ಮುಂಗಾರು ಮಳೆ: ಕಾಫಿನಾಡಿನ ಝರಿ, ಜಲಪಾತಗಳಿಗೆ ಜೀವಕಳೆ

ಚಿಕ್ಕಮಗಳೂರು: ಕಾಫಿನಾಡಿನಲ್ಲೀಗ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಬೆಟ್ಟಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಝರಿ ಜಲಪಾತಗಳು ಜೀವ ಕಳೆ ಪಡೆದುಕೊಂಡಿವೆ. ಸೊರಗಿದ್ದ ನದಿಗಳು, ಕೆರೆ ಕಟ್ಟೆಗಳ ಜಲಧಾರೆಯ ದೃಶ್ಯ ವೈಭವ ಪ್ರವಾಸಿಗರು, ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.
ಚಿಕ್ಕಮಗಳೂರು ಜಿಲ್ಲೆ ಭೌಗೋಳಿಕವಾಗಿ ಗಿರಿಶ್ರೇಣಿಗಳ ಬೀಡಾಗಿದೆ. ಪಶ್ಚಿಮಘಟ್ಟ ಪ್ರದೇಶವನ್ನೊಳಗೊಂಡ ಕಾಫಿನಾಡಿನಲ್ಲೀಗ ಗಿರಿಶ್ರೇಣಿಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಝರಿ ಜಲಪಾತಗಳು ಮೈದುಂಬಿಕೊಂಡು ಧುಮ್ಮಿಕ್ಕಿ ಹರಿಯುತ್ತಿವೆ.
ರಮಣೀಯ ನಿಸರ್ಗ ಸಂಪತ್ತನ್ನು ಹೊಂದಿದ ಕಾಫಿನಾಡು ನೂರಾರು ಪ್ರವಾಸಿ ತಾಣಗಳ ಬೀಡಾಗಿದೆ. ಅದರಲ್ಲೂ ಜಿಲ್ಲೆಯ ಮಲೆನಾಡು ಭಾಗದ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿರುವ ಜಲಪಾತಗಳಿಗೆ ಮುಂಗಾರು ಮಳೆ ಹೊಸ ಕಳೆ ನೀಡಿದ್ದು, ಜಿಲ್ಲೆಯಲ್ಲಿರುವ ಝರಿ ಜಲಪಾತಗಳು ಸದ್ಯ ಪ್ರವಾಸಿಗರ ಪಾಲಿನ ಹಾಟ್‌ಸ್ಪಾಟ್‌ಗಳಾಗುತ್ತಿದ್ದು, ಎಲ್ಲ ಜಲಪಾತಗಳ ಮುಂದೆ ಪ್ರವಾಸಿಗರು, ಸಾರ್ವಜನಿಕರ ದಂಡು ಕಂಡು ಬರುತ್ತಿದೆ.
ಚಿಕ್ಕಮಗಳೂರು ತಾಲೂಕಿನ ಮುಗಿಲೆತ್ತರದ ಗಿರಿಶ್ರೇಣಿಗಳಾದ ಮುಳ್ಳಯ್ಯನಗಿರಿ, ಬಾಬಾ ಬುಡಾನ್‌ಗಿರಿ, ಕೆಮ್ಮಣ್ಣುಗುಂಡಿ ಗಿರಿಗಳ ಕಣಿವೆ ಪ್ರದೇಶದಲ್ಲಿರುವ ಶ್ರೇಹೆಬ್ಬೆ ಫಾಲ್ಸ್, ಝರಿ ಫಾಲ್ಸ್, ಕಲ್ಲತ್ತಗಿರಿ ಫಾಲ್ಸ್ ಪ್ರಮುಖ ಜಲಪಾತಗಳಾಗಿದ್ದರೆ, ಕಳಸ ತಾಲೂಕಿನ ಸೂರುಮನೆ ಫಾಲ್ಸ್, ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿರುವ ಸಿರಿಮನೆ ಫಾಲ್ಸ್, ಕೊಪ್ಪ ತಾಲೂಕಿನಲ್ಲಿರುವ ಕೊಗ್ರೆ ಫಾಲ್ಸ್ ಪ್ರಮುಖ ಝರಿ, ಜಲಪಾತಗಳಾಗಿವೆ. ಈ ಜಲಪಾತಗಳು ಸದ್ಯ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದ್ದು, ಜಲಪಾತಗಳ ದೃಶ್ಯ ವೈಭವ ಕಾಣಲು ಪ್ರವಾಸಿಗರು ಹರಿದು ಬರುತ್ತಿದ್ದಾರೆ.
ಇನ್ನು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶ ಮಳೆಗಾಲದಲ್ಲಿ ಪ್ರವಾಸಿಗರ ಆಕರ್ಷಣೆಯ ಸ್ಥಳವಾಗುತ್ತಿದೆ. ಘಾಟಿಯ ಒಂದು ಬದಿ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಮುಗಿಲೆತ್ತರದ ಗಿರಿಶ್ರೇಣಿಗಳು ಕಂಡು ಬಂದರೆ, ಮತ್ತೊಂದು ಬದಿಯಲ್ಲಿ ಪಾತಾಳ ನೆನಪಿಸುವ ಕಂದಕಗಳ ಸಾಲು ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತವೆ. ಸದ್ಯ ಮುಂಗಾರು ಮಳೆಯ ಆರ್ಭಟದಿಂದಾಗಿ ಘಾಟಿಯುದ್ದಕ್ಕೂ ಕೃತಕ ಜಲಪಾತಗಳ ಸಾಲು ಕಂಡು ಬರುತ್ತಿದ್ದು, ಘಾಟಿಯಲ್ಲಿ ಸಂಚರಿಸುವವರು ಮುಗಿಲೆತ್ತರದಿಂದ ಹಾಲ್ನೊರೆಯಂತೆ ಕಾಣುವ ಈ ಝರಿ ಜಲಪಾತಗಳ ಮನಮೋಹಕ ದೃಶ್ಯ ನೋಡಲು, ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಮುಂಗಾರು ಮಳೆಯಿಂದ ಇಲ್ಲಿನ ಝರಿ ಜಲಪಾತಗಳು ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುತ್ತಿದ್ದರೆ, ಪ್ರವಾಸಿಗರನ್ನು ನಿಯಂತ್ರಿಸುವುದು ಸ್ಥಳೀಯ ಪೊಲೀಸರಿಗೆ ತಲೆಬಿಸಿಯ ವಿಷಯವಾಗಿದೆ.
ಒಟ್ಟಾರೆ ಕಾಫಿನಾಡಿನಲ್ಲಿ ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ, ಜೂನ್ ತಿಂಗಳ ಅಂತ್ಯದಲ್ಲಿ ಧಾರಾಕಾರವಾಗಿ ಸುರಿದ ಮುಂಗಾರು ಮಳೆಯಿಂದಾಗಿ ಮಲೆನಾಡಿನ ನೈಸರ್ಗಿಕ ಸಿರಿ ಸಂಪತ್ತಿಗೆ ಹೊಸ ಕಳೆ ನೀಡಿದ್ದು, ಮಲೆನಾಡಿನ ಆಕರ್ಷಣೆಯಾಗಿದ್ದ ಪ್ರಮುಖ ಝರಿ ಜಲಪಾತಗಳಿಗೆ ಜೀವಕಳೆ ನೀಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಲೆನಾಡಿನ ಹಸಿರ ಸಿರಿ, ಝರಿ ಜಲಪಾತಗಳ ದೃಶ್ಯ ವೈಭವ ಕಾಣಲು ವಾರಂತ್ಯಗಳಲ್ಲಿ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.