Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶರಾವತಿ ಮುಳುಗಡೆ ಸಂತ್ರಸ್ತರ ಆರು ದಶಕಗಳ...

ಶರಾವತಿ ಮುಳುಗಡೆ ಸಂತ್ರಸ್ತರ ಆರು ದಶಕಗಳ ಸಮಸ್ಯೆಗೆ ಮುಕ್ತಿ ಯಾವಾಗ?

ತಲೆಮಾರುಗಳು ಬದಲಾಗುತ್ತ ಪರಿಹಾರ ಕಾಣದೆ ಬದುಕು ಸವೆಸುತ್ತಿವೆ ಕುಟುಂಬಗಳು...

ಎಸ್. ಮೂರ್ತಿಎಸ್. ಮೂರ್ತಿ30 Jun 2025 10:12 AM IST
share
ಶರಾವತಿ ಮುಳುಗಡೆ ಸಂತ್ರಸ್ತರ ಆರು ದಶಕಗಳ ಸಮಸ್ಯೆಗೆ ಮುಕ್ತಿ ಯಾವಾಗ?

ನಾಡಿಗೆ ಬೆಳಕು ನೀಡಲು ತಮ್ಮ ಜಮೀನು, ಮನೆ, ತೋಟ, ಕೊಟ್ಟಿಗೆ, ಕುಲ-ದೇವರುಗಳ ದೇವಸ್ಥಾನ ಇತ್ಯಾದಿಗಳೆಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ತರು ಇಂದಿಗೂ ತಮ್ಮ ಭೂ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆರು ದಶಕಗಳು ಕಳೆದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಾನೂನು ಎಂಬ ಒಡಲೊಳಗಿನ ಬೆಂಕಿ ಸಂತ್ರಸ್ತರನ್ನು ನ್ಯಾಯಾಲಯದ ಕಟಕಟೆ ಹತ್ತಿಸಿದೆ.

೧೯೩೯ರಲ್ಲಿ ರಾಜ್ಯದ ಜಲ ವಿದ್ಯುತ್ ಯೋಜನೆಗಳಿಗಾಗಿ ಬ್ರಿಟಿಷ್ ಪ್ರೆಸಿಡೆನ್ಸಿ ನಿಯಂತ್ರಣದಲ್ಲಿದ್ದ ‘ಮೈಸೂರು ಸಂಸ್ಥಾನ’ವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ, ಬಾರಂಗಿ ಹೋಬಳಿಯ, ಮಡೆನೂರು ಗ್ರಾಮದಲ್ಲಿ, ಶರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು (ಹಿರೇಭಾಸ್ಕರ ಅಣೆಕಟ್ಟು) ನಿರ್ಮಿಸಿತು. ಈ ಕಾಮಗಾರಿಗೆ ೧೯೩೯ರಲ್ಲಿ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅಡಿಗಲ್ಲನ್ನು ಇಡುವ ಮೂಲಕ ಪ್ರಾರಂಭವಾಗಿ, ೧೯೪೭ರಲ್ಲಿ ಮುಕ್ತಾಯಗೊಂಡಿತು.

೧೯೫೭ರಲ್ಲಿ ರಾಜ್ಯದ ವಿದ್ಯುತ್ ಬೇಡಿಕೆಯ ಹೆಚ್ಚಳದಿಂದ ಮತ್ತಷ್ಟು ಜಲ ವಿದ್ಯುತ್ ಯೋಜನೆಗಳಿಗಾಗಿ, ಸ್ವತಂತ್ರ ಭಾರತದ ‘ಮೈಸೂರು ಸರಕಾರ’ ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಲಿಂಗನಮಕ್ಕಿ ಸ್ಥಳದಲ್ಲಿ ಅದೇ ಶರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು (ಲಿಂಗನಮಕ್ಕಿ ಅಣೆಕಟ್ಟು) ನಿರ್ಮಿಸಿತು. ಈ ಕಾಮಗಾರಿಯು,೧೯೫೭ರಲ್ಲಿ ಪ್ರಾರಂಭವಾಗಿ, ೧೯೬೪ರಲ್ಲಿ ಮುಕ್ತಾಯಗೊಂಡಿತು. ಈ ಹಿಂದಿನ ಹಿರೇಭಾಸ್ಕರ ಅಣೆಕಟ್ಟು, ಹೊಸದಾದ ಈ ಲಿಂಗನಮಕ್ಕಿ ಅಣೆಕಟ್ಟು ನೀರಿನಲ್ಲಿ ಮುಳುಗಡೆ ಆಯಿತು.

