ವಾಂತಿ ಮಾಡಿ ಭಿಕ್ಷೆ ಬೇಡುವ ‘ಕರಕರಮುಂಡಿ’

ಕೆಲವು ಸರಕಾರಿ ಆದೇಶಗಳಲ್ಲಿ ಕರಕರಮುಂಡಿ, ಕರಕರಮುಂಡ, ಕರಕರಮುಂಡೆ ಮುಂತಾಗಿ ಅತ್ಯಂತ ಬೇಜವಾಬ್ದಾರಿಯಿಂದ ಸರಕಾರಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಇವರನ್ನು ಉಲ್ಲೇಖಿಸಿದ್ದಾರೆ. ಅಂತೆಯೇ ಈ ಜನಾಂಗವನ್ನು ‘ಅಘೋರಿ’ ಜಾತಿಗೆ ಪರ್ಯಾಯ ಜಾತಿಯಾಗಿ ಸೇರಿಸಿದ್ದಾರೆ. ಅನೇಕ ಸರಕಾರಿ ಆದೇಶಗಳಲ್ಲೂ ಈ ಅನಾಹುತ ನಡೆದುಹೋಗಿದೆ. ಕರಕರಮುಂಡಿಯರ ಸ್ಥಿತಿಗತಿಗಳನ್ನು ನೋಡಿದರೆ ಇವರು ನಿಜಕ್ಕೂ ಎಸ್.ಸಿ. ಪಟ್ಟಿಯಲ್ಲಿ ಇರಬೇಕಾಗಿತ್ತು, ಆದರೆ 1977 ರಿಂದ ಇಲ್ಲಿಯವರೆಗೆ ವಿವಿಧ ಆದೇಶಗಳಲ್ಲಿ ಇವರು ಬಿ.ಸಿ.ಎಂ. ಪಟ್ಟಿಯಲ್ಲಿದ್ದು, ಈಗಲೂ ಪ್ರವರ್ಗ 2(ಎ) ಅಡಿಯಲ್ಲಿ, ಅಘೋರಿ ಜಾತಿಯಡಿ ಕ್ರಮಸಂಖ್ಯೆ 12(ಬಿ)ಯಲ್ಲಿ ಈ ಸಮುದಾಯದ ಹೆಸರಿದೆ.
ನಮ್ಮ ಆಯೋಗದ ಮುಂದೆ ‘ಕರಕರಮುಂಡಿ’ ಎಂಬ ಸಮುದಾಯದ ಅರ್ಜಿಯೊಂದಿತ್ತು. ಈ ಅರ್ಜಿ ಹೇಗೆ ಬಂದಿತ್ತೋ, ಯಾವಾಗ ಬಂದಿತ್ತೋ ಗೊತ್ತಿರಲಿಲ್ಲ, ಇದರಲ್ಲಿ ಸ್ಪಷ್ಟ ವಿಳಾಸವೂ ಇರಲಿಲ್ಲ, ಆದರೆ ಎಲ್ಲೋ ಒಂದು ಕಡೆ ಬಿಜಾಪುರ ಎಂದಿತ್ತು ಅಷ್ಟೇ. ನನಗೆ ಕರಕರಮುಂಡಿ ಎಂಬ ಹೆಸರು ಕೇಳಿ ಆಶ್ಚರ್ಯ ಮತ್ತು ಕುತೂಹಲ ಒಮ್ಮೆಲೇ ಆಯಿತು. ಇವರು ಬಿಜಾಪುರದ ಕಡೆ ಇದ್ದಾರೆಂದು ತಿಳಿದಿದ್ದರಿಂದ ಅಲ್ಲಿನ ನಮ್ಮ ಅಧಿಕಾರಿಗಳಿಗೆ ಹೇಳಿ ಸಾಕಷ್ಟು ಹುಡುಕಿಸಿ ಆಯೋಗದ ಬಹಿರಂಗ ವಿಚಾರಣೆಗೆ ಕರೆಸಿಕೊಂಡೆ.
ಮೂರು ನಾಲ್ಕು ಮಂದಿ ಬಂದು ಆಯೋಗದ ಮುಂದೆ ವಿಚಾರಣೆಯಲ್ಲಿ ಹಾಜರಾದರು. ಅವರಲ್ಲೊಬ್ಬರು ರಾಮಣ್ಣ ಸೋಮಣ್ಣ ಕರಕರಮುಂಡಿ ಎನ್ನುವವರು ನಾವು ಕೇಳಿದ ಪ್ರಶ್ನೆಗಳಿಗೆ ತನಗೆ ತಿಳಿದಷ್ಟು ವಿವರ ನೀಡತೊಡಗಿದರು. ಅವರು ಕೊಟ್ಟ ವಿವರದಂತೆ...
