Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಂಜಲೆಲೆಯಂತೆ ಎಸೆಯಲ್ಪಡುವ ಹಸುಗೂಸುಗಳು!

ಎಂಜಲೆಲೆಯಂತೆ ಎಸೆಯಲ್ಪಡುವ ಹಸುಗೂಸುಗಳು!

ಡಾ. ಡಿ.ಸಿ. ನಂಜುಂಡಡಾ. ಡಿ.ಸಿ. ನಂಜುಂಡ25 July 2025 3:55 PM IST
share
ಎಂಜಲೆಲೆಯಂತೆ ಎಸೆಯಲ್ಪಡುವ ಹಸುಗೂಸುಗಳು!
ಪ್ರತಿಯೊಂದು ಮಗುವೂ ಎಂತಹ ಪರಿಸ್ಥಿತಿಯಲ್ಲಿ ಹುಟ್ಟಿದರೂ ಮಾನವೀಯ ಗೌರವ, ಸುರಕ್ಷತೆ ಮತ್ತು ಬದುಕಲು ಹಕ್ಕು ಹೊಂದಿರುತ್ತದೆ. ಶಿಶು ಬಿಟ್ಟುಹೋಗುವ ಕೃತ್ಯಗಳು ನಿಲ್ಲಬೇಕು. ಇದು ಕೇವಲ ಕಾನೂನು ಕ್ರಮವಲ್ಲ, ಇದು ಅನುಕಂಪಪೂರ್ಣ ವ್ಯವಸ್ಥೆ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ. ಸಂಘರ್ಷ ಸಿದ್ಧಾಂತದ ಪ್ರಕಾರ, ಲಿಂಗ ಅಸಮಾನತೆಗಳು ಮತ್ತು ಆರ್ಥಿಕ ಶೋಷಣೆ ಈ ಸಮಸ್ಯೆಗೆ ಮೂಲ ಕಾರಣಗಳಾಗಿವೆ.

ಕಸದ ತೊಟಿ,್ಟ ರಸ್ತೆ ಪಕ್ಕ, ಬಸ್ ನಿಲ್ದಾಣ, ನಾಲೆ ಅಕ್ಕಪಕ್ಕ ಅಥವಾ ಪುರಸಭೆಯ ಕಸ ಸಂಗ್ರಹ ಕೇಂದ್ರಗಳ ಬಳಿ ಆಗ ತಾನೇ ಜನಿಸಿದ ನವಜಾತ ಶಿಶುಗಳನ್ನು ಬಿಟ್ಟುಹೋಗುವ ಘಟನೆಗಳು ನಮ್ಮ ಕಾಲದ ಅತ್ಯಂತ ಕಂಠಹೀನ ಮತ್ತು ತ್ವರಿತವಾಗಿ ಪರಿಹರಿಸಬೇಕಾದ ಪ್ರಮುಖ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಘಟನೆಗಳು ಕೇವಲ ಒಂದು ನೈತಿಕ ಅವಮಾನವಲ್ಲ, ಇವು ನಮ್ಮ ಸಮಾಜದ ರೋಗಗ್ರಸ್ಥ ಮನಸ್ಸುಗಳು, ಬಡತನ ನಿವಾರಣೆಯ ಕೊರತೆ ಮತ್ತು ಉತ್ತಮ ಆಡಳಿತದ ಕೊರತೆಗಳನ್ನು ಸಹ ತೋರಿಸುತ್ತವೆ. ಇಂತಹ ಶಿಶುಗಳು, ಗುರುತಿಲ್ಲದೆ ಹುಟ್ಟಿ, ಆರೈಕೆಯಿಲ್ಲದೆ ಬಿಟ್ಟುಹೋಗಲು ಅವರ ಕುಟುಂಬದ ಪರಿಸ್ಥಿತಿ ಮಾತ್ರವಲ್ಲದೆ ಸಮಾಜದ ವೈಫಲ್ಯವೂ ಕಾರಣ ಎಂಬುದನ್ನು ಸೂಚಿಸುತ್ತವೆ. ಭಾರತದಲ್ಲಿ ರಸ್ತೆಗಳ ಮೇಲೆ ಮತ್ತು ಕಸದ ಸಂಗ್ರಹಣಾ ಸ್ಥಳಗಳಲ್ಲಿ ಪತ್ತೆಯಾಗುವ ಅನಾಥ ನವಜಾತ ಶಿಶುಗಳಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ 2015-2020ರ ನಡುವಿನ ಅಂಕಿಅಂಶದ ಪ್ರಕಾರ ಭಾರತದಲ್ಲಿ ಒಟ್ಟು 6,459 ಶಿಶುಗಳು ರಸ್ತೆಗಳ ಪಕ್ಕದಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರವು 1,184 ಪ್ರಕರಣಗಳೊಂದಿಗೆ (ಶೇ. 18.3) ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ (1,168), ರಾಜಸ್ಥಾನ (814), ಕರ್ನಾಟಕ (771), ಗುಜರಾತ್ (650) ನಂತರದ ಸ್ಥಾನಗಳನ್ನು ಪಡೆದಿವೆ. ದಿಲ್ಲಿಯಲ್ಲಿ 221 ಪ್ರಕರಣಗಳು ಇವೆ. ಆನಂತರ ಬೆಂಗಳೂರು (156), ಮುಂಬೈ ಮತ್ತು ಅಹ್ಮದಾಬಾದ್ (75), ಇಂದೋರ್ (65) ನಗರಗಳು ಬರುತ್ತವೆ.

