ಸಾಕಿದ ಪ್ರಾಣಿ ತಿನ್ನದ ‘ಕುಂಬ್ರಿ’

ಒಮ್ಮೆ ಉತ್ತರಕನ್ನಡದ ಕಾಡಂಚಿನಲ್ಲಿದ್ದ ಕುಂಬ್ರಿ ಕಾಲನಿಯೊಂದಕ್ಕೆ ಬೆಟ್ಟಿ ಕೊಟ್ಟಾಗ, ಕುಂಬ್ರಿ ಸಮುದಾಯದ ಮನೆಯೊಳಗಿನ ಸ್ಥಿತಿಗತಿ ಹೇಗಿದೆಯೆಂದು ಅರಿಯಲು ಕುತೂಹಲದಿಂದ ಅವರ ಅಪ್ಪಣೆ ಪಡೆದೇ ಅವರ ಸಣ್ಣಪುಟ್ಟ ಮನೆಗಳೊಳಕ್ಕೆ ಹೋದೆ. ಬಡತನ ಎದ್ದು ಕಾಣುತ್ತಿತ್ತು. ಅದು ಊಟದ ಸಮಯವಾದ್ದರಿಂದ ಒಲೆಯ ಮೇಲಿನ ಪಾತ್ರೆಗಳಲ್ಲಿ ಅಡಿಗೆ ಬೇಯುತ್ತಿತ್ತು, ಬಹುತೇಕ ಮನೆಗಳಲ್ಲಿ ಸಣ್ಣ ಮೀನಿನ ಸಾರನ್ನು ಕಂಡು ಆಶ್ಚರ್ಯವಾಯಿತು. ಇವರು ದಿನನಿತ್ಯ ಮೀನು ಸಾರನ್ನೇ ತಿನ್ನುತ್ತಾರೆಯೆ..? ಎನಿಸಿತು. ಮನೆಯೊಂದರ ಜಗುಲಿ ಮೇಲೆ ಕೇಸರಿ ವಸ್ತ್ರ ಉಟ್ಟು, ಹಣೆಯಲ್ಲಿ ಕುಂಕುಮ ಇಟ್ಟುಕೊಂಡು ಕುಳಿತಿದ್ದ ಪೂಜಾರಪ್ಪನನ್ನು(ಇವರನ್ನು ಮಿರಾಶಿ ಎನ್ನುತ್ತಾರೆ) ಮಾತಾಡಿಸುತ್ತಾ ‘‘ನಿಮ್ಮ ಮನೆಗಳ ಸುತ್ತ ಇಷ್ಟು ಹಸಿರು ವಾತಾವರಣವಿದೆ, ನೀವು ಕುರಿ ಕೋಳಿ ಸಾಕಲ್ಲವೆ?’’ ಎಂದೆ. ಆತ ‘‘ಇಲ್ಲ ಸ್ವಾಮಿ ನಾವು ಸಾಕಿದ ಪ್ರಾಣಿಯನ್ನು ತಿನ್ನಲ್ಲ. ಆದ್ದರಿಂದ ಕುರಿ ಕೋಳಿ ಸಾಕಲ್ಲ’’ ಎಂದರು!
ನನಗೆ ಆಶ್ಚರ್ಯವಾಯಿತು. ‘‘ಸಾಕಿದ ಪ್ರಾಣಿಯನ್ನು ಯಾಕೆ ತಿನ್ನಲ್ಲ.. ನೀವು ಮಾಂಸಾಹಾರಿಗಳಲ್ಲವೆ..? ನಿಮ್ಮ ಮನೆಗಳ ಒಲೆಗಳ ಮೇಲೆ ಮೀನು ಸಾರು ಕುದಿಯುತ್ತಿದೆಯಲ್ಲ’’ ಎಂದೆ. ‘‘ಹೌದು, ಮೀನು ಸಾಕಿದ ಪ್ರಾಣಿಯಲ್ಲ, ಹಳ್ಳದಲ್ಲಿ ಹಿಡಿದು ತಂದಿದ್ದು..’’ ಎಂದು ಮಾತು ಮುಂದುವರಿಸಿದ ಆತ ‘‘ಅಲ್ಲ ಸ್ವಾಮಿ ಸಾಕಿದ ಪ್ರಾಣಿ ನಿಮ್ಮ ಮಗುವಿನಂತೆ ನಿಮ್ಮ ಹಿಂದೆಯೇ ಸದಾ ಸುತ್ತುತ್ತಾ ಇರುತ್ತೆ, ಅದು ನಿಮ್ಮನ್ನು ನಂಬುತ್ತೆ, ಪ್ರೀತಿಸುತ್ತೆ ಅದನ್ನು ಕೊಂದು ತಿನ್ನುತ್ತೀರಲ್ಲ, ನಿಮಗೇನು ಅನಿಸಲ್ಲವೆ..?’’ ಅಂದ. ನಾನು ಮಾತಿಲ್ಲದೆ ತಲೆ ತಗ್ಗಿಸಿದೆ. ನಾವು ಬೇಟೆ ಆಡಿದ ಪ್ರಾಣಿಯನ್ನಷ್ಟೇ ತಿನ್ನುತ್ತೇವೆ ಎಂದ. ಮುಂದೆ ಮಾತಾಡದೆ ಅಲ್ಲಿಂದ ಹೊರಟೆ.
