ಬೆಂಗಳೂರಿನಲ್ಲಿ ಪೂರ್ಣಚಂದ್ರ ತೇಜಸ್ವಿ ಲೋಕ ಅನಾವರಣ

ಬೆಂಗಳೂರು: ಖ್ಯಾತ ಪರಿಸರವಾದಿ, ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಸಕ್ತಿ ಕ್ಷೇತ್ರಗಳಾದ ಸಾಹಿತ್ಯ, ವಿಮರ್ಶೆ, ಕ್ಯಾಲಿಗ್ರಫಿ, ಫೋಟೊಗ್ರಫಿ, ಸಂವಾದ, ಸಂಶೋಧನೆ ಇತ್ಯಾದಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ನಗರದ ಗೊಟ್ಟಿಗೆರೆಯಲ್ಲಿರುವ ‘ಸಹ್ಯಾದ್ರಿ ಸ್ಮತಿ’ಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಲೋಕವೊಂದು ನಿರ್ಮಾಣವಾಗಿದೆ. ಅದುವೇ ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ.
ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ತೇಜಸ್ವಿ ಅವರು ಬಳಸಿರುವ ಲೇಖನಿ, ಪುಸ್ತಕ ಸೇರಿದಂತೆ ಕೆಲವು ವಸ್ತುಗಳನ್ನು ಸಂಗಹಿಸಲಾಗಿದೆ. ಜತೆಗೆ ತೇಜಸ್ವಿ ಅವರು ತೆಗೆದ ಛಾಯಾಚಿತ್ರಗಳು ಯುವಜನತೆ ಸೇರಿದಂತೆ ನೋಡುಗರನ್ನು ಆಕರ್ಷಿಸುತ್ತವೆ.
ತೇಜಸ್ವಿ ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ಅವರೆಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೊಗ್ರಫಿ, ಸಿತಾರ್ ವಾದನ, ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ, ಅದರ ಬಳಕೆಯ ಸಾಧ್ಯತೆಗಳು, ಕನ್ನಡ ತಂತ್ರಾಂಶಕ್ಕಾಗಿ ನಡೆಸಿದ ಪ್ರಯೋಗಗಳು, ಅದರ ಸಾಧ್ಯತೆಗಳನ್ನು ಕುರಿತ ಚಿಂತನೆ, ಅಡುಗೆ ಹೀಗೆ ತೇಜಸ್ವಿ ಅವರಿಗೆ ಹತ್ತು ಹಲವು ಆಸಕ್ತಿ, ಅಭಿರುಚಿ -ಕುತೂಹಲಗಳಿದ್ದವು ಅವುಗಳನ್ನು ಇಂದಿನ ಯುವಜನರಿಗೆ ತಿಳಿಸುವುದೇ ಪೂರ್ಣಚಂದ್ರ ಕನ್ನಡ ಅಧಯನ ಕೇಂದ್ರದ ಪ್ರಮುಖ ಉದ್ದೇಶ ಎನ್ನುವುದು ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ಸಿ. ಶಿವಾರೆಡ್ಡಿ ಅಭಿಪ್ರಾಯವಾಗಿದೆ.
ವಸ್ತುಸಂಗ್ರಹಾಲಯದಲ್ಲಿ ಶಾಶ್ವತ ವಸ್ತು ಪ್ರದರ್ಶನದ ಜೊತೆಗೆ ವಿಶೇಷ ಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಇತ್ಯಾದಿ ಪ್ರದರ್ಶನಗಳನ್ನು ತಿಂಗಳಿಗೊಮ್ಮೆ ನಡೆಸುವ ಉದ್ದೇಶವೂ ಹೊಂದಲಾಗಿದೆ. ಈ ಅಧ್ಯಯನ ಕೇಂದ್ರವನ್ನು ತೇಜಸ್ವಿ ಅವರ ಹೆಸರಿನಲ್ಲಿ ಸ್ಥಾಪಿಸಿದ್ದರೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತ ಸಮಗ್ರ ಅಧ್ಯಯನಕ್ಕೆ ಇಲ್ಲಿ ಅವಕಾಶವಿದೆ. ಕನ್ನಡ ಸ್ನಾತಕೋತ್ತರ, ಡಿಪ್ಲೊಮಾ, ಪಿಎಚ್‌ಡಿ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸುವ ಮೂಲಕ ಈ ಅಧ್ಯಯನ ಕೇಂದ್ರವನ್ನು ಉನ್ನತ ಸಂಶೋಧನಾ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವುದು ಅಧ್ಯಯನ ಕೇಂದ್ರದ ವಿಶೇಷತೆಯಾಗಿದೆ.
ಪೂರ್ಣಚಂದ್ರ ತೇಜಸ್ವಿಯವರು ಸಾಹಿತ್ಯ ಲೋಕದಲ್ಲಿ ಅಪಾರ ಓದುಗರು ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ತೇಜಸ್ವಿ ಅವರು ಬಳಸಿದ ವಸ್ತುಗಳು ಹಾಗೂ ಅವರ ಛಾಯಾಚಿತ್ರಗಳನ್ನು ನೋಡಲು ಕುಪ್ಪಳ್ಳಿ ಅಥವಾ ಮೂಡಿಗೆರೆಗೆ ಹೋಗಬೇಕಾಗಿತ್ತು ಇದೀಗ ಬೆಂಗಳೂರಿನಲ್ಲಿ ತೇಜಸ್ವಿ ಅವರ ಕುರಿತ ಅಧ್ಯಯನ ಕೇಂದ್ರ ಪ್ರಾರಂಭವಾಗಿರುವುದು ಬೆಂಗಳೂರಿನ ತೇಜಸ್ವಿ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವೂ ಆಗಿದೆ.
ತೇಜಸ್ವಿ ಅವರ ಆಸಕ್ತಿ ಕ್ಷೇತ್ರಗಳ ಕುರಿತು ಅಧ್ಯಯನ ಮಾಡುವವರಿಗೆ ಉಪಯುಕ್ತವಾಗಲಿದೆ. ಅನೇಕ ರೀತಿಯ ಶಿಬಿರಗಳನ್ನು ಆಯೋಜಿಸಲಾಗುವುದು. ಕನ್ನಡದಲ್ಲಿ ಟೈಟಲ್ ಬರೆಯುವವರು ಕಡಿಮೆಯಾಗಿದ್ದಾರೆ. ಅದರ ತರಬೇತಿಯನ್ನು ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಆಸಕ್ತರಿಗೆ ಎಲ್ಲ ಕಾರ್ಯಕ್ರಮಗಳು ಹಾಗೂ ವಸ್ತು ಪ್ರದರ್ಶನವನ್ನು ನೋಡಲು ಉಚಿತ ಅವಕಾಶ ಕಲ್ಪಿಸಲಾಗಿದೆ.
-ಡಾ.ಕೆ.ಸಿ.ಶಿವಾರೆಡ್ಡಿ, ತೇಜಸ್ವಿ ಅಧ್ಯಯನ ಕೇಂದ್ರದ ನಿರ್ದೇಶಕ