ಕರಕರಮುಂಡಿಗಳ ಕುಲವೃತ್ತಿ ಭಿಕ್ಷಾಟನೆ, ಮನೆಮನೆಗೆ ಹೋಗಿ ಕಾಡಿ ಬೇಡಿ ಭಿಕ್ಷೆ ಬೇಡುತ್ತಾರೆ. ಭಿಕ್ಷೆ ನೀಡುವವರೆಗೂ ಮುಂದಕ್ಕೆ ಹೋಗಲ್ಲ, ಭಿಕ್ಷೆ ನೀಡದಿದ್ದರೆ ಭಿಕ್ಷೆಗೆ ಹೋದ ಮನೆಯ ಮುಂದೆಯೇ ವಾಂತಿ ಮಾಡಿಕೊಳ್ಳುತ್ತಾರೆ! ಭಿಕ್ಷೆ ನೀಡುವವರು ಕರಕರಮುಂಡೇರು ಮಾಡುವ ವಾಂತಿಯನ್ನು ನೋಡಲಾರದೆ ಭಿಕ್ಷೆ ಕೊಟ್ಟು ಕಳಿಸುತ್ತಾರೆ. ಯಾವಾಗ ಬೇಕಾದರೂ ವಾಂತಿ ಮಾಡಿಕೊಳ್ಳುವ ‘ಪ್ರತಿಭೆ’ ಕರಕರಮುಂಡಿಯವರಿಗಿದೆ. ಅವರ ಜಠರ ಮತ್ತು ಅನ್ನನಾಳಗಳು ಅದಕ್ಕೆ ಹೊಂದಿಕೊಂಡುಬಿಟ್ಟಿವೆ! ಇವರು ಈ ರೀತಿ ವಾಂತಿ ಮಾಡಿಕೊಳ್ಳುವುದರಿಂದ ಈ ಸಮುದಾಯಕ್ಕೆ ಕರಕರಮುಂಡಿ ಎಂದು ಶ್ರೀಶೈಲದ ಜಗದ್ಗುರುಗಳು ಹೆಸರಿಟ್ಟರೆಂದು ಅವರೇ ಹೇಳುತ್ತಾರೆ. ‘ಕರಕಲೋಡು’ ಎಂದರೆ ತೆಲುಗಿನಲ್ಲಿ ವಾಂತಿ ಮಾಡುವವನು ಎಂದರ್ಥ ಆದ್ದರಿಂದ ಇವರಿಗೆ ಕರಕರಮುಂಡೇರು ಅಂತ ಹೆಸರು ಬಂತಂತೆ.
ಮೂಲತಃ ಅಲೆಮಾರಿಗಳಾದ ಕರಕರಮುಂಡಿ ಸಮುದಾಯ ಭಿಕ್ಷೆಗಾಗಿ ಉತ್ತರ ಕರ್ನಾಟಕ ಮತ್ತು ಬಾಂಬೆ ಕರ್ನಾಟಕದ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಭಿಕ್ಷೆ ಎತ್ತುತ್ತಾ ಟೆಂಟು, ಗುಡಾರಗಳಲ್ಲಿ ವಾಸಿಸುವ ಅತ್ಯಂತ ನಿಕೃಷ್ಟ ಮತ್ತು ನತದೃಷ್ಟ ಸಮುದಾಯವಾಗಿದೆ.
ಭಿಕ್ಷಾಟನೆ ಮಾಡುವವರು ಕೈಗೆ ಮೂರು ಬಳೆಗಳನ್ನು ತೊಟ್ಟು, ಒಂದು ಕೈಯಲ್ಲಿ ಚಾಕು ಮತ್ತು ಮತ್ತೊಂದು ಕೈಯಲ್ಲಿ ಬಡಿಗೆಯನ್ನು ಹಿಡಿದು ಜೋಳಿಗೆಯನ್ನು ಭುಜಕ್ಕೆ ನೇತಾಕಿಕೊಂಡು ಭಿಕ್ಷೆಗೆ ಹೋಗುತ್ತಾರೆ. ಭಿಕ್ಷೆ ನೀಡದಿದ್ದಲ್ಲಿ ಕೇವಲ ವಾಂತಿ ಮಾಡುವುದಷ್ಟೇ ಅಲ್ಲ, ಕೈಯಲ್ಲಿರುವ ಚಾಕುವಿನಿಂದ ತಮ್ಮ ತಲೆಯನ್ನೇ ಕೊರೆದುಕೊಳ್ಳುವುದಾಗಿ ಬೆದರಿಸುತ್ತಾ ಭಿಕ್ಷೆಗಾಗಿ ಅಂಗಲಾಚುತ್ತಾರೆ!
