ಅಸ್ಮಿತೆಗಳ ಆಧಿಪತ್ಯದಲ್ಲಿ ಮಹಿಳೆಯ ಸ್ಥಾನಮಾನ

ಧರ್ಮ ಮತ್ತು ಸಂಸ್ಕೃತಿ ಎರಡೂ ಸಂಸ್ಥೆಗಳು, ಜನಸಾಮಾನ್ಯರ ಕೈಗೆಟುಕದ ಹಾಗೆ, ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟುಗಳ ನಿಯಂತ್ರಣಕ್ಕೆ ಒಳಪಟ್ಟಾಗ ಈ ತಾರತಮ್ಯ, ದೌರ್ಜನ್ಯ ಮತ್ತು ಅಸಮಾನತೆಗಳು ವ್ಯವಸ್ಥೆಯ ಒಂದು ಭಾಗವಾಗಿ ಚಾಲ್ತಿಯಲ್ಲಿರುತ್ತದೆ. ಭಾರತ ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿದೆ, ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ಸ್ಥಾಪಿಸುವ ಮಟ್ಟಿಗೆ ವೈಜ್ಞಾನಿಕವಾಗಿ ಮುನ್ನಡೆದಿದೆ. ಈ ಹೆಮ್ಮೆಯೊಂದಿಗೇ, ಸಮಾಜದ ಮತ್ತೊಂದು ಬದಿಯಲ್ಲಿನ ಅಪಸವ್ಯಗಳನ್ನೂ ಗಮನಿಸಿದಾಗ, ನಾಗರಿಕತೆ ಎನ್ನುವುದೇ ಮರುನಿರ್ವಚನೆಗೊಳಪಡಬೇಕಾದ ವಿದ್ಯಮಾನವಾಗಿ ಕಾಣುತ್ತದೆ.
ಭಾರತೀಯ ಸಮಾಜದಲ್ಲಿ ಮಹಿಳೆ, ಎಲ್ಲ ಸಂದರ್ಭಗಳಲ್ಲೂ ಎರಡು ಮಜಲುಗಳಿಂದ ದಾಳಿ ಎದುರಿಸುವುದು ಸಾರ್ವಕಾಲಿಕ ಸತ್ಯ, ಸಾರ್ವತ್ರಿಕ ವಾಸ್ತವ. ಮಹಿಳಾ ಘನತೆ, ಗೌರವ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸ್ಥಾನಮಾನಗಳನ್ನು ನಿರ್ಧರಿಸುವ, ನಿರ್ವಚಿಸುವ ಮತ್ತು ಸಾಂಸ್ಥಿಕವಾಗಿ ನಿರ್ಬಂಧಿಸಿ ನಿರ್ದೇಶಿಸುವ ಹಕ್ಕನ್ನೂ ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟುಗಳು ತಮಗೆ ತಾವೇ ವಹಿಸಿಕೊಂಡಿರುವುದರಿಂದ, ಮಹಿಳೆ ತನ್ನದೇ ಆದ ‘ಸ್ವತಂತ್ರ ಮಹಿಳಾ ಅಸ್ಮಿತೆ’ಯನ್ನು (Free Womenʼs Identity) ಪಡೆದುಕೊಳ್ಳಲು ನಿರಂತರ ಸಂಘರ್ಷ ನಡೆಸಬೇಕಾಗುತ್ತದೆ. ಇದು ಯಾವುದೇ ಸಾಂಪ್ರದಾಯಿಕ, ಧಾರ್ಮಿಕತೆಗೆ ಆತುಕೊಂಡಿರುವ ಸಮಾಜಗಳಲ್ಲಿ ಸಹಜವಾದರೂ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ, ಸಾಂಸ್ಥಿಕ ಧರ್ಮಗಳ ಪಾರಮ್ಯ ಮತ್ತು ಇವೆರಡನ್ನೂ ನಿರ್ದೇಶಿಸುವ ಪಿತೃಪ್ರಧಾನ-ಊಳಿಗಮಾನ್ಯ ಪದ್ಧತಿಗಳು, ಭಾರತೀಯ ಮಹಿಳೆಗೆ ಈ ಸ್ವಾಯತ್ತ ಅಸ್ಮಿತೆಯನ್ನು (Autonomous Identity) ಕಲ್ಪಿಸಲು ಅಡ್ಡಿಯಾಗುತ್ತವೆ.
ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸಾಂಪ್ರದಾಯಿಕ ಧಾರ್ಮಿಕತೆ ಮತ್ತು ಧರ್ಮಾಧಾರಿತ ಸಂಹಿತೆಗಳು ನಿಯಂತ್ರಿಸುವ ಸಮಾಜದಲ್ಲಿ, ಕೆಳಸ್ತರ ಜಾತಿಗಳು ದೌರ್ಜನ್ಯಕ್ಕೊಳಗಾಗುವುದು ಚಾರಿತ್ರಿಕವಾಗಿ ಕಾಣಬಹುದಾದ ವಿದ್ಯಮಾನ. ಸಾಮಾಜಿಕವಾಗಿ ಹಾಗೂ ಆರ್ಥಿಕ ನೆಲೆಯಲ್ಲಿ ಪಿತೃಪ್ರಧಾನ ಮೌಲ್ಯಗಳು ಸಂಪತ್ತು-ಉತ್ಪಾದನೆಯ ಮೂಲಗಳನ್ನು ಆವರಿಸಿದಾಗ, ಅಲ್ಲಿ ಅಸಮಾನತೆ, ತಾರತಮ್ಯಗಳೊಂದಿಗೆ ದೌರ್ಜನ್ಯಗಳೂ ಸ್ವಾಭಾವಿಕ ಪ್ರಕ್ರಿಯೆಗಳಾಗುತ್ತವೆ. ಈ ವಾತಾವರಣದಲ್ಲಿ ಮಹಿಳೆ, ಜಾತಿ-ಧರ್ಮ-ಸಮುದಾಯಗಳ ಗೆರೆಗಳನ್ನು ಮೀರಿ ದೌರ್ಜನ್ಯ, ಕಿರುಕುಳ, ತಾರತಮ್ಯಗಳನ್ನು ಎದುರಿಸುತ್ತಾಳೆ. ಧಾರ್ಮಿಕ ಕಟ್ಟಳೆಗಳು, ಸಾಂಸ್ಕೃತಿಕ ಕಟ್ಟುಪಾಡುಗಳು ಹಾಗೂ ಜಾತಿ ಕೇಂದ್ರಿತ ಜೀವನ ಮೌಲ್ಯಗಳು ಪುರುಷ ಸಮಾಜವನ್ನು ನಿಯಂತ್ರಿಸಿದರೂ, ಮಹಿಳಾ ಸಂಕುಲವನ್ನು ಇನ್ನೂ ಹೆಚ್ಚು ತೀವ್ರವಾಗಿ ನಿರ್ಬಂಧಿಸುತ್ತವೆ. ಹಾಗಾಗಿಯೇ ಇಂತಹ ಸಮಾಜಗಳಲ್ಲಿ ಮಹಿಳೆ ಒಂದೆಡೆ ಲಿಂಗಾಧಾರಿತ ಮತ್ತೊಂದೆಡೆ ಜಾತಿ-ಧರ್ಮಾಧಾರಿತ ತಾರತಮ್ಯಗಳನ್ನು ಎದುರಿಸಬೇಕಾಗುತ್ತದೆ.