ಕುಂಬ್ರಿಗಳ ಕುರಿತು ಎಡ್ಗರ್ ಥರ್ಸ್ಟನ್, ಕೆ.ಎಸ್.ಸಿಂಗ್‌ರಂತಹ ಮಾನವಶಾಸ್ತ್ರಜ್ಞರು ನೀಡಿರುವ ಅಲ್ಪಸ್ವಲ್ಪ ಮಾಹಿತಿಯನ್ನು ಬಿಟ್ಟರೆ, ನನಗೆ ಹೆಚ್ಚು ಮಾಹಿತಿ ಸಿಕ್ಕಿರಲಿಲ್ಲ. ಹಿಂದೊಮ್ಮೆ ಸಂವಾದ ಪತ್ರಿಕೆಯಲ್ಲಿ ಡಾ. ವಿಠಲ ಭಂಡಾರಿಯವರು ಬರೆದಿದ್ದ ಲೇಖನ ಕುಂಬ್ರಿ ಸಮುದಾಯದ ಕುರಿತು ಒಂದಷ್ಟು ಬೆಳಕು ಚೆಲ್ಲಿತು, ಅದನ್ನೂ ಈ ಲೇಖನಕ್ಕೆ ಆಧಾರವಾಗಿ ತೆಗೆದುಕೊಂಡಿದ್ದೇನೆ.
ಕುಂಬ್ರಿಗಳು ಯಾವಾಗ ಉತ್ತರ ಕನ್ನಡಕ್ಕೆ ಬಂದರೆನ್ನುವ ಬಗ್ಗೆ ನಿಖರವಾದ ಅಧಾರವೇನೂ ಇಲ್ಲ. ಸಾವಿರಾರು ವರ್ಷಗಳ ಹಿಂದೆ ಈಶಾನ್ಯ ಭಾರತದ ಭಾಗದಿಂದ ಪ್ರಾರಂಭವಾದ ಪ್ರಯಾಣ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಈ ಸಮುದಾಯ ನೆಲೆನಿಂತಿವೆ. ಧನೋಜಿ, ಘಟೋಲೆ, ಹಿಂದ್ರೆ, ಮರಾಠಿ ಮುಂತಾದ ಬುಡಕಟ್ಟುಗಳ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಎಂದು ಮಾನವ ಶಾಸ್ತ್ರಜ್ಞರು ಹೇಳುತ್ತಾರೆ. ಈ ಮೇಲಿನ ಬುಡಕಟ್ಟುಗಳಲ್ಲಿ ಒಂದಾದ ‘ಕುಂಬ್ರಿ’ಗಳನ್ನು ವಿವಿಧ ರಾಜ್ಯಗಳಲ್ಲಿ, ಕುಣಬಿ, ಕುರ್ಮಿ, ಕುಡುಂಬಿ, ಕುರುಂಬಿ, ಕುಣಮಿ, ಕಣಬಿ, ಕುರುಂಬ, ಕುರುಂಬಂ, ಕುರುಮನ್, ಕುಡುಬಿ, ಕುಡುಮಾ, ಕುಂಬ್ರಿ ಮರಾಠಿ, ಮರಾಠಿ ಇತ್ಯಾದಿ ಹೆಸರಿನಲ್ಲಿ ಗುರುತಿಸುತ್ತಾರೆ. ಇವರು ಮೂಲತಃ ಶೈವಪಂಥದವರಾಗಿರಬಹುದೆಂದೂ ಇವರು ಪೂಜಿಸುವ ‘ಮಹದೇವ’ ಮತ್ತು ‘ಕುರ್ಮಿನಾಥ’ ಅಥವಾ ‘ಕಲ್ಮರಾಜ್’ ಮುಂತಾದ ದೇವರ ಹೆಸರುಗಳಿಂದ ತಿಳಿಯುತ್ತದೆ. ಆದರೆ ಉತ್ತರ ಕನ್ನಡದಲ್ಲಿ ಇವರು ಮಾತೃದೇವತೆಯನ್ನು ಹೆಚ್ಚಾಗಿ ಪೂಜಿಸುತ್ತಾರೆ.
