ಯುನೆಸ್ಕೊ ಸೇರುವ ಸಾಲಿನಲ್ಲಿ ಶಿಲಾಯುಗದ ಮೋರೇರ ಗೋರಿಗಳು

ಕೊಪ್ಪಳ: ನಗರದಿಂದ 40 ಕಿ.ಮೀ. ದೂರದಲ್ಲಿರುವ ಹಿರೇಬೆಣಕಲ್ ಗ್ರಾಮದ ಕಡಿದಾದ ಗುಡ್ಡದಲ್ಲಿರುವ ಶಿಲಾಯುಗದ ಜನರು ನಿರ್ಮಿಸಿದ ಮೋರೇರ ಗೋರಿಗಳು ಭಾರತದಲ್ಲಿನ ಅಪರೂಪದ ಸ್ಥಳಗಳಲ್ಲಿ ಇದೂ ಒಂದಾಗಿದೆ.
ನಾವು ಇಂದು ನೋಡುವ ಸ್ಮಾರಕಗಳು 1,000 ದಿಂದ 1,500 ವರ್ಷಗಳ ಹಿಂದಿನವು. ಕ್ರಿಸ್ತ ಪೂರ್ವ 2,000-ದಿಂದ 3,000ದಲ್ಲಿ ನಿರ್ಮಾಣ ಮಾಡಲಾದ ಈ ಮೋರೇರ ಗೋರಿಗಳು ಭಾರತದ ಮೇಘಾಲಯವನ್ನು ಹೊರತುಪಡಿಸಿದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೋರೇರ ಗೋರಿಗಳು ಇರುವುದು ಕೊಪ್ಪಳದ ಹಿರೇಬೆಣಕಲ್‌ನಲ್ಲಿ. ಈ ಸ್ಥಳವನ್ನು ವಿಶ್ವಪಾರಂಪರಿಕ ತಾಣದಲ್ಲಿ ಸೇರಿಸಲು ನಿರ್ಧಾರ ಮಾಡಿದ್ದು ಈ ಭಾಗದ ಜನರಲ್ಲಿ ಸಂತಸವನ್ನು ಮೂಡಿಸಿದೆ.
ಸದ್ಯ 28 ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸಲಾಗಿದ್ದು, ಈ ಸ್ಮಾರಕಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಲು ಬೆಂಗಳೂರಿನ ಇನ್‌ಟ್ಯಾಕ್ಟ್ ಎನ್‌ಜಿಒಗೆ ನೀಡಲಾಗಿದ್ದು, ಈ ಸಂಸ್ಥೆಯು ಈ ಹಿಂದೆ ಬೇಲೂರು ಮತ್ತು ಹಳೆಬೀಡು ಪ್ರದೇಶದಲ್ಲಿ ಉತ್ಖನನ ನಡೆಸಿ ಯುನೆಸ್ಕೊ ಪಟ್ಟಿಗೆ ಸೇರಿಸಲು ವರದಿಯನ್ನು ಸಿದ್ಧಪಡಿಸಿತ್ತು ಮತ್ತು ಈ ಪ್ರದೇಶಗಳು 2023ರಲ್ಲಿ ಯುನೆಸ್ಕೊ ಪಟ್ಟಿಗೆ ಸೇರಿತ್ತು.
ಸದ್ಯ ಜನರಲ್ಲಿ ಮೋರೇರ ಗೋರಿಗಳ ಕುರಿತು ಗೊಂದಲಗಳಿದ್ದು, ಕೆಲವರು ಇದನ್ನು ಗೋರಿಗಳಲ್ಲ ಇವು ಅವರ ಮನೆಗಳು ಎಂದು ಹೇಳುತ್ತಾರೆ. ಇನ್ನು ಕೆಲವರು ಇದು ಮೋರೇರ ಗೋರಿಗಳು ಎನ್ನುತ್ತಾರೆ. ಈ ಬಗೆಗಿನ ಗೊಂದಲ ಉತ್ಖನನದ ನಂತರ ನಿವಾರಣೆಯಾಗುವ ಸಾಧ್ಯತೆಗಳಿವೆ.
ಸಮಾಧಿಗಳಿಂದ ಸ್ವಲ್ಪ ದೂರದಲ್ಲಿರುವ ಕೆರೆ ಮತ್ತು ಗವಿಗಳ್ಳಿ ಅಂದಿನ ಜನರಿಂದ ಚಿತ್ರಿಸಲಾದ ಚಿತ್ರಗಳು ಇಲ್ಲಿ ಜನರು ವಾಸಿಸುತ್ತಿದ್ದರು ಎಂದು ಹೇಳುತ್ತವೆ. ಗುಹೆಗಳಲ್ಲಿ ಆ ಕಾಲದ ಜನರು ಮಹಿಳೆಯ ಪ್ರಸವದ ಚಿತ್ರ ಬಿಡಿಸಿದ್ದು ಇದು ನಿಜಕ್ಕೂ ಅದ್ಭುತವಾಗಿದೆ.
