ಸರ್ಕಾರದ ಒಳಮೀಸಲಾತಿ ಸೂತ್ರ: ಸಾಮಾಜಿಕ ಅನ್ಯಾಯ ಮತ್ತು ಸುಪ್ರೀಂ ನಿರ್ದೇಶನದ ಉಲ್ಲಂಘನೆ

ಸಿಎಂ ಸಿದ್ದರಾಮಯ್ಯ
ಪತ್ರಿಕೆಗಳ ಪ್ರಕಾರ ನಿನ್ನೆ ಸಿದ್ದು ಸರ್ಕಾರ ನಾಗಮೋಹನ್ ದಾಸ್ ವರದಿಯಲ್ಲಿ ಅತ್ಯಂತ ಹಿಂದುಳಿದ ಜಾತಿಗಳೆಂದು ಪರಿಗಣಿಸಲ್ಪಟ್ಟಿದ್ದ 59 ಜಾತಿಗಳನ್ನು ಪರಿಶಿಷ್ಟರೊಳಗೆ ಉಳಿದ ಜಾತಿಗಳಿಗಿಂತ ಹೋಲಿಕೆಯಲ್ಲಿ ಹೆಚ್ಚು ಮುಂದುವರೆದಿರುವ ಸ್ಪೃಶ್ಯ ಜಾತಿಗಳ ಗುಂಪಿನಲ್ಲಿ ವಿಲೀನ ಮಾಡಿದೆ ಹಾಗೂ ನಾಗಮೋಹನ್ ದಾಸ್ ಶಿಫಾರಸ್ಸು ಮಾಡಿದ್ದ 1:6:5:4:1ಸೂತ್ರಕ್ಕೆ ಬದಲಾಗಿ 6:6:5 ಸೂತ್ರವನ್ನು ಒಪ್ಪಿಕೊಂಡಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಇನ್ನೂ ಅಧಿಕೃತವಾಗಿ ಸದನದಲ್ಲಿ ಪ್ರಕಟಿಸಬೇಕಿದೆ.
ಪರಿಶಿಷ್ಟರಲ್ಲೇ ಅತ್ಯಂತ ಹಿಂದುಳಿದ ಮತ್ತು ಆ ಕಾರಣಕ್ಕಾಗಿಯೇ ನಾಗಮೋಹನ್ ದಾಸ್ ವರದಿಯಲ್ಲಿ ಗ್ರೂಪ್ A ಯಲ್ಲಿ ಸೇರಿಸಲ್ಪಟ್ಟಿದ್ದ ಅಲೆಮಾರಿ ಸಮುದಾಯಗಳ ದೃಷ್ಟಿಯಿಂದ ನೋಡಿದರೆ ಸರ್ಕಾರದ ಈ ಸೂತ್ರ ಸಾಮಾಜಿಕ ನ್ಯಾಯದ ಎಲ್ಲಾ ಮಾನದಂಡಗಳ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂ ಮಾರ್ಗದರ್ಶನದ ಉಲ್ಲಂಘನೆಯೂ ಆಗಿದೆ.
ಅದಕ್ಕೆ ಕಾರಣಗಳಿವು:
1. ಸಾಮಾಜಿಕ ನ್ಯಾಯದಡಿಯಲ್ಲಿ ಮೀಸಲಾತಿ ಸೌಲಭ್ಯಕ್ಕೆ ವರ್ಗೀಕರಣ ಮಾಡುವಾಗ "ಅಸಮಾನರನ್ನು ಸಮಾನರೆಂದು" ಪರಿಗಣಿಸಬಾರದು ಹಾಗೂ ಅಸಮಾನ ಹಿಂದುಳಿದಿರುವಿಕೆಯನ್ನು ಹೊಂದಿರುವ ಜಾತಿಗಳನ್ನು ಒಂದೇ ಗುಂಪಿಗೆ ವರ್ಗೀಕರಣ ಮಾಡಬಾರದು. ಅದರ ಜೊತೆಗೆ ಸಮಾನ ಹಿಂದುಳಿದಿರುವಿಕೆಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವರ್ಗೀಕರಣವಾದ ಗುಂಪಿನಲ್ಲಿ ಸೇರಿಸಲ್ಪಟ್ಟ ಜಾತಿಗಳು ಸಾಮಾಜಿಕ ಹಿಂದುಳಿದಿರುವಿಕೆಯ ದೃಷ್ಟಿಯಲ್ಲಿ ಅತಿ ಹೆಚ್ಚಿನ ಏಕರೂಪತೆಯನ್ನು ಹೊಂದಿರಬೇಕು.
2. ಒಳಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟು ನೀಡಿದ ಆದೇಶದಲ್ಲೂ ಹೀಗೆ ಹೇಳಿದೆ:
"... The Court while testing the validity of sub-classification must determine if the class is a homogenous integrated class for fulfilling the objective of the sub-classification. If the class is not integrated for the purpose, the class can be further classified upon the
fulfillment of the two-prong intelligible differentia standard;" (ಪುಟ 138, ಪ್ಯಾರಾ 205 (a))
ಎಂದರೆ ಸರ್ಕಾರಗಳು ಮಾಡುವ ಒಳವರ್ಗೀಕರಣ ಸೂತ್ರಗಳು ಮಾನ್ಯತೆಯನ್ನು ಪರಿಶೀಲಿಸುವಾಗ ಕೋರ್ಟುಗಳು ಆ ವರ್ಗೀಕರಣ ಹೋಲಿಕೆಯಲ್ಲಿ ಏಕರೂಪ ವರ್ಗವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಮತ್ತು ವರ್ಗೀಕರಣಗೊಂಡ ಗುಂಪಿನಲ್ಲಿ ಏಕರೂಪತೆ ಇಲ್ಲದಿದ್ದರೆ ಅದನ್ನು ಮತ್ತಷ್ಟು ಉಪವರ್ಗೀಕರಿಸಬೇಕು.
3. ಈ ಹಿನ್ನೆಲೆಯಲ್ಲಿ ಪರಿಶಿಷ್ಟರಲ್ಲಿನ ಅತ್ಯಂತ ಹಿಂದುಳಿದ 59 ಜಾತಿಗಳನ್ನು ಪರಿಶಿಷ್ಟರೊಳಗೆ ಹೋಲಿಕೆಯಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆದಿರುವ ಮತ್ತು ಆ ಕಾರಣಕ್ಕಾಗಿ ಉಳಿದ ಗುಂಪುಗಳಿಗಿಂತ ಹೋಲಿಕೆಯಲ್ಲಿ ಹೆಚ್ಚು ಮುಂದುವರೆದಿರುವ ಸ್ಪೃಶ್ಯ ಜಾತಿಗಳ ಜೊತೆಗೆ ಸೇರಿಸಿರುವುದು ಸುಪ್ರೀಂ ಮಾನದಂಡದ ಉಲ್ಲಂಘನೆಯಾಗುತ್ತದೆ.