ಇವರ ಭಾಷೆ ಮತ್ತು ಲಭ್ಯ ಸಾಂಸ್ಕೃತಿಕ ವಿವರದ ಆಧಾರದಲ್ಲಿ ಪರಿಶೀಲಿಸಿದರೆ ಮಹಾರಾಷ್ಟ್ರದಿಂದ ಗೋವಾಕ್ಕೆ ಬಂದು ಅಲ್ಲಿಂದ ಉತ್ತರ ಕನ್ನಡದ ಕಾಡಿಗೆ ಬಂದಿರಬೇಕೆಂದು ಕಾಣುತ್ತದೆ. ಅಲ್ಲಿಂದಾಚೆಗೆ ಜಿಲ್ಲೆಯ ಬೇರೆ ತಾಲೂಕುಗಳಿಗೆ ಪಸರಿಸಿ ‘ಆಟ್ಟಿ ಕುಣಬಿಗಳು’, ‘ಜೇನು ಕುಣಬಿಗಳು’, ‘ಕುಂಬ್ರಿ ಮರಾಠಿಗರು’, ‘ಕುಣಬಿ ಮರಾಠಿಗರು’, ‘ಆರೆ ಮರಾಠಿಗರು’ ಮುಂತಾದ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ. ಆದರೆ ಇವರೆಲ್ಲರೂ ಮೂಲತಃ ಕುಣಬಿಗಳೇ ಆಗಿದ್ದಾರೆ.
‘‘ಕಣಜ ಬೆಳೆಯ ಮನೆಗೆ ಉಣಲಾಕ ಕೂಳಿಲ್ಲ’’ ಮತ್ತು ‘‘ಹಾದೀಲಿ ಹೋಗೋರೆ ಹಾಡೆಂದು ಕಾಡ್ಬೇಡಿ.. ಹಾಡಲ್ಲ ನನ್ನ ಒಡಲುರಿ’’ ಎನ್ನುವ ಜಾನಪದ ತ್ರಿಪದಿಯ ಸಾಲು ಕುಣಬಿಗಳ ದೈನಂದಿನ ಬದುಕಿನ ಕಷ್ಟಗಳನ್ನು ಮತ್ತು ಅವರು ರೂಢಿಸಿಕೊಂಡು ಬಂದ ಕಲೆ-ಸಾಹಿತ್ಯದ ಸ್ವರೂಪವನ್ನೂ ಪ್ರತಿನಿಧಿಸುವಂತಿದೆ.
ನಾನು ಅಂದು ಅವರಲ್ಲಿ ನೋಡಿದ ತೀವ್ರ ಬಡತನದಲ್ಲೂ ಉಕ್ಕುವ ಜೀವನೋತ್ಸಾಹ, ಅನಕ್ಷರತೆಯ ನಡುವೆ ಕೂಡ ನೆಲೆನಿಂತ ಹೃದಯವಂತಿಕೆ, ಭಯದ ಒಟ್ಟೊಟ್ಟಿಗೇ ಇರುವ ಮುಗ್ಧತೆ, ತಮ್ಮ ಅನ್ನವನ್ನು ತಾವೇ ಗಳಿಸಿಕೊಂಡು ಹಂಚಿ ತಿನ್ನುವ ಶ್ರಮ ಸಂಸ್ಕೃತಿಯ ಮೌಲ್ಯಗಳು ಈಗಲೂ ಹಾಗೇ ಇವೆ. ಇವರು ಈಚೀಚೆಗಷ್ಟೇ ಕಾಡು ಬಿಟ್ಟು ನಾಡಿನ ಬೆಳಕು ನೋಡುತ್ತಿದ್ದಾರೆ, ಶಿವಾಜಿ ಸೈನ್ಯದಿಂದ ಓಡಿ ಬಂದು ಕಾಡು ಸೇರಿಕೊಂಡಿರುವ ಜನಾಂಗ ಇವರದ್ದಾಗಿರಬೇಕೆಂದು ಡಾ.ಎಲ್.ಆರ್.