ಜನಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸುವ ರಾಜಕಾರಣ!

ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು 30 ದಿನಗಳ ಕಾಲ ಜೈಲಿನಲ್ಲಿದ್ದರೆ ಅವರನ್ನು ಪದಚ್ಯುತಗೊಳಿಸಲು ಅವಕಾಶ ನೀಡುವ ಹೊಸ ಮಸೂದೆಯನ್ನು ಮೋದಿ ಸರಕಾರ ತಂದಿದೆ. ಈ ಮಸೂದೆ ಬಗ್ಗೆ ತೀವ್ರ ತಕರಾರುಗಳು ಮತ್ತು ಚರ್ಚೆ ಜೋರಾಗಿರುವ ಈ ಹೊತ್ತಿನಲ್ಲಿ, ಈ ಹಿಂದೆ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ವಿವಿಧ ಪ್ರಕರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಬೇಕಾಗಿ ಬಂದದ್ದರ ಬಗ್ಗೆ ನೆನಪಿಸಿಕೊಳ್ಳಬಹುದು.
ಜೆ. ಜಯಲಲಿತಾ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಬೇಕಾಯಿತು. 1991 ಮತ್ತು 2016ರ ನಡುವೆ ಹಲವಾರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಜಯಲಲಿತಾ ಅವರನ್ನು 1996ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಯಿತು. 2014ರಲ್ಲಿ ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ, 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ತೀರ್ಪಿನಿಂದಾಗಿ ಅವರು ಮುಖ್ಯಮಂತ್ರಿ ಸ್ಥಾನ ಮತ್ತು ತಮಿಳುನಾಡಿನ ಶಾಸಕಾಂಗ ಸಭೆಯಿಂದ ಅನರ್ಹರಾದರು. ಮತ್ತು ಹೀಗೆ ಅನರ್ಹಗೊಂಡ ದೇಶದ ಮೊದಲ ಹಾಲಿ ಮುಖ್ಯಮಂತ್ರಿಯಾದರು. 2015ರಲ್ಲಿ ಕರ್ನಾಟಕ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಇದರಿಂದಾಗಿ ಅವರು ತಮ್ಮ ಹುದ್ದೆಯನ್ನು ಮರಳಿ ಪಡೆದರು. ಆದರೆ, ಕರ್ನಾಟಕ ಸರಕಾರ ಅವರ ಖುಲಾಸೆಯನ್ನು ಪ್ರಶ್ನಿಸಿತು ಮತ್ತು 2017ರಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು. ಆದರೆ, ತೀರ್ಪಿಗೆ ಮುನ್ನವೇ ಜಯಲಲಿತಾ ನಿಧನರಾಗಿದ್ದರು. ಹಾಗಾಗಿ ಅವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲಾಯಿತು.
ಓಂ ಪ್ರಕಾಶ್ ಚೌಟಾಲ
ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರು 2000ದ ದಶಕದ ಆರಂಭದಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರು. 2013ರಲ್ಲಿ ಅವರು ಮತ್ತು ಅವರ ಮಗ ಅಜಯ್‌ರನ್ನು ವಂಚನೆ ಮತ್ತು ನಕಲಿ ಸೇರಿದಂತೆ ವಿವಿಧ ಆರೋಪ ಸಾಬೀತಾಗಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2015ರಲ್ಲಿ ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಅವರ ಶಿಕ್ಷೆಯನ್ನು ಎತ್ತಿಹಿಡಿದವು. ಓಂ ಪ್ರಕಾಶ್ ಚೌಟಾಲ ಮಾಜಿ ಉಪ ಪ್ರಧಾನಿ ಚೌಧರಿ ದೇವಿ ಲಾಲ್‌ರ ಪುತ್ರ, ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ)ದ ವರಿಷ್ಠರಾಗಿದ್ದರು. ಜುಲೈ 24, 1999ರಿಂದ ಮಾರ್ಚ್ 5, 2005ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಆಸ್ತಿ ಸಂಗ್ರಹಿಸಿದ್ದಕ್ಕಾಗಿ 2022ರಲ್ಲಿಯೂ ಚೌಟಾಲ ಶಿಕ್ಷೆಗೊಳಗಾಗಿದ್ದರು. ಆದರೆ, ಆ ಪ್ರಕರಣದಲ್ಲಿ ಅವರಿಗೆ ನೀಡಲಾದ ನಾಲ್ಕು ವರ್ಷಗಳ ಶಿಕ್ಷೆಯನ್ನು ದಿಲ್ಲಿ ಹೈಕೋರ್ಟ್ 2022ರಲ್ಲಿ ರದ್ದುಗೊಳಿಸಿತು.
