ಶಿಕ್ಷಕರ ಮೇಲಿನ ಕಾರ್ಯಭಾರ ಇಳಿಕೆಯಾಗಲಿ

ಶಿಕ್ಷಕ ವೃತ್ತಿಯಲ್ಲಿರುವ ಸ್ನೇಹಿತೆಯೊಬ್ಬಳು ಕೆಲಸದ ಒತ್ತಡದಿಂದ ಬೇಸತ್ತು ಇತ್ತೀಚೆಗೆ ತನ್ನ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿದಳು. ಶಿಕ್ಷಕ ವೃತ್ತಿಯ ಕುರಿತು ಅತ್ಯಂತ ಪ್ರೀತಿ, ಗೌರವವನ್ನು ಹೊಂದಿದ್ದ ಆಕೆ ಅತೀವ ಖಿನ್ನತೆಯಿಂದ ಬಳಲುತ್ತಿದ್ದಳು. ಮಕ್ಕಳಿಗೆ ಪಾಠವನ್ನು ಬೋಧಿಸುವುದಕ್ಕಿಂತ ಹೆಚ್ಚಾಗಿ ಸರಕಾರ ವಹಿಸಿದ ಇನ್ನಿತರ ಕೆಲಸಗಳಿಗೇ ವೇಳೆಯನ್ನು ಮೀಸಲಿಡಬೇಕಾಗಿದೆ ಎಂದಳು. ಬಿಸಿಯೂಟ, ಜನಗಣತಿ, ಜಾತಿಗಣತಿ, ಚುನಾವಣೆ ಕರ್ತವ್ಯ, ನಲಿ-ಕಲಿ ಚಟುವಟಿಕೆ, ಸಭೆಗಳು ಹೀಗೆ ಒಂದರ ಹಿಂದೆ ಮತ್ತೊಂದು ಜವಾಬ್ದಾರಿಗಳು ಸರಕಾರಿ ಶಾಲಾ ಶಿಕ್ಷಕರ ಬೆನ್ನೇರುತ್ತಿವೆ. ಇದರಿಂದ ಅವರ ಕಾರ್ಯಭಾರವು ಹೆಚ್ಚಾಗಿ ವೃತ್ತಿಯೆಂಬುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಗ್ರಾಮೀಣ ಹಾಗೂ ಕೆಲ ಹಿಂದುಳಿದ ಪ್ರದೇಶಗಳಲ್ಲಿ ಸರಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಸರಕಾರಿ ಶಾಲೆಗಳು ಹಾಜರಾತಿಯ ಕೊರತೆಯನ್ನು ಎದುರಿಸುತ್ತಿವೆ. ಮೇಲಧಿಕಾರಿಗಳಿಂದ ನಿರಂತರ ಒತ್ತಡವನ್ನು ಶಿಕ್ಷಕರು ಹೊಂದಿರುತ್ತಾರೆ. ಈ ಸಮಸ್ಯೆಯನ್ನು ನೀಗಿಸಲು ಶಿಕ್ಷಕರೇ ಶ್ರಮಿಸಬೇಕಿದೆ. ಶಾಲಾ ಪ್ರಾರಂಭದ ದಿನಗಳಲ್ಲಿ ಶಿಕ್ಷಕರು ಮಕ್ಕಳ ಮನೆ ಮನೆಗೂ ಭೇಟಿಕೊಟ್ಟು ಮಕ್ಕಳ ಹಾಗೂ ಪಾಲಕರ ಮನವೊಲಿಸಿ ಶಾಲೆಗೆ ಕರೆತರಬೇಕಾಗಿದೆ. ಅಲ್ಪ ಸ್ವಲ್ಪ ಆರ್ಥಿಕವಾಗಿ ಅನುಕೂಲಸ್ಥರಾದ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಇಳಿಕೆಯಾಗಿದೆ. ಶಾಲೆಗಳಲ್ಲಿ ಬೋಧನೆ ಮಾಡಬೇಕಾದ ಶಿಕ್ಷಕರು ಮಕ್ಕಳ ಮನೆ ಮನೆಗೆ ಅಲೆದಾಡುವಂತಾಗಿದೆ. ಇದರಿಂದ ಶಾಲೆಗಳಲ್ಲಿರುವ ಮಕ್ಕಳು ಪಾಠವಿಲ್ಲದೆ ವ್ಯರ್ಥ ಸಮಯವನ್ನು ಕಳೆಯುವಂತಾಗುವುದು ಸಾಮಾನ್ಯ. ಈ ಕೊರಗು ಶಿಕ್ಷಕರಲ್ಲಿ ಮನೆ ಮಾಡಿದೆ.