ಹೆಗಡೆ ವ್ಯಕ್ತಪಡಿಸುತ್ತಾರೆ. ‘‘ನಾವು ಗೋವಾದಿಂದ ಬಂದವರು. ಇಲ್ಲಿಗೆ ಬರಲು ಕಾರಣ ಪೊರ್ಚುಗೀಸರು, ಪೋರ್ಚುಗೀಸರು ಗೋವಾವನ್ನು ಆಕ್ರಮಿಸಿದ ನಂತರ ನಮ್ಮ ಸಂಸ್ಕೃತಿಗೆ ದೊಡ್ಡ ಹೊಡೆತ ಬಿದ್ದಿತು. ನಮ್ಮ ಜಾತಿ ಶುದ್ಧತೆ ಉಳಿಸಿಕೊಳ್ಳಲು ನಾವು ಗೋವಾ ಬಿಟ್ಟು ಕರ್ನಾಟಕದ ಕಾಡು ಸೇರಬೇಕಾಯಿತು. ನಮ್ಮ ಹಿರಿಯರು ಬೇರೆ ಊರಿಂದ ಅಲ್ಲಿಗೆ ಬಂದಿರಬಹುದು. ನಾವು ಗೋವಾದ ಕುಸಗೆ, ಕರಂಬಳ, ಕಾಜರ್, ಕುಡತರಿ, ತುಡೊವ್, ಎಲ್ಲೆ, ಮಲಕರ್ಣಿ, ಕುಂಬಾರಿ, ಸೋಲಿಯೇ, ಗಾವಂಡಗಿರಿ ಪ್ರದೇಶಗಳಿಂದ ಗುಳೆ ಎದ್ದು ಬಂದೆವು’’ ಎಂದು ಹೆಗ್ಗಡು ಮಿರಾಶಿ, ಬಾಳೋ ವೆಳಿಪ್ ಮತ್ತು ಪಾಂಡು ಗಾವಡಾ ಎನ್ನುವವರು ಹೇಳುತ್ತಾರೆ.
ಈ ಪ್ರದೇಶಗಳೆಲ್ಲವೂ ಗೋವಾದ ಕಾಣಕೋಣ ಮತ್ತು ಸಾಲಸೆಟ್ ಸುತ್ತ ಮುತ್ತಲಿರುವ ಊರುಗಳ ಹೆಸರುಗಳಾಗಿದ್ದು ಗೋವಾದಲ್ಲಿ ‘ಗಾವಡಾ’, ‘ಕುನ್ಬಿ’, ‘ವೆಳಪ್’, ‘ದನಗರ’ ಮುಖ್ಯ ಸಮುದಾಯವಾಗಿದೆ. ಅಲ್ಲಿ ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್ ಸಂಪ್ರದಾಯವನ್ನು ಅನುಸರಿಸುತ್ತಿದ್ದು ಇವರನ್ನು ಗೋವಾ ಸರಕಾರ (ಗೋವಾರಾಜ್ಯ ಪತ್ರ 13/04/90 ಎಸ್.ಡಬ್ಲ್ಯುಡಿ-ವೊಲ್ಯೂಂ-11/189) ಪರಿಶಿಷ್ಟ ಪಂಗಡಕ್ಕೆ ಸೇರಿಸಿವೆ. ಸಾಂಪ್ರದಾಯಿಕ ದಂತಕತೆಗಳ ಆಧಾರದಲ್ಲಿ ಇವರು ತಾವು ಬಲಿವಂಶಜರೆಂದು, ಬಲಿ ತಮ್ಮ ಮೂಲ ಪುರುಷ ಎಂದುಕೊಳ್ಳುತ್ತಾರೆ. ಮಹಾಭಾರತದ ‘ಕುರು’ವಂಶ ತಮ್ಮದೆಂದೂ ಹೇಳುತ್ತಾರೆ. ನಾವು ಶಿವ ಪಾರ್ವತಿಯರ ಸೃಷ್ಟಿ ಎಂತಲೂ ಹೇಳುತ್ತಾರೆ. ಗಣಪತಿ ಹುಟ್ಟಿದ ಕತೆಗೂ ತಮ್ಮ ವಂಶದ ಮೂಲಪುರುಷರ ಹುಟ್ಟಿನ ಕತೆಗೂ ಸಂಬಂಧ ಕಲ್ಪಿಸುತ್ತಾರೆ. ಇವರು