ಕುಸಿದ ಮಾವಿನ ಬೆಲೆ, ನೇರಳೆಗೆ ಹೆಚ್ಚಿದ ಬೇಡಿಕೆ

ಹೊಸಕೋಟೆ: ಮಾವಿನ ಹಣ್ಣಿಗೆ ಬೆಲೆ ಕುಸಿದಿರುವ ಬೆನ್ನಲ್ಲೇ ನೇರಳೆ ಹಣ್ಣಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದೆೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200ರಿಂದ 250 ರೂ.ಗೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಮಳೆ ಪ್ರಮಾಣ ಹೆಚ್ಚಾಗಿ ಮಾವಿನ ಹಣ್ಣಿನ ವ್ಯಾಪಾರದಲ್ಲಿ ಕುಸಿತ ಕಂಡಿದೆ. ಇದರ ಪರಿಣಾಮ ನೇರಳೆಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಈ ಹಣ್ಣು ಮಳೆಯಿಂದಾಗಿ ಮರದಿಂದ ಉದುರುವುದರಿಂದ ಬೆಳೆ ನಷ್ಟ ಇದ್ದೇ ಇದೆ. ಆದರೂ ಬೆಳೆಗಾರರಿಗೆ ಇದು ಲಾಭದ ಹಣ್ಣಾಗಿದೆ.
ಮಕ್ಕಳಿಗೆ ಪ್ರಿಯವಾದ ನೇರಳೆ ಹಣ್ಣು ಒಗರಿನಿಂದ ಕೂಡಿದ್ದು ಸಿಹಿ ಮಿಶ್ರಿತವಾಗಿದೆ. ನೇರಳೆಹಣ್ಣು ತಿಂದರೆ ನಾಲಗೆ ನೀಲಿ ಬಣ್ಣವಾಗುತ್ತದೆ. ತಾಲೂಕಿನಲ್ಲಿ ಜಂಬು ನೇರಳೆಹಣ್ಣಿನ ಮರಗಳು ತೀರಾ ಅಪರೂಪ. ಆದರೂ ನಾಟಿ ನೇರಳೆಹಣ್ಣು ಹೆಚ್ಚಾಗಿದೆ. ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ತಾಲೂಕಿನಲ್ಲಿ ನೇರಳೆ ಮರಗಳ ಬೆಳವಣಿಗೆ ಅಪರೂಪ. ಗ್ರಾಮೀಣ ಪ್ರದೇಶದಲ್ಲಿ ಸಹ ಹೆಚ್ಚಾಗಿ ಕಾಣಿಸುವುದಿಲ್ಲ. ಪಟ್ಟಣ ಪ್ರದೇಶದಲ್ಲಿ ಕೆಲವು ಪರಿಸರ ಪ್ರೇಮಿಗಳು ತಮ್ಮ ಮನೆಯ ಅಂಗಳದಲ್ಲಿ ಒಂದೊಂದು ಮರ ಇಟ್ಟುಕೊಂಡಿರುವುದರಿಂದ ನೇರಳೆಹಣ್ಣಿಗೆ ಹೆಚ್ಚು ಬೇಡಿಕೆ ಇದೆ.
ನೇರಳೆ ಹಣ್ಣಿಗೆ ಬೆಲೆ ಹೆಚ್ಚಳ: ನೆರೆಯ ಆಂಧ್ರಪ್ರದೇಶದ ಮದನಪಲ್ಲಿ ಮತ್ತು ಪಲಮನೇರು ಪ್ರದೇಶಗಳಿಂದ ನೇರಳೆಹಣ್ಣು ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಮೂರು ನಾಲ್ಕು ಕಡೆ ಮಾತ್ರ ಮಾರಾಟ ಮಾಡುತ್ತಿದ್ದಾರೆ. ಒಂದು ಕೆ.ಜಿ. ನೇರಳೆಹಣ್ಣಿನ ಬೆಲೆ 200 ರಿಂದ 250 ರೂ. ಗಳಾಗಿರುವುದರಿಂದ ತಿನ್ನಲು ಬಯಕೆ ಇದ್ದರೂ ತಿನ್ನುವುದಕ್ಕೆ ಆಗುತ್ತಿಲ್ಲ. ಪಟ್ಟಣದ ಕುವೆಂಪು ವೃತ್ತ, ಕೆಇಬಿ ರಸ್ತೆ, ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ, ಎದುರು ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಇಟ್ಟುಕೊಂಡು ಕಾಲು ಕೆಜಿಗೆ 50 ರೂ.ವರೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಕಷಾಯ ಕುಡಿದರೆ ರೋಗ ದೂರ: ಬಾಯಿ ಸದಾ ದುರ್ಗಂಧ ಬೀರುತ್ತಿದ್ದರೆ ನೇರಳೆ ಮರದ ತೊಗಟೆಯ ಕಷಾಯ ಮಾಡಿ ಕುಡಿಯುತ್ತಿದ್ದರೆ ಸಮಸ್ಯೆಯಿಂದ ಪಾರಾಗಬಹುದು. ಈ ಕಷಾಯವು ಗಂಟಲು ನೋವು, ಗೊರಲು, ಉಬ್ಬಸ ಮುಂತಾದ ನೋವುಗಳಿಗೂ ರಾಮಬಾಣ. ನೇರಳೆ ಹಣ್ಣಿನ ರಸ ಮಾಡಿ ಕುಡಿದರೆ ದೇಹವನ್ನು ತಂಪಾಗಿ ಇರಿಸಿಕೊಳ್ಳಬಹುದು.