ಕರಕರಮುಂಡಿ ಸಮುದಾಯ ಪ್ರಮುಖವಾಗಿ ಬಿಜಾಪುರದ ಬಿದ್ದಿರಗಿ ಬಳಿ ಇರುವ ಬಾಬಾನಗರ, ಮುದ್ದೇಬಿಹಾಳದ ಕೇಶಾಪುರ, ನಾಗಠಾಣಿಯ ಅಥರ್ಗಾ, ಬಾಗೇವಾಡಿ ತಾಲೂಕಿನ ವಂದಾಲ, ಇಂಡಿ ತಾಲೂಕಿನ ಶಿರಶ್ಯಾಡ, ಸಿಂದಗಿ ತಾಲೂಕಿನ ಕಲಕೇರಿ, ಮುದ್ದೇಬಿಹಾಳ ತಾಲೂಕಿನ ಕ್ಯಾತಾಪುರ, ಜಮಖಂಡಿ ತಾಲೂಕಿನ ಕುಂಬಾರ ಹಳ್ಳಿ ಮುಂತಾದೆಡೆ ವಿರಳವಾಗಿ ಇದ್ದಾರೆ. ಬಿಜಾಪುರ ಜಿಲ್ಲೆಯಲ್ಲದೆ ಧಾರವಾಡ, ಹುಬ್ಬಳ್ಳಿ, ಕಾರವಾರ ಕಡೆಯೂ ಕರಕರಮುಂಡೇರು ಇದ್ದಾರೆ. ಇವರ ಜನಸಂಖ್ಯೆ ಒಟ್ಟಾರೆ ಹತ್ತು ಸಾವಿರ ಇದ್ದರೆ ಹೆಚ್ಚು.
ಕೆಲವು ಸರಕಾರಿ ಆದೇಶಗಳಲ್ಲಿ ಕರಕರಮುಂಡಿ, ಕರಕರಮುಂಡ, ಕರಕರಮುಂಡೆ ಮುಂತಾಗಿ ಅತ್ಯಂತ ಬೇಜವಾಬ್ದಾರಿಯಿಂದ ಸರಕಾರಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಇವರನ್ನು ಉಲ್ಲೇಖಿಸಿದ್ದಾರೆ. ಅಂತೆಯೇ ಈ ಜನಾಂಗವನ್ನು ‘ಅಘೋರಿ’ ಜಾತಿಗೆ ಪರ್ಯಾಯ ಜಾತಿಯಾಗಿ ಸೇರಿಸಿದ್ದಾರೆ. ಅನೇಕ ಸರಕಾರಿ ಆದೇಶಗಳಲ್ಲೂ ಈ ಅನಾಹುತ ನಡೆದುಹೋಗಿದೆ. ಕರಕರಮುಂಡಿಯರ ಸ್ಥಿತಿಗತಿಗಳನ್ನು ನೋಡಿದರೆ ಇವರು ನಿಜಕ್ಕೂ ಎಸ್.ಸಿ. ಪಟ್ಟಿಯಲ್ಲಿ ಇರಬೇಕಾಗಿತ್ತು, ಆದರೆ 1977ರಿಂದ ಇಲ್ಲಿಯವರೆಗೆ ವಿವಿಧ ಆದೇಶಗಳಲ್ಲಿ ಇವರು ಬಿ.ಸಿ.ಎಂ. ಪಟ್ಟಿಯಲ್ಲಿದ್ದು, ಈಗಲೂ ಪ್ರವರ್ಗ 2(ಎ) ಅಡಿಯಲ್ಲಿ, ಅಘೋರಿ ಜಾತಿಯಡಿ ಕ್ರಮಸಂಖ್ಯೆ 12(ಬಿ)ಯಲ್ಲಿ ಈ ಸಮುದಾಯದ ಹೆಸರಿದೆ. ಮಂಡಲ್ ವರದಿಯಲ್ಲೂ ಅಘೋರಿ ಜಾತಿಯಡಿಯೇ ಸಂಖ್ಯೆ 3ರಲ್ಲಿ ಕರಕರಮುಂಡಿ ಹೆಸರು ದಾಖಲಾಗಿದೆ.
