ಕಲಬುರಗಿ: ಹಾಸ್ಟೆಲ್ ಆಹಾರದಲ್ಲಿ ನಿತ್ಯವೂ ಹುಳ, ಜಿರಳೆ, ಗುಟ್ಕಾ ಪತ್ತೆ
ಶೌಚಾಲಯಕ್ಕೆ ಬಳಸುವ ನೀರಿನಿಂದ ಅಡುಗೆ ತಯಾರಿಕೆ: ಆರೋಪ

ಕಲಬುರಗಿ: ನಗರ ಪ್ರದೇಶದ ವಿದ್ಯಾರ್ಥಿ ವಸತಿ ನಿಲಯ ಎಂದರೆ ನಮಗೆ ಥಟ್ಟನೆ ನೆನಪಿಗೆ ಬರುವುದು ದೂರದ ಗ್ರಾಮಗಳಿಂದ ಬರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಆಸರಕ್ಕೆ ಇರುವ ಆಲಯ ಎಂದು. ಆದರೆ ಇಂತಹ ಆಲಯವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ದನದ ಕೊಟ್ಟಿಗೆಯಂತಾಗಿದೆ.
ಕಲಬುರಗಿ ನಗರದ ರಾಜಾಪುರ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸರಕಾರಿ ಬಾಲಕರ ವಸತಿ ನಿಲಯಗಳ(ಪ.ಜಾ, ಪ.ಪಂ) ಸಂಕೀರ್ಣದ ಬಾಬು ಜಗಜೀವನ್ ರಾಮ್ ವಸತಿ ನಿಲಯ ಇಂತಹ ದುಸ್ಥಿತಿಯಲ್ಲಿದೆ.
ಹಾಸ್ಟೆಲ್ ಪ್ರವೇಶದ್ವಾರದಲ್ಲಿ ಹೈಟೆಕ್ ಸಂಕೀರ್ಣ ಎನಿಸುವ ಈ ವಸತಿ ನಿಲಯಗಳ ಗುಚ್ಛದ ಒಳಗಡೆ ಹೋದರೆ ನಿಜಬಣ್ಣ ಬಯಲಾಗುತ್ತದೆ. ಕಟ್ಟಡ ಮೇಲಿಂದ ಹಾಕಿರುವ ಡ್ರೈನೇಜ್ ಪೈಪ್‌ನ ನೀರು ಆವರಣಕ್ಕೆ ಹರಿಯುವುದು, ಮುರಿದುಹೋದ ಕಿಟಕಿಗಳ ಆಕರ್ಷಣೆಯ ಮಧ್ಯೆಯೇ ಎಲ್ಲೆಂದರಲ್ಲಿ ಕೆಟ್ಟ ವಾಸನೆ, ನೊಣಗಳ ಕಾಟ ಅನುಭವಿಸುವ ವಿದ್ಯಾರ್ಥಿಗಳ ನೋವು ಬಹಳಷ್ಟಿವೆ.
ಆಹಾರದಲ್ಲಿ ನಿತ್ಯವೂ ಹುಳ, ಜಿರಳೆ, ಗುಟ್ಕಾ ಪತ್ತೆ: 6 ವಸತಿ ನಿಲಯ ಹೊಂದಿರುವ ಸಂಕೀರ್ಣದ ಬಾಬು ಜಗಜೀವನ ರಾಮ್ ಹಾಸ್ಟೆಲ್‌ನಲ್ಲಿ ತಯಾರಿಸುವ ಆಹಾರದಲ್ಲಿ ನಿತ್ಯವೂ ಒಂದಿಲ್ಲೊಂದು ವಸ್ತು ಪತ್ತೆಯಾಗುತ್ತದೆ. ಊಟ ಮಾಡುವ ಆಹಾರದಲ್ಲಿ ಹುಳಗಳು, ಜಿರಳೆ, ಗುಟ್ಕಾ, ಸಿಗರೇಟು ಸೇದಿರುವ ಕಾಗದಗಳಂತೂ ಕಾಣಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಗ್ಗೆ ಹಲವು ಬಾರಿ ಪ್ರಶ್ನಿಸಿದರೂ ಹಾಸ್ಟೆಲ್ ವಾರ್ಡನ್ ಸಂಜುಕುಮಾರ್ ಕ್ಯಾರೇ ಮಾಡಿಲ್ಲ ಎನ್ನುತ್ತಾರೆ ವಸತಿ ನಿಲಯ ವಿದ್ಯಾರ್ಥಿಗಳು.
