ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಅಣ್ಣೂರು ಗ್ರಾಪಂ ಸೇರ್ಪಡೆ
‘ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ’ ಯಶಸ್ವಿ ಅನುಷ್ಠಾನ

ಮಂಡ್ಯ: ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಠಾನದಲ್ಲಿ ಮಹತ್ತರ ಪ್ರಗತಿ ಮಾಡುತ್ತಾ ಬಂದಿರುವ ಅಣ್ಣೂರು ಗ್ರಾಮ ಪಂಚಾಯತ್‌ಗೆ ಮತ್ತೊಂದು ದಾಖಲೆಯ ಪ್ರಶಸ್ತಿ ಸಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮ ಪಂಚಾಯತ್, ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಗಿದೆ.
ರಾಜ್ಯ ಸರಕಾರ ಘೋಷಿಸಿರುವ ‘ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ’ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಅಣ್ಣೂರು ಗ್ರಾಮ ಪಂಚಾಯತ್ ಅನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಮಾಡಿದೆ. ಅಣ್ಣೂರು ಗ್ರಾಪಂನ ಈ ಸಾಧನೆ ದೇಶದಲ್ಲೇ ಮೊದಲ ಪ್ರಯತ್ನವಾಗಿದೆ ಎನ್ನಲಾಗುತ್ತಿದೆ.
ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಭಾಗೀದಾರರ ವಿಶೇಷವಾಗಿ ಸ್ಥಳೀಯ ಮಹಿಳಾ ಸ್ವಸಹಾಯ/ಸ್ತ್ರೀಶಕ್ತಿ ಸಂಘಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ/ಚಟುವಟಿಕೆಗಳನ್ನು ಆಯೋಜಿಸಿ, ಅರ್ಥಪೂರ್ಣವಾಗಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಿ, ಮಹಿಳೆಯರಿಂದ ಮೂಡಿಬಂದ ಬೇಡಿಕೆ/ಸಮಸ್ಯೆ/ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಗಳು ಸ್ಪಂದಿಸಿ, ಯೋಜನೆ ತಯಾರಿಸಿ ಅನುಷ್ಠಾನಗೊಳಿಸುವ ಸಂಬಂಧ 2025ರ ಮಾರ್ಚ್ 8ರಿಂದ ಜೂನ್ 30ರವರೆಗೆ ‘ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ’ ವನ್ನು ರಾಜ್ಯ ಸರಕಾರ ಘೋಷಿಸಿದೆ.
ರಾಜ್ಯ ಸರಕಾರದ ಈ ಘೋಷಣೆಯನ್ನು ಸವಾಲಾಗಿ ಸ್ವೀಕರಿಸಿದ ಅಣ್ಣೂರು ಗ್ರಾಮ ಪಂಚಾಯತ್‌ನ ಪಿಡಿಒ ಎಂ.ಆರ್.ಅಶ್ವಿನಿ, ಜನಪ್ರತಿನಿಧಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಆ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಭಿಯಾನದ ಭಾಗವಾಗಿ ರಾಷ್ಟ್ರೀಯ ಪಂಚಾಯತ್ ದಿನದ ಹಿನ್ನೆಲೆಯಲ್ಲಿ ಕಣ್ಣೂರು ಗ್ರಾಪಂ ವ್ಯಾಪ್ತಿಯ ಮನೆಗಳ ಮುಂದೆ ರಂಗೋಲಿ ಬಿಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅಣ್ಣೂರು ಗ್ರಾಪಂ ವ್ಯಾಪ್ತಿಯಲ್ಲಿನ ಅಣ್ಣೂರು, ಆಲಬುಜನಹಳ್ಳಿ, ಕಾರ್ಕಹಳ್ಳಿ ಗ್ರಾಮದಲ್ಲಿ ಮನೆಗಳ ಮುಂದೆ ಸುಮಾರು. 1,544 ಮಂದಿ ಭಾಗವಹಿಸಿ ಏಕಕಾಲಕ್ಕೆ 1,418 ರಂಗೋಲಿ ಬಿಡಿಸಿ ದಾಖಲೆ ಬರೆದಿದ್ದರು. ಜತೆಗೆ ಸಂವಿಧಾನದ 73ನೇ ತಿದ್ದುಪಡಿ ಹಾಗೂ ಪಂಚಾಯತ್ ರಾಜ್ ದಿನದ ಶುಭಾಶಯಗಳು ಎಂದು ಬರೆದರು. ಈ ರಂಗೋಲಿ ಬರೆದ ಸಂದೇಶ ಜನ ಮನದಲ್ಲಿ ಸಂಚಲನ ಉಂಟು ಮಾಡಿತ್ತು. ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಯಶಸ್ಸು ಸಾಧಿಸಿತ್ತು.
ಮಾರ್ಚ್ 8ರಿಂದ ಜೂನ್ 30ರವರೆಗೆ ಮಹಿಳಾ ಸಶಕ್ತೀಕರಣ ಅಭಿಯಾನದಡಿ ಹದಿನಾರು ವಾರಗಳ ಕಾಲ ಮೂವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಲು ಸರಕಾರ ಕಾರ್ಯಸೂಚಿ ನೀಡಿದೆ. ರಾಜ್ಯದ ಬಹಳಷ್ಟು ಪಂಚಾಯತ್‌ಗಳು ಈ ಸುತ್ತೋಲೆಯನ್ನು ಸಾಂಕೇತಿಕ ಆಚರಣೆಗೆ ಸೀಮಿತಗೊಳಿಸಿದವು.