ನವಜಾತ ಶಿಶುಗಳನ್ನು ಬಿಟ್ಟುಹೋಗು ವುದು ಸಾಮಾನ್ಯವಾಗಿ ಕ್ರೌರ್ಯ ಎನಿಸಿದರೂ ಇದನ್ನು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಅಂಶಗಳ ಸಂಕೀರ್ಣ ಕ್ರಿಯೆಯಾಗಿ ನೋಡಬೇಕು. ಈ ಅಂಶಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳದೆ ಪರಿಣಾಮಕಾರಿ ಮತ್ತು ಅನುಕಂಪಪೂರ್ಣ ಪ್ರತಿಕ್ರಿಯೆ ರೂಪಿಸಲಾಗದು. ಕಳಂಕ ಮತ್ತು ಬಡತನ ಶಿಶು ಬಿಟ್ಟುಹೋಗುವ ಪ್ರಮುಖ ಕಾರಣವಾಗಿವೆೆ ಎಂದು ಸಂಶೋಧನಾ ವರದಿಗಳು ಹೇಳುತ್ತವೆ. ಭಾರತ ಮತ್ತು ಇತರ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನದಲ್ಲಿ ಬದುಕುತ್ತಿರುವ ಕುಟುಂಬಗಳು ಈಗಿರುವ ಮಕ್ಕಳ ಆಹಾರ, ಬಟ್ಟೆ, ಶಿಕ್ಷಣದ ಭಾರವನ್ನೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಆಕಸ್ಮಿಕವಾಗಿ ಅಥವಾ ವೈವಾಹಿಕ ಸಂಬಂಧದ ಹೊರಗೆ ಹುಟ್ಟುವ ಮಗುವನ್ನು ಸಂಭ್ರಮದಿಂದ ಅಲ್ಲ, ಬದಲಾಗಿ ಜೀವನದ ಭಾರವಾಗಿ ಕಾಣಲಾಗುತ್ತದೆ. ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳನ್ನು ಸಹ ಹೀಗೆ ಬಿಟ್ಟು ಹೋಗುತ್ತಾರೆ. ವಿಶೇಷವಾಗಿ ನಿರ್ಗತಿಕ ಮಹಿಳೆಯರು, ಪರಿತ್ಯಕ್ತ ಮಹಿಳೆಯರು ಅಥವಾ ಅಸಹಾಯಕ ಮಹಿಳೆಯರು ಸಾಮಾಜಿಕ ಭದ್ರತೆ, ಕುಟುಂಬದ ಬೆಂಬಲ ಅಥವಾ ಆದಾಯವಿಲ್ಲದೆ ಇರುತ್ತಾರೆ. ಇವರಿಗೆ ರಹಸ್ಯವಾಗಿ ಹೆರಿಗೆಯಾಗಿ ನಂತರ ತಕ್ಷಣ ಮಕ್ಕಳನ್ನು ಬಿಟ್ಟುಹೋಗಬೇಕಾಗುವಂತಹ ಪರಿಸ್ಥಿತಿಗಳಿರುತ್ತವೆ. ಗರ್ಭಧಾರಣೆಯ ಆಧಾರದ ಮೆಟರ್ನಿಟಿ ಸೌಲಭ್ಯಗಳ ಭದ್ರತೆಯ ಇಲ್ಲದಿರುವಿಕೆ ಈ ಸಮಸ್ಯೆಯನ್ನು ಹೆಚ್ಚು ಗಂಭೀರಗೊಳಿಸುತ್ತದೆ ಎನ್ನುತ್ತವೆ ವೈಜ್ಞಾನಿಕ ವರದಿಗಳು.

