ಮನೆಯಲ್ಲೇ ಮ್ಯೂಸಿಯಂ ಸ್ಥಾಪಿಸಿದ ಪತ್ರಕರ್ತ ಮುಜೀಬ್ ಅಲಿಖಾನ್

ಕಲಬುರಗಿ: ಕಲಬುರಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉರ್ದು ಪತ್ರಿಕೆಯೊಂದರ ಹಿರಿಯ ವರದಿಗಾರ ಮುಹಮ್ಮದ್ ಮುಜೀಬ್ ಅಲಿಖಾನ್ ಮ್ಯೂಸಿಯಂ ಗ್ಯಾಲರಿ ಸ್ಥಾಪಿಸಿ ಜನರ ಗಮನಸೆಳೆದಿದ್ದಾರೆ.
ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಿಸುವಲ್ಲಿ ಹವ್ಯಾಸ ಬೆಳೆಸಿಕೊಂಡು ಹಲವು ವರ್ಷಗಳ ಹಿಂದೆ ಕಲಬುರಗಿ ನಗರದ ಮೆಹಬೂಬ್ ನಗರದಲ್ಲಿ ಆಕರ್ಷಕ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದ್ದಾರೆ.
‘ಹಲವು ವರ್ಷಗಳಿಂದ ವಿಶೇಷ ವಸ್ತುಗಳನ್ನು ಸಂಗ್ರಹಿಸುತ್ತಾ ಬಂದಿರುವೆ, 10 ವರ್ಷಗಳ ಹಿಂದೆ ಮ್ಯೂಸಿಯಂ ಸ್ಥಾಪಿಸಿ, ಪುರಾತನ ವಸ್ತುಗಳನ್ನು ಜೋಪಾನವಾಗಿಟ್ಟುಕೊಂಡು ಮುಂದಿನ ಪೀಳಿಗೆಗಳಿಗೆ ತೋರಿಸಿಕೊಡುವಂತಹ ಕೆಲಸ ಮಾಡುತ್ತಿರುವೆ’ ಎಂದು ಮುಜೀಬ್ ಖಾನ್ ಹೇಳುತ್ತಾರೆ.
ಮುಜೀಬ್ ಅಲಿಖಾನ್ ಕೇವಲ ಪತ್ರಕರ್ತರಾಗಿ ಕೆಲಸ ಮಾಡುವುದಲ್ಲದೆ, ಯೋಗ ಶಿಕ್ಷಕ, ಎನ್‌ಸಿಸಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ಉತ್ತಮ ಕ್ರೀಡಾಪಟುವೂ ಹೌದು.
ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ನಿವೃತ್ತಿ ಹೊಂದಿದ ದಿ.ಮುಹಮ್ಮದ್ ಮೆಹಬೂಬ್ ಅಲಿಖಾನ್ ಅವರ ಪುತ್ರರಾಗಿ ಮುಜೀಬ್ ಅಲಿಖಾನ್ ಅವರು 1963ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಸೇರಿದಂತೆ ಬಿ.ಎ., ಬಿಪಿಇಡ್ ಅನ್ನು ಕಲಬುರಗಿ ನಗರದಲ್ಲಿ ಮುಗಿಸಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿಯಲ್ಲಿಯೂ ಗುರುತಿಸಿಕೊಂಡಿರುವ ಅವರು ಅನೇಕ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಬಳಿಕ ದೈಹಿಕ ಶಿಕ್ಷಕರಾಗಿ ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅವರ ಶೈಕ್ಷಣಿಕ ವೃತ್ತಿಯಲ್ಲಿ ರೋಟರಿ ಕ್ಲಬ್ ಸಹಿತ ಅನೇಕ ಕಡೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. 1997ರಿಂದ ಈವರೆಗೆ ಪತ್ರಕರ್ತರಾಗಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
63ರ ಹರೆಯದ ಖಾನ್ ಅವರು, ದಿನನಿತ್ಯದ ಕೆಲಸಗಳನ್ನು ಸೂಕ್ತ ಸಮಯಕ್ಕೆ ಮಾಡಲು ವೇಳಾಪಟ್ಟಿಯನ್ನು ಮಾಡಿಕೊಂಡಿದ್ದು, ಅದನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ.