ಮೇಲಿನ ೨ ಅಣೆಕಟ್ಟುಗಳ ನಿರ್ಮಾಣ ಮತ್ತು ಹಿನ್ನೀರಿನ ಕಾರಣಗಳಿಂದ, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲೂಕುಗಳ ಪೈಕಿ, ಅಧಿಕೃತವಾಗಿ ೧೬೬ ಗ್ರಾಮಗಳು (ಅನಧಿಕೃತವಾಗಿ ೧೮೦ ಗ್ರಾಮಗಳು) ಮುಳುಗಡೆಯಾಗಿವೆ. ಒಟ್ಟು ಅಂದಾಜು ೧೫,೫೪೯.೨೯ ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. (೧೨,೫೦೦ ಎಕರೆ ಭತ್ತದ ಬೆಳೆ; ಸುಮಾರು ೯೬೫ ಎಕರೆ ಅಡಿಕೆ ಬೆಳೆ; ಸುಮಾರು ೨,೧೦೦ ಎಕರೆ ಖುಸ್ಕಿ)

ಮುಳುಗಡೆಯಾದ ಈ ಭೂಮಿಗಳನ್ನು, ಸುಮಾರು ೭,೦೦೦ ಕುಟುಂಬಗಳು (ಆ ಕುಟುಂಬಗಳಲ್ಲಿ ಕನಿಷ್ಠ ೩೦,೦೦೦ ಸದಸ್ಯರುಗಳು) ಕಳೆದುಕೊಂಡಿವೆ. ಯೋಜನಾ ಸಂತ್ರಸ್ತರಾಗಿ ಕಳೆದ ೬೫ ವರ್ಷಗಳಿಂದ ತಲೆಮಾರುಗಳು ಬದಲಾಗುತ್ತ ಪರಿಹಾರ ಕಾಣದೆ ಬದುಕು ಸವೆಸುತ್ತಿವೆ.

ಭೂಮಿ ಕಳೆದುಕೊಂಡ ಈ ಸಂತ್ರಸ್ತರ ಬಹುತೇಕ ಕುಟುಂಬಗಳಿಗೆ, ಅಂದಿನ ರಾಜ್ಯ ಸರಕಾರಗಳು ೧೯೬೦ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ತಾಲೂಕುಗಳಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಸುಮಾರು ೧೯,೦೬೭.೦೮ ಎಕರೆ ಜಮೀನುಗಳನ್ನು ಪರಿಹಾರವಾಗಿ ನೀಡಿದೆ. ಕಂದಾಯ ಭೂಮಿ ಕೊರತೆಯಿಂದ, ನೀಡಿರುವ ಈ ಪರಿಹಾರದ ಭೂಮಿ ಪೈಕಿ, ಸುಮಾರು ೯,೯೪೭ ಎಕರೆ ಅರಣ್ಯ ಭೂಮಿ ಸೇರಿದೆ. ಈ ಅರಣ್ಯ ಭೂಮಿಯನ್ನು ಅಂದಿನ ಕರ್ನಾಟಕ ಸರಕಾರದ ಅರಣ್ಯ ಇಲಾಖೆ ೩೪ ಸರಕಾರಿ ಆದೇಶಗಳಲ್ಲಿ ಕಂದಾಯ ಇಲಾಖೆಗೆ ಹಸ್ತಾಂತರಿಸಿದೆ. ಅದರಂತೆ, ಸಂತ್ರಸ್ತರಿಗೆ ಪಹಣಿಗಳನ್ನು ದಾಖಲುಗೊಳಿಸಿ, ಭೂಮಿಯ ಕಂದಾಯ ಹಕ್ಕು ಪತ್ರಗಳನ್ನು ಸರಕಾರ ಅಂದಿನ ದಿನಗಳಲ್ಲಿ ನೀಡಿದೆ. ಪರಿಹಾರ ಭೂಮಿ ಹಂಚಿಕೆ ಪಡೆದ ಸಂತ್ರಸ್ತರು, ಸದರಿ ಭೂಮಿಗಳನ್ನು ಅಂದಿನಿಂದ ಸಾಗುವಳಿ ಮಾಡುತ್ತಿದ್ದಾರೆ.

