ಮಕ್ಕಳಿಂದ ಶಾಲೆಯ ಸ್ವಚ್ಛತೆ ಮಾಡಿಸಿದರೆ ಅವರ ಮುಂದಿನ ಭವಿಷ್ಯ ಹೇಗೆ?
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು, ಸಂಘಟನೆಗಳ ಆಗ್ರಹ
ಯಾದಗಿರಿ: ನಾವು ಬಡವರು ನಾವು ವಿದ್ಯಾವಂತರಾಗಿಲ್ಲ, ನಮ್ಮ ಮಕ್ಕಳಾದರೂ ವಿದ್ಯಾವಂತರಾಗಲಿ ಎಂದು ಶಾಲೆಗೆ ಕಳಿಸಿದರೆ ನಮ್ಮ ಮಗನಿಗೆ ಒಂದಕ್ಷರ ಓದಲು ಬರುವುದಿಲ್ಲ, ನನ್ನ ಮಗ ಶಾಲೆಗೆ ಹೋದರೆ ಅಲ್ಲಿನ ಶಿಕ್ಷಕರು ಪಾಠ ಹೇಳುವುದನ್ನು ಬಿಟ್ಟು ಶಾಲೆಯ ಸ್ವಚ್ಛತೆಯ ಕೆಲಸ ಮಾಡಿಸುತ್ತಾರೆ. ಹೀಗಾದರೆ ಬಡವರ ಮಕ್ಕಳ ಮುಂದಿನ ಭವಿಷ್ಯ ಹೇಗೆ.? ಎಂದು ನಗರದ ಅಂಬೇಡ್ಕರ್ ಶಾಲೆಯಲ್ಲಿ ಸ್ವಚ್ಛತೆ ಕಾರ್ಯ ಮಾಡಿದ ವಿದ್ಯಾರ್ಥಿಯ ತಾಯಿ ವಾರ್ತಾಭಾರತಿ ಪತ್ರಿಕೆಗೆ ತಮ್ಮ ಅನಿಸಿಕೆ ಜೊತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಡಿ ಗ್ರೂಪ್ ಸಿಬ್ಬಂದಿ ಇಲ್ಲ, ಹಾಗಾಗಿ ನಾವು ಮಕ್ಕಳ ಕೈಯಿಂದ ಸ್ವಚ್ಛತಾ ಕಾರ್ಯ ಮಾಡಿಸಿದರೆ ತಪ್ಪೇನು ಇಲ್ಲ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಯಪ್ಪ ಗೌಡ ಎಂಬವರು ಸಮರ್ಥಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಶಾಲಾ ಮಕ್ಕಳ ವಿಷಯದಲ್ಲಿ ತಪ್ಪುಯಾರೇ ಮಾಡಲಿ, ತಪ್ಪು ತಪ್ಪೇ, ಅವರ ವಿರುದ್ಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಮತ್ತು ಸಂಘಟನೆಗಳು ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ತಪ್ಪು ಮಾಡಿದ ಅಂಬೇಡ್ಕರ್ ನಗರದ ಶಾಲೆಯ ಮುಖ್ಯಶಿಕ್ಷಕನನ್ನು ಯಾವುದೇ ಕಾರಣಕ್ಕೂ ಅಮಾನತು ಮಾಡಬಾರದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಯಪ್ಪಗೌಡ ನೇತೃತ್ವದಲ್ಲಿ ಜೂನ್ 21 ರಂದು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ನೀಡಿದ್ದು, ದಲಿತ ಮಕ್ಕಳು ಓದುತ್ತಿರುವ ಶಾಲೆ ಅಂದರೆ ಎಷ್ಟು ನಿರ್ಲಕ್ಷ್ಯ, ಇದೇನಾ ನ್ಯಾಯ ಎಂದು ದಲಿತ ಪರ ಸಂಘಟನೆಗಳ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಹಲವು ಶಾಲೆಗಳಲ್ಲಿ ಇಂತಹ ಪ್ರಕರಣಗಳು ಬಹಳಷ್ಟು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆಯವರು ಈ ವಿಷಯದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.
ಬೇರೆ ಬೇರೆ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ನಡೆದಾಗ ಕೂಡಲೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಆದರೆ, ಶಿಕ್ಷಣದಲ್ಲಿ ಹಿಂದುಳಿದ ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಅಂತದ್ದೆ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿ 10-12 ದಿನಗಳಾದರೂ ಕೂಡ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ತಪ್ಪಿತಸ್ಥರ ಪರ ಶಿಕ್ಷಕರ ಸಂಘಟನೆ ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ ಸಂಗತಿ. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಕೊಡುತ್ತೇವೆ
-ಅಶೋಕ ಹೊಸಮನಿ, ದಲಿತ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ್ಥ
ಅಂಬೇಡ್ಕರ್ ನಗರದ ಶಾಲೆಯಲ್ಲಿ ಮಕ್ಕಳಿಂದ ಶಾಲೆಯ ಸ್ವಚ್ಛತೆ ಪ್ರಕರಣದಲ್ಲಿ ತಪ್ಪಿತಸ್ಥ ಮುಖ್ಯಗುರುಗಳ ಪರ ಸರಕಾರಿ ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಸಲ್ಲಿಸುವುದು ನಾಚಿಗೇಡಿನ ಸಂಗತಿಯಾಗಿದೆ. ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿ ಅದನ್ನು ಬಿಟ್ಟು ಮಕ್ಕಳಿಂದ ಶಾಲೆಯ ಸ್ವಚ್ಛತೆ ಮಾಡಿಸಿದರೆ. ಅವರು ವಿದ್ಯಾಭ್ಯಾಸದಲ್ಲಿ ಹಿಂದುಳಿದು ಉನ್ನತ ಶಿಕ್ಷಣ ವಂಚಿತರಾಗುತ್ತಾರೆ. ಈ ಪ್ರಕರಣದಲ್ಲಿ ತಪ್ಪುಯಾರು ಮಾಡಿದ್ದರೂ ಅವರ ವಿರುದ್ಧ ಅಧಿಕಾರಿಗಳು ಕ್ರಮವಹಿಸಿ.
-ಉಮೇಶ್ ಕೆ.ಮುದ್ನಾಳ, ಸಾಮಾಜಿಕ ಹೋರಾಟಗಾರ
ಯಾದಗಿರಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದರೂ ಕ್ಷೇತ್ರದ ಶಾಸಕರ ಗಮನಕ್ಕೆ ಬಂದಿಲ್ಲವೇ, ಶಾಲೆಯ ಸ್ವಚ್ಛತೆ ಮಾಡಿದವರು ದಲಿತರ ಮಕ್ಕಳು ಎಂಬ ಕಾರಣಕ್ಕೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಯಾಕೆ.? ಮಕ್ಕಳ ಕೈಗೆ ಪುಸ್ತಕ ಕೊಟ್ಟ ಓದಿಸುವ ಬದಲು ಮಕ್ಕಳ ಕೈಯಲ್ಲಿ ಶಾಲೆಯ ಸ್ವಚ್ಛತೆ ಮಾಡಿಸುತ್ತಿರುವುದು ಕಾನೂನು ಬಾಹಿರವಾಗಿದೆ.ಆದುದರಿಂದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸುವ ಮೂಲಕ ಇಂತಹ ಪ್ರಕರಣ ಜಿಲ್ಲೆಯಲ್ಲಿ ನಡೆಯಬಾರದು.
-ಶ್ರೀಕಾಂತ್, ಮುಖಂಡ, ಸುಂಗಲಕರ್ ನಗರ