ಪ್ರಧಾನ ಮಂತ್ರಿ ಆವಾಸ್ ಯೋಜನೆ: ಹಾಸನದಲ್ಲಿ 2.5 ಕೋ. ರೂ. ಹಗರಣದ ಆರೋಪ

ಹಾಸನ,ಆ, 23: ಹಾಸನ ಜಿಲ್ಲೆಯಲ್ಲಿ 2.5 ಕೋಟಿ ರೂ. ಮೊತ್ತದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಗರಣ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಂಯುಕ್ತ ವಸತಿ ಯೋಜನೆ ಜನಸಾಮಾನ್ಯರ ಬದುಕಿಗೆ ಅಗತ್ಯವಾಗಿತ್ತು ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ 200 ಕ್ಕೂ ಹೆಚ್ಚು ಕುಟುಂಬಗಳು ಮನೆಯ ಕನಸುಗಳನ್ನು ಕಳೆದುಕೊಳ್ಳುವಂತಾಗಿದೆ.
ಕೇಂದ್ರ ಸರಕಾರವು 2017-18ರಲ್ಲಿ ದೇಶಾದ್ಯಂತ ಸರ್ವೇ ನಡೆಸಿ, ಮನೆ ಇಲ್ಲದ ಕುಟುಂಬಗಳ ದತ್ತಾಂಶ ಸಂಗ್ರಹಿಸಿತ್ತು. ಬಳಿಕ 2021-22ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಯಿತು.
ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ನಲ್ಲಿ ನೋಡಲ್ ಅಧಿಕಾರಿಯಾಗಿರುವ ರಾಜೇಶ್ ಎಂಬವರು ಮನೆ ನೀಡುವುದಾಗಿ ಹೇಳಿ ಜನರಿಂದ ಲಕ್ಷಾಂತರ ಹಣ ಸಂಗ್ರಹಿಸಿರುವ ಆರೋಪದ ಮೇಲೆ ಅವರ ವಿರುದ್ಧ ಮೊದಲು ಕೂಡ ಅವ್ಯವಹಾರ ಪ್ರಕರಣ ದಾಖಲಾಗಿದ್ದರೂ, ಬಳಿಕ ಬಿ ರಿಪೋರ್ಟ್ ಸಲ್ಲಿಕೆಯಾಗಿ ಪಾರಾಗಿದ್ದಾರೆ ಎನ್ನಲಾಗಿದೆ.
ಪಿಡಿಒ ಮತ್ತು ಇಒಗಳ ಯೂಝರ್ ಐಡಿ ಹಾಗೂ ಪಾಸ್ವರ್ಡ್‌ಗಳನ್ನು ತನ್ನ ಹೆಸರಿನಲ್ಲಿ ಮಾಡಿಕೊಂಡಿರುವ ರಾಜೇಶ್, ಸಂಪೂರ್ಣ ನಿಯಂತ್ರಣವನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಆಧಾರ್ ಆಧಾರಿತ ಬ್ಯಾಂಕ್ ಲಿಂಕ್ ವ್ಯವಸ್ಥೆಯನ್ನು ಬಳಸಿಕೊಂಡು, ಸರಕಾರಿ ಹಣವನ್ನು ನೇರವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ಈ ಹಗರಣ ಬಯಲಾಗಲು ಪ್ರಮುಖ ಕಾರಣ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಸರ್ಫಾರಾಝ್ ಖಾನ್ ಫೋನ್ ಸಂಭಾಷಣೆಯಾಗಿದೆ. ಇದರಲ್ಲಿ ‘‘ಮನೆ ಕೊಡಿಸಲು ಹಣ ಬೇಕು’’ ಎಂಬ ಹೇಳಿಕೆ ಕೇಳಿ ಬಿಆರ್ ಪಾಟೀಲ್ (ಯೋಜನಾ ಆಯೋಗದ ಅಧ್ಯಕ್ಷರು) ಸಾರ್ವಜನಿಕವಾಗಿ ತೀವ್ರ ಟೀಕೆ ಮಾಡಿದರು. ಇದರಿಂದ ಪ್ರಕರಣ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂತು ಎಂದು ಹೇಳಲಾಗಿದೆ.2023ರ ಏಪ್ರಿಲ್ 17ರಂದು ಹೊರಬಂದ ಸರಕಾರದ ಹೊಸ ಆದೇಶದ ಪ್ರಕಾರ, ತಾಲೂಕು ಪಂಚಾಯತ್‌ಇಓ ದಾಖಲಾತಿ ಪರಿಶೀಲಿಸಿದರೆ ಸಾಕು, ಜಿಲ್ಲಾ ಪಂಚಾಯಿತಿ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಸೂಚಿಸಲಾಯಿತು. ಇದನ್ನು ದುರುಪಯೋಗ ಮಾಡಿಕೊಂಡು ರಾಜೇಶ್ ಆನ್‌ಲೈನ್ ಮೂಲಕ ನೂರಾರು ದಾಖಲೆಗಳನ್ನು ಅನುಮೋದನೆ ಮಾಡಿಸಿಕೊಂಡಿದ್ದಾರೆ. 2.5 ಕೋಟಿ ರೂ. ಲಪಟಾಯಿಸಿದ್ದಾರೆೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಲೋಕಾಯುಕ್ತಕ್ಕೆ ದೂರು :
ಗಂಭೀರ ಬಹುಕೋಟಿ ಹಗರಣ ನಡೆದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ, ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡುತ್ತಿದ್ದೇನೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮೇಲ್ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಜಾಲವಿದೆ.
- ಲಕ್ಷ್ಮೀ ಕಾಂತ್, ವಕೀಲರು ಹಾಸನ.
ಡಿಸಿಗೆ ಮಾಹಿತಿಯೇ ಇಲ್ಲ :
ಈ ಹಗರಣದ ಬಗ್ಗೆ ವರದಿಗಾರರು ಡಿಸಿ ಲತಾ ಕುಮಾರಿ ಅವರನ್ನು ಪ್ರಶ್ನಿಸಿದಾಗ, ನಾನು ಪತ್ರಿಕೆಯಲ್ಲಿ ನೋಡಿದ್ದೇನೆ ಅಷ್ಟೇ. ಈ ಬಗ್ಗೆ ನನಗೆ ಈವರೆಗೆ ಯಾರೂ ಮಾಹಿತಿ ನೀಡಿಲ್ಲ. ಎಲ್ಲಿ ನಡೆದಿದೆಯೋ ಅವರನ್ನೇ ಕೇಳಿ ಎಂದರು.
ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ಅಧಿಕಾರಿಗಳು ಶಾಮಿಲಾಗಿಲ್ಲ. ರಾಜೇಶ್ ಬಹಳ ಸೂಕ್ಷ್ಮವಾಗಿ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಚಾಣಾಕ್ಷತನದಿಂದ ಅಕ್ರಮ ನಡೆಸಿದ್ದಾರೆೆ. ಯೂಸರ್ ಮತ್ತು ಪಾಸ್ವರ್ಡ್ ಗಳನ್ನ್ನು ಗೌಪ್ಯವಾಗಿ ಇರಿಸಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
-ಹೆಸರು ಹೇಳದ ಅಧಿಕಾರಿ
ಅಧಿಕಾರಿಗಳ ನಿರ್ಲಕ್ಷ್ಯ :
ಹೊಸದಾಗಿ ವರ್ಗಾವಣೆಯಾದ ಇಒ ಗಂಗಾಧರ್ ಹಾಗೂ ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ಚಂದ್ರಮೌರ್ಯ ಇಬ್ಬರೂ ತಮ್ಮ ಅಧಿಕಾರ ವ್ಯಾಪ್ತಿಯ ಯೂಝರ್ ಐಡಿ ಹಾಗೂ ಪಾಸ್ವರ್ಡ್‌ಗಳನ್ನು ಪಡೆದುಕೊಳ್ಳದೆ ನಿರ್ಲಕ್ಷ್ಯ ತೋರಿರುವುದು ದೊಡ್ಡ ತಪ್ಪಾಗಿದೆ ಎಂದು ಆಡಳಿತ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜೇಶ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ಫೋನ್ ಸ್ವಿಚ್ ಆಫ್ ಆಗಿದೆ. ಪ್ರಕರಣದ ತನಿಖೆಯು ಪ್ರಗತಿಯದ್ದು, ರಾಜೇಶ್ ಅವರನ್ನು ಶೀಘ್ರವೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು.
-ಜಗದೀಶ್( ಪ್ರಕರಣದ ತನಿಖಾಧಿಕಾರಿ), ಸರ್ಕಲ್ ಇನ್‌ಸ್ಪೆಕ್ಟರ್,ಸಕಲೇಶಪುರ.