ಕಂದಾಯ ಭೂಮಿ ಕೊರತೆ, ಅಂದಿನ ಅಧಿಕಾರಿಗಳ ಅಸಹಕಾರ ಮತ್ತು ನಿರ್ಲಕ್ಷ್ಯತನಗಳಿಂದ ಈ ಯೋಜನಾ ಸಂತ್ರಸ್ತರ ಪೈಕಿ ಕೆಲವರಿಗೆ ೬೫ ವರ್ಷಗಳು ಕಳೆದರೂ ಈವರೆಗೂ ಪರಿಹಾರ ಭೂಮಿ ಸಿಕ್ಕಿಲ್ಲ; ಕನಿಷ್ಠ ಅರಣ್ಯ ಭೂಮಿಯಾದರೂ ಈ ಸಂತ್ರಸ್ತರಿಗೆ ಸಿಕ್ಕಿಲ್ಲ.

೧೯೮೦ರಲ್ಲಿ ರಾಷ್ಟ್ರದಲ್ಲಿ ಭಾರತ ಸರಕಾರದ ‘ಅರಣ್ಯ ಸಂರಕ್ಷಣೆ ಕಾಯ್ದೆ-೧೯೮೦’ ಜಾರಿಗೆ ಬಂದಿತು. ಈ ಕಾನೂನು ಪೂರ್ವದಲ್ಲಿ, ರಾಜ್ಯ ಸರಕಾರಗಳ ಪ್ರಾಧಿಕಾರಗಳು, ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಭೂ ಮಂಜೂರಾತಿ ಕಾಯ್ದೆ ಮತ್ತು ನಿಯಮಗಳು ಹಾಗೂ ಇತರ ಕಾನೂನಾತ್ಮಕ ನಿಯಮಗಳ ಅಡಿಯಲ್ಲಿ ಅರಣ್ಯ ಭೂಮಿಯನ್ನು ಮಂಜೂರು ಮಾಡಿದ್ದರೆ, ಅಂತಹ ಅರಣ್ಯ ಭೂಮಿಯನ್ನು ಭಾರತ ಸರಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಹೊಸದಿಲ್ಲಿ ಇವರ ಅನುಮತಿ ಪಡೆದು ಡಿ-ನೋಟಿಫಿಕೇಶನ್ ಮಾಡಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಿತು.

ಈ ಕಾನೂನು ಬಂದ ತರುವಾಯ, ಶಿವಮೊಗ್ಗ ಅರಣ್ಯ ಇಲಾಖೆಯ ಅಧಿಕಾರಿಗಳು, ‘ಕರ್ನಾಟಕ ಅರಣ್ಯ ಕಾಯ್ದೆ ೧೯೬೩’ ರ ಸೆಕ್ಷನ್ ೨೪ ಮತ್ತು ೬೪(a) ರಲ್ಲಿರುವ ಅವಕಾಶಗಳನ್ನು ಪಡೆದು, ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದ ಮೇಲಿನ ಯೋಜನಾ ಸಂತ್ರಸ್ತರುಗಳಿಗೆ ನೋಟಿಸ್ ನೀಡುವ, ತೆರವುಗೊಳಿಸಲು ಸೂಚನೆ ನೀಡುವ, ಅರಣ್ಯ ಭೂಮಿ ಒತ್ತುವರಿ ಕೇಸ್ ಹಾಕುವ ಬೆದರಿಕೆಗಳನ್ನು ಒಡ್ಡಲು ಪ್ರಾರಂಭಿಸಿದರು.

