ಜಾತಿ ಪಟ್ಟಿಯಲ್ಲೇ ಹೆಸರಿಲ್ಲದ ಅನಾಮಿಕ ಕುಲ ‘ಕೆಂಬಟ್ಟಿ’

ಈ ಸಮುದಾಯದ ಜನ ಅನೇಕ ವರ್ಷಗಳಿಂದಲೂ ತಮ್ಮ ಜಾತಿಯ ಹೆಸರನ್ನು ಪರಿಶಿಷ್ಟ ಜಾತಿಪಟ್ಟಿಯಲ್ಲಿ ಸೇರಿಸಲು ಸರಕಾರಗಳನ್ನು ಬೇಡುತ್ತಾ ವಿಧಾನಸೌಧದ ಕಂಬಕಂಬಗಳನ್ನು ಸುತ್ತುತ್ತಿದ್ದಾರೆ. ಕಂಡಕಂಡ ಅಧಿಕಾರಸ್ಥರನ್ನು, ಮಂತ್ರಿ, ಶಾಸಕರನ್ನೂ ಎಡತಾಕುತ್ತಿದ್ದಾರೆ. ಆದರೆ ಇವರ ಗೋಳು ಕೇಳಲು ಯಾರಿಗೂ ಪುರುಸೊತ್ತಿಲ್ಲ. ಕೆಂಬಟ್ಟಿಗಳ ಜನಸಂಖ್ಯೆ ಕಡಿಮೆ ಇರುವುದರಿಂದ ಇವರ ವೋಟುಗಳ ಬಗ್ಗೆಯೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
‘‘ಕೊಡಗಿನ ದಲಿತರನ್ನು ಹಾಗೂ ಬುಡಕಟ್ಟುಗಳನ್ನು 19ನೇ ಶತಮಾನದವರೆಗೂ ದನಕುರಿಗಳಂತೆ ವಿಲೇವಾರಿ ಮಾಡುವ, ಮಾರಾಟ ಮಾಡುವ ವ್ಯವಸ್ಥೆಯಿತ್ತು. ಕೆಂಬಟ್ಟಿಯವರು ಭೂಮಿ ಜಮ್ಮದಾಳುಗಳಾಗಿದ್ದರು. ಕೆಂಬಟ್ಟಿಯವರು ಭೂಮಿಯೊಂದಿಗೆ ಸಂಬಂಧ ಹೊಂದಿದ್ದರೆಂಬ ಕಾರಣಕ್ಕಾಗಿ ಅವರನ್ನು ಭೂಮಿಯಿಂದ ಸಾಂಪ್ರದಾಯಿಕವಾಗಿ ಬೇರ್ಪಡಿಸಲಿಕ್ಕೆ ಬಲಿಷ್ಠ ಭೂಮಾಲಕರಿಗೂ ಸಾಧ್ಯವಾಗಲಿಲ್ಲ. ಅದಕ್ಕೆ ಕೆಂಬಟ್ಟಿಗಳು ಭೂಮಿ ಜೊತೆಗೆ ಕೊಡಗಿನ ದೈವಗಳೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧಗಳೂ ಕಾರಣವಾಗಿವೆ.’’ ಎಂಬುದನ್ನು ಪ್ರೊ. ವಿಜಯ್ ಪೂಣಚ್ಚ ತಂಬಂಡ ರವರು, ಕೆಂಬಟ್ಟಿ ಸಮುದಾಯದ ಭೂಮಿ ಸಂಬಂಧಗಳನ್ನು ಮತ್ತು ಅವರ ಸಾಂಸ್ಕೃತಿಕ ಹಿರಿಮೆಯನ್ನು ಗುರುತಿಸುತ್ತಾರೆ. ಪ್ರೊ. ವಿಜಯ ಪೂಣಚ್ಚ ತಂಬಂಡರವರ ‘ಅಮರಸುಳ್ಯ ಸಂಗ್ರಾಮ 1837’ ಅಧ್ಯಯನದ ಉದ್ದಕ್ಕೂ ಕೊಡಗಿನ ಭಾಷಿಕ ಬುಡಕಟ್ಟು ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವರಣೆಗಳನ್ನು ನೀಡುತ್ತಾ ಇವುಗಳೊಂದಿಗೆ ವಿಶೇಷವಾಗಿ ಕೆಂಬಟ್ಟಿ ಸಮುದಾಯದ ಕುಲಶಾಸ್ತ್ರೀಯ ಹಿನ್ನೆಲೆಯನ್ನೂ ನೀಡುತ್ತಾರೆ.