ಸಮಾಜ ನಿರ್ಮಿತ ನಿಯಮಗಳಿಗೆ ವಿರೋಧವಾಗಿ ಹುಟ್ಟುವ ಮಕ್ಕಳನ್ನು ಬಿಟ್ಟುಹೋಗುವುದು ಎಲ್ಲಾ ದೇಶಗಳಲ್ಲೂ ಕಂಡುಬರುತ್ತವೆ. ಭಾರತದಲ್ಲಿ ವಿವಾಹ ಚೌಕಟ್ಟಿನ ಹೊರಗೆ ಗರ್ಭಧಾರಣೆ ಹೊಂದಿದ ಮಹಿಳೆಯರು ತೀವ್ರವಾದ ಅಪಮಾನ, ತಿರಸ್ಕಾರ ಮತ್ತು ಬಲಾತ್ಕಾರದ ಭೀತಿಯಲ್ಲಿ ಜೀವಿಸುತ್ತಾರೆ. ಕೆಲವು ಜಾತಿ/ಸಮಾಜಗಳಲ್ಲಿ ವಿವಾಹ ಚೌಕಟ್ಟಿನ ಹೊರಗೆ ಹುಟ್ಟಿದ ಮಗು ಒಂದು ಕುಟುಂಬದ ಮಾನಹಾನಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಈ ಕಳಂಕ, ಸಮಾಜದಿಂದ ತಿರಸ್ಕಾರದ ಭೀತಿಯೊಂದಿಗೆ ಸಂಯೋಜನೆಯಾಗಿ, ಬಹುಪಾಲು ಮಹಿಳೆಯರನ್ನು - ವಿಶೇಷವಾಗಿ ಹದಿಹರೆಯದವರನ್ನು ಅಥವಾ ಲೈಂಗಿಕ ಶೋಷಣೆಯ ಬಲಿಪಶುಗಳನ್ನೂ ಮೌನವಾಗಿ ಹೆರಿಗೆ ನಂತರ ಮಗುವನ್ನು ಬಿಟ್ಟುಹೋಗುವಂತೆ ಪ್ರೇರೇಪಿಸುತ್ತದೆ. ಇದಲ್ಲದೆ, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳನ್ನು ಬಿಟ್ಟುಹೋಗುವ ಪ್ರಮಾಣ ಹೆಚ್ಚು ಎಂಬುದು ಮತ್ತೊಂದು ದುಃಖದ ಅಂಶ. ಇದು ಇನ್ನೂ ನಮ್ಮ ಸಮಾಜದಲ್ಲಿ ಜೀವಂತವಾಗಿರುವ ಗಂಡು ಮಕ್ಕಳ ಮೇಲಿನ ಆದ್ಯತೆಯ ಸ್ಪಷ್ಟ ಲಕ್ಷಣವಾಗಿದೆ.