ಆ ಕಾಲದಲ್ಲಿ ಲಭ್ಯವಿದ್ದ ಕಾನೂನುಗಳಡಿ ಹಸ್ತಾಂತರಿಸಿದ ಅರಣ್ಯ ಭೂಮಿಗಳನ್ನು ಡಿ-ನೋಟಿಫಿಕೇಶನ್ ಮಾಡಿಲ್ಲ. ಕಂದಾಯ ಅಧಿಕಾರಿಗಳು ಸಂತ್ರಸ್ತರಿಗೆ ನೇರವಾಗಿ ಅರಣ್ಯ ಭೂಮಿಗಳನ್ನು ಮಂಜೂರಾತಿ ಮಾಡಿದ್ದಾರೆ; ಲಭ್ಯವಿದ್ದ ಕಾನೂನುಗಳ ಡಿ-ನೋಟಿಫಿಕೇಶನ್ ಮಾಡಬೇಕಿತ್ತು; ಆಗ ಅರಣ್ಯ ಸಂರಕ್ಷಣೆ ಕಾಯ್ದೆ ೧೯೮೦ರ ಕಾನೂನು ಇರಲಿಲ್ಲ. ಆ ಕಾರಣಕ್ಕೆ ಡಿ-ನೋಟಿಫಿಕೇಶನ್ ಆಗ ಮಾಡುವ ಅಗತ್ಯ ಉದ್ಭವಿಸಲಿಲ್ಲ; ಅರಣ್ಯ ಭೂಮಿ ಹಸ್ತಾಂತರ ಪ್ರಕ್ರಿಯೆಗಳು ಸರಕಾರಿ ಆದೇಶಗಳಾಗಿವೆ. ಇತ್ಯಾದಿ ಕಾನೂನು ವ್ಯಾಖ್ಯಾನಗಳನ್ನು ಕಾನೂನು ತಜ್ಞರು, ರಾಜಕಾರಣಿಗಳು. ಶಿವಮೊಗ್ಗದ ತುಂಬೆಲ್ಲ ಹರಿಬಿಟ್ಟರು.

ಈ ಕಾನೂನು ವ್ಯಾಖ್ಯಾನಗಳ ಹರಿದಾಟಗಳ ನಡುವೆ, ಯಾವುದು ಸರಿ ಅಥವಾ ಯಾವುದು ತಪ್ಪು... ಇತ್ಯಾದಿ ಗೊಂದಲಗಳಿಗೆ, ಜೊತೆಗೆ ಈ ಸಾಗುವಳಿ ಜಮೀನುಗಳಿಂದ ನಮ್ಮನ್ನು ಒಕ್ಕಲೆಬ್ಬಿಸಬಹುದೆಂದು ಈ ಯೋಜನಾ ಸಂತ್ರಸ್ತರು ಭಯಗೊಂಡರು. ಸಿಕ್ಕಸಿಕ್ಕವರಿಗೆಲ್ಲ ಅರ್ಜಿ ನೀಡುವುದು, ರಾಜಕಾರಣಿಗಳನ್ನು, ರಾಜಕೀಯ ಪಕ್ಷಗಳನ್ನು ಭೇಟಿ ಮಾಡುವುದು. ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವುದು. ಪ್ರತಿಭಟನೆಗಳನ್ನು ಮಾಡುವುದನ್ನು ಪ್ರಾರಂಭಿಸಿದರು.