ಸಮಕಾಲೀನ ಮಹಿಳಾ ಆಂದೋಲನಗಳು ಈ ಸೂಕ್ಷ್ಮ ಸಾಮಾಜಿಕ ಲಕ್ಷಣವನ್ನು ಸ್ಪಷ್ಟವಾಗಿ ಗುರುತಿಸಿರುವುದರಿಂದಲೇ ಎಲ್ಲ ವರ್ಗದ ಮಹಿಳೆಯರು ಎದುರಿಸುವ ಸವಾಲುಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಲು ಸಜ್ಜಾಗಿ ನಿಂತಿವೆ. ಆದರೆ ಪುರುಷಾಧಿಪತ್ಯಕ್ಕೆ ಒಳಗಾಗಿರುವ ಸಾಂಘಿಕ ನೆಲೆಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ, ಸಂಘಟನೆಗಳಲ್ಲಿ ಇರುವ ಜಾತಿ ಅಸ್ಮಿತೆ ಮತ್ತು ಧಾರ್ಮಿಕ ಅಸ್ಮಿತೆಗಳು ಮಹಿಳಾ ಸಮಸ್ಯೆಗಳನ್ನೂ ಸಹ, ತಮ್ಮ ತಾತ್ವಿಕ ನಿಲುವುಗಳಿಗೆ ಅನುಸಾರವಾಗಿ ನೋಡುವ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಮಹಿಳೆಯರು ಹಾಗೂ ಮುಂದುವರಿದ ಸಮಾಜದ ಹಿತವಲಯದಲ್ಲಿರುವ ಮಹಿಳೆಯರು ಎದುರಿಸುವ ಸಮಸ್ಯೆಗಳು ಸಹಜವಾಗಿಯೇ ಭಿನ್ನವಾಗಿರುತ್ತವೆ. ಆದರೆ ವಿಶಾಲ ಚೌಕಟ್ಟಿನಲ್ಲಿ ತಾರತಮ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ, ಕೌಟುಂಬಿಕ ಹಿಂಸೆ ಮೊದಲಾದ ಮಹಿಳಾ ದೌರ್ಜನ್ಯಗಳನ್ನು ಗಮನಿಸಿದಾಗ, ಪಿತೃಪ್ರಧಾನ ವ್ಯವಸ್ಥೆಯ ಯಜಮಾನಿಕೆಯ ಸಮಾನ ಎಳೆಯೊಂದನ್ನು ಗುರುತಿಸಬಹುದು.
ಸಂಸ್ಕೃತಿ-ರಾಜಕಾರಣ ಮತ್ತು ಪ್ರಾತಿನಿಧ್ಯ
ಇದರ ಒಂದು ಆಯಾಮವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ ಹಾಗೂ ಸಾಮಾಜಿಕ ಹೋರಾಟಗಳ ಪ್ರಗತಿಪರರನ್ನೂ ಸೇರಿದಂತೆ, ಸಭೆ, ವಿಚಾರ ಸಂಕಿರಣ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗಮನಿಸಬಹುದು. ಮುಖ್ಯವಾಗಿ ಇದು ಮಹಿಳಾ ಪ್ರಾತಿನಿಧ್ಯದ ನೆಲೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ನಡೆಯುವ ವಿಚಾರ ಸಂಕಿರಣಗಳು, ಎಡಪಂಥೀಯ ವಿಚಾರ ಮಂಥನದ ಸಭೆಗಳು, ಕಾರ್ಮಿಕ ಸಂಘಟನೆಗಳ ಸಮಾವೇಶಗಳು, ಸಾಹಿತ್ಯ ವಲಯದ ಸಾರ್ವಜನಿಕ ಸಭೆಗಳು, ಸಾಂಸ್ಕೃತಿಕ ಸಂಸ್ಥೆಗಳ ಸಮಾವೇಶಗಳು, ಈ ಎಲ್ಲ ಸಂದರ್ಭಗಳಲ್ಲೂ ಉಪನ್ಯಾಸಕರಾಗಿ, ಭಾಷಣಕಾರರಾಗಿ ವೇದಿಕೆಗಳ ಮೇಲೆ ಮಹಿಳೆಯರ ಪ್ರಾತಿನಿಧ್ಯ ನಗಣ್ಯವಾಗಿಯೇ ಕಾಣುತ್ತದೆ. ಮೈಸೂರಿನಂತಹ ಸಾಂಸ್ಕೃತಿಕ ನಗರದಲ್ಲೂ ಈ ವ್ಯತ್ಯಯವನ್ನು ಧಾರಾಳವಾಗಿ ಗುರುತಿಸಬಹುದು.