ಅನೇಕ ಸಂದರ್ಭಗಳಲ್ಲಿ ಶಿಶುಗಳನ್ನು ಬಿಟ್ಟುಹೋಗುವ ಕ್ರಿಯೆಯ ಹಿಂದಿರುವ ಮೂಲ ಕಾರಣ ಅಪ್ರಸ್ತುತ ಅಥವಾ ಬೇಡದೇ ಇರುವ ಗರ್ಭಧಾರಣೆ. ಇದನ್ನು ತಡೆಯುವ ಸಾಧ್ಯತೆ ಇತ್ತು ಎನಿಸಿದರೂ ಸುರಕ್ಷಿತ ಗರ್ಭಪಾತ ಅಥವಾ ಗರ್ಭನಿರೋಧಕ ವ್ಯವಸ್ಥೆಗಳ ಕೊರತೆ ಇದನ್ನು ತಡೆಹಿಡಿಯಲು ವಿಫಲವಾಗುತ್ತಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಪರಿಮಿತ ಆರೋಗ್ಯ ಸೇವೆಗಳು, ಕುಟುಂಬ ಯೋಜನೆಯ ಅರಿವಿನ ಕೊರತೆ, ಮಹಿಳೆಯರ ಆರೈಕೆಗಾಗಿ ಇರುವ ಸಂಸ್ಥೆಗಳ ನಿರ್ಲಕ್ಷ್ಯವು ಸಹ ಹೆರಿಗೆಯ ನಂತರ ಮಗುವನ್ನು ಬಿಟ್ಟುಹೋಗಬೇಕಾದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ತಾಯಂದಿರ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ಮತ್ತೊಂದು ಸೂಕ್ಷ್ಮ, ಆದರೆ ಗಂಭೀರ ಅಂಶ. ಹೆರಿಗೆ ನಂತರದ ದುಗುಡ, ಭಯ ಹಾಗೂ ಅಸಹಾಯಕ ಸ್ಥಿತಿಗಳು ತಾಯಿಯ ತೀರ್ಮಾನದ ಶಕ್ತಿಯನ್ನು ತೀವ್ರವಾಗಿ ಪ್ರಲೋಭನೆಗೆ ಒಳಪಡಿಸಬಹುದು. ಬಡತನ, ಗೃಹ ಹಿಂಸೆ ಅಥವಾ ತಳಮಟ್ಟದ ಬದುಕು ಮಹಿಳೆಯರಲ್ಲಿ ಆಕೆಯ ನಿಧಾರವನ್ನು ಪ್ರಭಾವಿಸಬಹುದು. ಹೆರಿಗೆ ನಂತರ ತಾಯಿ ಮಗುವನ್ನು ಪೋಷಿಸಲು ಅಥವಾ ಸಂಬಂಧ ಬೆಳೆಸಲು ವಿಫಲವಾಗಬಹುದು. ಇದರಿಂದಾಗಿ ಮಗು ಬಿಟ್ಟುಹೋಗುವ ದುರಂತ ಸಂಭವಿಸಬಹುದು ಎನ್ನುತ್ತವೆ ಕೆಲವು ಎನ್‌ಜಿಒಗಳು. ಇದನ್ನು ಆಕೆಯ ಕ್ರೌರ್ಯವೆಂದು ನೋಡದೆ, ಮಾನಸಿಕ ಸಹಾಯವಿಲ್ಲದ ಪರಿಸ್ಥಿತಿಯಲ್ಲಿನ ಹೆಣ್ಣಿನ ತೀವ್ರ ಸಂಕಷ್ಟ ಎಂದು ಅರ್ಥಮಾಡಿಕೊಳ್ಳಬೇಕು.

ಹಿಂದೆ ಜಂಟಿ ಕುಟುಂಬಗಳು ಮಹಿಳೆಯರಿಗೆ ನಿರ್ದಿಷ್ಟ ಭದ್ರತೆಯನ್ನು ನೀಡುತ್ತಿದ್ದವು. ಆದರೆ ನಗರೀಕರಣ, ವಲಸೆ, ಉದ್ಯೋಗ ಮತ್ತು ಕುಟುಂಬದ ತೊಡಕುಗಳು ಈ ವ್ಯವಸ್ಥೆಯನ್ನು ಧ್ವಂಸಮಾಡಿವೆ. ಅನೇಕ ಯುವ ಮಹಿಳೆಯರು ತಮ್ಮ ಸ್ವಂತ ಊರು, ಕುಟುಂಬ ಅಥವಾ ಬೆಂಬಲವಿಲ್ಲದ ಪರಿಸ್ಥಿತಿಯಲ್ಲಿ ಇರಬೇಕಾಗುತ್ತದೆ. ಈ ಕಾರಣಗಳಿಂದ ಉಂಟಾಗುವ ತಾತ್ಕಾಲಿಕ ಸಂಬಂಧಗಳು, ಲೈಂಗಿಕ ಶೋಷಣೆ ಅಥವಾ ಆ ಕ್ಷಣದ ದುರ್ಬಲತೆ ಗರ್ಭಧಾರಣೆಗೆ ಕಾರಣವಾಗಬಹುದು. ಇದೇ ಮಗು ಬಿಟ್ಟುಹೋಗುವಂತಹ ದುಃಖದ ನಿರ್ಧಾರಕ್ಕೆ ದಾರಿಯಾಗುತ್ತದೆ ಎನ್ನಬಹುದು. ಅಧಿಕೃತ ದಾಖಲೆಗಳಿಲ್ಲದಿದ್ದರೂ, ಮಾಧ್ಯಮ ವರದಿಗಳು ಪ್ರತೀ ತಿಂಗಳು ಇಂತಹ ನೂರಾರು ಪ್ರಕರಣಗಳು ನಡೆಯುತ್ತವೆ ಎಂಬುದನ್ನು ಸೂಚಿಸುತ್ತವೆ. ಈ ಶಿಶುಗಳಲ್ಲಿ ಹಲವು ಜೀವ ಕಳೆದುಕೊಳ್ಳುತ್ತವೆ. ಕೆಲವೊಮ್ಮೆ ತಾಯಿಯನ್ನು ಪತ್ತೆಹಚ್ಚಿದರೂ, ತಾಯಿ ಅತ್ಯಂತ ನಿಸ್ಸಹಾಯಕ ಸಮಸ್ಯೆಯಲ್ಲಿ ಮುಳುಗಿಹೋಗಿರುತ್ತಾರೆ. ಇಂತಹ ಶಿಶುಗಳು ಯಾವುದೇ ದಿಕ್ಕುದೆಸೆ ಇಲ್ಲದೆ ಬದುಕುತ್ತವೆ. ಅನೇಕ ಬಾರಿ ಕಾನೂನು ಬೆಂಬಲಿತ ದತ್ತು ಅಥವಾ ಮಾನವ ಕಳ್ಳಸಾಗಣೆಗೂ ಒಳಗಾಗುತ್ತವೆೆ.

ನವಜಾತ ಶಿಶುಗಳನ್ನು ರಸ್ತೆಗಳಲ್ಲೋ, ಕಸದ ಡಬ್ಬಿಗಳಲ್ಲೋ ಬಿಟ್ಟುಹೋಗುವ ಘಟನೆಗಳು ಕೇವಲ ವ್ಯಕ್ತಿಗತ ದೋಷವಲ್ಲ; ಕೌಟುಂಬಿಕ ಹಿಂಸೆ ಮತ್ತು ಮಹಿಳಾ ಹಕ್ಕುಗಳ ನಿರ್ಲಕ್ಷ್ಯದ ಲಕ್ಷಣಗಳಾಗಿವೆ. ಈ ಸಮಸ್ಯೆಯನ್ನು ಕೇವಲ ಅಪರಾಧವನ್ನಾಗಿ ನೋಡದೆ, ಮಾನವೀಯತೆ, ಆರೋಗ್ಯ, ಸಮಾಜಶಾಸ್ತ್ರ ಮತ್ತು ಮಾನವೀಯ ಮೂಲದಿಂದ ಬಗೆಹರಿಸಬೇಕಾಗಿದೆ. ಪ್ರತಿಯೊಂದು ಮಗುವೂ ಎಂತಹ ಪರಿಸ್ಥಿತಿಯಲ್ಲಿ ಹುಟ್ಟಿದರೂ ಮಾನವೀಯ ಗೌರವ, ಸುರಕ್ಷತೆ ಮತ್ತು ಬದುಕಲು ಹಕ್ಕು ಹೊಂದಿರುತ್ತದೆ. ಶಿಶು ಬಿಟ್ಟುಹೋಗುವ ಕೃತ್ಯಗಳು ನಿಲ್ಲಬೇಕು. ಇದು ಕೇವಲ ಕಾನೂನು ಕ್ರಮವಲ್ಲ, ಇದು ಅನುಕಂಪಪೂರ್ಣ ವ್ಯವಸ್ಥೆ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ. ಸಂಘರ್ಷ ಸಿದ್ಧಾಂತದ ಪ್ರಕಾರ, ಲಿಂಗ ಅಸಮಾನತೆಗಳು ಮತ್ತು ಆರ್ಥಿಕ ಶೋಷಣೆ ಈ ಸಮಸ್ಯೆಗೆ ಮೂಲ ಕಾರಣಗಳಾಗಿವೆ. ಬಡ ಮಹಿಳೆಯರು ಮಗುವನ್ನು ತ್ಯಜಿಸುವುದು ಅವರಿಗೆ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಬೆಂಬಲವಿಲ್ಲದ ಪರಿಸ್ಥಿತಿಯಲ್ಲಿಯೇ ಹೆಚ್ಚಾಗಿ ಸಂಭವಿಸುತ್ತದೆ. ಇದು ಒಟ್ಟಾರೆ ಬಡ ಮತ್ತು ಶೋಷಿತ ವರ್ಗಗಳ ಪ್ರತೀ ಸಮಾಜದ ನಿರ್ಲಕ್ಷ್ಯವನ್ನು ತೋರಿಸುತ್ತದೆ.

