ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮೂರು ಆ್ಯಪ್ಗಳು ಸಿದ್ಧ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಿರತವಾಗಿದೆ. ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಕುಟುಂಬಗಳ ಮಾಹಿತಿ ಸಂಗ್ರಹಿಸಲು 3 ಆ್ಯಪ್ಗಳನ್ನು ಸಿದ್ಧಪಡಿಸಿದೆ.
ಸಮೀಕ್ಷೆ ಒಂದೇ ಹಂತದಲ್ಲಿ ನಡೆಯುತ್ತದೆ. ಅದಕ್ಕೆ ಸಂಬಂಧಿಸಿದ, ಪೂರಕ ಕೆಲಸಗಳು ಮಾಡಬೇಕಿದೆ. ಈಗ ಹೌಸ್ ಲಿಸ್ಟಿಂಗ್ ನಡೆಯುತ್ತಿದೆ. 2ಕೋಟಿ ಮನೆಗಳನ್ನು ಗುರುತಿಸಿ, ಜಿಯೊ ಟ್ಯಾಗ್ ಮಾಡಿ, ಸ್ಟಿಕ್ಕರ್ ಅಂಟಿಸಿದ ನಂತರ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ಮುಗಿದ ನಂತರ ಸ್ಟಿಕ್ಕರ್ ಮೇಲೆ ಒಂದು ನಂಬರನ್ನು ಬರೆಯಲಾಗುತ್ತದೆ. ಸಮೀಕ್ಷೆಯ ವೇಳೆ ಯಾವುದೇ ರೀತಿಯ ಕಾಗದವನ್ನು ಬಳಸುವುದಿಲ್ಲ. ಸಂಪೂರ್ಣವಾಗಿ ಡಿಜಿಟಲ್ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತದೆ. ಅದಕ್ಕಾಗಿ ಒಟ್ಟು ಮೂರು ಮೊಬೈಲ್ ಆ್ಯಪ್ಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಕುಟುಂಬಗಳಿಗೆ ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಶ್ನಾವಳಿಯನ್ನು ಮುದ್ರಿಸಲಾಗಿದೆ. ಮೊಬೈಲ್ ಆ್ಯಪ್ನಲ್ಲಿ ಒಂದು ಪ್ರಶ್ನೆಯ ಉತ್ತರವನ್ನು ತುಂಬಿದ ನಂತರವೇ ಮುಂದಿನ ಪ್ರಶ್ನೆಗೆ ಹೋಗಲು ಸಾಧ್ಯವಾಗುತ್ತದೆ. ಎಲ್ಲ ಪ್ರಶ್ನೆಗಳು ಮುಗಿದ ನಂತರ ಆ್ಯಪ್ನಲ್ಲಿ ಪೂರ್ವ ವೀಕ್ಷಣೆಯನ್ನು ಕುಟುಂಬದ ಸದಸ್ಯರಿಗೆ ತೋರಿಸಿದ ನಂತರ ಸಮೀಕ್ಷೆ ಮುಗಿಯುತ್ತದೆ. ಆ ಎಲ್ಲ ಮಾಹಿತಿ ಒಂದು ಸರ್ವರ್ನಲ್ಲಿ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ಆ್ಯಪ್ಗಳಿವೆ?
ಮೊದಲನೆಯದು ‘ಹೌಸ್ ಲಿಸ್ಟಿಂಗ್ ಆ್ಯಪ್’, ವಿದ್ಯುತ್ ಸ್ಮಾರ್ಟ್ ಮೀಟರ್ ರೀಡ್ ಮಾಡಿ ಮನೆಗಳನ್ನು ಲಿಸ್ಟ್ ಮಾಡಲು ಈ ಆ್ಯಪ್ ಬಳಸಿಕೊಳ್ಳಲಾಗುತ್ತದೆ. ಎರಡನೆಯದು ‘ಸೆಲ್ಪ್ ಟ್ರೈನಿಂಗ್ ಆ್ಯಪ್’, ಇದನ್ನು ಸಮೀಕ್ಷೆ ಕೆಲಸದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತದೆ. ಮೂರನೆಯ ಆ್ಯಪ್ನ್ನು ಆಶಾ ಕಾರ್ಯಕರ್ತರು ಮನೆ ಮನೆಗೆ ಹೋಗಿ ಅರಿವು ಮೂಡಿಸಲು ಬಳಸಿಕೊಳ್ಳಲಾಗುತ್ತಿದೆ. ದತ್ತಾಂಶ ಸಂಗ್ರಹ ಆದ ನಂತರ ಇನ್ನೊಂದು ಆ್ಯಪ್ ಸಿದ್ಧಪಡಿಸುವ ಬಗ್ಗೆ ಯೋಚನೆ ಮಾಡಬೇಕು ಎನ್ನುವುದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯಕ್ ಅಭಿಪ್ರಾಯವಾಗಿದೆ.
ಪ್ರಮುಖ ಪ್ರಶ್ನೆಗಳು:
‘ಕುಟುಂಬದ ಮುಖ್ಯಸ್ಥರು ಮತ್ತು ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಕುಟುಂಬದ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ, ಕುಟುಂಬದ ಮುಖ್ಯಸ್ಥರು-ಸದಸ್ಯರ ಹೆಸರು, ಜಾತಿ, ಧರ್ಮ, ಉಪಜಾತಿ, ಜಾತಿಗೆ ಇರುವ ಇನ್ನಿತರ ಪರ್ಯಾಯ ಹೆಸರು, ಜಾತಿ ಪ್ರಮಾಣ ಪತ್ರ ಇರುವ ಬಗ್ಗೆ ಖಚಿತ ಪ್ರಶ್ನೆಗಳು ಪ್ರಮುಖವಾಗಿವೆ’