ಈ ಎಲ್ಲಾ ಸಮಸ್ಯೆಗಳನ್ನು ಕೇಳಿ, ನೋಡಿ, ಹಾಸುಹೊದ್ದುಕೊಂಡಿದ್ದ ಕಾಗೋಡು ತಿಮ್ಮಪ್ಪನವರು ೨೦೧೩ರಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದರು. ಈ ಅವಧಿಯಲ್ಲಿ ಹತ್ತು ಹಲವು ಬಾರಿ ಸಂತ್ರಸ್ತರ ಮತ್ತು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಡನೆ ಸಭೆಗಳನ್ನು ನಡೆಸಿದರು. ಅಂತಿಮವಾಗಿ ೨೦೧೫ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಮೇಲಿನ ಶರಾವತಿ ಯೋಜನಾ ಸಂತ್ರಸ್ತರ ಅರಣ್ಯ ಭೂಮಿ ಮಂಜೂರಾತಿ ಪ್ರಕರಣಗಳಲ್ಲಿ ಡಿ-ನೋಟಿಫಿಕೇಶನ್ ಮಾಡಿ ಸರಕಾರಿ ಆದೇಶಗಳನ್ನು ಹೊರಡಿಸಿತು.

ಈ ಡಿ-ನೋಟಿಫಿಕೇಶನ್ ಸರಕಾರಿ ಆದೇಶಗಳನ್ನು ಗಿರೀಶ್ ಆಚಾರ್ ಬಿನ್ ಚಂದ್ರ ಆಚಾರ್ ಎನ್ನುವ ಖಾಸಗಿ ವ್ಯಕ್ತಿಯೊಬ್ಬರು ರಾಜ್ಯ ಹೈಕೋರ್ಟಿನಲ್ಲಿ (WP-೪೩೦೩೭-೨೦೧೯) ಪ್ರಶ್ನೆ ಮಾಡಿದರು. ನ್ಯಾಯಾಲಯ ವಿಚಾರಣೆ ನಡೆಸಿ, ‘ಅರಣ್ಯ ಸಂರಕ್ಷಣೆ ಕಾಯ್ದೆ ೧೯೮೦’ರ ಅವಕಾಶ ಮತ್ತು ಸೂಚನೆಗಳಂತೆ, ಕೇಂದ್ರ ಸರಕಾರದ ಅನುಮತಿ ಪಡೆದಿಲ್ಲವೆಂದು ಅಭಿಪ್ರಾಯ ದಾಖಲಿಸಿ, ದಿನಾಂಕ ೪-೩-೨೦೨೧ ರಂದು ಕರ್ನಾಟಕ ಸರಕಾರ ಹೊರಡಿಸಿದ್ದ ಮೇಲಿನ ಡಿ-ನೋಟಿಫಿಕೇಶನ್ ಆದೇಶಗಳ ಪೈಕಿ ಒಂದು (AFD ೧೧೪ FGL ೨೦೧೬, dt.೨೩-೨-೨೦೦೭) ಆದೇಶವನ್ನು ವಜಾಗೊಳಿಸಿತು.

ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಸಂತ್ರಸ್ತ ಫಲಾನುಭವಿಗಳನ್ನು, ಈ ಪ್ರಕರಣದಲ್ಲಿ ಪಾರ್ಟಿಗಳನ್ನಾಗಿ ಮಾಡಿಲ್ಲ. ಅವರಿಗೆ ಅವಕಾಶ ನೀಡಿಲ್ಲ. ಅಹವಾಲು ಕೇಳಿಲ್ಲ. ಈ ಪ್ರಕರಣದಲ್ಲಿ ಏಕಪ್ರಕಾರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪನ್ನು ಮರುಪರಿಶೀಲಿಸಬೇಕೆಂದು ಹೈಕೋರ್ಟಿನ ಏಕ ಸದಸ್ಯ ಪೀಠದ ತೀರ್ಪನ್ನು ನಾರಾಯಣ ಶೆಟ್ಟಿ ಎನ್ನುವವರು ಸದರಿ ರಾಜ್ಯ ಹೈಕೋರ್ಟಿನ ದ್ವಿ ಸದಸ್ಯ ಪೀಠದಲ್ಲಿ ಅಪೀಲ್ ದಾವೆ ಹೂಡಿದರು. ಇವರ ಅರ್ಜಿಯನ್ನು ದ್ವಿ ಸದಸ್ಯ ಪೀಠವು ವಜಾಗೊಳಿಸಿ, ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿಯಿತು.

