ಮಲೆನಾಡಿನ ಮುರುಗನಹುಳಿಗೆ ಕೇರಳದಲ್ಲಿ ಭಾರೀ ಬೇಡಿಕೆ
ಅವಸಾನದ ಅಂಚಿಗೆ ಸರಿಯುತ್ತಿರುವ ಔಷಧೀಯ ಗುಣವುಳ್ಳ ಅರಣ್ಯ ಉತ್ಪನ್ನ

ಚಿಕ್ಕಮಗಳೂರು: ಕಾಫಿನಾಡು ಸಾವಿರಾರು ಅರಣ್ಯ ಉತ್ಪನ್ನಗಳ ಬೀಡಾಗಿದೆ. ಈ ಪೈಕಿ ಮುರುಗನ ಹುಳಿಯೂ ಒಂದು. ಔಷಧೀಯ ಗುಣವುಳ್ಳ ಈ ಹುಳಿಯನ್ನು ಕಾಫಿನಾಡಿನಲ್ಲಿ ಮಾಂಸಾಹಾರ ತಯಾರಿಗೆ ಬಳಸಲಾಗುತ್ತಿದ್ದು, ಕೇರಳ ರಾಜ್ಯದಲ್ಲಿ ಈ ಹುಳಿಗೆ ಭಾರೀ ಬೇಡಿಕೆ ಇದೆ.
ಮುರುಗನಹುಳಿ ಹಲವಾರು ಔಷಧೀಯ ಗುಣವುಳ್ಳ ಅರಣ್ಯ ಉತ್ಪನ್ನವಾಗಿದೆ. ಪ್ರಮುಖವಾಗಿ ಈ ಹುಳಿಯನ್ನು ಮೀನು ಸಾರು ಹಾಗೂ ಮಾಂಸಾಹಾರ ತಯಾರಿಸಲು ಲಿಂಬೆಹಣ್ಣು, ಹುಣಸೇಹಣ್ಣಿನಂತಹ ಹುಳಿಗಳಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಅಲ್ಲದೇ ಆಯುರ್ವೇದ ಔಷಧಿ ತಯಾರಿಕೆಗೂ ಬಳಸಲಾಗುತ್ತಿದೆ.
ಸಾಮಾನ್ಯವಾಗಿ ಲಿಂಬೆಹಣ್ಣು ಹಾಗೂ ಹುಣಸೇಹಣ್ಣನ್ನು ಮಾಂಸಾಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಹುಳಿ ಪದಾರ್ಥಗಳನ್ನು ಅಡುಗೆಗೆ ಬಳಸುವುದರಿಂದ ಗ್ಯಾಸ್ಟ್ರಿಕ್, ಆಸಿಡಿಟಿಯಂತಹ ಅಡ್ಡಪರಿಣಾಮ ಬೀರುವ ಕಾರಣಕ್ಕೆ ಕರ್ನಾಟಕದ ಮಲೆನಾಡು ಭಾಗದಲ್ಲಿ ಮತ್ತು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಲಿಂಬೆಹಣ್ಣು, ಹುಣಸೇಹಣ್ಣಿನ ಬದಲಾಗಿ ಮಾಂಸಾಹಾರದ ಅಡುಗೆಗೆ ಸಂಸ್ಕರಿಸಿದ ಮುರುಗನಹುಳಿ ರಸವನ್ನು ಬಳಸಲಾಗುತ್ತದೆ. ಯಾವುದೇ ಅಡ್ಡ ಪರಿಣಾಮ ಬೀರದ ಹುಳಿಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದರೂ ಬೇಡಿಕೆಗೆ ತಕ್ಕಂತೆ ಈ ಅರಣ್ಯ ಉತ್ಪನ್ನದ ಪೂರೈಕೆ ಇಲ್ಲದಂತಾಗಿದೆ.
ಮುರುಗನಹುಳಿ ಮರ ಮಲೆನಾಡು ಭಾಗದ ದಟ್ಟ ಅರಣ್ಯಗಳಲ್ಲಿ ಸಹಜವಾಗಿ ಬೆಳೆಯುವ ಮರವಾಗಿದೆ. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುರುಗನಹುಳಿ ಮರಗಳು ಯಥೇಚ್ಛವಾಗಿ ಬೆಳೆಯುತ್ತವೆ. ಜೂನ್, ಜುಲೈ ತಿಂಗಳಲ್ಲಿ ಹಣ್ಣಾಗಿ ಮರದಿಂದ ಉದುರುವ ಮುರುಗನಹುಳಿಯನ್ನು ಸಂಗ್ರಹಿಸುವ ಗಿರಿಜನರು ಹಣ್ಣನ್ನು ಒಡೆದು ಬೀಜಗಳಿಂದ ಬೇರ್ಪಡಿಸಿ ಸಿಪ್ಪೆಯನ್ನು ಬೆಂಕಿಯ ಹೊಗೆಯಲ್ಲಿ ಒಣಗಿಸಿದ ನಂತರ ಮಾರಾಟ ಮಾಡುತ್ತಾರೆ. ಈ ಹಿಂದೆ ಪ್ರತೀ ಕೆಜಿ ಮುರುಗನಹುಳಿಗೆ 20-40 ರೂ. ಇತ್ತು. ಸದ್ಯ ಮಾರುಕಟ್ಟೆಯಲ್ಲಿ ಪ್ರತೀ ಕೆಜಿಗೆ 80-120ರೂ. ಬೆಲೆ ಇದೆ.
ಮಲೆನಾಡಿನಲ್ಲಿ ಸದ್ಯ ಎಲ್ಲ ಸಮುದಾಯದ ಜನತೆ ಮುರುಗನಹುಳಿಯನ್ನು ಅಡುಗೆಯಲ್ಲಿ ಬಳಸುತ್ತಿದ್ದಾರೆ. ಮಾಂಸಾಹಾರಿಗಳು ಮಾತ್ರ ಈ ಹುಳಿಯನ್ನು ಮೀನು ಸಾರು ಮತ್ತು ಮಾಂಸಾಹಾರದ ಅಡುಗೆಗೆ ಬಳಸುತ್ತಿದ್ದಾರೆ. ಅರಣ್ಯದಲ್ಲಿ ಸಂಗ್ರಹಿಸಿದ ಮುರುಗನಹುಳಿಯನ್ನು ಮನೆ ಬಳಕೆಗೆ ಬೇಕಾಗುವಷ್ಟು ಸಂಸ್ಕರಿಸಿ ಹುಳಿ ರಸ ಇಟ್ಟುಕೊಳ್ಳುವ ಮಲೆನಾಡಿನ ಮಂದಿ ಬಾಕಿ ಹುಳಿಯನ್ನು ಒಣಗಿಸಿ ಮಾರಾಟ ಮಾಡುತ್ತಾರೆ. ಸದ್ಯ ಮಲೆನಾಡು ಭಾಗದಲ್ಲಿ ಕಾಡು, ಅರಣ್ಯ ಒತ್ತುವರಿ ಮಾಡಿ ಕಾಫಿ, ಅಡಿಕೆ ತೋಟಗಳನ್ನು ಮಾಡಿರುವುದರಿಂದ ಮುರುಗನಹುಳಿಯ ಮರಗಳನ್ನು ಕಾಣುವುದೇ ಅಪರೂಪ ಎಂಬಂತಾಗಿರುವುದರಿಂದ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಹುಳಿ ಪೂರೈಕೆ ಆಗುತ್ತಿಲ್ಲ.
ಮುರುಗನಹುಳಿಗೆ ಕರ್ನಾಟಕದ ಮಲೆನಾಡು, ಕರಾವಳಿ ಭಾಗ ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಅಷ್ಟಾಗಿ ಬೇಡಿಕೆ ಇಲ್ಲದಿದ್ದರೂ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಭಾರೀ ಬೇಡಿಕೆ ಇದೆ. ಕೇರಳದ ಕೆಲ ಪ್ರದೇಶಗಳ ಅರಣ್ಯದಲ್ಲಿ ಮುರುಗನಹುಳಿ ಸಿಗುತ್ತಿದ್ದರೂ ಕರ್ನಾಟಕದ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಮುರುಗನಹುಳಿ ಸಂಪೂರ್ಣವಾಗಿ ಕೇರಳ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಅಲ್ಲಿನ ಕೆಲ ಆಹಾರೋತ್ಪನ್ನ ಘಟಕಗಳಲ್ಲಿ ಈ ಹುಳಿಯನ್ನು ಸಂಸ್ಕರಿಸಿದ ಬಳಿಕ ವಿವಿಧ ಬ್ರಾಂಡ್‌ಗಳಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮುರುಗನಹುಳಿ ಔಷಧೀಯ ಗುಣವುಳ್ಳ ಹಣ್ಣಾಗಿರುವುದರಿಂದ ಗಿಡಮೂಲಿಕೆ, ಆಯುರ್ವೇದ ಔಷಧ ತಯಾರಿಕೆಗೂ ಬಳಸಲಾಗುತ್ತಿದೆ.