ಕೊಡಗು ಜಿಲ್ಲೆಯ ಭಾಷಿಕ ಬುಡಕಟ್ಟಿಗೆ ಸೇರಿದ ‘ಕೆಂಬಟ್ಟಿ’ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದ ಅಸ್ಪಶ್ಯ ಸಮುದಾಯವಾಗಿದ್ದು, ಈ ಸಮುದಾಯದ ಹೆಸರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲೇ ಇಲ್ಲದಿರುವುದು ದುರಂತ!
ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುವ 21 ಭಾಷಿಕ ಸಮುದಾಯಗಳಲ್ಲಿ ಕೆಂಬಟ್ಟಿ ಸಮುದಾಯವೂ ಒಂದು. ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕುಗಳಲ್ಲಿ ಹೆಚ್ಚಾಗಿ ನೆಲೆಸಿರುವ ಕೆಂಬಟ್ಟಿಯವರನ್ನು ‘ಕೆಂಬಟ್ಟಿ ಪೊಲಿಯ’ ಅಥವಾ ‘ಕೆಂಬಟ್ಟಿ ಹೊಲಯ’ ಎಂದು ಕರೆಯುತ್ತಾರೆ. ಇವರ ಜನಸಂಖ್ಯೆ ಅಂದಾಜು ಐದರಿಂದ ಐದೂವರೆ ಸಾವಿರ ಇರಬಹುದೆಂದು ಹೇಳಲಾಗುತ್ತದೆ. ಇವರ ಮುಖ್ಯ ವೃತ್ತಿ ಕೃಷಿಕೂಲಿ.
ಕೆಂಬಟ್ಟಿ ಸಮುದಾಯಕ್ಕೆ ಸಾಂಸ್ಕೃತಿಕ ಅನನ್ಯತೆಯಿದೆ. ಇವರಿಗೆ ಪ್ರತ್ಯೇಕವಾದ 121 ಮನೆತನದ ಗುರುತುಗಳಿವೆ. ಅವುಗಳಲ್ಲಿ ಮೊಳ್ಳೆಕುಟ್ಟಂಡ, ಬೊಡುಕುಟ್ಟಡ, ಬಿಲ್ಲಿರಿಕುಟ್ಟಡ, ಚಟ್ಟಕುಟ್ಟಡ, ತಂಬಕುಟ್ಟಡ, ದೋಣಕುಟ್ಟಡ, ದೊಡ್ಡಕುಟ್ಟಡ, ಮಂಟೇಕುಟ್ಟಡ ಮುಂತಾಗಿ ಗುರುತಿಸಲಾಗುತ್ತದೆ. ಇವರ ಮನೆತನದ ಹೆಸರಿನಲ್ಲಿ ‘ಕುಟ್ಟ’ ಗ್ರಾಮದ ಹೆಸರು ಬರುವುದರಿಂದ ಕೆಂಬಟ್ಟಿ ಸಮುದಾಯದ ಮೂಲ ಗ್ರಾಮ ‘ಕುಟ್ಟ’ ಎಂಬುದು ಇವರ ಐತಿಹಾಸಿಕ ಹಿನ್ನೆಲೆಯಿಂದ ತಿಳಿದುಬರುತ್ತದೆ. ಕೊಡವ ಸಮುದಾಯಕ್ಕೆ ಇರುವಂತೆ ಇವರಿಗೂ ಪ್ರತ್ಯೇಕವಾದ ‘ಮಂದ್’ ಇರುವುದನ್ನು ಬಿಳುಗುಂದ, ಅರಮೇರಿ ಗ್ರಾಮಗಳಲ್ಲಿ ಕಾಣಬಹುದು. ಕೆಂಬಟ್ಟಿಗಳು ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿದ್ದಾರೆ. ಕೆಂಬಟ್ಟಿಗಳ ಆರಾಧ್ಯ ದೈವ ‘ಪನ್ನಂಗಾಲತ್ತಮ್ಮೆ’ ಈಕೆ ಕೊಡವ ಜನಾಂಗದ ಪ್ರಮುಖ ದೇವತೆಯಾದ ಪಾಡಿ ಇಗ್ಗುತ್ತಪ್ಪನ ತಂಗಿ ಎಂದು ಪ್ರತೀತಿ ಇದೆ. ಕಕ್ಕಬೆಯ ಪನ್ನಂಗಾಲ ಗ್ರಾಮದಲ್ಲಿರುವ ಪನ್ನಂಗಾಲತ್ತಮ್ಮೆ ದೇವಸ್ಥಾನದ ಅರ್ಚಕರು ಕೆಂಬಟ್ಟಿ ಸಮುದಾಯದವರೇ ಆಗಿದ್ದಾರೆ. ಕೆಂಬಟ್ಟಿ ಸಮುದಾಯದ ಹಿನ್ನೆಲೆ ಮತ್ತು ಇತಿಹಾಸವನ್ನು ಸ್ಕಂದ ಪುರಾಣ, ಕಾವೇರಿ ಪುರಾಣ, ಕೊಡಗಿನ ರಾಜರ ಕಾಲದ ಚರಿತ್ರೆ, ಪಟ್ಟೋಳೆ ಪರಮೆ, ಕೊಡಗಿನ ಗೆಜೆಟಿಯರ್‌ಗಳಲ್ಲಿ ಮತ್ತು ಕೆಲ ಆಂಗ್ಲ ಮತ್ತು ದೇಶೀಯ ಇತಿಹಾಸಕಾರರ ಅಧ್ಯಯನಗಳಲ್ಲಿ ಕಾಣಬಹುದಾಗಿದೆ.
ಕೊಡಗಿನ ಲಿಂಗಾಯತ ರಾಜರ ಕಾಲದಲ್ಲಿ ಒಮ್ಮೆ ಕೊಡಗಿಗೆ ಬರಗಾಲ ಬರುತ್ತದೆ. ಆಗ ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮದ ಹೊಲೆಯ ಸಮುದಾಯದ ‘ಅಣ್ಣೆಕುಟ್ಟಡ ಕುಟ್ಟ’ ಎಂಬಾತ ಆ ಬರಗಾಲದಲ್ಲೂ ಕೆಂಪು ಭತ್ತ ಬೆಳೆದ ವಿಚಾರವನ್ನು ತಿಳಿದ ರಾಜ, ಅಣ್ಣೆಕುಟ್ಟಡ ಕುಟ್ಟನನ್ನು ಕರೆದು ಆತನನ್ನು ಗೌರವಿಸಿ ಆತನ ಕುಲವನ್ನು ‘ಕೆಂಬತ್ತ ಕುಲ’ ಎಂದು ಹೆಸರಿಟ್ಟನೆಂಬ ಕತೆ ಜನಜನಿತವಾಗಿದೆ. ಕೆಂಬತ್ತ, ಕೆಂಬತ್ತಿಯಾಗಿ ಕ್ರಮೇಣ ಕೆಂಬಟ್ಟಿಯಾಯಿತು ಎಂಬ ವಿವರಣೆಯೂ ಇದೆ. ಈ ಸಮುದಾಯ ಇಲ್ಲದೇ ಇದ್ದಿದ್ದರೆ ಕೊಡಗಿನಲ್ಲಿ ಭತ್ತದ ಬೆಳೆಯೇ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ಇದೆ.
