ಮಿಜೋರಾಂ ಜನತೆಗೆ ವರದಾನವಾದ ರೈಲು ಸೇವೆ

ಕೊಪ್ಪಳ, ಸೆ.12: ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್‌ವರ್ಕ್ ಹೊಂದಿರುವ ನಮ್ಮ ಭಾರತ, ಮಿಜೋರಾಂ ರಾಜ್ಯದಲ್ಲಿ ಮಾತ್ರ ಈವರೆಗೆ ಯಾವುದೇ ರೈಲು ಸೇವೆಯನ್ನು ಪ್ರಾರಂಭಿಸಿರಲಿಲ್ಲ. ಆದರೆ ಈ ಶತಮಾನಗಳ ಕನಸು ಈಗ ನನಸಾಗುತ್ತಿದ್ದು, ಇಂದು (ಶನಿವಾರ) ಈ ರೈಲು ಸೇವೆಗೆ ಚಾಲನೆ ದೊರೆಯಲಿದೆ.
ಮಿಜೋರಾಂ ಒಂದು ಸಣ್ಣ ಈಶಾನ್ಯ ರಾಜ್ಯ. ಮಿಜೋರಾಂ ಎಂದರೆ ಗುಡ್ಡದಲ್ಲಿನ ಜನರು ಅಥವಾ ಗುಡ್ಡದಲ್ಲಿ ವಾಸಿಸುವ ಜನರು ಎಂದರ್ಥ. ಅದರಂತೆ ಇಡೀ ರಾಜ್ಯವು ಗುಡ್ಡಗಾಡಿನಿಂದ ಕೂಡಿದೆ. ಇಲ್ಲಿ ಭೂಮಿಯು ಸಮತಟ್ಟಾಗಿರದ ಕಾರಣ ರಸ್ತೆ, ರೈಲು ಇನ್ನಿತರ ಸಾರಿಗೆ ವ್ಯವಸ್ಥೆಗಳ ನಿರ್ಮಾಣ ಬಹಳ ಕಷ್ಟ. ಇದೇ ಕಾರಣದಿಂದಾಗಿ ಈವರೆಗೆ ಈ ರಾಜ್ಯದಲ್ಲಿ ಯಾವುದೇ ರೈಲು ಸೇವೆಯನ್ನು ಪ್ರಾರಂಭಿಸಿರಲಿಲ್ಲ. ಆದರೆ 2014ರ ನವೆಂಬರ್‌ನಲ್ಲಿ ಕೇಂದ್ರ ಸರಕಾರವು ಮಿಜೋರಾಂ ರಾಜ್ಯದ ಬೈರಾಬಿನಗರದಿಂದ ಸೈರಾಂಗ್ ನಗರದವರೆಗೆ ಒಂದು ಹೊಸ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ಆರಂಭಿಸಿತು.
ಒಟ್ಟು 51.38 ಕಿ.ಮೀ ಉದ್ದದ ರೈಲ್ವೆ ಯೋಜನೆ ಇದಾಗಿದ್ದು, ಇದರ ಇದರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗವು ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ಸಹಿತ ಒಟ್ಟು ನಾಲ್ಕು ನಿಲ್ದಾಣಗಳನ್ನು ಹೊಂದಿವೆ. ನಿಲ್ದಾಣಗಳ ನಿರ್ಮಾಣ ಕಾಮಗಾರಿ ಕೂಡ ಪೂರ್ಣಗೊಂಡಿದೆ. ಈ ಮಾರ್ಗವು ಸುಮಾರು 153 ಸೇತುವೆಗಳನ್ನು ಮತ್ತು 45 ಸುರಂಗಗಳನ್ನು ಹೊಂದಿವೆ.
ಸುಮಾರು 8,071 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಅನೇಕ ಸಮಸ್ಯೆಗಳ ನಡುವೆ ಮಿಜೋರಾಂ ಜನತೆಗೆ ರೈಲು ಪ್ರಯಾಣದ ಸೌಲಭ್ಯ ಸಿಕ್ಕಿದೆ. ಅಲ್ಲಿನ ಇಂಜಿನಿಯರ್‌ಗಳು ಹೇಳುವಂತೆ ಸೇತುವೆಗಳು ಮತ್ತು ಸುರಂಗಳನ್ನು ಸೇರಿದಂತೆ ಇಂದಿಷ್ಟು ಸ್ಥಳಗಳಿಗೆ ಕಾಮಗಾರಿಗೆ ಬೇಕಾಗುವ ಸರಕನ್ನು ಸಾಗಿಸಲು ರಸ್ತೆಯೇ ಇರಲಿಲ್ಲ. ಮೊದಲು ಆ ಸ್ಥಳಕ್ಕೆ ರಸ್ತೆಯನ್ನು ನಿರ್ಮಿಸಿ ನಂತರ ರೈಲು ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.