ಇನ್ನು ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸದಂತೆ ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಜಂಟಿ ಮುಖ್ಯ ಚುನಾವಣಾಧಿಕಾರಿಗಳು ಆ ಕೋರಿಕೆಯನ್ನು ಒಪ್ಪಿಕೊಳ್ಳಲಾಗದು ಎಂದಿದ್ದಾರೆ. ಶಿಕ್ಷಣ ಸಚಿವರು ಕೂಡ ಸರಕಾರಿ ಶಾಲಾ ಶಿಕ್ಷಕರನ್ನು ಅನ್ಯ ಚಟುವಟಿಕೆಗಳಿಗೆ ನಿಯೋಜಿಸದಂತೆ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದಾರೆ. ಆದರೆ ಯಾವುದೇ ಬಿನ್ನಹಗಳೂ ಸರಕಾರದ ಮೇಲೆ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿಲ್ಲ. ರಜಾದಿನಗಳಲ್ಲಿ ಮಾತ್ರ ಶಿಕ್ಷಕರ ಸೇವೆಯನ್ನು ಚುನಾವಣಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಆದರೆ ಬೋಧನಾ ಸಮಯದಲ್ಲಿಯೂ ಕೂಡ ಸರಕಾರಿ ಶಾಲಾ ಶಿಕ್ಷಕರನ್ನು ಚುನಾವಣೇತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಶಿಕ್ಷಕರು ತಮ್ಮ ಮೇಲೆ ಹೇರಲಾಗುತ್ತಿರುವ ಜವಾಬ್ದಾರಿಗಳ ಕಾರ್ಯ ಬಾಹುಳ್ಯದಿಂದ ನಿರಸನಗೊಂಡಿದ್ದಾರೆ. ತಾವು ಆಸ್ಥೆಯಿಂದ ಆಯ್ದುಕೊಂಡ ವೃತ್ತಿಯ ಕುರಿತು ನಿರಾಸಕ್ತಿಯನ್ನು ತಾಳುತ್ತಿದ್ದಾರೆ.
ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಾಗಲೀ ಅಥವಾ ಸರಕಾರವಾಗಲೀ ಪ್ರಯತ್ನಿಸದಿರುವುದು ವಿಷಾದನೀಯ. ಇತ್ತೀಚೆಗೆ ದಾವಣಗೆರೆ ಮಹಾನಗರ ಪಾಲಿಕೆಯವರು ನೀರಿನ ಕರ ಹಾಗೂ ಆಸ್ತಿ ತೆರಿಗೆ ವಸೂಲಾತಿ ಹೊಣೆಯನ್ನು ಸ್ವಸಹಾಯ ಸಂಘದ ಮಹಿಳೆಯರಿಗೆ ವಹಿಸಿರುವುದು ಪ್ರಶಂಸನೀಯ. ಸ್ಥಳೀಯ ಸ್ವಸಹಾಯ ಸಂಘದ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ ಅವರಿಂದ ಸೇವೆಯನ್ನು ಪಡೆಯಲಾಗುತ್ತಿದೆ. ಅದೇ ರೀತಿ ಸರಕಾರಿ ಶಾಲಾ ಶಿಕ್ಷಕರ ಮೇಲಿನ ಕಾರ್ಯಭಾರವನ್ನು ಕಡಿಮೆ ಮಾಡಲು ಸ್ತ್ರೀಶಕ್ತಿ ಸಹಾಯವನ್ನು ಪಡೆಯಬಹುದು. ಈ ಮಹಿಳೆಯರಿಗೆ ಸೂಕ್ತ ತರಬೇತಿಯನ್ನು ನೀಡಿದರೆ ಆಸ್ಥೆಯಿಂದ ಹಾಗೂ ಶ್ರಮವಹಿಸಿ ಕಾರ್ಯ ನಿರ್ವಹಿಸಬಲ್ಲರು. ಚುನಾವಣಾ ಕರ್ತವ್ಯದಂತಹ ಚಟುವಟಿಕೆಗಳಿಗೆ ಸ್ತ್ರೀಶಕ್ತಿ ಸಂಘಗಳ ಸಹಾಯವನ್ನು ಪಡೆದುಕೊಳ್ಳಬೇಕು. ಇದರಿಂದ ಸ್ವಸಹಾಯ ಸಂಘದ ಮಹಿಳೆಯರೂ ಆರ್ಥಿಕವಾಗಿ ಸಬಲರಾಗುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳು ನಮ್ಮ ದೇಶದ ಶಕ್ತಿ. ಇವುಗಳ ಸದುಪಯೋಗದಿಂದ ಶಿಕ್ಷಕರ ಮೇಲಿರುವ ಹೊರೆ ಕಡಿಮೆಯಾಗಬಲ್ಲದು. ಭವಿಷ್ಯತ್ತಿನ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಒತ್ತಡರಹಿತರಾಗಿರಬೇಕಿರುವುದು ಅತೀ ಮುಖ್ಯ.
ಇತ್ತೀಚಿನ ಯುವಜನಾಂಗ ಕೇವಲ ಐಟಿ, ಬಿಟಿ, ವೈದ್ಯಕೀಯ ಕ್ಷೇತ್ರಗಳ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರ ಬೋಧನಾ ಸಿಬ್ಬಂದಿ ಕೊರತೆಯನ್ನು ಎದುರಿಸುವಂತಾಗಿದೆ. ಇಂಥ ಪರಿಸ್ಥಿಯಲ್ಲಿ ಶಿಕ್ಷಕರ ಮೇಲೆ ನಿರಂತರವಾಗಿ ಹೊರೆ ಬೀಳುತ್ತಿದ್ದಲ್ಲಿ ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಹೊಂದಿದ ಯುವಕ-ಯುವತಿಯರು ಶಿಕ್ಷಕ ವೃತ್ತಿಯಿಂದ ವಿಮುಖರಾಗಬಹುದು. ಹಾಗಾಗಿ ಸರಕಾರಿ ಶಾಲಾ ಶಿಕ್ಷಕರು ಎದುರಿಸುತ್ತಿರುವ ಈ ಸಮಸ್ಯೆಯ ಕುರಿತು ಸರಕಾರ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಅಗತ್ಯವಿದೆ.