ಎಫ್ಆರ್ಎಸ್ ಪ್ರಗತಿ ಸಾಧಿಸದ ಅಂಗನವಾಡಿ ಕಾರ್ಯಕರ್ತೆಯರಿಗೆ ನೋಟಿಸ್: ಆರೋಪ

ಸಾಂದರ್ಭಿಕ ಚಿತ್ರ
ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸಲು ಫಲಾನುಭವಿಗಳ ಆಧಾರ್ಲಿಂಕ್ ಆಧಾರಿತ ಅವರ ಮುಖಚಹರೆ ಗುರುತಿಸುವ ಎಫ್ಆರ್ಎಸ್ ಪದ್ಧತಿಯಲ್ಲಿ ಪ್ರಗತಿ ಸಾಧಿಸದ ಅಂಗನವಾಡಿ ಕಾರ್ಯಕರ್ತೆಯರಿಗೆ ನೋಟಿಸ್ ಭೀತಿ ಎದುರಾಗಿದೆ.
ಹಿಂದೆ ಅಂಗನವಾಡಿಗೆ ಬರುವ ಫಲಾನುಭವಿಗಳನ್ನು ಆಧಾರ್ ನಂಬರ್ ಸಹಿತ ಮೊಬೈಲ್ನಲ್ಲಿ ಮಾಹಿತಿ ದಾಖಲಿಸಿ ಆಹಾರ ವಿತರಿಸುತ್ತಿದ್ದರು. ಆದರೆ ಈಗ ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಫಲಾನುಭವಿಗಳ ಆಧಾರ್ ಲಿಂಕ್ ಆಧಾರಿತ ಮೊಬೈಲ್ಗಳಿಂದ ಒಟಿಪಿ ಪಡೆದು ಕೆವೈಸಿಮಾಡಿ ಫೋಟೊ ಕ್ಲಿಕ್ ಮಾಡಿದ ನಂತರ ಆಹಾರ ವಿತರಣೆ ಮಾಡಬೇಕಾಗಿದೆ. ಇದರಿಂದ ಅನೇಕ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಆರೋಪವಾಗಿದೆ.
ಬಹುತೇಕ ಫಲಾನುಭವಿಗಳು ಆಧಾರ್ ಲಿಂಕ್ ಹೊಂದದ ಮೊಬೈಲ್ ಸಂಖ್ಯೆ ಇರುವುದವರು ಸರಕಾರದ ಅಂಗನವಾಡಿಯ ಯೋಜನೆಯಿಂದ ಹೊರಗುಳಿಯಬೇಕಾಗುತ್ತದೆ. ಇನ್ನೂ ನೆಟ್ವರ್ಕ್ ಸಮಸ್ಯೆಯಿಂದ ಫಲಾನುಭವಿಗಳ ದಾಖಲೆಯ ಮತ್ತು ಮುಖಚಹರೆಯನ್ನು ಗುರುತಿಸಿ ಅಪ್ಲೋಡ್ ಮಾಡಲು ವಿಳಂಬ ಮತ್ತು
ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದುದ್ದರಿಂದ ಪ್ರಗತಿ ಸಾಧಿಸದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡುವುದರಿಂದ ನಮ್ಮ ಕೆಲಸ ಕೂಡ ಕಳೆದುಕೊಳ್ಳುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.
ಇತ್ತೀಚೆಗೆ ರಾಜ್ಯದ ಅನೇಕ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಎಫ್ಆರ್ಎಸ್ ಪದ್ಧತಿಯಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೆಲಸ ಕಳೆದುಕೊಳ್ಳಬಹುದು ಆದ್ದರಿಂದ ಸಂಪೂರ್ಣವಾಗಿ ಮುಖ ಚಹರೆಯನ್ನು ಗುರುತಿಸುವ ಎಫ್ಆರ್ಎಸ್ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ನೋಟಿಸ್ನಲ್ಲಿ ಏನಿದೆ?