ಚಂದ್ರಬಾಬು ನಾಯ್ಡು
ಕೌಶಲ್ಯ ಅಭಿವೃದ್ಧಿ ನಿಗಮದಿಂದ ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟಂಬರ್ 9, 2023ರಂದು ಬಂಧಿಸಲಾಯಿತು. 371 ಕೋಟಿ ರೂ.ಗಳನ್ನು ಅಕ್ರಮವಾಗಿ ಬಳಸಿಕೊಂಡ ಆರೋಪ ಹೊರಿಸಲಾಯಿತು. 52 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅವರನ್ನು ಅಕ್ಟೋಬರ್ 31, 2023ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 1995ರಿಂದ 1999, 1999 ರಿಂದ 2004, 2014ರಿಂದ 2019ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವರು, ಈಗ 2024ರಿಂದ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ.
ಬಿ.ಎಸ್. ಯಡಿಯೂರಪ್ಪ
ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅಕ್ಟೋಬರ್ 15, 2011ರಂದು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿಸಲಾಯಿತು. ಬೆಂಗಳೂರು ಮತ್ತು ಸುತ್ತಮುತ್ತಲಿನ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಕ್ಕಾಗಿ ಲೋಕಾಯುಕ್ತ ನ್ಯಾಯಾಲಯ ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಬಂಧನ ವಾರಂಟ್ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಲಾಯಿತು. 23 ದಿನಗಳ ಜೈಲುವಾಸದ ನಂತರ, ನವೆಂಬರ್ 8, 2011ರಂದು ಜಾಮೀನು ನೀಡಲಾಯಿತು. ಗಣಿಗಾರಿಕೆಗೆ ಸಂಬಂಧಿಸಿದಂತೆಯೂ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತಾದರೂ, ಮಾರ್ಚ್ 2012ರಲ್ಲಿ ಕರ್ನಾಟಕ ಹೈಕೋರ್ಟ್ ಅದನ್ನು ರದ್ದುಗೊಳಿಸಿತು.
ಎಸ್. ಬಂಗಾರಪ್ಪ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಪಿ.ಸಿ. ಡೆಂಟಲ್ ಕಾಲೇಜು ಹಗರಣದಲ್ಲಿ 2012ರಲ್ಲಿ ಸಿಬಿಐ ನ್ಯಾಯಾಲಯ ದೋಷಿ ಎಂದು ಹೇಳಿತು. ಅಕ್ರಮವಾಗಿ ಮಾನ್ಯತೆ ನೀಡಿದ ಆರೋಪಕ್ಕಾಗಿ ಅವರಿಗೆ ಒಂದು ವರ್ಷ ಜೈಲು ಮತ್ತು ರೂ. 10 ಲಕ್ಷ ದಂಡ ವಿಧಿಸಲಾಗಿತ್ತು. ಆದರೆ, ತೀರ್ಪಿನ ನಂತರ ತಕ್ಷಣವೇ ಜಾಮೀನು ಪಡೆದಿದ್ದರಿಂದ ಅವರು ಜೈಲಿಗೆ ಹೋಗಲಿಲ್ಲ. ಅವರ ಮೇಲ್ಮನವಿ ವಿಚಾರಣೆ ಬಾಕಿ ಇರುವಾಗಲೇ ಅವರು ನಿಧನರಾದರು.