ಮಾತನಾಡುವ ಬಾಷೆ ಕೂಡ ವಿಶಿಷ್ಟವಾದದ್ದೆ, ಮೂಲದ ಮರಾಠಿ, ನಂತರದ ಕೊಂಕಣಿ. ಗೋವಾದ ಆಡಳಿತಗಾರರ ಭಾಷೆ ಪೋರ್ಚುಗೀಸ್, ಕೊನೆಯಲ್ಲಿ ನೆಲೆನಿಂತ ಕನ್ನಡ ಈ ನಾಲ್ಕು ಭಾಷೆಗಳ ಕಲಸುಮೇಲೋಗರ ಇವರ ಬಾಷೆ, ಕೆಲವರು ಇದನ್ನು ‘ಆರೆಮರಾಠಿ’ ಎಂದೂ ಕರೆಯುತ್ತಾರೆ. ಹಲವು ಶಬ್ದಗಳು ಪೋರ್ಚಗೀಸ್ ಭಾಷೆಯ ಮತ್ತು ಉಚ್ಚಾರಣೆಯ ಪ್ರಭಾವಕ್ಕೆ ಒಳಗಾಗಿದ್ದರೂ ಮರಾಠಿ ಮತ್ತು ಕೊಂಕಣಿ ಒಂದರೊಳಗೊಂದು ಹೆಣೆದುಕೊಂಡಿವೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ನೆಲೆನಿಂತ ಕುಣಬಿಗಳಲ್ಲಿ ಕನ್ನಡದ ಹಲವು ಪದಗಳು ಕೊಂಕಣಿ ಮತ್ತು ಮರಾಠಿಯ ಲಯದಲ್ಲಿ ಉಚ್ಚಾರಣೆಗೊಳ್ಳುತ್ತವೆ. ಈ ಭಾಷೆಯ ಭಾಷಾ ಶಾಸ್ತ್ರೀಯ ಅಧ್ಯಯನ ವಲಸಿಗರ ಭಾಷಾ ಸಂಕೀರ್ಣತೆಯನ್ನು, ಭಾಷೆಯ ಕೊಡುಕೊಳ್ಳುವಿಕೆಯ ಸ್ವರೂಪವನ್ನು ತಿಳಿಸಿಕೊಡಬಲ್ಲದು. ಅವರ ದಿನನಿತ್ಯದ ಮಾತನ್ನು ಅರ್ಥ ಮಾಡಿಕೊಳ್ಳಬಹುದಾದರೂ ಅದರ ಹಾಡಿನಲ್ಲಿ, ಕತೆಯಲ್ಲಿ ಬರುವ ಹಲವು ಪದಗಳು ಇಂದು ಬಳಕೆಯಲ್ಲಿ ಇದ್ದವುಗಳಲ್ಲ. ಹಾಡುವ ಕಲಾವಿದರಿಗೂ ಸ್ವತಃ ಈ ಶಬ್ದದ ಪರಿಚಯವಿಲ್ಲ. ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಟ್ಟ ಈ ಹಾಡುಗಳ ಭಾಷಿಕ ಅಧ್ಯಯನವಷ್ಟೇ ಅವರ ಮೂಲದ ಕುರಿತು ಕರಾರುವಕ್ಕಾದ ಸತ್ಯವನ್ನು ಪ್ರಸ್ತುತ ಪಡಿಸಬಲ್ಲದು.
ಇವರು ವಾಸಿಸುವ ಹಲವು ಪ್ರದೇಶಗಳಲ್ಲಿ ಮೇಲ್ಜಾತಿಯವರ ಭಾಷೆಯ ಮೇಲೂ ಇವರ ಭಾಷೆಯ ಪ್ರಭಾವ ಆಗಿದೆ. ಕನ್ನಡದಲ್ಲಿನ ಹಲವು ಶಬ್ದಗಳನ್ನು ತಮ್ಮ ಭಾಷೆಯ ಲಯಕ್ಕೆ ಒಗ್ಗುವಂತೆ ಬಳಸಿಕೊಂಡಿದ್ದಾರೆ.