51.38 ಕಿ.ಮೀ. ಮಾರ್ಗದಲ್ಲಿ ಸೇತುವೆ ಮತ್ತು ಸುರಂಗಳು ಹೆಚ್ಚಿದ್ದು, ಸುಮಾರು 27.665 ಉದ್ದವನ್ನು ಹೊಂದಿವೆ. ಇದು ಈ ಮಾರ್ಗದ ಒಟ್ಟು ವಿಸ್ತೀರ್ಣದ ಶೇ.54ರಷ್ಟಿದೆ. ಇದರಿಂದ ರೈಲು ಪ್ರಯಾಣವು ಸುಗಮವಾಗಲಿದೆ.
ಈ ರೈಲು ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಮಾಡುವುದು ತುಂಬಾ ಕಷ್ಟವಾಗಿದ್ದು ಇದಕ್ಕೆ ಮುಖ್ಯ ಕಾರಣ ಇಲ್ಲಿನ ಹವಾಮಾನ. ಇಲ್ಲಿ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಮಳೆ ಇರುತ್ತದೆ. ಇದರಿಂದ ಕಾಮಗಾರಿ ನಡೆಸುವುದು ಕಷ್ಟ. ಉಳಿದ ಸಮಯದಲ್ಲೇ ಕಾಮಗಾರಿ ನಡೆಸಬೇಕಾಗಿದೆ. ಈ ಪ್ರದೇಶದಲ್ಲಿ ಭೂಕುಸಿತ ಸಾಮಾನ್ಯವಾಗಿದ್ದು ಶೇಲ್, ಸಿಲ್ಟ್‌ಸ್ಟೋನ್, ಸ್ಯಾಂಡ್‌ಸ್ಟೋನ್, ಹಗುರ ಕಲ್ಲುಗಳು, ನೀರು ನುಗ್ಗುವಿಕೆಯು ಇಲ್ಲಿನ ಭೂಕುಸಿತಕ್ಕೆ ಮುಖ್ಯ ಕಾರಣವಾಗಿವೆ.
ಸ್ಥಳೀಯ ಕಾರ್ಮಿಕರ ಕೊರತೆ ಇರುವುದರಿಂದ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಕಾಮಗಾರಿ ನಡೆಸಿದರೂ ಇಲ್ಲಿ ಕಾಮಗಾರಿಗೆ ಬೇಕಾದ ಮರಳು, ಕಲ್ಲು ಸೇರಿದಂತೆ ಇನ್ನು ಅನೇಕ ಸರಕುಗಳು ಮಿಜೋರಾಂನಲ್ಲಿ ಸಿಗುವುದಿಲ್ಲ. ಇವುಗಳನ್ನು ಕೂಡ ಹೊರ ರಾಜ್ಯಗಳಿಂದ ಆಮದು ಮಾಡಿಕೊಂಡು ಕಾಮಗಾರಿ ನಡೆಸಬೇಕಾಗಿರುವುದರಿಂದ ಈ ರೈಲು ಮಾರ್ಗ ನಿರ್ಮಾಣವು ಅನೇಕ ಸವಾಲುಗಳನ್ನು ಹೊಂದಿತ್ತು, ಇಂಜಿನಿಯರ್‌ಗಳು ಮತ್ತು ಕಾರ್ಮಿಕರ ಪರಿಶ್ರಮದಿಂದ ಅಡಚನೆಗಳನ್ನು ನಿವಾರಿಸಿ ರೈಲು ಸಂಚರಿಸುವಂತೆ ಮಾಡಿದ್ದರಿಂದ ಇಲ್ಲಿನ ಜನರಿಗೆ ಸಂತಸ ಮೂಡಿದೆ.