ಈ ಸಮಸ್ಯೆಯನ್ನು ಲಿಂಗ ಸಮಾನತೆಯ ಅಭಾವ, ಪಿತೃಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯ ದೇಹದ ಮೇಲೆ ಸಮಾಜದ ಒತ್ತಡ ಎಂದು ಸ್ತ್ರೀ ವಾದಿಗಳು ಹೇಳುತ್ತಾರೆ. ಬಲವಂತದ ಗರ್ಭಧಾರಣೆ, ಗಂಡು ಸಂತಾನದ ಅಭಿಲಾಷೆೆ, ಕುಟುಂಬದ ಹೆಮ್ಮೆಯ ಹೆಸರಿನಲ್ಲಿ ಅತೀವ ಒತ್ತಡ ಇತ್ಯಾದಿ ಸಹ ಆಕೆಯ ಕುಟುಂಬವನ್ನು ಈ ಕಠಿಣ ನಿರ್ಧಾರಕ್ಕೆ ದೂಡುತ್ತದೆ. ಇದು ಸಂಸ್ಕೃತಿ ಬೆಂಬಲಿತ ಹಿಂಸಾಚಾರವನ್ನೇ ಪ್ರತಿಬಿಂಬಿಸುತ್ತದೆ. ಮಾನವಶಾಸ್ತ್ರಜ್ಞರು, ಗರ್ಭನಿರೋಧಕ ಕುರಿತಾದ ಸಾಂಪ್ರದಾಯಿಕ ನಂಬಿಕೆ ಸುರಕ್ಷಿತ ಗರ್ಭಪಾತ ಸೇವೆ ಅಲಭ್ಯತೆ ಇವುಗಳು ಸಹ ಬೇಡದಿರುವ ಶಿಶುಗಳ ಜನನಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ. ಈ ತಾರತಮ್ಯದಿಂದ ಅತಿದೊಡ್ಡ ಹಾನಿ ಆಗುವುದು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಮಹಿಳೆಯರಿಗೆ.

ಸಮಾಜಶಾಸ್ತ್ರವು ಮಹಿಳೆಯ ದೇಹವನ್ನು ಒಂದು ಸಾಂಸ್ಕೃತಿಕ ನಿಯಂತ್ರಣದ ಸ್ಥಳವಾಗಿ ಪರಿಗಣಿಸುತ್ತದೆ. ಮಹಿಳೆಯ ಲೈಂಗಿಕತೆ, ಶುದ್ಧತೆ, ಕೌಟುಂಬಿಕ ಗೌರವ ಮತ್ತು ವಂಶವೃಕ್ಷದ ಬಗ್ಗೆ ಸಮಾಜದಲ್ಲಿ ಇರುವ ಆತಂಕಗಳು ಗರ್ಭಪಾತ ಅಥವಾ ಮಗುವು ತ್ಯಜಿಸುವಿಕೆಗೆೆ ದಾರಿ ಮಾಡುತ್ತವೆ. ಇಂತಹ ಸಾಂಸ್ಕೃತಿಕ ಸಂಕೋಚಗಳು ಮಹಿಳೆಯರನ್ನು ತಮ್ಮ ಗರ್ಭವನ್ನು ಗುಪ್ತವಾಗಿ ಇರಿಸಿಕೊಂಡು, ನಂತರ ಮಗು ತ್ಯಜಿಸಲು ಪ್ರೇರೇಪಿಸುತ್ತವೆ ಎನ್ನಲಾಗಿದೆ. ಸಮಾಜದಲ್ಲಿ ಹೇರುವ ಕಳಂಕ ಮಹಿಳೆಯರಿಗೆ ತಮ್ಮ ಮಕ್ಕಳನ್ನು ಅಂಗೀಕರಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇಂತಹ ಸಂದರ್ಭದಲ್ಲಿ ಈ ಮಕ್ಕಳನ್ನು ಸಮಾಜ ಅನಧಿಕೃತ ಗರ್ಭವೆಂದು ಗುರುತಿಸುತ್ತದೆ. ಇದರಿಂದಾಗಿ ತಾತ್ಕಾಲಿಕ ನಿರ್ಧಾರವಾಗಿ ಮಗು ತ್ಯಜಿಸುವ ಸ್ಥಿತಿ ಮಹಿಳೆಗೆ ನಿರ್ಮಾಣವಾಗುತ್ತದೆ ಎನ್ನಬಹುದು.

