ಚಿರತೆ ಮುಂಗಾಲು ನಾಪತ್ತೆ ಪ್ರಕರಣ: ಸರಕಾರಕ್ಕೆ ವರದಿ ಸಲ್ಲಿಕೆ

ಸಾಂದರ್ಭಿಕ ಚಿತ್ರ PC : PTI
ಚಾಮರಾಜನಗರ : ರಾಜ್ಯದಲ್ಲಿ ಅತೀಹೆಚ್ಚು ಅರಣ್ಯ ಪ್ರದೇಶದೊಂದಿಗೆ ಹುಲಿ ಆನೆ ಸಂಖ್ಯೆಯಲ್ಲೂ ಅಧಿಕವಾಗಿರುವ ಚಾಮರಾಜನಗರ ಜಿಲ್ಲೆಯ ಚಿರತೆ ಸಾವನ್ನು ಗೌಪ್ಯವಾಗಿಟ್ಟಿದ್ದ ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಮೃತ ಚಿರತೆಯ ಮುಂಗಾಲುಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ.
ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ಉಪ ವಿಭಾಗದ ರಾಮಾಪುರ ವನ್ಯಜೀವಿ ವಲಯ(ಕೌದಳ್ಳಿ ಕಚೇರಿ) ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಗೌಪ್ಯವಾಗಿಟ್ಟಿದ್ದ ಚಿರತೆ ಸಾವು ಪ್ರಕರಣದ ಅಸಲಿಯತ್ತು ಬಯಲಾಗಿದೆ. ಚಿರತೆ ಸಹಜವಾಗಿಯೇ ಸತ್ತಿದ್ದರೂ ಅದರ ಮುಂಗಾಲುಗಳನ್ನು ಬೇಟೆಗಾರರು ಕತ್ತರಿಸಿಕೊಂಡು ಹೋಗಿದ್ದು ಅರಣ್ಯಾಧಿಕಾರಿಗಳಿಗೆ ತಲೆನೋವಾಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳ ಸಾವು ಸಂಭವಿಸುವ ಮೊದಲು ಕೌದಳ್ಳಿಯಲ್ಲಿ ಚಿರತೆಯೊಂದು ಮೃತಪಟ್ಟಿತ್ತು. ಆದರೆ ಈ ವಿಚಾರವನ್ನು ಅರಣ್ಯಾಧಿಕಾರಿಗಳು ಬಹಿರಂಗಪಡಿಸದೆ ಗೌಪ್ಯವಾಗಿಟ್ಟಿದ್ದರು. ಐದು ಹುಲಿಗಳ ಸಾವಿನ ಪ್ರಕರಣ ಬಯಲಾಗುತ್ತಿದ್ದಂತೆ ಮುಚ್ಚಿಟ್ಟಿದ್ದ ಚಿರತೆ ಸಾವು ಪ್ರಕರಣ ಬೆಳಕಿಗೆ ಬಂತು.
ತನಿಖೆಗೆ ಆದೇಶಿಸಿದ್ದ ಅರಣ್ಯ ಸಚಿವ: ಮಲೆ ಮಹದೇಶ್ವರ ವನ್ಯಜೀವಿಧಾಮದ ರಾಮಾಪುರ ವಲಯದಲ್ಲಿ ಚಿರತೆ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಕಳೆದ ಜೂ.30ರಂದು ತನಿಖೆಗೆ ಆದೇಶ ಹೊರಡಿಸಿದ್ದರು.
ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಪ್ರದೇಶದ ವ್ಯಾಪ್ತಿಯ ರಾಮಾಪುರ ಮತ್ತು ಮಾರ್ಟಳ್ಳಿ ಗಡಿಯಲ್ಲಿ ಕಳೆದ 15 ದಿನಗಳ ಹಿಂದೆ ಚಿರತೆಯೊಂದರ ಮೃತದೇಹ ಪತ್ತೆಯಾಗಿತ್ತು. ಇದರ ಕಾಲುಗಳನ್ನು ಕಡಿಯಲಾಗಿತ್ತು ಎಂಬ ಮಾಹಿತಿ ಕಚೇರಿಗೆ ಬಂದಿದೆ. ಚಿರತೆಯ ಉಗುರುಗಳಿಗಾಗಿ ಹತ್ಯೆ ನಡೆದಿದೆ ಎನ್ನಲಾಗಿದ್ದು, ಅಧಿಕಾರಿಗಳು ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂಬುದು ಅನುಮಾನಗಳನ್ನು ಹುಟ್ಟುಹಾಕಿದ್ದು, ಅರಣ್ಯ ಇಲಾಖೆಯ ಕಚೇರಿಯಿಂದ ನೀಡಲಾದ ಟಿಪ್ಪಣಿಯಲ್ಲಿ ಪರಿಶಿಷ್ಟದಲ್ಲಿರುವ ಯಾವುದೇ ವನ್ಯಜೀವಿ ಮೃತಪಟ್ಟರೆ ಆಡಿಟ್ ಮಾಡಿಸಿ, ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಚಿರತೆ ಸಾವಿಗೀಡಾಗಿದೆ ಎನ್ನಲಾದ ಪ್ರಕರಣದ ಬಗ್ಗೆ ಎಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸಿ, ಇದು ನಿಜವಾಗಿದ್ದಲ್ಲಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದರು.
