ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ: ವಾಹನ ಸವಾರರ ಪರದಾಟ

ಯಾದಗಿರಿ: ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು, ಇದರಿಂದ ವಾಹನ ಸವಾರರು ದಿನನಿತ್ಯ ಪರದಾಡುವಂತಾಗಿದೆ.
ಗ್ರಾಮೀಣ ಭಾಗದಿಂದ ನಗರಕ್ಕೆ ವ್ಯಾಪಾರ-ವಹಿವಾಟಿಗಾಗಿ ನಿತ್ಯ ನೂರಾರು ಜನರು ಬರುತ್ತಿದ್ದು, ನಗರದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಡಾಡಿ ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಈ ಕುರಿತು ಎಚ್ಚರ ವಹಿಸಬೇಕಾದ ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು ಬಿಡಾಡಿ ದನಗಳನ್ನು ನಿಯಂತ್ರಿಸುವವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದ ಗಾಂಧಿ ಚೌಕ್, ಕನಕ ನಗರ, ಡಾ.ಅಂಬೇಡ್ಕರ್ ಚೌಕ್, ಡಿಗ್ರಿ ಕಾಲೇಜು, ರೈಲ್ವೆ ಸ್ಟೇಷನ್ ಏರಿಯಾ, ಸೇರಿದಂತೆ ಎಲ್ಲೆಂದರಲ್ಲಿ ಹಿಂಡುಗಟ್ಟಲೇ ಬಿಡಾಡಿ ದನಗಳು ಕಾಣುತ್ತಿದ್ದು, ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಕೂಡ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಈ ಬಿಡಾಡಿ ದನಗಳು ಗುದ್ದಾಡುತ್ತಾ ರಸ್ತೆಯಲ್ಲಿ ಓಡಾಡಿದರೆ ಇನ್ನೊಂದು ಕಡೆ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿಕೊಂಡಿರುತ್ತವೆ. ಹೀಗಾಗಿ ವಾಹನ ಸವಾರರಿಗೆ ಪ್ರಾಣಭಯ ಕಾಡುತ್ತಿದೆ. ಈಗಲಾದರೂ ಪೊಲೀಸ್ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿಡಾಡಿ ದನಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಿ ದನಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ.
ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ ಮತ್ತು ಅಪಘಾತಗಳು ಹೆಚ್ಚಾಗುತ್ತಿವೆ. ಕೂಡಲೇ ರಸ್ತೆಗೆ ಬಿಡುತ್ತಿದ್ದ ಮಾಲಕರಿಗೆ ಇನ್ನೊಂದು ಸಾರಿ ರಸ್ತೆಗಳಿಗೆ ಬಿಡದಂತೆ ನಗರಸಭೆಯಿಂದ ನೋಟಿಸ್ ನೀಡಬೇಕು. ಸಾರ್ವಜನಿಕ ತೊಂದರೆಯಾಗುವುದನ್ನು ನಿಲ್ಲಿಸಿ.
-ಚಂದಪ್ಪ ಮುನಿಯಪ್ಪ, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ
ರಾತ್ರಿ ಭಯದಿಂದ ವಾಹನ ಚಾಲನೆ
ಬಿಡಾಡಿ ದನಗಳಿಂದಾಗಿ ವಾಹನ ಸವಾರರು ರಾತ್ರಿ ವೇಳೆ ಭಯದಿಂದಲೇ ವಾಹನ ಚಲಾಯಿಸುತ್ತಾರೆ. ಅದರಲ್ಲೂ ಬೀದಿ ದೀಪದ ಸಮಸ್ಯೆಯಿರುವ ರಸ್ತೆಗಳಲ್ಲಿ ಅಪಘಾತದ ಹೆಚ್ಚಾಗುತ್ತಿದೆ. ಕೆಲವೊಮ್ಮೆ ರಸ್ತೆ ಮಧ್ಯವೇ ದನಗಳು ನಿದ್ರಿಸುತ್ತಿರುತ್ತವೆ. ಇದರಿಂದ ದನಗಳು ಗುಂಪು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ.
ದನಗಳ ಮಾಲಕರಿಗೆ ಹಲವು ಬಾರಿ ಹೇಳಿದ್ದರೂ ರಸ್ತೆಗೆ ಬಿಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಕೂಡ ತೊಂದರೆಯಾಗುತ್ತಿದೆ ಎನ್ನುವುದು ನಮಗೂ ಮಾಹಿತಿ ಇದೆ. ಈ ಸಂಬಂಧ ನಾವು ಬಹಳ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.
-ಉಮೇಶ ಚವ್ಹಾಣ್, ನಗರಸಭೆ ಆಯುಕ್ತ
ಬಿಡಾಡಿ ದನಗಳ ಹಾವಳಿಯಿಂದ ನಾನು ಕೂಡ ದ್ವಿಚಕ್ರ ವಾಹನದಲ್ಲಿ ಬಿದ್ದು ಗಾಯಗೊಂಡಿದ್ದೇನೆ. ನನ್ನಂತೆ ಸಾಕಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ಬಿಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು
-ಚಂದ್ರುಕುಮಾರ ಛಲವಾದಿ, ಯಾದಗಿರಿ ನಿವಾಸಿ