ಕೊಡಗಿನ ಬುಡಕಟ್ಟುಗಳ ಇತಿಹಾಸ ಬರೆಯುತ್ತಾ ಪ್ರೊ.ತಂಬಂಡರವರು ಈ ದಲಿತ ಬುಡಕಟ್ಟುಗಳ ಗುಲಾಮಗಿರಿಯ ಕುರಿತು ‘‘1834 ಮತ್ತು 1843ರಲ್ಲಿರುವ ಸರಕಾರಿ ದಾಖಲೆಗಳ ಪ್ರಕಾರ ಕೊಡಗಿನಲ್ಲಿ ಗುಲಾಮಗಿರಿಗೆ 23 ದಲಿತ ಬುಡಕಟ್ಟುಗಳಿಗೆ ಸೇರಿದ ಜನರಿದ್ದರು’’ ಎಂದು ವಿವರ ನೀಡುತ್ತಾರೆ. ಅವರಲ್ಲಿ ಮೊದಲನೆಯ ಹೆಸರೇ ಕೆಂಬಟ್ಟಿಗಳು ಎನ್ನುವುದು ಗಮನಾರ್ಹ. ಅಂತೆಯೇ ಗುಲಾಮ ಸಮುದಾಯಗಳ ಜನರ ವೈವಾಹಿಕ ಪದ್ಧತಿಯ ಮೇಲೆ ಜಮ್ಮದವರ ಆಧಿಪತ್ಯ ವಹಿಸಿದ್ದ ಕಾರಣದಿಂದಾಗಿ ಕೊಡಗಿನ ಸಮಸ್ತ ದಲಿತ-ಬುಡಕಟ್ಟುಗಳ ಮೇಲೆ ಜಮ್ಮದೊಡೆಯನಿಗೆ ಪರಿಪೂರ್ಣವಾದ ಹತೋಟಿಯಿತ್ತು ಎಂಬ ಹಿನ್ನೆಲೆಯಲ್ಲಿ, ಕೆಂಬಟ್ಟಿ ವಧೂವರರ ನಡುವೆ ಮದುವೆ ನಡೆದಾಗ ಹೆಣ್ಣಿನ ಯಜಮಾನ ಅಂದರೆ ಜಮ್ಮ ರೈತ ಹೆಣ್ಣಿನ ತಾಯಿಗೆ ನಾಲ್ಕರಿಂದ ಎಂಟು ಫಾನಂ ಕಂಠಿರಾಯಿ ಹಣವನ್ನು ನೀಡಬೇಕಿತ್ತು. ಒಂದು ವೇಳೆ ನೀಡಿದರೆ ಗಂಡಿನ ಕಡೆಯ ಜಮ್ಮದೊಡೆಯನಿಗೆ ಅವರಿಂದ ಹುಟ್ಟುವ ಮೊದಲನೆಯ ಮತ್ತು ಕೊನೆಯ ಮಕ್ಕಳನ್ನು ನೀಡಬೇಕಿತ್ತು. ಆಗ ಜಮ್ಮದೊಡೆಯ ಕೆಂಬಟ್ಟಿ ದಂಪತಿಗೆ ಹುಟ್ಟುವ ಎಲ್ಲಾ ಮಕ್ಕಳಿಗೂ ಒಡೆಯನಾಗುತ್ತಿದ್ದ. ಇಂತಹ ಅಮಾನವೀಯ ಪದ್ಧತಿಗಳನ್ನು ಪ್ರೊ.ತಂಬಂಡರವರು ಸುದೀರ್ಘ ವಿವರಗಳೊಂದಿಗೆ ದಾಖಲಿಸಿದ್ದಾರೆ.
ಇಷ್ಟೆಲ್ಲಾ ಅಮಾನವೀಯ ನೋವು, ಯಾತನೆ, ಅಸಹಾಯಕತೆಗಳನ್ನು ಶತಮಾನಗಳಿಂದ ಅನುಭವಿಸಿದ ಈ ಕೆಂಬಟ್ಟಿ ಸಮುದಾಯ ಈಗಲಾದರೂ ನೆಮ್ಮದಿಯಾಗಿ ಬದುಕುತ್ತಿದೆಯೇ? ಖಂಡಿತ ಇಲ್ಲ..!? ಈ ಸಮುದಾಯದ ಜನ ಅನೇಕ ವರ್ಷಗಳಿಂದಲೂ ತಮ್ಮ ಜಾತಿಯ ಹೆಸರನ್ನು ಪರಿಶಿಷ್ಟ ಜಾತಿಪಟ್ಟಿಯಲ್ಲಿ ಸೇರಿಸಲು ಸರಕಾರಗಳನ್ನು ಬೇಡುತ್ತಾ ವಿಧಾನಸೌಧದ ಕಂಬಕಂಬಗಳನ್ನು ಸುತ್ತುತ್ತಿದ್ದಾರೆ. ಕಂಡಕಂಡ ಅಧಿಕಾರಸ್ಥರನ್ನು, ಮಂತ್ರಿ, ಶಾಸಕರನ್ನೂ ಎಡತಾಕುತ್ತಿದ್ದಾರೆ. ಆದರೆ ಇವರ ಗೋಳು ಕೇಳಲು ಯಾರಿಗೂ ಪುರುಸೊತ್ತಿಲ್ಲ. ಕೆಂಬಟ್ಟಿಗಳ ಜನಸಂಖ್ಯೆ ಕಡಿಮೆ ಇರುವುದರಿಂದ ಇವರ ವೋಟುಗಳ ಬಗ್ಗೆಯೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ನ್ಯಾ.