ಯುಪಿಎಸ್‌ಸಿ ಪರೀಕ್ಷೆಯಲ್ಲಿ 984ನೇ ರ್ಯಾಂಕ್ ಪಡೆದ ಮೋಹನ್ ಪಾಟೀಲ್
5ನೇ ಪ್ರಯತ್ನದಲ್ಲಿ ಯಶಸ್ಸು ಕಂಡ ‘ಕೆಂಬಾಳೆಯ ಕುವರ’

ಕಲಬುರಗಿ: ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಬೇಕೆಂದರೆ ಅಭ್ಯರ್ಥಿಯು ತನ್ನ ವಿದ್ಯಾಭ್ಯಾಸದಲ್ಲಿ ಹರಸಾಹಸ ಮಾಡಬೇಕಾದ ಸಂದರ್ಭ ಇದಾಗಿದೆ. ಈ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದು ಮತ್ತು ಅದರಲ್ಲಿ ಯಶಸ್ಸು ಕಂಡಿರುವುದನ್ನು ಬಹಳ ವಿರಳ. ಆದರೆ ಈ ಬಾರಿಯ(2024ರ) ಯುಪಿಎಸ್‌ಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಏಕೈಕ ಅಭ್ಯರ್ಥಿ ಪಾಸಾಗಿ ರಾಜ್ಯದಲ್ಲೀಗ ಗಮನ ಸೆಳೆದಿದ್ದಾರೆ.
ಕಲಬುರಗಿ ಜಿಲ್ಲೆಯ ’ಕೆಂಬಾಳೆ ನಾಡು’ ಎಂದೇ ಹೆಸರು ಪಡೆದಿರುವ ಕಮಲಾಪುರ ತಾಲೂಕಿನ ಡೋರ ಜಂಬಗಾ ಗ್ರಾಮದ ಮೋಹನ ಪಾಟೀಲ್ ಎಂಬವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 984ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯ ಫಲಿತಾಂಶಗಳಲ್ಲಿ ಕಲಬುರಗಿ ಜಿಲ್ಲೆ ಕಳಪೆ ಸಾಧನೆ ತೋರಿದರೂ ಇಂತಹ ಹಿಂದುಳಿದ ಭಾಗವೆಂದು ಗುರುತಿಸಿಕೊಂಡಿರುವಲ್ಲೇ ದೇಶದ ಅತ್ಯುನ್ನತ ಹುದ್ದೆಗೆ ಆಯ್ಕೆಯಾಗಿ ಇಲ್ಲಿಯೂ ಪರಿಶ್ರಮಿಗಳು ಇದ್ದಾರೆ ಎನ್ನುವುದನ್ನು ಮೋಹನ್ ಪಾಟೀಲ್ ತೋರಿಸಿಕೊಟ್ಟಿದ್ದಾರೆ. ಈ ಭಾಗದಲ್ಲಿ ವಿವಿಧ ಪರೀಕ್ಷೆಗಳ ಫಲಿತಾಂಶಗಳಲ್ಲಿ ಶೇಕಡಾವಾರು ಕಡಿಮೆ ಬಂದರೂ ಪ್ರಮುಖ ಹುದ್ದೆಗಳನ್ನು ಪಡೆಯುವಲ್ಲಿ ಯುವಕರು ಮುಂದೆ ಬರುತ್ತಿದ್ದಾರೆ. ಆದರೆ ಅವರಿಗೆ ಬೇಕಾಗುವ ಸಲಹೆ, ಮಾರ್ಗದರ್ಶನ ಸಿಗುತ್ತಿರುವುದು ವಿರಳ. ಕಲಬುರಗಿ ನಗರದಲ್ಲಿ ಈಗಷ್ಟೇ ಕೆಲವೊಂದು ಸ್ಪರ್ಧಾತ್ಮಕ ಕೇಂದ್ರಗಳು ಶುರುವಾಗಿದ್ದು, ಸ್ಪರ್ಧಾ ಆಕಾಂಕ್ಷಿಗಳಲ್ಲಿ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವ ಭರವಸೆ ಮೂಡಿಸಿವೆ. ಇಂತಹ ಸನ್ನಿವೇಶದಲ್ಲೂ ಮೋಹನ್ ಈಗ ಯುಪಿಎಸ್‌ಸಿ ಪಾಸಾಗಿದ್ದು ಗಮನಾರ್ಹ.