ಭಾರತದಲ್ಲಿ ಜುವೆನೈಲ್ ಜಸ್ಟೀಸ್ ಕಾಯ್ದೆ-2015 ಅಸ್ತಿತ್ವದಲ್ಲಿದ್ದರೂ, ಮತ್ತು ಕೆಲವೆಡೆ ತೊಟ್ಟಿಲು ಮಗು ಯೋಜನೆ ಇದ್ದರೂ ಕೂಡ, ಈ ಯೋಜನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾಕಷ್ಟು ಮಹಿಳೆಯರು ಈ ಬಗ್ಗೆ ಮಾಹಿತಿ ಹೊಂದಿಲ್ಲ. ಆಸ್ಪತ್ರೆಗಳು ಶಿಶುವಿನ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಆಶಾ ಕಾರ್ಯಕತೆರ್ಯರು, ಪೌರಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮುಂತಾದವರಿಗೆ ಈ ಪರಿಸ್ಥಿತಿಗಳನ್ನು ಹೇಗೆ ನಿರ್ವಹಣೆ ಮಾಡಬೇಕೆಂದು ತಿಳಿದಿಲ್ಲ. ಅಂತಿಮವಾಗಿ ಶಿಶುಗಳ ತ್ಯಜಿಸುವಿಕೆಗಳು ಕೇವಲ ವೈಯಕ್ತಿಕ ಅಥವಾ ನೈತಿಕ ತಪ್ಪುಗಳೆಂಬುದಲ್ಲ. ಬದಲಾಗಿ ಇದಕ್ಕೆ ಸರಿಯಾದ ವ್ಯವಸ್ಥೆ ಜಾರಿಯಾಗಬೇಕು. ಗರ್ಭನಿರೋಧಕಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಇವುಗಳ ಲಭ್ಯತೆ ಸುಲಭವಾಗಬೇಕು. ಜಿಲ್ಲೆಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ ವ್ಯಾಪ್ತಿಗಳಲ್ಲಿ ಇಂತಹ ಶಿಶುಗಳ ಆರೈಕೆಗೆ ಸುರಕ್ಷಿತ ಕ್ಷೇತ್ರಗಳು ಸ್ಥಾಪನೆ ಅಗತ್ಯ. ಆಶಾ, ಅಂಗನವಾಡಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಸೆಲೆಬ್ರಿಟಿಗಳ ಮೂಲಕ ತಾಯಂದಿರ ಸುರಕ್ಷಿತ ಆಯ್ಕೆಗಳು ಮತ್ತು ದತ್ತು ಕೇಂದ್ರಗಳ ಕುರಿತು ತಿಳುವಳಿಕೆ ಅಗತ್ಯ. ಸುರಕ್ಷಿತ ಗರ್ಭಪಾತ, ಆರೋಗ್ಯ ಸೇವೆ ಮತ್ತು ಲೈಂಗಿಕ ಶಿಕ್ಷಣದ ಜಾರಿ ಮುಖ್ಯ. ಹೆರಿಗೆ ನಂತರದ ಮಾನಸಿಕ ಸ್ಥಿತಿಗಳ ತಪಾಸಣೆ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಬೇಕು. ಸಹಾಯವಾಣಿ, ಸ್ಥಳೀಯ ಆಸ್ಪತ್ರೆ ಹಾಗೂ ಪೊಲೀಸರು ಸಂವೇದನಾಶೀಲವಾಗಿ ಸ್ಪಂದಿಸಬೇಕು. ನೈತಿಕ ದತ್ತು ಕ್ರಮಗಳ ಭದ್ರತೆ ಇಂದು ತೀರಾ ಅಗತ್ಯ.

share
ಡಾ. ಡಿ.ಸಿ. ನಂಜುಂಡ
ಡಾ. ಡಿ.ಸಿ. ನಂಜುಂಡ
Next Story
X