ಇದರ ವಿಶಾಲ ಆಯಾಮವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುತಿಸಬಹುದು. ಈವರೆಗೆ ನಡೆದಿರುವ 87 ಸಮ್ಮೇಳನಗಳಲ್ಲಿ ನಾಲ್ಕು ಬಾರಿ ಮಾತ್ರ ಮಹಿಳಾ ಅಧ್ಯಕ್ಷರನ್ನು ಕಾಣಬಹುದು. 88ನೇ ಸಮ್ಮೇಳನಕ್ಕೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ವಿವಾದಾಸ್ಪದವಾಗಿರುವ ದಸರಾ ಉತ್ಸವದ ಉದ್ಘಾಟನೆಗೆ ಆಹ್ವಾನಿತರಾಗಿರುವ ಬಾನು ಮುಷ್ತಾಕ್, ಐದನೆಯ ಮಹಿಳೆಯಾಗಿದ್ದಾರೆ. ಕರ್ನಾಟಕವು 12ನೇ ಶತಮಾನದಿಂದಲೇ ಲಿಂಗ ಸಮಾನತೆಯ ದನಿಗೆ ಸಾಕ್ಷಿಯಾಗಿದ್ದರೂ, ಕಳೆದ ಏಳು ದಶಕಗಳಲ್ಲಿ ಈ ರಾಜ್ಯ ಮಹಿಳಾ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯವಾಗಿಲ್ಲ. ಪಂಚಾಯತ್ ರಾಜ್ ಮಸೂದೆಯು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಜಾರಿಯಾಗದೆ ಇದ್ದಿದ್ದರೆ, ಕೆಳಹಂತದ ಆಳ್ವಿಕೆಯಲ್ಲೂ ಸಹ ಮಹಿಳಾ ಪ್ರಾತಿನಿಧ್ಯ ನಿರ್ಲಕ್ಷ್ಯಕ್ಕೊಳಗಾಗುತ್ತಿತ್ತು. ಈಗಲೂ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸದಸ್ಯರಿದ್ದರೂ, ತೆರೆಮರೆಯಲ್ಲಿ ನಿಂತು ಯಜಮಾನಿಕೆ ವಹಿಸುವ ಪುರುಷ ಸಮಾಜವನ್ನು ಕಾಣುತ್ತಲೇ ಬಂದಿದ್ದೇವೆ.
ಈ ಪ್ರಾತಿನಿಧ್ಯ ತಾರತಮ್ಯವನ್ನು ದಲಿತ ಸಂಘಟನೆಗಳಲ್ಲೂ, ಕಮ್ಯುನಿಸ್ಟ್ ಪಕ್ಷಗಳಲ್ಲೂ, ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲೂ ಸಹ ಕಾಣಬಹುದು. ಯಾವುದೇ ದಲಿತ ಸಂಘಟನೆಯ ಮುಂದಾಳತ್ವವನ್ನು ಮಹಿಳೆಗೆ ನೀಡಲಾಗಿಲ್ಲ ಎನ್ನುವುದು, ಅಂಬೇಡ್ಕರ್ ಚಿಂತನೆಗಳ ನೆಲೆಯಲ್ಲಿ ನಿಂತು ನೋಡಿದಾಗ, ತಲೆತಗ್ಗಿಸುವ ವಿದ್ಯಮಾನ ಆಗಿದೆ. ಒಂದು ಸಮಾಜವನ್ನು ನಿಯಂತ್ರಿಸುವ ರಾಜಕಾರಣ, ಸಾಂಸ್ಕೃತಿಕ ಸಂಸ್ಥೆಗಳು, ಸಾಹಿತ್ಯಕ ಸಂಘಟನೆಗಳು ಮತ್ತು ಅಧಿಕಾರ ಕೇಂದ್ರಗಳು ಪಿತೃಪ್ರಧಾನ ಮೌಲ್ಯಗಳಿಂದ ಪ್ರಭಾವಿತವಾದಾಗ, ಹೀಗೆ ಸಮಾಜದ ಎಲ್ಲ ವಲಯಗಳಲ್ಲೂ ಸಹ ಮಹಿಳೆ ನಿರ್ಲಕ್ಷಿಸಲ್ಪಡುತ್ತಾಳೆ ಅಥವಾ ಆಲಂಕಾರಿಕವಾಗಿ ನಿಯೋಜಿಸಲ್ಪಡುತ್ತಾಳೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ವರ್ತಮಾನದ ಡಿಜಿಟಲ್ ಯುಗದಲ್ಲೂ, ಧಾರ್ಮಿಕ-ಸಾಂಸ್ಕೃತಿಕ ಚಿಂತನೆಗಳು ಲಿಂಗ ಸೂಕ್ಷ್ಮತೆ-ಸಂವೇದನೆಯನ್ನು ರೂಢಿಸಿಕೊಳ್ಳದಿರುವುದರಿಂದ, ಆಚರಣಾತ್ಮಕ ನೆಲೆಯಲ್ಲಿ ಮಹಿಳೆಯ ಭಾಗವಹಿಸುವಿಕೆಯೇ, ಪುರುಷ ಸಮಾಜದ ಒದಗಿಸಬೇಕಾದ ಒಂದು ಅವಕಾಶವಾಗಿ ಪರಿಣಮಿಸುತ್ತದೆ. 2025ರ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಉದ್ಭವಿಸಿರುವ ಸಂಘರ್ಷ ಮತ್ತು ವಿವಾದವನ್ನು ಈ ದೃಷ್ಟಿಯಿಂದಲೂ ನೋಡಬಹುದಾಗಿದೆ.
ದಸರಾ ವಿವಾದದ ಎರಡು ಮಜಲುಗಳು
ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಹಬ್ಬ, 2025ರ ದಸರಾ ಉತ್ಸವವನ್ನು ಉದ್ಘಾಟಿಸಲು, ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ನಾಯಕರು ಬಲವಾಗಿ ವಿರೋಧಿಸುತ್ತಿರುವುದು ಮೇಲ್ನೋಟಕ್ಕೆ ಆಕೆಯ ಮುಸ್ಲಿಮ್ ಅಸ್ಮಿತೆಯ ಕಾರಣಕ್ಕಾಗಿ ಎನಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ‘ಮಹಿಳೆ’ ಪ್ರಧಾನವಾಗಿ ಕಾಣುತ್ತಾಳೆ. ‘‘ದನ ತಿನ್ನುವ ಹೆಣ್ಣು ದಸರಾ ಉದ್ಘಾಟಿಸುವುದು ಬೇಡ’’, ‘‘ಮುಸ್ಲಿಮ್ ಮಹಿಳೆ ಚಾಮುಂಡಿ ಬೆಟ್ಟ ಹತ್ತಕೂಡದು’’, ‘‘ಬಾನು ಮುಷ್ತಾಕ್ ಕುಂಕುಮ ಬಳೆ ಧರಿಸಿ ಸೀರೆಯುಟ್ಟು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಸಾಧ್ಯವೇ?’’ ಈ ಹೇಳಿಕೆಗಳಲ್ಲಿ ಹೆಣ್ಣು ಎಂಬ ಪದವನ್ನು ವಿಶಾಲಾರ್ಥದಲ್ಲಿ ಕಾಣಬೇಕಿದೆ. ಇಲ್ಲಿ ಬಾನು ಮುಷ್ತಾಕ್ ಎರಡು ರೀತಿಯ ದಾಳಿ ಎದುರಿಸುತ್ತಾರೆ. ಧಾರ್ಮಿಕ ಯಜಮಾನಿಕೆಯು ಧರ್ಮಕೇಂದ್ರಿತ ಅಸ್ಮಿತೆಯನ್ನು ಮುನ್ನೆಲೆಗೆ ತಂದರೆ, ಪುರುಷಾಧಿಪತ್ಯದ ವಾರಸುದಾರಿಕೆಯು ಆಕೆಯ ಲಿಂಗತ್ವ ಅಸ್ಮಿತೆಯನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಅನ್ಯ ಧರ್ಮೀಯರೇ ಆದರೂ ಮುಸ್ಲಿಮ್ ಪುರುಷರ ಮೇಲೆ ಹೇರದ ಷರತ್ತುಗಳನ್ನು, ನಿಬಂಧನೆಗಳನ್ನು, ಮುಸ್ಲಿಮ್ ಮಹಿಳೆಯ ಮೇಲೆ ಹೇರುವುದು ಈ ಅಂಶವನ್ನು ಸಾಬೀತುಪಡಿಸುತ್ತದೆ.
ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣಿನ ಘನತೆ, ಗೌರವ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ನಿರ್ಧರಿಸಲು, ಧಾರ್ಮಿಕ ಸಂಹಿತೆಗಳ ಮೂಲಕ ಹೇರಲ್ಪಡುವ ಆಲಂಕಾರಿಕ ಸಾಧನಗಳನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಹಿಂದೂ ಮಹಿಳೆಯರಲ್ಲೂ ಕುಂಕುಮ-ಬಳೆ ಧರಿಸಿದ್ದರೂ ಸಹ ಪೂಜಾಸ್ಥಳಗಳಿಗೆ, ಧಾರ್ಮಿಕ ಆಚರಣೆಗಳಿಗೆ ಮತ್ತು ಆರಾಧನೆಗಳಿಗೆ ಅವರ ಪ್ರವೇಶವನ್ನು ನಿರ್ಬಂಧಿಸುವ ನಿದರ್ಶನಗಳು ಹೇರಳವಾಗಿವೆ ಅಲ್ಲವೇ? ಮುಟ್ಟಾದ ಹೆಣ್ಣುಮಕ್ಕಳು, ಪತಿಯನ್ನು ಕಳೆದುಕೊಂಡಿರುವ ಮಹಿಳೆಯರು, ಕೆಲವೊಮ್ಮೆ ಮಕ್ಕಳಾಗದಿರುವವರು ಇವರನ್ನೂ ಸಹ ಆಚರಣೆಗಳಿಂದ ದೂರ ಇರಿಸುವ ಪರಂಪರೆ ಸಂಪ್ರದಾಯವಾದಿ ಕುಟುಂಬಗಳಲ್ಲಿರುವುದನ್ನು ಗಮನಿಸಬೇಕಿದೆ. ಈ ಪ್ರಾಚೀನ ನಂಬಿಕೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಮತ್ತು ಇವುಗಳನ್ನು ರಕ್ಷಿಸಲು ಸಂಕಲ್ಪ ಮಾಡಿರುವ ಪುರುಷಾಧಿಪತ್ಯದ ನೆಲೆಗಳೇ ಸಮಾಜದ ಎಲ್ಲವರ್ಗಗಳನ್ನೂ ನಿರ್ದೇಶಿಸುವುದರಿಂದ, ಭಾರತೀಯ ಸಮಾಜ ಡಿಜಿಟಲ್ ಯುಗದಲ್ಲೂ ಪ್ರಾಚೀನ ನಡವಳಿಕೆಗಳ ಸಂಕೋಲೆಗಳಲ್ಲಿ ಬಂಧಿತವಾಗಿದೆ.
