ಹೊರನಾಡು ಸಂಪರ್ಕದ ಹೆಬ್ಬಾಳೆ ಮುಳುಗು ಸೇತುವೆ ಇನ್ನು ನೆನಪು ಮಾತ್ರ

ಚಿಕ್ಕಮಗಳೂರು : ಕಾಫಿನಾಡಿನ ಪ್ರಮುಖ ಯಾತ್ರಾ ಸ್ಥಳವಾಗಿರುವ ಹೊರನಾಡು ಗ್ರಾಮ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರು, ಭಕ್ತರ ನಡುವೆ ಸುಮಾರು 5 ದಶಕಗಳಿಂದ ಸಂಪರ್ಕಕೊಂಡಿಯಾಗಿದ್ದಲ್ಲದೆ ಮುಳುಗು ಸೇತುವೆ ಎಂದು ನಾಡಿನಾದ್ಯಂತ ಖ್ಯಾತಿ ಪಡೆದಿದ್ದ ಹೆಬ್ಬಾಳೆ ಸೇತುವೆ ಇತಿಹಾಸದ ಪುಟ ಸೇರಿದೆ.
ಹೊರನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹೊರನಾಡು ಗ್ರಾಮ ಸಂಪರ್ಕಕ್ಕೆ ಜಿಲ್ಲೆಯ ಕಳಸ ಪಟ್ಟಣ ಮಾರ್ಗವಾಗಿ ಹೆಬ್ಬಾಳೆ ಎಂಬಲ್ಲಿ ಹರಿಯುವ ಭದ್ರಾ ನದಿಯನ್ನು ದಾಟಿ ಹೋಗಬೇಕು. ಭದ್ರಾ ನದಿ ದಾಟಲು ಈ ಹಿಂದೆ ಯಾವುದೇ ಸೇತುವೆ ಸೌಲಭ್ಯ ಇರಲಿಲ್ಲ. ಬೇಸಿಗೆಯಲ್ಲಿ ಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುತ್ತಿದ್ದರಿಂದ ಸ್ಥಳೀಯರು ಮತ್ತು ಭಕ್ತರು ನದಿಗೆ ಇಳಿದು ದಾಟುತ್ತಿದ್ದರು. ಹೊರನಾಡು ತಲುಪಲು ಸಾರ್ವಜನಿಕರು, ಭಕ್ತರು, ಪ್ರವಾಸಿಗರು ಹೆಬ್ಬಾಳೆ ಎಂಬಲ್ಲಿ ನದಿ ದಾಟಲು ಅನುಭವಿಸುತ್ತಿದ್ದ ಪಡಿಪಾಟಲು ಗಮನಿಸಿದ ಸರಕಾರ 1980ರ ದಶಕದಲ್ಲಿ ಸೇತುವೆಯೊಂದನ್ನು ನಿರ್ಮಿಸಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು 5ದಶಕಗಳ ಕಾಲ ಸಾರ್ವಜನಿಕರು ಮತ್ತು ದೂರದ ಪ್ರವಾಸಿಗರು ಈ ಸೇತುವೆ ದಾಟಿ ಹೊರನಾಡು ತಲುಪುತ್ತಿದ್ದರು.