ಮ್ಯೂಸಿಯಂನಲ್ಲಿ ಏನೇನಿವೆ?: ತಮ್ಮದೇ ಹೆಸರಿನಲ್ಲಿ (ಮುಜೀಬ್ ಅಲಿಖಾನ್) ಮ್ಯೂಸಿಯಂ ಪ್ರಾರಂಭಿಸಿದ ಖಾನ್ ಅವರು, ಮ್ಯೂಸಿಯಂನಲ್ಲಿ ನೂರಾರು ವರ್ಷಗಳ ಹಿಂದಿನ ನಾಣ್ಯ, ನೋಟು(ವಿದೇಶಿ ನೋಟು ಸಂಗ್ರಹ), ಗಡಿಯಾರ, ಇಸ್ತ್ರಿ ಪೆಟ್ಟಿಗೆ, ವಿವಿಧ ಕ್ಯಾಮರಾಗಳು, ಹಳೆಯ ಕಾಲದ ರೇಡಿಯೊಗಳು, ಪಿಂಗಾಣಿ ಬಟ್ಟಲುಗಳು, ಮೊಬೈಲ್ ಫೋನ್, ಲ್ಯಾಂಡ್ ಫೋನ್, ನೂರಾರು ವರ್ಷಗಳ ಹಿಂದಿನ ಬ್ಯಾಟರಿ ಸಹಿತ ಅರಬ್ ದೇಶಗಳ ವಿಶಿಷ್ಟ ವಸ್ತುಗಳೂ ಇಲ್ಲಿ ನೋಡಲು ಸಿಗುತ್ತವೆ. ಇಲ್ಲಿ 1.5 ಇಂಚಿನ ಕುರ್‌ಆನ್ ಕೂಡ ಕಾಣಬಹುದಾಗಿದೆ.
ಈವಸ್ತು ಸಂಗ್ರಹಾಲಯದಲ್ಲಿ ಕಲಬುರಗಿ ನಗರದ ವಿಶೇಷತೆಗಳುನ್ನು ಕಾಣಬಹುದು. ನಗರದಲ್ಲಿರುವ ದೇವಸ್ಥಾನ, ಮಂದಿರ, ಮಸೀದಿ, ಚರ್ಚ್, ಬುದ್ಧ ವಿಹಾರ ಮತ್ತಿತರ ಧಾರ್ಮಿಕ ಸ್ಥಳಗಳ ಬಗ್ಗೆ ಮಾಹಿತಿಯಿದೆ. ಸ್ಥಳೀಯ ಮಾಧ್ಯಮಗಳ ಪಟ್ಟಿ, ಪ್ರೇಕ್ಷಣೀಯ ಸ್ಥಳಗಳ ಪಟ್ಟಿ ಸಹಿತ ಅಗತ್ಯ ಮಾಹಿತಿ ಇಲ್ಲಿ ಕಾಣ ಸಿಗುತ್ತದೆ.
ಪತ್ರಕರ್ತ, ಶಿಕ್ಷಕನಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ವಸ್ತುಗಳನ್ನು ಸಂಗ್ರಹಿಸುತ್ತಾ ಈಗ ಮನೆಯಲ್ಲೇ ದೊಡ್ಡ ಮ್ಯೂಸಿಯಂ ಮಾಡಿದ್ದೇನೆ. ಶಾಲಾ ಮಕ್ಕಳು ನೋಡಿ ಖುಷಿಪಡುವುದರಿಂದ ನನಗೆ ಹೆಮ್ಮೆ ಅನಿಸುತ್ತದೆ.

-ಮುಜೀಬ್ ಅಲಿಖಾನ್, ಪತ್ರಕರ್ತ, ಮ್ಯೂಸಿಯಂ ಸ್ಥಾಪಕ