ಡೋರ ಜಂಬಗಾ ಗ್ರಾಮದ ಸಂಗಣ್ಣಗೌಡ ಪಾಟೀಲ ಮತ್ತು ಸವಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಮೋಹನ್ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವ-ಗ್ರಾಮದಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕಿಣ್ಣಿಸಡಾಕ್‌ನ ಮೌನೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದ್ದಾರೆ. ಬಳಿಕ ಕಲಬುರಗಿ ನಗರದ ಶ್ರೀಗುರು ಪಿಯು ಸ್ವತಂತ್ರ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ವಿಭಾಗದಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್(ಬಿ.ಇ) ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಪದವಿ ಬಳಿಕ ಅವರು ನೇರವಾಗಿ ಸಂಪೂರ್ಣ ಸಮಯವನ್ನು ಯುಪಿಎಸ್‌ಸಿ ಅಧ್ಯಯನಕ್ಕೆ ಮೀಸಲಿಟ್ಟರು.
ಮೆಕ್ಯಾನಿಕಲ್ ನಲ್ಲಿ ಪದವಿ ಪಡೆದರೆ ಕೆಲಸ ಸಿಕ್ಕಿಲ್ಲ ಎನ್ನುವ ಯುವಕರ ಮಧ್ಯೆಯೇ ಮೋಹನ್ ಅವರು ಬಿ.ಇ ಮುಗಿದ ಬಳಿಕವೇ ಕೆಲಸ ಪಡೆದುಕೊಂಡಿದ್ದರು. ಆದರೆ ಬಾಲ್ಯದಿಂದ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸಾಗುವ ಹಂಬಲದಿಂದ ಅವರು ಕೆಲಸವನ್ನು ತ್ಯಜಿಸಿ, ಗೆಳೆಯರೊಂದಿಗೆ ಬೆಂಗಳೂರಿನಲ್ಲಿ ಬಾಡಿಗೆ ರೂಮ್ ಹಿಡಿದುಕೊಂಡು ಓದಲು ಆರಂಭಿಸಿದ್ದರು. ಬೆಂಗಳೂರಿನ ವಿಜಯನಗರದ ಚಂದ್ರಾ ಲೇಔಟ್ ನಲ್ಲಿ ಉತ್ತರ ಕರ್ನಾಟಕದ ಸ್ಪೆಶಲ್ ಊಟ ಸಿಗುವುದರಿಂದ ಊಟದ ಬಗ್ಗೆ ಯಾವುದೇ ತೊಂದರೆಯಾಗದೆ ಇರೋದರಿಂದ ಖಾಸಗಿ ಲೈಬ್ರರಿಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಸಹಕಾರಿಯಾಯಿತು ಎಂದರು.
ಯುಪಿಎಸ್‌ಸಿ ಗೆ ಓದುತ್ತಿರುವವರ ಸೀನಿಯರ್ ಗಳ ಜೊತೆಗೆ ನಿರಂತರ ಚರ್ಚೆ ನಡೆಸುತ್ತಿದ್ದೆ, ಗೊತ್ತಾಗದ ಹಲವು ವಿಷಯಗಳ ಮಾಹಿತಿಗಳನ್ನು ಅವರಿಂದ ಪಡೆದುಕೊಂಡಿದೆ. ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಮೊದಲು ಹೈದ್ರಾಬಾದ್‌ನಲ್ಲಿ ಕೋಚಿಂಗ್ ಪಡೆದು ಪೂರ್ವ ತಯಾರಿ ನಡೆಸಿದ್ದೆ. ಬಳಿಕ ಸ್ವಯಂ ಅಧ್ಯಯನದಲ್ಲಿ ಹೆಚ್ಚು ತೊಡಗಿದೆ. 6 ವರ್ಷಗಳ ನಿರಂತರ ಅಧ್ಯಯನದಿಂದ ಕೊನೆಗೆ ಯಶಸ್ಸು ಕಂಡಿರುವುದು ಖುಷಿಯಾಗಿದೆ ಎಂದು ಮೋಹನ್ ತಿಳಿಸಿದ್ದಾರೆ.
