ಮೌಲಾನಾ ಆಝಾದ್ ಶಾಲೆಗಿಲ್ಲ ಸ್ವಂತ ಸೂರು
7 ವರ್ಷಗಳಲ್ಲಿ ಮೂರನೇ ಬಾರಿ ಸ್ಥಳಾಂತರಗೊಳ್ಳುತ್ತಿರುವ ಶಾಲೆ
ಕೊಪ್ಪಳ: ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗೆ ಈವರೆಗೆ ಸ್ವಂತ ಕಟ್ಟಡ ಇಲ್ಲದೇ ಮತ್ತೆ ಮತ್ತೆ ಸ್ಥಳಾಂತರ ಮಾಡಲಾಗುತ್ತಿದ್ದು, ಈ ಸಂಗತಿಯಿಂದ ಮಕ್ಕಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ನಗರದ ಇಂದಿರಾ ಕ್ಯಾಂಟೀನ್ ಬಳಿ ಈಗಿರುವ ಮೌಲಾನಾ ಆಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗೆ ಸ್ವಂತ ಕಟ್ಟಡ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಗಳಾಗುತ್ತಿವೆ.
2017ರಲ್ಲಿ ಪ್ರಾರಂಭವಾದ ಈ ಶಾಲೆಯು 7 ವರ್ಷದಲ್ಲಿ ಮೂರನೇ ಬಾರಿ ಸ್ಥಳಾಂತರವಾಗುತ್ತಿದೆ. ಪ್ರಾರಂಭದಲ್ಲಿ ಸರ್ದಾರಗಲ್ಲಿಯಲ್ಲಿ ಈ ಶಾಲೆಯನ್ನು ಪ್ರಾರಂಭಿಸಲಾಯಿತು. ಸರ್ದಾರಗಲ್ಲಿಯಿಂದ ಪದವಿ ಕಾಲೇಜಿನ ಬಳಿಯಿರುವ ಕಟ್ಟಡಕ್ಕೆ ಮತ್ತು ಅಲ್ಲಿಂದ ಶಾಸಕರ ಮಾದರಿ ಶಾಲೆಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ಈಗ ಮತ್ತೆ ಸ್ಥಳಾಂತರ ಮಾಡಲು ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಒತ್ತಡ ಹಾಕುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಕೇಂದ್ರಿಯ ಮಾದರಿ ವಿದ್ಯಾಲಯವನ್ನು ಈಗಿರುವ ಮೌಲಾನಾ ಆಝಾದ್ ಶಾಲೆಯ ಜಾಗದಲ್ಲಿ ನಿರ್ಮಿಸಲು ಶಾಸಕರು ಯೋಜಿಸಿದ್ದು, ಶಾಸಕರು ಅಲ್ಪಸಂಖ್ಯಾತರ ಮಕ್ಕಳು ಓದುವ ಶಾಲೆಗೆ ಕುತ್ತು ತಂದಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಶಾಲೆಯಲ್ಲಿ ಒಂದು ತರಗತಿಗೆ 60 ವಿದ್ಯಾರ್ಥಿಗಳಂತೆ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 300 ಮಕ್ಕಳಿದ್ದಾರೆ. ಸ್ಥಳಾಂತರ ಮಾಡುತ್ತಿರುವ ಕಟ್ಟಡವು ತುಂಬಾ ಚಿಕ್ಕದಿದ್ದು, ಆ ಕೊಠಡಿಯಲ್ಲಿ 25 ರಿಂದ 30 ಮಕ್ಕಳು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತದೆ ಎಂಬುದು ಪೋಷಕರ ದೂರು.
ಮೌಲಾನಾ ಆಝಾದ್ ಶಾಲೆಗೆ ಒಂದು ಪ್ರತ್ಯೇಕ ಕಟ್ಟಡವನ್ನು ಈಗಿರುವ ಸ್ಥಳದಲ್ಲೇ ಯೋಜನಾ ಬದ್ಧವಾಗಿ ವ್ಯವಸ್ಥಿತ ಕಟ್ಟಡ ಮತ್ತು ಆಟದ ಮೈದಾನವನ್ನು ನಿರ್ಮಿಸಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅನಿವಾರ್ಯ ಕಾರಣಗಳಿಂದ ಶಾಲೆಯನ್ನು ಸ್ಥಳಾಂತರ ಮಾಡಬೇಕಾಗಿದೆ. ಸದ್ಯ ಸರಕಾರಿ ಉರ್ದು ಶಾಲೆಗೆ ಸ್ಥಳಾಂತರ ಮಾಡಲಾಗುತ್ತಿದ್ದು, ಸ್ವಂತ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಗುವುದು. ಈಗಾಗಲೇ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಪಾಲಕರು ಚಿಂತಿಸುವ ಅಗತ್ಯವಿಲ್ಲ.
-ಅಜ್ಮೀರ್ ಅಲಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ, ಕೊಪ್ಪಳ
ಶಾಲೆಯನ್ನು ಸ್ಥಳಾಂತರ ಮಾಡಬಾರದು. ಸ್ಥಳಾಂತರ ಮಾಡುವುದರಿಂದ ಮಕ್ಕಳ ಕಲಿಕೆಗೆ ತೊಂದರೆ ಅಗುತ್ತದೆ. ಇದಕ್ಕೆ ಎಲ್ಲ ಪಾಲಕರ ವಿರೋಧವಿದ್ದು, ಸದ್ಯ ಈಗ ಶಾಲೆ ಇರುವ ಸ್ಥಳದಲ್ಲೇ ಮೌಲಾನ ಆಝಾದ್ ಶಾಲೆಗೆ ಒಂದು ವ್ಯವಸ್ಥಿತ ಕಟ್ಟಡವನ್ನು ನಿರ್ಮಿಸಬೇಕೆಂಬುದು ಪೋಷಕರ ಆಗ್ರಹವಾಗಿದೆ.
-ಅಬ್ದುಲ್ ಗಫರ್, ಪೋಷಕ