ಈ ವರ್ಗದ ಮಹಿಳೆಯರಿಗೆ ‘ಹಿಂದೂ’ ಎಂಬ ಕಾರಣಕ್ಕಾಗಲೀ ಅಥವಾ ‘ಮೇಲ್ಜಾತಿ’ಯ ನೆಪದಲ್ಲಾಗಲೀ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎನ್ನುವುದೂ ಗಮನಿಸಬೇಕಾದ ಅಂಶ. ವಸುಧೈವ ಕುಟುಂಬಕಂ ಎಂಬ ಉದಾತ್ತ ಆದರ್ಶವನ್ನು ಇಂದಿಗೂ ನಮ್ಮದೆಂದು ಹೇಳಿಕೊಳ್ಳುವ ಸಮಾಜದಲ್ಲೇ, ಒಂದು ಕುಟುಂಬದ ನಾಲ್ಕು ಗೋಡೆಗಳ ನಡುವೆಯೇ ಮಹಿಳೆ ಈ ತಾರತಮ್ಯಗಳನ್ನು ಎದುರಿಸುತ್ತಲೇ ಬಂದಿದ್ದಾಳೆ. ಈ ನಿಟ್ಟಿನಲ್ಲಿ ಅನೇಕ ಸಮಾಜ ಸುಧಾರಕರು, ದಾರ್ಶನಿಕರು ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ. ಇದು ಫಲಕಾರಿಯಾಗಿರುವುದೂ ಹೌದು. ಆದರೆ ಈ ಸುಧಾರಣೆಯ ಹೆಜ್ಜೆಗಳು ಭವಿಷ್ಯದ ಹಾದಿಯನ್ನು ಕ್ರಮಿಸುತ್ತಾ ಹೋದಂತೆ, ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ತೆರೆದುಕೊಳ್ಳುವುದು ನಾಗರಿಕತೆಯ ಲಕ್ಷಣವಾಗುತ್ತದೆ. ದುರದೃಷ್ಟವಶಾತ್ ಭಾರತೀಯ ಸಮಾಜದಲ್ಲಿ ಇದು ಸಾಧ್ಯವಾಗಿಲ್ಲ. ಇವುಗಳನ್ನು ಪ್ರಶ್ನಿಸುವುದೇ ಅಪರಾಧ ಎನ್ನುವ ಒಂದು ಮನೋಭಾವವೂ ಸಹ ಆಳವಾಗಿ ಬೇರೂರಿದೆ. ಈ ವಿದ್ಯಮಾನ ಕೇವಲ ಮೇಲ್ಜಾತಿಗಳಿಗೆ ಸೀಮಿತವಾಗಿಲ್ಲ. ತಳಸ್ತರದ ಜಾತಿಗಳಲ್ಲೂ ಸಹ ಚಾಲ್ತಿಯಲ್ಲಿದೆ. ಹಿಂದೂ ಧರ್ಮದ ಹೊರತಾದ ಧರ್ಮಗಳ ಅನುಯಾಯಿಗಳಲ್ಲಿ ಇದೇ ರೀತಿಯ ‘ಹೊರಗಿಡುವಿಕೆಯ’ ಧೋರಣೆ ಭಿನ್ನ ರೂಪಗಳಲ್ಲಿ ಕಂಡುಬರುತ್ತದೆ.
ಧರ್ಮ ಮತ್ತು ಸಂಸ್ಕೃತಿ ಎರಡೂ ಸಂಸ್ಥೆಗಳು, ಜನಸಾಮಾನ್ಯರ ಕೈಗೆಟುಕದ ಹಾಗೆ, ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟುಗಳ ನಿಯಂತ್ರಣಕ್ಕೆ ಒಳಪಟ್ಟಾಗ ಈ ತಾರತಮ್ಯ, ದೌರ್ಜನ್ಯ ಮತ್ತು ಅಸಮಾನತೆಗಳು ವ್ಯವಸ್ಥೆಯ ಒಂದು ಭಾಗವಾಗಿ ಚಾಲ್ತಿಯಲ್ಲಿರುತ್ತದೆ. ಭಾರತ ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿದೆ, ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ಸ್ಥಾಪಿಸುವ ಮಟ್ಟಿಗೆ ವೈಜ್ಞಾನಿಕವಾಗಿ ಮುನ್ನಡೆದಿದೆ. ಈ ಹೆಮ್ಮೆಯೊಂದಿಗೇ, ಸಮಾಜದ ಮತ್ತೊಂದು ಬದಿಯಲ್ಲಿನ ಅಪಸವ್ಯಗಳನ್ನೂ ಗಮನಿಸಿದಾಗ, ನಾಗರಿಕತೆ ಎನ್ನುವುದೇ ಮರುನಿರ್ವಚನೆಗೊಳಪಡಬೇಕಾದ ವಿದ್ಯಮಾನವಾಗಿ ಕಾಣುತ್ತದೆ.
ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೋರಾಟನಿರತವಾಗಿರುವ ಪ್ರಗತಿಪರ ಸಂಘಟನೆಗಳು ಈ ಜವಾಬ್ದಾರಿಯನ್ನು ಹೊರುವುದು ವರ್ತಮಾನದ ತುರ್ತು.