ಮೋಹನ್ ಪಾಟೀಲ್ ಅವರಿಗೆ ತಂದೆ ಮತ್ತು ಕುಟುಂಬ ಸಮೇತ ಅವರ ಬೆನ್ನಿಗೆ ನಿಂತಿದ್ದರಿಂದ ಈ ಸಾಧನೆ ಮಾಡಲು ಸಹಕಾರಿಯಾಗಿದೆ. ಹಾಗಾಗಿ ಅತ್ಯುನ್ನತ ಹುದ್ದೆಗಳನ್ನು ಪಡೆಯಲು ಓದುವ ಆಕಾಂಕ್ಷಿಗಳಿಗೆ ಕುಟುಂಬದಲ್ಲೂ ಕೊಂಚ ಪ್ರಮಾಣ ಬೆಂಬಲವಿದ್ದರೆ ಖಂಡಿತ ಅವರು ತಮ್ಮ ಗುರಿಗಳನ್ನು ತಲುಪುವುದರಲ್ಲಿ ಯಶಸ್ವಿಯಾಗುತ್ತಾರೆ.
5ನೇ ಸತತ ಪ್ರಯತ್ನದಲ್ಲಿ ಯಶಸ್ಸು
2020ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದೆ, ಮತ್ತಷ್ಟು ಕುತೂಹಲದಿಂದ ಮತ್ತೆ ಮತ್ತೆ ಪರೀಕ್ಷೆ ಬರೆದೆ. ಇದರ ಮಧ್ಯೆಯೇ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರಿಂದ ಖುಷಿಯಾಯಿತು. 2 ಬಾರಿ ಸಂದರ್ಶನಕ್ಕೂ ಆಯ್ಕೆಯಾದ ಬಳಿಕ ಆಸೆ ದುಪ್ಪಟ್ಟಾಯಿತು. ಹಾಗಾಗಿ 2024ರ ಪರೀಕ್ಷೆಯಲ್ಲಿ 5ನೇ ಸಲದ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿ 3ನೇ ಬಾರಿಗೆ ಸಂದರ್ಶನ ಎದುರಿಸಿದೆ. ಇದೇ ಬಾರಿಗೆ 984ನೇ ರ್ಯಾಂಕ್ ಪಡೆಯುವ ಮೂಲಕ ಯಶಸ್ಸು ಸಿಕ್ಕಿತು.
-ಮೋಹನ್ ಪಾಟೀಲ್, ಯುಪಿಎಸ್‌ಸಿ ಪರೀಕ್ಷೆ ಯಲ್ಲಿ 984ನೇ ರ್ಯಾಂಕ್ ಪಡೆದ ಅಭ್ಯರ್ಥಿ
‘ಸ್ಮಾರ್ಟ್ ವರ್ಕ್ ಮುಖ್ಯ’
ಯಾವುದೇ ಒಂದು ಹುದ್ದೆ ಪಡೆಯಬೇಕಾದರೆ ಎಷ್ಟು ಗಂಟೆ ಓದುತ್ತಿರಿ ಎಂಬುವುದು ಮುಖ್ಯವಲ್ಲ, ಎಷ್ಟು ಪರಿಣಾಮಕಾರಿಯಾಗಿ ಓದುತ್ತಿರಿ ಎನ್ನುವುದು ಮುಖ್ಯವಾಗುತ್ತದೆ. ಯುಪಿಎಸ್‌ಸಿ ಪರೀಕ್ಷೆಗಾಗಿ ನಾನು ಸಾಮಾನ್ಯವಾಗಿ 6 ಗಂಟೆಯಿಂದ 8 ಗಂಟೆಯವರೆಗೆ ಓದುತ್ತಿದ್ದೆ, ಪರೀಕ್ಷೆ ವೇಳೆಯಲ್ಲಿ 8 ಗಂಟೆಗೂ ಹೆಚ್ಚು ಓದುತ್ತಿದ್ದೆ. ಹಾರ್ಡ್ ವರ್ಕ್ ಜೊತೆ ಸ್ಮಾರ್ಟ್ ವರ್ಕ್ ಮುಖ್ಯ. ಮೊಬೈಲ್ ಫೋನ್ ಮಿತವಾಗಿ ಬಳಸಿದಷ್ಟು ಸಹಕಾರಿ. ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು ಇನ್ನೂ ಉತ್ತಮ ಎಂದು ಮೋಹನ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.