ಉತ್ತಮ ಪ್ರಚಾರ, ಮಾರುಕಟ್ಟೆ ಲಭ್ಯವಾಗಿ ಮುರುಗನಹುಳಿಗೆ ಮತ್ತಷ್ಟು ಬೇಡಿಕೆ ಬಂದಲ್ಲಿ ಉತ್ತಮ ಧಾರಣೆ ಸಿಗಲಿದೆ, ಆಗ ಪೂರೈಕೆಯೂ ಹೆಚ್ಚಾಗಲಿದೆ ಎಂಬುದು ಮುರುಗನಹುಳಿ ಖರೀದಿಸಿ ಕೇರಳಕ್ಕೆ ಪೂರೈಕೆ ಮಾಡುತ್ತಿರುವ ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಮಲೆನಾಡು ಭಾಗದಲ್ಲಿ ಮುರುಗನಹುಳಿ ಲಭ್ಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಈ ಹುಳಿಗೆ ಬೇಡಿಕೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹಿಂದೆ ದರ ಕಡಿಮೆ ಇದ್ದರೂ ಗಿರಿಜನ ಸಮುದಾಯದವರಿಂದ ಹೆಚ್ಚು ಪೂರೈಕೆಯಾಗುತ್ತಿತ್ತು. ಸದ್ಯ ಕೇರಳದಲ್ಲಿ ಮೀನು ಸಾರು, ಮಾಂಸಾಹಾರದ ಅಡುಗೆಗೆ, ಔಷಧ ತಯಾರಿಕೆಗೂ ಈ ಹುಳಿ ಬಳಕೆಯಾಗುತ್ತಿದೆ.
- ಶರೀಫ್, ಮುರುಗನಹುಳಿ ವ್ಯಾಪಾರಿ
ಆದಿವಾಸಿಗಳ ಆದಾಯದ ಮೂಲ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಹಿಂದೆ ನೈಸರ್ಗಿಕವಾಗಿ ಯಥೇಚ್ಛವಾಗಿ ಸಿಗುತ್ತಿದ್ದ ಮುರುಗನಹುಳಿ ಇಲ್ಲಿನ ಆದಿವಾಸಿಗಳ ಪಾಲಿಗೆ ಪ್ರಮುಖ ಆದಾಯದ ಮೂಲವಾಗಿತ್ತು. ಅರಣ್ಯ ಉತ್ಪನ್ನವಾಗಿರುವ ಮುರುಗನಹುಳಿಯನ್ನು ಈ ಹಿಂದೆ ಆದಿವಾಸಿ ಗಿರಿಜನರು ಸಂಸ್ಕರಿಸಿ ಮೀನು ಸಾರು ಹಾಗೂ ಮಾಂಸಾಹಾರಕ್ಕೆ ಬಳಸುತ್ತಿದ್ದರು. ಈ ಹುಳಿಯ ಔಷಧೀಯ ಗುಣದ ಬಗ್ಗೆ ಸಂಶೋಧನೆ ನಡೆದ ಬಳಿಕ ಭಾರೀ ಬೇಡಿಕೆ ಬಂದಿದೆ. ಅರಣ್ಯ ಉತ್ಪನ್ನ ಮುರುಗನಹುಳಿಗೆ ಇಂದಿಗೂ ಬೇಡಿಕೆ ಇದ್ದರೂ ಅರಣ್ಯ ನಾಶದಿಂದಾಗಿ ನಿಧಾನವಾಗಿ ಅವಸಾನದ ಅಂಚಿಗೆ ಸರಿಯುತ್ತಿದೆ.