ತಮ್ಮ ವಂಶದ ಹಿರಿಯರನ್ನೇ ದೇವರೆಂದು ನಂಬುವ ಇವರು ಅವರ ಪೂರ್ವಿಕರಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಇವರ ಬಹುತೇಕ ದೇವರು ನಿರಾಕಾರ. ಮರವನ್ನೋ, ಮಣ್ಣಿನ ಹುತ್ತವನ್ನೋ ಅವರು ಪೂಜಿಸುತ್ತಾರೆ, ಗಡಿ ಕಾಯೋದಕ್ಕೆ ಇರೋ ಜಲ್ಮಿದೇವರು, ಭಯಜೋಜನ್ಮಿ, ಪಾಯಕ್, ಮೂಲಜನ್ಮಿ ಮುಂತಾದ ಸಣ್ಣಪುಟ್ಟ ದೇವರ ಹುತ್ತದ ರೂಪದಲ್ಲಿ, ಗುಂಡು ಕಲ್ಲಿನ ರೂಪದಲ್ಲಿ, ಮರದ ಗುಂಪಿನ ರೀತಿಯಲ್ಲಿ ಇವೆ. ಇವರೆಲ್ಲಾ ಬೆಳೆ ಕಾಯೋರು, ಊರು ಕಾಯೋದಕ್ಕೆ ಮೂಲ ಪುರುಷರು ಇಟ್ಟ ದೇವತೆಗಳು. ಇವರು ಭೂಮಿ ಪೂಜಕರು. ನೇಗಿಲನ್ನೂ ಪೂಜಿಸುತ್ತಾರೆ. ಯಾವುದೇ ಹೊಸ ಬೆಳೆಯನ್ನು ಚೌತಿಯಲ್ಲಿಯೋ, ನವಮಿಯಲ್ಲಿಯೋ, ತುಳಸಿ ಹಬ್ಬದಲ್ಲಿಯೋ ದೇವರಿಗೆ ಅರ್ಪಿಸಿಯೇ ತಿನ್ನುವುದು ರೂಢಿ. ಹೀಗೆ ಅರ್ಪಿಸಿದರೆ ಬೆಳೆ ಸಮೃದ್ಧವಾಗುತ್ತದೆಂಬ ನಂಬಿಕೆ ಇವರದು.
ಇವರಲ್ಲಿ ಒಂದು ಆಡಳಿತ ವ್ಯವಸ್ಥೆ ಇದೆ. ಪೂಜೆಗೆ, ಮದುವೆಗೆ ಹೊರಗಿನ ಪೂಜಾರಿಯನ್ನು ಕರೆತರುತ್ತಿರಲಿಲ್ಲ. ಇವರಲ್ಲಿಯೇ ಒಬ್ಬ ‘ಮಿರಾಶಿ’ ಇರುತ್ತಾರೆ. ಮಿರಾಶಿ ಎಂದರೆ ವಂಶ ಪಾರಂಪರ್ಯವಾಗಿ ದೇವರ ಪೂಜೆಯ ಹಕ್ಕನ್ನು ಪಡೆದ ಆರ್ಚಕ. ಬುದುವಂತ, ಗಾವಡಾ ಸಮಾಜದ ಮುಖ್ಯಸ್ಥರ ಮದುವೆಗೆ ಗಂಡು ಹೆಣ್ಣಿನ ನಿಕ್ಕಿ, ಮದುವೆ, ಬೇಟೆ, ಹಬ್ಬಗಳಲ್ಲಿ ಇವರ ಪಾತ್ರ ಮುಖ್ಯ. ದೇವರನ್ನು ಪೂಜಿಸುವುದು ‘ಮಿರಾಶಿ’ಯ ಕೆಲಸ. ಆದರೆ ದೇವಸ್ಥಾನದ ಆಡಳಿತ ಗಾವಡಾ ಮತ್ತು ದೇಸಾಯಿಯವರ ಕೆಲಸ, ಮದುವೆಯ ಸಂದರ್ಭದಲ್ಲಿ ಗುರು (ಹಿರಿಯ) ಗಂಡು-ಹೆಣ್ಣಿನ ಮನೆಯ ನಡುವೆ ರಾಯಭಾರಿಯಾದರೆ ಮದುವೆಯನ್ನು ‘ಮೂರ್ತಾವಳಿ’ ನೋಡಿ ದಿನ ನಿಗದಿ ಮಾಡುತ್ತಾರೆ. ಸಾಮಾನ್ಯವಾಗಿ ಕೃಷಿ ಕೆಲಸ ಮುಗಿದ ಮೇಲೆ ಮದುವೆ. ಈಗ ಬ್ರಾಹ್ಮಣ ಪುರೋಹಿತರಿಂದ ಮುಹೂರ್ತ ನಿಗದಿ ಮಾಡುವ ಪದ್ಧತಿ ಒಳನುಸುಳಿದೆ. ಯಾಕೆ ಹೀಗೆ ಎಂದರೆ ‘‘ನಮ್ಮ ಹಿರಿಯರು ಅಕ್ಷರ ಇಲ್ಲದಿದ್ದರೂ ಬುದ್ಧಿವಂತರಾಗಿದ್ದರು. ಆಕಾಶದಲ್ಲಿ ನಕ್ಷತ್ರ, ಚಂದ್ರ, ತಾರೆಗಳನ್ನು ನೋಡಿ ಕಾಲನಿರ್ಣಯ ಮಾಡ್ತಿದ್ರು, ಯಾವಾಗ ಬೀಜ ಬಿತ್ತಬೇಕು? ಯಾವಾಗ ಕೊಯ್ಲು ಮಾಡಬೇಕು? ಮದುವೆಯ ದಿನ ಯಾವುದು ಎಂದೆಲ್ಲಾ ಹೇಳ್ತಿದ್ದರು. ಆದ್ರೆ ಈಗಿನ ನಮಗೆ ಅದು ತಿಳಿಯೋದಿಲ್ಲ. ಹಾಗಾಗಿ ನಾವು ಬ್ರಾಹ್ಮಣ ಪುರೋಹಿರತರನ್ನು ಕೇಳ್ತೇವೆ. ಅವರು ನಮ್ಮ ಪದ್ಧತಿ ಒಳ್ಳೆಯದಲ್ಲ ಎಂದು ಹೇಳ್ತಿದ್ರು’’ ಎಂದು ಕುಂಬ್ರಿ ಹಿರಿಯ ಮಾದೇವ ವೆಳಿಪ್ ಹೇಳುತ್ತಾರೆ. ಇವರ ಆಚರಣೆ ಮತ್ತು ನ್ಯಾಯಪದ್ಧತಿಯ ಮೇಲೆ ಮೇಲ್ಞಾತಿಯ ಹಸ್ತಕ್ಷೇಪವನ್ನು ಇಲ್ಲಿ ಗುರುತಿಸಬಹುದಾಗಿದೆ. ಬುಡಕಟ್ಟು ಸಂಬಂಧಿ ನಂಬಿಕೆಗಳ ಬಗ್ಗೆ ಕೀಳರಿಮೆ ಬೆಳೆಸುತ್ತಿದ್ದಾರೆ. ಹಾಗಾಗಿ ಮಾನವೀಯತೆಯ ನೆಲೆಗಳು ಮಾಯವಾಗಿ ಕೇವಲ ವೈದಿಕ ವಿವರಗಳೇ ಮುಖ್ಯವಾಗುತ್ತಿವೆ.
ಇವರ ಬಡತನವನ್ನು, ಕೃಷಿ ಪ್ರಧಾನ ಬದುಕನ್ನು ಇವರ ಆಹಾರ ಕೂಡ ಪ್ರತಿನಿಧಿಸುತ್ತದೆ. ಇವರ ಮುಖ್ಯ ಆಹಾರ ಅನ್ನ, ಗಂಜಿ, ಅಂಬಲಿ ಮತ್ತು ಸೋಲ್ ಕಡಿ. ಸಾಮಾನ್ಯವಾಗಿ ಇವರು ಕುಂಬ್ರಿ ಜಮೀನಿನಲ್ಲಿ ರಾಗಿ ಬಿತ್ತುತ್ತಾರೆ. ಅದರ ತಾಳೆಮರವನ್ನು ಕೆಡವಿ ಅದರಲ್ಲಿರುವ ತಿರುಳು (ಚೆಳ್ಳು) ತೆಗೆದು ಒಣಗಿಸಿ ಹಿಟ್ಟು ಮಾಡಿಟ್ಟುಕೊಳ್ಳುತ್ತಿದ್ದರು. ತಾಳಿ ಹಿಟ್ಟಿನ ಅಂಬಲಿ, ರೊಟ್ಟಿ ಮಾಡಿಕೊಂಡು ಬದುಕುತ್ತಿದ್ದರು. ಬ್ರಿಟಿಷರು ಒಂದೊಂದು ಕುಟುಂಬಕ್ಕೆ ಒಂದೊಂದು ತಾಳೆ ಮರ ಕೊಟ್ಟಿದ್ದರೆಂದು ಡಾ. ಎಲ್.ಆರ್. ಹೆಗಡೆ ದಾಖಲಿಸಿದ್ದಾರೆ. ಜೇನು ತೆಗೆಯುವುದು ಕೂಡ ಇವರ ಮುಖ್ಯ ಉದ್ಯೋಗ, ಮರಕ್ಕೆ ಜೇನು ಕಟ್ಟಿದ್ದನ್ನು ಒಬ್ಬ ಕುಣಬಿ ನೋಡಿದರೆ ಅವನು ಒಂದೆರಡು ಗೂಡ ಕಡಿದು ಮರಕ್ಕೆ ಕತ್ತರಿಯ ರೀತಿಯಲ್ಲಿ ಕಟ್ಟಿ ಹೋಗುತ್ತಾನೆ. ಅದನ್ನು ಆತ ಕಾಯ್ದಿಟ್ಟಂತೆ. ಬೇರೆ ಯಾರೂ ಆ ಮರದಿಂದ ಜೇನನ್ನು ಇಳಿಸುವುದಿಲ್ಲ.