ಉದಾಹರಣೆಗೆ ನ್ಯಾ. ನಾಗ್ ಮೋಹನ್ ದಾಸ್ ಆಯೋಗವು ಗ್ರೂಪ್ A ನಲ್ಲಿ ವರ್ಗೀಕರಿಸಿದ ಈ 59 ಜಾತಿಗಳ ಶೈಕ್ಷಣಿಕ, ಪ್ರಾತಿನಿಧ್ಯಗಳ ಪರಿಸ್ಥಿತಿಯನ್ನು ಗ್ರೂಪ್ D ಎಂದು ವರ್ಗೀಕರಿಸಲ್ಪಟ್ಟಿದ್ದ ಸಾಪೇಕ್ಷವಾಗಿ ಹೆಚ್ಚು ಮುಂದುವರೆದ ಸ್ಪೃಶ್ಯ ಜಾತಿಗಳ ಪರಿಸ್ಥಿತಿಯೊಡನೆ ಹೋಲಿಸಿ ನೋಡೋಣ:
ಗ್ರೂಪ್ A ಗ್ರೂಪ್ D (ಆಯಾ ಜನಸಂಖ್ಯೆಯ ಶೇಕಡಾವಾರು )
ಪಿಯುಸಿ ತೇರ್ಗಡೆ 6.64 9.12
ಪದವಿ ಪಡೆದವರು 3.66 5.07
ಇಂಜನಿಯರಿಂಗ್ 0.93 1.23
ವಸತಿ ಶಾಲೆ 0.50 0.84
ವಿದ್ಯಾರ್ಥಿನಿಲಯ 0.19 0,28
ವಿದ್ಯಾರ್ಥಿ ವೇತನ 15.26 20.09
ಸರ್ಕಾರಿ ಉದ್ಯೋಗ 0,86 1.29
(ನ್ಯಾ. ನಾಗ್ ಮೋಹನ್ ದಾಸ್ ವರದಿ, ಪು. 324)
ಮೇಲಿನ ಕೋಷ್ಟಕ ಸ್ಪಷ್ಟಪಡಿಸುವಂತೆ ಗ್ರೂಪ್ A ನಲ್ಲಿದ್ದ 59 ಜಾತಿಗಳೂ ಪರಿಶಿಷ್ಟರಲ್ಲೇ ಎಲ್ಲಾ ಮಾನದಂಡಗಳಲ್ಲೂ ಅತ್ಯಂತ ಹಿಂದುಳಿದವರು. ಗ್ರೂಪ್ ಡಿ ಯಲ್ಲಿ ವರ್ಗೀಕರಿಸಲಾದ ಗುಂಪು ಪರಿಶಿಷ್ಟರಲ್ಲೇ ಎಲ್ಲ ಮಾನದಂಡಗಳಲ್ಲೂ ಮುಂದಿರುವರು.
ಹೀಗಾಗಿ ಅವೆರೆಡನ್ನು ಒಂದಾಗಿ ವರ್ಗೀಕರಿಸಿರುವ ಸರ್ಕಾರಿ ಸೂತ್ರ ಸುಪ್ರೀಂ ನಿರ್ದೇಶನಕ್ಕೆ ವಿರುದ್ಧವಾಗಿ "ಅಸಮಾನರನ್ನು ಸಮಾನವಾಗಿ" ಕಾಣುತ್ತದೆ ಮತ್ತು ಹೊಸದಾಗಿ ರೂಪಿಸಲಾಗ ವರ್ಗದಲ್ಲಿ ಏಕರೂಪತೆಯೂ ಇಲ್ಲ. ಇವೆರಡೂ ಸುಪ್ರೀಂ ನಿರ್ದೇಶನದ ಮತ್ತು ಸಾಮಾಜಿಕ ನ್ಯಾಯ ಮಾನದಂಡದ ಉಲ್ಲಂಘನೆಯೇ ಆಗಿದೆ.
ಸರ್ಕಾರ ಅತ್ಯಂತ ಹಿಂದುಳಿದ 59 ಜಾತಿಗಳನ್ನು ಹೋಲಿಕೆಯಲ್ಲಿ ಪರಿಶಿಷ್ಟರೊಳಗೆ ಅತ್ಯಂತ ಮುಂದುವರೆದ ಜಾತಿಗಳೊಡನೆ ಸೇರಿಸಿ ಒಂದು ವರ್ಗವಾಗಿಸಿ ಅದಕ್ಕೆ ಶೇ. 5 ರಷ್ಟು ಮೀಸಲಾತಿ ನೀಡಲಾಗಿದೆ.
