬಿಟ್ಟುಹೋಗಬೇಕಿರುವುದು ಏನನ್ನು ಗ್ರಾಂಥಿಕವಾಗಿ ಸುರಕ್ಷಿತ ವಾಗಿರುವ ಸಂವಿಧಾನವನ್ನೋ ಅಥವಾ ಶಿಥಿಲವಾಗಿ ಅವಸಾನದ ಅಂಚಿನಲ್ಲಿರುವ ಸಮಾಜ-ಸಂಸ್ಕೃತಿಯನ್ನೋ? ಈ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.

ಪ್ರಗತಿಪರ, ಎಡಪಂಥೀಯ ಮತ್ತು ಸಮಾಜಮುಖೀ ಚಿಂತನೆಗಳ ನೆಲೆಯಲ್ಲಿ ನಡೆಸಲಾಗುತ್ತಿರುವ ಸಮಾವೇಶ, ಸಮ್ಮೇಳನಗಳಲ್ಲಿ ಬೌದ್ಧಿಕವಾಗಿ ಔನ್ನತ್ಯ ಪಡೆದಿರುವ ಒಂದು ವರ್ಗ ತನ್ನ ಅರಿವು ಮತ್ತು ಪ್ರಜ್ಞೆಯನ್ನು ಅಥವಾ ಅಧ್ಯಯನಶೀಲತೆ ಮತ್ತು ವಿದ್ವತ್ತನ್ನು ಜನಸಾಮಾನ್ಯರ ಮುಂದಿಡುವುದಕ್ಕಿಂತಲೂ ಹೆಚ್ಚಾಗಿ, ಇವುಗಳನ್ನು ಆಲಿಸುತ್ತಿರುವ/ಗಮನಿಸುತ್ತಿರುವ ಮಿಲೇನಿಯಂ ಸಮಾಜ (ಈ ಶತಮಾನದ ಮಕ್ಕಳು 20-25 ವಯೋಮಾನದ ಯುವ ಸಮೂಹ) ಏನನ್ನು ಅಪೇಕ್ಷಿಸುತ್ತಿದೆ ಎಂಬ ಪ್ರಶ್ನೆಯೊಂದಿಗೆ ನಾವು ಮುನ್ನಡೆಯ ಬೇಕಿದೆ. ಇದಕ್ಕೆ ಬೇಕಿರುವುದು ಸೃಜನಶೀಲ ಬೌದ್ಧಿಕ ಪ್ರಯತ್ನಗಳು ಮತ್ತು ಸಮಾಜಮುಖಿ ಭೌತಿಕ ಚಟುವಟಿಕೆಗಳು. ಬಹುಮುಖ್ಯವಾಗಿ ನಮ್ಮ ಭಾಷಣ, ಉಪನ್ಯಾಸಗಳನ್ನು ಆಲಿಸುವ ಸಾಮಾನ್ಯ ಜನರ, ವಿಶೇಷವಾಗಿ ಮಿಲೇನಿಯಂ ಮಕ್ಕಳ ಮನಸ್ಸಿನಲ್ಲಿರುವ ಪ್ರಶ್ನೆಗಳು, ಜಿಜ್ಞಾಸೆಗಳು ಹಾಗೂ ಸವಾಲುಗಳಿಗೆ ನಾವು ಪರಿಹಾರೋಪಾಯ ಮಾರ್ಗಗಳನ್ನು ತೋರಿಸಬೇಕಿದೆ.

share
ನಾ. ದಿವಾಕರ
ನಾ. ದಿವಾಕರ
Next Story
X