ಕಾಡಿನಲ್ಲಿ ಸಿಗುವ ಅಣಬಿ ಕಾಯಿಯ (ಕಾಯರ್) ಒಳಗಿನ ಬೀಜತೆಗೆದು ಜಜ್ಜಿ 4-5 ದಿನ ಇಡುತ್ತಾರೆ. ನಂತರ ಬಿಸಿ ದೋಸೆಗೆ ಹಾಕುತ್ತಾರೆ. ಅಣಬೆ (ಆಳಂಬಿ)ಯೆಂದರೆ ಇವರಿಗೆ ಬಹಳ ಇಷ್ಟ, ಕಾಡಿನಿಂದ ತಂದು ಬೇಯಿಸಿ ತಿನ್ನುತ್ತಾರೆ. ಕಾಡಿನಲ್ಲಿ ಸಿಗುವ ಉಪ್ಪಾಗೆ ಕಾಯಿ, ಮುರಗಲ ಕಾಯಿ (ಕೊಕಂ)ಯಿಂದ ತುಪ್ಪ ಮಾಡಿಕೊಳ್ಳುತ್ತಾರೆ. ಇದು ಔಷಧಿಯೂ ಹೌದು. ಕರಿಯಲು ಎಣ್ಣೆಯೂ ಹೌದು.
ಇವರು ಮಾಂಸ ಪ್ರಿಯರು. ಕಾಡಿನಲ್ಲಿ ಇರುವುದರಿಂದ ಹಿಂದೆ ಕೆಲವು ಕಾಡು ಪ್ರಾಣಿಗಳನ್ನು ಶಿಕಾರಿ ಮಾಡಿ ಮಾಂಸ ಉಪಯೋಗಿಸುತ್ತಿದ್ದರು. ಮಾಂಸದ ಚೂರುಗಳೊಳಗೆ ಒಂದು ಕಟ್ಟಿಗೆ ಕೋಲನ್ನು ಪೋಣಿಸಿ ಸುಟ್ಟು ತಿನ್ನುತ್ತಿದ್ದರು. ಅದಕ್ಕೆ ‘ಬೋರಾ’ ಎನ್ನುತ್ತಾರೆ. ಈಗ ಖಾರಾ ಮಸಾಲೆ ಹಚ್ಚಿ ‘ತಳ್ಳೆಲೆಮಾಶ’(ಪ್ರೈ) ಮಾಡಿ ತಿನ್ನುತ್ತಾರೆ. ಇವರ ಎಲ್ಲಾ ಬೆಳೆಗಳು ಮಳೆ ನೀರನ್ನೇ ಅವಲಂಬಿಸಿದೆ. ಇಷ್ಟು ವರ್ಷ ಆದರೂ ಇವರು ಗದ್ದೆ ಮಾಡಿದ್ದಾರೆಯೇ ಹೊರತು ತೋಟ ಮಾಡಿಲ್ಲ. ಇರುವುದನ್ನೆಲ್ಲಾ ಹಂಚಿ ತಿನ್ನುವ ಒಳ್ಳೆಯ ಗುಣ ಈಗಲೂ ಮುಂದುವರಿದಿದೆ.
ಕುಂಬ್ರಿಗಳು ಎಂದೂ ಶ್ರೀಮಂತಿಕೆಯನ್ನು ಅನುಭವಿಸಿದವರಲ್ಲ. ನೀವು ಚಿನ್ನದ ಆಭರಣ ಧರಿಸುವುದಿಲ್ಲವೇ? ಎಂದರೆ ಅವರು ತಮ್ಮ ಬಡತನವನ್ನೆಲ್ಲಾ ನೆನೆದು ‘‘ಸೋನೆ ನಸೀಬಾತ್ ನಾಸ್ತೆ’’(ಬಂಗಾರ ನಮ್ಮ ನಸೀಬದಲ್ಲೇ ಇದ್ದಿರಲಿಲ್ಲ) ಎನ್ನುತ್ತಾರೆ. ಇತ್ತೀಚೆಗೆ ತಾನೇ ಸಿಮೆಂಟಿನ ಪರಿಚಯ ಆಗಿದೆ ಆಶ್ರಯ ಮನೆ ಇತ್ಯಾದಿ ಕಾರಣದಿಂದ ಕೆಲವರ ಮನೆಗಳು ಹೊಸರೂಪ ತಾಳುತ್ತಿವೆ.