ಹೈಕೋರ್ಟ್ನ ದ್ವಿ ಸದಸ್ಯ ಪೀಠದ ತೀರ್ಪಿನ ನಂತರ ಕರ್ನಾಟಕ ಸರಕಾರ ದಿನಾಂಕ ೨೮-೯-೨೦೧೮ ರಂದು ಶರಾವತಿ ಸಂತ್ರಸ್ತರಿಗೆ ನೀಡಿದ್ದ ಅರಣ್ಯ ಭೂಮಿ ಸಂಬಂಧ ಹೊರಡಿಸಿದ್ದ ಎಲ್ಲಾ ಡಿ-ನೋಟಿಫಿಕೇಷನ್ ಆದೇಶಗಳನ್ನು ರದ್ದು ಮಾಡಿತು. ಇದರಿಂದ ೯,೯೪೭ ಎಕರೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದ ಶರಾವತಿ ಯೋಜನೆ ಸಂತ್ರಸ್ತರು ಅನ್ಯಾಯಕ್ಕೆ ಒಳಗಾದರು. ಪ್ರಮುಖವಾಗಿ, ಈವರೆಗೂ ಪರಿಹಾರ ಭೂಮಿ ಪಡೆಯದೆ ಬಾಕಿ ಉಳಿದಿರುವ ಹಳೆ ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮುಂದುವರಿದಿದೆ.

ಒಟ್ಟಾರೆ ಇವರೆಲ್ಲ ರಾಜ್ಯದ ವಿದ್ಯುತ್ ಗಾಗಿ ಭೂಮಿ ಕಳೆದುಕೊಂಡು ಶರಾವತಿ ನಿರಾಶ್ರಿತರಾಗಿ, ಕಳೆದ ೬೫ ವರ್ಷಗಳಿಂದ ಪರಿಹಾರ ಕಾಣದೆ ಅನ್ಯಾಯಕ್ಕೆ ಒಳಗಾಗಿದ್ದಾರೆ.

ಪರಿಹಾರ ಮಾರ್ಗಗಳು

ಶರಾವತಿ ವಿದ್ಯುತ್ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡು, ಈವರೆಗೂ ಪರಿಹಾರ ಭೂಮಿ ಪಡೆಯದಿರುವ ಸಂತ್ರಸ್ತರಿಗೆ, ಮೊದಲು ಕಂದಾಯ ಭೂಮಿಗಳನ್ನು ಕಡ್ಡಾಯವಾಗಿ ವಿಳಂಬ ಮಾಡದೆ ನೀಡಬೇಕು.