ಎಲ್.ಜಿ. ಹಾವನೂರು ವರದಿಯಲ್ಲೂ ಕರಕರಮುಂಡಿ ಸಮುದಾಯವನ್ನು ಹಿಂದುಳಿದ ಜಾತಿಯೆಂದು ಪರಿಗಣಿಸಲಾಗಿದೆ. ಆಶ್ಚರ್ಯವೆಂದರೆ ಇತರ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳಲ್ಲಿ ಮತ್ತು ಬಿಜಾಪುರ ಜಿಲ್ಲಾ ಗೆಜೆಟಿಯರ್‌ನಲ್ಲಿ ಕರಕರಮುಂಡಿ ಸಮುದಾಯದ ಮಾಹಿತಿಯ ಪ್ರಸ್ತಾಪವಿಲ್ಲ. ಇನ್ನು ಮಾನವಶಾಸ್ತ್ರಜ್ಞರಾದ ಎಡ್ಗರ್ ಥರ್ಸ್ಟನ್, ಎಂತೋವನ್, ಎಸ್.ಕೆ. ರಂಗಾಚಾರಿ ಗ್ರಂಥಗಳಲ್ಲಿಯೂ ಹೆಚ್ಚಿನ ವಿವರಗಳಿಲ್ಲ. ಆದರೆ ಕೆ.ಎಸ್. ಸಿಂಗ್ ಅವರ ‘ಪ್ಯೂಪಿಲ್ ಆಫ್ ಇಂಡಿಯಾ’ದ ವಾಲ್ಯೂಮ್-2, ಪುಟ 723ರಿಂದ 725ರಲ್ಲಿ ಕರಕರಮುಂಡಿಗೆ ಸಂಬಂಧಿಸಿದಂತೆ ಒಂದಷ್ಟು ವಿವರಗಳಿವೆ. ಕರಕರಮುಂಡಿ ಸಮುದಾಯದ ಬಳಿಗಳು, ಕುಲಗೋತ್ರಗಳು, ಅವರ ಮದುವೆ, ಹೆಣ್ಣುಮಕ್ಕಳ ಮೈನೆರೆಯುವಿಕೆ ಶಾಸ್ತ್ರಗಳು, ಅವರ ಹುಟ್ಟು, ಸಾವು, ತಿಥಿ ಮುಂತಾಗಿ ಅನುಸರಿಸುವ ಸಂಪ್ರದಾಯ ವಿವರಗಳನ್ನು ನೀಡುವ ಕೆ.ಎಸ್.ಸಿಂಗ್, ಮತ್ತೂರು ಮಹಾಲಕ್ಷ್ಮಿ ಇವರು ಪೂಜಿಸುವ ಕುಲದೇವರೆಂದು ಹೇಳುತ್ತಾರೆ. ವಿಚಿತ್ರವೆಂದರೆ ಅವರು ಬೇಯಿಸಿದ ಆಹಾರವನ್ನು ಇತರ ಜಾತಿ, ಸಮುದಾಯಗಳಿಂದ ಭಿಕ್ಷೆಯಾಗಿ ಪಡೆಯುತ್ತಾರೆ ಆದರೆ ಕ್ಷೌರಿಕರು ಬೇಯಿಸಿದ ಆಹಾರವನ್ನು ಮಾತ್ರ ಸ್ವೀಕರಿಸುವುದಿಲ್ಲ. ಆದರೆ ಕ್ಷೌರಿಕರಿಂದ ಕ್ಷೌರ ಮಾತ್ರ ಮಾಡಿಸಿಕೊಳ್ಳುತ್ತಾರೆ! ಎಂಬುದನ್ನು ಕೆ.ಎಸ್. ಸಿಂಗ್ ದಾಖಲಿಸುತ್ತಾರೆ.