ಎಂ. ಕರುಣಾನಿಧಿ
ತಮಿಳುನಾಡಿನ ಐದು ಬಾರಿಯ ಮುಖ್ಯಮಂತ್ರಿ ಎಂ. ಕರುಣಾನಿಧಿಯವರನ್ನು ಜೂನ್ 2001ರಲ್ಲಿ ಮಧ್ಯರಾತ್ರಿ ನಾಟಕೀಯವಾಗಿ ಬಂಧಿಸಲಾಯಿತು. ಪ್ರತಿಸ್ಪರ್ಧಿ ಜಯಲಲಿತಾ ಅಧಿಕಾರಕ್ಕೆ ಬಂದ ಕೂಡಲೇ, ಚೆನ್ನೈ ಮೇಲ್ಸೇತುವೆ ನಿರ್ಮಾಣದಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಮನೆಯಿಂದ ಎಳೆದೊಯ್ಯಲಾಯಿತು. ಈ ದೃಶ್ಯಗಳು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದವು. ರಾಜಕೀಯ ಸೇಡಿನ ಕ್ರಮವೆಂದು ವ್ಯಾಪಕವಾಗಿ ಪರಿಗಣಿಸಲಾದ ಈ ಪ್ರಕರಣದಿಂದ ಅವರು ನಂತರದ ದಿನಗಳಲ್ಲಿ ಖುಲಾಸೆಗೊಂಡರು.
ಶೇಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಪ್ರಧಾನಿಯಾಗಿದ್ದ ಶೇಕ್ ಅಬ್ದುಲ್ಲಾ ಅವರು ಸುದೀರ್ಘ ಜೈಲುವಾಸ ಅನುಭವಿಸಿದರು. ಭಾರತದ ವಿರುದ್ಧ ಪಿತೂರಿ ನಡೆಸಿದ ಆರೋಪದ ಮೇಲೆ 1953ರಲ್ಲಿ ಕೇಂದ್ರ ಸರಕಾರ ಅವರನ್ನು ವಜಾಗೊಳಿಸಿ ಬಂಧಿಸಿತು. 1964ರಲ್ಲಿ ಬಿಡುಗಡೆಯಾಗುವ ಮುನ್ನ ಅವರು ಹನ್ನೊಂದು ವರ್ಷಗಳ ಕಾಲ ಜೈಲಿನಲ್ಲಿದ್ದರು.
ಜೈಲು ಶಿಕ್ಷೆ ಅನುಭವಿಸಿದ್ದ ಕರ್ನಾಟಕದ ಮಂತ್ರಿಗಳು ಅಥವಾ ಮಾಜಿ ಮಂತ್ರಿಗಳೆಂದರೆ,
ಜನಾರ್ದನ ರೆಡ್ಡಿ, ಡಿ.ಕೆ. ಶಿವಕುಮಾರ್, ಬಿ. ನಾಗೇಂದ್ರ, ಎಚ್.ಡಿ. ರೇವಣ್ಣ ಹಾಗೂ ಹಾಲಿ ಹಾಗೂ ಮಾಜಿ ಕೇಂದ್ರ ಮಂತ್ರಿಗಳಲ್ಲಿ ಅನೇಕರು ಜೈಲು ಶಿಕ್ಷೆ ಕಂಡಿದ್ದಾರೆ. ಅಂಥವರಲ್ಲಿ ಮುಖ್ಯವಾಗಿ, ಅಮಿತ್ ಶಾ, ಎಲ್.ಕೆ. ಅಡ್ವಾಣಿ, ಬಂಗಾರು ಲಕ್ಷ್ಮಣ್, ಎ. ರಾಜ, ಪಿ. ಚಿದಂಬರಂ, ಜಾರ್ಜ್ ಫೆರ್ನಾಂಡಿಸ್, ಸುರೇಶ್ ಕಲ್ಮಾಡಿ, ಸುಖ್ ರಾಮ್ ಇವರಲ್ಲದೆ, ಅನಿಲ್ ದೇಶಮುಖ್, ನವಾಬ್ ಮಲಿಕ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್, ಆಝಂ ಖಾನ್, ಕನಿಮೊಳಿ, ಅತೀಕ್ ಅಹ್ಮದ್, ಮುಹಮ್ಮದ್ ಶಹಾಬುದ್ದೀನ್ ಮತ್ತು ಪಪ್ಪು ಯಾದವ್ ಅವರಂತಹ ಅನೇಕ ಪ್ರಭಾವಿ ನಾಯಕರು ವಿವಿಧ ಆರೋಪಗಳ ಮೇಲೆ ಬಂಧನ ಮತ್ತು ಜೈಲುವಾಸವನ್ನು ಅನುಭವಿಸಿದ್ದಾರೆ.