ಅನೈರ್ಮಲ್ಯದಿಂದ ಕೂಡಿದ ಯಾದಗಿರಿಯ ಪರಸಪುರ ಸರಕಾರಿ ಶಾಲೆ ಆವರಣ
ಮೂಲ ಸೌಕರ್ಯ, ಸ್ವಚ್ಛತೆಗೆ ಪೋಷಕರು, ಗ್ರಾಮಸ್ಥರ ಆಗ್ರಹ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಹೈಯಾಳ (ಬಿ) ಹೋಬಳಿಯ ಪರಸಪುರ ಗ್ರಾಮದಲ್ಲಿರುವ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಆವರಣ ದನಗಳ ದೊಡ್ಡಿಯಾಗಿ ಪರಿವರ್ತನೆಯಾಗಿದೆ ಮತ್ತು ಮೂಲಭೂತ ಸೌಲಭ್ಯಗಳಿಂದ ಇದು ವಂಚಿತವಾಗಿದೆ ಎಂದು ಗ್ರಾಮಸ್ಥರು, ಪೋಷಕರ ಆರೋಪವಾಗಿದೆ.
ಮಕ್ಕಳಿಗೆ ಶಾಲೆಯಲ್ಲಿ ಓದಿನ ಜೊತೆಗೆ ಆಟಪಾಠಗಳು ಕೂಡ ಬಹಳ ಪ್ರಾಮುಖ್ಯತೆ ಇದೆ. ಆದರೆ ಈ ಗ್ರಾಮದ ಮಕ್ಕಳಿಗೆ ಆಟವಾಡಬೇಕಾದ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ಗೋವುಗಳನ್ನು ಶಾಲೆಯ ಆವರಣದಲ್ಲಿ ಕಟ್ಟಿ ಹಾಕುವುದರಿಂದ ಆವರಣದ ತುಂಬಾ ಗೋವುಗಳ ಸಗಣಿ ಮತ್ತು ಗಂಜಲದಿಂದ ಕೂಡಿದ್ದು, ವಿದ್ಯಾಭ್ಯಾಸ ಮಾಡಲು ಬರುವ ಶಾಲಾ ಮಕ್ಕಳಿಗೆ ಇಲ್ಲಿಯ ವಾತಾವರಣ ಓದಿಗೆ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮದ ಸಾರ್ವಜನಿಕರ ಆರೋಪವಾಗಿದೆ.
ಶಾಲೆಯ ಶೈಕ್ಷಣಿಕ ಚಟುವಟಿಕೆಗಳು, ಮೂಲಸೌಕರ್ಯ, ಮತ್ತು ಇತರ ಕಾರ್ಯನಿರ್ವಹಣೆಗಳನ್ನು ಗಮನಿಸುವುದು ಮತ್ತು ಅಗತ್ಯವಿರುವ ಸುಧಾರಣೆಗಳನ್ನು ಕ್ರಮವಹಿಸುವುದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ಪಾತ್ರ. ಆದರೆ ಇಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಕಂಡು ಕಾಣದಂತೆ ಇದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲೆಗೆ ಸುತ್ತಲೂ ಕಾಂಪೌಂಡ್ ಇಲ್ಲ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶಾಲೆಗೆ ಭೇಟಿ ನೀಡಿ ಶಾಲೆಯ ಮಕ್ಕಳಿಗೆ ಮೂಲ ಸೌಕರ್ಯಗಳ ಜೊತೆಗೆ ಶಿಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿದಿನ ನಾವು ಶಾಲೆಯ ಒಳಗಡೆ ಹೋಗುವಾಗ ಸೆಗಣಿ ತುಳಿದುಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಆಟವಾಡಲು ಜಾಗವಿಲ್ಲ. ನಮಗೆ ಆಟವಾಡಲು ಸುಂದರವಾದ ಆವರಣ ನಿರ್ಮಾಣ ಮಾಡಿಕೊಡಬೇಕು.
-ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿ
ಶಾಲಾ ಆವರಣದಲ್ಲಿ ಜಾನುವಾರುಗಳನ್ನು ಕಟ್ಟಿಹಾಕುವುದರಿಂದ ಬೆಳಗ್ಗೆ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಮಾಡಲು ಸಮಸ್ಯೆಯಾಗಿದೆ. ಈ ಕೂಡಲೇ ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಂದಾಗಲಿ.
-ನಿಂಗಪ್ಪ, ಪರಸಪುರ ಗ್ರಾಮಸ್ಥ
ಪ್ರತಿದಿನ ಸರಕಾರಿ ಶಾಲೆಯ ಆವರಣದಲ್ಲಿ ಖಾಸಗಿಯವರು ದನಗಳನ್ನು ಕಟ್ಟಿ ಹಾಕುವುದರಿಂದ ಶಾಲೆಯ ಮಕ್ಕಳಿಗೆ ಓದಲು ಮತ್ತು ಆಟವಾಡಲು ತೊಂದರೆಯಾಗುತ್ತಿದೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ದನಗಳನ್ನು ಕಟ್ಟಿ ಹಾಕುವವರಿಗೆ ಎಚ್ಚರಿಕೆ ನೀಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು.
-ವೆಂಕಟೇಶ, ಪರಸಪುರ ಗ್ರಾಮಸ್ಥ
ಯಾದಗಿರಿ ಜಿಲ್ಲೆಯ ಹೈಯಾಳ (ಬಿ) ಹೋಬಳಿಯ ಪರಸಪುರ ಗ್ರಾಮದಲ್ಲಿ ರುವ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ಕಾಂಪೌಂಡ್ ಇಲ್ಲ. ಹೀಗಾಗಿ ಗ್ರಾಮದ ಕೆಲವರು ಜಾನುವಾರುಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಈ ಶಾಲೆಯ ಸುತ್ತಲೂ ಮೊದಲು ಕಾಂಪೌಂಡ್ ನಿರ್ಮಾಣ ಮಾಡಿದರೆ ಇಲ್ಲಿ ಯಾರು ಜಾನುವಾರುಗಳನ್ನು ಕಟ್ಟುವುದಿಲ್ಲ.ಕೂಡಲೇ ಕಾಂಪೌಂಡ್ ವ್ಯವಸ್ಥೆ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ.
-ವೆಂಕಪ್ಪದೊರೆ, ಪರಸಪುರ ಗ್ರಾಮ ಪಂಚಾಯತ್ ಸದಸ್ಯ