ಹಿನ್ನೆಲೆ: ಸುಮಾರು 200ಕ್ಕೂ ಹೆಚ್ಚು ಇಂತಹ ಶಿಲೆಗಳಿದ್ದು, ಇವುಗಳನ್ನು ಯಾವುದೇ ಗಾರೆಯ ಸಹಾಯದಿಂದ ನಿರ್ಮಿಸಲಾಗಲಿಲ್ಲ, ಸ್ಥಳೀಯರು ಈ ಪ್ರದೇಶವನ್ನು ಏಳು ಬೆಟ್ಟಗಳು ಅಥವಾ ಮೋರೇರ ಮನೆಗಳು ಎಂದು ಕರೆಯತ್ತಾರೆ. ಈ ಪ್ರದೇಶವನ್ನು ಆಕಾಲಕ್ಕೆ ಆಳುತ್ತಿದ್ದ ಹೈದರಾಬಾದ್‌ನ ನಿಜಾಮನ ಆಡಳಿತದಲ್ಲಿದ್ದ ಫಿಲಿಪ್ ಮೆಡೋಸ್ ಟೇಲರ್ ಎಂಬ ಅಧಿಕಾರಿ ಕಂಡು ಹಿಡಿದಿದ್ದ ಮತ್ತು ಇದರ ಕುರಿತು 1835ರಲ್ಲಿ ‘ಜರ್ನಲ್ ಆಫ್ ದಿ ರಾಯಲ್ ಏಷಿಯಾಟಿಕ್ ಸೊಸೈಟಿ’ ಎಂಬ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು ಎಂದು ಹೇಳಲಾಗುತ್ತದೆ.
ಈ ಸ್ಥಳದಲ್ಲಿ ಸುಮಾರು 80 ಶಿಲಾ ಕೋಣೆಗಳಿದ್ದು ಇದರಲ್ಲಿ ಇದರಲ್ಲಿ ಅಗಲಿದವರ ದೇಹದ ಮೂಳೆಗಳನ್ನು ಒಂದು ಮಡಿಕೆಯಲ್ಲಿ ಹಾಕಿ ಹೂತಿರುವುದನ್ನು ಕಾಣಬಹುದು. ಈ ಶಿಲಾ ಕೋಣೆಗಳಲ್ಲಿ ಒಂದು ಸಣ್ಣದಾದ ರಂದ್ರವಿದ್ದು ಅದರಿಂದ ಅವರಿಗೆ ನೈವೇದ್ಯವನ್ನು ಹಾಕಲಾಗುತ್ತಿತ್ತು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ ಮತ್ತು ಈ ವ್ಯವಸ್ಥೆಯು ಆ ಕಾಲದಲ್ಲಿ ಇದ್ದ ಜನರ ಪುರ್ನಜನ್ಮದ ನಂಬಿಕೆಯನ್ನು ತೋರುತ್ತದೆ. ಕೆಲ ಸಮಾಧಿಗಳ ಮುಂದೆ ಒಂದು ಮೂರ್ತಿ ಇದ್ದು, ಅದರ ತಲೆ ಮುರಿದು ಬಿದ್ದಿದ್ದು ಬೇರೆ ಕಡೆ ಇರುವ ಮೂರ್ತಿಗಳಿಗೆ ಹೋಲಿಸಿದರೆ ಇದು
ಉತ್ತಮ ಸ್ಥಿತಿಯಲ್ಲಿದೆ. ಇನ್ನು ಭಾರತದ ಬೇರೆ ಕಡೆ ಇರುವ ಈ ಇಂತಹ ಸ್ಥಳಗಳಿಗೂ ಈ ಸ್ಥಳಗಳಿಗೂ ಒಂದು ವಿಶೇಷವಿದ್ದು ಅದು ಇಲ್ಲಿನ ಗವಿಚಿತ್ರಗಳು, ಇಲ್ಲಿರುವ ಚಿತ್ರಗಳಗಾತ್ರ ಬೇರೆ ಕಡೆ ಕಾಣಲು ಸಿಗುವುದಿಲ್ಲ.
ಅಪರೂಪದ ಗವಿ ಚಿತ್ರಗಳು
ಈ ಮೋರೇರ ಗೋರಿಗಳಿರುವ ಗುಡ್ಡದಲ್ಲಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಿದ್ದು, ಅವುಗಳಲ್ಲಿ 2 ಮತ್ತು 17ನೇ ಗವಿಯಲ್ಲಿರುವ ಚಿತ್ರಗಳು ಸೊಗಸಾಗಿವೆ. ಇದರಲ್ಲಿ ಒಂದು ಚಿತ್ರ ಹೆಬ್ಬಾವಿನದಾಗಿದ್ದು ಇದರಲ್ಲಿ ಹಾವಿನ ನಾಲಿಗೆ, ಕಣ್ಣುಗಳು ಕಾಣುವ ದೃಶ್ಯಗಳಿವೆ. ಇದರಲ್ಲಿ ಮನುಷ್ಯನ ಚಿತ್ರ, ಹಂದಿಯ ಮುಖ, ಎತ್ತುಗಳು ಮತ್ತು ಸ್ತ್ರೀ-ಪುರುಷರ ರೇಖಾಚಿತ್ರವನ್ನು ಕಾಣಬಹುದು. ವಿಶೇಷವಾಗಿ ಗರ್ಭಿಣಿಯ ಪ್ರಸವದ ಅಪರೂಪದ ಚಿತ್ರಗಳಿದ್ದು, ಇದರಲ್ಲಿ ಪ್ರಸವದ ಎರಡು ಹಂತಗಳನ್ನು ಕಾಣಬಬಹುದು. ಪ್ರಸವದ ಸಂದರ್ಭದಲ್ಲಿ ಹೊಟ್ಟೆಯಲ್ಲಿರುವ ಶಿಶುವಿನ ತಲೆ ಕೆಳಗಾಗಿ ಬಂದಿರುವುದು ಮತ್ತು ಪ್ರಸವದ ನಂತರ ಶಿಶು ಹೊರ ಬಂದಿರುವುದನ್ನು ಬಿಂಬಿಸುವ ಅಪರೂಪದ ಚಿತ್ರಗಳನ್ನು ಕಾಣಬಹುದು.