ತನಿಖೆಯ ವರದಿ ಸಲ್ಲಿಕೆ : ಸಚಿವರ ಸೂಚನೆ ಮೇರೆಗೆ ಚಿರತೆ ಸಾವಿನ ತನಿಖೆ ನಡೆಸಿ ವರದಿ ಸಿದ್ಧಗೊಂಡಿದೆ. ತನಿಖೆಯಲ್ಲಿ ಚಿರತೆ ಸತ್ತಿರುವುದಕ್ಕೆ ಕಾರಣ, ಎಷ್ಟು ದಿನಗಳ ಹಿಂದೆ ಮೃತಪಟ್ಟಿದೆ, ಕಾಲುಗಳನ್ನು ಕತ್ತರಿಸಲಾಗಿದೆಯೇ, ಎಷ್ಟು ಕಾಲುಗಳನ್ನು ಕತ್ತರಿಸಲಾಗಿದೆ, ಈ ಕೃತ್ಯ ನಡೆದಿರುವುದು ಹೇಗೆ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆದಿದೆ. ಸತ್ತಿರುವ ಚಿರತೆಯನ್ನು ನೋಡಿ ಯಾರೋ ದುಷ್ಕರ್ಮಿಗಳು ಮುಂಗಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ ಎಂದು ಗೊತ್ತಾಗಿದೆ. ಕೃತ್ಯವೆಸಗಿರುವವರ ಕುರಿತು ಅರಣ್ಯಾಧಿಕಾರಿಗಳಿಗೆ ಕೆಲವು ಮಾಹಿತಿಗಳು ಲಭ್ಯವಾಗಿವೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಮತ್ತದೇ ನಿರ್ಲಕ್ಷ್ಯ: ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳ ಕರ್ತವ್ಯಲೋಪ ಬಹಿರಂಗಗೊಂಡಿದೆ. ಈ ಚಿರತೆ ಸಾವಿನ ಪ್ರಕರಣದಲ್ಲೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಚಿರತೆ ಸ್ವಾಭಾವಿಕವಾಗಿಯೇ ಮೃತಪಟ್ಟರೂ ಅದರ ಕಾಲುಗಳನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗುವವರೆಗೂ ಅರಣ್ಯ ಇಲಾಖೆಗೆ ಅಧಿಕಾರಿಗಳಗೆ ತಿಳಿಯಲಿಲ್ಲವೇ? ಇದಕ್ಕಿಂತಲೂ ಮುಖ್ಯವಾಗಿ ಪ್ರಕರಣವನ್ನು ಗೌಪ್ಯವಾಗಿಟ್ಟಿದ್ದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಫಾರಸು ಮಾಡಬೇಕೆಂದು ಈಗಾಗಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಚಿರತೆ ಸಾವಿನ ಪ್ರಕರಣದಲ್ಲಿ ಯಾರ ತಲೆದಂಡವಾಗುವುದೋ ಕಾದುನೋಡಬೇಕಾಗಿದೆ.
ಚಿರತೆ ಮೃತಪಟ್ಟಿದ್ದ ವರದಿ ಮಂಗಳವಾರ ಸಲ್ಲಿಕೆ ಮಾಡಿದ್ದಾರೆ. ಇದನ್ನು ಪಿಸಿಸಿಎಫ್ ಅವರಿಗೆ ಕಳುಹಿಸಿಕೊಡುತ್ತಿದ್ದೇನೆ. ಚಿರತೆ ಸಹಜವಾಗಿ ಮೃತಪಟ್ಟಿದೆ. ಒಂದೆರಡು ದಿನಗಳಲ್ಲಿ ಯಾರೋ ನೋಡಿದ್ದಾರೆ. ಮುಂದಿನ ಕಾಲುಗಳನ್ನು ಕತ್ತರಿಸಿದ್ದಾರೆ. ಕೃತ್ಯವೆಸಗಿದ ಆರೋಪಿಗಳ ಪತ್ತೆಗೆ ಒಂದು ಮಾಹಿತಿ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ.
-ಟಿ. ಹೀರಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ,ಚಾಮರಾಜನಗರ ವೃತ್ತ