ಹೆಬ್ಬಾಳೆ ಸೇತುವೆಯನ್ನು ಮಳೆಗಾಲದಲ್ಲಿ ನೀರಿನ ಹರಿವು ಇರುವ ಮಟ್ಟಕ್ಕೆ ನಿರ್ಮಿಸಿದ್ದ ಪರಿಣಾಮ ಭಾರೀ ಮಳೆಯಾದ ಸಂದರ್ಭ ಹೆಬ್ಬಾಳೆ ಸೇತುವೆ ಭದ್ರಾ ನದಿಯ ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಪ್ರತೀ ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಸಂದರ್ಭದಲ್ಲೆಲ್ಲ ಹೆಬ್ಬಾಳೆ ಸೇತುವೆ ನದಿಯಲ್ಲಿ ಮುಳುಗಡೆಯಾಗುತ್ತಿದ್ದರಿಂದ ಜನ, ವಾಹನಗಳ ಸಂಚಾರ ಸ್ತಬ್ಧಗೊಳ್ಳುತ್ತಿತ್ತು. ಪ್ರತೀ ಮಳೆಗಾಲದಲ್ಲಿ ಈ ಸೇತುವೆ ಕನಿಷ್ಠ 5-10ಬಾರಿ ಮುಳುಗಡೆಯಾಗುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ‘ಮುಳುಗು ಸೇತುವೆ’ ಎಂದೇ ಖ್ಯಾತಿಯಾಗಿತ್ತು. ಪ್ರತೀ ಮಳೆಗಾಲದಲ್ಲಿ ಈ ಸೇತುವೆ ಪದೇ ಪದೇ ಮುಳುಗಡೆಯಾಗುತ್ತಿದ್ದರಿಂದ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹೆಬ್ಬಾಳೆ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣದ ಬೇಡಿಕೆಯನ್ನು ಸಾರ್ವಜನಿಕರು ಸರಕಾರದ ಮುಂದಿಟ್ಟಿದ್ದರು. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ 15ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಮೂರು ವರ್ಷಗಳ ಹಿಂದೆ ಚಾಲನೆ ನೀಡಿದ್ದು, ಇತ್ತೀಚೆಗೆ ಸೇತುವೆ ಕಾಮಗಾರಿ ಪೂರ್ಣಗೊಂಡಿತ್ತು. ಅಂತಿಮ ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ತಿಂಗಳ ಕಾಲ ಹೆಬ್ಬಾಳೆ ಮುಳುಗು ಸೇತುವೆ ಮೇಲೆ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿತ್ತು.
ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ಗುರುವಾರ ಹೊರನಾಡಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭೇಟಿ ನೀಡಿದ್ದು, ಅಂದು ಹೆಬ್ಬಾಳೆಯಲ್ಲಿ ನಿರ್ಮಿಸಿರುವ ನೂತನ ಸೇತುವೆ ಮೇಲೆ ರಾಜ್ಯಪಾಲರು ಸಂಚರಿಸುವ ಮೂಲಕ ಹೊಸ ಸೇತುವೆಯನ್ನು ಜನ, ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ಮೂಲಕ ಕಳೆದ 5 ದಶಕಗಳಿಂದ ಹೊರನಾಡು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರು, ಭಕ್ತರ ನಡುವೆ ಪ್ರಮುಖ ಸಂಪರ್ಕಕೊಂಡಿಯಾಗಿದ್ದ ಹೆಬ್ಬಾಳೆಯ ಮುಳುಗು ಸೇತುವೆ ನೇಪಥ್ಯಕ್ಕೆ ಸರಿದಿದೆ.
ಸಂಚಾರಕ್ಕೆ ಮುಕ್ತಗೊಂಡ ನೂತನ ಸೇತುವೆ :
ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣ ಹಾಗೂ ಹೊರನಾಡು ಗ್ರಾಮದ ನಡುವೆ ಹರಿಯುವ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಹೆಬ್ಬಾಳೆ ಸೇತುವೆ ಪದೇ ಪದೇ ನದಿ ನೀರಿನಲ್ಲಿ ಮುಳುಗಡೆಯಾಗಿ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಈ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಿಸಿದ್ದು, ನೂತನ ಸೇತುವೆಯನ್ನು ಜನ ಹಾಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, 5 ದಶಕಗಳ ಕಾಲ ನದಿ ದಾಟಲು ಸಂಪರ್ಕಕೊಂಡಿಯಾಗಿ ಸೇವೆ ನೀಡಿದ್ದ ಸೇತುವೆ ಇನ್ನು ನೆನಪು ಮಾತ್ರ.