<ಶೌಚಾಲಯಕ್ಕೆ ಬಳಸುವ ನೀರಿನಿಂದ ಅಡುಗೆ ತಯಾರಿಕೆ: ಶೌಚಾಲಯಕ್ಕೆ ಬಳಸುವ ನೀರಿನಿಂದ ಅಡುಗೆ ತಯಾರಿಸುತ್ತಾರೆ. ಅಡುಗೆ ಕೋಣೆಯಲ್ಲಿ ತರಕಾರಿ, ದವಸ ಧಾನ್ಯಗಳು ಕೀಟ, ನೊಣಗಳ ಪಾಲಾಗುತ್ತಿವೆ. ಅಂತಹ ಪದಾರ್ಥಗಳನ್ನೇ ಬಳಸಿ, ಅಡುಗೆ ಮಾಡುತ್ತಾರೆ. ಅಡುಗೆ ಸಿಬ್ಬಂದಿ ತಂಬಾಕು, ಗುಟ್ಕಾ, ಮದ್ಯಪಾನ ಸೇವನೆ ಮಾಡುತ್ತಲೇ ಅಡುಗೆ ತಯಾರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನೊಣಗಳ ಕಾಟ: 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ವಸತಿ ನಿಲಯ ತುಂಬೆಲ್ಲ ಹಸಿ ತ್ಯಾಜ್ಯ, ಉಳಿದ ಆಹಾರ, ಡ್ರೈನೇಜ್ ನೀರು, ಗುಟ್ಕಾ ಗಲೀಜು, ತ್ಯಾಜ್ಯ ಶೇಖರಣೆಯಿಂದಾಗಿ ನೊಣ, ಸೊಳ್ಳೆ, ಕ್ರಿಮಿ ಕೀಟಗಳ ಕಾಟವೂ ವಿದ್ಯಾರ್ಥಿಗಳಿಗೆ ನಿತ್ಯ ಕಾಡುತ್ತಿದೆ.
ರೌಡಿಗಳ ಅಟ್ಟಹಾಸ
ಹಾಸ್ಟೆಲ್‌ನಲ್ಲಿ ಹೊರಗಿನಿಂದ ಬರುವ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಇಲ್ಲಿ ಯಾವುದೇ ಭದ್ರತೆ ಇಲ್ಲ, ದೂರದಿಂದ ಬರುವ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಶುಚಿತ್ವವೇ ಇಲ್ಲ. ಕೂಡಲೇ ನಮ್ಮ ವಸತಿ ನಿಲಯಕ್ಕೆ ಅಗತ್ಯ ಸೌಕರ್ಯಗಳು ಒದಗಿಸಬೇಕೆಂದು ವಿದ್ಯಾರ್ಥಿಗಳಾದ ದರ್ಶನ್, ರಾಯಪ್ಪ, ಬಸವರಾಜ್, ಸೈಯದ್, ಕರಣ್ ಮತ್ತಿತರ ಆಗ್ರಹವಾಗಿದೆ.
ಹಾಸ್ಟೆಲ್‌ನಲ್ಲಿ ಮೂಲಸೌಲಭ್ಯ ಸಹಿತ ಇನ್ನಿತರ ಸಮಸ್ಯೆಗಳ ಕುರಿತು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಭೇಟಿ ನೀಡಿದ ಬಳಿಕ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಪ್ರೀತಿ ಚಂದ್ರಶೇಖರ್ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ
ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಇಲ್ಲದಿರುವುದು ವಾರ್ಡನ್, ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳಿಗೂ ಗೊತ್ತಿದೆ. ಆದರೂ ಅವರು ನಿರ್ಲಕ್ಷಿಸುತ್ತಿದ್ದಾರೆ. ಇಂತಹ ದುಸ್ಥಿತಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು.
-ಸುಜಾತಾ.ವೈ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