ಕುತುಬ್ ಮಿನಾರ್‌ಗಿಂತಲೂ ಎತ್ತರದ ಸೇತುವೆ: ಈ ರೈಲು ಮಾರ್ಗವು ಸುಮಾರು 153 ಸೇತುವೆಗಳಿಂದ ಕೂಡಿದ್ದು, ಅದರಲ್ಲಿ ಸೈರಾಂಗ್ ಬಳಿ ಇರುವ ಒಂದು ಸೇತುವೆ ದಿಲ್ಲಿಯ ಕುತುಬ್ ಮಿನಾರ್‌ಗಿಂತಲೂ ಎತ್ತರವಾಗಿದೆ. ಕುತುಬ್ ಮಿನಾರ್‌ನ ಎತ್ತರ 72.5 ಮೀಟರ್ ಇದ್ದರೆ ಈ ಸೇತುವೆಯು 114 ಮೀಟರ್ ಎತ್ತರವಿದೆ. 70 ಮೀ.ಗಿಂತಲೂ ಎತ್ತರದ 6 ಸೇತುವೆಗಳು ಈ ಮಾರ್ಗದಲ್ಲಿ ಇವೆ. ಹೀಗೆ ಸೇತುವೆಗಳ ಒಟ್ಟು ಉದ್ದವು 11.78 ಕಿ.ಮೀ. ಆಗಿದ್ದು ಇದು ಈ ಮಾರ್ಗದಲ್ಲಿ ಶೇ.23ರಷ್ಟು ಪಾಲನ್ನು ಹೊಂದಿದೆ.
ಉದ್ಯೋಗ ಹೆಚ್ಚಳ: ರೈಲು ಸಂಚಾರದಿಂದ ಸಿಲ್ಚರ್, ಗುವಾಹಟಿ ಮತ್ತು ದಿಲ್ಲಿಗೆ ಹೋಗಲು ಸುಲಭವಾಗುತ್ತದೆ. ಇದರಿಂದ ಸ್ಥಳೀಯ ಜನರು ಅರಣ್ಯ ಉತ್ಪನ್ನಗಳು, ಹಸ್ತಕಲೆಗಳು ಮತ್ತು ತೋಟಗಾರಿಕೆ ಉತ್ಪನ್ನಗಳು ಸೇರಿದಂತೆ ಇತರ ವಸ್ತುಗಳನ್ನು ಸಾಗಿಸಲು ಅನುಕೂಲಾಗುತ್ತದೆ. ಇದರಿಂದ ಇಲ್ಲಿ ಉದ್ಯೋಗಳು ಕೂಡ ಹೆಚ್ಚಳವಾಗಿ, ರಾಜ್ಯದ ಆರ್ಥಿಕತೆಯೂ ಹೆಚ್ಚುತ್ತದೆ. ಐಆರ್‌ಸಿಟಿಸಿ (ಇಂಡಿಯನ್ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್) ಮಿಜೋರಾಂ ಸರಕಾರದೊಂದಿಗೆ 2 ವರ್ಷಗಳ ಕಾಲ ಪ್ರವಾಸೋದ್ಯಮ ಪ್ರೋತ್ಸಾಹದ ಒಪ್ಪಂದ ಮಾಡಿಕೊಂಡಿದೆ.
ಬೈರಾಬಿಯಿಂದ ಸೈರಾಂಗ್‌ವರೆಗಿನ ರೈಲು ಮಾರ್ಗ ನಿರ್ಮಾಣ ಮಾಡಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಕಾಮಗಾರಿ ನಡೆಯಬೇಕಾದ ಸ್ಥಳಗಳಿಗೆ ಹೋಗಲು ರಸ್ತೆ ಇರಲಿಲ್ಲ. ಅದಕ್ಕಾಗಿ ಸುಮಾರು 200 ಕಿ.ಮೀ ರಸ್ತೆಯನ್ನು ನಿರ್ಮಿಸಿದ್ದೇವೆ. ಸರಕುಗಳನ್ನು ದುರ್ಗಮ ಪ್ರದೇಶಕ್ಕೆ ಸಾಗಿಸಲು ಕಷ್ಟವಿತ್ತು. ಇಂತಹ ಅನೇಕ ಸಮಸ್ಯೆಗಳನ್ನು ನಿವಾರಿಸಿ ಈ ಮಾರ್ಗವನ್ನು ನಿರ್ಮಿಸಲಾಗಿದೆ. ಸತತ 7-8 ತಿಂಗಳು ಮಳೆಯಿರುವುದರಿಂದ ಕಾಮಗಾರಿಯನ್ನು ವೇಗವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕಾಮಗಾರಿಗೆ ನಡೆಯಲು ಹನ್ನೊಂದು ವರ್ಷ ಕಾಲವಕಾಶ ಬೇಕಾಯಿತು. ಸದ್ಯ ರೈಲು ಮಾರ್ಗ ಪೂರ್ಣ ಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳು, ರೋಗಿಗಳು ಮತ್ತು ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ. ಹಣವೂ ಉಳಿಯಲಿದೆ. ಈ ರೈಲು ಮಾರ್ಗವು ಇಲ್ಲಿನ ಜನರಿಗೆ ವರದಾನವಾಗಲಿದೆ.
