ಮೇಲಾಜಿಪುರದ ಶಿವಬಸವ ಸ್ವಾಮೀಜಿಯ ಸಾವಯವ ಕೃಷಿ

ಚಾಮರಾಜನಗರ, ಆ.31: ಜಿಲ್ಲೆಯ ಬದನಗುಪ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲಾಜಿಪುರ ಗ್ರಾಮದಲ್ಲಿರುವ ಬಸವಾನುಭವ ಮಂಟಪದ ಶಿವಬಸವ ಸ್ವಾಮೀಜಿ ಸಾವಯವ ಕೃಷಿಯತ್ತ ಒಲವು ತೋರಿದ್ದಾರೆ.
ಮೇಲಾಜಿಪುರ ಗ್ರಾಮದ ಹೊರ ವಲಯದಲ್ಲಿರುವ ಒಂದು ಎಕರೆ ಜಮೀನಿನಲ್ಲಿ ಬಸವಾನುಭವ ಮಂಟಪವಿದ್ದು, ಇಲ್ಲಿ ವಿಷ ಮುಕ್ತ ಆಹಾರ ಬೆಳೆಯಲಾಗುತ್ತಿದೆ. ಎಂಟು ವರ್ಷಗಳಿಂದ ಸಾವಯವ ಕೃಷಿ ಆರಂಭಿಸಿ, ಬಾಳೆ, ಚೆಂಬೆ, ಸೆಣಬು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ.
ಜೋಳ, ಮುಸುಕಿನಜೋಳ, ರಾಗಿ, ಸಾಸಿವೆ, ಮೆಂತ್ಯೆ, ಎಳ್ಳು ಬೆಳೆದಿದ್ದಾರೆ. 70 ತೆಂಗಿನ ಗಿಡಗಳಿವೆ. ಇವುಗಳ ಮಧ್ಯೆ ಮೂಸಂಬಿ, ಸೀಬೆ, ಅಂಜೂರ, ಲಿಚ್ಚಿ, ವಾಟರ್ ಆ್ಯಪಲ್, ಲಿಂಬೆ, ಸೀತಾಫಲ, ರಾಂಬೂಟನ್, ಬೆಣ್ಣೆ ಹಣ್ಣು, ದಾಳಿಂಬೆ, ವಿವಿಧ ತಳಿಗಗಳ ಹಲಸು ಮತ್ತು ಮಾವಿನ ಗಿಡಗಳನ್ನು ಬೆಳೆದಿದ್ದರೂ ಯಾವುದಕ್ಕೂ ಒಂದು ಹನಿ ರಾಸಾಯನಿಕ ಔಷಧಿಯಾಗಲಿ, ಒಂದು ಹಿಡಿ ರಾಸಾಯನಿಕ ಗೊಬ್ಬರವನ್ನಾಗಲಿ ಹಾಕದೇ ಬೆಳೆಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ಪ್ರಯತ್ನಗಳನ್ನು ಮಾಡಬೇಕೆಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಟಿ ಹಸುಗಳ ಸಾಕಾಣೆ, ಸಾವಯವ ದ್ರಾವಣಗಳ ತಯಾರಿಕೆ, ಬೆಳೆದ ಬೆಳೆಗಳ ಮೌಲ್ಯವರ್ಧನೆ ಮಾಡುವುದು, ಸ್ವಂತ ಬಳಕೆ ಮತ್ತು ಮಾರುಕಟ್ಟೆಗೂ ಕಳುಹಿಸಿಕೊಡಲು ಯೋಜನೆ ಹಾಕಿಕೊಂಡಿದ್ದಾರೆ.
ಇದರ ಪೂರ್ವ ತಯಾರಿಯಾಗಿ ಈಗಾಗಲೇ ತಾವೇ ಬೆಳೆದ ಕೊಬ್ಬರಿಯಿಂದ ಎಣ್ಣೆ ತೆಗೆದು ಬಳಕೆ ಮಾಡುತ್ತಿದ್ದಾರೆ. ಯುವ ರೈತರಿಗೆ ಸಾವಯವ ಕೃಷಿ ಮಾಡಲು ಪ್ರೇರಣೆ ನೀಡುತ್ತಿದ್ದಾರೆ.
ಸಾವಯವ ಕೃಷಿಯಿಂದ ಸೂಕ್ಷಾಣುಜೀವಿಗಳ ನಾಶ ಆಗುವುದಿಲ್ಲ. ಮನುಷ್ಯನ ಆರೋಗ್ಯವೂ ಚೆನ್ನಾಗಿರುತ್ತದೆ. ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ ನೈಸರ್ಗಿಕ ವಿಧಾನವೇ ನಿಜವಾದ ಕೃಷಿ.
-ಶಿವಬಸವ ಸ್ವಾಮೀಜಿ, ಬಸವಾನುಭವ ಮಂಟಪ, ಮೇಲಾಜಿಪುರ, ಚಾಮರಾಜನಗರ ತಾಲೂಕು