ಈಗ ಪಿಯುಸಿ, ಪದವಿ, ವಿದ್ಯಾರ್ಥಿ ನಿಲಯ, ಉದ್ಯೋಗ ಇತ್ಯಾದಿಗಳಿಗೆ ಈ ಅತ್ಯಂತ ಹಿಂದುಳಿದ 59 ಜಾತಿಗಳು ಅತ್ಯಂತ ಮುಂದುವರೆದ ಜಾತಿಗಳೊಂದಿಗೆ ಪೈಪೋಟಿ ಮಾಡಬೇಕಾಗುತ್ತದೆ. ಇದು ಯಾವ ಸೀಮೆ ನ್ಯಾಯ ? ಹೋಲಿಕೆಯಲ್ಲಿ ಹಿಂದುಳಿದವರು ಮತ್ತು ಮುಂದುವರೆದವರು ಒಂದೇ ಗುಂಪಿನಲ್ಲಿ ಸ್ಪರ್ಧಿಸುವುದಾದರೆ ಒಳಮೀಸಲಾತಿಯ ಅಗತ್ಯವಾದರೂ ಏನಿತ್ತು?
ಈವರೆಗೆ ಪರಿಶಿಷ್ಟರಲ್ಲಿ ಹೋಲಿಕೆಯಲ್ಲಿ ವಿವಿಧ ಜಾತಿಗಳಲ್ಲಿನ ಹಿಂದುಳಿದಿರುವಿಕೆಯನ್ನು ಗಮನಿಸದೆ ಅಷ್ಟು ಜಾತಿಗಳಿಗೆ ಒಟ್ಟಾರೆಯಾಗಿ ಶೇ. 15 ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು.
ಆದರೆ ಅದರ ಪರಿಣಾಮವಾಗಿ ಪರಿಶಿಷ್ಟರ 101 ಜಾತಿಗಳಲ್ಲಿ:
► 25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ.
► 14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ.
► 14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ.
► 54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ ಇಲ್ಲ.
►ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ ಇತರ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ.
►27,917 ಪರಿಶಿಷ್ಟ ಗ್ರಾಮಪಂಚಾಯತಿ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.
►ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ.
►ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ.
►ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.
►ಪಟ್ಟಣ ಪಂಚಾಯತಿಯ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.
ಪರಿಶಿಷ್ಟರೊಳಗಿನ ಹಿಂದುಳಿದಿರುವಿಕೆಯಲ್ಲಿ ಈ ಬಗೆಯ ಅಸಮಾನತೆ ಇರುವುದರಿಂದ ಪರಿಶಿಷ್ಟ ಸಮುದಾಯದೊಳಗೆ ಸಾಪೇಕ್ಷವಾಗಿ ಮುಂದುವರೆದವರಿಂದ ಸಾಪೇಕ್ಷವಾಗಿ ಹಿಂದುಳಿದವರನ್ನು ಪ್ರತ್ಯೇಕಗೊಳಿಸಿ ಒಳಮೀಸಲಾತಿ ನೀಡಬೇಕಿತ್ತು. ಆದರೆ ಈ ರೀತಿ ಹಿಂದಿನಿಂದಲೂ ಪರಿಶಿಷ್ಟರಾಗಿದ್ದರೂ ಅತ್ಯಂತ ವಂಚನೆಗೆ ಗುರಿಯಾಗಿರುವ ಅತ್ಯಂತ ಹಿಂದುಳಿದ 59 ಜಾತಿಗಳನ್ನು ಹೋಲಿಕೆಯಲ್ಲಿ ಪರಿಶಿಷ್ಟರಲ್ಲೇ ಅತ್ಯಂತ ಮುಂದುವರೆದಿರುವ ಸ್ಪೃಶ್ಯ ಜಾತಿಗಳೊಡನೆ ಸೇರಿಸಿ ಸಿದ್ದರಾಮಯ್ಯನವರ ಸರ್ಕಾರ ಅತ್ಯಂತ ಅನ್ಯಾಯ ಮಾಡಿದೆ.
ಇದಲ್ಲದೆ ನ್ಯಾ. ದಾಸ್ ಆಯೋಗದ ಪ್ರಕಾರ ಈಗ ಪರಿಶಿಷ್ಟ ಜಾತಿಗಳು ಪಡೆದುಕೊಂಡಿರುವ ಉದ್ಯೋಗಗಳು 1,47, 671. ಇದರಲ್ಲಿ ಗ್ರೂಪ್ B ಎಂದು ವರ್ಗೀಕರಿಸಲ್ಪಟ್ಟ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು 35115 ಉದ್ಯೋಗಗಳನ್ನು ಪಡೆದುಕೊಂಡಿವೆ. ಅಂದರೆ ಒಟ್ಟಾರೆ ಪರಿಶಿಷ್ಟ ಉದ್ಯೋಗಾವಕಾಶಗಳ ಶೇ. 4.2 ಈಗ ಸರ್ಕಾರದ ಹೊಸ ಸೂತ್ರದ ಪ್ರಕಾರ ಈ ಪ್ರವರ್ಗಕ್ಕೆ ಶೇ. 6 ರಷ್ಟು ಎಂದರೆ ಶೇ. 1.8 ಅಧಿಕ ಅವಕಾಶಗಳು ದೊರೆಯಬಹುದು.
ಗ್ರೂಪ್ C ಎಂದು ವರ್ಗೀಕರಿಸಲ್ಪಟ್ಟ ಹೊಲೆಯ ಮತ್ತು ಹೊಲೆಯ ಸಂಬಂಧಿತ ಜಾತಿಗಳು 43843 ಉದ್ಯೋಗಗಳನ್ನು ಪಡೆದುಕೊಂಡಿವೆ. ಅಂದರೆ ಒಟ್ಟಾರೆ ಪರಿಶಿಷ್ಟ ಉದ್ಯೋಗಾವಕಾಶಗಳ ಶೇ.3.3. ಈಗ ಸರ್ಕಾರದ ಹೊಸ ಸೂತ್ರದ ಪ್ರಕಾರ ಈ ಪ್ರವರ್ಗಕ್ಕೆ ಶೇ. 6 ರಷ್ಟು ಎಂದರೆ ಶೇ. 2.7 ರಷ್ಟು ಹೆಚ್ಚಿನ ಅವಕಾಶಗಳು ದೊರೆಯಬಹುದು.
ಗ್ರೂಪ್ D ಎಂದು ವರ್ಗೀಕರಿಸಲ್ಪಟ್ಟ ಲಂಬಾಣಿ, ಭೋವಿ, ಕೊರಮ, ಕೊರಚ ಹಾಯಾಗೂ ಸಂಬಂಧಿತ ಸೃಶ್ಯ ಜಾತಿಗಳು 36697 ಉದ್ಯೋಗಗಳನ್ನು ಪಡೆದುಕೊಂಡಿವೆ. ಅಂದರೆ ಒಟ್ಟಾರೆ ಪರಿಶಿಷ್ಟ ಉದ್ಯೋಗಾವಕಾಶಗಳ ಶೇ. 4.02 ಈಗ ಸರ್ಕಾರದ ಹೊಸ ಸೂತ್ರದ ಪ್ರಕಾರ ಈ ಪ್ರವರ್ಗಕ್ಕೆ ಶೇ. 6 ರಷ್ಟು ಎಂದರೆ ಶೇ. 1.98 ರಷ್ಟು ಹೆಚ್ಚಿನ ಅವಕಾಶಗಳು ದೊರೆಯಬಹುದು.