ದುಬಾರಿಯಾದರೂ ತಿನ್ನಲು ರುಚಿ: ಹೊಳೆಯುವ ಈ ಹಣ್ಣು ನೋಡಿದಾಕ್ಷಣ ಎಂಥವರಿಗೂ ತಿನ್ನುವ ಆಸೆಯಾಗುತ್ತದೆ, ಒಗರು ಒಗರು ಎನಿಸಿದರೂ ಬಾಯಿಗಿಟ್ಟೊಡನೆ ಇಷ್ಟವಾಗುತ್ತದೆ. ನಾಲಿಗೆಯ ಬಣ್ಣ ನೀಲಿಯಾಗುವುದರಿಂದ ಮಕ್ಕಳಿಗೂ ಇದು ಪ್ರಿಯ. ವೈನ್ ಪ್ರಿಯರಿಗೂ ಬಾಯಲ್ಲಿ ನೀರೂರಿಸುವ ಹಣ್ಣು ನೇರಳೆ. ಬೇಸಿಗೆ ಕಾಲ ಮುಗಿಯುತ್ತಿದಂತೆಯೇ ಎಲ್ಲಿ ನೋಡಿದರೂ ಹಣ್ಣು-ಹಂಪಲು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ನೇರಳೆಹಣ್ಣು ಸಿಗುವುದೇ ಅಪರೂಪವಾಗಿರುವುದರಿಂದ ಬೆಲೆ ಕೆ.ಜಿ.ಗೆ 200 ರೂ.ನಿಂದ 250 ರೂ. ಗಳಾಗಿದೆ. ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ.
ಉತ್ಪಾದನೆ ಪ್ರಮಾಣ ಇಳಿಕೆ
ನೇರಳೆ ಹಣ್ಣಿನ ರಸದ ಸೇವನೆಯಿಂದ ಮುಖದ ಕಾಂತಿ ಮತ್ತು ಮೈ ಅಂದ ಹೆಚ್ಚುತ್ತದೆ. ಜಂಬು ನೇರಳೆಹಣ್ಣುಗಳನ್ನು ತಿನ್ನುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಆದರೆ, ಉತ್ಪಾದನೆ ಕಡಿಮೆಯಾಗಿರುವುದರಿಂದ ಇದರ ಬೆಲೆ ಗಗನಕ್ಕೇರಿದೆ.
ಉಪ್ಪಿನೊಂದಿಗೆ ತಿಂದರೆ ಹೆಚ್ಚು ರುಚಿ
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ನೇರಳೆಹಣ್ಣಿನ ಸುಗ್ಗಿ ಯ ಕಾಲವಾಗಿದೆ. ದೊಡ್ಡ ಗಾತ್ರದಲ್ಲಿರುವ ನೇರಳೆ ಹಣ್ಣು ನೋಡಲು ಸುಂದರವಾಗಿರುತ್ತದೆ, ಒಗರು ರುಚಿಯನ್ನು ಹೊಂದಿರುವ ನೇರಳೆಹಣ್ಣನ್ನು ಉಪ್ಪಿನೊಂದಿಗೆ ಬೆರೆಸಿ ತಿಂದರೆ ಬಲು ರುಚಿಯಾಗಿರುತ್ತದೆ. ನೇರಳೆ ಹಣ್ಣು ಮಾತ್ರವಲ್ಲದೇ, ಈ ಹಣ್ಣಿನ ಗಿಡ, ಬೇರು, ಎಲೆ, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಹಲವಾರು ಕಾಯಿಲೆ, ಆನಾರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಚಮತ್ಕಾರಿ ಗುಣವನ್ನು ಇದು ಹೊಂದಿದೆ. ಈ ಮರದ ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
ನಾನು ತಮಿಳುನಾಡಿನಿಂದ ನೇರಳೆ ಹಣ್ಣು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ ಮೂರು ನೂರರಿಂದ ನಾಲ್ಕು ನೂರು ರೂ. ಲಾಭ ಬರುತ್ತದೆ. ಜೀವನ ಸಾಗಿಸುವಷ್ಟು ವ್ಯಾಪಾರ ತೃಪ್ತಿ ತಂದಿದೆ. ವ್ಯಾಪಾರ ಆಗದೇ ಹಣ್ಣು ಕೊಳೆತು ನಷ್ಟವಾದ ದಿನವೂ ಇದೆ.
-ಮುಬಾರಕ್, ಹಣ್ಣು ವ್ಯಾಪಾರಿ