ಕರಕರಮುಂಡಿಗೆ ಸಮಾನಾಂತರವಾದ ಬುಡುಬುಡುಕಿ, ದಾಸರಿ, ಹಾಲಕ್ಕಿ ವಕ್ಕಲ್, ಹಾವಾಡಿಗ, ಜಂಗಾಲ, ಜೋಗಿ, ಕಂಜರ್ಬಾಟ್, ಕಾಶಿಕಪಾಡಿಯೇ ಮುಂತಾದ ಜಾತಿಗಳು ಪ್ರವರ್ಗ- 1 (most backward)ರಲ್ಲಿವೆ. ಆದರೆ ಕರಕರಮುಂಡಿ ಮಾತ್ರ ಬಹುತೇಕ ಪ್ರಮುಖ ಹಿಂದುಳಿದ ಸಮುದಾಯಗಳಿರುವ ಪ್ರವರ್ಗ-2(ಎ) (more backward)ನಲ್ಲಿ ಈ ಅತಿಸೂಕ್ಷ್ಮ ಸಮುದಾಯ ಯಾಕಿದೆಯೋ ಅರ್ಥವಾಗುತ್ತಿಲ್ಲ!?
ಕರಕರಮುಂಡಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಅಭ್ಯಸಿಸಿ ಈ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಬೇಕೆಂದು ಆಯೋಗದ ಅಧ್ಯಕ್ಷನಾಗಿ ಸರಕಾರಕ್ಕೆ ಸಲಹೆ ನೀಡಿ(ಸಂಖ್ಯೆ-09) ಇಂದಿಗೆ ಹದಿನೈದು ವರ್ಷಗಳಾಯಿತು. ಅನೇಕ ಸರಕಾರಗಳು ಬಂದವು ಹೋದವು. ಆದರೆ ಯಾವ ಸರಕಾರವೂ ಈ ನಮ್ಮ ಆಯೋಗದ ಸಲಹೆಯನ್ನು ತೆರೆದು ಕೂಡ ನೋಡಿಲ್ಲ! ಈ ಸಮುದಾಯದ ಅಸ್ಮಿತೆ ಪಂಚೇಂದ್ರಿಯಗಳನ್ನು ಕಳಕೊಂಡ ಸರಕಾರಗಳಿಗೆ ಕಾಣಲೇಯಿಲ್ಲ, ಕರಕರಮುಂಡಿಯರು ಪ್ರತಿಭಟನೆ ಮಾಡಿ ಸರಕಾರದ ಗಮನ ಸೆಳೆದು ಸರಕಾರಗಳ ಮೇಲೆ ಒತ್ತಡ ತರುವಷ್ಟು ಸಂಘಟನೆ, ಅರಿವು, ಜಾಗೃತಿ, ಪ್ರಜ್ಞೆ ಯಾವುದೂ ಈ ಸಮುದಾಯಕ್ಕಿಲ್ಲ.
ಈಚೆಗೆ ಬಿಜಾಪುರಕ್ಕೆ ಹೋಗಿದ್ದಾಗ ಆಗ ಆಯೋಗಕ್ಕೆ ಬಂದಿದ್ದ ಸಮುದಾಯದ ಕೆಲವರನ್ನು ಭೇಟಿ ಮಾಡಿ ‘‘ಬೆಂಗಳೂರಿಗೆ ಒಮ್ಮೆ ಬನ್ನಿ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ನಿಮ್ಮ ಹಕ್ಕುಗಳಿಗಾಗಿ ಸರಕಾರದ ಮುಂದೆ ಬೇಡಿಕೆ ಇಟ್ಟು ಹೋರಾಟ ಮಾಡೋಣ..’’ ಅಂದೆ. ಆಗ ‘‘ನಿಮ್ಮ ಅಧಿಕಾರಿಗಳ ಸಹಾಯದಿಂದ ನಿಮ್ಮ ಆಯೋಗಕ್ಕೆ ಬಂದು ಹೋದ ಮೇಲೆ ಈವರೆಗೂ ನಾವಾಗಿ ಬೆಂಗಳೂರಿಗೆ ಬಂದಿಲ್ಲ ಸರ್, ಈಗ ನಮಗೆಲ್ಲ ವಯಸ್ಸಾಗಿದೆ, ಯಾರನ್ನಾದರೂ ಕಳಿಸೋಣವೆಂದರೆ ಬೆಂಗಳೂರಿಗೆ ಬರಲು ಹೆದರುತ್ತಾರೆ.. ಅವರಿಗೆ ಬೆಂಗಳೂರಲ್ಲಿ ಕಳೆದುಹೋಗುತ್ತಾರೆ ಎಂಬ ಭಯ ಸರ್..’’ ಎಂದರು.