ಆದರೆ ಗ್ರೂಪ್ A ಗೆ ಸೇರಿದ ಅತ್ಯಂತ ಹಿಂದುಳಿದ 59 ಜಾತಿಗಳು ಈವರೆಗೆ ಒಟ್ಟಾರೆ ಪರಿಶಿಷ್ಟ ಜಾತಿಯ ಭಾಗವಾಗಿ ಪಡೆದುಕೊಂಡಿರುವುದು ಕೇವಲ 4490 ಉದ್ಯೋಗಗಳು.
ಈಗ ಅವರನ್ನು ಅನಾಮತ್ತಾಗಿ ಅತ್ಯಂತ ಮುಂದುವರೆದ ಡಿ ಗುಂಪಿಗೆ ಸೇರಿಸಿದರೆ ಈಗಿರುವ 4490 ಉದ್ಯೋಗಗಳಾದರೂ ಅವರ ಪಾಲಿಗೆ ದಕ್ಕೀತೆ ? ಈ ಸೂತ್ರ ಸಾಮಾಜಿಕ ನ್ಯಾಯವನ್ನಲ್ಲ. ಸಾಮಾಜಿಕ ಕ್ರೌರ್ಯವನ್ನು ಮುಂದುವರೆಸುತ್ತದೆ.
ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಸೂಕ್ತ ಸಾಮಾಜಿಕ ನ್ಯಾಯ ಸಿಗದೇ ಇದ್ದರೆ ಉಳಿದ ಜಾತಿಗಳು ಹಂಚಿಕೊಳ್ಳುವುದು ಅನ್ಯಾಯದ ಪಾಲಾಗುತ್ತದೆ. ಸರ್ಕಾರ ಮತ್ತು ಸಮುದಾಯಗಳು ಇದನ್ನು ಕೂಡಲೇ ಅರ್ಥಮಾಡಿಕೊಂಡು ನ್ಯಾಯ ಒದಗಿಸಲಿ. ಇಲ್ಲದಿದ್ದರೆ ಇದು ಕೋರ್ಟಿನಲ್ಲಂತೂ ಊರ್ಜಿತವಾಗಲಾರದು .
ಸುದೀರ್ಘ 35 ವರ್ಷಗಳ ಕಾಲ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟ ಆಗ ಮಾತ್ರ ನಿಜವಾಗಿ ಗೆದ್ದಂತಾಗುತ್ತದೆ.
ಏಕೆಂದರೆ ಒಂದು ಚಳವಳಿ ಕೇವಲ ಒಂದು ಬೇಡಿಕೆಗಾಗಿ ನಡೆಯುವ ಹೋರಾಟವಲ್ಲ. ಒಂದು ಮೌಲ್ಯಕ್ಕಾಗಿ ನಡೆಯುವ ಹೋರಾಟ. ಇಲ್ಲಿ ಇದ್ದದ್ದು ಸಾಮಾಜಿಕ ನ್ಯಾಯವೆಂಬ ಮೌಲ್ಯಕ್ಕಾಗಿನ ಹೋರಾಟ. ಬೇಡಿಕೆ ಈಡೇರಿದರೂ ಮೌಲ್ಯಗಳು ಸೋತರೆ ಚಳವಳಿಯು ಸೋತಂತೆ ಅಲ್ಲವೇ?
ಆಳುವ ಶೋಷಕ ವರ್ಗಗಳಿಗೆ ಅದೇ ಬೇಕು. ಅನಿವಾರ್ಯವಾಗಿ ಬೇಡಿಕೆಯನ್ನು ಈಡೇರಿಸಬೇಕಾಗಿ ಬಂದರೂ ಪರ್ಯಾಯದ, ಸಾಮಾಜಿಕ ನ್ಯಾಯದ ಮೌಲ್ಯ ಗೆಲ್ಲಬಾರದು.
ಸಾಮಾಜಿಕ ನ್ಯಾಯಕ್ಕಾಗಿ ಮೌಲಿಕ ಹೋರಾಟ ಮುಂದುವರೆಸೋಣ
-ಶಿವಸುಂದರ್