-ಕೆ.ಕೆ ಶರ್ಮಾ, ಸಿಪಿಆರ್‌ಒ, ಎನ್‌ಎಫ್‌ಆರ್ ರೈಲ್ವೆ, ಗುವಾಹಟಿ
ಈ ರೈಲು ಸಂಚಾರವು ಜನರಿಗೆ ಶಿಕ್ಷಣ, ವೈದ್ಯಕೀಯ ಮತ್ತು ಕೃಷಿ, ರಪ್ತು-ಆಮದು ಸೇರಿದಂತೆ ಎಲ್ಲ ವಲಯಗಳಲ್ಲಿ ಮಿಜೋರಾಂ ಜನರಿಗೆ ಅನುಕೂಲವಾಗಲಿದೆ. ಇಲ್ಲಿ ಬಿದಿರುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಅದನ್ನು ಕೂಡ ಸಾಗಾಟ ಮಾಡಬಹುದು. ಈ ರೈಲು ಸಂಚಾರವು ಮಿಜೋರಾಂ ಜನತೆಗೆ ಒಂದು ಹೊಸ ಅಧ್ಯಾಯವಾಗಲಿದೆ.
-ಅಡಾಲ್ಫ್ ಹಿಟ್ಲರ್ ಸೈಲಾಂ, ಸ್ಥಳೀಯ ನಿವಾಸಿ
ಜೀವನ ಶೈಲಿ ಬಿಂಬಿಸುವ ಚಿತ್ರಗಳು
ಇಲ್ಲಿನ ಇಡೀ ಭೂ ಪ್ರದೇಶವು ಗುಡ್ಡಗಳಿಂದ ಕೂಡಿದ್ದು ಇದರಿಂದ ರೈಲು ಸಂಚರಿಸಲು ಬೇಕಾಗುವ ಮಾರ್ಗವನ್ನು ನಿರ್ಮಿಸಲು ಗುಡ್ಡಗಳನ್ನು ಕೊರೆದು ಟನಲ್‌ಗಳನ್ನು ನಿರ್ಮಿಸಲಾಗಿದ್ದು, ಈ ಮಾರ್ಗದಲ್ಲಿ ಒಟ್ಟು 45 ಟನಲ್‌ಗಳಿವೆ. ಅದರಲ್ಲಿ ಒಂದು ಸುರಂಗವು 1.868 ಕಿ.ಮೀ. ಉದ್ದದಾಗಿದೆ. ಒಟ್ಟು ಸುರಂಗಗಳು 15.885 ಕಿ.ಮೀ ಉದ್ದವನ್ನು ಹೊಂದಿದ್ದು, ಇವುಗಳು ಈ ರೈಲು ಮಾರ್ಗದಲ್ಲಿ ಶೇ.31ರಷ್ಟು ಪಾಲನ್ನು ಹೊಂದಿವೆ. ಈ ಸುರಂಗಗಳಿಗೆ ಸ್ಥಳೀಯ ಜನರ ಉಡುಗೆ-ತೊಡುಗೆ ಮತ್ತು ಹಬ್ಬ, ಸಂಪ್ರದಾಯಗಳು ಹಾಗೂ ಹಳ್ಳಿಗಳ ಜೀವನ ಶೈಲಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ
ರೈಲು ಸಂಚಾರದಿಂದ ಪ್ರಯಾಣದ ಸಮಯವು ಅರ್ಧಕ್ಕೂ ಹೆಚ್ಚು ಕಡಿತಗೊಳ್ಳಲಿದೆ. ಅಂದರೆ 51 ಕಿ.ಮೀ. ಹೋಗಲು ಸಾಮಾನ್ಯವಾಗಿ 7 ಗಂಟೆಯಾಗುತ್ತದೆ. ಆದರೆ ರೈಲಿನಿಂದ ಹೋದರೆ ಕೇವಲ ಮೂರು ಗಂಟೆಗಳಲ್ಲಿ ತಲುಪಬಹುದಾಗಿದೆ. ಇದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇಲ್ಲಿ ವ್ಯವಹಾರಗಳು ಹೆಚ್ಚುತ್ತವೆ, ವ್ಯವಹಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ನಿರಂತರವಾಗಿ ಸರಬರಾಜು ಮಾಡುವುದೂ ಅಗತ್ಯವಾಗಿರುವುದರಿಂದ ರೈಲು ಮಾರ್ಗ ಅನುಕೂಲವಾಗಲಿದೆ. ರೈಲು ಸಂಚಾರದಿಂದ ಆಮದು ವೆಚ್ಚ ಕೂಡ ಕಡಿಮೆಯಾಗುತ್ತದೆ, ಇದರಿಂದ ಸರಕುಗಳ ಬೆಲೆಯೂ ಕಡಿಮೆಯಾಗುತ್ತದೆ.