ಆದರೆ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮಪಂಚಾಯತ್ ಈ ಸುತ್ತೋಲೆಯಲ್ಲಿನ ಅಂಶಗಳನ್ನು ಅಕ್ಷರಶಃ ಪಾಲಿಸಿ ಈ ಸಾಧನೆ ಮಾಡಿತು. ಹೀಗೆ ಮೂವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿ ಮಹಿಳಾ ಸಬಲಿಕರಣ ಹಾಗೂ ಪಂಚಾಯುತ್ ರಾಜ್ ಬಲವರ್ಧನೆಗೆ ಅಣ್ಣೂರು ಗ್ರಾಪಂ ಕಾರ್ಯಪ್ರವೃತ್ತವಾಗಿದೆ.
ಜೂನ್ 30ರವರೆಗೂ ಕಾರ್ಯಕ್ರಮ ನಡೆಯಲಿದೆ. ಅಭಿಯಾನದಡಿ ಯೋಗ ದಿನ ಆಚರಿಸಿ ಎಂದಿದೆ. ಅಣ್ಣೂರು ಗ್ರಾಪಂ ಆ ದಿನದಲ್ಲಿ ಮಹಿಳೆಯರಿಗೆ ಯೋಗ ತರಗತಿ ಆರಂಭಿಸಿದೆ. ಯೋಗ ದಿನದಂದೂ ಯೋಗ ಕಲಿತ ಕಲಿಕಾರ್ಥಿಗಳಿಂದ ಯೋಗ ಪ್ರದರ್ಶನ ಮಾಡಿಸಿ
ನಂತರ ಯೋಗದ ಮಹತ್ವ ಕುರಿತು ಉಪನ್ಯಾಸ ಕೊಡಿಸಲು ಮುಂದಾಗಿದೆ. ಒಂದು ಸುತ್ತೋಲೆಯನ್ನು ಸಾಂಕೇತಿಕಗೊಳಿಸಿ ಸುಮ್ಮನಾಗುವ ಬದಲು ಜೀವಂತಿಕೆ ತುಂಬುತ್ತಿದ್ದಾರೆ ಪಿಡಿಒ ಅಶ್ವಿನಿ. ಹೀಗೆ ಅಭಿಯಾನದ ಎಲ್ಲ ಕಾರ್ಯಕ್ರಮಗಳನ್ನು ವಿಸ್ತೃತಗೊಳಿಸಿ ಆಚರಣೆ ಮಾಡಿದ್ದಾರೆ.
ಮಹಿಳಾ ಸಶಕ್ತೀಕರಣ ಅಭಿಯಾನ ಕುರಿತು ಸರಕಾರ ಹೊರಡಿಸಿದ ಸುತ್ತೊಲೆಯಲ್ಲಿನ ಪ್ರತೀ ಅಂಶವನ್ನು ಚಾಚೂ ತಪ್ಪದೇ ಅಣ್ಣೂರು ಗ್ರಾಪಂ ಪಾಲಿಸಿದೆ.
-ನ.ಲಿ.ಕೃಷ್ಣ, ಸಂಪನ್ಮೂಲ ವ್ಯಕ್ತಿ
ಮಹಿಳಾ ಸಶಕ್ತೀಕರಣ ಅಭಿಯಾನದ ಕಾರ್ಯಕ್ರಮಗಳನ್ನು ಮಾಡುವಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ವಿಶೇಷವಾಗಿ ಮಹಿಳೆಯರ ಪಾತ್ರ ಶ್ಲಾಘನೀಯ.
- ಎಂ.ಆರ್.ಅಶ್ವಿನಿ, ಅಣ್ಣೂರು ಗ್ರಾಪಂ ಪಿಡಿಒ
ಮಹಿಳೆಯರಿಗೆ ಆಡಳಿತದಲ್ಲಿ ಸಹಭಾಗಿತ್ವ ಹಾಗೂ ಗ್ರಾಮೀಣರ ಸ್ಥಳೀಯಾಡಳಿತಕ್ಕೆ ನೆರವಾದ ಸಂವಿಧಾನದ 73ನೇ ತಿದ್ದುಪಡಿ ಕುರಿತು ಊರಿಗೆ ಊರೇ ರಂಗೊಲಿ ಜೊತೆಗೆ ಸಂದೇಶ ಬರೆದು ಅದರ ಮಹತ್ವ ಸಾರಿದ ದೃಶ್ಯ ಮೈನವಿರೇಳಿಸಿತು. ಇಂತಹ ಸಾಧನೆ ಸಮಯದಲ್ಲಿ ಮಹಿಳಾ ಅಧ್ಯಕ್ಷೆಯಾಗಿ ನಾನೇ ಇರುವುದು ಸಂವಿಧಾನದ 73ನೇ ತಿದ್ದುಪಡಿಯ ಸಾರ್ಥಕ ಕ್ಷಣ.
- ಶಿವಮ್ಮ, ಅಣ್ಣೂರು ಗ್ರಾಪಂ ಅಧ್ಯಕ್ಷೆ