ಚಳವಳಿಯಲ್ಲಿ ಭಾಗವಹಿಸಿದ್ದ ‘ಹುತಾತ್ಮರ ಸ್ಮಾರಕ’ ಕಣ್ಮರೆ

ಬೆಂಗಳೂರು: ನಗರದ ಹೃದಯ ಭಾಗವಾದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಹುತಾತ್ಮರಾದ ಹೋರಾಟಗಾರರ ಸ್ಮಾರಕವಿದ್ದು, ಯಾರ ಕಣ್ಣಿಗೂ ಕಾಣದೇ ಮರೆಯಾಗುತ್ತಿದೆ.
1942ರಲ್ಲಿ ಮಹಾತ್ಮಾ ಗಾಂಧೀಜಿ ಅವರ ಕರೆಯ ಮೇರೆಗೆ ನಡೆದ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಗುಂಡಿಗೆ ಬಲಿಯಾದ ಸಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಾದ ಗುಂಡಪ್ಪ, ಶಾಮಣ್ಣ, ಪ್ರಹ್ಲಾದ್ ಶೆಟ್ಟಿ ಮತ್ತು ಜಿ.ವಿ.ತಿರುಮಲಯ್ಯ ಅವರ ನೆನಪಿಗಾಗಿ ಈ ಸ್ಮಾರಕವನ್ನು 1972ರಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದಿನ ಬೆಂಗಳೂರು ನಗರ ಸಭೆ 1973ರಲ್ಲಿ ಲೋಕಾರ್ಪಣೆಗೊಳಿಸಿದ್ದು, ಸ್ಮಾರಕ ಐತಿಹಾಸಿಕ ಮಹತ್ವವನ್ನು ಹೊಂದಿದೆ.
ಬೆಂಗಳೂರಿನಲ್ಲಿ ಹೆಚ್ಚು ಜನರು ಸಂಚರಿಸುವ ಸ್ಥಳದಲ್ಲೇ ಹುತಾತ್ಮರ ಸ್ಮಾರಕವಿದ್ದರೂ, ಅಲ್ಲೊಂದು ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಸ್ಮಾರಕವಿದೆ ಎಂದು ಯಾರೊಬ್ಬರಿಗೂ ಗೊತ್ತಾಗುವುದಿಲ್ಲ. ಏಕೆಂದರೆ ಆ ಸ್ಮಾರಕವನ್ನು ಒಳಗೆ ಸೇರಿಸಿಕೊಂಡು, ಅಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಹುತಾತ್ಮರ ಸ್ಮಾರಕವನ್ನು ಸರಕಾರ ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಕಾಣಿಸುವಂತೆ ಮಾಡಬೇಕು ಎನ್ನುವುದು ಹೋರಾಟಗಾರರ ಒತ್ತಾಯವಾಗಿದೆ.
ಹುತಾತ್ಮರ ಸ್ಮಾರಕವನ್ನು ಸಂರಕ್ಷಿಸಬೇಕು ಮತ್ತು ಮೈಸೂರು ಬ್ಯಾಂಕ್ ವೃತ್ತವನ್ನು ‘ಹುತಾತ್ಮ ವೃತ್ತ’ವೆಂದು ಘೋಷಿಸಬೇಕು ಎಂದು ಈ ಹಿಂದೆಯೇ ಅನೇಕ ಬಾರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಚಳವಳಿ ನಡೆಸಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಇದುವರೆಗೂ ಯಾವುದೇ ಸೂಕ್ತ ಕ್ರಮವಹಿಸಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ.
ಸ್ಮಾರಕದ ಬಗ್ಗೆ ಮಾಹಿತಿ ಆಯೋಗದಲ್ಲಿ ಪ್ರಕರಣ ಹಾಕಿದ್ದೇವೆ. ಅದು ವಿಚಾರಣೆಗೆ ಬರಬೇಕು. ಕಾನೂನು ಬಾಹಿರವಾಗಿ ಒತ್ತುವರಿ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ದೇವಸ್ಥಾನ ಇರುವುದರಿಂದ ಯಾರು ಕೆಲಸ ಮಾಡುತ್ತಿಲ್ಲ. ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿದ ಕಟ್ಟಡವನ್ನು ತೆರವುಗೊಳಿಸಿ ಸ್ಮಾರಕವನ್ನು ಕಾಣುವಂತೆ ಮಾಡಬೇಕು ಎನ್ನುವುದು ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರ ಅಭಿಪ್ರಾಯವಾಗಿದೆ.
ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಿಲ್ಲ
ಸ್ಮಾರಕ ಸ್ಥಾಪಿಸಿದ ನಂತರ ಸ್ಮಾರಕವನ್ನು ಒತ್ತುವರಿ ಮಾಡಿಕೊಂಡು ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮೂರ್ನಾಲ್ಕು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದೇವಸ್ಥಾನದಿಂದ ಸ್ಮಾರಕವನ್ನು ಬಿಡುಗಡೆಗೊಳಿಸಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರೂ ಯಾರೂ ಸ್ಮಾರಕದ ಬಗ್ಗೆ ಗಮನಹರಿಸಿಲ್ಲ.
-ಎಚ್.ಎಂ.ವೆಂಕಟೇಶ್, ಹೋರಾಟಗಾರ