ಪೋಷಣ್ ಟ್ರ್ಯಾಕರ್ ತಂತ್ರಾಂಶದಲ್ಲಿ ಎಫ್ಆರ್ಎಸ್ ಪದ್ಧತಿಯನ್ನು ಪರಿಣಾಮಕಾರಿ ಅನುಷ್ಠಾನದ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ, ಬ್ಲಾಕ್ ಸಭೆ ಹಾಗೂ ದೂರವಾಣಿಗಳಲ್ಲಿ ಕೂಡ ಎಫ್ಆರ್ಎಸ್ ಪದ್ಧತಿಯಲ್ಲಿ ಪ್ರಗತಿ ಸಾಧಿಸಲು ಸೂಚಿಸಲಾಗಿತ್ತು. ಆದರೆ ಎಫ್ಆರ್ಎಸ್ ಪದ್ಧತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸದೇ ಇರುವುದರಿಂದ ನಿಮ್ಮ ಕೆಲಸದಲ್ಲಿ ಆಸಕ್ತಿ ತೋರದೇ, ಬೇಜವಬ್ದಾರಿಯಿಂದ ವರ್ತಿಸುವುದು ಸಾಬೀತಾಗುತ್ತದೆ. ಅದಕ್ಕೆ ಕಾರಣವೇನು ಎಂದು ನೋಟಿಸ್ ತಲುಪಿದ 24 ಗಂಟೆಯಲ್ಲಿ ಉತ್ತರವನ್ನು ಲಿಖಿತ ರೂಪದಲ್ಲಿ ಕಚೇರಿಗೆ ಸಲ್ಲಿಸಬೇಕು. ನಿಗದಿತ ಸಮಯದಲ್ಲಿ ಬಾರದೇ ಇದ್ದಲ್ಲಿ ನಿಮ್ಮ ಉತ್ತರ ಏನು ಇಲ್ಲವೆಂದು ತಿಳಿದು, ನಿಯಮಾನುಸಾದ ನಿಮ್ಮ(ಅಂಗನವಾಡಿ) ಮೇಲೆ ಸೂಕ್ತ ಕ್ರಮವಹಿಸುವ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡಿದ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಅಂಗನವಾಡಿಗೆ ಬರುವ ಫಲಾನುಭವಿಗಳಿಗೆ ಆಹಾರ ವಿತರಣೆ ಮಾಡಲು ಮುಖಚಹರೆ ತೆಗೆದುಕೊಳ್ಳಬೇಕು. ಫಲಾನುಭವಿ ಕಾರಣಾಂತರಗಳಿಂದ ಬರದಿದ್ದರೆ, ಆ ಯೋಜನೆಯಿಂದ ವಂಚಿತರಾಗುತ್ತಾರೆ. ಆಧಾರ್ ಲಿಂಕ್ ಇರುವ ಮೊಬೈಲ್ ಇರಲೇಬೇಕು. ಮೊಬೈಲ್ಗೆ ಒಟಿಪಿ ಬಂದ ಮೇಲೆ ಆಹಾರ ವಿತರಣೆ ಮಾಡಬೇಕು.
-ಬಿ.ಅಮ್ಜದ್, ರಾಜ್ಯಾಧ್ಯಕ್ಷ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್
ಎಫ್ಆರ್ಎಸ್ ಪದ್ಧತಿ ಕುರಿತು ಹಲವು ಅಂಗನವಾಡಿ ಕಾರ್ಯಕರ್ತೆಯರಿಗೆ ನೋಟಿಸ್ ನೀಡಲಾಗಿದೆ. ಕೂಡಲೇ ನೋಟಿಸ್ ಕೊಡುವುದನ್ನು ನಿಲ್ಲಿಸಬೇಕು. ಎಫ್ಆರ್ಎಸ್ ಕೇಂದ್ರ ಸರಕಾರ ಒಂದು ಕಾರ್ಯಕ್ರಮವಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಅದು ಫಲಾನುಭವಿಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಎಫ್ಆರ್ಎಸ್ನ್ನು ಸಂಪೂರ್ಣ ರದ್ದುಗೊಳಿಸಬೇಕು.
-ಎಸ್.ವರಲಕ್ಷ್ಮೀ, ಅಧ್ಯಕ್ಷೆ, ಅಖಿಲ ಕರ್ನಾಟಕ ಅಂಗನವಾಡಿ ನೌಕರರ ಸಂಘ