ನಾಗಮೋಹನದಾಸ್ ಅವರಿಗೂ ಮನವಿ ಕೊಟ್ಟು ಈ ಸಲದ ಜಾತಿ ಸಮೀಕ್ಷೆಯಲ್ಲಾದರೂ ತಮ್ಮ ಹೆಸರನ್ನು ಸೇರಿಸುವಂತೆ ಕೆಂಬಟ್ಟಿ ಸಮುದಾಯದವರು ಕೇಳಿಕೊಂಡಿದ್ದಾರೆ. ನ್ಯಾ.ದಾಸ್‌ರವರು ‘ರಾಜ್ಯ ಸರಕಾರಕ್ಕೆ ಪರಿಶಿಷ್ಟ ಜಾತಿಯನ್ನು ಸೇರಿಸುವ ಅಧಿಕಾರವಿಲ್ಲ’ ಎಂಬ ತಾಂತ್ರಿಕ ಕಾರಣ ನೀಡಿ ‘‘ದಕ್ಷಿಣ ಕನ್ನಡದ ಮನ್ಸ, ರಾಯಚೂರಿನ ಮಾದಿಗ ದಾಸರಿ, ಉಡುಪಿಯ ಮೇರ ಜತೆ ಕೊಡಗಿನ ಕೆಂಬಟ್ಟಿಗಳನ್ನೂ ಸೇರಿಸಿ, ರಾಜ್ಯ ಸರಕಾರ ಈ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಿ ಸದರಿ ಜಾತಿಗಳಿಗೆ ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಲು ಅರ್ಹತೆಯನ್ನು ಹೊಂದಿದ್ದರೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬಹುದು’’ ಎಂದು ತಿಳಿಸಿದ್ದಾರೆ. ದುರಂತವೆಂದರೆ ಬಲಿಷ್ಠ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕೋಟಿ ಕೋಟಿ ಹಣ ಲೀಲಾಜಾಲವಾಗಿ ವ್ಯಯಿಸುವ ಸರಕಾರ ಇಂತಹ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳಿಗೆ ಕೆಲವು ಲಕ್ಷಗಳನ್ನು ಖರ್ಚು ಮಾಡಲು ಹಿಂದೆ ಸರಿಯುತ್ತದೆ.
ಕೆಂಬಟ್ಟಿ ಸಮುದಾಯದವರು ಸರಕಾರಕ್ಕೆ ಮನವಿಗಳನ್ನು ಆಯಾ ಕಾಲಗಳಲ್ಲಿ ನೀಡುತ್ತಾ ಪರಿಶಿಷ್ಟ ಜಾತಿಪಟ್ಟಿಯ ಕ್ರಮ ಸಂಖ್ಯೆ 44ರಲ್ಲಿ Holaya, Holer, Holeya ಎಂಬ ಹೆಸರುಗಳ ಜತೆ ‘ಕೆಂಬಟ್ಟಿ ಹೊಲೆಯ’ ಜಾತಿಯನ್ನು ಸೇರಿಸಿ ಎಂದು ಅಂಗಲಾಚುತ್ತಲೇ ಇದ್ದಾರೆ. ಪಂಚೇಂದ್ರಿಯಗಳನ್ನು ಕಳಕೊಂಡ ಸರಕಾರಗಳಿಗೆ ಕೆಂಬಟ್ಟಿಗಳ ಅಸಹಾಯಕ ಧ್ವನಿ ಕೇಳುತ್ತಲೇ ಇಲ್ಲ. ಇವರ ಹೆಸರು ಜಾತಿಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಕೆಂಬಟ್ಟಿ ಸಮುದಾಯಕ್ಕೆ ಸರಕಾರದ ಲೆಕ್ಕದಲ್ಲಿ ಅಸ್ಮಿತೆಯೇ ಇಲ್ಲ. ಇದೇ ಕಾರಣಕ್ಕೆ ಈ ನತದೃಷ್ಟ ಸಮುದಾಯಕ್ಕೆ ಸರಕಾರದ ಅನುದಾನ, ಸವಲತ್ತು, ಸಾಲಸೋಲ, ಸೌಲಭ್ಯ, ಪ್ಯಾಕೇಜ್, ಮೀಸಲಾತಿ ಯಾವುದೂ ಸಿಗುತ್ತಿಲ್ಲ!!