ಇನ್ನು ಅರಣ್ಯ ಭೂಮಿ ಪರಿಹಾರವಾಗಿ ಪಡೆದು ಸಾಗುವಳಿ ಮಾಡುತ್ತಾ ಈಗ ಅನ್ಯಾಯಕ್ಕೆ ಸಿಲುಕಿರುವವರಿಗೆ ರಾಜ್ಯ ಉಚ್ಚ ನ್ಯಾಯಾಲಯ ಉಲ್ಲೇಖಿತ ದಾವೆಗಳಲ್ಲಿ ನೀಡಿರುವ ತೀರ್ಪುಗಳನ್ನು ಮರುಪರಿಶೀಲನೆಗಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಕೂಡಲೇ ಮೇಲ್ಮನವಿ ಸಲ್ಲಿಸಬೇಕು. ‘ಅರಣ್ಯ ಸಂರಕ್ಷಣೆ ಕಾಯ್ದೆ-೧೯೮೦’ ಜಾರಿ ಪೂರ್ವದಲ್ಲಿ, ಅರಣ್ಯ ಭೂಮಿ ಹಸ್ತಾಂತರ ಮತ್ತು ಮಂಜೂರಾತಿ ಪ್ರಕ್ರಿಯೆ ಪ್ರಕರಣಗಳಲ್ಲಿ ಅಂದಿನ ಇಲಾಖೆಗಳ ಮಧ್ಯೆ ಸರಕಾರಿ ಆದೇಶಗಳಾಗಿವೆ. ಅಂದಿನ ಅಧಿಕಾರಿಗಳ ಕಾನೂನು ಜ್ಞಾನ ಮತ್ತು ಲೋಪಗಳಿಂದ ಡಿ-ನೋಟಿಫಿಕೇಶನ್ ಆದೇಶಗಳನ್ನು ಹೊರಡಿಸಿಲ್ಲ. ಆ ತಪ್ಪನ್ನು ಸರಿಪಡಿಸುವ ಸಲುವಾಗಿ ಜೊತೆಗೆ ಉಲ್ಲೇಖಿತ ಕಾನೂನು ಜಾರಿ ಬರುವ ಪೂರ್ವದಲ್ಲಿ ಸರಕಾರಿ ಆದೇಶಗಳಾಗಿರುವ ಕಾರಣಕ್ಕೆ ಕೇಂದ್ರ ಸರಕಾರದ ಅನುಮತಿ ಅಗತ್ಯವಿಲ್ಲವೆಂದು ಪರಿಭಾವಿಸಿ, ಈಗ ಡಿ-ನೋಟಿಫಿಕೇಶನ್ ಮಾಡಲಾಗಿದೆ. ಒಂದು ವೇಳೆ ೧೯೮೦ರ ನಂತರ ಹಸ್ತಾಂತರ ಮತ್ತು ಮಂಜೂರಾತಿ ಪ್ರಕ್ರಿಯೆಗಳನ್ನು ಮಾಡಿದ್ದಲ್ಲಿ, ಅಂತಹ ಪ್ರಕರಣಗಳಿಗೆ ಕೇಂದ್ರ ಸರಕಾರದ ಅನುಮತಿ ಪಡೆಯುತ್ತೇವೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನದಟ್ಟು ಮಾಡಿ, ರಾಜ್ಯ ಹೈಕೋರ್ಟಿನ ತೀರ್ಪುಗಳನ್ನು ವಜಾಗೊಳಿಸಬೇಕು. ಅಥವಾ ರಾಜ್ಯ ಹೈಕೋರ್ಟಿನ ತೀರ್ಪುಗಳ ಪ್ರಕಾರ, ಶರಾವತಿ ಸಂತ್ರಸ್ತರ ಅರಣ್ಯ ಭೂಮಿ ಮಂಜೂರಾತಿ ಡಿ-ನೋಟಿಫಿಕೇಶನ್ ಪ್ರಕರಣಗಳಿಗೆ ಭಾರತ ಸರಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಹೊಸದಿಲ್ಲಿ ಇವರ ಅನುಮತಿ ಪಡೆದು, ಹೊಸದಾಗಿ ಡಿ-ನೋಟಿಫಿಕೇಶನ್ ಆದೇಶಗಳನ್ನು ಕರ್ನಾಟಕ ಸರಕಾರ ಹೊರಡಿಸಬೇಕು.

ಮತ್ಯಾವುದಾದರೂ ಪರಿಹಾರ ಮಾರ್ಗಗಳನ್ನು ಹುಡುಕಿ ೬೫ಕ್ಕೂ ಹೆಚ್ಚು ವರ್ಷಗಳಿಂದ ಅನ್ಯಾಯ, ಆತಂಕ, ರೋದನ ಅನುಭವಿಸುತ್ತಿರುವ ಈ ಶರಾವತಿ ಯೋಜನಾ ಸಂತ್ರಸ್ತರಿಗೆ, ಶಾಶ್ವತ ಪರಿಹಾರ ಕಲ್ಪಿಸಬೇಕು.

share
ಎಸ್. ಮೂರ್ತಿ
ಎಸ್. ಮೂರ್ತಿ

ರಾಜ್ಯ ಮುಖ್ಯ ಸಂಚಾಲಕರು, ಅಹಿಂದ ಚಳವಳಿ

Next Story
X